ವಿದ್ಯಾವಂತರಾದ್ರೆ ಮಾನವೀಯ ಮೌಲ್ಯ ಸುಧಾರಿಸುತ್ತೆಯೇ: ಕೆ.ಟಿ.ಗಟ್ಟಿ ಪ್ರಶ್ನೆ

ಕೃಪೆ: ಅತ್ರಿ ಬುಕ್ ಸೆಂಟರ್ ಕೆ. ಟಿ. ಗಟ್ಟಿ

ಈಗ ಜಗತ್ತಿನಲ್ಲಿ ವಿದ್ಯಾವಂತರ ಸಂಖ್ಯೆ ಗರಿಷ್ಟ ಮಟ್ಟದಲ್ಲಿದೆ. ಇದರಿಂದಾಗಿ ಮಾನವ ಸಂಕುಲಕ್ಕೆ ಪ್ರಯೋಜನವಾಗಿದೆಯೆ ಎಂದು ಕೇಳಿದರೆ ಯಾರಿಂದಲೂ ಸ್ಪಷ್ಟ ಉತ್ತರ ಸಿಗುವುದಿಲ್ಲ. ವಿದ್ಯಾವಂತರಾಗಿರುವುದರಿಂದ ಮನುಷ್ಯರ ಸಜ್ಜನಿಕೆ ಆತ್ಮೋನ್ನತಿ ಮತ್ತು ಮಾನವೀಯ ಗುಣಗಳಲ್ಲಿ ಸುಧಾರಣೆ ಆಗಿದೆಯೆ ಎಂಬ ಪ್ರಶ್ನೆಗೆ ಕೂಡ ಯಾರಲ್ಲೂ ಉತ್ತರವಿಲ್ಲ. ಮುಖ್ಯವಾಗಿ ವಿದ್ಯಾವಂತರೇ ಏನೂ ಹೇಳದವರಾಗಿದ್ದಾರೆ.

ಯಾಕೆ ಹೀಗಾಗಿದೆ ಎಂದು ವಿದ್ಯಾವಂತರೇ ಯೋಚಿಸಬೇಕು. ಆಗ ಉತ್ತರ ಸಿಗಬಹುದು. ಶಿಕ್ಷಣ ಎಂಬುದು ಶಿಕ್ಷಣವಾಗಿರದೆ, ಹಣ ಸಂಪಾದಿಸುವ ದಾರಿಗಳನ್ನು ಪುಸ್ತಕಗಳ ಮೂಲಕ ವಿದ್ಯಾರ್ಥಿಯ ಕಿವಿಯಲ್ಲಿ ತುಂಬುವ ವ್ಯವಹಾರವಾಗಿರುತ್ತದೆ.

ವಿದ್ಯಾಭ್ಯಾಸ ಅಥವಾ ಶಿಕ್ಷಣ ಎಂಬುದು ಅನಾದಿ ಕಾಲದಿಂದಲೂ ಪುಸ್ತಕದ ಬದನೆಕಾಯಿ ಎಂಬ ಅವಹೇಳನಕ್ಕೆ ಗುರಿಯಾಗಿದೆ. ನಾಲ್ಕು ಗೋಡೆಗಳ ನಡುವೆ ನಡೆಯುವ ಸಾಮಾನ್ಯ ಶಿಕ್ಷಣದಲ್ಲಿ ಮುಖ್ಯವಾಗಿ, ಮುದ್ರಿತ ಪಠ್ಯಪುಸ್ತಕ ಮತ್ತು ಶಿಕ್ಷಕನ ನಾಲಿಗೆ ಕಲಿಕೆಯಲ್ಲಿ ಮುಖ್ಯ ಸಾಧನವಾಗಿರುತ್ತದೆ.

ವಿದ್ಯಾವಂತರಾಗಿ ಶಾಲೆ-ಕಾಲೇಜು ಸುತ್ತುವವರಾಗಿರಲಿ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣದಲ್ಲಿ ಇಂಥ ವಿಶೇಷ ಶಿಕ್ಷಣ ಕ್ರಮ ಕೂಡ ಹೊಲದಲ್ಲಿ  ನೊಗ ನೇಗಿಲು ಹೊತ್ತು ನಡೆಯುವ ಎತ್ತುಗಳ ದುಡಿತದಂತೆಯೇ ಆಗಿದ್ದು ಲ್ಯಾಬ್ ಎಂಬ ಕೋಣೆಗಳಲ್ಲಿ ನಡೆಯುತ್ತದೆ.

ಒಟ್ಟಿನಲ್ಲಿ ಈ ಶಿಕ್ಷಣದ ಉದ್ದೇಶ ವಿದ್ಯಾರ್ಥಿಯನ್ನು ಹಣ ಗಳಿಸುವ ಜಾಬ್ ಎಂಬ ಕೆಲಸಕ್ಕೆ ತಯಾರಿಸುವುದೇ ಆಗಿರುತ್ತದೆ. ವಿದ್ಯಾವಂತರಾಗಿರುವವರು ಏನು ಕೆಲಸ ಮಾಡುತ್ತಿರುತ್ತಾರೆ, ಅವರ ಬದುಕಿನ ಸ್ವರೂಪ ಹೇಗಿದೆ ಎಂದು ನೋಡಿದರೆ, ಅವರ ಬದುಕು ಬಡವರ ಮತ್ತು ಜನಸಾಮಾನ್ಯರಾಗಿದ್ದು ಹೇಗೆ ಹೇಗೋ ದಿನ ದೂಡುವವರ ಬದುಕಿಗಿಂತ ಭಿನ್ನವಾಗಿರುತ್ತದೆ ಎಂದು ತಿಳಿಯುತ್ತದೆ. ಶ್ರೀಮಂತ ವಿದ್ಯಾವಂತರು ಹೇಗೆ ಬದುಕುತಾರೆ ಎಂದು ಸ್ವಲ್ಪ ಹತ್ತಿರಕ್ಕೆ ಹೋಗಿ ನೋಡಿದರೆ ಅವರ ಬದುಕಿನಲ್ಲಿರುವ ಸುಖ ಸಂತೋಷಗಳನ್ನು ಕಾಣಬಹುದು.

ಅವರು ಅಗತ್ಯಕ್ಕಿಂತ ಹೆಚ್ಚು ಆಹಾರ ಭುಂಜಿಸುತ್ತಾರೆ. ತತ್ಪರಿಣಾಮವಾಗಿ, ಒಂದಲ್ಲ ಒಂದು ಕಾಯಿಲೆಗೆ ತುತ್ತಾಗಿ ನರಳುತ್ತಿರುತ್ತಾರೆ. ಎಡೆಬಿಡದೆ ಆಸ್ಪತ್ರೆಗೆ ಹೋಗುತ್ತಿರುತ್ತಾರೆ. ಹೊಸ ಹೊಸ ತಿಂಡಿ ತಿನಸುಗಳನ್ನು ಖರೀದಿಸಿ ತಿನ್ನುತ್ತಾರೆ. ಮಕ್ಕಳಿಗೂ ಕೊಡುತ್ತಾರೆ. ಎಲ್ಲರೂ ಆಗಾಗ ಅನಾರೋಗ್ಯದ ಹೊಂಡಕ್ಕೆ  ಬೀಳುತ್ತಾರೆ. ಹಾಗಿದ್ದರೂ ತಾವು ಎಷ್ಟು ಚೆನ್ನಾಗಿ ಆದರೂ ಎಷ್ಟು ಸೊಂತೋಷದಿಂದ ಬದುಕುತ್ತಿದ್ದೇವೆ ಎಂದು ಎಲ್ಲರಿಗೂ ತೋರಿಸುತ್ತಿರುತ್ತಾರೆ.

ಒಂದಷ್ಟು ಮಂದಿ ವಿದ್ಯಾವಂತರು ದೊಡ್ಡ ದೊಡ್ಡ ಹುದ್ದೆಗಳಲ್ಲಿದ್ದು ಬದುಕಿನ ಒಂದು ಕೊನೆಯಲ್ಲಿ ಲಕ್ಷಗಟ್ಟಲೆ ಹಣ ಸಂಪಾದಿಸಿಟ್ಟುಕೊಂಡು ಶ್ರೀಮಂತಿಕೆಯ ಪ್ರದರ್ಶನ ಮಾಡುತ್ತಾರೆ.

ಹತ್ತಿರದಲ್ಲೇ ಇನ್ನೊಂದು ಕಡೆ ರೋಗರುಜಿನ, ಮತ್ತು ಸಾವು ಬಾ ಬಾ ಎಂದು ಕರೆಯುತ್ತಿರುತ್ತದೆ. ಲಕ್ಷಗಟ್ಟಲೆ, ಕೋಟಿಗಟ್ಟಲೆ ಹಣ ಎತ್ತಿಕೊಂಡು, ಇನ್ನೂ ಕೆಲ ದಿನ ಕೆಲ ತಿಂಗಳು ಕೆಲ ವರ್ಷ ಆರಾಮವಾಗಿರೋಣ  ಎಂದು ಆರೋಗ್ಯಧಾಮಗಳಲ್ಲಿ ಪವಡಿಸುತ್ತಾರೆ. ಕೆಲವರು ಬೇರೆ ದೇಶಗಳಿಗೆ ಹೋಗಿ ಐಶಾರಾಮವಾಗಿ ಉಳಿದ ಕೆಲವು ದಿನಗಳನ್ನು ಅವರು ಮಾತ್ರ ಕಾಣುವಂಥ ಸಂತೋಷದಲ್ಲಿ ಹೇಗೋ ದಿನ ದೂಡುತ್ತಾರೆ.

ಅವರನ್ನು ಈ ಸ್ಥಿತಿಗೆ ತಂದಿಟ್ಟದ್ದು ಅವರ ಓದು, ಅವರ ಜ್ಞಾನ, ಅಜ್ಞಾನ ಮತ್ತು ಐಷಾರಾಮದ ಬದುಕು. ದೇವರನ್ನು ಕಂಡ ಕೃಷಿಕ ಮಾನವ ಎಷ್ಟು ಸರಳವಾದ ಬದುಕು ಸಾಧ್ಯವೊ ಅಷ್ಟು ಸರಳವಾದ ಬದುಕು ಬದುಕುತ್ತಾನೆ. ಅವನ ಬದುಕಿನ ಸೌಂದರ್ಯ ಕಂಡು ವಿದ್ಯಾವಂತ ಶ್ರೀಮಂತ, ಕೋಟಿಗಟ್ಟಳೆ ಹಣ ಕೂಡಿಟ್ಟ ಉದ್ಯಮಿ, ಸರಕಾರದಲ್ಲಿ ಬಹಳ ದೊಡ್ಡ ಹುದ್ದೆಯಲ್ಲಿದ್ದವನು, ಎಮ್ಮೆಲ್ಲೇ,  ಎಂಪೀ, ಮಂತ್ರಿ ಇತ್ಯಾದಿ ಎಲ್ಲರೂ ಯಾರಿಗೂ ಕಾಣದಂತೆ ಕಣ್ಣು ಒರಸಿಕೊಳ್ಳುತ್ತಾ..

ಛೆ! ನಾವು ವಿದ್ಯಾವಂತರಾಗಬಾರದಾಗಿತ್ತು ಎಂದು ಕೊರಗುತ್ತಿರುತ್ತಾರೆ. ಬದುಕು ಎಂಬುದು ಸತ್ಯವೊ ಮಿಥ್ಯವೊ ಎಂದು ಚಿಂತಿಸುತ್ತಿರುತ್ತಾರೆ.

ಮಗು: ಅಪ್ಪಾ, ಹಣ ಮನುಷ್ಯನನ್ನು ಕೊಲ್ಲುತ್ತದೆಯೆ? ಅಪ್ಪ: ಮಗೂ, ಮನುಷ್ಯ ಮನುಷ್ಯನನ್ನು ಕೊಲ್ಲುವಂತೆ ಇನ್ನೊಬ್ಬ ಮನುಷ್ಯನನ್ನು ಕೊಲ್ಲುವುದಿಲ್ಲ. ಹಣಕ್ಕೆ ಹಲವು ರೂಪಗಳಿವೆ. ಯಾವುದಾದರೂ ಒಂದು ರೂಪದಲ್ಲಿ ಹಣ ಮನುಷ್ಯನನ್ನು ಕೊಲ್ಲಬಹುದು.

‍ಲೇಖಕರು avadhi

October 8, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Basavanagowda H C

    ಸುಶಿಕ್ಷಿತರಿಂದ ಮಾತ್ರ ಮಾನವೀಯ ಮೌಲ್ಯ ಸುಧಾರಿಸುತ್ತದೆ.

    ಪ್ರತಿಕ್ರಿಯೆ
  2. Ashoka mallappa Surapur

    ಸರ್., ಹಳ್ಳಿಯಿಂದ ಪಟ್ಟಣ, ನಗರಗಳಿಗೆ ಶಿಫ್ಟ್ ಆದ ಬದುಕು.. ಸಾಕಷ್ಟು ಬದಲಾವಣೆ ಮಾಡಿಕೊಳ್ಳಬೇಕಾದ ಅನಿವಾರ್ಯತೆಗೆ ಒಳಗಾಗಿದೆ. ಉದಾ.ಗೆ ಹೊಲ ಮನೆಗಳಿದ್ದ ಸುಸಜ್ಜಿತ ಹಳ್ಳಿ ಬದುಕು ತಂದೆಯ ನೌಕರಿಯೊಂದಿಗೆ ನಗರ ಸೇರಿದೆ ಅಥವಾ ಸ್ವಂತ ದುಡಿಮೆ ಹುಡುಕಿ ನಗರಗಳ ಪಾಲಾದ ಬದುಕುಗಳು. ಈ ಕಾಲ ಘಟ್ಟದಲ್ಲಿ ಮಕ್ಕಳಿಗೆ ಹಳ್ಳಿ ವಿಳಾಸದ ಪರಿಚಯದ ನಿರಾಳತೆ ಭಾಗ್ಯ ಇಲ್ಲ.. ಏನಿದ್ದರೂ ಉದಗಯೋಗ ಒಂದರ ಅನಿವಾರ್ಯತೆ ಇದೆ.. ಇದನ್ನು ಸಂಪಾದಿಸುವ ಏಕೈಕ ದಾರಿ ಶಿಕ್ಷಣ.. ಹೀಗಾಗಿ ಶಿಕ್ಷಣ ನೌಕರಿ ಹಿಡಿವ ದಾರಿ ಮಾತ್ರವಾಗಿ ಮಾನವೀಯತೆಯ ಸ್ಪರ್ಷವಿಲ್ಲದುದಾಗಿದೆ.. ಕಾರಣ ಇಷ್ಟೆ ಯಥೇಚ್ಛವಾಗಿ ಸಿಗುವುದನ್ನು ಧಾರಾಳವಾಗಿ ದಾನ ಮಾಡಬಹುದು.. ವಿರಳವಾದುದನ್ನು ಕಳೆದುಕೊಳ್ಳುವ ತಾಕತ್ತನ್ನು ಮಾನವೀಯತೆ ಅನ್ನಬಹುದೆ ? ಯಾಕೆಂದರೆ ಎಲ್ಲ ಶಾಲಾ ಕಾಲೇಜುಗಳು .. ಹಳ್ಳಿ ತೊರೆದು ಹಳ್ಳ ಹಿಡಿದ ಮನೆಗಳು ಭೊದಿಸುತ್ತಿರುವುದು ಇದನ್ನೆ.. ನಾಳೆಗಳ ಭಯ ನಾಡಿಗಳಲ್ಲಿ ಸೇರಿ ಹೋಗಿ ಮಾನವೀಯತೆ ಮರೆಯಾಗುತ್ತಿದೆ!?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: