ಆರ್ ತಾರಿಣಿ ಶುಭದಾಯಿನಿ ಕವಿತೆ – ನೀಲಕುರಂಜಿ…

ಆರ್ ತಾರಿಣಿ ಶುಭದಾಯಿನಿ

1. ನೀಲಕುರಂಜಿ

ನೀಲಿ ನೀಲಿ ಬಣ್ಣದ ಅಂಗಿ ತೊಟ್ಟವನೆ
ಅಪರೂಪಕ್ಕೊಮ್ಮೆ ಸಂಭವಿಸುವ ಸೋಜಿಗವ ಹೊತ್ತವನೆ
ಬಾರಯ್ಯ ಬಾರೊ, ನವನವೋನ್ಮೇಷಶಾಲಿಯೆ

ಹನ್ನೆರಡು ವರ್ಷ ಅಂತರವೇನು ಸಾಮಾನ್ಯವೇ?
ವನವಾಸ ಕಳೆದಿದ್ದು, ಕಾಡು ಬೋರೆ ಕಾರೆಹಣ್ಣು ತಿಂದು
ಕಾಲ ಹಾಕಿದ್ದು, ಬೊಗಸೆ ನೀರು ಕುಡಿದೇ ರಾತ್ರಿ ಕಳೆದಿದ್ದು
ಕಲ್ಲುಹಾಸುಗಳ ನಡುವೆ ನಡೆದು ಪಾದಗಳ ಆಣ ಹೊತ್ತಿದ್ದು
ರಾತ್ರಿ ಚಳಿಗೆ ನಡುಗಿ ಕಪ್ಪು ಕತ್ತಲೆಗೆ ಕಿರುಚಿ
ಒಬ್ಬನೇ ಇರುವ ಅನಾಮಿಕತೆಗೆ ಬೆದರಿ ಕಂಗಾಲಾಗಿ
ಓಡಿದ್ದು, ಏಕಾಂತದ ಥಂಡಿಗೆ ಬೆದರಿ ಕಾವಿಗೆ
ಮಗ್ಗುಲಲ್ಲಿ ಹೆಂಡತಿಯಿಲ್ಲವೆಂಬ ನೋವ ಹೊದಿದ್ದು

ಅವಳೇನು ಅರಮನೆಯಲ್ಲಿದ್ದಳೆ? ಹಳೆಯ ಸೀರೆಯಲಿ
ಸಿಕ್ಕುಗಟ್ಟಿದ ಜಡೆಯ ಮತ್ತೆ ಮತ್ತೆ ಮೇಲೆತ್ತಿ ಕಟ್ಟಿ
ಕೊಳಕು ಜಡ್ಡುಗಟ್ಟಿದ ನೆನಪಿನ ಸೆರಗು ಹೊದ್ದು
ರಾತ್ರಿಯ ಅನಾಚಾರದ ವಾಸನೆ ಸಂಜೆಗೇ ಗಮ್ಮ ಕೊಡುವಾಗ
ಸೇಂದಿಬ್ರಾಂದಿಗಳ ಸಿಗರೇಟು ಸುಟ್ಟವಾಸನೆ
ಮಾನಭಂಗಕ್ಕೆ ತಕ್ಕ ವೇದಿಕೆ ರಾಕ್ಷಸರ ತಾಣ
ಮೇಲ್ನೋಟಕ್ಕೆ ಥಳಥಳಿಸುವ ನಗರ
ಇಲ್ಲಿ ಅಶೋಕ, ಚೂತ, ಮಲ್ಲಿಕಾ ಬಾಣಗಳ ಹೆದೆಯೇರಿಸುವ ಮನ್ಮಥರು
ಒಳಗೊಳಗೇ ಭಯಗೊಂಡು ಬೆವೆತು
ಅಚ್ಛೇದಿನಗಳಿಗೆ ಎದುರು ನೋಡಿದ್ದು

ಪ್ರೀತಿ ಸತ್ತಿಲ್ಲ
ಹಾಗೇ ದ್ವೇಷವೂ
ನಮ್ಮಿಬ್ಬರ ಮಧ್ಯೆ
ಹಾವಿನ ಹಗೆಯಂತೆ
ಹನ್ನೆರಡು ವರ್ಷ ಕಾದ ಬಂಧ
ಹೀಗೆ ನೀಲಿಗಟ್ಟಿ ನೀಲಿ ನೀಲಿ ಕುರಂಜಿಯಾಗಿ
ಬೆಟ್ಟತೊಡೆಗಳ ಮಧ್ಯೆ
ಅರಳುವಾಗ ಪ್ರೀತಿಯಲ್ಲದೆ
ಇನ್ನೇನು ನೆನಪಾಗುವುದು ಹೇಳು?

ಹನ್ನೆರಡು ವರ್ಷ ಎಂಬುದು ಸುದೀರ್ಘ ಕಾಲ
ಕಾಯುವುದಕ್ಕೆ; ಚಪ್ಪಲಿ ಇಟ್ಟುಕೊಂಡು ಕುಳಿತು
ಅದು ಮಳೆಗೆ ಬಿಸಿಲಿಗೆ ಹದಕರಗಿ ಆಕಾರ ಕಳೆದುಕೊಂಡು
ನಂಬಿಕೆಯ ಚೂರು ಮಾತ್ರ ಉಳಿದಾಗ
ಹಠಕ್ಕೆ ಬಿದ್ದ ನಿಷ್ಠೆ
ತನ್ನ ಕಾಠಿಣ್ಯವ ತಾನೇ ಮೆಚ್ಚಿ
ಕಲ್ಲಾದಾಗ,
ನೀಲಹೂವಿನ ಕ್ಷಣ ಕ ಸೌಂದರ್ಯ ಹೊಳೆಯುವುದು

ಜೀವ ತುಂಬಬೇಕೆಂದರೆ
ಹನ್ನೆರಡು ವರ್ಷವಾದರೂ
ಚಿಂತೆಯಿಲ್ಲ, ಬಾ ಹೂವಾಗಿಸು
ಹನ್ನೆರಡು ಹನ್ನೆರಡು ಸೆಕೆಂಡುಗಳಿಗೆ
ನೀಲಿ ನೀಲಿ ಅಂಗಿಯಲಿ
ಕಣ್ಣ ಮುಂದೆ ಕಂಗೊಳಿಸು

ಮರವನಡಗಿಸಿಕೊಂಡ ಬೀಜ
ಒಂದಲ್ಲ ಒಂದು ಬಾರಿ ಹೂತು
ಮತ್ತೆ ಹಸಿರಾಗುವುದು
ಇದಕೆ ಸಂಶಯ ಬೇಡ

2. ನವಿಲೇ ನವಿಲೇ ಮಳೆ ಬಂದಾಗ ಎಲ್ಲಿದ್ದೆ?

ನವಿಲೇ ನವಿಲೇ
ಎಲ್ಲ ಬಿಟ್ಟು ಮೆಣಸಿನಕಾಯಿಗೆ
ಹಾಯುತ್ತಿದೆ
ಕೆನ್ನೀಲಿ ಬಣ್ಣದ ನವಿಲುಂಜ

ರೈತನ ಮನೆಯ
ಕಷ್ಟಸುಖದಲಿ
ಅಷ್ಟೊ ಇಷ್ಟೊ ಹಸಿರಾಗಿ
ಮಾಗಿ ಕೆಂಪಾಗಿ
ಒಣಗುತ್ತಿದ್ದ ಕಾಯಿ

ಚಿನ್ನದ ಬಣ್ಣದ ಬೀಜವ
ಕೊಕ್ಕಲ್ಲಿ ಹೆಕ್ಕಿ ಹೆಕ್ಕಿ
ಕುಕ್ಕಿ ಕುಕ್ಕಿ
ಒಡಲುಗೊಂಡು ಕೆಂಡಬೆಂಕಿಯಂತ ಕಾರವ
ಮೋಹದಲಿ ಮೇಯುವ

ಖಾರದ ಗತ್ತು ಕಳೆದುಕೊಂಡು
ನವಿಲು ಕುಣ ಯುವುದ ಬಿಟ್ಟು
ಇಲ್ಲೇ ಅಂಗಳದ ಮುಂದೆ ಆಡಿಕೊಂಡಿರುವೆ

ಕೊಯ್ಯಬೇಡ ಮುರಿಯಬೇಡಿ
ತರಿಯಬೇಡಿ ನವಿಲೆಂಬುದು ಕಾಣ
ನಿಮ್ಮ ಮನೆಯ ಕೋಳಿಯಂತೆ ಕಾಣ ರೊ

ಹೊಂದಲಾರದೆ ನಾಗರಿಕತೆಗೆ
ಕಾಡಿನ ಕಣ್ಣು ಇಂಗಿ
ನೀಟಾಗಿ ಸಫಾಯಿಗೊಂಡ
ಎರೆದ ಟ್ರಿಮ್ ಮಾಡಿದ ಗಡ್ಡ
ನೋಡಿದರೆ ಕೂದಲು
ಇಲ್ಲದಿದ್ದರೆ
ಹುಲ್ಲು

ನೆಗೆವ ನವಿಲು
ದೊಡ್ಡದನಿಯಲಿ ಕರೆವ ನವಿಲು
ಗರಿಬಿಚ್ಚಿ ಬೇಟಕ್ಕೆ
ಸಿದ್ಧವಾದ ನವಿಲು

ಕರೆದೇ ಕರೆಯುತ್ತಿದೆ ಹೆಣ್ಣ

ವಿಷವುಗುಳುವ ನಾಗರವ
ಜಾಗರವಾಡಿ ಹಿಡಿದು
ಕುಶಲತನದಲಿ ಕುಕ್ಕಿ
ನಿಲ್ಲಬಲ್ಲೆ ಬಾ ಹೆಣ್ಣೆ ಬಾ
ನೋಡು ನನ್ನಂದವ

ಗಿರಿಮರಡಿ ಗುಡ್ಡ ಗಹ್ವರದಲಿ
ಬೇಟಕ್ಕೆ ಕರೆದು ಹೆಣ್ಣ
ಸೆಳೆದು ಮೋಹದಲಿ
ಹಾಯುವ ಆಟ
ಕಡೆಗೆ ಕಣ್ಣಲ್ಲಿ ಕೂಡಿ
ಬಿಂದು ಸೇರಿ ಮಿಲನ ಪೂರ್ಣ
***

3. ಗಿಣ ಗಳಾಗಮನ

ಮತ್ತದೇ ಗಿಳಿಸರ
ತೋರಣದೊಲು ಕೋದ
ಹಸಿರು ನಿಶಾನೆ

ಒದ್ದೆಮಾತಿನ ಮಳೆಗೆ
ಪುಳಕಗೊಂಡ ಮರ
ಹೂತು, ಬಾ ಬಾ ಗಿಳಿಯೆ
ಎಂದು ಕರೆಯುವುದು

ಅದಾಗಿ ವಸಂತ ಮಬ್ಬಾಗಿ
ಕೂಗುವ ಹಕ್ಕಿ ಇಲ್ಲವಾಗಿ
ನೀರವ ಶೂನ್ಯದಲಿ ಮರ ನಿಂತಾಗ

ಮತ್ತದೇ ಗಿಣ ವಿಂಡು
ಸರ ಸರ ಕಟ್ಟಲು ಬಂದಿವೆ
ಹಿಂಡುಗಿಳಿಗಳ ಹಸಿರೇ ಹಸಿರು
ಒಂದೊಮ್ಮೆ ಕೊಂಬೆಯಲಿ ಕೂತು
ಹೂ ಹೀಚುಗಳ ಮುಟ್ಟಿ
ಪುಳಕ ಹುಟ್ಟಿಸಿದ ಸ್ಪರ್ಶಹೊತ್ತು

ಎಷ್ಟೊಂದು ಋತುಗಳು ಸಂದಿವೆ
ಮಳೆಬಿದ್ದು ಬಿದ್ದು ದೊಖರಾದ ನೆಲದಲಿ
ನೀರು ಇಂಗದೆ ಎತ್ತತ್ತಲೊ ಉಕ್ಕಿ
ಒಣಗಿ ವಾಟಗರಿಯಾದ ಮರದ ಪೊಟರೆ
ತುಂಬ ಅಕಾಲ ಮಳೆಯ ನೀರು ತುಂಬಿ
ಹಕ್ಕಿಮೊಟ್ಟೆ ತೇಲಿದೆ

ಆದರೂ ಬಂದಿವೆ ಗಿಣ ಗಳು
ಬಡಿವಾರ ಮಾಡುತ್ತಾ, ತಾವೇನೊ
ಬಂಧುತ್ವ ನೆನಪಿಸುವ ಹಸಿರಿನಂತೆ

ಮುಟ್ಟಿಸಿಕೊಳ್ಳಲೆ? ಸ್ಪರ್ಶಮಾತ್ರದಿ
ಕಲ್ಲಿನಿಂದ ಎದ್ದು ಬರಲೆ?
ಶಾಪಕ್ಕೆ ಕೊನೆಯಿಲ್ಲ
ವಿಮೋಚನೆಗೆ ಬರುವ ಗಂಡಸರೇ ಎಲ್ಲ

ಹಕ್ಕಿಸಾಲು ಸಂವಹನದ ಚುಕ್ಕಿಯಿಟ್ಟು
ಕರೆಯುವಾಗ ನಂಟಿಗೆ ಮತ್ತೊಮ್ಮೆ ಎಳಸಲೆ?
ಮತ್ತೆ ಮತ್ತೆ
ಚಕ್ಕೆ ಸಿಬಿರಲಿ ಕೋಪ ಉಕ್ಕಿಸುವ
ಮರವಾಗಲೇ?

ಮತ್ತೆ ಮತ್ತೆ ಸಂಬಂಧದ ಕಾವಿಗೆ
ಕಾತರಿಸುವ ನಾ
ಮರ

‍ಲೇಖಕರು Admin

November 12, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: