ನೀಲಕುರಿಂಜಿ ಬೆನ್ನು ಹತ್ತಿ ಹೋದರೆ ಆಕಾಶಗಂಗೆ ಕಂಡಿತು…

ವಾಣಿ

ಶನಿವಾರದ ಒಂದು ಬೆಳಗ್ಗೆ ಟ್ವಿಟರ್‌ನಲ್ಲಿ ಒಂದು ಪೋಸ್ಟ್ ನೋಡಿದೆ. ಪತ್ರಕರ್ತರೊಬ್ಬರು ಚಿಕ್ಕಮಂಗಳೂರಿನಲ್ಲಿ ನೀಲ ಕುರಿಂಜಿ ಅರಳಿದ ಚಿತ್ರ ಒಂದನ್ನು ಹಾಕಿದ್ದರು. ಅವರ ಗೆಳೆಯರು ಯಾರೋ ಚಿಕ್ಕಮಂಗಳೂರಿನವರು ಆ ಚಿತ್ರವನ್ನು ಇವರಿಗೆ ಕಳಿಸಿದ್ದರಂತೆ.

ನಾನು ನೀಲ ಕುರಿಂಜಿಯನ್ನು ಹುಡುಕುತ್ತಾ ಹೊರಟದ್ದು ಮೂರು ವರ್ಷದ ಕೆಳಗೆ. ಪ್ರತಿ ವರ್ಷವೂ ಹ್ಯಾಪೆ ಮೋರೆ ಹಾಕಿಕೊಂಡೆ ಬಂದಿದ್ದೆ. ಒಂದು ವರ್ಷ ನೀಲಗಿರಿಯಲ್ಲಿ ಅರಳಿದೆ ಎಂದಿದ್ದರು. ಮತ್ತೊಂದು ವರ್ಷ ಕೊಡಗಿನಲ್ಲಿ ಅರಳಿದೆ ಎಂದಿದ್ದರು. ಮಗದೊಂದು ವರ್ಷ ಪಶ್ಚಿಮ ಘಟ್ಟದ ಇನ್ನೊಂದು ಪರ್ವತದಲ್ಲಿ ಎಂದಿದ್ದರು. ಆದರೆ ಎಲ್ಲೂ ಸಿಕ್ಕಿರಲಿಲ್ಲ. ಈ ವರ್ಷವೂ ಈ ಹೂವು ಮುಳ್ಳಯ್ಯನಗಿರಿಯಲ್ಲಿ ಅರಳಿದೆ ಎಂದು ಸುಮಾರು ಫೋಟೋ ವಿಡಿಯೋಗಳು instagram ನಲ್ಲಿ ಓಡಾಡುತ್ತಿದ್ದವು ಇವೆಲ್ಲ ಬರೀ ಸುಳ್ಳು ಅಂದುಕೊಂಡು ಬಿಟ್ಟು ಬಿಟ್ಟಿದ್ದೆ. ಟ್ವಿಟ್ಟರಿನಲ್ಲಿ ನಾನು ಫಾಲೋ ಮಾಡುವ ಈ ಪತ್ರಕರ್ತರು ಸ್ವಲ್ಪ ನಂಬಿಕಸ್ತರು. ಇದುವರೆಗೂ ಸುಳ್ಳು ಮಾಹಿತಿಯನ್ನು ಹಾಕಿಲ್ಲ . ಇದು ನಿಜವಿರಬಹುದೇನೋ ಅನಿಸಿತ್ತು.

ಐದು ನಿಮಿಷ ಹೋಗುವುದೋ ಬೇಡವೋ ಯೋಚಿಸಿ.. ಹೊಸದಾಗಿ ಕಾರು ಬೇರೆ ಕೊಂಡುಕೊಂಡಿದ್ದೆ, ಒಮ್ಮೆ ನೋಡಿಯೇ ಬಿಡುವ ಎಂದು ಮಧ್ಯಾಹ್ನ 2 ಗಂಟೆಗೆ ಗಾಡಿ ತೆಗೆದೆ. ಹಿಂದೆ ಮುಂದೆ ಏನು ಯೋಚಿಸದೆ ಹೊರಟೆಬಿಟ್ಟೆ. ಚಿಕ್ಕಮಂಗಳೂರು, ಊರೇನು ಹೊಸದಲ್ಲ. ಆದರೆ ಉಳಿದುಕೊಳ್ಳಲು ಜಾಗ ಹುಡುಕುವಷ್ಟು ಸಮಯ ಇರಲಿಲ್ಲ. ಸರಿ, ಅಲ್ಲೇ ಹೋಗಿ ಯಾವುದೋ ಒಂದು ರೂಮಿನಲ್ಲಿ ಉಳಿದರಾಯ್ತು ಎಂದುಕೊಂಡು ಹೊರಟೆ. ಹಾಸನ ತಲುಪುವಷ್ಟರಲ್ಲಿ ಸಂಜೆ ಐದಾಗಿತ್ತು. ಗೂಗಲ್ ಸಹಾಯದಿಂದ ರೂಮ್ ಹುಡುಕಿದ್ದೆ. ಜಾಗದ ಹೆಸರು ʼಸ್ವರ್ಗʼ ಅಂತ. ಹೆಸರು ಕೇಳೇ ಸ್ವಲ್ಪ ಕುತೂಹಲವಾಗಿ ಅಲ್ಲಿಯೇ ಉಳಿಯುವ ಎಂದು ತೀರ್ಮಾನಿಸಿ ಅವರಿಗೆ ಕಾಲ್ ಮಾಡಿದೆ. ಒಂದೇ ಒಂದು ರೂಮಿದೆ ಸಂಜೆ 8ರ ಮೇಲೆ ಸಿಗುತ್ತದೆ ಎಂದರು. ಆಗಲೇ ಐದು ಗಂಟೆಯಾಗಿತ್ತು. ಇನ್ನೇನು ಒಂದುವರೆ ತಾಸಿನ ದಾರಿ ಇಷ್ಟು ಬೇಗ ಹೋಗಿ ಏನು ಮಾಡುವುದೆಂದು, ಹಾಸನ ಮುಟ್ಟುವ ಸ್ವಲ್ಪ ಹಿಂದೆ ಎರಡು ಬದಿಗಳಲ್ಲಿ ತೋಟಗಳು ಕಂಡವು. ಗಾಡಿ ಪಕ್ಕಕ್ಕೆ ಹಾಕಿ ತೋಟಗಳ ಒಳಗೆ ನುಗ್ಗಿ ನೋಡಿದರೆ ಜೋಳಗಳು ಚೆನ್ನಾಗಿ ಬೆಳೆದು ನಿಂತಿದ್ದವು. ಮೂರ್ನಾಲ್ಕು ಜೋಳಗಳನ್ನು ಕತ್ತರಿಸಿ ತಂದೆ. ಕದ್ದು ತಿನ್ನುವುದರಲ್ಲಿ ಏನೋ ಸುಖ. ನಾಲ್ಕು ಹಸುಗಳನ್ನು ತೋಟದ ಆಜು ಬಾಜಿನಲ್ಲಿ ಯಾರೂ ಕಟ್ಟಿ ಹೋಗಿದ್ದರು. ಸ್ವಲ್ಪ ಸುಧಾರಿಸಲು ಅಲ್ಲೇ ಮರದ ಕೆಳಗೆ ತಲೆ ಹಾಕಿ ಅರ್ಧ ಗಂಟೆ ನಿದ್ದೆ ಹೋದೆ.

ಸ್ವರ್ಗದ ಅಡ್ರೆಸ್ ಗೂಗಲ್ ಮ್ಯಾಪಿನಲ್ಲಿ ಸಿಗಲಿಲ್ಲ. ಕಾಲ್ ಮಾಡಿ ಕೇಳಿದಾಗ ಆ ಮಹಾಶಯ “ಇಲ್ಲಿಗೆ ರಸ್ತೆ ಪೂರ್ತಿಯಾಗಿ ತೋರಿಸುವುದಿಲ್ಲ. ಒಂದು ಜಾಗದ ತನಕ ಮಾತ್ರ ಗೂಗಲ್ ಮ್ಯಾಪ್ ವರ್ಕ್ ಆಗುತ್ತದೆ ನಮ್ಮ ಜಾಗವು ರಿಸರ್ವ್ ಫಾರೆಸ್ಟ್ ನ ಒಳಗಿದೆ ಹಾಗಾಗಿ ನೀವು ಕೊನೆಯ ಮೂರು ಕಿಲೋಮೀಟರ್ off ರೋಡಿನಲ್ಲೇ ಬರಬೇಕು ದಾರಿಗೆ ಬೋರ್ಡ್ ಗಳನ್ನು ಹಾಕಿದ್ದೇವೆ ಅದನ್ನು ಅನುಸರಿಸುತ್ತಾ ಬಂದರೆ ತಲುಪುತ್ತೀರಾ” ಎಂದರು. ಸರಿ ಆಯ್ತು ಮೂರೆ ಮೂರು ಕಿಲೋಮೀಟರ್ ರಸ್ತೆ ಇಲ್ಲದ ಜಾಗ ತಾನೇ ಅಂದುಕೊಂಡು ಹೊರಟೆ. ಸರಿಸುಮಾರು ಏಳು ಕಾಲು ಹೊತ್ತಿಗೆ ರಿಸರ್ವ್ ಫಾರೆಸ್ಟ್ ಮುಖ್ಯ ದ್ವಾರ ತಲುಪಿದೆ.

ಈ ಕಾಡು ಬರುವುದು ಚಿಕ್ಕಮಂಗಳೂರು ದಾಟಿದ ನಂತರ ಇದು ನನಗೆ ತಿಳಿದಿರಲಿಲ್ಲ. ಪೋಲಿಸಿನವರು ನಿಲ್ಲಿಸಿ ಎಂಟ್ರಿ ಟಿಕೇಟ್ ತೆಗೆದುಕೊಳ್ಳಲು ಹೇಳಿದರು. ಹೋಟೆಲ್‌ನ ಕನ್ಫರ್ಮೇಶನ್ ತೋರಿಸಿ ಅಪ್ಪಣೆ ಪಡೆದು ಮುಂದೆ ಸಾಗಿದೆ. ಎಂಟು ಗಂಟೆ ಹೊತ್ತಿಗೆ ಕಗ್ಗತ್ತಲು. ನನ್ನ ಕಾರಿನಲ್ಲಿ ಮೊದಲನೇ ಬಾರಿ ಲಾಂಗ್ ಡ್ರೈವ್ ಹೋಗುತ್ತಿದ್ದಿದ್ದು. ಒಬ್ಬಳೇ ಬೇರೆ ಹೋಗಿದ್ದೆ. ರಾತ್ರಿ ಸಮಯ ಮಂಜು ಒಟ್ಟುವುದು ಮರೆತುಹೋಗಿತ್ತು. ಅದು ಬೆಟ್ಟದ ಮೇಲೆ ಮಂಜು ಜೋರಾಗೆ ಇತ್ತು. ರಸ್ತೆಗಳು ಕಾಣುತ್ತಿರಲಿಲ್ಲ ಆದರೆ ಟಾರ್ ರಸ್ತೆಯಾಗಿದ್ದರಿಂದ ಧೈರ್ಯವಾಗಿ ಹೋಗಿದ್ದೆ. ಅಲ್ಲೋ ಇಲ್ಲೋ ಒಂದೊಂದು ಆಟೋಗಳು ಎದುರಿಗೆ ಹೋಗುತ್ತಿದ್ದವು. ಬೇರೆ ಯಾವುದೇ ಗಾಡಿಗಳಿಲ್ಲ, ಲೈಟ್ ಕಂಬಗಳಿಲ್ಲ, ಬೆಳಕಿಲ್ಲ. ಆಮೇಲೆ ನನಗೆ ಗೊತ್ತಾಯ್ತು ನಾನು ಯಾವುದೋ ಬೆಟ್ಟವನ್ನು ಹತ್ತುತ್ತಾ ಹೋಗುತ್ತಿದ್ದೇನೆ ಎಂದು. ಎತ್ತರ ಹೋದಷ್ಟು ನಿಶಬ್ದ ಹೆಚ್ಚಾಗುತ್ತಿತ್ತು, ಕತ್ತಲು ಕಗ್ಗತ್ತಲಾಗುತ್ತಿತ್ತು. ಚಿಕ್ಕಮಂಗಳೂರು ಬೆಟ್ಟದ ತಿರುವುಗಳಲ್ಲಿ ಅತಿ ಪುಟ್ಟ ಬೆಳಕಿನ ದ್ವೀಪದಂತೆ ಚಂದ ಕಾಣುತ್ತಿತ್ತು.

ಗೂಗಲ್ ಮ್ಯಾಪ್ ಡೆಸ್ಟಿನೇಷನ್ ರೀಚ್ ಆಗಿದ್ದೇನೆ ಎಂದು ತೋರಿಸಿ ಕೈ ಬಿಟ್ಟುಬಿಟ್ಟಿತ್ತು. ಸರಿ ಈ ಹೊಟೇಲಿನವರಿಗೆ ಮತ್ತೆ ಕಾಲ್ ಮಾಡುವ ಎಂದು ನೋಡಿದರೆ ನೆಟ್ವರ್ಕೆ ಇಲ್ಲ. ರಸ್ತೆ ಏನು ಕಾಣುತ್ತಿರಲಿಲ್ಲ ಆದರೆ ಎಲ್ಲೋ ಜಲಪಾತದ ಸದ್ದು ನೀರು ಹರಿಯುವ ಸದ್ದು ಜೋರಾಗಿ ಗಾಳಿ ಬೀಸುತ್ತಿರುವ ಲಕ್ಷಣಗಳು. ಅವರು ಹೇಳಿದ ಹಾಗೆ ಸ್ವರ್ಗ ಎಂಬ ಬೋರ್ಡ್ ಎಲ್ಲಿದೆ ಎಂದು ಹುಡುಕಿದೆ. ಪೂರ್ತಿ ಕತ್ತಲು. ಬೆಳಕಿನ ಒಂದು ಹನಿಯೂ ಇಲ್ಲ. ನನ್ನ ಗಾಡಿಯ ಹೆಡ್ ಲೈಟ್ ಬಿಟ್ಟರೆ ಬೇರೇನೂ ಬೆಳಕಿಲ್ಲ. ಅಲ್ಲಿ ಇಳಿದು ಹುಡುಕಿದಾಗ ಎಡಗಡೆಗೆ ಸ್ವರ್ಗ ಎಂಬ ಬೋರ್ಡ್ ಕಂಡಿತು. ಅಬ್ಬಾ!! ಎಂದುಕೊಂಡೆ.

ಕತ್ತಲಲ್ಲಿ ಕೆಂಪು ಬೋರ್ಡ್ ಅದರ ಮೇಲೆ ಆರೋ ಮಾರ್ಕ್. ಯಾವ ದಿಕ್ಕಿನಲ್ಲಿ ಹೋಗಬೇಕೆಂದು ಕಾಣುವುದಿಲ್ಲ. ಫೋನಿನಲ್ಲಿರುವ ಟಾರ್ಚಿನ ಬೆಳಕು ಬಹಳ ಕಡಿಮೆ ಎಂದು ಆ ಕಗ್ಗತ್ತಲಲ್ಲಿ ತಿಳಿಯಿತು . ರಸ್ತೆ ಸಿಕ್ಕಿತಲ್ಲ ಎಂದುಕೊಂಡು ಗಾಡಿಯನ್ನು ಇಳಿಸಿದೆ. ಮುಂದೆ ಮೂರು ಅಡಿ ಜಾಗದ ಹೊರತು ಏನೇನೋ ಕಾಣುತ್ತಿಲ್ಲ. ರಾತ್ರಿ ಬೇರೆ ಆಗೋಗಿತ್ತು ಎಲ್ಲಿಗಪ್ಪ ಬಂದೆ ಎಂದುಕೊಂಡು ನಿಧಾನವಾಗಿಯೇ ಗಾಡಿ ಓಡಿಸುತ್ತಿದ್ದೆ. ಮಳೆ ಬಂದು ರಸ್ತೆ ಇಲ್ಲದಂತಾಗಿತ್ತು. ಹೊಸದಾದ ಕಾರು ಬೇರೆ ಭಯ ಜಾಸ್ತಿ. ಯಾವುದೋ ಒಂದು ತಿರುವಿನಲ್ಲಿ ಅರ್ಥವಾಯಿತು ನಾನು ಬೆಟ್ಟದ ತುದಿಯಲ್ಲಿದ್ದೇನೆ ಎಂದು. ಆದರೆ ಏನು ಕಾಣದಿದ್ದ ಕಾರಣ ಅಷ್ಟೊಂದು ಭಯವಾಗಲಿಲ್ಲ. ಮಳೆ ಜೋರಾಗಿ ಬಂದಿದ್ದರಿಂದ ಮಣ್ಣು ಕೊಚ್ಚಿ ಹೋಗಿ ಕಲ್ಲುಗಳು ಎದ್ದು ನಿಂತಿತ್ತು. ಗಾಡಿಯನ್ನು ಯಾವ ಕಡೆಗೂ ತಿರುಗಿಸಲಾಗದೆ ಹಿಂದೆ ಮುಂದೆ ಹೋಗಲಾಗದೆ ಸಿಕ್ಕಿ ಬಿದ್ದು ಪಜೀತಿಗೆ ಸಿಕ್ಕಿಹಾಕಿಕೊಂಡಿದ್ದೆ. ಒಂದು ಕಿಲೋಮೀಟರ್ ನಂತರ ಮತ್ತೊಂದು ಬೋರ್ಡ್ ಕಾಣಿಸಿತು. ಸ್ವರ್ಗಕ್ಕೆ ಇದೇ ದಾರಿ ಅಂತ ಬೇರೆ ಬರೆದಿತ್ತು. ನಾನು ಸ್ವರ್ಗ ಕಲ್ಲ ನರಕಕ್ಕೆ ಹೋಗುತ್ತಿದ್ದೇನೆ ಅನ್ನಿಸಿತು. ಸುತ್ತ ಕೂಗಿದರು ಒಂದು ನರಪಿಳ್ಳೆಯೂ ಇಲ್ಲ. ಎಂಟು ಗಂಟೆಗೆ ರಾತ್ರಿ 12 ಗಂಟೆಯಷ್ಟು ಕತ್ತಲಾಗಿತ್ತು.

ಆ ಬೋರ್ಡಿನ ಮೇಲೆ ಇರುವ ಅಂಕುಡೊಂಕು ಆರೋಗಳ ದಿಕ್ಕನ್ನು ಅನುಸರಿಸಿ ನಡೆಯುತ್ತಿರುವಾಗ ಎಲ್ಲೋ ಒಂದು ಕಡೆ ನನಗೆ ಗೊತ್ತಾಗದ ಹಾಗೆ ಕಲ್ಲು ಗಾಡಿಯ ಕೆಳಗಡೆಗೆ ತಗುಲಿ ಗಾಡಿ ಪೂರ್ತಿ ಸಿಕ್ಕಿಹಾಕಿಕೊಂಡಿತು. ದಡಾರನೆ ಕಲ್ಲು ಬಡಿದಾಗ ಜೀವವೇ ಬಾಯಿಗೆ ಬಂದಿತ್ತು. ತಿರುಗಿ ಹಿಂದೆ ಹೋಗಲು ರಸ್ತೆ ಬಹಳ ಕಡಿದಾದದ್ದು ರಿವರ್ಸ್ ಗೇರಿನಲ್ಲಿ ಹೋಗುವಷ್ಟು ಧೈರ್ಯವಿರಲಿಲ್ಲ. ಕೊಂಚವೂ ಬೆಳಕಿಲ್ಲದ ಕಾರಣ ಯೂ ಟರ್ನ್ ಮಾಡಿ ಹಿಂದೆ ಹೋಗಲು ಆಗಲಿಲ್ಲ. ಹೊಚ್ಚಹೊಸ ಗಾಡಿ ಏನಪ್ಪಾ ಮಾಡಿಕೊಂಡೆ ಅಂತ ನನ್ನನೇ ನಾನು ಶಪಿಸುತ್ತಾ ಏನು ಮಾಡುವುದೆಂದು ತೋಚದೆ ಸುಮ್ಮನೆ ನಿಂತೆ. ಸ್ವಲ್ಪ ಗಾಬರಿ ಕೂಡ ಆಗಿತ್ತು. ಸ್ವರ್ಗವೇನೋ ಒಂದು ಕಿಲೋಮೀಟರ್ ದೂರದಲ್ಲಿಯೇ ಇತ್ತು. ಗಾಡಿಯನ್ನು ರಸ್ತೆಯಲ್ಲೇ ಬಿಟ್ಟು ಹೋಗಲು ಮನಸೊಪ್ಪುತ್ತಿರಲಿಲ್ಲ. ಹೊಸಗಾಡಿಯ ವ್ಯಾಮೋಹ ನೋಡಿ. ಆ ಹೋಟೆಲಿನ ಮಹಾಶಯರನ್ನು ಕೂಡ ಕ್ಷಪಿಸುತ್ತಾ ಅಲ್ಲಿಯೇ ನಿಂತೆ.

ಫೋನ್ ನೆಟ್ವರ್ಕ್‌ಗಾಗಿ ತಡಕಾಡಿದೆ. ಹಿಂದೆ ಮುಂದೆ ಹತ್ತಾರು ಹೆಜ್ಜೆ ನಡೆದರೂ ನೆಟ್ವರ್ಕ್ ಸಿಗಲಿಲ್ಲ. ಸಾಕಾಗಿ ಕೊನೆಗೆ ಗಾಡಿ ಒಳಗೆ ಕುಳಿತೆ. ಹೆಡ್ ಲೈಟ್ ಆನ್ ಇದ್ದರೆ ಪ್ರಾಣಿಗಳು ಏನಾದರೂ ಬಂದು ಬಿಡಬಹುದು ಎಂದುಕೊಂಡು ಹೆಡ್ ಲೈಟ್ ಆಫ್ ಮಾಡಿದೆ. ರಾತ್ರಿ ಹೇಗೆ ಕಳೆಯುವುದು ಎಂದು ಯೋಚಿಸಲು ಶುರುಮಾಡಿದೆ. ಅರ್ಧ ಗಂಟೆಯಾಯಿತು. ತಲೆ ಚಿಟ್ಟು ಹಿಡಿದು ಕಾರಿನಿಂದ ಹೊರಗೆ ಬಂದು ಎಲ್ಲಿಗೆ ಬಂದು ತಗಲಾಕ್ಕೊಂಡೆ ದೇವರೇ! ಎಂದು ಆಕಾಶದತ್ತ ತಲೆ ಎತ್ತಿದೆ. ನನ್ನ ಕಣ್ಣಿಗೆ ನಂಬಲಾರದ ಆಶ್ಚರ್ಯ. ಭಯದಲ್ಲಿ ಸ್ವಲ್ಪ ಗಾಬರಿಯಾಗಿದ್ದೆ. ಕಣ್ಣಿಗೆ ಕಾಣುತ್ತಿದ್ದನ್ನು ನಂಬಲಾರದೆ ಹೋದೆ. ಗಗನದಲ್ಲಿ ಆಕಾಶಗಂಗೆ ಗ್ಯಾಲಕ್ಸಿ, ದರ್ಶನ!! ರೆಪ್ಪೆ ಮಿಟುಕಿಸದೆ, ಕಣ್ಣು ಬಾಯಿ ತೆಗೆದು ಆಶ್ಚರ್ಯದಲ್ಲಿ ನೋಡುತ್ತಾ ಮಿಲ್ಕಿ ವೇ ಗ್ಯಾಲಕ್ಸಿ!!!!! ಎಂದು ಕೂಗಿತು ಮನಸು.

ನನಗೆ ಸಿಕ್ಕ ಅತಿ ಸುಂದರ ಸರ್ಪ್ರೈಸ್. ಪ್ರಕೃತಿಯೇ ಕೊಟ್ಟ ಸರ್ಪ್ರೈಸ್ ಅನ್ನಿಸಿತ್ತು. ಬರಿಗಣ್ಣಿಗೆ ಇಷ್ಟು ಚೆನ್ನಾಗಿ ಕಾಣಬಹುದೆಂದು ಊಹಿಸಿರಲಿಲ್ಲ. ಬರೀ ಚಿತ್ರಗಳಲ್ಲೇ ಆಕಾಶಗಂಗೆಯನ್ನು ನೋಡಿದ್ದೆನಾದ್ದರಿಂದ ಸ್ವಲ್ಪ ಸಂಶಯದಲ್ಲೂ ಮತ್ತೊಮ್ಮೆ ಮಗದೊಮ್ಮೆ ನೋಡುತ್ತಾ ನಿಂತೆ. ಅದರ ಆಕಾರ, ಮುಖ ಬಾಲ, ಹಾಲಿನ ನೊರೆಯಂತಿದ್ದ ನಕ್ಷತ್ರ ಪುಂಜ… ಅಬ್ಬಬ್ಬಾ ಎಷ್ಟು ನೋಡಿದರೂ ಮನತಣಿಯಲಿಲ್ಲ.

ಕಾರು ಸಿಕ್ಕಿ ಬಿದ್ದಿದ್ದು ಮರೆತು ಹೋಗಿತ್ತು. ಸ್ವಲ್ಪ ಮುಂದೆ ಹೋಗಿ ನೋಡಿದರೆ ಮತ್ತೊಂದು ತಿರುವಿನಲ್ಲಿ ಇನ್ನೊಂದು ಬೋರ್ಡಿನ ಮೇಲೆ “the road to swarga is not easy” (ಸ್ವರ್ಗಕ್ಕೆ ಹೋಗುವ ದಾರಿ ಸುಲಭದಲ್ಲ) ಎಂದು ಬರೆದಿತ್ತು. ಆ ಮಾಲೀಕನ ಮೇಲೆ ಅಸಾಧ್ಯ ಕೋಪ ಬಂತು. ಯಾವ ಮೂಲೆಯಲ್ಲಿ ಜಾಗ ಮಾಡಿದ್ದಾನೋ ಅಂದುಕೊಂಡೆ. ಆಕಾಶ ಗಂಗೆ ಕಂಡ ತಕ್ಷಣ ಸ್ವರ್ಗವೇ ಕಣ್ಣೆದುರಿಗೆ ಬಂದಿಳಿದಿತ್ತು.

ನಾನಿದ್ದದ್ದು 4750 ಅಡಿ ಎತ್ತರದಲ್ಲಿ. ಆಕಾಶ ಗಂಗೆಯ ಪರದೆಯಲ್ಲಿ ಉಲ್ಕೆಗಳು ಕೂಡ ಕಂಡಿತು. ಅರೆರೆ, ನಕ್ಷತ್ರಗಳು ಬೀಳುತ್ತಿವೆ!! ನಮ್ಮ ಬೊಗಸೆಗೆ ಬೀಳುತ್ತಿದೆ ಎನ್ನುವಷ್ಟು ಖುಷಿ.

ಚಿಕ್ಕ ಮಗುವಿನಂತೆ ಇವೆಲ್ಲವನ್ನೂ ಕಂಡು ಕುಣಿದು ಕುಪ್ಪಳಿಸಿದ್ದೆ. ಎಷ್ಟು ಸಂತಸ ವೆಂದರೆ ಕಣ್ಣುಗಳು ತುಂಬಿಬಂದಿತ್ತು. ಈ ಅಗಾಧ ಸುರುಳಿಯಕಾರದ ಗ್ಯಾಲಕ್ಸಿಯ ಯಾವುದೋ ಒಂದು ತಿರುವಿನಲ್ಲಿ ನಮ್ಮ ಭೂಮಿಯ ಲೊಕೇಶನ್ ಇದೆ. ಆ ಭೂಮಿಯ ಯಾವುದೋ ಒಂದು ಗುಡ್ಡದ ಮೂಲೆಯ ತಿರುವಿನಲ್ಲಿ ನಾನು ನಿಂತಿದ್ದೇನೆ ಎಂದು ಊಹಿಸಿಕೊಂಡು ಮೈಯೆಲ್ಲ ರೋಮಾಂಚನವಾಯಿತು.

ನಮ್ಮ ಭೂಮಿಯು ಈ ಗ್ಯಾಲಕ್ಸಿಯ ತಿರುವುಗಳಲ್ಲಿ ಆಗಾಗ ನನ್ನದೇ ಪರಿಸ್ಥಿತಿಯನ್ನು ಅನುಭವಿಸಬೇಕಾಗಿತ್ತೋ ಏನೋ ಆಗಾಗ ಎಂದು ಊಹಿಸಿಕೊಂಡು ಸಮಾಧಾನಿಸಿಕೊಂಡೆ.

ಕೊನೆಗೆ ಎದುರುಗಡೆಯಿಂದ ಎರಡು ಜೀಪುಗಳು ಬರುತ್ತಿದ್ದದ್ದು ಕಾಣಿಸಿ ಓ ಇನ್ನು ಭೂಮಿಯ ಮೇಲೆ ಇದ್ದೇನೆ ಎಂದು ಭಾಸವಾಗಿ ವಾಸ್ತವಕ್ಕೆ ಬಂದಂತಾಯಿತು.

ಆ ಹೋಟೆಲಿನಲ್ಲಿ ಉಳಿದುಕೊಂಡಿದ್ದ ಅತಿಥಿಗಳನ್ನು ವಾಪಸ್ಸು ಬಿಡಲು ಜೀಪುಗಳು ಹೊರಟಿದ್ದವು. ಅವರನ್ನು ಅಡ್ಡ ಹಾಕಿ ಅವರ ಸಹಾಯದಿಂದ ನನ್ನ ಕಾರನ್ನು ಕಲ್ಲಿನ ಮೇಲಿಂದ ಇಳಿಸಿ ಕೊನೆಗೂ ಸ್ವರ್ಗದ ಮೆಟ್ಟಿಲು ಹತ್ತಿದೆ. ಒಂದು ರಾತ್ರಿ ಉಳಿದುಕೊಳ್ಳಲು ಸುಮಾರಾದ ಜಾಗವೇ. ತೋಟವೇನೋ ಬಹಳ ಚೆನ್ನಾಗಿತ್ತು. ಆದರೆ ಚೆನ್ನಾಗಿ ಮೇಂಟೆನ್ ಮಾಡಿಲ್ಲ. ರೂಮ ತಲುಪುವಷ್ಟರಲ್ಲಿ ಸಾಕಾಗಿತ್ತು. ಅಷ್ಟೇನೂ ಕ್ಲೀನಾಗಿ ಇಲ್ಲದ ರೂಮ್ ನೋಡಿ ಸ್ವಲ್ಪ ಕಿರಿಕಿರಿಯಾಗಿ ಊಟ ಮಾಡದೆ ಮಲಗಿಬಿಟ್ಟೆ. ಆ ಮ್ಯಾನೇಜರಿಗೆ ಬೆಳಗ್ಗೆನೇ ಚೆಕ್ ಔಟ್ ಮಾಡ್ತೀನಿ. ವಾಪಸ್ ಹೋಗಲು ಒಂದು ಜೀಪನ್ನು ಬುಕ್ ಮಾಡಿಕೊಡಿ ಹಾಗೂ ನನ್ನ ಕಾರನ್ನು ಸೇಫ್ ಆಗಿ ಮುಖ್ಯ ದಾರಿ ಮುಟ್ಟಿಸಬೇಕು ಎಂದು ಹೇಳಿ ಮಲಗಿದೆ.

ಬೆಳಗಿನ ಜಾವ ಐದೂವರೆಗೆ ಎದ್ದರೆ ಮೋಡಗಳು ಕೆಳಗಳಿದಿದ್ದವು. ಕಾಫಿ ತೋಟದಲ್ಲಿ ಮೋಡಗಳನ್ನು ಬಿಟ್ಟರೆ ಬೇರೇನೂ ಕಾಣುತ್ತಿಲ್ಲ. ಆರು ಗಂಟೆಯ ಹೊತ್ತಿಗೆ ಕೊಟ್ಟ ಕಾಫಿ ಅದ್ಭುತವಾಗಿತ್ತು. ಕಾಫಿಯನ್ನು ಸವಿಯುತ್ತಾ ಇಡೀ ತೋಟ ಅಡ್ಡಾಡಿದೆ. ಮೋಡಗಳ ಮುಸುಕಿನಲ್ಲಿ ಕಾಫಿ ಗಿಡಗಳು ಸಿಲ್ವರ್ ಮರಗಳು ಚಿತ್ರ ವಿಚಿತ್ರವಾದ ಬಣ್ಣ ಬಣ್ಣದ ಹೂಗಳು. ಕಾಫಿ ಗಿಡಗಳಿಗೆ ಚಳಿಯಾಗಬಹುದು ಏನೋ ಎಂದು ಮೋಡಗಳು ಬೆಡ್ ಶೀಟಿನ ಹಾಗೆ ಗಿಡಗಳನ್ನು ತಬ್ಬಿ ಮಲಗಿಸಿದ್ದವು.

ಮೋಡಗಳು ಕರಗಿ ಹಸಿರು ಬೆಳಕಿಗೆ ಬರಲು ಅರ್ಧ ತಾಸಾಯಿತು.

ಅಷ್ಟರಲ್ಲಿ ಜೀಪ್ ಒಂದು ತಯಾರಾಗಿ ಬಂದಿತ್ತು. ನಮ್ಮ ಜೀಪಿನ ಡ್ರೈವರ್ ಅಲ್ಲಿಯೇ ಯಾವುದೋ ಪಕ್ಕದ ಊರಿನವರಂತೆ. ನೀಲಕುರಿಂಜಿಯ ಬಗ್ಗೆ ಕೇಳಿದಾಗ “ಅಯ್ಯೋ ಮೇಡಂ, ಅವೆಲ್ಲ ಆಗಲೇ ಅರಳಿ ಮುದುಡಿ ಆಯಿತು” ಅಂದರು. ಅವರ ಮಾತು ಕೇಳಿ ಮುಖಬಾಡಿತು. ತಕ್ಷಣವೇ “ಇಲ್ಲ, ಇಲ್ಲ ಇನ್ನೂ ಕೊಂಚ ಹೂಗಳು ಬಾಕಿ ಇದೆ ಇಲ್ಲೇ ದಾದಾ ಬುಡನ್ಗಿರಿಯಲ್ಲಿದೆ. ಕಡಿದಾದ ದಾರಿ ಹೋಗೋಣವೇ?” ಎಂದರು. “ಬನ್ನಿ ಕೇಳುವುದೇನು, ಹೋಗೋದೇ” ಅಂತ ಹೊರಟೆವು.

ಮಾಣಿಕ್ಯಧಾರ ಜಲಪಾತಕ್ಕೆ ಹೋಗುವ ದಾರಿಯಲ್ಲಿ ಎಲ್ಲೋ ಒಂದು ಎಡ ತಿರುವು ತೆಗೆದುಕೊಂಡು ಗುಡ್ಡಗಾಡಿನ ಸುತ್ತುಗಳಲ್ಲಿ ಹೊರಟೆವು. ಮೋಡಗಳ ಕಣ್ಣ ಮುಚ್ಚಾಲೆ ಆಟದಲ್ಲಿ ನೀಲಿ ಪರ್ವತಗಳ ಮೋಹಕ ನೋಟ ಇಣುಕುತ್ತಿತ್ತು. ಇಡಿ ಬೆಟ್ಟವೇ ನೀಲಿಯಾಗಿ ಕಂಡಿತ್ತು. ಕೊನೆಗೂ ನೀಲಕುರಿಂಜಿ ಹೂಗಳ ದರ್ಶನವಾಯಿತು. ಗಾಡಿ ಇಳಿದು ಬೆಟ್ಟಗಳನ್ನು ಹತ್ತುತ್ತಾ ಹೋದೆ. ಈ ಗಿಡಗಳು ಒಂಥರಾ ನೀರಿನ ಪಾಕೆಟ್ಗಳ ಹಾಗೆ. ಮೋಡಗಳಿಂದ ತೇವಾಂಶವನ್ನು ಪೂರ್ತಿ ಹಿಡಿದಿಟ್ಟುಕೊಂಡಿರುತ್ತದೆ. ಬೆಟ್ಟ ಹತ್ತುತ್ತಾ ಹೋದರೆ ಬಟ್ಟೆಯೆಲ್ಲ ಒದ್ದೆಯಾಗಿ ಹೋಗಿತ್ತು. ನೀಲಿಯಲ್ಲಿನ ಅದೆಷ್ಟೋ ಛಾಯೆಗಳು ಈ ಹೂಗಳಲ್ಲಿದ್ದವು. ನಮ್ಮ ದಕ್ಷಿಣ ಭಾರತದ ನೀಲಗಿರಿ ಬೆಟ್ಟಕ್ಕೆ ಆ ಹೆಸರು ಬಂದಿರುವುದು ಈ ಹೂಗಳಿಂದ ಅಂತೆ. ಈ ಹೂವು ಹನ್ನೆರಡು ವರ್ಷಗಳಿಗೊಮ್ಮೆ ಅರಳುತ್ತದೆಯಲ್ಲ ಅದನ್ನಾಧರಿಸಿ ಆ ಭಾಗದಲ್ಲಿನ ಜನ ತಮ್ಮ ವಯಸ್ಸನ್ನು ಲೆಕ್ಕ ಹಾಕುತ್ತಿದ್ದರಂತೆ. ಎರಡು ಕುರಿಂಜಿ ವಯಸ್ಸಾಯಿತು, ನಾಲ್ಕು ಕುರಂಜಿ ಹೀಗೆ..

ಸುತ್ತ ಬೆಟ್ಟಗಳು ಅದರ ಮೇಲೆ ಮೋಡಗಳ ಹಾರಾಟ ಜಿಗಿದಾಟ (ಈ ಸಿನಿಮಾದಲ್ಲಿ ತೋರಿಸುತ್ತಾರಲ್ಲ ನಾಯಕಿಯರ ಸೆರಗು ಹಾರಿ ನರ್ತಿಸುವಂತೆ ಹಾಗೆ).. ನಮ್ಮ ಸೀತಾಳಯ್ಯನಗಿರಿ ಮೇಲೆ ಮೋಡಗಳ ಸೆರಗು ಹಾರಿ ಮೋಹಕವಾಗಿ ನರ್ತಿಸುತ್ತಿತ್ತು. ನೀಲಕುರಂಜಿಯ ಬೆನ್ನು ಹತ್ತಿ ಆಕಾಶಗಂಗೆಯ ಅಪರೂಪದ ದೃಶ್ಯದಲ್ಲಿ ಮಿಂದೆದ್ದ ಮುದಗೊಂಡ ಮನಸ್ಸಿನೊಂದಿಗೆ ಬೆಂಗಳೂರಿಗೆ ವಾಪಸ್ಸಾದೆ.

‍ಲೇಖಕರು Admin

November 12, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: