ʼದಿ ಕಪ್‌ʼ ನಿರಾಶ್ರಿತರ ಫುಟ್‌ ಬಾಲ್‌…

ಎಂ ನಾಗರಾಜ ಶೆಟ್ಟಿ 

ಫುಟ್‌ಬಾಲ್‌ ಪ್ರಿಯರೆಲ್ಲರ ಕಣ್ಣು ಮಧ್ಯಪ್ರಾಚ್ಯದ ಕತಾರ್‌ನತ್ತ ನೆಟ್ಟಿದೆ.ನಾಲ್ಕು ವರ್ಷಗಳಿಗೊಮ್ಮೆ ವರ್ಲ್ಡ್‌ಕಪ್ ಫುಟ್‌ಬಾಲ್‌ ಟೂರ್ನಮೆಂಟ್ ನಡೆಯುತ್ತದೆ. 1998ರಲ್ಲಿ ಫ್ರಾನ್ಸ್‌ನಲ್ಲಿ ವಿಶ್ವಕಪ್‌ ಫುಟ್‌ಬಾಲ್‌ಟೂರ್ನಮೆಂಟ್‌ ನಡೆದಾಗ ಇಂದಿನ ಸೂಪರ್‌ಸ್ಟಾರ್‌ ರೊನಾಲ್ಡೋ ಭರವಸೆಯ ಯುವ ಆಟಗಾರನಾಗಿದ್ದ. ಆಗಲೇ ಜಗತ್ತಿನೆಲ್ಲೆಡೆ ಅವನಿಗೆ ಅಭಿಮಾನಿಗಳಿದ್ದರು. 

ಮನೆಗಳಲ್ಲಿ ಟೆಲಿವಿಷನ್‌ಗಳು ವಿರಳವಾಗಿದ್ದ ದಕ್ಷಿಣ ಏಷ್ಯಾದ ಬೂತಾನ್‌ನಲ್ಲಿಯೂ ವಿಶ್ವಕಪ್ ಫುಟ್‌ಬಾಲ್‌ ಪಂದ್ಯಾವಳಿ ಆಕರ್ಷಣೆ ಹುಟ್ಟಿಸಿತ್ತು. ಚೀನಾದಿಂದ ಗಡಿಪಾರಾಗಿ ಬಂದು ಹಿಮಾಲಯದ ತಪ್ಪಲಿನ ಪ್ರದೇಶವೊಂದರಲ್ಲಿ ನೆಲೆ ಕಂಡುಕೊಂಡಿದ್ದ ಟಿಬೆಟಿಯನ್‌ ಬೌದ್ಧರಲ್ಲಿ ಹನ್ನೆರಡು ವರ್ಷದ ಓರ್ಗಿನ್‌ಗೂ ವಿಶ್ವಕಪ್‌ ಪಂದ್ಯಾಟಗಳನ್ನು ನೋಡುವ ಬಯಕೆ. ಬೌದ್ಧವಿಹಾರದಿಂದ ಹೊರಗಿರುವ ತಾಣವೊಂದರಲ್ಲಿ ಕದ್ದು ಮುಚ್ಚಿ ವೀಕ್ಷಿಸಿದ್ದನ್ನು ಜೊತೆಗಾರರಿಗೆ ಹೇಳುವಾಸೆ. ಅವನ ರೂಮಿನ ಗೋಡೆಗಳು ಫುಟ್‌ಬಾಲ್‌ ಪೋಸ್ಟರ್‌ಗಳಿದ ಅಲಂಕೃತವಾಗಿದ್ದರೆ, ಒಳ ಅಂಗಿಯಲ್ಲಿ ರೊನಾಲ್ಡೋ ಹೆಸರು.

ಟಿಬೆಟ್‌ನಿಂದ ಪಾರಾಗಿ ನಿರ್ವಸಿತರ ನೆಲೆಗೆ ಬರುವುದು ಕಡುಕಷ್ಟದ ಕೆಲಸ. ಅಂತದ್ದರಲ್ಲೂ ಪಾಲ್ಡೆನ್‌ ಮತ್ತು ನಿಲ್ಮ ಹೆಸರಿನ ಬಾಲಕರು ಕಷ್ಟಪಟ್ಟು ನಿರ್ವಸಿತರ ವಿಹಾರವನ್ನು ಸೇರಿಕೊಳ್ಳುತ್ತಾರೆ. ಅವರಲ್ಲೊಬ್ಬನಿಗೆ ಓರ್ಗಿನ್‌ ಜೊತೆಯಲ್ಲಿರುವಂತೆ ಬೌದ್ಧಗುರು ಹೇಳುತ್ತಾರೆ. ಇವರೆಲ್ಲ ರಾತ್ರಿ ಹೊತ್ತು ಫುಟ್‌ಬಾಲ್ ನೋಡಲು ಹೋಗುತ್ತಾರೆ. ಗೀಕೋ ಎನ್ನುವ ಶಿಸ್ತುಪಾಲಕ ಹಿರಿಯ ಬಿಕ್ಕು ಇದನ್ನು ಪತ್ತೆ ಮಾಡಿದಾಗ, ಓರ್ಗಿನ್‌ ಮತ್ತವನ ಗೆಳೆಯನಿಗೆ ವಿಹಾರದಿಂದ ಹೊರಹಾಕುವ ಎಚ್ಚರಿಕೆ ಕೊಟ್ಟು, ಅಡುಗೆ ಮಾಡುವ ಶಿಕ್ಷೆ ವಿಧಿಸುತ್ತಾರೆ. ಹೊಸಬರಿಗೆ ಶಿಕ್ಷೆಯಿಂದ ವಿನಾಯತಿ ಸಿಗುತ್ತದೆ.

ಫ್ರಾನ್ಸ್‌ ಮತ್ತು ಬ್ರೆಜಿಲ್‌ ನಡುವೆ ವಿಶ್ವಕಪ್‌ ಫೈನಲ್‌ ನಡೆಯುತ್ತದೆನ್ನುವುದನ್ನು ತಿಳಿದಾಗ ಓರ್ಗಿನ್‌ಗೆ ತಡೆಯಲಾಗದು. ಗೀಕೋ ಬಳಿ ಬೌದ್ಧ ವಿಹಾರದಲ್ಲೆ ಆಟವನ್ನು ವೀಕ್ಷಿಸುವ ಏರ್ಪಾಡು ಮಾಡಲು ಕೋರುತ್ತಾನೆ. ಗೀಕೋ ಓರ್ಗಿನ್‌ ಹೇಳಿದ್ದನ್ನು ಬೌದ್ಧ ಗುರುವಿಗೆ ತಿಳಿಸುತ್ತಾರೆ. ಸಮ್ಮತಿಸುವ ಮೆದು ಮನಸ್ಸಿನ ಬೌದ್ಧಗುರುವಿಗೆ ಹಣ ಹೊಂದಿಸುವ ಬಗ್ಗೆ ಕುತೂಹಲವಿದೆ. ಓರ್ಗಿನ್‌ಮತ್ತವನ ಗೆಳೆಯರು ಬಿಕ್ಕುಗಳಲ್ಲಿ ಹಣ ಯಾಚಿಸುತ್ತಾರೆ.

ಬಾಡಿಗೆಗೆ ತಂದ ಟೆವಿಯಲ್ಲಿ ಎಲ್ಲರೂ ಫೈನಲ್‌ ಪಂದ್ಯವನ್ನು ಆಸಕ್ತಿಯಿಂದ ವೀಕ್ಷಿಸುತ್ತಿದ್ದರೆ, ಓರ್ಗಿನ್‌ಮನಸ್ಸಲ್ಲಿ ತಳಮಳ ಉಂಟಾಗುತ್ತಿರುತ್ತದೆ. ಡಿಶ್‌ ಆಂಟೆನಾಕ್ಕಾಗಿ ಟಿಬೆಟಿನಿಂದ ಬಂದ ಹುಡುಗನ ತಾಯಿ ಕೊಟ್ಟ ವಾಚನ್ನು ಓರ್ಗಿನ್‌ ಗಿರವಿ ಇಟ್ಟಿರುತ್ತಾನೆ. ಮಾರನೇ ದಿನದ ಹೊತ್ತಿಗೆ ಹಣ ಹೊಂದಿಸದಿದ್ದರೆ ವಾಚು ಸಿಗದು. ಇದು ಓರ್ಗಿನ್‌ತೊಳಲಾಟ.

ಟಿಬೆಟಿಯನ್‌ ಭಾಷೆಯ ʼದಿ ಕಪ್‌ʼ ಎನ್ನುವ ಸಿನಿಮಾದ ಕಥಾ ಹಂದರವಿದು.

ಬೂತಾನಿನಲ್ಲಿ ಚಿತ್ರಿತವಾದ ಮೊದಲ ಚಿತ್ರವೆನ್ನಲಾದ ʼದಿ ಕಪ್‌ʼ ನಿರ್ದೇಶಕ ಖಿನ್‌ಟ್ಸೆ ನೋರ್ಬು. ಲಾಮಾ ಪರಂಪರೆಯ ವಾರಸುದಾರನೆನ್ನಲಾದ ಈತ ಏಳನೇ ವಯಸ್ಸಲ್ಲೆ ಧರ್ಮ ಬೋಧೆಯನ್ನು ಪಡೆದವರು. ಹೆಸರಾಂತ ನಿರ್ದೇಶಕ ಬರ್ಟೊಲುಸಿಯೊಡನೆ ʼಲಿಟಲ್‌ಬುದ್ಧʼ ಚಿತ್ರ ನಿರ್ಮಾಣದಲ್ಲಿ ಭಾಗಿಯಾಗಿದ್ದ ನೋರ್ಬುಗೆ ಸಿನಿಮಾ ಎಂಬುದು ಕಳಚಿಕೊಳ್ಳಲಾರದ ಆಕರ್ಷಣೆ. ಬೂತಾನ್‌, ಭಾರತ ಮತ್ತು ವಿಶ್ವದ ಹಲವೆಡೆ ಬೌದ್ಧ ಪಂಥವೊಂದರ ಶಿಕ್ಷಣ ಕೇಂದ್ರಗಳ ಸ್ಥಾಪಕನೂ ಆಗಿರುವ ನೋರ್ಬು ಕತೆ, ಚಿತ್ರಕತೆ ಬರೆದು ನಿರ್ದೇಶಿಸಿದ ಮೊದಲ ಸಿನಿಮಾ ʼದಿ ಕಪ್‌ʼ.

ಬೌದ್ಧ ವಿಹಾರದಲ್ಲಿ ದಮ್ಮ ಶಿಕ್ಷಣ ಪಡೆಯುವ ಸಾಧಕರ ಬದುಕಿನ ವಿವರಗಳು ಹೊರ ಜಗತ್ತಿಗೆ ತಿಳಿಯವುದು ಕಡಿಮೆ. ಅಧ್ಯಯನ, ಸಾಧನೆಯಲ್ಲಿ ನಿರತರಾಗಿರುವ ಬಿಕ್ಕುಗಳಲ್ಲು ಮಾನವ ಸಹಜ ವಾಂಛೆಗಳಿರುತ್ತವೆ. ಬಯಕೆಗಳಿಂದ  ಆಧ್ಯಾತ್ಮ ಸಾಧನೆಗೆ ಭಂಗ ಬರಬಾರದು. ಆದರೆ ಮನಸ್ಸಿಗೆ ಕಡಿವಾಣ ಹಾಕುವುದೆಂತು? ಬಿಕ್ಕುಗಳಲ್ಲಿ ಅದರಲ್ಲೂ ಕಿರಿಯ ವಯಸ್ಸಿನ ಶಿಕ್ಷಣಾರ್ಥಿಗಳಲ್ಲಿ ಪ್ರತಿಕೂಲ ಸನ್ನಿವೇಶದಲ್ಲೂ ಸಹಜ ಆಕಾಂಕ್ಷೆಗಳಿವೆ.

ದೀಪದ ಬತ್ತಿ ಹೊಸೆಯುವ ದೃಶ್ಯದೊಂದಿಗೆ ಸಿನಿಮಾ ಆರಂಭಗೊಳ್ಳುತ್ತದೆ. ಬಾಲಕರು ಖಾಲಿಯಾದ ಕೋಕ್‌ಕ್ಯಾನ್‌ ಒದೆಯುತ್ತಾ ಫುಟ್‌ಬಾಲ್‌ ಆಡುತ್ತಾರೆ. ಅದನ್ನು ಲಾಮಾ ಭವಿಷ್ಯಕಾರನಿಗೆ ಕೊಡುವ ಗೀಕೋ, ಅದು ಬತ್ತಿ ಉರಿಸುವುದಕ್ಕೆ ಬಳಕೆಯಾಗುವುದನ್ನು ಕಾಣುತ್ತಾನೆ. ಫುಟ್‌ಬಾಲ್‌ ಮೋಹದ ಓರ್ಗಿನ್‌ ವಾಚನ್ನು ಪಡೆಯುವಾಗ ʼಬಿಕ್ಕುಗಳಿಗೆ ಅಟ್ಯಾಚ್‌ಮೆಂಟ್‌ ಇರಬಾರದುʼ ಎನ್ನುತ್ತಾನೆ. ವಾಚಿಗೆಂದು ಹಣ ಹೊಂದಿಸಲು ಆತ ಪೇಚಾಡುವುದನ್ನು ಕಂಡ ಬೌದ್ಧಗುರು ʼಇವನು ಒಳ್ಳೆಯ ಧರ್ಮಗುರುವಾಗುತ್ತಾನೆʼ ಎನ್ನುತ್ತಾರೆ. ಹೀಗೆ ತಾತ್ವಿಕತೆ ಮತ್ತು ವಾಸ್ತವ ಇವೆರಡನ್ನು ಚಿತ್ರದಲ್ಲಿ ಹದವಾಗಿ ಬೆರೆಸಲಾಗಿದೆ.

ʼಭಾರತದ ಜನಸಂಖ್ಯೆ ಹೆಚ್ಚಿದ್ದರೂ ನಮಗೆ ಆಶ್ರಯ ಕೊಟ್ಟಿದ್ದಾರೆʼ ಎನ್ನುವಲ್ಲಿ ಭಾರತದ ಬಗೆಗೆ  ಅಭಿಮಾನವಿದೆ; ವರ್ಲ್ಡ್‌ಕಪ್‌ನಲ್ಲಿ ಫ್ರಾನ್ಸ್‌ ಗೆಲ್ಲಬೇಕು, ಏಕೆಂದರೆ ಅವರು ಚೀನಾ ಆಕ್ರಮಣದ ವಿರುದ್ಧವಾಗಿದ್ದಾರೆ; ಅಮೆರಿಕಾ ಚೀನಾಕ್ಕೆ ಹೆದರಿಕೊಂಡಿದೆ, ಹೀಗೆ ಗಡಿಪಾರು ಮಾಡಿದ ನಿರ್ವಸಿತರ ಮನದಾಳದ ಭಾವನೆಗಳಿಗೆ ಇಲ್ಲಿ ಅಭಿವ್ಯಕ್ತಿಯಿದೆ.

ಬೌದ್ಧಗುರು ತನ್ನೂರಿಗೆ ಹಿಂತಿರುಗಲು ಸಿದ್ಧತೆ ಮಾಡಿಕೊಳ್ಳುವುದು, ಪೆಟ್ಟಿಗೆಯಲ್ಲಿಟ್ಟ ವಸ್ತು, ಚಿತ್ರಗಳನ್ನು ತೆಗೆದು  ಕಣ್ಣಿಗೊತ್ತಿಗೊಳ್ಳುವುದು ನಿರಾಶ್ರಿತರ ದುಮ್ಮಾನವನ್ನು ಸೂಚಿಸಿದರೆ, ಫೈನಲ್‌ ಪಂದ್ಯಕ್ಕೆ ಟೆಲಿವಿಷನ್ನಿಗೆ ಬಾಡಿಗೆ ಹೆಚ್ಚಿಸುವುದು, ಡಿಶ್‌ಹಾಕಲು ಹಣ ಕೇಳುವುದು ನಿರಾಶ್ರಿತರ ಶೋಷಣೆಯನ್ನು ಹೇಳುವ ದೃಶ್ಯಗಳು.

ಖಿನ್‌ಟ್ಸೆ ನೋರ್ಬು ʼದಿ ಕಪ್‌ʼ ಸಿನಿಮಾವನ್ನು ಸಂಕೀರ್ಣಗೊಳಿಸದೆ ತನಗೆ ಹೇಳಬೇಕಾದ್ದನ್ನು ತೊಂಬತ್ತಮೂರು ನಿಮಿಷಗಳಲ್ಲಿ ತೆರೆಯ ಮೇಲೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಲಾಮಾ ಅಥವಾ ಯಾವುದೇ  ಪಂಥದ ಗುರು ವೈಯಕ್ತಿಕ ಎನ್ನಿಸುವ ಭಾವನೆಗಳನ್ನು ವ್ಯಕ್ತಪಡಿಸುವುದು ಸುಲಭವಲ್ಲ. ಖಿನ್‌ಟ್ಸೆ ನೋರ್ಬು ಇಂತಹದೊಂದು ಸಾಹಸ ಮಾಡಿದ್ದಾರೆ. ಸೀಮಿತ ಅವಕಾಶ, ಕನಿಷ್ಠ ಸೌಲಭ್ಯಗಳನ್ನು ಬಳಸಿಕೊಂಡು ಒಳ್ಳೆಯ ಚಿತ್ರ ಕೊಡುವಲ್ಲಿ ಸಫಲರಾಗಿದ್ದಾರೆ.

ʼದಿ ಕಪ್‌ʼ ಹಿಮಾಲಯದ ತಪ್ಪಲಿನ ಪ್ರದೇಶದಲ್ಲಿ ಚಿತ್ರಿತವಾದರೂ ಸಿನಿಮಾಟೋಗ್ರಫಿಯಲ್ಲಿ ವಿಶೇಷವೇನಿಲ್ಲ. ಸಂಕಲನವೂ ಇನ್ನಷ್ಟು ಸುಧಾರಿಸಬೇಕೆನಿಸುತ್ತದೆ. ನಟನೆ ಈ ಚಿತ್ರದ ಪ್ರಮುಖ ಅಂಶ. ತೆರೆಯ ಮೇಲೆ ಎಂದೂ ಕಾಣಿಸಿಕೊಳ್ಳದವರ ಸಹಜ ಅಭಿನಯ ಮೆಚ್ಚುಗೆ ಗಳಿಸುತ್ತದೆ. ಓರ್ಗಿನ್‌ ಪಾತ್ರದ ಬಾಲಕ ಜಾಮ್ಯಾಂಗ್‌ ಲೋಡ್ರೋ ಹಾಲಿವುಡ್‌ನಲ್ಲಿದ್ದರೆ ಪ್ರಖ್ಯಾತನಾಗುತ್ತಿದ್ದನೇನೋ. ನಿಜ ಜೀವನದಲ್ಲಿ ಲಾಮಾ ಗುರುವಾಗಿರುವ  ವಯೋ ವೃದ್ಧ ಚೋನ್ಜೋರ್‌ ಕಣ್ಣುಗಳಲ್ಲೇ ಭಾವನೆಗಳನ್ನು ವ್ಯಕ್ತ ಪಡಿಸುತ್ತಾರೆ. ಗೀಕೋ ಪಾತ್ರದ ಒರ್ಗಯಾನ್‌ ತೊಬ್ಯಾಲ್‌ರದು ಪಾತ್ರೋಚಿತ ಅಭಿನಯ.

1999ರಲ್ಲಿ ಬಿಡುಗಡೆಯಾದ ʼದಿ ಕಪ್‌ʼ ಸಿನಿಮಾದ ಕೇಂದ್ರದಲ್ಲಿರುವುದು ಫುಟ್‌ಬಾಲ್‌ ಆಟ. ಅದನ್ನು ಸುತ್ತುವರಿದಿರುವುದು ನಿರಾಶ್ರಿತರ ದುಃಖ, ದುಮ್ಮಾನ, ಸಹಜ ತುಡಿತಗಳ ನೋಟ. ವಿಶ್ವಕಪ್‌ಫುಟ್‌ಬಾಲ್‌ ಹಬ್ಬದ ಸಂಭ್ರಮ ಹೆಚ್ಚಿಸುವಂತೆ  ʼಮುಬಿʼ ಯಲ್ಲಿ ಈ ಚಿತ್ರ ಬಿಡುಗಡೆಯಾಗಿದೆ.

‍ಲೇಖಕರು Admin

November 27, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: