ದಾದಪೀರ್ ಜೈಮನ ಅವರ ‘ಚೂರು ಬಿಂಬ’
‘ಕಾವ್ಯಮನೆ ಪ್ರಕಾಶನ’ ಈ ಕೃತಿಯನ್ನು ಪ್ರಕಟಿಸಿದೆ.
ಈ ಕೃತಿಯ ಕುರಿತ ಡಾ.ಪ್ರಹ್ಲಾದ.ಡಿ.ಎಂ ಅವರ ಬರಹ ಇಲ್ಲಿದೆ.
ಕಾಣದ ದಾರಿಗಳಲ್ಲಿ ಮನುಷ್ಯ ಸಂಬಂಧಗಳ ಹುಡುಕಾಟದ ಯಾನ : ‘ಚೂರು ಬಿಂಬ’
-ಡಾ.ಪ್ರಹ್ಲಾದ.ಡಿ.ಎಂ.
“ಅಪ್ಪ ಮೂಡಿಸಿದ ಈ ಗಾಯಗಳು ಅದೆಷ್ಟು ನೀರು ಹಾಕಿ ತೊಳೆದರೂ ಮಾಯವಾಗುವುದಿಲ್ಲ ಎಂದು!! ಕೂಡಲೇ ಒಂದು ಮುಗುಳ್ನಗು. ಕೂಡಲೇ ಸೂಫಿಯಾಗೆ ಡೈರಿಯಲ್ಲಿ ಬರೆದಿಡುತ್ತಾನೆ. ‘ಸೋಫಿ, ಇನ್ಯಾರೂ ನನಗೆ ದಾರಿಗಳನ್ನು ನೆನಪಿಟ್ಟುಕೋ ಎಂದು ಹೇಳಲಾರರು. ನಾನು ದಾರಿಗಳನ್ನು ಮರೆತುಬಿಟ್ಟೆ…ಅಪ್ಪನನ್ನು ಅವನ ಬಗೆಗಿನ ಸೇಡನ್ನು ಕಳೆದುಕೊಂಡುಬಿಟ್ಟೆ. ನಾಳೆ ಈ ಕಣ್ಣುಗಳಲ್ಲಿ ನೀನು ಬೇರೆಯದೇ ಹೊಳಪು ನೋಡುತ್ತಿ” (ಅಪ್ಪನ ಕತ್ತರಿ, ಪುಟ,೨೩) ಹೀಗೆ ಹೇಳುವ ಕತೆಗಾರನು ಅವನೊಳಗಿನ ಅಪ್ಪನನ್ನು ಸಾಯಿಸಿ, ತನ್ನ ಹೊಸ ದಾರಿಗೆ ನಿನ್ನೆಗಳನ್ನೂ ಮಾರಾಟ ಮಾಡಿ ಮುನ್ನೆಡೆಯುವ ನಿರ್ಧಾರವೇ ಈ ಚೂರುಬಿಂಬದ ಸೂಡು ಎಂದು ಓದುಗನಿಗೆ ತಿಳಿಸುತ್ತಿದ್ದಾನೆ. ಮನುಷ್ಯನ ಬದುಕಿನ ಒಳನೋಟಗಳ ಹುಡುಕಾಟದಲ್ಲಿ ಬಿಂಬದ ಮಾರ್ಗ ಬಲುದೊಡ್ಡದು. ವ್ಯಕ್ತಿಗಳ ವೈಚಿತ್ರö್ಯವನ್ನು ಒಂದು ಬಿಂಬದಲ್ಲಿ ಹಿಡಿದಿಡಲು ಸಾಧ್ಯವೇ ಎನ್ನುವ ಪ್ರಶ್ನೆಯನ್ನು ಹಾಕಿಕೊಂಡಾಗ ಅದು ಸಾಧ್ಯವಿಲ್ಲದ ಮಾತು. ಇಲ್ಲಿನ ಕತೆಗಾರನ ಬಿಂಬವೂ ಹಾಗೇ ಯಾವುದನ್ನೋ ಹರಸಿ ಬರುವ ವ್ಯಕ್ತಿಗಳು, ಇನ್ಯಾವುದೋ ಬಿಂಬದೊಳಗೆ ಸಿಲುಕಿ, ತನ್ನ ತನ್ಮಯತೆಯನ್ನು, ತನ್ನ ಅಸ್ತಿತ್ವವನ್ನು ಮತ್ತೊಬ್ಬರಲ್ಲಿ ಕಾಣುವ ಚೂರುಗಳಂತೆ ಕತೆಗಳು ನಿಲ್ಲುತ್ತವೆ. ದಾದಾಪೀರ್ ಜೈಮನ್ ಅವರು ಈಗಾಗಲೇ ಕಥನ ಕ್ರಮದಲ್ಲಿ ಯಶಸ್ವಿಯಾಗಿದ್ದು. ಅವರಿಗೆ ಮಾತ್ರ ಈ ಚೂರದ ಬಿಂಬದೊಳಗೆ ಮತ್ತೊಂದು ಬಿಂಬವನ್ನು ಕಾಣಿಸುವಂತೆ ಸಾಧ್ಯವಾಯಿತು. ಜೈಮನ್ ಅವರ ಕಥನಲೋಕದ ಗ್ರಹಿಕೆಯ ಮಾರ್ಗ ಎರಡು ಮಾದರಿಗಳಲ್ಲಿ ನಡೆದಿದೆ. ಲೋಕಾಂತದ ಹುಡುಕಾಟ ಮತ್ತೊಂದು ಏಕಾಂತದ ಗ್ರಹಿತ್ವ. ಈ ಎರಡರ ನಡುವಿನ ಬಹುದೊಡ್ಡ ಮಾರ್ಗ ಕವಿಗೆ ಸಿಕ್ಕಂತದ್ದು ಬದುಕನ್ನು ದರ್ಶನದ ಮೂಲಕ ಲೋಕದಲ್ಲಿನ ಛಿದ್ರಗೊಂಡ ವ್ಯಕ್ತಿಗಳ ಸೂಕ್ಷ್ಮ ಸಂವೇದನೆಗಳು. ಆ ಸಂವೇದನೆಗಳು ತನ್ನ ಬದುಕಿನ ಬಹುದೊಡ್ಡ ದರ್ಶನವೆಂಬಂತೆ ಎದುರುಗೊಂಡು ಅವುಗಳಿಗೆ ಏಕಾಂತದಲ್ಲಿ ತನ್ಮಯ ಭಾವದಿಂದ ಜತನ ಕ್ರಮಕ್ಕೆ ಬಟ್ಟಿಯಿಳಿಸುವುದು. ಅಂದರೆ ಕತೆಯ ವಸ್ತುವೊಂದನ್ನ ಲೋಕಾಂತದಲ್ಲಿ ಗ್ರಹಿಸಿದ್ದನ್ನು ತನ್ನ ಏಕಾಂತತೆಗೆ ರೂಪಿಸಿಕೊಂಡಾಗಲೇ ಕತೆಗೆ ಬೇಕಾದ ಹಂದರ, ವಿಶಿಷ್ಟ ಶೈಲಿ, ತಂತ್ರ, ಭಾಷೆಗೆ ಒಗ್ಗಿಕೊಳ್ಳುತ್ತದೆ, ಅದೇ ಕತೆಗಾರನ ನಿಜಮಾರ್ಗ. ಈ ಕೆಲಸವನ್ನು ಜೈಮನ್ ಬಹುತ್ವದ ದೃಷ್ಟಿಯಲ್ಲಿ ನಿರೂಪಿಸಿದ್ದಾರೆ. ಕತೆಯ ಹೊತ್ತಿಗೆ ತೆರೆದಾಗ ನನ್ನ ಕುತೂಹಲ ‘ಚೂರುಬಿಂಬ’ ಕತೆಯ ಶೀರ್ಷಿಕೆ ಹುಡುಕಿದೆ. ಸಂಕಲನದ ಶೀರ್ಷಿಕೆಯ ತಲೆಬರೆಹದ ಕತೆ ಅಸ್ಪಷ್ಟ. ಆದರೆ ಕತೆಯ ಸೂಡಿನ ಪ್ರತಿಯೊಂದು ತಲೆಬರೆಹ ಕೂಡ ನಿಜ ಸ್ವರೂಪದ ಪಾತ್ರಗಳಲ್ಲಿ ಕತೆಗಾರ ಚೂರು ಬಿಂಬದ ಕನ್ನಡಿ ಚೂರುಗಳಂತೆ ಮತ್ತೊಬ್ಬರಲ್ಲಿ ತನ್ನನ್ನು ಕಾಣಲು ಚಡಪಡಿಸುತ್ತ ತನ್ನ ಅಸ್ತಿತ್ವದ ಹುಡುಕಾಟ ನಡೆಸುತ್ತಾನೆ. ಹೀಗಾಗಿ ಈ ದಾರಿಯು ಕತೆಗಾರನಿಗೆ ಬಹುಕಾಲದ ತಪಸ್ಸಿನಿಂದ ಲಭಿಸಿದೆಂಬಂತೆ ಕಾಣುತ್ತದೆ. ಇಲ್ಲಿ ಪ್ರತಿಯೊಂದು ಕತೆಯೂ ಛಿದ್ರಗೊಂಡ ನಗರ ಜೀವನದಲ್ಲಿ ಗ್ರಾಮೀಣ ಪರಿಸರದಿಂದ ಬಂದಂತ ವ್ಯಕ್ತಿಗಳು ನಗರವೆಂಬ ಮಾಯಜ್ವಾಲೆಗೆ ಸಿಲುಕಿ ಬದುಕಿನ ವಿಸ್ಮಯತೆಗೆ ಸಾಗುವುದು ಕಾಣಿಸುತ್ತದೆ. ಅಪ್ಪನ ಕತ್ತರಿ ಕಥೆಯೂ ಯಾವುದೋ ಒಂದು ನಿಗೂಢ ಲೋಕದಿಂದ ತೆರೆದುಕೊಳ್ಳುವ ಕಥೆಯು ಅಂತ್ಯದಲ್ಲಿ ಎಲ್ಲವನ್ನು ಪಡೆದುಕೊಂಡು. ಮತ್ತೆ ಒಬ್ಬಂಟಿಯಾಗಿ ಮರಳಿ ಬಂದು ಸೇರುವ ಕಿಟಕಿಗಳ ಜೀವಂತಿಕೆಯ ಪ್ರೀತಿಗಾಗಿ ಹಾತೊರೆಯುವ ಮನುಷ್ಯ ಸಂಬಂಧಗಳ ಹುಡುಕಾಟ ನಡೆದಿದೆ. ಇಲ್ಲಿ ಒಂದರ ಹುಡುಕಾಟ ಇನ್ನೊಂದರಲ್ಲಿ ಕಾಣುವ ಸಂತೃಪ್ತತೆಗೆ ವಿರಮಿಸುತ್ತದೆ. ‘ಕಡುನೀಲಿ ಅಂಗಿ’ ಕತೆಯಲ್ಲಿ ಗ್ರಾಮೀಣ ಪರಿಸರದಿಂದ ಬೆಂಗಳೂರೆಂಬ ಮಾಯ ನಗರಿಗೆ ಬರುವ ರಾಯಪ್ಪ ಕೋಟಿ ಕನಸ್ಸುಗಳ ಬೆನ್ನೇರಿ ನೆಮ್ಮೆದಿಯ ನಾಳೆಗಳ ಹುಡುಕಾಟಕ್ಕೆ ಬಂದಿದ್ದಾನೆ. ಆದರೇ ಯಾವುದೋ ಬೆಟ್ಟಿಂಗ್ ಎಂಬ ಮಾಯೆಯ ಹಿಂದೆ ಬಿದ್ದು ಕನಸ್ಸಿನ ಬದುಕಿಗೆ ವಿರಾಮವನ್ನು ಇಟ್ಟು ಅವನ ಬಿಂಬದ ಚೂರನ್ನು ತನ್ನ ಸ್ನೇಹಿತನಲ್ಲಿ ಕಾಣುತ್ತಾನೆ. ಕತೆಗಳ ಹೂರಣವೂ ಮುಖ್ಯವಾಗಿ ಎರಡು ಪರಿಸರವನ್ನು ಹುಡುಕುತ್ತಿದೆ. ಗ್ರಾಮೀಣ ಪರಿಸರದ ನಂಟಿನೊಂದಿಗೆ ನಗರ ಜೀವನ ಬಿಂಬದೊಳಗೆ ಸಿಲುಕಿದ ಪಾತ್ರಗಳು ಕೊನೆಗೆ ಗ್ರಾಮೀಣದೊಂದಿಗೆ ಬೆರೆಯದೇ ನಗರ ಜೀವನದ ತೊಳಲಾಟದಲ್ಲಿ ತನ್ನವರೆಲ್ಲರನ್ನೂ ಬಿಟ್ಟು ಸ್ವ-ಮಾರ್ಗದಲ್ಲಿ ಬದುಕಿನ ಅಸ್ತಿತ್ವವನ್ನು ಕಟ್ಟಿಕೊಳ್ಳಲು ಬಯಸುತ್ತಾವೆ. ಹೀಗಾಗಿ ಆ ಎರಡು ದೃಶ್ಯ ರೂಪಕಗಳು ಅದೃಶ್ಯವಾಗಿ ಒಂದನ್ನು ಬಿಟ್ಟು ಇನ್ನೊಂದು ಸಾಗದೆ ಒಂದನ್ನೊಂದು ಸಂತೈಸಿಕೊಳ್ಳುತ್ತಿವೆ. ಕತೆಗಾರನೂ ಸಹ ಹಳ್ಳಿ ಮತ್ತು ನಗರದ ಬದುಕಿನ ಅನುಭವಿಯಾಗಿದ್ದು ಇಲ್ಲಿನ ಎರಡು ಪರಿಸರಗಳೊಂದಿಗೆ, ಎರಡು ಧರ್ಮಗಳೊಂದಿಗೆ, ಎರಡು ಸಿದ್ಧಾಂತಗಳೊಂದಿಗೆ ಹತ್ತಿರದಿಂದ ಬೆರೆತ್ತಿದ್ದರಿಂದ ಈ ಕತೆಗಳ ಸೂಡನ್ನು ಸಮರ್ಥವಾಗಿ ನಿರೂಪಿಸಲು ಸಾಧ್ಯವಾಗಿದೆ.
ತಾಹನ ಪತ್ರಗಳು ಕತೆಯ ಸೂಕ್ಷö್ಮತೆ ಕವಿಯ ಅಂತಃಕರಣದ ಬಿಂಬವನ್ನು ಚಿತ್ರಿಸುತ್ತದೆ. ಇಲ್ಲಿನ ಕತೆಯಲ್ಲಿ ಅಲಿಯೆ ನಿರೂಪಕನಾಗಿದ್ದು. ಒಂದು ಸಮುದಾಯದ ಕೌಟುಂಬಿಕ ಪರದಿಯನ್ನು ಚಿತ್ತದಿಂದ ಸೃಷ್ಟಿಯತೆಗೆ ಕೊಂಡ್ಯೊಯ್ಯುವ ಧನ್ಯತೆ ಕಾಣಿಸುತ್ತದೆ. ಆರಂಭದಲ್ಲಿ ಬದುಕಿನ ನಂಟನ್ನು ಬೆಸೆಯುವ ಸ್ನೇಹಿತನೊಂದಿಗೆ ನಡೆಯುವ ಕುಶಲೋಪರಿಯಿಂದ ವಿಸ್ಮಯತೆಯ ಕಡೆಗೆ ದಾಪುಗಾಲಿಡುತ್ತ…ಇಬ್ಬರ ನಡುವಿನ ಭಿನ್ನರೂಪಗಳನ್ನು ಗುರುತಿಸಿಕೊಂಡು, ಸ್ನೇಹಿತನೊಂದಿಗೆ ತನ್ನ ಅಸ್ತಿತ್ವದ ಹುಡುಕಾಟವನ್ನು ತಿಳಿದುಕೊಳ್ಳುವ ಎರಡು ಮನಸ್ಸುಗಳೊಂದಿಗೆ ಕೊಂಡಿಯಂತೆ ದಿಲೀಪ್ ಇಲ್ಲಿ ಪತ್ರ ವ್ಯವಹಾರದ ಮೂಲಕ ನಿಷ್ಠೆಯಿಂದ ತನ್ನ ಜವಾಬ್ಧಾರಿಯನ್ನು ನಿಭಾಯಿಸುತ್ತಲೇ ನಿರೂಪಕನಿಗೆ ಆತ್ಮಸ್ಥೈರ್ಯ ತುಂಬುತ್ತಿದ್ದಾನೆ. ಅಲಿಯೂ ಕುಟುಂಬದಿಂದ ದೂರ ಉಳಿದರೂ ತನ್ನವರ ಒಳಿತುಕೆಡಕುಗಳನ್ನು ಸದಾ ವಿಚಾರಿಸುತ್ತಾನೆ. ಆದರೆ ತನ್ನ ತಂದೆಯು ಆಡಿದ ಮಾತುಗಳಿಂದ ಮನೆಬಿಟ್ಟು ಹೋದ ಅಲಿಗೆ ತನ್ನ ಸ್ವಾಭಿಮಾನವನ್ನು ಬಿಟ್ಟು ಮರಳಿ ಮನೆಗೆ ಬರಲು ಸಾಧ್ಯವಿಲ್ಲವೆನ್ನುವ ಅವನ ನಿಲುವು. ಇದು ಕವಿಯಾದವನು ಸ್ವಾರ್ಥಕ್ಕಾಗಿ ಬದುಕದೆ ಸಮಾಜದಲ್ಲಿ ಕಟ್ಟ ಕಡೆಯ ವ್ಯಕ್ತಿಗಳ ನೋವಿಗೆ ಸ್ಪಂದಿಸುವವನೇ ನಿಜವಾದ ಅಂತಃಕರಣದ ಬರಹಗಾರನು ಎಂಬಂತೆ ಕಾಣಿಸುತ್ತಾನೆ. ತನ್ನೊಳಗಿನ ಸಾವಿರಾರು ನೋವಿನಲ್ಲೂ ಅಲಿ ರಂಜಾನ್‌ಗೆ ಬರುತ್ತಾನೆಂಬ ನಿರೀಕ್ಷೆಯಲ್ಲಿರುವ ತನ್ನ ಗೆಳೆಯ, ಮನೆಯಲ್ಲಿನ ಅಪ್ಪ, ಅಮ್ಮ, ಪುಟ್ಟಮಕ್ಕಳು ಅವರೆಲ್ಲರ ನಿರೀಕ್ಷೆಗಿಂತ ನಿರೂಪಕನಿಗೆ ಬೀದಿಯಲ್ಲಿ ಗೋಳಿಟ್ಟವರ ಪರನಿಲ್ಲುವುದೇ ಮುಖ್ಯವೆಂಬಂತೆ ಕಾಣಿಸುತ್ತದೆ. ಕತೆಗಾರನೂ ಕಾಲದ ಜೊತೆಗಿನ ನಿರ್ಣಯವನ್ನು ಗುರುತಿಸಿಕೊಳ್ಳುತ್ತಾನೆ. “ಪ್ರತಿ ಕಾಲವೂ ದುರಿತ ಕಾಲವೇ, ಈ ಕಾಲ ಅನ್ನುವುದೇ ಒಂದು ರೂಪ. ನಾವು ರೂಪಕಗಳ ಸುಳಿಯಲ್ಲಿ ಸಿಕ್ಕು ಒದ್ದಾಡುತ್ತಿರುವ ಅಕ್ಷರಗಳು” ಎನ್ನುವ ಇಲ್ಲಿ ನಿರೂಪಕನ ಬದುಕನ್ನು ಅನಂತತೆಯಲ್ಲಿ ಲೀನವಾಗುವುದನ್ನು ಸ್ಮರಿಸುತ್ತಾನೆ. ತನ್ನ ಜೀವನದ ಬಗ್ಗೆ ಆತನಿಗೆ ಯಂತ್ರ ನಾಗರೀಕತೆಯಲ್ಲಿ, ಮನುಷ್ಯನ ಅಸ್ತಿತ್ವದ ಹುಡುಕಾಟದಲ್ಲಿ ಅವನು ಯಂತ್ರದಂತೆ ಬದುಕುತ್ತಾನೆ. ಹೀಗಾಗಿ ಬದುಕು ಎಂದರೆ ಕಾಲನ ಕೆರೆಯಲ್ಲಿ ಈಜಾಡುವಂತೆ ಯಾವಾಗ ಬೇಕಾದರೂ ಮುಳುಗಬಹುದು ಎನ್ನುವ ಧ್ಯಾನಸ್ಥತೆಯಿಂದ “ಕೊನೆಗೂ ಮಹಾ ಅಂದರೆ ಏನಾಗುತ್ತದೆ? ಸಾವು ಅಷ್ಟೇ ಅಲ್ಲವೇ? ಅದೇ ನನ್ನ ಪಾಲಿನ ಯಾತನೆಯ ಆಚೆಗಿನ ಬಾಗಿಲಾಗಿದ್ದರೇ…? ಹಬ್ಬಕ್ಕೆ ಬರಲು ಪ್ರಯತ್ನಿಸುವೆ” ಎಂಬ ಬದುಕಿನ ಸತ್ಯವನ್ನು ಹೊರಹಾಕಿದ್ದಾನೆ. ಹೀಗಾಗಿ ಕತೆಯ ನಾಯಕನಿಗೆ ಕುಟುಂಬದಿಂದ ದೂರ ಉಳಿದು ತನ್ನೊಳಗಿನ ಅನಾಥ ಪ್ರಜ್ಞೆಯನ್ನು ಸ್ನೇಹಿತ ದಿಲೀಪನ ಮೂಲಕ ಕಂಡುಕೊಳ್ಳುತ್ತಾನೆ. ಆದರೆ ನಿರೂಪಕನ ಗುರಿಗಳು ತನ್ನಂತೆ ಎಷ್ಟೋ ಕುಟುಂಬಗಳು ಅನಾಥವಾಗಿರುವವರ ಬಾಳಿಗೆ ಬೆಳಕನ್ನು ನೀಡುವುದರಲ್ಲಿ ತನ್ನ ಯಶಸ್ವಿಯನ್ನು ತುಂಬಿಕೊಳ್ಳುತ್ತಿದ್ದಾನೆ. ಕೊನೆಗೆ ಅಲಿಯ ನಿರ್ಧಾರ ಕೂಡ ತನ್ನ ಕುಟುಂಬದೊಂದಿಗಿನ ಹಾಜರಿಗಿಂತ ತನ್ನನ್ನು ಇಷ್ಟು ವರ್ಷಗಳು ಪೋಷಿಸಿದ ಸಮಾಜದ ಕತ್ತಲೆಯಲ್ಲಿ ಜೀವಿಸುತ್ತಿರುವವರನ್ನು ಹುಡುಕುತ್ತಿದ್ದಾನೆ. ಅವರಿಗಾಗಿ ಟೌನ್ ಹಾಲ್, ಕಬ್ಬನ್ ಪಾರ್ಕ್, ಪೊಲೀಸ್ ಠಾಣೆಗಳನ್ನು ಹತ್ತಿದ್ದು, ಕ್ರಾಂತಿಕಾರಿಯೆಂಬ ಪಟ್ಟಿಯನ್ನು ಕಟ್ಟಿಕೊಂಡಿದ್ದಾನೆ. ಹೀಗಾಗಿ ನಿರೂಪಕನು ನಿಜವಾದ ಸಮುದಾಯಿಕ ಪ್ರಜ್ಞೆಯಾಗಿ ನಿಲ್ಲುತ್ತಾನೆ.
ಅಂತಃಕರಣದ ಟಿಪ್ಪಣಿಗಳು ಕತೆಯು ನಿರೂಪಣೆಯಾಚೆಯ ಒಂದು ಸಣ್ಣ ಅಂತಃಕರಣದ ಪ್ರಶ್ನೆ ಮೂಡಿಸುತ್ತದೆ. ಇಲ್ಲಿನ ಭಾಗೀರಥಿ ಮತ್ತು ಪ್ರಸಾದ್ ಅವರಿಗೆ ಜನಿಸಿದ ಇಂಟರ್ ಸೆಕ್ಸ್ ಮಕ್ಕಳಿಬ್ಬರೂ ಪಡುವಯಾತನೆಯಲ್ಲಿ ಇಡೀ ಬದುಕಿನ ಅತಃಕರಣದ ಹುಡುಕಾಟ ನಡೆಯುತ್ತದೆ. ಗಂಡು ಹೆಣ್ಣಾಗಿ, ಹೆಣ್ಣು ಗಂಡು ಆಗಿರುವ ಫ್ಯಾಂಟಸಿಯು ಮೂರ್ತದಲ್ಲಿ ಅಮೂರ್ತವನ್ನು ಹುಡುಕುವಲ್ಲಿ ಸೋತಂತೆ ಅನಿಸುತ್ತದೆ. ಇಲ್ಲಿ ಕೌಟುಂಬಿಕ ಕಲಹದಲ್ಲಿ ನಡೆದ ಒಂದು ಸಣ್ಣ ತಪ್ಪು ನಾಳಿನ ಲಿಂಗತ್ವದ ಪರಿರ್ವತತೆಯ ನಿರ್ಧಾರವನ್ನು ಗಂಡ-ಹೆಂಡತಿ ಇಬ್ಬರೂ ಕೈಗೊಂಡದ್ದು, ಅದು ತನ್ನ ಮಕ್ಕಳ ಭವಿಷ್ಯದ ಅಂತಃಕರಣದ ಬದುಕಿನ ಮೇಲೆ ಬೀರಿದ ಪರಿಣಾಮ. ಭೂಮಿ ಮತ್ತು ಮುಗಿಲು ಇಬ್ಬರ ವರ್ತನೆಗೆ ಸಿಲುಕಿ ಸಾಕ್ಷಿಯೆಂಬಂತೆ ತಮ್ಮ ಅಂತಃಕರಣದ ಪ್ರಶ್ನೆ ಇವರಲ್ಲಿಯೂ ಮೂಡುತ್ತದೆ. ಹೀಗಾಗಿ ನಿರೂಪಕನ ನಿಲುವು ಲಿಂಗತ್ವ ಸಮರ್ಥನೆಗೆ ಬೆಂಬಲವಿದೆ.
ಮಣ್ಣಂಗಟ್ಟಿ ಕತೆಯು ಬೆಂಗಳೂರೆಂಬ ಮೆಟ್ರೋ ಪಾಲಿಸಿಟಿಯಲ್ಲಿ ಭೋವಿ ಸಮುದಾಯದ ಬದುಕಿನ ಶ್ರಮ ಸಂಸ್ಕೃತಿಯನ್ನು ಹರಸಿಬಂದಿದ್ದು. ಅವರ ಹರಿದು ಹಂಚಿಹೋಗಿರುವ ಸೂರುಗಳನ್ನು ಮತ್ತೇ ಜೀವನೋತ್ಸವ ತುಂಬುವ ಬಹುನಿರೀಕ್ಷಿತವಾದ ದಾರಿಯೊಂದನ್ನು ಕಲ್ಪಿಸುವುದಕ್ಕಾಗಿ ಅವರ ಸೂರಿನ ಟೆಂಟ್‌ಗಳಿಗೆ ಹೋಗಿ ‘ನೀರಿನ ಕಥೆಗಳು’ ಎಂಬ ಕಾವ್ಯ ಕಮ್ಮಟ ಯೋಜನೆಯನ್ನು ರೂಪಿಸಿಕೊಂಡು, ಅವರ ಬದುಕಿನ ನೋವಿನ ಕವಿತೆಗಳನ್ನು ಬರೆದು ಏನೇ ಮಾಡಿದರು, ಕೊನೆಯಲ್ಲಿ ಅವರ ಬದುಕುಗಳು ಹಸನಾಗಲಿಲ್ಲ “ಮುಂದಕ್ಕೇನಾದ್ರು ಬಾವಿ ತೋಡೊ ಕೆಲ್ಸ ಇದ್ರ ನಮಗ್ ಹೇಳ್ರಿ! ನಿಮಗ ಪುಣ್ಯ ಬರತೇತ್ರಿ. ನಾವಿನ್ ಬರ್ತೀವ್ರಿ” ಎಂದು ಹೇಳುವ ಅವರ ಮಾತುಗಳು. ನಾವು ಇನ್ನೂ ಸಾವಿರಾರು ಬಾವಿಗಳನ್ನು ತೋಡಿದರೂ ನಮ್ಮ ಬದುಕಿಗೆ ನಿಮ್ಮ ಕವಿತೆಗಳು ಪರಿಹಾರ ನೀಡುತ್ತವೆಯೇ? ನಮ್ಮ ಬದುಕುಗಳು ನಿಮ್ಮಂತೆ ಹಸನಾಗುತ್ತವೆಯೇ? ಎಂಬಂತೆ ಕೇಳುವ ಪ್ರಶ್ನೆಗಳು ನಿರೂಪಕರನ್ನು ವಿಚಲತೆಗೆ ದೂಡುತ್ತವೆ. ಹೀಗಾಗಿ ನಗರ ಪ್ರದೇಶದಲ್ಲಿದ್ದರೂ ನಿರೂಪಕನ ಒಲವು ಮಾತ್ರ ಮೆಟ್ರೋಗಳಲ್ಲಿ ಸುರಂಗ ಮಾರ್ಗ ತೋಡಿ, ಕಲ್ಲು ಬಂಡೆಗಳನ್ನು ರಟ್ಟೆಯ ಶಕ್ತಿಯಿಂದ ಮುರಿಯುವವರು, ಸಾವಿರಾರು ಜನರ ನೆಮ್ಮದಿಯ ಓಡಾಟಕ್ಕೆ ದಾರಿ ಕಾಣಿಸಿದವರಿಗೆ ನೆಮ್ಮದಿಯ ಬದುಕಿನ ದಾರಿ ಕಾಣಿಸಿದಾಯಿತು ಎಂದು ಮರುಗುವ ಕವಿ ಮಿತ್ರರು. ಕೊನೆಯಲ್ಲಿ ಅವರೆಲ್ಲರನ್ನೂ ಭೇಟಿಯಾಗುವಾಗ ಕವಿಮಿತ್ರರಿಗೆ ಕಾಡುವ ಅಂತಃಕರಣಕ್ಕೆ ‘ನೀರಿನ ಕಥೆಗಳು’ ಪುಸ್ತಿಕೆಯಲ್ಲಿ “ನಿಮಗೆ ಬಾವಿ ತೋಡುವವರ ಸಂಪರ್ಕ ಬೇಕಾದರೆ ಸಂಪರ್ಕಿಸಿ ಎನ್ನುವ ಕ್ಯೂ ಆರ್ ಕೋಡೊಂದನ್ನು ಮುದ್ರಿಸಿದ್ದರು” ಇದನ್ನು ನೋಡಿದ ಕವಿಮಿತ್ರರಿಗೂ ನಿಟ್ಟುಸಿರು ಬಿಟ್ಟಂತೆ. ಕವಿಬರೆದ ಬರೆಹ ಮಣ್ಣಂಗಟಿಯಲ್ಲ ಅದು ಜೀವಂತ. ಉಸಿರಾಡುವ, ನೊಂದವರ ಪಾಲಿಗೆ ಬದುಕಿನ ಸೂರನ್ನು ಕಲ್ಪಿಸಬಲ್ಲದೆಂಬ ನಿಶ್ಚಿಂತತೆಯ ಸಂತೃಪ್ತತೆ ಕಾಣುತ್ತದೆ. ಸ್ವಿಗಿ ಹುಡುಗಿ ಕತೆಯು ಕನ್ನಡದ ಮೊದಲ ಸ್ವಿಗಿ ವುಮ್ಯಾನ್ ಬದುಕನ್ನು ಕುರಿತ ಕತೆಯೆಂದು ನಾನು ಭಾವಿಸಿದ್ದೇನೆ. ನಿರೂಪಕನೆ ಇಲ್ಲಿ ಕತೆಗಾರನಾಗಿದ್ದು, ಆತನಿಗೆ ಕಂಡ ಮುಖವೊಂದು ಕಾಣದೆ ಹೋದಾಗ ತನ್ನಲ್ಲಿನ ತಳಮಳವನ್ನುಂಟು ಮಾಡುತ್ತದೆ. ಇಲ್ಲಿಯೂ ಹಾಗೆ ಸ್ವಿಗಿ ವುಮ್ಯಾನ್ ಕೂಡ ನಮ್ಮದಲ್ಲದ ಪರದೇಶದಿಂದ ನಮ್ಮ ದೇಶಕ್ಕೆ ಕನಸ್ಸುಗಳನ್ನು ಹೊತ್ತು, ಗಡಿಗಳನ್ನು ದಾಟಿ, ತನ್ನದಲ್ಲದ ಭಾಷೆಯೊಂದಿಗೆ ವ್ಯವಹಾರ ಮಾಡುವ ಅಗತ್ಯದೊಂದಿಗೆ ಇಲ್ಲಿ ಸ್ವಿಗಿ ವರ್ಕ್ ವುಮ್ಯಾನಾಗಿ ಸೇರಿಕೊಂಡಿದ್ದಾಳೆ. ಕಾಕಾತಾಳಿಯಂತೆ ಅವನು ಹಿಂದೂಸ್ತಾನಿ ಸಂಗೀತಗಾರನೊಬ್ಬನ ಆತ್ಮಕಥೆಯನ್ನು ತನ್ನದಲ್ಲದ ಯಾವುದೋ ಗಡಿಯೊಳಗಿರುವ ಕಥನವನ್ನು ಗಡಿಮೀರಿದ ಭಾಷೆಯನ್ನು ಗಡಿಯೊಳಗೆ ತರುವ ಹಂಬಲ, ಗಡಿದಾಟಿ ಹೋಗಿರುವ ಪಾರ್ವತಿಮೇಡಂ ಅವರು ಆ ಗಡಿಯೊಳಗೆ ಕನ್ನಡದ ಕಾವ್ಯ ಕಮ್ಮಟ, ಗಡಿದಾಟಿ ಬಂದ ಸ್ವಿಗಿ ಹುಡುಗಿಯ ಪ್ರೀತಿ ಬಯಸುವಂತೆ ಮಾಡಿತೇನೋ? ಎಂಬಂತಿದೆ. ಹೀಗೆ ಹೊಸ ಪರಿಸರ ಹುಡುಕಿ ಹೊರಟ ನಿರೂಪಕ ರೆಸಾರ್ಟ್ವೊಂದರಲ್ಲಿ ಅಲ್ಲಿಯೂ ಗಡಿಮೀರಿದ ಸಂಬಂಧಗಳನ್ನು ಪರಿಚಯಿಸುವ ವರ್ಕ್ಸ್, ಅಲ್ಲಿ ಮತ್ತೇ ಅಪ್ಯಾಯಮಾನದ ಅದೇ ಸ್ವಿಗಿ ಹುಡುಗಿಯ ಆತ್ಮೀಯ ನೋಟ ಹತ್ತಿರದಿಂದ ಕಾಣುತ್ತಾನೆ. ಆದರೇ ಈಗ ಆ ಹುಡುಗಿ ಕನ್ನಡವನ್ನು ಕಲಿತು ಮಾತನಾಡುತ್ತಿದ್ದಾಳೆ ನಿರೂಪಕ ಅವಳ ಹೆಸರು ರೋಸಿ ಎಂದು ಕಂಡುಕೊಳ್ಳುತ್ತಾನೆ. ನಿರೂಪಕನೂ ಹಿಂದೂಸ್ತಾನಿಯಿಂದ ಕನ್ನಡಕ್ಕೆ ಆತ್ಮಕಥನವನ್ನು ನಿರೂಪಿಸಿದ್ದಾನೆ. ಇಲ್ಲಿನ ಜೀವಂತಿಕೆಯೆ ಸಂಕೇತವೆಂಬುದು ಗಡಿಗಳನ್ನು ದಾಟಿಬಂದರು ನಮ್ಮ ನೆಲದ ಸಂಸ್ಕೃತಿ, ಭಾಷೆಗೆ ಒಗ್ಗಿಕೊಳ್ಳುವುದು. ಅವಳ ಬದುಕಿನ ಅನಿವಾರ್ಯತೆಯಿದ್ದು ಕನ್ನಡವನ್ನು ಕಲಿತು, ಬದುಕಿನಲ್ಲಿನ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡಿದ್ದಾಳೆ. ಕೊನೆಗೆ ಅವಳು ಸ್ವತಂತ್ರವಾಗಿ ಅನ್ನಕೊಟ್ಟ ಭಾಷೆಯಲ್ಲಿ ಉತ್ತರಿಸುತ್ತಾಳೆ. ಆದರೆ ಗಡಿಯಲ್ಲಿರುವವರು ತನ್ನ ಭಾಷೆಯನ್ನು ಕಡೆಗಣಿಸಿ ಬೇರೆ ಭಾಷೆಯ ವ್ಯಾಮೋಹಕ್ಕೆ ತೆರುತ್ತೇವೆಂಬ ಭಾವದೆದೆಯ ಸ್ಫರ್ಶದಲ್ಲಿ ನಿರೂಪಕನು ರೋಸಿಯೆಂಬ ಸ್ವಿಗಿ ಹುಡುಗಿಯ ಸಂವೇದನಾಶೀಲತೆಯನ್ನು ಬಿಚ್ಚಿ ತೋರಿಸಿದ್ದಾನೆ.
ಬಿಂಬದ ಬೆಳಕಿನ ಹಾದಿ ಕತೆಯು ಯಾವುದು ಮಹಾಪಠ್ಯ? ವೆಂಬ ಪ್ರಶ್ನಾತೀತತೆ ಕಾಡುವಂತೆ ಓದುಗನನ್ನು ಚಿಂತನೆಗೆ ಹಚ್ಚುವ ಕತೆಯಾಗಿದೆ. ಕತೆ ತೆರೆದುಕೊಳ್ಳುವುದು ‘ಕರ್ನಾಟಕ ಕಾದಂಬರಿ ಪುರಸ್ಕಾರ’ ಸ್ಫರ್ಧೆಗೆ ಬಂದಿರುವ ಕಾದಂಬರಿಗಳಲ್ಲಿ ‘ಅಚ್ಚು’ ಎನ್ನುವ ಕಾದಂಬರಿಯನ್ನು ಪ್ರಶಸ್ತಿಗೆ ಆಯ್ಕೆಯಾಗಿದ್ದು. ಆಯ್ಕೆ ಮಾಡಿದ ತೀರ್ಪುಗಾರರಲ್ಲಿ ಇಂದಿರಾ ಜಯಂತ್ ಅವರ ಮನೋಜ್ಞತೆ. ‘ಸ್ಫರ್ಧೆ ಎನ್ನುವುದು ತೀರ್ಪುಗಾರರನ್ನು ಸ್ವತಂತ್ರವಾಗಿ ಆಯ್ಕೆಮಾಡುವ ಹಕ್ಕು ನೀಡದೆ ನಿಯಮಗಳನ್ನು ರೂಪಿಸಿದ್ದ ಕಾರಣದಿಂದ, ಇನ್ನುಳಿದ ಶ್ರೇಷ್ಠ ಪಠ್ಯಗಳು ನಿಯಮಗಳ ಗೋಜಿಗೆ ಹೋಗದೆ, ಜೀವಂತಿಕೆಯ ವಸ್ತುವೊಂದನ್ನು ಚಿತ್ರಿಸಿದರು ಅವು ಮಹಾ ಪಠ್ಯಗಳ ಸ್ಥಾನವನ್ನು ಅಲಂಕರಿಸದೆ ಉಳಿದುಬಿಡುತ್ತವೆ.’ ಒಬ್ಬ ಅಪರಿಚಿತ ಲೇಖಕಿಯೊಬ್ಬಳು ಬರೆದ ‘ನೂರೇನ್’ ಕಾದಂಬರಿಯೂ ಜೂರಿಗಳ ತೀರ್ಮಾನದಲ್ಲಿ ಕೊನೆಯ ಸ್ಥಾನಪಡೆದಿದ್ದು. ಅದರಲ್ಲಿನ ನೂರೇನ್ ಪಾತ್ರ ಇಂದಿರಾ ಜಯಂತ್ ಅವರನ್ನು ತುಂಬಾ ಕಾಡುತ್ತಿದ್ದೆ. ಆಗ ಕ್ರಿಯೇಟಿವ್ ರೈಟಿಂಗನಲ್ಲಿಯೇ ಇದ್ದ ಅವರು ವಾಸ್ತವಕ್ಕೆ ಹತ್ತಿರವಾಗುವ ಪಾತ್ರಗಳನ್ನು ನೂರೇನ್ ಕಾದಂಬರಿಯಲ್ಲಿ ಕಂಡು. ಆ ಲೇಖಕಿಯನ್ನು ಸಂಪರ್ಕಿಸಿ ಜೂರಿಯೂ ಆ ಹಳ್ಳಿಗೆ ಹೋಗುತ್ತಾಳೆ. ಕತೆಯೊಳಗಿನ ಹಂದರವು ಕಾದಂಬರಿಯ ವಸ್ತುವೊಂದನ್ನು ಸನ್ನಿವೇಶಕ್ಕೆ ತಕ್ಕಂತೆ ನಿರೂಪಿಸಿರುವ ತಂತ್ರದ ಎದೆಗಾರಿಕೆ ಜೈಮನ್ ಅವರನ್ನು ಗಟ್ಟಿಯಾಗಿ ನಿಲ್ಲಿಸುತ್ತದೆ. ಜೂರಿ ಹಳ್ಳಿಗೆ ಹೋಗಿ ಕಾದಂಬರಿಯಲ್ಲಿನ ಚಿತ್ರಣಗಳು ವಾಸ್ತವದಲ್ಲಿ ವೀಕ್ಷಿಸುತ್ತಾಳೆ. ನೂರಿ ಮತ್ತು ಬೀಬಿಜಾನ್ ಮನೆತುಂಬ ಮಕ್ಕಳು, ತುಂಬಿದ ಕುಟುಂಬ. ಖಬ್ರಿಸ್ತಾನದಲ್ಲಿ ಗುಂಡಿ ತೋಡುವ ನೂರ್ ಅಹಮದ್, ಆ ಹಳ್ಳಿಯ ಮರ್ಯಾದೆಗೇಡಿನ ಹತ್ಯೆಗಳ ಕಥನ, ಮನೆಯ ಹೆಣ್ಣು ಮಕ್ಕಳ ರಕ್ಷಣೆಗಾಗಿ ತನ್ನ ಮನೆಯಲ್ಲಿನ ಗಂಡು ಮಕ್ಕಳನ್ನು ಕಾವಲಿಗಾಗಿ ಬಾಗಿಲ ಹೊರಗಡೆ ಮಲಗಿಸುವುದು. ಈ ಎಲ್ಲಾ ದೃಶ್ಯಗಳನ್ನು ಶಾರದಾ ಜೋಸೆಫ್‌ನಿಂದ ತಿಳಿದು. ನೋರೇನ್ ಮದುವೆಯ ಹಿಂದಿನ ದಿನ ಓಡಿ ಹೋದಳೆಂಬ ಸುದ್ಧಿ ತಿಳಿದಾಗ ಜೂರಿ ತುಂಬಾ ಘಾಸಿಗೊಂಡಳು, ಕೊನೆಗೂ ಅವಳ ಫೋಟೋ ನೋಡಿ ನೂರೇನ್‌ಳನ್ನು ಜೀವಂತಿಕೆಯಾಗಿಟ್ಟಳು. ಹೀಗೆ ಒಂದು ಪ್ರಶಸ್ತಿ ಪಡೆದ ಕೃತಿಗಿಂತಲೂ ಮನುಷ್ಯನೊಳಗೆ ಆಳವಾಗಿ ಕಾಡುವ ಅಂತಃಕರಣದ ಪ್ರೆಶ್ನೆಗಳಿಗೆ ವಾಸ್ತವದ ಬದುಕಿನ ಚಿತ್ರಣಗಳು ಉತ್ತರ ಕೊಡುತ್ತವೆಂಬ ಮೌನ ಆ ಜೂರಿಯಲ್ಲಿ, ನಂತರ ಈ ನಿಯಮಗಳ ಗೋಜಿಗೆ ಹೋಗದೆ ಕಥನದ ವಾಸ್ತವತೆಯ ಬದುಕಿನ ಸತ್ಯತೆ ಹುಡುಕಾಟ ನಡೆಯಬೇಕಿದೆಂಬ ಸತ್ಯವೊಂದನ್ನು ಕಂಡುಕೊಂಡಳು.
ಒಟ್ಟಾರೆ ಕತೆಗಾರನ ಹುಡುಕಾಟವು ಸಣ್ಣ ವಿಷಯಗಳೊಂದಿಗೆ ಆರಂಭವಾಗುವ ಇಲ್ಲಿನ ಪ್ರತಿಯೊಂದು ಕತೆಗಳು ಮನುಷ್ಯನ ಬದುಕಿನ ನಿಜದ ನೆಲೆಗಳಾದ ಬಡತನ, ಧರ್ಮ ಮತ್ತು ಜಾತಿ ವ್ಯವಸ್ಥೆ, ಲಿಂಗತ್ವದ ಕಾಣ್ಕೆ, ಸಾಮಾಜಿಕ ನ್ಯಾಯ ಪರವಾದ ಹೋರಾಟ, ಏಕಾಂತತೆ, ಸ್ನೇಹ ಮತ್ತು ಪ್ರೀತಿಯ ಹಂಬಲ, ಕೌಟುಂಬಿಕ ಬದುಕಿನ ಸೂಕ್ಷ್ಮತೆಗಳ ಶೋಧ, ಗ್ರಾಮೀಣ ಮತ್ತು ನಗರಗಳ ನಡುವಿನ ಬದುಕಿನ ವ್ಯತ್ಯಾಸ, ಮನುಷ್ಯನ ಮನೋಜ್ಞತೆ ವಿಶ್ಲೇಷಣೆ, ಭಾವೈಕ್ಯತೆಯ ಸೌಹಾರ್ದತೆ ಇನ್ನೂ ಮೊದಲಾದ ಹುಡುಕಾಟದ ಯಾನವೊಂದು ಈ ಕಥನ ಹಂದರದಲ್ಲಿ ತೆರೆದುಕೊಳ್ಳುತ್ತದೆ. ಹೀಗಾಗಿ ಜೈಮನ್ ಕಂಡುಕೊಂಡ ಕಥನದ ದಾರಿ ಆತನನ್ನೂ ಬಹುದೂರ ಸಾಗಿಸುತ್ತದೆ.






0 Comments