ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಿರು ಪರದೆಯ ಮೇಲೆ ಹಿರಾನಿ ಮ್ಯಾಜಿಕ್

-ಗೊರೂರು ಶಿವೇಶ್

‘ಪ್ರೀತಮ್ ಮತ್ತು ಪೆಡ್ರೋ’ : ಕಿರು ಪರದೆಯ ಮೇಲೆ ಹಿರಾನಿ ಮ್ಯಾಜಿಕ್, ಸೈಬರ್ ಕ್ರೈಮ್ ಲೋಕದ ಅನಾವರಣ 

​ತಮ್ಮ 23 ವರ್ಷಗಳ ಸುದೀರ್ಘ ಸಿನಿ ಪಯಣದಲ್ಲಿ ಕೇವಲ ಆರೇ ಆರು ಸಿನಿಮಾಗಳನ್ನು ನಿರ್ದೇಶಿಸಿದ್ದರೂ, ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅಳಿಸಲಾಗದ ಮುದ್ರೆ ಒತ್ತಿದವರು ನಿರ್ದೇಶಕ ರಾಜಕುಮಾರ್ ಹಿರಾನಿ. ‘ಮುನ್ನಾಭಾಯಿ ಎಂಬಿಬಿಎಸ್’, ‘ಲಗೇ ರಹೋ ಮುನ್ನಾಭಾಯಿ’, ‘3 ಇಡಿಯಟ್ಸ್’, ‘ಪಿ ಕೆ’, ‘ಸಂಜು’ ಮತ್ತು ಇತ್ತೀಚಿನ ‘ಡಂಕಿ’ ವರೆಗೆ ಅವರು ಮುಟ್ಟಿದ್ದೆಲ್ಲಾ ಚಿನ್ನ. ಸೋಲೇ ಇಲ್ಲದ ಸರದಾರ ಎಂದೇ ಖ್ಯಾತರಾದ ಹಿರಾನಿ, ಇದೀಗ ಮೊದಲ ಬಾರಿಗೆ ಕಿರುತೆರೆಗೆ (OTT) ಲಗ್ಗೆ ಇಟ್ಟಿದ್ದು, ತಮ್ಮ ಚೊಚ್ಚಲ ವೆಬ್ ಸರಣಿ ‘ಪ್ರೀತಮ್ ಮತ್ತು ಪೆಡ್ರೋ’ ಮೂಲಕ ಕ್ರೈಂ ಥ್ರಿಲ್ಲರ್ ಹಾಗೂ ಕಾಮಿಡಿ ಆಸಕ್ತರ ಗಮನ ಸೆಳೆದಿದ್ದಾರೆ.

ಸರ್ ಆರ್ಥರ್ ಕಾನನ್ ಡಾಯ್ಲ್ ಸೃಷ್ಟಿಸಿದ ಅಮರ ಪಾತ್ರಗಳಾದ ಶರ್ಲಾಕ್ ಹೋಮ್ಸ್ ಮತ್ತು ಡಾಕ್ಟರ್ ವಾಟ್ಸನ್ ಜೋಡಿ ತಮ್ಮ ಅದ್ಭುತ ಪತ್ತೆದಾರಿ ಕಲೆಯ ಮೂಲಕ ಅನೇಕ ಕುತೂಹಲಕರ ಪ್ರಕರಣಗಳನ್ನು ಬಿಡಿಸಿದ್ದನ್ನು ನಾವು ಪುಸ್ತಕಗಳಲ್ಲಿ ಓದಿದ್ದೇವೆ, ಸಿನಿಮಾಗಳಲ್ಲೂ ನೋಡಿ ಆನಂದಿಸಿದ್ದೇವೆ. ಆದರೆ ಆಧುನಿಕ ಕಾಲಘಟ್ಟದಲ್ಲಿ ಅಪರಾಧಗಳ ಸ್ವರೂಪವೇ ಬದಲಾಗಿದೆ. ಇಲ್ಲಿ ಅಪರಾಧಿಗಳ ಮತ್ತು ಅಪರಾಧಗಳ ಜಾಡು ವಿಭಿನ್ನ ಹಾಗೂ ಡಿಜಿಟಲ್ ಮಯ.

ಇಂತಹ ಆಧುನಿಕ ಸೈಬರ್ ಅಪರಾಧಗಳನ್ನು ಇಂದಿನ ತಂತ್ರಜ್ಞಾನದ ಮೂಲಕ ಬಗೆಹರಿಸಲು ಹಳೇ ಕಾಲದ ಬದ್ಧತೆಯುಳ್ಳ ಕ್ರಿಮಿನಲ್ ಇನ್ವೆಸ್ಟಿಗೇಷನ್ ಇನ್ಸ್ಪೆಕ್ಟರ್ ಮತ್ತು ಇಂದಿನ ತಲೆಮಾರಿನ ಸೈಬರ್ ಕ್ರೈಂ ಎಕ್ಸ್‌ಪರ್ಟ್ ಜೊತೆಗೂಡುವುದೇ ಈ ವೆಬ್ ಸರಣಿಯ ಮುಖ್ಯ ಆಕರ್ಷಣೆ. ಕಥೆಯು ಕೇವಲ ಗೋವಾಕ್ಕೆ ಸೀಮಿತವಾಗದೆ, ನಮ್ಮ ಕರಾವಳಿಯ ಕಾರವಾರದಲ್ಲಿಯೂ ಸಾಗುತ್ತಾ, ಅಲ್ಲಿ ನಡೆಯುವ ಘಟನಾವಳಿಗಳು ಪ್ರೇಕ್ಷಕನ ನಿರೀಕ್ಷೆಯನ್ನು ಮೀರಿ ಕುತೂಹಲಕರವಾಗಿ ಸಾಗುತ್ತವೆ.

ಗೋವಾದಲ್ಲಿ ನಡೆಯುವ ಎಟಿಎಂ ದರೋಡೆಯ ಕುರಿತಾಗಿ ಪೊಲೀಸ್ ತಂಡ ಮತ್ತು ಅದರ ಮುಖ್ಯಸ್ಥ ಪೆಡ್ರೋ (ಅರ್ಶದ್ ವಾರ್ಸಿ) ತಲೆಕೆಡಿಸಿಕೊಂಡು ಬ್ಯುಸಿಯಾಗಿರುತ್ತಾರೆ. ಅದೇ ಸಮಯದಲ್ಲಿ ಹ್ಯಾಕರ್ ಆಗಿರುವ ಪ್ರೀತಮ್ (ವೀರ್ ಹಿರಾನಿ), ತನ್ನ ತಾತನ ಹಳೆಯ ಟೇಪ್ ರೆಕಾರ್ಡರ್ ಹುಡುಕಿಕೊಡಲು ಕೇಳಿ ಪೆಡ್ರೋ ಬಳಿ ಬರುತ್ತಾನೆ. ವಿಭಿನ್ನ ಧ್ರುವಗಳಂತಿರುವ ಇವರಿಬ್ಬರ ಅನಿವಾರ್ಯ ಸಮ್ಮಿಲನದ ನಡುವೆಯೇ, ಕಥೆಗೆ ಟ್ವಿಸ್ಟ್ ಸಿಗುತ್ತದೆ. ಇಬ್ಬರೂ ಜೊತೆಗೂಡಿ ಪ್ರಭಾವಿ ರಾಜಕಾರಣಿಯೊಬ್ಬನ ಮಗನ ಹೈ-ಪ್ರೊಫೈಲ್ ಅಪಹರಣದ (Kidnapping) ಪ್ರಕರಣದ ಹಿಂದೆ ಬೀಳುತ್ತಾರೆ. ಈ ನಿಗೂಢ ಹಾದಿಯಲ್ಲಿ ಸಾಗುವ ಕಥೆಯೇ ಈ ಸರಣಿಯ ಜೀವಾಳ.

​ರಾಜಕುಮಾರ್ ಹಿರಾನಿ ಅವರ ಸಿನಿಮಾಗಳ ದೊಡ್ಡ ಶಕ್ತಿಯೇ ಹಾಸ್ಯದ ಲೇಪನ. ತಮ್ಮ ಹಿಂದಿನ ಚಿತ್ರಗಳಲ್ಲಿ ‘ಡಾರ್ಕ್ ಕಾಮಿಡಿ’ (ವಿಷಾದ, ಗಂಭೀರ ಮತ್ತು ದುರಂತದ ಸನ್ನಿವೇಶಗಳಲ್ಲೂ ಸೂಕ್ಷ್ಮವಾಗಿ ಮೂಡುವ ಹಾಸ್ಯ) ಮೂಲಕ ಸಮಾಜದ ಅಂತರಂಗವನ್ನು, ವ್ಯವಸ್ಥೆಯ ಲೋಪದೋಷಗಳನ್ನು ಶೋಧಿಸುತ್ತಿದ್ದ ಹಿರಾನಿ, ಈ ವೆಬ್ ಸರಣಿಯಲ್ಲೂ ಅದೇ ಯಶಸ್ವಿ ಶೈಲಿಯನ್ನು ಮುಂದುವರಿಸಿದ್ದಾರೆ. ಸೈಬರ್ ವಂಚನೆ ಹಾಗೂ ಕ್ರೈಂನಂತಹ ಗಂಭೀರ ವಿಷಯದ ಹಿನ್ನೆಲೆಯಿದ್ದರೂ, ಅದನ್ನು ಕಾಮಿಡಿಯೊಂದಿಗೆ ಅತ್ಯಂತ ಜಾಣ್ಮೆಯಿಂದ ಚಿತ್ರಕಥೆಯಲ್ಲಿ ಬೆಸೆದಿದ್ದಾರೆ. ಅವಿನಾಶ್ ಅರುಣ್ ವೆಬ್ ಸೀರೀಸ್ ನ ನಿರ್ದೇಶಕ.

ಮೊದಲ ಬಾರಿಗೆ ಒಟಿಟಿ ಫಾರ್ಮ್ಯಾಟ್‌ಗೆ ಕೈಹಾಕಿದ್ದರೂ ರಾಜಕುಮಾರ್ ಹಿರಾನಿ ತಮ್ಮ ಎಂದಿನ ಬರವಣಿಗೆಯ ಚಮತ್ಕಾರವನ್ನು ಇಲ್ಲಿಯೂ ಉಳಿಸಿಕೊಂಡಿದ್ದಾರೆ. ಕ್ರೈಂ ಥ್ರಿಲ್ಲರ್ ಕಥೆಗಳ ಗಂಭೀರತೆಗೆ ಹಿರಾನಿ ಮಾರ್ಕ್ ಹಾಸ್ಯದ ಒಗ್ಗರಣೆ ಇಷ್ಟಪಡುವವರಿಗೆ ‘ಪ್ರೀತಮ್ ಮತ್ತು ಪೆಡ್ರೋ’ ಒಂದು ವಿಭಿನ್ನ ಅನುಭವ ನೀಡುವುದರಲ್ಲಿ ಸಂಶಯವಿಲ್ಲ.

ಎಂದಿನಂತೆ ತಮ್ಮ ಸಿನಿಮಾಗಳಲ್ಲಿ ಸಂದೇಶವನ್ನು ನೀಡುತ್ತಿದ್ದ ಹಿರಾನಿ ವೆಬ್ ಸೀರೀಸ್ ನಲ್ಲೂ ಕ್ಷಮೆಯ ಮಹತ್ವದ ಕುರಿತು ಬೇರೆ ಬೇರೆ ಪಾತ್ರಗಳ ಮೂಲಕ ಹೇಳಿದ್ದಾರೆ.ವೆಬ್ ಸೀರೀಸ್ ಜಿಯೋ ಹಾಟ್ ಸ್ಟಾರ್ ನಲ್ಲಿ ಕನ್ನಡ ಭಾಷೆಯ ಡಬ್ಬಿಂಗ್ ನಲ್ಲಿ ಲಭ್ಯವಿದೆ

‍ಲೇಖಕರು Admin

18 July, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading