–ಸುಬ್ಬು ಹೊಲೆಯಾರ್
೧
ಹೇಗಿದ್ದೀರಿ ಸೋನಂ?
ಸೋನಂ ಎಂದರೆ ಸೋಲುವವನುವಲ್ಲ
ವಾಂಗ್ಚುಕ್ ಎಂದರೆ ದೃಢ ಹೋರಾಟಗಾರ
ನನ್ನ ಕೈಯಿದೆ ನಿನ್ನ ಹೆಗಲ ಮೇಲೆ
ಹಿಡಿದ ಮುಷ್ಠಿಯಲ್ಲಿ ಗೆಲ್ಲುವ ಹಠವಿದೆ
ನೆಲದ ನಕ್ಷತ್ರ ನೀನು ಸೋನಂ
೨
ಮಳೆ ಹೋದ ಈ ದಿನಗಳಲ್ಲಿ
ಉಪವಾಸದ ತಟ್ಟೆಯಲ್ಲಿ
ಹಸಿದ ಕನಸುಗಳಿವೆ ಗೆಳೆಯ
ಉಸಿರು ಚೆಲ್ಲಿದ ಮಕ್ಕಳ ಕನಸು
ನಿನ್ನೆದೆಯಲ್ಲಿ ಚಿಗುರುತ್ತಿವೆ
ಸಮಯವಿಲ್ಲ ಅವರಿಗೆ ನಿನ್ನ ನೋಡಲು
ಹಣ ಎಣಿಸುತ್ತಿದ್ದಾರೆ ದೇವರ ಹುಂಡಿಯಲ್ಲಿ
ನನ್ನ ಭಾರತವೇ ಪುರುಸೊತ್ತು ಮಾಡಿಕೊ
ಸೋನಂ ಜೊತೆಗೆ ಟೀ ಕುಡಿಯಬೇಕು
ಉಪವಾಸ ನಿಲ್ಲಿಸಲು ಹೇಳಬೇಕು
೩
ಕಂಪಿಸಿಸುತ್ತಿದ್ದಾರೆ ನಿನ್ನ ಉಸಿರಿನ ಸದ್ದಿಗೆ
ಹಣೆಯಲು ಹುನ್ನಾರ ಮಾಡುತ್ತಿದ್ದಾರೆ
ಮೂರು ಬಿಟ್ಟವರೆಂದು ಶಾಪ ಹಾಕಿದ
ಪೋಷಕರು ಬಿಕ್ಕಳಿಸುತ್ತಿದ್ದಾರೆ
ಹರಿದು ಬರುತ್ತವೆ ಇರುವೆಗಳು
ಅನ್ಯಾಯ ವೆಸೆಗಿದ್ದವರ ಕಾಲು ಕಚ್ಚಲು
ನಿನ್ನ ಎಚ್ಚರದಲ್ಲೇ ನಾವು ಬರುತ್ತಿದ್ದೇವೆ
ಗೆಳೆಯ ಸೋನಂ
೪
ನೊಂದು ಕೊಳ್ಳುತ್ತಿದ್ದಾಳೆ ಅಮ್ಮ
ನಿನ್ನ ಮುದ್ದು ಮುಖ ಮುಗುಳ್ನಗೆ ಬೇಕು
ಬುದ್ಧನಂತೆ ಬೆಳಗಬೇಕು
‘ಜೈ ಭೀಮ್’ ಘೋಷಣೆ ಕೂಗಬೇಕು
ಆಮ್ಮನು ಬರುತ್ತಿದ್ದಾಳೆ ಸತ್ಯಾಗ್ರಹ ಮಾಡಲು
೫
ಮಲಗಿದಿಯಾ ಭೀಮ ಸಾಹೇಬರ
ತೊಡೆಯ ಮೇಲೆ
ಅಂಜುವುದಿಲ್ಲ ನೀನು
ಅಲ್ಲಿ ಉಸಿರಿಗೆ ಜಾಗವಿದೆ
ಜೀವ ತಾಳುತ್ತವೆ ಕನಸುಗಳು
ಬರುತ್ತಿದ್ದೇವೆ
ನಾವುಗಳು ನೀಲಿ ಬಾವುಟ ಹಿಡಿದು
೬
ಒಣಗಿದ ಆಕಾಶದ ಕೆಳಗೆ
ಕನಸು ಕೊಂದವರ ಕೈಗಳಲ್ಲಿ
ಎಷ್ಟೊಂದು ಅಸ್ತ್ರಗಳಿವೆ
ಸೋಲುವುದಿಲ್ಲ ಸೋನಂ ಎಂದಿಗೂ
ಗೆಲ್ಲುವ ಪದಕಗಳೆಲ್ಲಾ ನಮ್ಮೆದೆಯಲಿವೆ
ಹಿಮಾಲಯವೇ ಕರಗಿ
ಅಮೃತದ ಹನಿಗಳು
ಹರಿದು ಬರುತ್ತಿವೆ
ನಿನ್ನ ಉಪವಾಸ ನಿಲ್ಲಿಸಲು
ಜೀವ ತಣಿಸಲು
ನೆಲದ ನಕ್ಷತ್ರ ಸೋನಂ ನೀನು






0 Comments