'ಪಡ್ಡಾಯಿ' ಕಟ್ಟಿದ ಕಥೆ- ಕಾಲದ ಹೊಡೆತಕ್ಕೆ ಕುಸಿದ ದುರಾಸೆ


ಚಿಕ್ಕ ವಯಸ್ಸಿನಲ್ಲಿಯೇ ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿದವರು ಅಭಯ ಸಿಂಹ. ಇವರು ನಿರ್ದೇಶಿಸಿದ ಮೊದಲ ಚಲನಚಿತ್ರ ‘ಗುಬ್ಬಚ್ಚಿಗಳು’. ೨೦೦೮ ರಲ್ಲಿ ಆರಂಭವಾದ ಇವರ ಚಿತ್ರ ಪಯಣಕ್ಕೆ ಈಗ ದಶಕದ ವಸಂತ.
ಕಡಲ ಅಲೆಗಳ ಅಬ್ಬರವನ್ನು ಆಲಿಸುತ್ತಲೇ ಬೆಳೆದ ಹುಡುಗನಿಗೆ ಮನಸ್ಸು ಮತ್ತೆ ಮತ್ತೆ ಅತ್ತಲೇ ಎಳೆದದ್ದು ಆಕಸ್ಮಿಕವಲ್ಲ. ತಾನು ಬಾಲ್ಯದಿಂದಲೂ ಕಂಡ ಸಮುದ್ರ, ಮೀನುಗಾರರು, ದೋಣಿ, ಬಲೆ, ಹಡಗು ಎಲ್ಲವನ್ನೂ ಸೇರಿಸಿ ಕಟ್ಟಿದ ಚಿತ್ರವೇ ‘ಪಡ್ಡಾಯಿ’.
ತುಳು ಭಾಷೆಯ ಈ ಸಿನೆಮಾ ಕೇವಲ ಭಾಷೆಯ ಕಾರಣಕ್ಕಾಗಿ ಮಾತ್ರ ನೋಡುಗರನ್ನು ಕಾಡಲಿಲ್ಲ. ಬದಲಿಗೆ ಇದು ಯಶಸ್ವಿಯಾಗಿ ತುಳು ನೆಲದ ಸಂಸ್ಕೃತಿಯನ್ನು ಕಟ್ಟಿಕೊಟ್ಟ ಚಿತ್ರ. ಈ ಚಿತ್ರಕ್ಕೆ ಮತ್ತೆ ರಾಷ್ಟ್ರ ಪ್ರಶಸ್ತಿ ಇವರನ್ನು ಹುಡುಕಿಕೊಂಡು ಬಂದಿತು.
ಅಭಯ ಸಿಂಹ ಹೇಗೆ ತಮ್ಮ ಸಿನೆಮಾವನ್ನು ಕಟ್ಟುತ್ತಾರೆ ಎನ್ನುವ ಕುತೂಹಲ ಎಲ್ಲರಿಗೂ ಇದೆ. ಈ ಪ್ರಶ್ನೆಯನ್ನು ನಾವೂ ಕೇಳಬೇಕು ಎಂದುಕೊಂಡಿದ್ದಾಗಲೇ ಅಭಯ ಸಿಂಹ ‘ಅಕ್ಷರ ಪ್ರಕಾಶನ’ದ ಮೂಲಕ ‘ಪಡ್ಡಾಯಿ’ ಕಟ್ಟಿದ ಕಥೆಯ ಕೃತಿಯನ್ನು ಹಿಡಿದು ಬಂದರು.
ಕನ್ನಡದಲ್ಲಿ ಸಿನೆಮಾ ಕುರಿತ ಕೃತಿಗಳು ಬೆರಳೆಣಿಕೆಯಷ್ಟು. ಇಂತಹ ಸಂದರ್ಭದಲ್ಲಿ ಚಿತ್ರಕಥೆಯ ಸಮೇತ ಅಭಯ ಸಿಂಹ ಪಡ್ಡಾಯಿ ಕಟ್ಟಿದ ಕಥೆಯನ್ನು ಹೇಳಿದ್ದಾರೆ. ಓದಿ-
ಈ ಕೃತಿ ಕೊಳ್ಳುವ ಆಸಕ್ತಿ ಇದ್ದಲ್ಲಿ  ಇಲ್ಲಿ ಒತ್ತಿ 

| ನಿನ್ನೆಯಿಂದ |

5


ನಡುವಲ್ಲಿ, ಬಿಡುವಲ್ಲಿ ಇನ್ನೂ ಒಂದಷ್ಟು ಯೋಚನೆ
ಎಷ್ಟೋ ಬಾರಿ, ಚಿತ್ರೀಕರಣಕ್ಕೆ ಸ್ಥಳಗಳ ಹುಡುಕಾಟ ನಡೆಸಿ ದಣಿದು, ಸಮುದ್ರ ತೀರದಲ್ಲಿ ಹಾಗೇ ಕುಳಿತು ನಾವು ಹರಟೆ ಹೊಡೆಯುವುದಿತ್ತು. ಆಗ ರಂಜಿತ್ ಸಮುದ್ರದ ಕಥೆಗಳನ್ನು ಹೇಳುತ್ತಿದ್ದ.
ಇತ್ತೀಚೆಗೆ ಸಮುದ್ರದಲ್ಲಿ ಮೀನು ಹಿಡಿಯುವಾಗ ಅಪಘಾತಗಳ, ಸಾವುಗಳ ಭೀಕರ ಕಥೆಗಳು. ದೋಣಿಯಲ್ಲಿ ಬಹಿರ್ದೆಸೆಗೆ ಹೋಗುವ ಪಾಡಿನ ನಗೆ ಬರಿಸುವ ಕಥೆಗಳು, ಮೀನುಗಾರಿಕೆಗೆ ಹೋದಾಗ ಮರಳುವಿಕೆಯ ನಿರೀಕ್ಷೆಯಲ್ಲಿರುವ ಮನೆ ಮಂದಿಯ, ಭಾವನಾತ್ಮಕ ಕಥೆಗಳು, ಕಡಲ ತಡಿಯ ಅಂತರ್ಜಾತಿ ಪ್ರೇಮಗಳ ಕಥೆಗಳು, ಅವರ ಸಂಭ್ರಮಗಳು, ಆಚರಣೆಗಳು ಹೀಗೆ ಅನೇಕ ಕಥೆಗಳನ್ನು ಅವನು ಹೇಳಿದ.
ನನ್ನ ಬಾಲ್ಯ ಇದೇ ಪರಿಸರದಲ್ಲಿ ಕಳೆದಿದ್ದರೂ, ಈ ಅನುಭವಗಳಿಗೆ ಎಷ್ಟು ಅಪರಿಚಿತನಾಗುಳಿದೆ, ನಾನು ತಿಳಿದುಕೊಂಡದ್ದು ಎಷ್ಟು ಅಲ್ಪ ಎನ್ನುವುದು ಮತ್ತೆ ಮತ್ತೆ ಕಾಡುತ್ತಿತ್ತು.
ಸತತ ವ್ಯಾಯಾಮದಿಂದ ಹುರಿಗೊಂಡ ರಂಜಿತನ ಮೈಕಟ್ಟನ್ನು ನಾವು ತಮಾಷೆ ಮಾಡುವುದಿತ್ತು. ನೀನು ಸೈನ್ಯ ಸೇರಬೇಕು ಎನ್ನುತ್ತಿದ್ದೆವು. ಒಮ್ಮೆ ರಂಜಿತ್ ನಾನು ನಿಜವಾಗಿಯೂ ಸೈನ್ಯದಲ್ಲಿ ಇದ್ದೆ ಎಂದ. ಹೌದೇ?! ಎಲ್ಲಿ? ಎಂದು ಕೇಳಲು, ನಾನು ಅಮೇರಿಕನ್ ಸೈನ್ಯದಲ್ಲಿ, ಅಫ್ಘಾನಿಸ್ಥಾನದಲ್ಲಿ ಕೆಲಸ ಮಾಡಿದ್ದೇನೆ ಎಂದ. ನಮಗೆ ಗೊಂದಲವೂ, ಅಚ್ಚರಿಯೂ. ಇದೇನಿದು ಹೊಸ ಕಥೆ ಎಂದು ಕೇಳಿದರೆ, ಈ ಕಡೆಯ ಅನೇಕ ಯುವಕರು, ತಾಂತ್ರಿಕ ತರಬೇತಿ ಪಡೆದು, ಅಮೇರಿಕನ್ ಸೈನ್ಯಕ್ಕೆ ತಾಂತ್ರಿಕ ಸಹಾಯಕರಾಗಿ ಹೋಗುವ ವಿಚಾರ ತಿಳಿಯಿತು.

ಅಫ್ಘಾನಿಸ್ಥಾನದಲ್ಲಿ ಸೈನ್ಯದ ನೆಲೆಗಳಲ್ಲಿ, ಹವಾನಿಯಂತ್ರಕ ಸರಿಪಡಿಸುವವರು, ಟಿ.ವಿ ರಿಪೇರಿ ಮಾಡುವವರು, ಹೀಗೆ ವಿವಿಧ ಕೆಲಸಗಳಿಗೆ ನಮ್ಮ ಯುವಕರು ಹೋಗುತ್ತಾರಂತೆ. ಯುದ್ಧ ಅಂದರೆ ಪ್ರಾಣಾಪಾಯದ ವಿಚಾರವಲ್ಲವೇ ಎಂದು ನಾನು ಕೇಳಿದೆ. ಸಣ್ಣ ದೋಣಿಯಲ್ಲಿ ಕುಳಿತು, ಆರ್ಭಟಿಸುವ ಸಮುದ್ರದಲ್ಲಿ ಮೀನು ಹಿಡಿಯುವುದಕ್ಕಿಂತ, ಅಫ್ಘಾನಿಸ್ಥಾನದ ಸೈನ್ಯ ನೆಲೆಯಲ್ಲಿರುವುದು ಹೆಚ್ಚು ಸುರಕ್ಷಿತ ಎಂದು ರಂಜಿತ್ ನಕ್ಕಿದ್ದ!
ಅಲ್ಲಿ ನಾವು ಸುರಕ್ಷಿತ ನೆಲೆಯಲ್ಲಿರುತ್ತೇವೆ. ಯುದ್ಧ ಕಾಣಿಸಲೇ ಸಿಗುವುದಿಲ್ಲ. ನಾನಿದ್ದಷ್ಟೂ ಸಮಯದಲ್ಲಿ ಎರಡು ಸಲ ಮಾತ್ರ ನಮ್ಮ ನೆಲೆಗೆ ಬಾಂಬ್ ಬಿದ್ದಿತ್ತು. ಅದರಲ್ಲಿ ಒಂದು ಸ್ಫೋಟಿಸಲೇ ಇಲ್ಲ. ಅಲ್ಲಿದ್ದ ಭಾರತೀಯರೆಲ್ಲಾ ಬಹುಶಃ ಇದು ಚೈನಾದಲ್ಲಿ ಮಾಡಿರಬೇಕು ಎಂದು ನಕ್ಕಿದ್ದೆವು ಎಂದ ರಂಜಿತ್! ಯುದ್ಧ, ಸುರಕ್ಷತೆ, ಸೈನ್ಯ, ಸೀಮೆಗಳು ಇವೆಲ್ಲಕ್ಕೂ ನನಗೆ ರಂಜಿತನ ಮಾತುಗಳಲ್ಲಿ ಹೊಸತೇ ಅರ್ಥ ಕಾಣುತ್ತಿತ್ತು.
ಇದು ಮ್ಯಾಕ್ಬೆತ್ ನಾಟಕವನ್ನು ಹೊಸ ಬೆಳಕಲ್ಲಿ ಕಾಣುವಂತೆ ನನ್ನನ್ನು ಪ್ರೇರೇಪಿಸಿತು. ಮೂಲ ಮ್ಯಾಕ್ಬೆತ್ ನಾಟಕದಲ್ಲಿ ಹಾಗೆಯೇ, ನಾನು ನೋಡಿರುವ ಎಲ್ಲಾ ಅಳವಡಿಕೆಗಳಲ್ಲಿ, ಯುದ್ಧ ಎನ್ನುವುದು ಹಾಗೂ ಅದರ ಮೂಲಕ ಪಡೆಯುವ ಅಧಿಕಾರದ ಒಂದು ಪ್ರಬಲ ಕಲ್ಪನೆ. ಆದರೆ, ರಂಜಿತ್ ಮಾತಿನಿಂದ, ನನ್ನ ಮಟ್ಟಿಗೆ, ಯುದ್ಧದ ಕಲ್ಪನೆಯೇ ಬದಲಾಗಿತ್ತು.
ಈ ಮಧ್ಯೆ ಒಮ್ಮೆ ಮಂಗಳೂರಿಗೆ ಹೋದಾಗ ನನ್ನ ತಂದೆಯ ಹಳೆಯ ಗೆಳೆಯರಾಗಿದ್ದ ಕಣ್ವ ತೀರ್ಥದ ದಿನೇಶ ಉಚ್ಚಿಲರನ್ನು ಅವರ ಮನೆಯಲ್ಲೇ ಭೇಟಿಯಾಗಿದ್ದೆವು. ನನ್ನ ಉದ್ದೇಶ, ಅವರಿಂದ ಸಾಂಪ್ರದಾಯಿಕ ಮೀನುಗಾರಿಕೆಯ ಬಗ್ಗೆ ಒಂದಷ್ಟು ಮಾಹಿತಿ ಸಂಗ್ರಹಿಸುವುದಾಗಿತ್ತು. ಒಂದು ಕಾಲದಲ್ಲಿ ಹಲವು ದೋಣಿಗಳನ್ನು ಇಟ್ಟುಕೊಂಡು ಭರ್ಜರಿ ಮೀನುಗಾರಿಕೆ ಮಾಡಿದ್ದ, ಅನುಭವದ ಜೀವ ಈ ದಿನೇಶಣ್ಣ. ಹೆಚ್ಚಿನ ಮೊಗವೀರರಂತೆ ಅವರ ಮನೆಯೂ ಕಡಲಿನ ಹತ್ತಿರವೇ.
ಅದೊಂದು ಸಂಜೆ ಅವರ ಮನೆಗೆ ನಾನು ಹಾಗೂ ನನ್ನ ತಂದೆ ಹೋದೆವು. ವಿರಾಮವಾಗಿ ಕುಳಿತು ಮಾತಿಗಿಳಿದರು ದಿನೇಶಣ್ಣ. ಮನೆಯ ಪಕ್ಕದಲ್ಲಿರುವ ಕಡಲ ಶ್ರುತಿ ಮೊರೆಯುತ್ತಿರಲು, ಆತ್ಮೀಯತೆಯಿಂದ ನಮ್ಮೊಡನೆ ಸುಮಾರು ಎರಡೂವರೆ ಗಂಟೆಯಷ್ಟೊತ್ತು ಮಾತನಾಡಿದರು. ಅವರ ಬಾಲ್ಯದ ನೆನಪುಗಳು, ಸಮುದ್ರ, ಮೀನುಗಾರಿಕೆ ಬದಲಾಗುತ್ತಿರುವುದು ಹೀಗೆ ವಿಷಯಗಳನ್ನು ಹೇಳುತ್ತಾ ಸಾಗಿದರು.

ದಿನೇಶಣ್ಣ, ಬಾಲ್ಯದಲ್ಲಿ ಬಹಳ ಕಷ್ಟವನ್ನು ಕಂಡವರಾದರೂ, ಕಷ್ಟದ ಅರ್ಥವನ್ನೆ ಬದಲಿಸಿದಂತೆ, ಸುಖವಾಗಿ ಜೀವಿಸಿದ್ದಾಗಿ ಹಾಸ್ಯದಿಂದಲೇ ತಮ್ಮ ಕಥೆಯನ್ನು ಹೇಳುತ್ತಾ ಹೋದರು. ಅವರ ತಂದೆ, ತಾಯಿ ಹಾಗೂ ಸಂಬಂಧಿಕರನ್ನು ಉದ್ಧರಿಸುತ್ತಾ ಮಾತನಾಡಿದರು ದಿನೇಶಣ್ಣ.
ಅವರು ಶಾಲೆ ಬಿಟ್ಟು ಬಂದು, ಬುಟ್ಟಿಗಳನ್ನು ಹಿಡಿದುಕೊಂಡು, ಸಂಜೆಯ ವೇಳೆಯಲ್ಲಿ ಕಡಲ ಬದಿಯಲ್ಲಿ ಸಿಗುತ್ತಿದ್ದ ಮೀನು ಹಿಡಿಯುತ್ತಿದ್ದ ಘಟನೆಗಳನ್ನು ನೆನಪಿಸಿಕೊಂಡರು. ಬದಲಾಗುತ್ತಿರುವ ಮೀನುಗಳ ಲಭ್ಯತೆಯನ್ನು ಸೂಕ್ಷ್ಮವಾಗಿ ಬಿಂಬಿಸುವಂತಿತ್ತು ಅವರ ಮಾತುಗಳು. ಇಂದು ಹಾಗೆ ಮೀನೇ ಸಿಗುವುದಿಲ್ಲ. ಯಾಕೆಂದರೆ, ಮೀನುಗಳ ಸಂಖ್ಯೆ ಅಷ್ಟು ತೀವ್ರವಾಗಿ ಕಡಿಮೆಯಾಗುತ್ತಿದೆ ಎಂದು ದಿನೇಶಣ್ಣ ಗಾಬರಿ ವ್ಯಕ್ತಪಡಿಸಿದರು.
ಒಂದಷ್ಟು ಕಾಲದ ಹಿಂದೆ, ಹೇಗೆ ಸೆಣಬಿನ ನಾರುಗಳನ್ನು ಬಲೆಯಾಗಿ ನೇಯುತ್ತಿದ್ದರು ಎನ್ನುವುದನ್ನು ದಿನೇಶಣ್ಣ ವಿವರವಾಗಿ ಹೇಳಿದರು. ಮೀನುಗಾರಿಕೆಯ ಪ್ರಕ್ರಿಯೆ, ಮೀನು ಹಿಡಿದು ದಡಕ್ಕೆ ಮರಳಿದ ಮೇಲೆ, ಬಲೆಗೆ ಆಗಿರಬಹುದಾದ ಹಾನಿಯನ್ನು ಸರಿಪಡಿಸುವ ವಿಧಾನ, ಅದರ ಕಾಳಜಿ ಮಾಡುವ ವಿಧಾನ ಇತ್ಯಾದಿ ಎಳೆಗಳನ್ನು ಬಿಡಿಸಿಟ್ಟರು.
ನಮ್ಮ ಕಾಲದಲ್ಲಿ, ಮೀನಿನ ಬಲೆ ರಿಪೇರಿ ಮಾಡಲು ಬರದಿರುವವನು ಒಬ್ಬ ಮೀನುಗಾರನೇ ಅಲ್ಲ. ಆದರೆ, ಇಂದು ಮಾರುಕಟ್ಟೆಗೆ ಹೋಗಿ ಕೆ.ಜಿಗೆ ಇಷ್ಟು ಎಂದು ಬಲೆಯನ್ನು ತರುತ್ತಾರೆ. ಹರಿದ, ಹಾಳಾದ ಬಲೆಯನ್ನು ಸಮುದ್ರಕ್ಕೆ ಬಿಸಾಡಿ, ಮತ್ತೆ ಹೊಸತು ತರುತ್ತಾರೆ, ಹೀಗೆ ಬದಲಾಗುತ್ತಿರುವ ಅವರ ಮಾತುಗಳಲ್ಲಿ ಬದಲಾಗುತ್ತಿದ್ದ ಜೀವನಕ್ರಮ, ಮೀನುಗಾರಿಕೆಯ ವಿಧಾನಗಳು ತೆರೆಯುತ್ತಾ ಸಾಗಿದವು. ಇದರಿಂದ ನನ್ನ ಚಿತ್ರಕಥೆಗೆ ಸಾಕಷ್ಟು ಹೂರಣ ಸಿಕ್ಕಿತು.
ಪರಿಸರದ ಕುರಿತು ನಮ್ಮ ಸಮಾಜ ತಾಳುತ್ತಿರುವ ನಿಲುವುಗಳ ಬಗ್ಗೆ ಬೇಸರವೂ ಹುಟ್ಟಿತು. ದಿನೇಶರು, ತಮ್ಮ ಬಾಲ್ಯದ ವಿಷಯಗಳನ್ನೂ ಸಾಕಷ್ಟು ಹಂಚಿಕೊಂಡರು. ದಕ್ಷಿಣ ಕನ್ನಡದ ಮೀನುಗಾರರ ಒಂದು ಇತಿಹಾಸವನ್ನೆ ಅವರು ಮಾತನಾಡಿದಂತಿತ್ತು. ಆ ಸಾಂಪ್ರದಾಯಿಕ ಮೀನುಗಾರಿಕೆ ಅವರಿಗೆ ಸಾಕಷ್ಟು ನೀಡಿತ್ತು. ಹೀಗಾಗಿ, ಇಂದಿಗೂ, ಕಡಲತಡಿಯಲ್ಲಿ, ಅದರ ಭೋರ್ಗರೆತ ಕೇಳುವಷ್ಟೆ ದೂರದಲ್ಲಿ ಮನೆ ಮಾಡಿಕೊಂಡು, ದಿನೇಶರು ಜೀವಿಸುತ್ತಿದ್ದಾರೆ.
ಇದೆಲ್ಲಾ ನಡೆಯುತ್ತಿರಬೇಕಾದರೆ, ಮಳೆಗಾಲ ಜೋರಾಗಿಯೇ ನಡೆಯುತ್ತಿತ್ತು. ನಮ್ಮ ಸಮಯಕ್ಕಾಗುವಾಗ ಮಳೆ ಕಡಿಮೆಯಾಗಿ ಅನುಕೂಲವಾಗುತ್ತದೆ ಎನ್ನುವ ಭಾವ ಮನಸಿಗೆ ನೆಮ್ಮದಿ ನೀಡಿತ್ತು. ‘ಪಡ್ಡಾಯಿ’ ಚಿತ್ರದ ಒಂದು ಹಂತದಲ್ಲಿ, ಮಾಧವ ಹಾಗೂ ಸುಗಂಧಿ ತಮ್ಮ ಪಶ್ಚಾತ್ತಾಪದ ಉತ್ತುಂಗದಲ್ಲಿರಲು, ಅವರ ಮೂಲ ಮನೆಯನ್ನು ಸಮುದ್ರ ಕಬಳಿಸಿದ್ದನ್ನು ತೋರಿಸಬೇಕಿತ್ತು. ಇದಕ್ಕಾಗಿ ಸಮುದ್ರ ಕೊರೆತದಿಂದ ಕುಸಿದ ಮನೆಯನ್ನು ಹುಡುಕುತ್ತಿರುವಾಗ ಉಳ್ಳಾಲದ ಬಳಿ ನಮಗೆ ಒಂದಷ್ಟು ಕುಸಿದ ಮನೆಗಳಿವೆ ಎಂದು ತಿಳಿಯಿತು. ಇದನ್ನು ನೋಡಲು ನಾನು ಹಾಗೂ ನನ್ನ ತಂದೆ ಒಂದು ಬೆಳಗ್ಗೆ ಆಕಡೆ ಪ್ರಯಾಣ ಮಾಡಿದೆವು.

ಕಡಲ್ಕೊರೆತದಿಂದ ಕುಸಿದ ಮನೆಗಳು


ಸಣ್ಣ ಊರುಗಳ ಗೊಂದಲದ ರಸ್ತೆಗಳನ್ನು ದಾಟುತ್ತಾ, ಸ್ಥಳವನ್ನು ತಲುಪಿದಾಗ ಎದುರಾದ ದೃಶ್ಯ, ಮನಕಲುಕುವಂತಿತ್ತು. ಕಲ್ಲು, ಇಟ್ಟಿಗೆ, ಸಿಮೆಂಟುಗಳ ಭದ್ರ ಬೆಸುಗೆಯಲ್ಲಿ, ಶಾಶ್ವತ ಎನ್ನುವಂತೆ ಕಟ್ಟಿದ್ದ ಮನೆಗಳು, ಮುರಿದು ಬಿದ್ದಿದ್ದವು. ಹಸಿದ ಸಮುದ್ರ ತನ್ನ ಅಲೆಯ ಕೈಗಳನ್ನು ಚಾಚಿ ಕ್ಷಣ ಕ್ಷಣಕ್ಕೂ ಇನ್ನಷ್ಟು, ಮತ್ತಷ್ಟು ಎಂದು ಬಾಚಿಕೊಳ್ಳಲು ಹವಣಿಸುತ್ತಿತ್ತು.
ಕಳೆದ ವಾರ ಇದ್ದ ರಸ್ತೆ ಇಂದು ಇರಲಿಲ್ಲ. ನಿನ್ನೆ ಇದ್ದ ಮೋಟು ಗೋಡೆ ಇವತ್ತು ಇಲ್ಲ. ಇದ್ದದ್ದೇನು? ಇದ್ದವರ್ಯಾರು ಗೊತ್ತೆ ಇಲ್ಲ ಎನ್ನುವ ಪರಿಸ್ಥಿತಿ. ದಡದಲ್ಲಿ ಮಾತ್ರ ಕುತೂಹಲಕರವಾಗಿ ಲಕ್ಷಗಟ್ಟಲೆ ಚಪ್ಪಲಿ ಜೊತೆಗಳು ಬಿದ್ದಿದ್ದವು. ಸಮುದ್ರ ಎಲ್ಲೆಲ್ಲೊ ಕಸಿದುಕೊಂಡು ಹೋಗಿದ್ದ ಚಪ್ಪಲುಗಳು, ಶೂಗಳು, ವಿವಿಧ ಶೈಲಿಯ, ವಿವಿಧ ಗಾತ್ರದವುಗಳನ್ನು ಎಲ್ಲಾ ತಂದು ಇಲ್ಲೆ ಇಟ್ಟುಹೋಗಿತ್ತು.
ಸಮುದ್ರಕ್ಕೆ ನಾವು ತುಂಬಿಸುವ ಕಲ್ಮಶದ ಒಂದು ಸಣ್ಣ ಟ್ರೈಲರ್ ಇದು ಎನ್ನುವಂತಿತ್ತು ಅಲ್ಲಿ ತುಂಬಿದ್ದ ಪಾದರಕ್ಷೆಗಳ ಮೊತ್ತ. ಅಲ್ಲಿ ಇನ್ನೇನು ಬೀಳಲಿದ್ದ ಮನೆಯೊಂದರಲ್ಲಿ, ಮಾಲಿಕ ಹಂಚು ಕೊಳ್ಳುವ ವ್ಯಾಪಾರಿಯೊಡನೆ ವ್ಯಾಪಾರ ಕುದುರಿಸುತ್ತಿರುವುದು, ಒಂದು ಆಡು ಬಿದ್ದೇ ಹೋಗಿದ್ದ ಮನೆಯ, ಉಳಿದಿದ್ದ ಒಂದೇ ಗೋಡೆಯ ಎದುರಿಗೆ ಕುಳಿತು, ಮನೆಯವರು ಬರಲು ಕಾಯುತ್ತಾ ಕುಳಿತಿರುವುದು ಜೀವನದ ಮೇಲೆ ನಮಗಿರುವ ನಂಬಿಕೆ, ಪ್ರೀತಿಯ ಪ್ರತೀಕವಾಗಿ ಕಾಣುತ್ತಿತ್ತು.
ಮತ್ತೆ ಮ್ಯಾಕ್ಬೆತ್ ನೆನಪಿಗೆ ಬಂತು. ಎಷ್ಟೊಂದು ಆಸೆಗಳು, ಹಂಬಲಗಳ ಮೂಲಕ ಮನುಷ್ಯ, ಕಟ್ಟಡಗಳು, ಸಂಬಂಧಗಳು ಹೀಗೆ ಏನೆಲ್ಲಾ ಕಟ್ಟುತ್ತಾನೆ, ಅದನ್ನು ಶಾಶ್ವತ ಎಂದುಕೊಳ್ಳುತ್ತಾನೆ. ಆದರೆ ಕಾಲದ ಹೊಡೆತಕ್ಕೆ ಎಲ್ಲವೂ ನಶಿಸುತ್ತಾ ಹೋಗುತ್ತವೆ. ಹೀಗಿದ್ದ ಮೇಲೆ ದುರಾಸೆಗೆ ಅರ್ಥವೇನು? ಅಗತ್ಯವೇನು? ಮ್ಯಾಕ್ಬೆತ್ ದುರಾಸೆಯ, ಕೊಲೆಯ, ಪಶ್ಚಾತ್ತಾಪದ ಕಥನವಾದರೂ, ಅದರಾಳದಲ್ಲಿ ಎಷ್ಟೊಂದು ಅರ್ಥಗಳೂ, ಸಾಧ್ಯತೆಗಳೂ ಇವೆ ಎನ್ನುವುದನ್ನು ಯೋಚಿಸುತ್ತಾ ಅಚ್ಚರಿಯಾಗುತ್ತದೆ.

| ಇನ್ನು ಉಳಿದದ್ದು ನಾಳೆಗೆ ।
ಅಮೆಜಾನ್ ಪ್ರೈಮ್ ನಲ್ಲಿ ಪಡ್ಡಾಯಿ ಸಿನಿಮಾ ಇದೆ.
Link to audience in UK:
Link to audience in USA:
Link to audience in India:

‍ಲೇಖಕರು avadhi

October 8, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: