ಶೀಲಾ ಪೈ ಕಂಡಂತೆ ಅಮೇರಿಕಾ..

ಶೀಲಾ ಪೈ

ಅಕಸ್ಮಿಕವಾಗಿ, ಒಂದು ವಿಶಿಷ್ಟ ಸಂದರ್ಭದಲ್ಲಿ ನನಗೆ ಅಮೆರಿಕಕ್ಕೆ ಹೋಗುವ ಅವಕಾಶ ಲಭಿಸಿತ್ತು.  ನನ್ನ ಸಂಗಾತಿ  ಶಾಂತಾರಾಮರು ಬೆಂಗಳೂರಿನ ಐ . ಐ . ಎಮ್ ನಲ್ಲಿ ಒಂದು ವರ್ಷದ ಕೋರ್ಸ್ ಗೆ ಆಯ್ಕೆಯಾಗಿದ್ದರು . ಕೋರ್ಸ್ ನ ಅಂಗವಾಗಿ ಇಂಟರ್ ನ್ಯಾಷನಲ್ ಇಮ್ಮರ್ಶನ್ ಎಂದು ಎರಡು ವಾರಗಳ ಮಟ್ಟಿಗೆ ವಿದ್ಯಾರ್ಥಿಗಳನ್ನು ಅಮೆರಿಕದ ಸೆರಕ್ಯೂಸ್ ಯೂನಿವರ್ಸಿಟಿಗೆ ಕಳುಹಿಸಿಕೊಡಲಾಗುತ್ತಿತ್ತು . ಅಲ್ಲಿ ಉಳಕೊಳ್ಳುವ,  ಊರು ತೋರಿಸುವ ವ್ಯವಸ್ಥೆಯನ್ನು  ಯೂನಿವರ್ಸಿಟಿಯೇ  ಮಾಡುತ್ತಿತ್ತು . ನನ್ನ ಖರ್ಚನ್ನು ನಾವೇ ಭರಿಸಿಕೊಂಡಲ್ಲಿ ನಾನೂ ಜೊತೆಗೆ ಹೋಗುವುದಕ್ಕೆ ಅಡ್ಡಿಯಿಲ್ಲ ಎಂದು ತಿಳಿದು ಬಂದಾಗ ಶಾಂತಾರಾಮರು ನನ್ನ ಹೆಸರನ್ನೂ ಇನ್ಸ್ಟಿಟ್ಯೂಟ್ ನಿಂದ ಹೊರಡುವ ವಿದ್ಯಾರ್ಥಿಗಳ ಪಟ್ಟಿಯಲ್ಲಿ  ಸೇರಿಸಿದರು . ಈ ಕೋರ್ಸ್ ಗೆ ಸೇರಿದಾಗ ಶಾಂತಾರಾಮರ ವಯಸ್ಸು ೫೪, ನನ್ನದು ೫೦.  ಎಲ್ಲ ವಿದ್ಯಾರ್ಥಿಗಳಿಗಿಂತ ವಯಸ್ಸಿನಲ್ಲಿ ಹಿರಿಯರು . ಒಟ್ಟು ಇಪ್ಪತ್ತೆಂಟು ಮಂದಿ ವಿದ್ಯಾರ್ಥಿಗಳೂ , ನನ್ನ  ಹಾಗೆ ಜೊತೆಯಲ್ಲಿ ಹೊರಟ ಕುಟುಂಬದವರೂ ಸೇರಿ ನಲವತ್ತು ಜನರಿದ್ದೆವು.  . ೨೦೧೯ ರ ಆಗಸ್ಟ್ ೩ರಂದು  ನಮ್ಮ ಪ್ರಯಾಣದ ದಿನ ನಿಗದಿಯಾಗಿತ್ತು .

ನಮ್ಮೆಲ್ಲರ ವೀಸಾದ  ಹೊಣೆಯನ್ನು ಐಐಎಂ ಹೊತ್ತುಕೊಂಡದ್ದರಿಂದ ನಾವು ಚೆನ್ನೈಗೆ ವೀಸಾಗೆಂದು ಹೋಗುವ ಅಗತ್ಯವಿರಲಿಲ್ಲ . ಆದರೆ ಹೊರಡುವ ದಿನದ  ಎರಡು ದಿನ ಮೊದಲು ಮಾತ್ರ ವೀಸಾ ಬಂದುದರಿಂದ ಹೋಗುವುದಿದೆಯೋ ಇಲ್ಲವೋ ಎಂಬ  ಅನುಮಾನ ಕಾಡುತ್ತಲೇ ಇತ್ತು . ನಾವು ಯಾವ ತಯಾರಿಯನ್ನೂ ಮಾಡಿಕೊಂಡಿರಲಿಲ್ಲ . ಹೇಗೂ ಇರಲಿ ಎಂದು ದೊಡ್ಡ ಟ್ರಾಲಿ ಎರಡನ್ನು ಕೊಂಡು ಬಟ್ಟೆ ಒಂದಿಷ್ಟು ಪ್ಯಾಕ್ ಮಾಡಿಕೊಂಡಿದ್ದೆವು . ವೀಸಾ ಬಂದದ್ದು ಗೊತ್ತಾದೊಡನೆ ಉಳಿದ ಕೆಲವು ತಯಾರಿ ಮಾಡಿಕೊಂಡೆವು . ಒಂದು ವಾರ ಹೆಚ್ಚು ನಿಂತು ನಮ್ಮಷ್ಟಕ್ಕೆ ತಿರುಗಾಡುವ ಯೋಚನೆ ಮಾಡುವಾಗ ನಮ್ಮೊಂದಿಗೆ ಇನ್ನೂ ಆರು ಮಂದಿ ಸೇರಿಕೊಂಡರು . ಎರಡು ವಾರದ ಯೂನಿವರ್ಸಿಟಿಯ ಕಾರ್ಯಕ್ರಮಗಳು ಮುಗಿದ ಮೇಲೆ ನಾವು ಎಂಟು ಜನ ಇನ್ನೂ ಒಂದು ವಾರ ತಿರುಗಾಡುವುದೆಂದು ನಿಶ್ಚಯಿಸಿ ಎಲ್ಲೆಲ್ಲಿ ಹೋಗುವುದು , ನಿಲ್ಲುವುದು ಎಂದೆಲ್ಲ ರೂಪುರೇಷೆಗಳನ್ನು ಹಾಕಿಕೊಳ್ಳಲು ಶುರುಮಾಡಿದೆವು . ನಾನೊಂದು ಚಿಕ್ಕ ಎಲೆಕ್ಟ್ರಿಕ್  ರೈಸ್ ಕುಕ್ಕರ್ ತೆಗೆದುಕೊಂಡೆ. ಅಮೇರಿಕದಲ್ಲಿ ಆಹಾರದ  ಸಮಸ್ಯೆ ಬಂದರೆ ಒಂದು ಮುಷ್ಠಿ ಅನ್ನ ಮಾಡಿಕೊಂಡು ತಿಂದರಾಯಿತು ಎಂದುಕೊಂಡು . ನಿಜಕ್ಕೂ ಇದರ ಅಗತ್ಯವೇ ಇರಲಿಲ್ಲ . ಎಲ್ಲ ಕಡೆಯೂ ಬೇಕಾದ ಹಾಗೆ ಇಂಡಿಯನ್ ಹೋಟೆಲುಗಳಿದ್ದವು .

ಬೆಂಗಳೂರಿನಿಂದ ದೆಹಲಿಯ ಮೂಲಕ ನ್ಯೂಯೊರ್ಕ್ ಗೆ

೨೦೧೯ ರ ಆಗಸ್ಟ್ ಮೂರನೇ ತಾರೀಕು  ಶನಿವಾರದಂದು ಸಂಜೆ ನಾಲ್ಕು ಗಂಟೆಗೆ ಬೆಂಗಳೂರು ಏರ್ ಪೋರ್ಟ್   ಸೇರಿದೆವು . ನಾನು ಮೊದಲ ಬಾರಿ ಶಾಂತಾರಾಮರ ಸಹಪಾಠಿಗಳನ್ನು ನೋಡಿದ್ದು , ಹೆಚ್ಚಿನವರು ನಮ್ಮ ಮಕ್ಕಳ ವಯಸ್ಸಿನವರು! ! ಮನೀಶ್  ದಂಪತಿಗಳು ಹೆಚ್ಚು ಕಡಿಮೆ  ನಮ್ಮ ವಯಸ್ಸಿನವರು . ದೆಹಲಿ ತಲುಪಿ ಒಂದು ಗಂಟೆಯಲ್ಲೇ ನ್ಯೂಯೊರ್ಕ್ ಫ್ಲೈಟ್ ಇತ್ತು,  ಹತ್ತಿ ಕೂತೆವು . ಇಲ್ಲಿಂದ ಹತ್ತೊಂಭತ್ತು ಗಂಟೆಗಳ ಪ್ರಯಾಣ . ನಾನಿರುವ ಕಾಲನಿಯಲ್ಲಿ ಹೆಚ್ಚಿನವರು ತೆಲುಗಿನವರು, ಅದಾಗಲೇ ಮಕ್ಕಳ ಹಿಂದೆ ಅಮೆರಿಕಕ್ಕೆ ಹೋಗಿ ಬಂದವರು ಲಾಂಗ್ ಫ್ಲೈಟ್ ಬಹಳ ಕಷ್ಟ ಎಂದೆಲ್ಲ ಹೇಳಿದ್ದನ್ನು  ಕೇಳಿದ್ದೆ . ಇದು ನನ್ನ ಮೊದಲ ವಿದೇಶ ಪ್ರಯಾಣ. ನನಗೆ ಹಾಗೇನೂ ಅನಿಸಲಿಲ್ಲ,  ಸಮಯ ಕಳೆದದ್ದೇ ಗೊತ್ತಾಗಲಿಲ್ಲ .  ಮರುದಿನ , ಅಲ್ಲಿನ ಭಾನುವಾರ ಬೆಳಿಗ್ಗೆ ನ್ಯೂಯೊರ್ಕ್ ನ ಜೆ.ಎಫ್.  ಕೆನೆಡಿ ಏರ್ಪೋರ್ಟ್ ತಲುಪಿದೆವು . ವಿಮಾನ ನಿಲ್ದಾಣದಲ್ಲಿ ಲಗೇಜು ತೆಗೆದುಕೊಳ್ಳಲು ಕಾದು ನಿಂತಿದ್ದೆವು. ನಮ್ಮ ಜೊತೆ ಬಂದ ಒಬ್ಬರು, ಚಿಕ್ಕ ವಯಸ್ಸಿನ ಯುವತಿ ತಮ್ಮ ಆರು ತಿಂಗಳ ಹಸುಗೂಸನ್ನು ಕಂಕುಳಲ್ಲಿ ಏರಿಸಿಕೊಂಡು ನಿಂತಿದ್ದರು.  ಅವರ ಪತಿ ಲಗೇಜು  ಬರುವುದನ್ನು ಕಾಯುತ್ತಾ ಸ್ವಲ್ಪ ದೂರ ನಿಂತಿದ್ದರು. ಹೊಸ ಪರಿಸರವನ್ನು ನೋಡಿಯೋ ಏನೋ ಮಗುವು ಕಣ್ಣು ಪಿಳುಕಿಸದೆ ಎಲ್ಲರನ್ನೂ ದಿಟ್ಟಿಸಿ ನೋಡುತ್ತಾ ಚುರುಕಾಗಿದ್ದಿತು.

” ವೈ ಆರ್ ಯು ಸ್ಟೇರಿಂಗ್ ಅಟ್ ಮಿ? ಐ‌ ವಿಲ್ ಸ್ಲಾಪ್  ಯುವರ್  ಫೇಸ್ ಅಂಡ್ ಗೌಜ್ ಯುವರ್ ಐಸ್ ಔಟ್ “

ಎಂದು ಯಾರೋ ಕೋಪಮಿಶ್ರಿತ ಏರು ಧ್ವನಿಯೊಂದಿಗೆ ಮಾತನಾಡಿದಾಗ ನಾನು ಎಲ್ಲೋ ನೋಡುತ್ತಿದ್ದವಳು ಆಶ್ಚರ್ಯಚಕಿತಳಾಗಿ ಹಿಂದೆ ತಿರುಗಿ ನೋಡಿದೆ.  ಆಫ್ರಿಕನ್-ಅಮೆರಿಕನ್ ಮಹಿಳೆಯೊಬ್ಬರು ಮಗುವಿನ ಮುಂದಿನಿಂದ ಹಾದುಹೋಗುವಾಗ ಗಟ್ಟಿಯಾಗಿ ಮಗುವಿಗೆ ಬೈದು ಹೋಗಿಬಿಟ್ಟಿದ್ದರು.  ಮಗುವಿನ ತಾಯಿ ಈ ಅನಿರೀಕ್ಷಿತ ಆಕ್ರಮಣದಿಂದ ಕಕ್ಕಾಬಿಕ್ಕಿಯಾಗಿ ಬಿಟ್ಟಿದ್ದರು.  ನಾವೆಲ್ಲರೂ ಸುತ್ತುಮುತ್ತು ಇದ್ದವರು ಏನಾಯಿತು ಎಂದು ವಿಚಾರಿಸಿದರೆ ಅವರು

“ಗೊತ್ತಿಲ್ಲ , ಆಕೆ ಗಟ್ಟಿ ಬೈದು ಹೋದರು” ಅಂದರು.  ಅಮೆರಿಕೆಯ ನೆಲದ ಮೇಲಿನ ಮೊದಲ ಅನುಭವ! ಆ ಮಹಿಳೆ ಯಾಕೆ ಆ ರೀತಿ ವರ್ತಿಸಿದರು ಎನ್ನುವುದು ನಮ್ಮ ಮಟ್ಟಿಗೆ ಯಕ್ಷಪ್ರಶ್ನೆಯಾಗಿಯೇ ಉಳಿಯಿತು. ವಿಮಾನ ನಿಲ್ದಾಣದಲ್ಲಿ ಇಳಿದ ಮೇಲೆ ನಾವ್ಯಾರೂ ಬಾಯಿ ಬಿಟ್ಟು ಮಾತೂ ಆಡಿರಲಿಲ್ಲ. ಇನ್ನು ಆ ಮಗುವಂತೂ ಆಕೆಗೆ ಏನು ಮಾಡಿರಲು ಸಾಧ್ಯ? .ಆ ತಾಯಿಗಾದರೂ ತನ್ನ ಅಮಾಯಕ, ಇನ್ನೂ ವರುಷವೂ ತುಂಬದ ಮುದ್ದಿನ ಮಗುವನ್ನು ಹೀಗೆ  ಯಾರೋ ಅಕಾರಣವಾಗಿ ಬಾಯಿಗೆ  ಬಂದಂತೆ ಬೈಯುವುದನ್ನು ಕಂಡು ಮನಸ್ಸಿಗೆ ಹೇಗಾಗಿರಬೇಡ.

ಯಾರನ್ನಾದರೂ ದಿಟ್ಟಿಸಿ ನೋಡುವುದು ಅಸಭ್ಯತೆ ಎನ್ನುವ ವಿಚಾರಸರಣಿ ಈ ಘಟನೆಯ ಹಿಂದಿರಬಹುದು. ಆದರೆ ಇದು ಆರು ತಿಂಗಳ ಮಗುವಿನ ಸಹಜ ನಡವಳಿಕೆಗೆ ಹೇಗೆ ಅನ್ವಯಿಸುತ್ತದೆ?

ಈ ಘಟನೆಯಲ್ಲಿ , ಯಾವುದೇ ರೀತಿಯ ಪ್ರಚೋದನೆಯಿಲ್ಲದೆ,  ಆ ಮಹಿಳೆಯು ಅನಗತ್ಯವಾಗಿ ಒಬ್ಬ ತಾಯಿಯ ಮನಸ್ಸಿಗೆ ನೋವನ್ನುಂಟು ಮಾಡಿಬಿಟ್ಟರು ಎಂದು ನನಗೆ ಬಹಳವಾಗಿ ಅನಿಸಿತು.

ಆಮೇಲಿನ ಮೂರು ವಾರಗಳಲ್ಲಿ ಇಂತಹ ಯಾವ ಕಹಿ  ಅನುಭವವೂ  ಆಗಲಿಲ್ಲ.

ಸೆರಕ್ಯುಸ್  ಯೂನಿವರ್ಸಿಟಿ

ಆಗಸ್ಟ್ ನಾಲ್ಕರಂದು ಬೆಳಿಗ್ಗೆ ನ್ಯೂಯೊರ್ಕ್ ತಲುಪಿದ ನಮ್ಮನ್ನು ಸೆರಕ್ಯುಸ್ ಗೆ ಕರೆದೊಯ್ಯಲು ಯೂನಿವರ್ಸಿಟಿಯಿಂದ ದೊಡ್ಡದೊಂದು ಬಸ್ ಬಂದಿತ್ತು . ಸೆರಕ್ಯುಸ್ ನ್ಯೂಯೊರ್ಕ್ ರಾಜ್ಯದಲ್ಲಿಯೇ ಇರುವ ಒಂದು ಊರು .   ಇಲ್ಲಿಂದ ಆರು ಗಂಟೆಗಳ ಪ್ರಯಾಣ , ನಾವಿಬ್ಬರೂ ಎದುರಿನ ಸೀಟಿನಲ್ಲಿಯೇ ಕುಳಿತುಕೊಂಡೆವು . ಮುಂದೆ ಇದೊಂದು ರೂಢಿಯೇ ಆಯಿತು.  ಮುಂದಿನ ಎರಡು ವಾರಗಳೂ ಎದುರಿನ ಎರಡು ಸೀಟುಗಳನ್ನು ಹುಡುಗರು ನಮಗಾಗಿಯೇ ಬಿಟ್ಟುಬಿಡುತ್ತಿದ್ದರು . ನಮಗೆ ಹೊರಗೆ ನೋಡುವ ಆಸಕ್ತಿ , ಸಿಕ್ಕಿದ ಅವಕಾಶವನ್ನು ಬಳಸಿಕೊಳ್ಳುವ ಹಪಹಪಿ , ಈ ಚಿಕ್ಕ ವಯಸ್ಸಿನ ಹುಡುಗರೋ ಹಿಂದಿನ ಸೀಟುಗಳಲ್ಲಿ ನಿದ್ದೆ ಮಾಡುವವರು , ಅವರ ಪ್ರಪಂಚವೇ ಬೇರೆ . ಉದ್ದಾನುದ್ದ ಚಾಚಿಕೊಂಡ ರಸ್ತೆಗಳು , ಮನುಷ್ಯ ಸಂಚಾರವೆನ್ನುವುದಿಲ್ಲ , ಎಲ್ಲಿಲ್ಲಿಯೂ ಸ್ವಚ್ಛ ವಾತಾವರಣ , ವಾರಾಂತ್ಯವಾದ್ದರಿಂದ ಬೆನ್ನಿಗೆ  ಬೋಟುಗಳನ್ನೋ, ಸೈಕಲುಗಳನ್ನೋ ಕಟ್ಟಿಕೊಂಡು ಹೋಗುತ್ತಿದ್ದ  ಕಾರುಗಳು, ಪ್ರತಿಯೊಂದೂ ಮನದಲ್ಲಿ ದಾಖಲಾಗುತ್ತಿದ್ದವು . ಸೆರಕ್ಯುಸ್ ತಲುಪುವಾಗ ಸಂಜೆ ನಾಲ್ಕು ಗಂಟೆಯಾಗಿತ್ತು . ಸೆರಕ್ಯುಸ್ ಯೂನಿವರ್ಸಿಟಿ ಇರುವುದು  “ಯೂನಿವರ್ಸಿಟಿ ಹಿಲ್”  ಅನ್ನುವ ಗುಡ್ಡದ ಮೇಲೆ . ಹಲವಾರು ಕಾಲೇಜುಗಳು ಈ ಯೂನಿವರ್ಸಿಟಿಯ   ಸಮುಚ್ಛಯದೊಳಗೆ ಬರುತ್ತವೆ . ಮೆಡಿಕಲ್ ಕಾಲೇಜು , ಲಾ ಕಾಲೇಜುಗಳಿವೆ . ಅಮೆರಿಕದ ಈಗಿನ ಪ್ರೆಸಿಡೆಂಟ್ ಜೋ ಬಿಡೆನ್ ಇಲ್ಲಿಯ ಲಾ ಕಾಲೇಜಿನಲ್ಲಿ ಓದಿದವರು . ಗುಡ್ಡದ ಮೇಲಿರುವುದರಿಂದ ರಸ್ತೆಗಳು ಏರು ತಗ್ಗಾಗಿದ್ದು ನಡೆಯಲು ಸ್ವಲ್ಪ ಕಷ್ಟವೇ ಆದರೆ ಒಮ್ಮೆ ಮೇಲೆ ಹತ್ತಿ ಹೋಗಿ  ನಿಂತು ನೋಡಿದರೆ ಇಡೀ ಊರಿನ ಒಂದು ಪಾರ್ಶ್ವ ನೋಟ ಕಾಣಸಿಗುತ್ತದೆ.

ಹಸಿರು ಕಂಬಳಿ ಹೊದ್ದಂತೆ ಕಾಣುವ ಊರು , ಮಧ್ಯೆ  ಹಾಯುವ ರಸ್ತೆ,  ನೇಲುತ್ತಿರುವ ಟ್ರಾಫಿಕ್ ಲೈಟುಗಳು ,ಇಲ್ಲಿ ಮೊದಲು ವಲಸೆ ಬಂದ  ಬಂದ ಐರಿಶ್ ಜನರು ಬ್ರಿಟಿಷರ ವಿರುದ್ಧ ಬಂಡಾಯವೇಳುವುದಕ್ಕಾಗಿ ಮೇಲೆ ಹಸಿರು ಬಣ್ಣವಿರುವ ಐರಿಶ್ ಮಾದರಿಯ ಟ್ರಾಫಿಕ್ ಲೈಟುಗಳೇ   ಬೇಕೆಂದು ಗಲಾಟೆ ಮಾಡಿದ್ದರಂತೆ , ಹೀಗಾಗಿ ಇಲ್ಲಿಐರಿಶ್ ಜನರು ಜಾಸ್ತಿ ಇರುವ  ಟಿಪ್ಪರಿ ಹಿಲ್ ಎನ್ನುವ ಕಡೆ ಈಗಲೂ ಟ್ರಾಫಿಕ್ ಲೈಟ್ ಗಳಲ್ಲಿ ಹಸಿರು ಬಣ್ಣ  ಮೇಲೆ ! ಯೂನಿವರ್ಸಿಟಿಯ ಕಂದು ಬಣ್ಣದ ದೊಡ್ಡದೊಡ್ಡ  ಕಟ್ಟಡಗಳು  ನೋಡಲು ಬಲು ಚಂದ . ನಾವು ಐದು ದಿನ ಇಲ್ಲಿದ್ದೆವು.  ನಿತ್ಯವೂ ಬೆಳಿಗ್ಗೆ ಐದೂವರೆಗೆ ಎದ್ದು ವಾಕಿಂಗ್ ಹೋಗುತ್ತಿದೆವು .ಇಲ್ಲಿನ ಟ್ರಕ್ಕುಗಳು ನಿಜಕ್ಕೂ ದೈತ್ಯಾಕಾರದವು . ಮೊದಲ ದಿನ ರಸ್ತೆ ದಾಟುವಾಗ ಇಂತದ್ದೇ ಒಂದು ದೊಡ್ಡ ಟ್ರಕ್ ಬಂದದ್ದು ನೋಡಿ ನಾನು ನಿಂತೆ , ಅದೂ ನಿಲ್ಲಬೇಕೆ ! ನಾನು ದಾಟಲೆಂದೇ ಟ್ರಕ್ಕಿನವನು ಕಾಯುತ್ತಿದ್ದನೆಂದು ಅರಿವಾಗಲು ನಂಗೆ ಕೆಲವು ಕ್ಷಣಗಳೇ ಹಿಡಿದವು . ಪಾದಚಾರಿಗಳೆಂದರೆ ನಿಕೃಷ್ಟ ಜೀವಿಗಳೆಂದು ಬಗೆಯುವ ನಮ್ಮ ಬೆಂಗಳೂರಿನ ವಾಹನ ಚಾಲಕರ ನೆನಪಾಯಿತು !. ಆಮೇಲೆ ಗಮನಿಸಿದೆ ರಸ್ತೆ ದಾಟಬೇಕಾದರೆ ಇಲ್ಲಿನ ಕಂಬಗಳ ಮೇಲೆ ಗುಂಡಿ ಒತ್ತಿದರೆ ಅದು “ವೇಯ್ಟ್” ಅನ್ನುತ್ತದೆ . ಸ್ವಲ್ಪ ಕಾದರೆ ವಾಹನಗಳಿಗೆ ನಿಲ್ಲಲು ಸಿಗ್ನಲ್ ಬರುತ್ತದೆ  , ನಾವು ನಿರಾಳವಾಗಿ ರಸ್ತೆ ದಾಟಬಹುದು .  

ಒಂದು ದಿನ ಬಹಳಷ್ಟು ನಡೆದ ಮೇಲೆ ನಾಲ್ಕು ಜನರು ಜಾಗಿಂಗ್ ಮಾಡಿ ಬರುವುದು ಕಾಣಿಸಿತು . ನೋಡಿದರೆ ನಮ್ಮ ಜೊತೆಯವರೇ , ಅವರು ಹೋದ ದಿಕ್ಕಿಗೇ  ನಾವೂ ಹೋಗಿ ನೋಡೋಣ ಎಂದು ನಡೆದೆವು , ಊರಿನ ದೊಡ್ಡ ಸ್ವಿಮ್ಮಿಂಗ್ ಪೂಲ್ ಸಿಕ್ಕಿತು , ಸರಿ ಇನ್ನು ವಾಪಸು ಹೋಗೋಣ ಅಂದುಕೊಂಡರೆ ದಾರಿ ತಪ್ಪಿದೆ ಎಂದು ಗೊತ್ತಾಯಿತು , ಕೇಳಲು ಅಷ್ಟು ಬೆಳಿಗ್ಗೆ ಯಾರು ಸಿಗುತ್ತಾರೆ ? ಜಾಗಿಂಗ್ ಮಾಡುತ್ತಿದ್ದವರು ಯಾವಾಗಲೋ ಮುಂದೆ ಹೋಗಿಯಾಗಿತ್ತು .  ಮೊಬೈಲ್ ಕೈಯಲ್ಲಿದ್ದರೂ ನಮಗಿನ್ನೂ ಜಿಪಿಎಸ್ ಬಳಸಿ ಅಭ್ಯಾಸವಿರಲಿಲ್ಲ . ನಡೆದೂ ನಡೆದೂ ಸುಸ್ತಾಗಿದ್ದಾಗ ಪುಣ್ಯಕ್ಕೆ ನಾಲ್ಕು ಮಂದಿ ಅಮೇರಿಕನ್ ಎಳೆಯರು ಮಾತನಾಡುತ್ತ ರಸ್ತೆ ಬದಿ ನಿಂತಿದ್ದರು . ಆ  ಕ್ಷಣಕ್ಕೆ ನಮ್ಮ ಹೋಟೆಲಿದ್ದ ರಸ್ತೆಯ ಹೆಸರೂ ಮರೆತುಬಿಡಬೇಕೆ?!  ಹೋಟೆಲಿನ ಎದುರು ಸ್ಟಾರ್ ಬಕ್ಸ್ ಇದ್ದದ್ದು ನೆನಪಾಯಿತು .ಹೇಳಿದ  ಕೂಡಲೇ ಮಾರ್ಷಲ್ ಸ್ಟ್ರೀಟ್ ? ಎಂದು ಕೇಳಿದರು . ದಾರಿ ತೋರಿದರು . ಮತ್ತೆ ಅರ್ಧ ಗಂಟೆ ನಡೆದು ಹೋಟೆಲ್ ಬಳಿ ಬಂದದ್ದು ಪೂರ್ತಿ ವಿರುದ್ಧ ದಿಕ್ಕಿನಿಂದ !!

ಸೆರಕ್ಯುಸ್ ನ ಡೆಸ್ಟಿನಿ ಮಾಲ್ ನ್ಯೂಯೊರ್ಕ ನ ಅತಿ ದೊಡ್ಡ ಮಾಲ್ ಎಂದು ನೋಡಲು ಹೋದೆವು . ಇದು ಎಷ್ಟು ದೊಡ್ಡದಾಗಿದೆಯೆಂದರೆ ಪೂರ್ತಿ ನೋಡುವುದು ಅಸಾಧ್ಯ .ನಮಗೆ ಆ ದಿನ ಮಾತ್ರ ಇದ್ದ ಸ್ವಲ್ಪ ಸಮಯವನ್ನೂ ವ್ಯರ್ಥ ಮಾಡಿದೆವು ಎಂದು ಬೇಸರವೇ ಆಯಿತು .  ಈಗ ನಮ್ಮಲ್ಲಿಯೂ ಬೇಕಾದಂತೆ ಮಾಲ್ ಗಳಿರುವುದರಿಂದ ಇನ್ನು ಮುಂದೆ ಆದಷ್ಟೂ ಮಾಲ್ ಗಳನ್ನು ಅವಾಯ್ಡ್ ಮಾಡಿ ಸ್ಥಳೀಯ ಜಾಗಗಳನ್ನು ನೋಡಬೇಕೆಂದು ನಿಶ್ಚಯಿಸಿದೆವು . ಸೆರಕ್ಯುಸ್  “ಒನೊನ್ ಡಾಗ  ಕೌಂಟಿ”  ಯೊಳಗೆ ಬರುತ್ತದೆ .ಇಲ್ಲಿನ ಒನೊನ್ ಡಾಗ ಲೇಕ್ ಬಹಳ ಚಂದ , ಒಂದು ಬದಿ ದೊಡ್ಡ ಮನೆಗಳು , ಇನ್ನೊಂದು ಬದಿ ವಿಶಾಲವಾಗಿ  ಹರಡಿಕೊಂಡ ಲೇಕು, ಸುತ್ತು ಮರಗಳು . ಇಲ್ಲಿಂದ ವಾಪಸು ಬರುವಾಗ ಬಸ್ ಇದೆಯೇ ಎಂದು ಜಾಗಿಂಗ್ ಮಾಡುತ್ತ ಎದುರು ಬಂದ  ಯುವಕನನ್ನು ಕೇಳಿದೆವು . ಗೊತ್ತಿಲ್ಲವೆಂದು ಹೇಳಿ ಅವನು ಮುಂದೆ ಹೋದ , ನಾವು ಉಬರ್ ಬುಕ್ ಮಾಡಲು ಟ್ರೈ ಮಾಡುತ್ತ ಮುಂದೆ ಹೋಗುತ್ತಿದ್ದೆವು , ಹಿಂದಿನಿಂದ ಅದೇ ಹುಡುಗ ಕರೆಯುತ್ತ ಓಡಿ ಬಂದ  , ಮೊದಲೆಲ್ಲೋ ಇಲ್ಲಿ ಬಸ್ ನೋಡಿದ ನೆನಪಿದೆ ಎಂದು ಹೇಳಿ ಹೋದ , ಪಾಪ ನಮ್ಮ ಪ್ರಶ್ನೆಗೆ ಉತ್ತರಿಸಲು ಎಷ್ಟು ದೂರ ಹೋಗಿದ್ದವನು  ಮತ್ತೆ ಹಿಂತಿರುಗಿ ಬಂದನೋ !.  ಅವತ್ತು ಸಂಜೆ ಉಬರ್ ನಲ್ಲಿ ಕೂತು ವಾಪಸು ಬರುವಾಗ ಹಿಂದಿನ ಸೀಟಲ್ಲಿ ಕುಳಿತವರೊಂದಿಗೆ ಏನನ್ನೋ ಹೇಳಲು ಹಿಂದೆ ತಿರುಗಿದೆ , ಮಾತು ಮರೆತು ಹೋಯಿತು .

ಕಾರಿನ ಗಾಜಿನ ಹೊರಗೆಯೇ ಇದೆಯೇನೋ ಅನ್ನಿಸುವಂತೆ ಕೆಂಪು ಬಣ್ಣದ ದೊಡ್ಡ ಸೂರ್ಯ !! ನನ್ನ ಮುಖ ನೋಡಿ ಉಳಿದವರೂ ಹಿಂದೆ ತಿರುಗಿ ನೋಡಿದರು , ಮಾತು ನಿಂತಿತು . ದಿನದ ಹೊತ್ತು ವಿದ್ಯಾರ್ಥಿಗಳಿಗೆ ತರಗತಿಗಳಿರುತ್ತಿದ್ದವು.  ಇನ್ನೊಂದು ಸಂಜೆ ಕ್ಯಾಬ್ ಮಾಡಿಕೊಂಡು ಡೌನ್ ಟೌನ್ ನೋಡಲು ಹೋದೆವು. ಇಲ್ಲಿ , ಕ್ಲಿಂಟನ್ ಸ್ಕ್ವೇರ್ ,  ಆರ್ಮರೀ ಸ್ಕ್ವೇರ್ ,  ಸೆಲೆನಾ ರೋಡ್ ಎಂದೆಲ್ಲ ನಡೆದು ನೋಡಿ ಫೋಟೋ ತೆಗೆದುಕೊಂಡೆವು.  ರಸ್ತೆ ಪೂರ್ತಿ ನಿರ್ಜನ , ಸಣ್ಣಗೆ ಮಳೆ ಹನಿಯುತ್ತಿತ್ತು . ರೆಸ್ಟ್ ರೂಮ್ ಹುಡುಕಿಕೊಂಡು ಪಬ್ ಒಂದರ ಒಳಗೆ ಹೋದೆವು . ಎಳೆ  ವಯಸ್ಸಿನ ಹುಡುಗರು ಕಿಕ್ಕಿರಿದು ನೆರೆದಿದ್ದರು. ಫೋಟೋ ತೆಗೆಯುವ ಆಸೆಯಾದರೂ ಮತ್ತೆ ಹೇಗೋ ಏನೋ ಎಂದು ಸುಮ್ಮನೆ ಹೋದ ಕೆಲಸ ಮುಗಿಸಿ ಹೊರ ಬಂದೆವು . ಇಲ್ಲಿ ಕೆಲವು ರಸ್ತೆಗಳಂತೂ ನಿರ್ಮಾನುಷ್ಯ ವಾಗಿ ಒಂಥರಾ ಭಯ ಹುಟ್ಟಿಸುವಂತ್ತಿತ್ತು . ನಾವು ಹೆಚ್ಚು ನೋಡುವ ಗೋಜಿಗೆ ಹೋಗದೇ ಮರಳಿ ಬಂದೆವು. ಇಲ್ಲಿ ಜನರನ್ನು ನೋಡಿದ್ದು ಮಾಲ್ ನಲ್ಲಿ , ಪಬ್ಬಿನಲ್ಲಿ , ಮಧ್ಯಾಹ್ನ ಊಟದ ಸಮಯದಲ್ಲಿ ಯೂನಿವರ್ಸಿಟಿಯ ಬಳಿಯ ಹೊಟೇಲುಗಳಲ್ಲಿ. ನಾನು ಹೋಗುತ್ತಿದ್ದ ಇಂಡಿಯನ್ ಹೋಟೆಲಿನಲ್ಲಿ ಬರಿಯ ಭಾರತೀಯರಷ್ಟೇ ಅಲ್ಲ ಬೇರೆ ದೇಶದವರೂ ಬರುತ್ತಿದ್ದರು . ಒಂದು  ಊಟಕ್ಕೆ(ಬಫೆ ) ಹದಿನೈದು ಡಾಲರ್ ಎಂದು ನೆನಪು .   

ಒಂದು ಮಧ್ಯಾಹ್ನ ಯೂನಿವರ್ಸಿಟಿ ಬಸ್ಸಿನಲ್ಲಿ ನಮ್ಮನ್ನು ಥೌಸಂಡ್   ಐಲ್ಯಾಂಡ್ಸ್ ಗೆ ಕರೆದೊಯ್ಯಲಾಯಿತು.  ಹೆಸರೇ ಸೂಚಿಸುವಂತೆ ಇದು ಸುಮಾರು ಸಾವಿರದ ಎಂಟುನೂರರಷ್ಟು ಸಣ್ಣ ದೊಡ್ಡ ದ್ವೀಪಗಳಿರುವ ಅಮೇರಿಕ ಮತ್ತು ಕೆನಡಾಗಳೆರಡರಲ್ಲೂ ಬರುವ ದ್ವೀಪ ಸಮೂಹ . ಸಣ್ಣದೊಂದು ಹಡಗಿನಲ್ಲಿ ಕೆಲವು ಕಿಲೋಮೀಟರು ಗಳಷ್ಟು ದೂರ  ಹೋಗಿ ಬಂದೆವು . ದ್ವೀಪಗಳುದ್ದಕ್ಕೂ ಕ್ಯಾಸಲ್ ಗಳು ಯಾವುದೊ ಕತೆ ಪುಸ್ತಕದೊಳಗಿಂದ ಹೊರ ಬಂದಂತೆ ಕಾಣಿಸುತ್ತಿದ್ದವು. ವಾಪಸು ಬರುವ ದಾರಿಯಲ್ಲಿ ಮಾಲ್ ಒಂದರಲ್ಲಿ ಶಾಪಿಂಗ್ ಮಾಡಿ ಎಂದು ನಿಲ್ಲಿಸಿದರು . ಇದು ನಾನು ನೋಡಿದ ಒಂದು ವಿಶೇಷ ಮಾಲ್ . ಇಲ್ಲಿ ಅಂಗಡಿಗಳು ಸ್ವತಂತ್ರ ಕಟ್ಟಡಗಳಿಂದ ಕೂಡಿದ್ದು ಸಮತಲವಾಗಿ ಹರಡಿಕೊಂಡಿದ್ದವು . ಒಂದು ಅಂಗಡಿಯಿಂದ ಇನ್ನೊಂದು ಅಂಗಡಿಗೆ ಹೋಗಬೆಕಾದರೆ ಕೆಲವು ನಿಮಿಷಗಳು ನಡೆಯಬೇಕಾಗಿತ್ತು . ಶಾಂತಾರಾಮರ ಸಹಪಾಠಿಗಳು ನೈಕಿ ಅಂಗಡಿಗೆ ಮುಗಿಬಿದ್ದರು.ಇನ್ನೊಂದು ದಿನ ನಯಾಗರ ಫಾಲ್ಸ್ ನೋಡಲು ಯೂನಿವರ್ಸಿಟಿಯ ಬಸ್ಸಿನಲ್ಲಿ ಕರೆದುಕೊಂಡು ಹೋಗಲಾಯಿತು ನಮ್ಮ ಮಾರ್ಗದರ್ಶಿಯಾಗಿ ಪಿ ಎಚ್ ಡಿ  ವಿದ್ಯಾರ್ಥಿ ಮೀರ್ ಎನ್ನುವ ಒಬ್ಬರು ಎರಡು ವಾರಗಳೂ ನಮ್ಮೊಂದಿಗೆಯೇ ಇದ್ದರು . ಬಸ್ಸು ಹತ್ತಿ ಹೊರಡುವ ಮುನ್ನ ಕಪ್ಪು ಪ್ಯಾಂಟು ,  ಬೆಳ್ಳನೆಯ ಶರ್ಟು , ಕೆಂಪು ಟೈ ಕಟ್ಟಿಕೊಂಡು ಶಿಸ್ತಾಗಿ ರೆಡಿ ಆಗಿ ಬಂದಿದ್ದ  ಚಾಲಕ
“ ಡು  ದೇ  ಸ್ಪೀಕ್ ಇಂಗ್ಲಿಶ್  ?” ಎಂದು ಕೇಳಿದರು .
ಮೀರ್ “ ದೇ ಸ್ಪೀಕ್ ಇಂಗ್ಲಿಶ್  ಬೆಟರ್ ದ್ಯಾನ್   ಮೀ  ಅಂಡ್ ಯು “ ಅಂದರು!!

ನಯಾಗರ ಫಾಲ್ಸ್ ನೋಡಲು ಬಹಳಷ್ಟು ನಡೆದು ಹೋಗಬೇಕಾಗುತ್ತದೆ .ಇದನ್ನು  ಯು ಎಸ್ ಕಡೆಯಿಂದಲೂ ಕೆನಡಾದ ಕಡೆಯಿಂದಲೂ ನೋಡಬಹುದು . ನಾವು ಲಿಫ್ಟ್ ಬಳಸಿ ಕೆಳಗಿಳಿದ ಮೇಲೆ ಹಾಕಲು ನೀಲಿ ಬಣ್ಣದ ಪ್ಲಾಸ್ಟಿಕ್ ರೈನ್ ಕೋಟ್  ಧರಿಸಿ ಕ್ಯೂ  ನಲ್ಲಿ ನಿಂತೆವು . ಕೆನಡಾದಿಂದ ನೋಡುವವರದ್ದು ಕೆಂಪು ಬಣ್ಣದ ರೈನ್ ಕೋಟು  ! ನಮ್ಮ ಜೊತೆಗಿದ್ದವರಲ್ಲಿ ಹೆಚ್ಚಿನವರು ಉತ್ತರಭಾರತದವರು , ಬೆಂಗಳೂರಿಂದ ಜೋಗ ಎಷ್ಟು ದೂರ , ಅದು ನೋಡಲು ಹೇಗಿದೆ ಎಂದೆಲ್ಲ ನನ್ನನ್ನು ಕೇಳಿದರು . ನಾನು  ಜೋಗದ ಸೌಂದರ್ಯ , ಅಲ್ಲಿಗೆ ಹೋಗಲು ಟ್ರೈನ್ ಸೌಕರ್ಯ ಎಂದೆಲ್ಲ ವಿವರಿಸುವಾಗ ನಮ್ಮಲ್ಲೂ ಎಷ್ಟು ಚಂದದ ಜಾಗಗಳಿವೆ ನೋಡಲು , ವ್ಯತ್ಯಾಸವೆಂದರೆ ಅಮೇರಿಕದಲ್ಲಿ ಪ್ರತಿಯೊಂದು ಕಡೆ ನೋಡುಗರಿಗೆ ಅನುಕೂಲವಾಗುವಂತೆ ಸೌಕರ್ಯಗಳನ್ನು ಮಾಡಲಾಗಿದೆ ಎಂದೆನಿಸಿತು .  ಕೆಲವು ಘಳಿಗೆಗಳ ಮಟ್ಟಿಗೇ ಆದರೂ  ಹಾಕಿಕೊಳ್ಳಲು ಒಬ್ಬೊಬ್ಬರಿಗೆ ಒಂದೊಂದು ರೈನ್ ಕೋಟ್  . ಅಮೇಲದನ್ನು  ಬಿಸಾಡಲು ದೊಡ್ಡ ಕಸದಬುಟ್ಟಿ ! ಅಮೆರಿಕದಲ್ಲಿ  ಪ್ಲಾಸ್ಟಿಕ್ ಬಳಕೆಗೆ ಮಿತಿಯೆನ್ನುವುದೇ ಇಲ್ಲ,  ರೀಸೈಕ್ಲಿಂಗ್ ಕೂಡ ಅಷ್ಟೇ ಮುತುವರ್ಜಿಯಿಂದ ಮಾಡಲಾಗುತ್ತದೆ ಎನ್ನುತ್ತಾರೆ  , ಆದರೂ ವಿಪರೀತ ಅನಿಸಿತು .   ರೈನ್ ಕೋಟು ಕೊಟ್ಟದ್ದು  ನೋಡಿ ನಾನು ಎಷ್ಟು ನೀರು ಮೈಮೇಲೆ ಬೀಳುತ್ತದೆಯೋ ಅಂದುಕೊಂಡೆ , ತಮಿಳುನಾಡಿನ ಕೆಲವು ದೇವಸ್ಥಾನಗಳಲ್ಲಿ ನಮ್ಮ ಮೈಮೇಲೆ , ತಲೆ ಮೇಲೆ  ಇದಕ್ಕಿಂತಲೂ ಹೆಚ್ಚು ತೀರ್ಥ ಪ್ರೋಕ್ಷಣೆ ಮಾಡುತ್ತಾರೆ ! ನಮ್ಮಲ್ಲಿ ಕೆಲವರು ನೆನಪಿಗೆ ಎಂದು  ರೈನ್ ಕೋಟನ್ನು ಮಡಿಸಿ ತಗೆದುಕೊಂಡು ಬಂದರು! ಹೇಳಿದ ಸಮಯಕ್ಕೆ ಸರಿಯಾಗಿ ತಿರುಗಿ ಬಸ್ ಬಳಿ ಬಾರದ ಕೆಲವು ಹುಡುಗರ  ಮೇಲೆ ಮೀರ್ ಸಿಟ್ಟು ಮಾಡಿಕೊಂಡರು . ಛೇ ಇಷ್ಟೂ ಜವಾಬ್ದಾರಿಯಿಲ್ಲದವರು ಅನ್ನುವ ಭಾವ ಅವರ ಮುಖದ ಮೇಲಿತ್ತು . ನಮ್ಮ ಜನಕ್ಕೆ ನಿಯಮಗಳನ್ನು ಮುರಿಯುವುದೇ ಮಹತ್ಕಾರ್ಯ ಎನ್ನುವ ನಡವಳಿಕೆ ತೋರುವ ಅಭ್ಯಾಸವಿದೆ.

ನ್ಯೂಯೊರ್ಕ್ ಸಿಟಿಯಲ್ಲಿ ಎರಡು ದಿನ

ಇಲ್ಲಿಗೆ ನಮ್ಮ ಮೊದಲ ವಾರದ ಟ್ರಿಪ್ ಮುಗಿಯಿತು . ಯೂನಿವರ್ಸಿಟಿ ನಮ್ಮನ್ನು ವಾಷಿಂಗ್ ಟನ್ ಡಿ  ಸಿ ಗೆ ಕಳುಹಿಸಲಿತ್ತು . ನಾವಿನ್ನೂ ನ್ಯೂಯೊರ್ಕ್ ಸಿಟಿ  ನೋಡಿರದ ಕಾರಣ ನಮ್ಮಲ್ಲಿ ಅರ್ಧ ಜನ ವಾರಾಂತ್ಯವನ್ನು ನ್ಯೂಯೊರ್ಕ್ ನಲ್ಲಿ ಕಳೆಯಬೇಕೆಂದು ಬರಿಯ ನಮ್ಮ ಸಾಮಾನುಗಳನ್ನು ಯೂನಿವರ್ಸಿಟಿ ಬಸ್ಸಿನಲ್ಲಿ ಹಾಕಿ ವಾಷಿಂಗ್ಟನ್ ಡಿ ಸಿ ಗೆ ಕಳಿಸಿ ,ಎರಡು ದಿನಕ್ಕೆ ಬೇಕಾಗುವ ಬಟ್ಟೆಗಳನ್ನು ಪ್ಯಾಕ್ ಮಾಡಿಕೊಂಡು  ನಾವು ನ್ಯೂಯೊರ್ಕಿಗೆ   ಹೋಗುವ ಬಸ್ಸು ಹತ್ತಿದೆವು . ನಮ್ಮ ಸಂಖ್ಯೆ ಬಹಳವಿದ್ದುದರಿಂದ ಸಹಜವಾಗಿಯೇ ಮಾತು ನಗು ಶುರುವಾಯಿತು.  ಡ್ರೈವರ್ ಗೆ ಸರಿಹೋಗಲಿಲ್ಲ , ಖಡಕ್ಕಾಗಿ ಸದ್ದು  ಮಾಡಬೇಡಿ ಎಂದು ಹೇಳಿಬಿಟ್ಟ . ಆಮೇಲೆ ನಾವು ಗಪ್  ಚುಪ್ ! 

ನ್ಯೂಯೊರ್ಕ್ ಸಿಟಿ  ಅಮೆರಿಕದ ರಾಜ್ಯಗಳಲ್ಲಿಯೇ  ಅತೀ ಹೆಚ್ಚು ಜನಸಂಖ್ಯೆ ಇರುವ ಊರು. ಸೆರಕ್ಯುಸ್ ನಲ್ಲಿ  ಜನರು ಕಾಣಿಸುತ್ತಿದ್ದದ್ದು ಮಧಾಹ್ನ ಊಟದ ಸಮಯದಲ್ಲಿ ಮಾತ್ರ , ನ್ಯೂಯೊರ್ಕ ನಲ್ಲಿ ಎಲ್ಲ ಕಡೆ ಜನರು.  ನಡೆಯುತ್ತಿದ್ದರು  ಅನ್ನುವುದಕ್ಕಿಂತ ಓಡುತ್ತಿದ್ದರು ಅನ್ನಬಹುದು ! ರಸ್ತೆಗಳನ್ನು ದಾಟುವಾಗ , ಮೆಟ್ರೋ ನಿಲ್ದಾಣಗಳಲ್ಲಿ ಎಲ್ಲ ಕಡೆ ಜನರು . ಚೌಕಾಕಾರದ ಬ್ಲಾಕ್ ಗಳಲ್ಲಿ ಕಟ್ಟಡಗಳನ್ನು,  ರಸ್ತೆಗಳನ್ನು ನಿರ್ಮಿಸಲಾಗಿದೆ . ಮ್ಯಾಪ್ ತೆಗೆದುಕೊಂಡು ಹೋದರೆ ನಡೆದುಕೊಂಡೇ ಬಹಳಷ್ಟು ಜಾಗಗಳನ್ನು ನೋಡಬಹುದು .ನ್ಯೂಯೊರ್ಕ್ ಸಿಟಿ ಯನ್ನು ಐದು ಬರೋ (borough ) ಗಳಲ್ಲಿ ವಿಂಗಡಿಸಲಾಗಿದೆ -ಬ್ರೂಕ್ಲಿನ್ , ಕ್ವೀನ್ಸ್ , ಮ್ಯಾನ್ ಹಟನ್ , ದಿ ಬ್ರೊನ್ಕ್ಸ್ , ಸ್ಟಾಟೆನ್ ಐಲ್ಯಾಂಡ್ . ನಾವು ಉಳಕೊಂಡದ್ದು ಮ್ಯಾನ್ ಹಟನ್ ನಲ್ಲಿ . ಇಡೀ ಪ್ರಪಂಚದ ಅತಿ ಮುಖ್ಯ ಎಕನಾಮಿಕ್ ಕೇಂದ್ರ ವಾಲ್ ಸ್ಟ್ರೀಟ್ ಇರುವುದು ಇಲ್ಲಿಯೇ . ಯುನೈಟೆಡ್ ನೇಶನ್ ನ ಹೆಡ್ ಕ್ವಾರ್ಟರ್ಸ್ ಇಲ್ಲಿದೆ .   ಜೆ ಡಿ ಸಾಲಿಂಜರ್ ಅವರ “ದಿ ಕ್ಯಾಚರ್ ಇನ್ ದಿ ರೈ” ಪುಸ್ತಕ ನನ್ನ ಮೆಚ್ಚಿನದು . ಇದರ ಕಥಾನಾಯಕ ನ್ಯೂಯೊರ್ಕ್ ನಲ್ಲಿ ಎರಡು ದಿನ ನಿರುದ್ದಿಶ್ಯವಾಗಿ ಅಡ್ಡಾಡಿ ಕಳೆಯುತ್ತಾನೆ , ಓದುಗರಿಗೆ ನ್ಯೂಯೊರ್ಕ್ ನ ಪರಿಚಯವೂ ಆಗುತ್ತದೆ . ಇಂತಹ ಕೆಲವು ಪುಸ್ತಕಗಳನ್ನು ಓದಿದುದರ ಪರಿಣಾಮವಾಗಿ ನನಗೆ ನ್ಯೂಯೊರ್ಕ್ ನ ಬ್ರಾಡ್ವೇ , ರೀಗಲ್, ಸೆಂಟ್ರಲ್ ಪಾರ್ಕ್ ,  ಮ್ಯಾನ್ಹಟನ್ ಬರೋ ಗಳನ್ನು  ನೋಡುವ ಕುತೂಹಲ ಬಹಳವಿದ್ದಿತು. 

ನ್ಯೂಯೊರ್ಕ್ ನಲ್ಲಿ ಮೊದಲು ನೋಡಿದ್ದು ಟ್ವಿನ್ ಟವರ್ ಉರುಳಿಸಿದ ಜಾಗ , ಇಲ್ಲಿ ಒಂದು ಮೆಮೋರಿಯಲನ್ನು ಕಟ್ಟಲಾಗಿದೆ . ಒಂದು ಘಳಿಗೆ ಆ ಭಯಾನಕ ಘಟನೆ ನಡೆದ ನೆನಪು , ಟಿವಿ ಯಲ್ಲಿ ನೋಡಿದ ಚಿತ್ರಗಳು ಮನದಲ್ಲಿ ಮೂಡಿಬಂದವು . ಸ್ಟಾಚ್ಯು ಆಫ್  ಲಿಬರ್ಟಿ ನೋಡಲು ಕ್ಯೂನಲ್ಲಿ ನಿಂತೆವು . ಇಲ್ಲಿ ಮಾತ್ರ ಒಂದೆರಡು ಗಂಟೆ ಕಾಯಬೇಕಾಯಿತು . ಹಡಗಿನಲ್ಲಿ ಕೂತು ನ್ಯೂಯೊರ್ಕ್ ಸ್ಕೈಲೈನ್ , ಸ್ಟಾಚ್ಯೂ  ಆಫ್  ಲಿಬರ್ಟಿ ನೋಡಿದೆವು.   ವಾಪಸು ಬಂದು ಇಂಡಿಯನ್ ಹೋಟೆಲ್ ಒಂದರಲ್ಲಿ ಊಟ ಮಾಡಿ ಬಸ್ಸಿನಲ್ಲಿ ನೈಟ್ ಟೂರ್ ಮಾಡಲು ಮತ್ತೆ  ಕ್ಯೂನಲ್ಲಿ ನಿಂತೆವು . ಬಸ್ಸಿನ ಮೇಲಿನ  ಖುರ್ಚಿಗಳಲ್ಲಿ ಕುಳಿತು ಆ ರಾತ್ರಿ ನೋಡಿದ ನ್ಯೂಯೊರ್ಕ ನ ಚಂದವನ್ನು ನಾನೆಂದೂ ಮರೆಯಲಾರೆ . ಕತೆ ಪುಸ್ತಕಗಳಲ್ಲಿ ಓದಿದ , ಸಿನೆಮಾಗಳಲ್ಲಿ ನೋಡಿದ ಜಾಗಗೆಳೆಲ್ಲವೂ ಕಣ್ಣಮುಂದೆ ಚಿರಪರಿಚಿತವೆನ್ನುವಂತೆ ಹಾದುಹೋಗುತ್ತಿದ್ದವು. ಕೇಟ್  ಅಂಡ್ ಲಿಯೋಪೋಲ್ಡ್ ಸಿನಿಮಾ ನೋಡಿದವರು ಬ್ರೂಕ್ ಲಿನ್  ಬ್ರಿಜ್ಜನ್ನು ಮರೆಯುವುದು ಸಾಧ್ಯವೇ?   ಟೈಮ್ಸ್ ಸ್ಕ್ವೇರ್ ನೋಡಲು ಹೋದಾಗ ಮಧ್ಯ ರಾತ್ರಿ ದಾಟಿತ್ತು . ನಾವು ಏಳೆಂಟು ಜನರು ಮಾತ್ರ ಒಟ್ಟಿಗಿದ್ದೆವು , ಉಳಿದ ಹುಡುಗರು ತಮ್ಮಷ್ಟಕ್ಕೆ ಫೋಟೋ ತೆಗೆ , ತಿನ್ನು ,ತಿರುಗು ಎಂದು ದಿಕ್ಕಾಪಾಲಾಗಿದ್ದರು . ಇನ್ನು ರೂಮಿಗೆ ಹೋಗೋಣವೆಂದು ವಾಪಸು ಹೊರಟೆವು , ನಮ್ಮ ಜೊತೆ ಇದ್ದ ಮಹಿಳಾ ಸಹಪಾಠಿಯೊಬ್ಬರು ಬಿಸಿ ಬಿಸಿ ಬೆಲ್ಜಿಯನ್ ವಾಫ್ ಲ್  ಕೊಂಡು ನನಗೂ ರುಚಿ ನೋಡಿ ಎಂದು ಕೊಟ್ಟರು . ನಾವು ಮೂವರು ಸ್ವಲ್ಪ ಹಿಂದೆ ಬಿದ್ದೆವು , ಮುಂದೆ ಹೋಗುತ್ತಿದ್ದವರ ತಲೆ ಕಾಣುತ್ತಿತ್ತು . ಕೆಲವು ಕ್ಷಣಗಳ ನಂತರ ನೋಡಿದರೆ ಅವರಿಲ್ಲ . ನ್ಯೂಯೊರ್ಕ್ ತಲುಪಿದೊಡನೆ ಲಗುಬಗೆಯಿಂದ ರೂಮ್ ಗೆ ಹೋಗಿ ಫ್ರೆಶ್ ಆಗಿ ಹೊರಡುವ ಆತುರದಲ್ಲಿ ಇಳಕೊಂಡ ಹೋಟೆಲಿನ ವಿವರಗಳನ್ನು ನೋಡಿಕೊಂಡಿರಲಿಲ್ಲ , ಎಲ್ಲರೂ ಜೊತೆಗಿದ್ದಾರೆ ಎನ್ನುವ ಧೈರ್ಯ ಬೇರೆ , ಫೇರ್ ಫೀಲ್ಡ್ ಎಂದು ಹೋಟೆಲ್ ಹೆಸರು ಮಾತ್ರ ಗೊತ್ತಿತ್ತು.

ರಾತ್ರಿಯ ಝಗ ಝಗಿಸುವ ನ್ಯೂಯೊರ್ಕ್ ನ ಬೆಳಕಿನಲ್ಲಿ ಎಲ್ಲ  ಚಚ್ಚೌಕಾರದ ಬ್ಲಾಕ್ ಗಳೂ ,  ರಸ್ತೆಗಳೂ ಒಂದೇ ತರಹ ಕಾಣಲು ಶುರುವಾಯಿತು , ನನ್ನ ಮೊಬೈಲ್ ಡೆಡ್ ಆಗಿ ಗಂಟೆಗಳೇ ಕಳೆದಿದ್ದವು , ಶಾಂತಾರಾಮರ ಮೊಬೈಲ್ ಕುಟುಕುಟು ಜೀವವಿತ್ತು . ಸಹಪಾಠಿ ಮನೀಶ್ ಗೆ ಕರೆ ಮಾಡಿ ನಾವು ನಿಂತಿದ್ದ ಜಾಗದಲ್ಲಿದ್ದ ಯಾವುದೊ ಅಂಗಡಿಯ ಹೆಸರು ಹೇಳಿ ಅಲ್ಲಿದ್ದೇವೆ , ಫೋನ್ ಡಿಸ್ಚಾರ್ಜ್ ಆಗ್ತಾ ಇದೆ ಅಂತ ಹೇಳುವುದರೊಳಗೆ ಫೋನ್ ಡೆಡ್ . ದಾರಿ ತಪ್ಪಿ ಅರ್ಧ  ಗಂಟೆಯ  ಮೇಲಾಗಿರಬಹುದೇನೋ , ರಾತ್ರಿ ಎರಡು ಗಂಟೆಯ ಸಮಯ , ನಡೆದೂ ನಡೆದೂ ಸುಸ್ತಾಗಿದ್ದೆವು , ಯಾವುದೊ ಗಲ್ಲಿಯೊಳಗೆ ದಿನಪತ್ರಿಕೆಯೊಂದರ ಹೆಸರಿನ  ಬೋರ್ಡು ನೋಡಿ ಒಳ ನುಗ್ಗಿದೆವು , ಇವರಿಗಾದರೂ ಗೊತ್ತಿರಬಹುದು ಎಂದು , ಒಬ್ಬರಿಗಾದರೂ ಫೇರ್ ಫೀಲ್ಡ್ ಹೋಟೆಲ್ ಅಂದರೆ ಗೊತ್ತಾಗಲಿಲ್ಲ . ಇನ್ನು ರಾತ್ರಿಯಿಡೀ  ರಸ್ತೆಯ ಮೇಲೇನೋ ಎಂದು ಆತಂಕ ಶುರುವಾಯಿತು.  ಸುತ್ತಿ ಸುತ್ತಿ ಮತ್ತೆ ಮತ್ತೆ ಅಲ್ಲಲ್ಲೇ ಬರುತ್ತಿದ್ದೆವು . ಅಚಾನಕ್ಕಾಗಿ ಎದುರು ಬದಿಯಲ್ಲಿ  ಮನೀಶ್ ಅವರ ಮುಖ ಕಾಣಿಸಿತು! ಅಬ್ಬಾ ಆಪತ್ಭಾಂಧವ ! ಖುಷಿಯಿಂದ ರಸ್ತೆ ದಾಟಿ ಬಲಕ್ಕೆ ಹೊರಳಿದರೆ ಅಲ್ಲಿಯೇ ಇತ್ತು ಫೇರ್ ಫೀಲ್ಡ್ ! ಇವತ್ತಿಗೂ ಮನೀಶ್ ಆ ಹೊತ್ತು ನಮ್ಮನ್ನು  ಹುಡುಕಿಕೊಂಡು ಬಂದರಲ್ಲ ಎಂಬುದನ್ನು  ನೆನೆದರೆ ಮನ ತುಂಬಿ ಬರುತ್ತದೆ . ಈ ಅನುಭವದ ನಂತರ ಜಾಗರೂಕರಾಗಿಬಿಟ್ಟೆವು . ನಮ್ಮ ಜವಾಬ್ದಾರಿ ನಮ್ಮದೇ ಎನ್ನುವುದು  ಅರ್ಥವೂ ಆಯಿತು .

ಮೊಬೈಲ್ ಚಾರ್ಜ್ ಮಾಡಿಟ್ಟುಕೊಳ್ಳುವುದು, ಇಳಕೊಂಡ ಹೋಟೆಲ್ ನ ಕಾರ್ಡ್ ತೆಗೆದುಕೊಳ್ಳುವುದು , ಮ್ಯಾಪ್ ಇಟ್ಟುಕೊಳ್ಳುವುದು ಇದೆಲ್ಲ ಪ್ರತಿಯೊಬ್ಬ    ಪ್ರವಾಸಿಗನೂ ತೆಗೆದುಕೊಳ್ಳಲೇಬೇಕಾದ ಮುಂಜಾಗ್ರತೆಗಳು ಎಂದು ಮನವರಿಕೆಯಾಯಿತು . ಮರುದಿನ ,  ನಮಗಿದ್ದ ಸಮಯದಲ್ಲಿ ಎಲ್ಲವನ್ನೂ ನೋಡುವುದು ಸಾಧ್ಯವೇ ಇರಲಿಲ್ಲ . ನಾವು ಎಂಪೈರ್  ಸ್ಟೇಟ್ ಬಿಲ್ಡಿಂಗ್ ಮತ್ತು ಸೆಂಟ್ರಲ್ ಪಾರ್ಕ್ ನ್ನು ನೋಡುವುದೆಂದು ನಿರ್ಧರಿಸಿದೆವು . ಎಂಪೈರ್ ಸ್ಟೇಟ್ ಬಿಲ್ಡಿಂಗ್ ಒಂದು ಕಾಲದಲ್ಲಿ ನ್ಯೂಯೊರ್ಕ್ ನ ಅತಿ ಎತ್ತರದ ಕಟ್ಟಡ , ೧೫೪೫ ಅಡಿಗಳುದ್ದದ ಈ ಕಟ್ಟಡದ ೮೬ ನೇ ಫ್ಲೋರ್ ನ ಅಬ್ ಸರ್ ವೇಟರಿಯಿಂದ  ಇಡೀ ನ್ಯೂಯೊರ್ಕ್ ನ ಪನೋರಮಿಕ್ ನೋಟ ಕಾಣಸಿಗುತ್ತದೆ .  ಹಡ್ಸನ್ ನದಿ , ಗಗನಚುಂಬಿ ಕಟ್ಟಡಗಳನ್ನು ನೋಡಲು ಅನುಕೂಲವಾಗುವಂತೆ ಟೆಲಿಸ್ಕೋಪ್ ಗಳನ್ನೂ ಇಡಲಾಗಿದೆ. ಮೇಸಿ ಎನ್ನುವ ಪ್ರಖ್ಯಾತ ಮಳಿಗೆ ಇದರ ಪಕ್ಕದಲ್ಲೇ ಇದ್ದಿತು . ನನಗೆ ಇಲ್ಲಿ ಒಳಗೆ ಹೋಗಿ ಬರುವುದಕ್ಕೆ ತಗಲುವ ಸಮಯ ವ್ಯರ್ಥ ಅನ್ನಿಸಲು ಶುರುವಾಗಿತ್ತು , ಏಕೆಂದರೆ ಇಂತಹ ಮಳಿಗೆಗಳು ಬಹಳ ದೊಡ್ಡವು , ನಮ್ಮ ಬಳಿ ಭರಪೂರ ಸಮಯವಿದ್ದಲ್ಲಿ ಅಥವಾ ಏನಾದರೂ ಕೊಳ್ಳಬೇಕೆಂಬ ಖಚಿತ ಪ್ಲಾನ್ ಇದ್ದಲ್ಲಿ ಮಾತ್ರ ಒಳಗೆ ಹೋಗುವುದು ವಿಹಿತ.

ಸೆಂಟ್ರಲ್ ಪಾರ್ಕ್  ಮ್ಯಾಪ್ ಹಿಡಕೊಂಡು ನಡೆದು ಹೋಗಿ ಮುಟ್ಟುವಾಗ ನಾವು ಸುಸ್ತಾಗಿಬಿಟ್ಟೆವು . ಇಲ್ಲಿ ಸೈಕಲ್ಲುಗಳನ್ನು ಬಾಡಿಗೆಗೆ ಪಡೆದುಕೊಂಡು ಒಳಗೆ ತಿರುಗಾಡಿ ಬರಬಹುದು . ನಾವೆಲ್ಲ ಸುಮ್ಮನೆ ಹೊರಗಿಂದ ಹೊರಗೆಯೇ ನೋಡಿ ಲಗೇಜ್ ಇಟ್ಟಿದ್ದ  ಹೋಟೆಲಿಗೆ ಬಂದೆವು . ರಿಸೆಪ್ಶನ್ ನಲ್ಲಿ ಗಾಜಿನ ಡ್ರಮ್ ನಲ್ಲಿ ಐಸ್ಡ್ ಟೀ ಅದೀಗ ತಾನೇ ತುಂಬಿಟ್ಟಿದ್ದರು . ನಾವು ಅದೆಷ್ಟು ಗ್ಲಾಸು ಕುಡಿದೆವೋ ಲೆಕ್ಕವೇ ಇಲ್ಲ ! ಅವತ್ತು ಸೋಮವಾರ , ರಾತ್ರಿ ಬಸ್ಸಿನಲ್ಲಿ ವಾಷಿಂಗ್ಟನ್ ಡಿ  ಸಿ ಗೆ ಹೊರಟೆವು .ಸುಮಾರು ನಾಲ್ಕು ಗಂಟೆಗಳ ದಾರಿ , ರೂಮು ಸೇರುವಾಗ ಹನ್ನೆರಡಾಗಿತ್ತು .  ಮರುದಿನ ಇವರಿಗೆಲ್ಲ ತರಗತಿಗಳಿದ್ದವು. ಇಲ್ಲಿನ ರಸ್ತೆಗಳು ,ಬಸ್ಸುಗಳು ಬಹಳ ಚೆನ್ನಾಗಿರುವುದರಿಂದ ಆಯಾಸ ಆಗುವುದು ಕಮ್ಮಿ . ನಡೆಯುವುದಾದರೂ ಅಷ್ಟೇ ,ದಿನವೊಂದಕ್ಕೆ ಹದಿನೈದರಿಂದ ಹದಿನೆಂಟು ಸಾವಿರ ಸ್ಟೆಪ್ಸ್ ಹಾಕುತ್ತಿದ್ದೆವು .  ನಾನು ದಿನವೊಂದಕ್ಕೆ ಅಷ್ಟೆಲ್ಲ ನಡೆಯಬಲ್ಲೆನೆಂದು ಯಾವತ್ತೂ ಅಂದುಕೊಂಡಿರಲಿಲ್ಲ . ವಾಷಿಂಗ್ಟನ್ ಡಿ  ಸಿ ಯಲ್ಲಿ ಇಳಿದು ಉಬರ್ ಬುಕ್ ಮಾಡಿಕೊಂಡು ಹೋಟೆಲಿಗೆ ಹೊರಟೆವು . ಎಲ್ಲರೂ ಒಟ್ಟಿಗೆ ಇದ್ದುದರಿಂದ ದೊಡ್ಡ ಗಾಡಿ ಬುಕ್ ಮಾಡಿದ್ದೆವು.   ನಾವಿಬ್ಬರೂ ಹಿಂದೆ ಹೋಗಿ ಕೂತೆವು , ನಮ್ಮ ಮಧ್ಯೆ ಪ್ರಣವ್ ಎಂಬ ಹುಡುಗ ಇರುಕಲಾದ ಜಾಗದಲ್ಲಿ ಬಂದು ಕೂತ  . “ಅಯ್ಯೋ ನಿಮಗೆ ಜಾಗ ಕಮ್ಮಿಯಾಯಿತಲ್ಲವೇ”  ಎಂದೆ  “ನಾನು ಮನೆಮಂದಿ ಜೊತೆಗೆ ಹೋಗುವಾಗಲೂ ಹೀಗೆಯೇ ಅಪ್ಪ ಅಮ್ಮನ ಮಧ್ಯೆ ಕೂತು ಅಭ್ಯಾಸವಿದೆ”  ಎನ್ನಬೇಕೇ!?  ಸ್ವಲ್ಪ ಮುಂದೆ ಹೋಗುವಷ್ಟರಲ್ಲಿ ದೊಡ್ಡದೊಂದು ಬಿಳಿಯ ಕಟ್ಟಡ ಕಾಣಿಸಿತು . ಪ್ರಣವ್ ಕೂಡಲೇ ವೈಟ್ ಹೌಸ್ ಎಂದು ಕಿರುಚಿದ . ನಾನೂ ಹೌದೇನೋ ಅಂದುಕೊಂಡೆ.  ಮರುದಿನ ಸುತ್ತಾಡುವಾಗ ಗೊತ್ತಾಯಿತು ಅದು  “ಕ್ಯಾಪಿಟಲ್ ಹಿಲ್ ಬಿಲ್ಡಿಂಗ್” ಎಂದು!!

ವಾಶಿಂಗ್ಟನ್ ಡಿ ಸಿ

ಸೆರಕ್ಯುಸ್ ಒಂದು ಚಂದದ ಹಸಿರು ಮುಚ್ಚಿದ ಊರು , ಯೂನಿವರ್ಸಿಟಿ ಇದ್ದ ಗುಡ್ಡವಂತೂ ಕಣ್ಣು ಸೆಳೆಯುವ ಪ್ರಾಕೃತಿಕ ಸೌಂದರ್ಯದಿಂದ ಕೂಡಿತ್ತು , ನ್ಯೂಯೊರ್ಕ್ ಪೂರ್ತಿ ಹೈ ರೈಸ್  ಬಿಲ್ಡಿಂಗುಗಳು,  ಮಳಿಗೆಗಳು , ಅತ್ಯಾಧುನಿಕ ಅಂಗಡಿ ಮುಂಗಟ್ಟುಗಳು , ಝಗಮಗಿಸುವ ರಾತ್ರಿಯ ಟೈಮ್ಸ್ ಸ್ಕ್ವೇರ್ ನಂತಹ ವಿಶಿಷ್ಟ ತಾಣಗಳಿಂದ   ಕೂಡಿದ ಪಾಶ್ ನಗರ .  ವಾಷಿಂಗ್ಟನ್ ಡಿ  ಸಿ ಯ ಗತ್ತು ಗಾಂಭೀರ್ಯಗಳು ಇವೆರಡಕ್ಕಿಂತಲೂ  ಪೂರ್ತಿ ಭಿನ್ನ.  ಜಾಸ್ತಿ ಎತ್ತರವಿಲ್ಲದ ಇಲ್ಲಿನ ಕಟ್ಟಡಗಳು  ವಿಶಾಲವಾಗಿ ಹರಡಿಕೊಂಡಿವೆ ಎನಿಸುತ್ತಿತ್ತು.  ದಿನದ ಹೊತ್ತು ಜನರ ಓಡಾಟ ಹೆಚ್ಚಿಲ್ಲದ್ದಿದ್ದರೂ ಸಂಜೆಯಾದೊಡನೆ ಸೈಕಲ್ ಸವಾರಿ ಮಾಡುವವರು ಎಲ್ಲೆಲ್ಲೂ ಕಾಣಿಸುತ್ತಿದ್ದರು .  ಇಲ್ಲಿ ನಮ್ಮ ಹೋಟೆಲಿಗೆ ಹತ್ತಿರವಾಗಿಯೇ ಸ್ಮಿತ್ ಸೋನಿಯನ್   ಮ್ಯೂಸಿಯಂ ಗಳಿದ್ದವು .  ಇತಿಹಾಸ, ಕಲೆ,  ವಿಜ್ಞಾನ ಪ್ರತಿಯೊಂದರ ಬಗ್ಗೆ ಇದುವರೆಗೆ ಮನುಷ್ಯನ ಜ್ಞಾನ , ಸಾಧನೆಗಳ ಪ್ರತೀಕದಂತೆ ಎಲ್ಲವನ್ನೂ ಸೊಗಸಾಗಿ ಸುಮಾರು ಇಪ್ಪತ್ತೊಂದು ಮ್ಯೂಸಿಯಂಗಳಲ್ಲಿ ನೋಡುಗರಿಗಾಗಿ, ಮುಂದಿನ ಪೀಳಿಗೆಗಳಿಗಾಗಿ ಕಾಪಿಡಲಾಗಿದೆ. 

 ಒಂದೊಂದು ಮ್ಯೂಸಿಯಂನಲ್ಲೂ ಇಡೀ  ದಿನವನ್ನೇ ಕಳೆದು ಬಿಡಬಹುದು ಅಷ್ಟು ವಿಶಾಲವಾಗಿಯೂ ಆಸಕ್ತಿಕರವಾಗಿಯೂ ಇವೆ . ಏರ್ ಅಂಡ್ ಸ್ಪೇಸ್ ಮ್ಯೂಸಿಯಂ  ಮತ್ತು ಚಿತ್ರಕಲೆಯ ಮ್ಯೂಸಿಯಂ  ನಾವಿದ್ದ ಹೋಟೆಲಿನಿಂದ ಕಾಲ್ನಡಿಗೆಯ ದೂರ ಅಷ್ಟೇ  . ಭೌತಶಾಸ್ತ್ರದ ಪ್ರಾತ್ಯಕ್ಷಿಕೆಗಳನ್ನು ನೋಡುಗರು ತಾವೇ ಮಾಡಿ ಸರಳವಾಗಿ ಅರ್ಥ ಮಾಡಿಕೊಳ್ಳುವಂತಿದೆ . ಅಮೇರಿಕದ ಎಲ್ಲ ಮುಖ್ಯ ಚಿತ್ರ ಕಲಾವಿದರ ಕಲೆಯನ್ನು ಸಂಗ್ರಹಿಸಿ ಒಂದೆಡೆ ಪ್ರದರ್ಶಿಸುವ ಕೆಲಸವನ್ನು ಸ್ಮಿತ್ಸೋನಿಯನ್ ಇನ್ಸ್ಟಿ ಟ್ಯೂಟ್  ಹತ್ತೊಂಬತ್ತನೇ ಶತಮಾನದಿಂದ ಮಾಡುತ್ತಿದೆ . ನಾನು ನೋಡಿದ ಇನ್ನೊಂದು ಮ್ಯೂಸಿಯಂ  ಸ್ಮಿತ್ ಸೋನಿಯನ್ ನ್ಯಾಷನಲ್ ಮ್ಯೂಸಿಯಂ  ಆಫ್ ನ್ಯಾಚುರಲ್ ಹಿಸ್ಟರಿ . ಇಲ್ಲಿ ಡೈನೋಸಾರ್ ಗಳ ಅಸ್ಥಿಪಂಜರಗಳು  , ಅಪರೂಪದ ವಜ್ರ ವೈಡೂರ್ಯಗಳು , ಫಾಸಿಲ್ ಗಳು ನೋಡಿ ಮುಗಿಯದಷ್ಟು . ೧೮೪೬ ರಲ್ಲಿ ಈ ಮ್ಯೂಸಿಯಂ  ಗಳನ್ನು  ಸ್ಥಾಪಿಸಲಾಗಿದೆ . ಈ ಕಟ್ಟಡಗಳ ವಿನ್ಯಾಸವೇ ಅಪರೂಪದ್ದು .ಮುಖ್ಯ ರಸ್ತೆಯಿಂದ ಒಳಗೆ ಹೋಗಬೇಕಾದರೆ ಬಹಳಷ್ಟು ನಡೆಯಬೇಕು .  ನೋಡಿ ನೋಡಿ ನಡೆದೂ ನಡೆದೂ ನಾನು ಸುಸ್ತು !

ಒಂದು ಸಂಜೆ ನಮ್ಮನ್ನು ಗೈಡ್ ಒಬ್ಬರನ್ನು  ಜೊತೆ ಮಾಡಿ  ಲೋಕಲ್ ಟೂರ್ ಎಂದು ಕರೆದೊಯ್ಯಲಾಯಿತು.  ಹೇಳಿದ ಸಮಯಕ್ಕೆ ಬಾರದ ಇಬ್ಬರನ್ನು ಬಿಟ್ಟೇ ಹೊರಟೆವು .ಇಲ್ಲಿ ಸಮಯದ ಮಹತ್ವದ ಅರಿವಿದೆ  ,ಗೈಡು ಅವರಿಗಾಗಿ ಕಾಯಲಿಲ್ಲ ,  ಅವರಿಗೆ ಮತ್ತೆ ನೋಡುವ ಸಮಯ ಸಿಗಲೂ  ಇಲ್ಲ ! ಗೈಡ್ ನ    ಕೈಯಲ್ಲಿ ಒಂದು ಕೋಲಿತ್ತು , ಅದರ ತುದಿಯಲ್ಲಿ ಹೊಳೆಯುವ ಲೈಟ್ , ನಮ್ಮ ದಾರಿ ತಪ್ಪದಂತೆ ಇದನ್ನೇ ಫಾಲೋ ಮಾಡಿಕೊಂಡು ಬನ್ನಿ ಅಂದರು!

ವೈಟ್ ಹೌಸ್ ಅನ್ನು  ಹೊರಗಿನಿಂದ ನೋಡಿದೆವು , ಫೋಟೋ ತೆಗೆದುಕೊಂಡೆವು . ಲಿಂಕನ್ ಮೆಮೋರಿಯಲ್ , ಅರ್ಲಿಂಗ್ಟನ್ ನ್ಯಾಷನಲ್ ಸಿಮೆಟ್ರಿ  , ನ್ಯಾಷನಲ್ ಮಾಲ್ ಮುಂತಾದವುಗಳನ್ನು ಹತ್ತಿರದಿಂದಲೂ ಮತ್ತೆ ಕೆಲವು ಜಾಗಗಳನ್ನು ಬಸ್ಸಿನಿಂದಲೇ ತೋರುತ್ತ ನಮ್ಮ ಸಂಜೆಯ ಟ್ರಿಪ್ ಮುಗಿಯಿತು . ಒಂದು ಕಡೆ ರಸ್ತೆ ಬದಿಯಲ್ಲಿ ಹುಡುಗನೊಬ್ಬ ಬಹಳ ಚೆನ್ನಾಗಿ ಹೆಜ್ಜೆಗಳನ್ನು ಹಾಕುತ್ತ ಡಾನ್ಸ್ ಮಾಡುತ್ತಿದ್ದ !! ಇಲ್ಲಿನ ಕ್ಯಾಪಿಟಲ್ ಹಿಲ್ ಬಿಲ್ಡಿಂಗ್ ನೋಡಿದ್ದು ಮಾತ್ರ ಬಹಳ ವಿಶೇಷದ ಅನುಭವ . ಒಳಗೆ ಹೋಗಲು ಬಹಳ ಶಿಸ್ತಿನ ಕಾಯಿದೆಗಳಿವೆ . ಇಲ್ಲಿನ ಕೆಫೆಟೇರಿಯ ವಿಶಾಲವಾಗಿರುವುದಲ್ಲದೇ ತಿಂಡಿ ತಿನಿಸುಗಳ ವಿಚಾರದಲ್ಲಿ ಲೆಕ್ಕವಿಲ್ಲದಷ್ಟು ಆಯ್ಕೆ ಲಭ್ಯವಿದೆ . ಬೇರೆ ಕೆಲವೆಡೆ ಸಹ ನಂಗೆ ಹೀಗೆಯೇ ಅನಿಸಿದ್ದಿದೆ.  ನಮಗೆ ಏನು ಬೇಕು ಎಂದು ನಿಶ್ಚಯಿಸುವುದೇ ಒಂದು ಕಷ್ಟ . ಉದಾಹರಣೆಗೆ ಒಂದು ನೈಲ್ ಪೊಲಿಷ್ ಕೊಳ್ಳಬೇಕೆಂದರೆ ನೂರಾರು ಶೇಡ್ಸ್ ಇವೆ , ಒಂದರಿಂದ ಇನ್ನೊಂದಕ್ಕೆಅಂತಹ ವ್ಯತ್ಯಾಸವೂ ಕಾಣದು.  ವಿಷಯಾಂತರವಾಯಿತು . ಕೆಫೆಟೇರಿಯದಲ್ಲಿ ಬ್ರೌನಿ ಕೊಂಡು ತಿಂದೆ . ಇಲ್ಲಿ ಹಲವಾರು ಫ್ಲೋರ್ ಗಳಿವೆ . ಕೆಳಗಿನ ಫ್ಲೋರ್  ನಲ್ಲಿ ಅಮೆರಿಕದ ಆಗಿಹೋದ ಪ್ರೆಸಿಡೆಂಟುಗಳ ಚಂದದ ಮೂರ್ತಿಗಳ ಬಳಿ ನಿಂತು ಫೋಟೋ ತೆಗೆದುಕೊಂಡೆವು . ಗೈಡು ನಮ್ಮನ್ನು ಮೇಲಿನ ಫ್ಲೋರುಗಳಿಗೆ ಕರೆದುಕೊಂಡು ಹೋದರು .ಎಲ್ಲ ಸಾಮಾನುಗಳನ್ನೂ ಲಾಕರ್ ನಲ್ಲಿ ಇಟ್ಟು  ಒಳಗೆ ಹೋಗಬೇಕು , ಗಾಜಿನ ಕ್ಯೂಬಿಕಲ್ ನಲ್ಲಿ ಕೈ ಮೇಲೆ ಮಾಡಿ ನಿಂತರೆ ಆಟೋಮ್ಯಾಟಿಕ್ ಸ್ಕ್ಯಾನಿಂಗ್ ಆಗುತ್ತದೆ,  ಅದರ ನಂತರವೇ ಒಳಗೆ ಪ್ರವೇಶ .  ಇಲ್ಲಿ ಪಾರ್ಲಿಮೆಂಟ್ ನಡೆಯುವ ಜಾಗವನ್ನು ಗ್ಯಾಲರಿಯಲ್ಲಿ ಕುಳಿತು ನೋಡಿದ್ದು ಒಂದು ವಿಶೇಷ ಅನುಭವ . ಪ್ರಪಂಚದ ಅತೀ ಬಲಿಷ್ಠ ದೇಶದ ಅಧ್ಯಕ್ಷ ಮಾತನಾಡುವ, ಕಾರ್ಯನಿರ್ವಹಿಸುವ ಜಾಗ ನೋಡಲು ಸಿಕ್ಕಿತೆನ್ನುವುದು ಖುಷಿ ಕೊಟ್ಟಿತು .

ಸ್ವಾತಂತ್ರ್ಯ ದಿನಾಚರಣೆ

ಆಗಸ್ಟ್ ಹದಿನೈದು ನಮ್ಮ ಸ್ವಾತಂತ್ರ್ಯ ದಿನಾಚರಣೆಯ ದಿನ ನಮ್ಮನ್ನು ಬಸ್ಸಿನಲ್ಲಿ ಭಾರತೀಯ ಎಂಬೆಸಿ ಗೆ ಕರೆದೊಯ್ಯಲಾಗುತ್ತದೆ ಎಂದು ತಿಳಿದಾಗ ಬಹಳ ಖುಷಿಯಾಯಿತು . ಒಂದಾದರೂ ಸೀರೆ ತರಬೇಕಾಗಿತ್ತು ಎಂದು ಮನ ಚಡಪಡಿಸಿತು , ಕೊನೆಗೆ ಲಕ್ನೋ ಚಿಕನ್ ಕಾರಿ ಕುರ್ತಾವನ್ನು ಇದೂ ನಮ್ಮದೇ ದೇಶದ ಕುಸುರಿ ಕೆಲಸ ಮಾಡಿದ ವಸ್ತ್ರ ಎನ್ನುವ ಸಮಾಧಾನದಿಂದ ತೊಟ್ಟುಕೊಂಡು ಹೋದೆ . ಬಸ್ಸಿನಲ್ಲಿ ಹೊರಟೆವು . ವಿದ್ಯಾರ್ಥಿಗಳೆಲ್ಲರೂ ಶಿಸ್ತಾಗಿ ಸೂಟು ಧರಿಸಿಕೊಂಡಿದ್ದರು . ಅಂಬಾಸಡರ್ ಮನೆ ಗುಡ್ಡದ ಮೇಲಿತ್ತು . ಏರುಹಾದಿಯನ್ನು ಕ್ರಮಿಸಿ  ಒಳಗೆ ಹೋದೊಡನೆ ಮೊದಲು ಕಾಣಿಸಿದ್ದು ಕಾಫಿ ಟೀ ಇದ್ದ  ಸ್ಟೀಲಿನ ಡ್ರಮ್ ಗಳು ! ಹತ್ತು ದಿನಗಳಿಂದ ಚಹ ಕುಡಿಯದೆ ಪರಿತಪಿಸುತ್ತಿದ್ದ ಚಹಪ್ರಿಯರು ಬೆಂಚಿನ ಬಳಿ ಧಾವಿಸಿದರು .  ಪಕ್ಕದಲ್ಲೇ ಜೋಡಿಸಿಟ್ಟ ಉಪಹಾರದ ಟ್ರೇ ಗಳಿದ್ದವು . ಬಹಳಷ್ಟು ಜನ ಭಾರತೀಯರು ಒಟ್ಟು ಸೇರಿದ್ದರು , ಕನ್ನಡ , ಕೊಂಕಣಿ ಕೂಡ ಕಿವಿ ಮೇಲೆ ಬಿದ್ದಿತು . ಅಂಬಾಸಡರ್ ಶ್ರೀ ಹರ್ಷವರ್ಧನ್ ಶೃಂಗ್ಲಾ ಅವರು ಹುಲ್ಲುಹಾಸಿನ ಅಂಗಳದಲ್ಲಿ ಧ್ವಜಾರೋಹಣ ಮಾಡಿದರು . ರಾಷ್ಟ್ರ ಗೀತೆಯ  ನಂತರ ಪುಟ್ಟ ಸಭಾಂಗಣದಲ್ಲಿ ಅಂಬಾಸಡರ್ ಅವರ ಭಾಷಣವಿದ್ದಿತು . ಮೊದಲು ಹಿಂದಿಯಲ್ಲಿ ಶುರು ಮಾಡಿದರೂ ಕೂಡಲೇ ಇಂಗ್ಲಿಷಿಗೆ ಹೊರಳಿದರು . ಸ್ವಲ್ಪ ಹೊತ್ತು ಕೇಳಿ , ಉಪಹಾರ ತೆಗೆದುಕೊಂಡು ಮರಳಿ ಬಂದೆವು . ನಾನು ವಾಸವಿರುವುದು ಸರಕಾರಿ ಕೊಲನಿಯಲ್ಲಿ . ಪ್ರತಿವರ್ಷವೂ  ಆಗಸ್ಟ್ ಹದಿನೈದು , ಜನವರಿ ಇಪ್ಪತ್ತಾರರಂದು ಧ್ವಜಾರೋಹಣ ಸಮಾರಂಭಕ್ಕೆ ತಪ್ಪದೆ ಹೋಗುತ್ತೇವೆ . ೨೦೧೯ ಆಗಸ್ಟ್ ತಿಂಗಳ ಹದಿನೈದರಂದು ವಾಶಿಂಗ್ಟನ್ ನಲ್ಲಿ ಇದ್ದದ್ದು , ಆ ಸಮಾರಂಭದಲ್ಲಿ ಪಾಲ್ಗೊಂಡದ್ದು ನನ್ನ ಮಟ್ಟಿಗೆ  ಮರೆಯಲಾಗದ ಒಂದು ಸುದಿನ , ಸುಯೋಗ !

ಇಲ್ಲಿಯವರೆಗೆ ನಮ್ಮ ಜೊತೆಗಿದ್ದು ಗೈಡ್ ಮಾಡಿದ ಮೀರ್ ಅವರನ್ನು ಎಲ್ಲರೂ ಬೀಳ್ಕೊಟ್ಟೆವು . ನಗುಮೊಗದ ಸಜ್ಜನ ಮೀರ್ ಎಲ್ಲರಿಗೂ ಇಷ್ಟವಾಗಿದ್ದರು . ಇವರು ಅಫಘಾನಿಸ್ತಾನದಿಂದ ಬಂದವರಂತೆ , ಇಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದರು . ಯಾರು ಮಾತನಾಡುವಾಗಲೂ ತಾಳ್ಮೆಯಿಂದ ಕಿವಿಗೊಟ್ಟು ಕೇಳುತ್ತಿದ್ದರು . ನಮ್ಮನ್ನು ತಿರುಗಾಡಿಸಿದ ಎಲ್ಲ ಬಸ್ಸುಗಳಲ್ಲೂ ಮೈಕ್  ಇರುತ್ತಿದ್ದುದರಿಂದ ನಾನು ಲಹರಿ ಬಂದಾಗಲೆಲ್ಲ ಹಳೆಯ ಹಿಂದಿ ಹಾಡುಗಳನ್ನು ಹಾಡುತ್ತಿದ್ದೆ . ಪ್ರತೀ ಸಲವೂ ಮೀರ್ ಚಪ್ಪಾಳೆ ತಟ್ಟುತ್ತಿದ್ದರು! !

ಲಾಸ್ ವೇಗಸ್ , ಲೊಸ್ ಏಂಜಲೀಸ್ , ಸ್ಯಾನ್ ಫ್ರಾನ್ಸಿಸ್ಕೊ ಗಳಲ್ಲಿ ಎರಡೆರಡು ದಿನಗಳು

ಹೆಚ್ಚಿನವರು ಇಲ್ಲಿಂದ ಬೆಂಗಳೂರಿಗೆ ಮರಳಿದರು . ನಾವು ಎಂಟು ಜನ ಇನ್ನೂ ಒಂದು ವಾರ ತಿರುಗಲಿದ್ದೆವು . ಮೊದಲು ಹೊರಟದ್ದು ಲಾಸ್ ವೇಗಸ್ ಗೆ . ಇಲ್ಲಿವರೆಗೆ ಇದ್ದದ್ದು ಈಸ್ಟ್ ಕೋಸ್ಟ್ ನಲ್ಲಿ ಈಗ ಹೊರಟದ್ದು ವೆಸ್ಟ್ ಕೋಸ್ಟ್ ಗೆ . ಬೆಳಿಗ್ಗೆ ಕ್ಯಾಬ್ ಮಾಡಿಕೊಂಡು ಏರ್ಪೋರ್ಟ್ ಗೆ ಹೋಗಿ  ಅಟ್ಲಾಂಟಾ ಗೆ ಹೋಗುವ ಫ್ಲೈಟ್ ಹತ್ತಿದೆವು . ಅಟ್ಲಾಂಟಾ ತಲುಪಿದ ಕೂಡಲೇ ಗೊತ್ತಾಯಿತು , ವೇಗಸ್ ನ ಫ್ಲೈಟ್ ಹಲವು ಗಂಟೆಗಳ ಕಾಲ ತಡವಾಗಿದೆ ಎಂದು . ನಮ್ಮಲ್ಲಿಬ್ಬರು ಹೊರಗೆ ಹೋಗಿ ಊರು ನೋಡಿಕೊಂಡು ಬರಲು ಪಾಸ್ಪೋರ್ಟ್ ತೆಗೆದುಕೊಂಡು ಹೋದರು . ಏರ್ ಪೋರ್ಟ್ ಗಳಲ್ಲಿ ಕಾಯುವುದು ಕಷ್ಟವೆನ್ನುವುದಕ್ಕಿಂತಲೂ  ನಮಗೆ ವೇಗಸ್ ನಲ್ಲಿ ತಿರುಗಾಡಲೆಂದು ಇಟ್ಟಿದ್ದ  ಸಮಯ ಕಡಿತವಾಗುತ್ತದೆ ಎನ್ನುವ ಚಿಂತೆ , ಹಲವಾರು ಗಂಟೆಗಳ  ಕಾಲ  ಇಲ್ಲಿ ಕಾಯಬೇಕಾಗಿ ಬಂತು . ಕೆಲವು ಡೊಲರ್ ಗಳನ್ನು   ಊಟದ ಖರ್ಚೆಂದು ಕೊಟ್ಟರು . ಮಧ್ಯಾಹ್ನ ಎರಡು ಗಂಟೆಗೆ ಬಿಡಬೇಕಾಗಿದ್ದ ವಿಮಾನ ಬೋರ್ಡಿಂಗ್ ಆದಾಗ  ರಾತ್ರಿ  ಹನ್ನೊಂದು ಘಂಟೆ . ಕುಳಿತುಕೊಳ್ಳುವಾಗ ಶಾಂತಾರಾಮರು ಅಕ್ಷೀ ಎಂದು ಗಟ್ಟಿಯಾಗಿ  ಸೀನಿದರು , ಹತ್ತಾರು ಕಂಠಗಳು ಒಕ್ಕೊರಲಿನಿಂದ “ಬ್ಲೆಸ್ ಯೂ” ಅನ್ನಬೇಕೆ !! ವೇಗಸ್ ಏರ್ಪೋರ್ಟ್ ನಿಂದ ಹೊರಬೀಳುವಾಗ ಮಧ್ಯರಾತ್ರಿ ದಾಟಿತ್ತು . ವೇಗಸ್ ನೆವಾಡಾ ರಾಜ್ಯದಲ್ಲಿ ಇರುವುದು .  ವೇಗಸ್ ತಿರುಗಾಡಲು ಅನುಕೂಲವಾಗಬೇಕೆಂದು ದುಬಾರಿಯಾದರೂ ಸ್ಟ್ರಿಪ್ ಮೇಲೆಯೇ ಹೋಟೆಲ್ ರೂಮುಗಳನ್ನು ಬುಕ್ ಮಾಡಿದ್ದೆವು .

ಹೋಟೆಲ್ ತಲುಪಿದವರೇ ಮತ್ತೆ ಹೊರಗೆ ತಿರುಗಾಡಲು ಹೊರಟೆವು . ಎಲ್ಲೆಲ್ಲೂ ದೀಪಗಳು , ಐಷಾರಾಮಿ ಕಾರುಗಳು , ದೊಡ್ಡ ದೊಡ್ಡ ಹೋಟೆಲುಗಳ ಒಳಗೆ ಅತ್ಯಾಧುನಿಕ ಪ್ರತಿಷ್ಠಿತ ಡಿಸೈನರುಗಳ ಬುಟಿಕ್ ಗಳು . ನಾವು ಬೆಳಗಿನ ಜಾವ  ನಾಲ್ಕು ಗಂಟೆಯವರೆಗೂ ಅಡ್ಡಾಡಿದೆವು . ಒಂದು ಹೋಟೆಲಿನ ಲಾಬಿಯಲ್ಲಿ ಹದಿವಯಸ್ಸಿನ ಹುಡುಗಿ ಕುಡಿದದ್ದು ಹೆಚ್ಚಾಗಿ ವಾಂತಿ ಮಾಡುತ್ತಿದ್ದಳು , ದೊಡ್ಡ ಪ್ಲಾಸ್ಟಿಕ್ ಕವರ್ ಹಿಡಕೊಂಡು ಅವಳ ಸ್ನೇಹಿತರು ಅವಳನ್ನು ಸಂಭಾಳಿಸುತ್ತಿದ್ದರು !  ಆಗಿನ ಪ್ರೆಸಿಡೆಂಟ್ ಟ್ರಂಪ್ ಅವರ ಹೋಟೆಲನ್ನೂ ದೂರದಿಂದ  ನೋಡಿದೆವು! ನಾವು ತಂಗಿದ್ದ ಹೋಟೆಲ್ ನಲ್ಲಿ ಬಗೆಬಗೆಯ ಗ್ಯಾಂಬಲ್ ಆಟಗಳ  ಮಷೀನುಗಳಿದ್ದವು ,   ಸುಮ್ಮನೆ ಇರಲಿ ಎಂದು ಯಾವುದೋ  ಒಂದು ಮಷೀನಿನಲ್ಲಿ ಒಂದು  ಡಾಲರ್ ಹಾಕಿ ಅಡಿ ಕಳೆದುಕೊಂಡೆ ! ನಾವು ರೂಮಿಗೆ ಹೋಗುವಾಗ ಬೆಳಗಿನ ಜಾವ ನಾಲ್ಕು ಗಂಟೆ . ಮತ್ತೆ ಒಂದು ಗಂಟೆಯೊಳಗೆ ತಯಾರಾಗಿ  ಗ್ರಾಂಡ್ ಕ್ಯಾನ್ ಯೊನ್ ನೋಡಲು ಹೊರಟಿದ್ದೆವು ಎಂದು ಯೋಚಿಸಿದರೆ ಈಗ ಅಚ್ಚರಿಯಾಗುತ್ತದೆ . ಆ ಸಮಯದಲ್ಲಿ ಎಲ್ಲಿಂದಲೋ ಉತ್ಸಾಹ ಬಂದಿತ್ತು . ಆನ್ಲೈನ್ ಬುಕ್ ಮಾಡಿದ್ದು , ಅವರು ಹೇಳಿದ ಜಾಗದಲ್ಲಿ ಆರು ಗಂಟೆಗೆ ಸರಿಯಾಗಿ ಹೋಗಿ ನಿಂತಿದ್ದೆವು . ಒಂದು ಬಸ್ ಬಂತು, ಇದೇ ಇರಬೇಕು ಎಂದು  ನಾವು ಹೋಗಿ ಹೇಳಿದರೂ ಅವನು ಒಪ್ಪಿಕೊಳ್ಳಲಿಲ್ಲ . ಸರಿ ಕಾಯುತ್ತ ನಿಂತೆವು . ಅವನು ಎರಡು ಸುತ್ತು ಹೊಡೆದು ಮತ್ತೆ ಬಂದು ನಮ್ಮನ್ನು ಹತ್ತಿಸಿಕೊಂಡ . ಇಲ್ಲವಾದರೆ ನಮ್ಮ ಗ್ರಾಂಡ್ ಕ್ಯಾನ್ ಯೊನ್ ಕನಸು ಅಲ್ಲಿಗೆ ಮುಗಿಯುತ್ತಿತ್ತು . ಇಲ್ಲಿಂದ ಬಸ್ಸಿನಲ್ಲಿ  ಆರು ಗಂಟೆಯ ಹಾದಿ . ಮಧ್ಯ ಒಮ್ಮೆ ನಿಲ್ಲಿಸಿದೆಡೆ ಅಂಗಡಿಯೊಂದರ ಹಿಂಭಾಗದಲ್ಲಿ ಹಲವಾರು ವಿಂಟೇಜ್ ಕಾರುಗಳಿದ್ದವು !! ಮಧ್ಯಾಹ್ನ ಗ್ರಾಂಡ್ ಕ್ಯಾನ್ ಯೊನ್ ತಲುಪಿದೆವು.  

ನಮ್ಮ ಇಡೀ ಟೂರ್ ನಲ್ಲಿ  ನನ್ನ ಮನಸ್ಸಿನ ಮೇಲೆ ಬಹುವಾಗಿ ಪರಿಣಾಮ ಬೀರಿದ ಜಾಗವಿದು . ಸರಿಸುಮಾರು ನಾಲ್ಕು ಸಾವಿರ ಅಡಿ ಅಳ ಹಾಗೂ ಇನ್ನೂರ ಇಪ್ಪತ್ತೇಳು ಮೈಲು ಉದ್ದವಿರುವ ಈ ಅಗಾಧ ವಿಸ್ಮಯ ಸೃಷ್ಟಿಯಾದದ್ದು ಕೊಲರಡೋ ನದಿ ಹರಿದು ಉಂಟಾದ ಕೊರೆತದಿಂದ . ಕೆಂಬಣ್ಣದ ಕಲ್ಲುಗಳ ಮೇಲೆ  ನೈಸರ್ಗಿಕವಾಗಿ ಸೃಷ್ಟಿಯಾದ ಈ ಕುಸುರಿ ಕೆಲಸದ ಚಂದವನ್ನು ಮೊಬೈಲ್ ನಲ್ಲಿ ಸೆರೆಹಿಡಿಯುವುದು ಕಷ್ಟಸಾಧ್ಯ  . ನಾವಿಲ್ಲಿದ್ದುದು ಕೆಲವು ಗಂಟೆಗಳ ಕಾಲ ಮಾತ್ರ . ಇಲ್ಲಿ ಪ್ರವಾಸಿಗರು ದಿನಗಟ್ಟಲೆ ಉಳಿದುಕೊಂಡು ಹೈಕಿಂಗ್ ಮಾಡುತ್ತಾರೆ , ಒಂದು ರಿಮ್ ನಿಂದ ಇನ್ನೊಂದು ರಿಮ್ ಗೆ ಹೋಗುತ್ತಾರೆ. ಹೆಲಿಕೊಪ್ಟರ್ ನ ಮೂಲಕ ನೋಡುವ ವ್ಯವಸ್ಥೆಯೂ ಇದೆ .  ಇದು ಪ್ರವಾಸವೆಂದರೆ ಗಂಭೀರ   ಆಸಕ್ತಿಯಿರುವವರು ನೋಡಲೇಬೇಕಾದ ಸ್ಥಳಗಳಲ್ಲಿ ಒಂದು . ವಾಪಸ್ಸು ಹೋಟೆಲಿಗೆ ಬಂದು ತಲುಪುವಾಗ ಮಧ್ಯರಾತ್ರಿಯಾಗಿತ್ತು . ಮರುದಿನ ಲಾಸ್ ಏಂಜೆಲೀಸಿಗೆ ಬಸ್ಸಿನಲ್ಲಿ ಹೊರಟೆವು . ವೇಗಸ್ ನಲ್ಲಿ ಹೋಟೆಲಿಗೆ ಬಹಳ ಖರ್ಚು ಮಾಡಿದ್ದರಿಂದ ಸ್ವಲ್ಪ ಉಳಿತಾಯ ಮಾಡೋಣವೆಂದು ಎಲ್ ಏ ಯಲ್ಲಿ ಯು ಎಸ್ ಹೊಸ್ಟೆಲ್ ನಲ್ಲಿ ರೂಮು ಬುಕ್ ಮಾಡಿದ್ದೆವು . ಲಾಸ್ ಏಂಜಲೀಸ್ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿರುವುದು . ಆರು ಗಂಟೆಗಳಲ್ಲಿ ಎಲ್ ಏ ತಲುಪಿದೆವು . ಕ್ಯಾಬ್ ಮಾಡಿಕೊಂಡು ಹಾಸ್ಟೆಲ್ ಸೇರಿದೆವು . ಚೆಕ್ ಇನ್ ಟೈಮ್ ಸಂಜೆ ಇದ್ದುದರಿಂದ  ಲಗೇಜ್ ಇಡಲು ಕೊಟ್ಟ ಒಂದು ಸ್ಟೋರ್ ರೂಮಿನಂತಹದನ್ನು  ನೋಡಿ ಇಲ್ಲಿ ಹೇಗೋ ಏನೋ ಎಂಬ ಅನುಮಾನ ಬಂದಿತು . ಆದರೆ ನಿಜಕ್ಕೂ ಇಲ್ಲಿ ಉಳಕೊಂಡಿದ್ದು  ನಮ್ಮ ಪ್ರಯಾಣದ ಒಂದು ವಿಶಿಷ್ಟ ಅನುಭವ ! ಕಾಲ್ನಡಿಗೆಯ ದೂರದಲ್ಲಿ ಇಂಡಿಯನ್ ಹೋಟೆಲಿತ್ತು .

ಊಟ ಮುಗಿಸಿ ಹಾಲಿವುಡ್ ಟೂರ್ ಮಾಡಿಸುವ ಒಂದು ಬಸ್ಸಿನಲ್ಲಿ ಕುಳಿತೆವು .ಇಂಗ್ಲಿಶ್  ಸಿನೆಮಾಗಳಲ್ಲಿ HOLLYWOOD ಎಂದು ಬರೆದಿರುವುದನ್ನು ಗಮನಿಸದಿರುವವರು ಇರಲಿಕ್ಕಿಲ್ಲ , ಓಹೋ  ಇದು ಇಲ್ಲಿದೆಯೇ ಅನಿಸಿತು , ಬೆವರ್ಲಿ ಹಿಲ್ಸ್ ತೋರಿಸುವಾಗ ಗೈಡು ಎಲ್ಲ ಪ್ರತಿಷ್ಠಿತ ನಟರ ,  ಸಂಗೀತಗಾರರ ಹೆಸರು ಹೇಳಿ ಇದು ಅವರ ಬಂಗಲೆ ಎಂದು ಹೇಳುತ್ತಿದ್ದ ,ಅವರೇನು  ಹೊರಗೆಯೇ ಕೂತಿರುತ್ತಾರೆಯೇ?  ದೊಡ್ಡ ಗೇಟುಗಳು , ಎಷ್ಟೋ ಒಳಗಿರುವ ಮನೆಗಳು…  ಹ್ಞೂ ಹ್ಞೂ ಅನ್ನುತ್ತಲೇ ಚಂದದ ಪರಿಸರ ನೋಡಿಕೊಂಡು ಬಂದೆವು.  ಸಾಂಟಾ ಮೋನಿಕಾ ಬೀಚು ನೋಡಿಕೊಂಡು ಮೆಟ್ರೋ ದಲ್ಲಿ  ಅಡ್ಡಾಡಿ ಹಾಸ್ಟೆಲ್ ಗೆ ಬಂದೆವು . ಒಂದೊಂದು ರೂಮಿನಲ್ಲಿ ಎಂಟು ಜನರು, ನಾವೇ ಎಂಟು ಜನರಿದ್ದರೂ ನಮಗೆ ಒಂದೇ ರೂಮು ಸಿಕ್ಕಿರಲಿಲ್ಲ . ನಾಲ್ಕು ಜನ ಡಿವೈಡ್ ಆದೆವು . ಇಲ್ಲಿದ್ದದ್ದು ಬಂಕ್ ಬೆಡ್ಡುಗಳು , ಅದರಲ್ಲೂ ನಮಗೆ ಸಿಕ್ಕಿದ್ದು ಮೇಲಿನವು ! ನಾನು ಮೊದಲ ಬಾರಿ ಬಂಕ್ ಬೆಡ್ ಹತ್ತಿ ಮಲಗುವುದು. ಬಾಗಿಲ ಮೇಲೆ ಪಾಲಿಸಬೇಕಾದ ನಿಯಮಗಳ ಉದ್ದ ಲಿಸ್ಟ್ ಇತ್ತು . ಗಟ್ಟಿಯಾಗಿ ಮಾತನಾಡುವಂತಿಲ್ಲ, ಸಾಮಾನುಗಳನ್ನು ಎಳೆದಾಡುವಂತಿಲ್ಲ , ಅಂತೂ ಇನ್ನೊಬ್ಬರನ್ನು ಡಿಸ್ಟರ್ಬ್ ಮಾಡದೇ ಹೇಗೆ ಬದುಕಬಹುದು ಎಂದು ಹೇಳಿಕೊಡುವ ಜಾಗವಿದು . ಉಳಿದವರು ತಮ್ಮ ತಮ್ಮ ಜಗತ್ತಿನಲ್ಲಿಯೇ ಇದ್ದರು .

ನಮ್ಮಲ್ಲಿನ ಹಾಗೆ ಪ್ರಶ್ನೆ ಕೇಳುವುದು , ಅನಗತ್ಯ ಮಾತನಾಡುವುದು ಇಲ್ಲವೇ ಇಲ್ಲ . ನಂಗೆ ಇಲ್ಲಿನ ಶಿಸ್ತು ಬಹಳ ಹಿಡಿಸಿತು . ಸುಮಾರು ಇಪ್ಪತ್ತರ ಹುಡುಗನೊಬ್ಬ ಮಂಚದ ಮೇಲೆ ಕುಳಿತು ಲ್ಯಾಪ್ ಟೊಪ್ ತೆರೆದಿಟ್ಟು  ಕೆಲಸ ಮಾಡುತ್ತಿದ್ದ. ನಾವು ಕನ್ನಡ ಮಾತನಾಡುವುದನ್ನು ಕೇಳಿದನೆನಿಸುತ್ತದೆ . ಮರುದಿನ ಮಾತನಾಡಿಸಿದ . ಅವನು ಬೆಂಗಳೂರಿನವನಂತೆ , ತಿರುಗಾಡಲು ಬಂದವನಂತೆ,  “ ನೀವೆಲ್ಲಾ ಈ ವಯಸ್ಸಿನಲ್ಲಿ ಹೀಗೆ ತಿರುಗಾಡುವುದು ನೋಡಿ ಖುಷಿಯಾಯ್ತು  , ನಾನೂ ನನ್ನ ಪೇರೆಂಟ್ಸ್ ಗೆ ಬರಲು ಹೇಳ್ತಾನೆ ಇರ್ತೀನಿ ಅವರು ಕೇಳಲ್ಲ” ಅಂದ !! ಎಂಟು ಜನಕ್ಕೆ ಒಂದೇ ಆಟಾಚ್ಡ್ ಬಾತ್ ರೂಮ್ ಆದರೂ ಬಳಸುವವರೆಲ್ಲ ಜಾಗರೂಕರಾಗಿದ್ದುದರಿಂದ ನೀಟಾಗಿಯೇ ಇತ್ತು . ಹೊರಗಿದ್ದ ಒಂದು ಲಿವಿಂಗ್ ರೂಮ್ ಬಳಿ ಕೂಡ ಒಂದು ದೊಡ್ಡ ಬಾತ್ ರೂಮ್ ಇದ್ದಿತು , ಅಲ್ಲಿಗೆ ಯಾರೂ ಹೋಗುತ್ತಿರಲಿಲ್ಲ  ನಾವು ಅದನ್ನೂ  ಬಳಸಿಕೊಂಡೆವು. ನಮ್ಮ ರೂಮ್ ಇದ್ದದ್ದು ಫಸ್ಟ್ ಫ್ಲೋರ್ ನಲ್ಲಿ . ಕೆಳಗಡೆ ದೊಡ್ಡದಾದ ಅಡಿಗೆಮನೆ ಹಾಗೂ ಡೈನಿಂಗ್ ರೂಮ್ ,ಇಲ್ಲಿ  ನಮಗೆ ಬೇಕಾದ ಹಾಗೆ ಅಡಿಗೆ ಮಾಡಿಕೊಳ್ಳುವ ಸೌಕರ್ಯವಿತ್ತು , ನಾವು ಬೆಳಗಿನ ಉಪಹಾರ ಇಲ್ಲಿಯೇ ಮಾಡಿಕೊಂಡೆವು . ತಾಜಾ ಕಿತ್ತಳೆ ಹಣ್ಣುಗಳನ್ನು ಅವರೇ ಕತ್ತರಿಸಿ ಇಟ್ಟಿರುತ್ತಿದ್ದರು . ಕಡಿಮೆ ಬಡ್ಜೆಟ್ ನಲ್ಲಿ ತಿರುಗಾಡಬೇಕೆಂದರೆ ಈ ಹಾಸ್ಟೆಲ್ಗಳು ಬಹಳ ಒಳ್ಳೆಯ ಒಪ್ಶನ್ ಎನಿಸಿತು .

ಮರುದಿನ “ಯುನಿವರ್ಸಲ್ ಸ್ಟುಡಿಯೊ” ನೋಡುವುದ್ದಕ್ಕೆಂದು ಮೀಸಲಾಗಿಟ್ಟಿದ್ದೆವು . ನೋಡುವುದಕ್ಕೆ ಬೇಕಾದಷ್ಟು ಜಾಗಗಳಿದ್ದರೂ ಮತ್ತದೇ ಸಮಯದ ಅಭಾವ. ಬೆಳಿಗ್ಗೆ ಬೇಗನೆ ಹೊರಟು  ಯುನಿವರ್ಸಲ್ ಸ್ಟುಡಿಯೋ ಸೇರಿದೆವು . ಇಲ್ಲಿಯೂ ಅಷ್ಟೇ , ಒಂದು ದಿನದಲ್ಲಿ ಎಲ್ಲವನ್ನೂ ನೋಡುವುದು ಸಾಧ್ಯವೇ ಇಲ್ಲ , ನಾವು ಆಯ್ಕೆ ಮಾಡಿಕೊಂಡು ಕೆಲವು ಮುಖ್ಯವೆನಿಸಿದ ಶೋಗಳನ್ನು  ನೋಡಿದೆವು . ಬೆಳಿಗ್ಗೆ ನೋಡಿದ್ದರಲ್ಲಿ ಹ್ಯಾರಿ ಪೊಟರ್ ಶೋ ನನಗೆ ಬಹಳ ಇಷ್ಟವಾಯಿತು , ನನ್ನ ಮಕ್ಕಳೊಂದಿಗೆ ಹ್ಯಾರಿ ಪೊಟರ್  ಪುಸ್ತಕಗಳನ್ನು  ಓದಿದ್ದೆ , ಸಿನಿಮಗಳನ್ನು  ನೋಡಿದ್ದೆ , ಇಲ್ಲಿ ಮಾತ್ರ ಮಕ್ಕಳನ್ನು ಬಹಳ ಮಿಸ್ ಮಾಡಿಕೊಂಡೆ , ಇಬ್ಬರೂ ಬೇರೆ ಬೇರೆ ರಾಜ್ಯಗಳ ಹಾಸ್ಟೆಲ್ ನಲ್ಲಿದ್ದರು . ಕಾಲೇಜಿನ ತರಗತಿಗಳನ್ನು ಬಿಟ್ಟು ನಮ್ಮೊಂದಿಗೆ ಬರುವ ಪ್ರಶ್ನೆಯೇ ಇರಲಿಲ್ಲ .

ಮಧ್ಯಾಹ್ನ ನೋಡಿದ ಒಂದು ಗಂಟೆ ಅವಧಿಯ “ಸ್ಟುಡಿಯೋ ಟೂರ್” ಯಾವತ್ತೂ ಮರೆಯಲಾಗದ ಅನುಭವ ಕೊಟ್ಟಿತು . ಸ್ಟೀವನ್ ಸ್ಪೀಲ್ ಬರ್ಗ್ ನ ಮಾರ್ಗದರ್ಶನದಲ್ಲಿಯೇ ಇದನ್ನು ನಿರೂಪಿಸಲಾಗಿದೆಯಂತೆ. ಟ್ರಾಮ್ ನಲ್ಲಿ ನಮ್ಮನ್ನು  ಕೂರಿಸಿ ಕರೆದುಕೊಂಡು ಹೋಗಲಾಗುತ್ತದೆ , ಆಮೇಲೆ ಮಾತ್ರ ಮೈಮೇಲೆ ಬಂದಂತೆ ಅನಿಸುವ ಫ್ಲಾಶ್ ಫ್ಲಡ್  , ನಾವು ಕೂತ ಟ್ರಾಮ್ ಅಲ್ಲಾಡಿ ಹೋದಂತನಿಸುವ ಭೂಕಂಪ , ಎಲ್ಲೋ ಪಕ್ಕದಲ್ಲೇ ನಡೆಯುವ ಯುದ್ಧ , ಬಾಂಬು  ಸ್ಫೋಟಗಳು , ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗುವ ಭಯಾನಕ ಪ್ರಾಣಿಗಳು , ಹಳೆಯ ಸಿನಿಮಾದ ಸೆಟ್ಟುಗಳು , ಹಾಲಿವುಡ್ ಸಿನೆಮಗಳ  ಐಕಾನಿಕ್ ದ್ರಶ್ಯಗಳು  ,( ಫಾಸ್ಟ್ ಅಂಡ್  ಫ್ಯೂರಿಯಸ್ , ಜಾಸ್ ಮೊದಲಾದ ಸಿನೆಮಾಗಳ ದ್ರಶ್ಯಗಳಿದ್ದದ್ದು ನೆನಪು) ನಾವೇ ಇದೆಲ್ಲದರ ಒಂದು ಅಂಗ ಅನಿಸಿಬಿಡುವುದು ಮಜಾ , ಒಂದು ಗಂಟೆಯಾದ್ದದ್ದು ಗೊತ್ತೇ ಅಗಲಿಲ್ಲ . ಕೊನೆಗೊಂದು ಓಪನ್ ಏರ್ ಥಿಯೇಟರ್ ನಲ್ಲಿ  ಡ್ರಾಮಾ ತರಹದ ಶೋ ಇದ್ದಿತು. ಸಾಧ್ಯವಾದಷ್ಟನ್ನೂ  ನೋಡುವ ಧಾವಂತದಲ್ಲಿ ಸರಿಯಾಗಿ ತಿಂದಿರಲಿಲ್ಲ , ನಾನಂತೂ ಸುಸ್ತೋ ಸುಸ್ತು , ಮುಗ್ಗರಿಸಿ ಬಿದ್ದೇ ಬಿಟ್ಟೆ .  ಇಲ್ಲಿಂದ ನಾವು ಹೋದದ್ದು ಸ್ಯಾನ್ ಫ್ರಾನ್ಸಿಸ್ಕೋ ಗೆ .ಇದು ಸಹ ಕ್ಯಾಲಿಫೋರ್ನಿಯಾದಲ್ಲಿಯೇ ಇರುವುದು ,ರೋಡ್ ಟ್ರಿಪ್ ಕೂಡ ಮಾಡಬಹುದು , ನಮ್ಮ ಬಳಿ ಸಮಯ ಕಡಿಮೆ ಇದ್ದ ಕಾರಣ ಫ್ಲೈಟಿನಲ್ಲಿ ಹೋದೆವು.   ವೀಸಾ ಬಂದದ್ದು ತಿಳಿಯುತ್ತಲೇ ಸ್ಯಾನ್ ಫ್ರಾನ್ಸಿಸ್ಕೋ (ಎಸ್ ಎಫ್ ಓ ) ದಲ್ಲಿದ್ದ ನನ್ನ ಅಕ್ಕನ ಮಗಳು , ಅದಕ್ಕೂ  ಮಿಗಿಲಾಗಿ ನನ್ನ ಬಾಲ್ಯದ ಗೆಳತಿ ನಯನಳಿಗೆ  ಮೆಸೇಜ್  ಮಾಡಿದ್ದೆ . ಅವಳು ತಕ್ಷಣ ಕರೆ ಮಾಡಿ ವಿವರಗಳನ್ನು ಕೇಳಿ ಅವಳ ಮನೆಗೆ ಬರುವಂತೆ ಹೇಳಿದ್ದಳು .

ನಮ್ಮ ಟೂರ್ ನ ಕೊನೆಯ ಎರಡು ದಿನಗಳು ಅವಳ ಜೊತೆಯಲ್ಲಿ ಕಳೆದದ್ದು ಐಸಿಂಗ್ ಆನ್ ದಿ ಕೇಕ್ ಆಗಿತ್ತು . ನಮ್ಮವರನ್ನು ಇಷ್ಟು ದೂರದ ದೇಶದಲ್ಲಿ ಭೇಟಿಯಾಗುವುದು ಒಂದು ವಿಶಿಷ್ಟ ಅನುಭವವೇ ಸೈ . ವಿಮಾನ ನಿಲ್ದಾಣಕ್ಕೆ ನಮ್ಮನ್ನು ಕರೆದೊಯ್ಯಲು ಬಂದವಳೊಂದಿಗೆ ಆ ದಿನ ಪೂರ್ತಿ ಎಸ ಎಫ್ ಓ ನಲ್ಲಿ ತಿರುಗಾಡಿ ಸಂಜೆಯೇ ಮನೆಗೆ ಹೋದೆವು . ಮೊದಲು ಗೋಲ್ಡನ್ ಗೇಟ್ ಬ್ರಿಜ್ ನೋಡಲು ಹೋದೆವು .೧೯೩೭ ರಲ್ಲಿ ಕಟ್ಟಲಾದ ಈ ಬ್ರಿಜ್ಜು ಜಗತ್ತಿನಲ್ಲಿಯೇ ಅತಿ ಹೆಚ್ಚು ಬಾರಿ ಫೋಟೋ ತೆಗೆದುಕೊಳ್ಳಲ್ಪಟ್ಟ ಬ್ರಿಜ್ ಎಂದೇ ಪ್ರಖ್ಯಾತ ! ಕೆಂಬಣ್ಣದ , ಕಬ್ಬಿಣದ ಈ ಬ್ರಿಜ್ ನೆದುರು ನಾವೂ ಫೋಟೋ ತೆಗೆದುಕೊಂಡೆವು . ನಯನ ಎರಡು ಫ್ಲಾಸ್ಕ್ ತುಂಬಾ ಬಿಸಿ ಬಿಸಿ ಚಹಾ , ಇಡ್ಲಿ ,ಚಟ್ನಿ ಅದರೊಂದಿಗಿಷ್ಟು ಪ್ರೀತಿ ಸೇರಿಸಿ ತಂದಿದ್ದಳು . ಟಿಫನ್ ಮುಗಿಸಿ ಊರು ನೋಡಲು ಹೊರಟೆವು . ಇಲ್ಲಿನ ಕ್ರೂಕೆಡ್  ಸ್ಟ್ರೀಟ್ ಹೆಸರಿಗೆ ತಕ್ಕಂತೆ ಅಂಕುಡೊಂಕಾಗಿ , ಏರು ತಗ್ಗುಗಳಿಂದ ಕೊಡಿದೆ . ಇದೂ ಸಹ ಗುಡ್ಡ ಪ್ರದೇಶವೇ , ಮೇಲೆ ನಿಂತು ನೋಡಿದರೆ ಇಡೀ ಊರಿನ ಪಾರ್ಶ್ವ ನೋಟ ಕಾಣಸಿಗುತ್ತದೆ , ಈ ರಸ್ತೆಯಲ್ಲಿ ಎರಡೆರಡು  ಸಲ ತಿರುಗಿದೆವು. ಪಿಯರ್ (pier ) ೩೯ ಎಂಬಲ್ಲಿ ನೀರಿನ ಬಳಿ ರಾಶಿ ರಾಶಿ ವಾಲ್ ರಸ್ ಗಳು ಬಿದ್ದುಕೊಂಡಿದ್ದವು . ಶಾಲೆಯಲ್ಲಿ ವಾಲ್ ರಸ್ ಅಂಡ್ ದಿ ಕಾರ್ ಪೆಂಟರ್ ಎನ್ನುವ ಕವಿತೆ ಓದಿದ ನೆನಪಿದೆ.  ಆದರೆ ವಾಲ್ ರಸ್ ಅಂದರೆ ಏನೆಂದು ಗೊತ್ತಾಗಿರಲಿಲ್ಲ , ಇಲ್ಲಿ ನೋಡಿದೆ , ದೊಡ್ಡ ಮೀನುಗಳ ಹಾಗೆ ಕಾಣಿಸುತ್ತವೆ , ಮೂತಿ ಮಾತ್ರ ಅಗಲ .  ಇಲ್ಲಿನ ಲೋಕಲ್ ಮಾರ್ಕೆಟ್ ನಲ್ಲಿ ಮಾರಾಟಕ್ಕಿಟ್ಟ ಹಣ್ಣುಗಳನ್ನು ನೋಡಿ ಅಚ್ಚರಿಯಾಯಿತು. ಅದೆಷ್ಟು ಬಗೆಗಳು  , ಸ್ಟ್ರಾಬೆರಿ ನಮ್ಮ ಜಯನಗರ ಮಾರ್ಕೆಟ್ ನಲ್ಲಿ ಸಿಗುವುದಕ್ಕಿಂತ ಎರಡು ಮೂರು ಪಟ್ಟು ದೊಡ್ಡದು ,ಇದರೊಂದಿಗೆ ತಿನ್ನಲು ಚಾಕಲೇಟ್ ಡಿಪ್ ಬೇರೆ !! ಮನೆಗೆ ಹೋಗಿ ತಿನ್ನೋಣವೆಂದು ಕೊಂಡು ಇಟ್ಟುಕೊಂಡೆವು . ಇಲ್ಲಿನ ಗಿರಾರಡೆಲಿ ಸ್ಕ್ವೇರ್ ಎಂಬ ಚಾಕಲೇಟ್ ನ ದೊಡ್ಡ ಅಂಗಡಿ ಬಹಳ ಪ್ರಖ್ಯಾತವಾದುದು .

ಒಳಗೆ ಹೋದವರಿಗೆಲ್ಲ ತಿನ್ನಲು ಒಂದು ಚೊಕೊಲೇಟು ಫ್ರೀ . ಚಾಕಲೇಟು  ತಯಾರಿಸುವುದನ್ನೂ  ನೋಡಬಹುದು , ಚಾಕಲೇಟು , ಐಸ್ ಕ್ರೀಮ್ಗಳನ್ನ ಬಳಸಿ ತಯಾರಿಸಿದ ಬಲು ರುಚಿಯ ಡಿಸರ್ಟ್ ಗಳೂ ಸಿಗುತ್ತವೆ . ಹೊರಗಿನಿಂದ ನೋಡಲೂ ಚಂದ ಈ ಅಂಗಡಿ . ಹೇಳುವುದು ಮರೆತೆ , ಇಲ್ಲಿ ಎಷ್ಟೋ ಕಡೆ ಅಂಗಡಿಗಳನ್ನು ಗುರುತಿಸುವುದೇ ಕಷ್ಟ , ಸೆರಕ್ಯುಸ್ ನಲ್ಲಿಯೂ ಅಷ್ಟೇ ಹೊರಗಿಂದ ಗೊತ್ತೇ ಆಗದ ಸಿವಿಸಿ ಎಂಬ ಅಂಗಡಿ ಸಿಗಲು ಎರಡು ಮೂರು ದಿನಗಳಾದವು . ಇಲ್ಲಿ ದಿನಬಳಕೆಯ ಎಲ್ಲ ವಸ್ತುಗಳೂ ಸಿಗುತ್ತವೆ , ಆಮೇಲೆ ವಾಷಿಂಗ್ಟನ್ ಡಿ  ಸಿ ಯಲ್ಲಿಯೂ  ಸಿ ವಿ ಸಿ ಹೋಟೆಲ್ ನ ಪಕ್ಕದಲ್ಲೇ ಇದ್ದಿತು . ಹಾಲಿನ ಪುಟ್ಟ ಬಾಟಲುಗಳನ್ನೂ  , ಡ್ಯಾನಿಷ್ ಎಂಬ ಜಾಮ್ ಹಾಕಿದ ಬ್ರೆಡ್ಡನ್ನು ತಿರುಗಾಡಲು ಹೋಗುವಾಗ ಒಯ್ಯಲು ಇಲ್ಲಿಂದಲೇ ತೆಗೆದುಕೊಳ್ಳುತ್ತಿದ್ದೆ . ಮರುದಿನ ಭಾವಜಿಯವರು (ನಯನಳ ಸಂಗಾತಿ) ಟೆಸ್ಲಾ ಕಾರಿನಲ್ಲಿ ನಮ್ಮನ್ನೆಲ್ಲ ಮೊಂಟೆರ್  ಬೇ ಅಕ್ವೇರಿಯಂ ನೋಡಲು ಕರೆದುಕೊಂಡು ಹೋದರು . ಟೆಸ್ಲಾ ಕಾರನ್ನು ಮೊದಲ ಸಲ  ನೋಡಿದ್ದು, ಕೂತಿದ್ದು , ಬಹಳ ಸ್ಲೀಕ್ ಇಂಟೀರಿಯರ್ಸ್ , ಎಲೆಕ್ಟ್ರಿಕ್ ಕಾರುಗಳ ಬಗ್ಗೆ ಕೇಳಿದ್ದೆವು ಅಷ್ಟೇ . ಇವರ ಮನೆಯಲ್ಲಿ  ನನಗೆ ಆಸಕ್ತಿಕರವಾಗಿ ಕಂಡದ್ದು ಸೋಲಾರ್ ಎಲೆಕ್ಟ್ರಿಕ್ ಪವರ್ ಸಿಸ್ಟಮನ್ನು ಅಳವಡಿಸಿಕೊಂಡು ಇವರು ಮನೆಬಳಕೆಗಾಗಿ ವಿದ್ಯುತ್ ತಯಾರಿಸಿಕೊಳ್ಳುವ ಬಗೆ, ಇದು ಮೇನ್ ಗ್ರಿಡ್ ಗೆ ಕನೆಕ್ಟ್ ಆಗಿರುವುದರಿಂದ ಹೆಚ್ಚುವರಿ ವಿದ್ಯುತ್ ಗ್ರಿಡ್ ಗೆ ಹೋಗುತ್ತದೆ ಹಾಗೆಯೇ ಕಡಿಮೆಯಾದಾಗ ಅಲ್ಲಿಂದ ಸಪ್ಲೈ ಆಗುತ್ತದೆ . ನಾನು ಚೆನ್ನೈಯಲ್ಲಿದ್ದಾಗ ಐ . ಐ . ಟಿ ಪ್ರೊಫೆಸರ್ ಒಬ್ಬರು ಇಂತಹದನ್ನು ಅಳವಡಿಸಿಕೊಂಡಿದ್ದರೆಂದೂ , ೨೦೧೫ ರ ನೆರೆಯಲ್ಲಿ ಊರಿಡೀ ವಿದ್ಯುತ್ ಇಲ್ಲದಿದ್ದಾಗ ಅವರಿಗೆ ವಿದ್ಯುತ್ ಪೂರೈಕೆ ಸರಾಗವಾಗಿತ್ತೆಂದೂ ಪತ್ರಿಕೆಯಲ್ಲಿ ಓದಿದ್ದು ನೆನಪಾಯಿತು .  

ಮೊಂಟೆರ್ ಬೇ ಅಕ್ವೇರಿಯಂ ಸಮುದ್ರ  ಜೀವಿಗಳ ಸಂರಕ್ಷಣೆ, ಪ್ರದರ್ಶನಕ್ಕಾಗಿ ಮುಡಿಪಾಗಿಟ್ಟ ನೊನ್ ಪ್ರಾಫಿಟ್ ಸಂಸ್ಥೆ. ಇಲ್ಲಿ ಅಕ್ವೇರಿಯಂ ನ ಒಳಗಡೆ ಜಯಂಟ್ ಕೆಲ್ಪ್ ಫಿಶ್ , ರೊಕ್ ಫಿಶ್ , ಸ್ವೆಲ್  ಶಾರ್ಕ್ , ಗ್ರೀನ್ ಅನಿಮೋನ್ ,ರೆಡ್ ಕೋರಲಿನ್ ಅಲ್ಗೆ, ಹರ್ಮಿಟ್  ಕ್ರೇಬ್, ಸಿ ಓಟರ್ಸ್   ಇನ್ನೂ ಮುಂತಾದ ನೋಡಿ ಮುಗಿಯದಷ್ಟು ಸಮುದ್ರ ಜೀವಿಗಳನ್ನು ಆಕರ್ಷಕವಾಗಿ ಪ್ರದರ್ಶಿಸಲಾಗಿದೆ . ಒಂದು ಅತಿದೊಡ್ಡ ಅಕ್ವೇರಿಯಂ ನೊಳಗೆ ಮನುಷ್ಯನೊಬ್ಬನನ್ನು  ನೋಡಿದೆ (ಮೇಂಟೇನ್ ಮಾಡುವವನಿರಬೇಕು)! ಇಲ್ಲಿಂದ ಸಮುದ್ರ ಜೀವಿಗಳನ್ನು ವೀಕ್ಷಿಸುವ ಸೌಕರ್ಯವೂ ಇದೆ, ಕೆಲವೊಮ್ಮೆ ವೇಲ್ ಗಳೂ ಕಾಣುತ್ತವೆಯಂತೆ. ಆ ದಿನ ಸಂಜೆ  ಕೊಸ್ಟ್ ಕೋ ಎಂಬ ಅತಿದೊಡ್ಡ ಮಳಿಗೆಯಲ್ಲಿ ಒಣಹಣ್ಣುಗಳು ಹಾಗೂ ಚಾಕೊಲೇಟುಗಳನ್ನು ಕೊಂಡುಕೊಂಡೆವು. ನಾನು ಟೆಕಿಲಾ ಅಂದದ್ದನ್ನು ಕೇಳಿ ಮನೆಗೆ ಟೆಕಿಲಾ  ಬಂತು , ರಾತ್ರಿ ನಿಂಬೆ ಹಣ್ಣು , ಉಪ್ಪಿನೊಂದಿಗೆ ಸೇವಿಸಿದೆವು !!  ನಯನಳ ಮನೆಯ ಹಿತ್ತಲಲ್ಲಿ ಎಲ್ಲ ರೀತಿಯ ಹಣ್ಣಿನ ಮರಗಳಿವೆ. ಪ್ರೂನ್ಸ್ ಎಂಬ ಹಣ್ಣುಗಳನ್ನು ಕವರಿನಲ್ಲಿ ಹಾಕಿಕೊಟ್ಟಳು . ಏರ್ ಪೋರ್ಟ್ ಲ್ಲಿ ಉಳಿದವರೊಂದಿಗೆ ಹಂಚಿಕೊಂಡು ತಿಂದೆ, ಎಲ್ಲರಿಗೂ ಬಹಳ ಇಷ್ಟವಾಯಿತು. ಕೊನೆಯ ವಾರದಲ್ಲಿ ನಮ್ಮಲ್ಲಿ ಕೆಲವರಿಗೆ ಏನೇನೋ ಹುಕಿಗಳು, ಶಾಂತಾರಾಮರು ಇನ್ನೊಬ್ಬ ಕನ್ನಡಿಗರೊಂದಿಗೆ ಎಲ್ಲೆಂದರಲ್ಲಿ ಸಿಗರೇಟು ಸೇದಲು ಓಡುತ್ತಿದ್ದರು, ನನಗೋ ಇವರೆಲ್ಲಿ  ಗೊತ್ತಾಗದೇ  ನಾನ್ ಸ್ಮೋಕಿಂಗ್ ಜಾಗದಲ್ಲಿ ಸೇದುತ್ತಾರೋ ಎಂದು ಭಯ, ಮನೀಶ್ ಅವರಿಗೆ ಸ್ಟಾರ್ ಬಕ್ಸ್ ನ ಕಾಪಿಯ ರುಚಿ ಹತ್ತಿತ್ತು, ಉದ್ದುದ್ದ ಕಪ್ ಗಳನ್ನು ಕೈಯಲ್ಲಿ ಹಿಡಿದು ಓಡಾಡುತ್ತಿದ್ದರು, ನಾನು ಇಲ್ಲಿ ಸಿಗುವ ಹಾಲಿಗೆ ಮರುಳಾದೆ, ಸ್ಟಾರ್ ಬಕ್ಸ್ ನಲ್ಲಿ ಪುಟ್ಟ ಬಾಟಲುಗಳಲ್ಲಿ  ಸಿಗುತ್ತಿತ್ತು.

ಕೊನೆಯ ದಿನ ಶಾಂತಾರಾಮರು ಬೇಡವೆಂದರೂ ಕೊಂಡು ಕುಡಿಯಲು ಸಮಯ ಸಿಗದೇ ಏರ್ ಪೋರ್ಟ್ ನಲ್ಲಿ ಬಿಟ್ಟು ಬಂದೆ .  ವಾಪಸು ಬರುವ ವಿಮಾನ ಹತ್ತಿದೆವು, ದೆಹಲಿ ಏರ್ ಪೋರ್ಟ್ ತಲುಪಿದೊಡನೆ ಸುಖವಾಗಿ ಪ್ರಯಾಣ ಮುಗಿಸಿ ಬಂದೆವು ಎನ್ನುವ ಖುಷಿ. ಬೆಂಗಳೂರಿಗೆ ತಲುಪಿದ ಮರುದಿನ ಬೆಳಗಿನ  ಉಪಹಾರಕ್ಕೆ ಜಯನಗರದ ಮೈಯ್ಯಾಸ್ ಗೆ ಓಡಿದೆವು. ಶಾಂತಾರಾಮರು ಸೋಮವಾರದಿಂದ ತರಗತಿಗಳಿವೆ ಎಂದು ಚುರುಕಾಗಿ ಓಡಾಡಿ ತಮ್ಮ ಕೆಲಸಗಳನ್ನು ಮಾಡಿಕೊಂಡು  ಜೆಟ್ ಲ್ಯಾಗನ್ನು ಜಯಿಸಿಬಿಟ್ಟರು. ನಾನು ಮಾತ್ರ ಮುಂದಿನ ನಾಲ್ಕೈದು ದಿನಗಳು ಹಗಲೋ, ಇರುಳೋ ತಿಳಿಯದಂತೆ ನಿದ್ದೆ ಮಾಡುತ್ತಾ  ಕನಸಿನಲ್ಲಿ ಬಸ್ಸು, ಕಾರು, ವಿಮಾನಗಳನ್ನು ಹತ್ತುತ್ತಾ ಎಚ್ಚರವಾದಾಗ ಎಲ್ಲಿದ್ದೇನೆಂದು ತಿಳಿಯದ ಅವಸ್ಥೆಯಲ್ಲಿದ್ದೆ !!. ಆ ವರ್ಷದ ಕೊನೆಯಲ್ಲಿ ಕೊರೋನದ ಹಾವಳಿ ಶುರುವಾಯಿತು , ಮುಂದಿನ ಎರಡು ವರ್ಷಗಳು ಮನೆಯಲ್ಲೇ ಇದ್ದೆವು. ಅಮೆರಿಕ ಪ್ರವಾಸದ ಹೊಸ ಅನುಭವಗಳ, ನಯನಳ ಮನೆಯಲ್ಲಿ ಕಳೆದ ಚಂದದ ಎರಡು ದಿನಗಳ ನೆನಪುಗಳು  ಆಗಿಂದಾಗ್ಗೆ ಮನದಲ್ಲಿ ಮೂಡುತ್ತಲೇ ಇದ್ದವು. 

‍ಲೇಖಕರು avadhi

February 13, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: