ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಾರಿ ಹೋದವರು

-ಪಾಲಹಳ್ಳಿ ವಿಶ್ವನಾಥ್

ನಾನು ಆಗತಾನೇ ಈ ಕ್ಲಬ್ ಸೇರಿದ್ದೆ. ಇದು ನಗರದ ಗಣ್ಯವ್ಯಕ್ತಿಗಳ ಕ್ಲಬ್. ನನಗೇನೂ ಅಂತ ಅರ್ಹತೆ ಇರಲಿಲ್ಲ. ನಮ್ಮ ತಾತ ಹಿಂದೆ ಏನೋ ಒಳ್ಳೆ ಕೆಲಸ ಮಾಡಿದ್ದು ಈ ಕ್ಲಬ್ಬು ಸೇರಿದ್ದರು. ವಂಶಪಾರಂಪರ್ಯವಾಗಿ ಅದರ ಸದಸ್ಯತ್ವ ನನಗೆ ಬಂದಿತ್ತು. ನನಗೆ ಗೊತ್ತಿದ್ದವರು ಅಲ್ಲಿಯ ಕಾರ್ಯದರ್ಶಿ (ಸೆಕ್ರೆಟರಿ) ಮಾತ್ರ. ಅವರ ಹೆಸರು ರಾಮನಾಥಯ್ಯ. ಅವರ ಜೊತೆ ಆಗಾಗ ಮಾತಾಡುತ್ತಿದ್ದೆ.ಹಾಗೇ ಒಂದು ದಿನ ಹರಟೆ ಹೊಡೆಯುತ್ತಿದ್ದಾಗ, ದೂರದಲ್ಲಿ ಒಬ್ಬ ವ್ಯಕ್ತಿ ಬರುವುದು ಕಾಣಿಸಿತು. ವಯಸ್ಸು ಐವತ್ತು ಇರಬಹುದು. ತೂರಾಡಿಕೊಂಡು ಬರುತ್ತಿದ್ದರು; ನಡೆಯುವುದರಲ್ಲಿ ಯಾವ ಲಯವೂ ಇರಲಿಲ್ಲ.“ಕ್ಲಬ್ಬಿಗೆ ಬರೋಕೆ ಮುಂಚೆಯೇ ಈ ತರಹ ಇದ್ದಾರಲ್ಲ!” ಎಂದು ಕಾರ್ಯದರ್ಶಿಯವರ ಹತ್ತಿರ ತಮಾಷೆ ಮಾಡಿದೆ.ಅದಕ್ಕೆ ಅವರು, “ಇಲ್ಲ, ಅವರು ನಡೆಯುವುದೇ ಹಾಗೆ. ಇದರ ಹಿಂದೆ ಒಂದು ಕಥೆ ಇದೆ. ನೀವು ಯಾರಿಗೂ ಹೇಳುವುದಿಲ್ಲ ತಾನೆ…?” ಎಂದರು.ನಾನು, “ನನಗೆ ಇಲ್ಲಿ ಯಾರೂ ಗೊತ್ತೇ ಇಲ್ಲ, ಯಾರಿಗೆ ಹೇಳಲಿ?” ಎಂದೆ.ಸರಿ ಎಂದು ರಾಮನಾಥಯ್ಯನವರು ನನ್ನನ್ನು ತಮ್ಮ ಕೋಣೆಗೆ ಕರೆದುಕೊಂಡು ಹೋದರು.

“ಅವರ ಹೆಸರು ಲಂಬೋದರ ಪೈ. ಉಡುಪಿ ಕಡೆಯವರು. ದೊಡ್ಡ ಪೈ ಅವರ ದೂರದ ಸಂಬಂಧಿ. ಅವರ ಮನೆಯವರು ಗಣೇಶನ ಭಕ್ತರು. ಮಕ್ಕಳಿಗೆಲ್ಲಾ ಗಣೇಶನ ಹೆಸರನ್ನೇ ಇಟ್ಟಿದ್ದರು—ಗಣೇಶ, ವಿನಾಯಕ, ಗಜಾನನ, ಏಕದಂತ, ಹೇರಂಬ. ಕಡೆಯ ಮಗನಿಗೆ ಲಂಬೋದರ ಎಂಬ ಹೆಸರು ಕೊಟ್ಟರು. ಏನಾಗುತ್ತೆ ಅಂದರೆ, ಮಕ್ಕಳಿಗೆ ಅವರ ಹೆಸರಿನ ಪ್ರಕಾರ ಇರಬೇಕೆಂಬ ಆಸೆ ಇರುತ್ತೆ. ಅದು ಸಹಜ ಅಲ್ವೇ? ಹುಟ್ಟುತ್ತಾ ಅವನು ಸಣ್ಣಗೆಯೇ ಇದ್ದಿರಬಹುದು, ಆದರೆ ಬೆಳೆಯುತ್ತಾ ತನ್ನ ಹೆಸರಿಗೆ ಅನುಗುಣವಾಗಿ ಉದರವನ್ನು ಬೆಳೆಸುತ್ತಾ ಹೋದ. ಅತಿ ಭೋಜನಪ್ರಿಯ. ಮನೆಯಲ್ಲಿ ಅಲ್ಲದೆ ಬೆಳಿಗ್ಗೆ ಹೋಟೆಲು, ಸಂಜೆ ಹೋಟೆಲು. ಕೆಲವರು ಆಹಾರದಲ್ಲಿ ರುಚಿಯನ್ನು ನಿರೀಕ್ಷಿಸುತ್ತಾರೆ; ಆದರೆ ಇವರು ಯಾವ ನಿರೀಕ್ಷೆಯೂ ಇಲ್ಲದೆ ತಿನ್ನುತ್ತಿದ್ದರು. ಏನನ್ನೂ ಬೇಡ ಎಂದವರಲ್ಲ. ಹೀಗೇ ಹೋಗುತ್ತಾ, ನೋಡುವವರಿಗೆ ತಮ್ಮ ಹೆಸರಿಗೆ ತಕ್ಕ ಹಾಗೆ ಇದ್ದಾರೆ ಎಂದು ಅನಿಸತೊಡಗಿತು. ಅವನಿಗೂ ತನ್ನ ಬಗ್ಗೆ ಹೆಮ್ಮೆ ಅನಿಸಿತು.

ಆದರೆ ಅದೆಲ್ಲಾ ಹಿಂದೆ. ಕ್ರಮೇಣ ಲಂಬೋದರರಾಯರಿಗೆ ತಮ್ಮ ದೇಹದ ಬಗ್ಗೆ ಬೇಸರ ಬರಲು ಶುರುವಾಯಿತು. ತೂಕವನ್ನು ಇಳಿಸಲು ಬಹಳ ಯತ್ನಿಸಿದರು. ವ್ಯಾಯಾಮಶಾಲೆಗೆ ಸೇರಿದರು. ಅಲ್ಲಿ ಗುರುಗಳಾಗಿದ್ದ ಶ್ರೀಕಂಠಯ್ಯನವರು ಬಹಳ ಖ್ಯಾತ ವ್ಯಕ್ತಿ. ದೊಡ್ಡ ರಾಜರ ಮೈ ಸ್ವಲ್ಪ ಇಳಿಯಲು ಅವರೇ ಕಾರಣರಂತೆ. ಅಂತವರು ಲಂಬೋದರರಾಯರನ್ನು ಶಿಷ್ಯರಾಗಿ ಸ್ವೀಕರಿಸಿ ಅವರ ಮೇಲೆಯೂ ಪ್ರಯೋಗಗಳನ್ನು ನಡೆಸಿದರು. ಈ ಆಸನವಾಯಿತು, ಆ ಆಸನವಾಯಿತು—ಏನೂ ಪ್ರಯೋಜನವಾಗಲಿಲ್ಲ. ಒಂದು ಗುಲಗಂಜಿಯಷ್ಟೂ ತೂಕ ಕಡಿಮೆಯಾಗಲಿಲ್ಲ! ವ್ಯಾಯಾಮಶಾಲೆ ಶ್ರೀಕಂಠಯ್ಯನವರಿಗೆ ತಮ್ಮ ವಿಧಾನಗಳ ಬಗ್ಗೆಯೇ ಅನುಮಾನಗಳು ಬರಲು ಶುರುವಾಯಿತು. ಕಡೆಗೂ ಲಂಬೋದರರಾಯರಿಗೆ ‘ಕ್ಷಮಿಸಿ’ ಎಂದು ಹೇಳಿ ಅವರ ಹಣವನ್ನು ವಾಪಸ್ ಮಾಡಿದರು. ಲಡಾಕ್‌ನ ಕಾರಕೋರಂ ಪರ್ವತ ಶ್ರೇಣಿಯ ಗುಹೆಯೊಂದರಲ್ಲಿ ವಾಸಿಸುವ ಲಾಮಾ ಪವಾಡಗಳನ್ನು ಮಾಡುತ್ತಾನೆ ಎಂದು ಕೇಳಿ ಲಂಬೋದರರಾಯರು ಅಲ್ಲಿಗೂ ಹೋದರು (ಹೇಗೆ ಹೋದರು ಎಂದು ಕೇಳಬೇಡಿ). ಹೋದ ಮೇಲೆ ಅವನೊಬ್ಬ ವೃದ್ಧ ಬೌದ್ಧ ಸಾಧು ಎಂದು ತಿಳಿಯಿತು. ‘ನಾನು ಯಾವ ಪವಾಡವನ್ನೂ ಮಾಡಿಲ್ಲ’ ಎಂದು ಹೇಳಿ, ಅವನು ರಾಯರಿಗೆ ಇರುವುದರಲ್ಲೇ ತೃಪ್ತಿಯಿಂದ ಇರಿ ಎಂದು ಅಲ್ಲೇ ಇದ್ದ ದೊಡ್ಡ ಲಾಫಿಂಗ್ ಬುದ್ಧನ ಹೊಟ್ಟೆ ತೋರಿಸಿದನಂತೆ. ಅಂತೂ ಲಂಬೋದರರಾಯರು ನಿರಾಳರಾಗಿ ವಾಪಸ್ ಬಂದು ಹಲವಾರು ವರ್ಷಗಳು ಹಾಗೆಯೇ ಇದ್ದರು.

ಒಂದು ದಿನ ಏನಾಯಿತೋ ಏನೋ, ಕ್ಲಬ್ಬಿನಲ್ಲಿ “ನನಗೆ ಈ ತೂಕದಿಂದ ಮುಕ್ತಿ ಬೇಕು, ರಾಮನಾಥಯ್ಯನವರೇ. ನೀವು ಭಿಷಗ್ರತ್ನ ನಂಜುಂಡಯ್ಯನವರ ಪುತ್ರರು, ಏನಾದರೂ ಉಪಾಯವಿರಲೇಬೇಕಲ್ಲವೇ?” ಎಂದರು.“ಹೌದು, ನಮ್ಮ ತಂದೆ ದೊಡ್ಡ ವೈದ್ಯರಾಗಿದ್ದರು. ಆದರೆ ಅವರದ್ದೆಲ್ಲಾ ಸರಳ ಔಷಧಿಗಳು. ಈ ತರಹದ ವಿಚಿತ್ರ ಔಷಧಿಗಳು ಅವರ ಮನಸ್ಸಿನಲ್ಲೂ ಇದ್ದಿರಲಾರವು. ಆದರೆ…” ನಿಧಾನವಾಗಿ ನನ್ನ ಯೋಚನೆಗಳು ಇನ್ನೂ ಹಿಂದೆ ಹೋದವು. “ನನ್ನ ಮುತ್ತಜ್ಜಿ ಲಕ್ಷ್ಮಮ್ಮ !  ಅವರಿಂದಲೇ ನಮ್ಮ ತಂದೆಗೆ ವೈದ್ಯಶಾಸ್ತ್ರ ಓದಲು ಸ್ಪೂರ್ತಿ ಸಿಕ್ಕಿತು ಎಂದು ಕೇಳಿದ್ದೆ. ಲಕ್ಷ್ಮಮ್ಮ ಮಲಯಾಳ ದೇಶದಿಂದ ಬಂದವರು. ಅಲ್ಲಿ ತಂತ್ರ-ಮಂತ್ರ ಏನೋ ಕಲಿತಿದ್ದಿರಬಹುದು. ಏನೇನೋ ವಿಚಿತ್ರ ಗಿಡಮೂಲಿಕೆಗಳಿಂದ  ಔಷಧಿಗಳನ್ನು ತಯಾರಿಸುತ್ತಿದ್ದರಂತೆ. ಊರಿನ ಹೊರಗೆ ಹೋಗಿ ಮರಗಳ ಮಧ್ಯೆ ಗಿಡಗಂಟಿ ಹುಡುಕಿ ಯಾವು ಯಾವುದೋ ಎಲೆಗಳನ್ನು ತರುತ್ತಿದ್ದರಂತೆ. ಅವರು ವಿದ್ಯಾವಂತರಾಗಿದ್ದು ಇವೆಲ್ಲವನ್ನೂ ಬರೆದಿಡುತ್ತಿದ್ದರು. ನಮ್ಮ ತಂದೆಯನ್ನು ಅವರ ಬಗ್ಗೆ ಕೇಳಿದಾಗ ಅವರು ತೇಲಿಸಿ ಉತ್ತರ ಕೊಡುತ್ತಿದ್ದರು. ನಮ್ಮ ಮುತ್ತಜ್ಜನ ಬಗ್ಗೆಯೂ ಏನೇನೋ ಸುದ್ದಿಗಳಿದ್ದವು; ಅವರು ‘ಹಾರಿಹೋದರು’ ಎಂದೆಲ್ಲಾ ಅರ್ಥವಿಲ್ಲದ ಮಾತುಗಳನ್ನು ಕೇಳಿದ್ದೆ.

ಸರಿ ನೋಡೋಣ ಎಂದು ಅಟ್ಟದ ಮೇಲೆ ನಮ್ಮ ತಂದೆ ಇಟ್ಟಿದ್ದ ಹಳೆಯ ಕಬ್ಬಿಣದ ಪೆಟ್ಟಿಗೆಯನ್ನು ತೆಗೆದೆ. ಕಾಗದ ಪತ್ರಗಳ ಹಲವಾರು ಕಟ್ಟುಗಳು. ಒಂದರ ಮೇಲೆ ‘ಅಜ್ಜಿ’ ಎಂದು ಬರೆದಿತ್ತು. ಒಳಗಿನ ಕಾಗದಗಳಲ್ಲಿ ಕೆಲವು ಶಿಥಿಲವಾಗಿದ್ದವು. ಅನೇಕ ಪತ್ರಗಳ ಮೇಲೆ ಏನೋ ಬರಹಗಳಿದ್ದವು… ಯಾವುದೋ ಲಿಪಿಯಲ್ಲಿ, ಮಲಯಾಳ ಭಾಷೆಯಲ್ಲಿರಬೇಕು. ಏನೇ ಆಗಲಿ ಎಂದು ಆ ಕಾಗದದ ಕಟ್ಟನ್ನು ತೆಗೆದುಕೊಂಡು ಅಟ್ಟದಿಂದ ಕೆಳಗಿಳಿದೆ. ಅವುಗಳನ್ನು ನನ್ನ ಮಲಯಾಳಿ ಗೆಳೆಯನಿಗೆ ತೋರಿಸಿ ಎಲ್ಲವನ್ನೂ ಅನುವಾದ ಮಾಡಿಸಿಕೊಂಡೆ. ಲಕ್ಷ್ಮಮ್ಮನವರು ಪುಸ್ತಕಗಳನ್ನು ಓದಿ ಏನೇನೋ ಬರೆದಿಟ್ಟುಕೊಂಡಿದ್ದರು. ಖಗೋಳ ವಿಜ್ಞಾನದ ಬಗ್ಗೆ ಏನೇನೋ ರೇಖಾಚಿತ್ರಗಳು (ಕೇರಳದಲ್ಲಿ ಈ ವಿಷಯದಲ್ಲಿ ಶತಮಾನಗಳ ಹಿಂದೆ ಬಹಳ ಸಂಶೋಧನೆ ಮಾಡಿದ್ದರು ಎಂದು ಓದಿದ್ದೆ). ಯಾವುದೋ ಅನುವಾದಗಳೂ ಇದ್ದವು—‘ಡಾನ್ ಕಿಹೋಟೆ’ ಸ್ಪ್ಯಾನಿಷ್ ಪುಸ್ತಕದ ಒಂದು ಅಧ್ಯಾಯ! ಎಲ್ಲಿಂದ ಬಂದಿತ್ತೋ ಈ ವಿದ್ವತ್ತು ಆಕೆಗೆ!

ಒಂದು ಚಿಕ್ಕ ಕಟ್ಟು ಬೇರೆಯೇ ಇತ್ತು. ‘ಔಷಧಗಳು’ ಎಂದು ಮೇಲೆ ಬರೆದಿತ್ತು. ಅವುಗಳಲ್ಲಿ ಒಂದರಲ್ಲಿ “ತೂಕವನ್ನು ಕಳೆದುಕೊಳ್ಳುವ ಔಷಧ” ಎಂದು ಇತ್ತು. ಓದಿದಾಗ: ‘ಆಗುಂಬೆಯಿಂದ ಈ ಮೂಲಿಕೆಗಳನ್ನು ತರಿಸಿ ಇಟ್ಟುಕೊಳ್ಳಿ (ಹತ್ತು ಹೆಸರುಗಳಿದ್ದವು). ನಂತರ ಅವುಗಳನ್ನು ಒಣಗಿಸಿ, ಪುಡಿ ಮಾಡಿ ತುಂಗಾ ನದಿಯ ನೀರು ಮತ್ತು ಜೇನುತುಪ್ಪದ ಜೊತೆ ತೆಗೆದುಕೊಳ್ಳಿ. ಒಂದೇ ಚಮಚ ! ಮೂರು ರಾತ್ರಿ ತೆಗೆದುಕೊಳ್ಳಬೇಕು. ಎಚ್ಚರಿಕೆ: ಒಂದೇ ಚಮಚ, ಮೂರು ದಿನ ಮಾತ್ರ!’

ನಾನು ರಾಯರನ್ನು ತಡೆಯಲು ಯತ್ನಿಸಿದೆ: “ನಾವೇ ಮೂಲಿಕೆಗಳನ್ನು ಸಂಗ್ರಹಿಸಬೇಕು. ಆದರೂ ಇದನ್ನು ತೆಗೆದುಕೊಳ್ಳುವುದು ಅಪಾಯಕರವಾಗಬಹುದು, ಯೋಚಿಸಿ.” ಆದರೆ ಅವರು ಕೇಳಲಿಲ್ಲ. “ನನಗೆ ಕೊಡಿ, ನಾನು ಮೂಲಿಕೆಗಳನ್ನು ತರಿಸುತ್ತೇನೆ, ಪ್ರಯತ್ನಿಸುತ್ತೇನೆ” ಎಂದರು. ‘ಆಗುಂಬೆಯಲ್ಲೇ ಎಲ್ಲ ಸಿಕ್ಕಿತು’ ಎಂದು ಹೇಳಿಕಳುಹಿಸಿದ್ದರು. ಹಾಗೇ ಕೆಲವು ದಿನಗಳ ನಂತರ “ತುಂಗೆಯ ನೀರೂ ಬಂದಿದೆ, ಇವತ್ತು ರಾತ್ರಿ ಔಷಧ ತೆಗೆದುಕೊಳ್ಳುತ್ತೇನೆ” ಎಂದು ಸಂದೇಶ ಬಂದಿತ್ತು. ಎರಡು ದಿನಗಳ ನಂತರ ಅವರಿಂದ ಒಂದು ಸಂದೇಶ ಬಂತು: “ಔಷಧಿ ಕೆಲಸ ಮಾಡುತ್ತಿದೆ, ತೂಕ ಸ್ವಲ್ಪ ಇಳಿದಿದೆ.” 

ಆದರೆ ಒಂದು ವಾರದ ನಂತರ ಅವರ ಸೆಕ್ರೆಟರಿ ಕ್ಲಬ್ಬಿಗೆ ಓಡೋಡಿ ಬಂದು, “ಬೇಗ ಬನ್ನಿ ಸರ್! ಯಜಮಾನರು ಕರೀತಿದ್ದಾರೆ,” ಎಂದು ಹೇಳಿದ. ಅವನ ಜೊತೆಯಲ್ಲೇ ರಾಯರ ಮನೆಗೆ ಹೊರಟೆ. “ಸರ್ ಇಪ್ಪತ್ತನಾಲ್ಕು ಗಂಟೆಗಳಿಂದ ತಮ್ಮ ಕೋಣೆಯಿಂದ ಹೊರಬಂದಿಲ್ಲ,” ಎಂದ.ನಾನು ಒಳಗೆ ಹೋದೆ. ಕೋಣೆ ತುಂಬಾ ಅವ್ಯವಸ್ಥೆಯಾಗಿರುವುದು ಕಂಡಿತು.  “ಬನ್ನಿ, ಬನ್ನಿ! ಇಲ್ಲಿ, ಇಲ್ಲೀ!” ರಾಯರ ಧ್ವನಿ. ಆದರೆ ಎಲ್ಲಿ? ಈ ಕಡೆ ಆ ಕಡೆ ನೋಡಿ, ಕಡೆಗೆ… ಅಲ್ಲಿದ್ದರು ಲಂಬೋದರರಾಯರು! ಛಾವಣಿಯ (ಸೀಲಿಂಗ್) ಹತ್ತಿರ, ಒಂದು ಮೂಲೆಯಲ್ಲಿ ಅವರ ಬೃಹತ್ ದೇಹ ತೇಲುತ್ತಿತ್ತು! ಗಾಳಿಯಿಂದ ತುಂಬಿದ ದೊಡ್ಡ ಬಲೂನಿನಂತೆ ಮೇಲಕ್ಕೆ ತೇಲಿ ಛಾವಣಿಗೆ ಅಪ್ಪಳಿಸುತ್ತಿದ್ದರು.

“ರಾಯರೇ! ಇದು ಏನು?”. ಅವರು ಕಷ್ಟಪಟ್ಟು ಗೋಡೆಯನ್ನು ತಡವಿಕೊಂಡು ಕೆಳಗೆ ಬರಲು ಪ್ರಯತ್ನಿಸುತ್ತಿದ್ದರು. “ಆ ಔಷಧ!” ಎಂದು ಅವರು ಜೋರಾಗಿ ಉಸಿರಾಡುತ್ತ ಹೇಳಿದರು. “ನಿಮ್ಮ ಮುತ್ತಜ್ಜಿಯ ಔಷಧ!” ಅಷ್ಟರಲ್ಲಿ ಅವರು ಗೋಡೆಯ ಮೇಲಿನ ಚಿತ್ರವನ್ನು ಹಿಡಿದುಕೊಂಡರು. ಚಿತ್ರವೂ ಗೋಡೆಯಿಂದ ಕಿತ್ತುಬಂತು; ರಾಯರು ಮತ್ತೆ ಮೇಲಕ್ಕೆ ಹಾರಿ ಛಾವಣಿಗೆ ಅಪ್ಪಳಿಸಿದರು. ಆಗ ನನಗೆ ವಿಷಯ ಅರ್ಥವಾಗಲು ಶುರುವಾಯಿತು.“ಅಯ್ಯೋ ರಾಯರೇ! ಔಷಧಿ ಕೆಲಸ ಮಾಡಿದೆ.” “ಚೆನ್ನಾಗಿಯೇ ಮಾಡಿದೆ!” “ಹೌದು, ನೀವು ಹೆಚ್ಚು ತೆಗೆದುಕೊಂಡುಬಿಟ್ಟಿದ್ದೀರಿ.” “ಒಂದರ ಬದಲು ಮೂರು ಚಮಚ ತೆಗೆದುಕೊಂಡೆ!” “ಅಂತೂ ನಿಮ್ಮ ತೂಕವೆಲ್ಲಾ ಹೋಗಿಬಿಟ್ಟಿದೆ.” “ಅದಕ್ಕೆ ಈ ಗತಿ!” ಎಂದು ಹಲುಬಿಕೊಂಡರು. “ಔಷಧವು ನಿಮ್ಮ ತೂಕವನ್ನೇ ತೆಗೆದುಹಾಕಿದೆ!” “ಎಷ್ಟು ಸತಿ ಹೇಳ್ತೀರಿ! ಈಗ ಏನಾದರೂ ಮಾಡಿ,” ಎಂದರು ಲಂಬೋದರರಾಯರು.

ನಾನು ಅವರ ಸಮಸ್ಯೆಗೆ ಪರಿಹಾರ ಹುಡುಕತೊಡಗಿದೆ. ಸೆಕ್ರೆಟರಿಗೆ ತಿಳಿಸಲೇಬೇಕಾಯಿತು. ಅಂತೂ ಅವರಿಗೆ ಏನೆಂದರೆ ಏನೇನೂ ತೂಕವಿರದೆ , ರಾಯರು ಛಾವಣಿಯ ಮೇಲೆಯೇ ತಲೆಕೆಳಗಾಗಿ ಓಡಾಡಬೇಕಾಗಿತ್ತು. ಹಾಸಿಗೆಯನ್ನೂ ತಲೆಕೆಳಗಾಗಿ ಕಟ್ಟಿದೆವು. ಆಹಾರವನ್ನು ಪುಸ್ತಕದ ಕಪಾಟಿನ ಮೇಲ್ಭಾಗದಲ್ಲಿ ಇಡಬೇಕಾಯಿತು. ನೆಲಕ್ಕೆ ಬರಬೇಕಾದರೆ ‘ಬ್ರಿಟಿಷ್ ವಿಶ್ವಕೋಶ’ದ (ಎನ್ಸೈಕ್ಲೋಪೀಡಿಯಾ) ಕೆಲವು ತೂಕದ ಪುಸ್ತಕಗಳನ್ನು ಹಿಡಿದುಕೊಂಡು ನಿಧಾನವಾಗಿ ಕೆಳಗೆ ಇಳಿಯಬೇಕಿತ್ತು. ರಾಯರು ಒಂದು ದೊಡ್ಡ ದಪ್ಪ ನೊಣದಂತೆ, ಛಾವಣಿಯ ಮೇಲೆ ತಲೆಕೆಳಗಾಗಿ ಓಡಾಡುತ್ತಿದ್ದರು.“ಹೊರಗೆ ಮಾತ್ರ ಹೋಗಬೇಡಿ” ಎಂದು ಎಚ್ಚರಿಕೆ ಕೊಟ್ಟೆ.

ಆದರೆ ಒಂದು ದಿನ ನನಗೆ ಇನ್ನೂ ಸರಳವಾದ ಉಪಾಯ ಹೊಳೆಯಿತು. “ರಾಯರೇ, ಇವೆಲ್ಲಾ ಏಕೆ? ನಿಮ್ಮ ಬಟ್ಟೆಗಳಿಗೆ ಸೀಸ ಹಾಕಿಬಿಡೋಣ!” ಸೀಸದ ಹಾಳೆಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಅವರ ಒಳಬಟ್ಟೆಗಳಿಗೆ ಹೊಲೆಸಿದೆವು. ಸೀಸದ ಅಡಿಭಾಗವಿರುವ ಬೂಟುಗಳನ್ನು ಧರಿಸಲು ವ್ಯವಸ್ಥೆ ಮಾಡಿದೆವು. ಬೇಕಾದರೆ ಸೀಸದ ಚೀಲವನ್ನೂ ಕೈಯಲ್ಲಿ ಹಿಡಿದುಕೊಳ್ಳಬಹುದು. ಹೀಗೆ ಮಾಡಿದರೆ ಅವರು ಮತ್ತೆ ನೆಲದ ಮೇಲೆ ಸರಿಯಾಗಿ ನಡೆಯಬಹುದು. ರಾಯರಿಗೆ ಬಹಳ ಸಂತೋಷವಾಯಿತು.“ಹಾಗಾದರೆ ನಾನು ಮತ್ತೆ ಕ್ಲಬ್ಬಿಗೆ ಬರಬಹುದೇ?” “ಖಂಡಿತ, ಹಾಗೂ ಹಿಂದಿನಂತೆ ತಿನ್ನಲು ಶುರು ಮಾಡಿ,” ಎಂದೆ. ಅವರು ಮತ್ತೆ ಕ್ಲಬ್ಬಿಗೆ ಬರಲು ಶುರುಮಾಡಿದರು. ಈ ವಿಷಯ ಜಗತ್ತಿನಲ್ಲಿ ಯಾರಿಗೂ ಗೊತ್ತಿಲ್ಲ—ಅವರ ಸೆಕ್ರೆಟರಿ ಮತ್ತು ನನಗೆ ಮಾತ್ರ ಗೊತ್ತು—ಈ ಅಪಾರ ದಪ್ಪನಾದ ಪೈಕ್ರಾಫ್ಟ್‌ನ ತೂಕ ಬಹುತೇಕ ಶೂನ್ಯ. ಆದರೂ ಅವರಿಗೆ ಒಂದು ಭಯ ಮಾತ್ರ ಇದೆ: “ರಹಸ್ಯ ಯಾರಿಗೂ ಗೊತ್ತಾಗುವುದಿಲ್ಲ ತಾನೆ?” ಎಂದು ಅವರು ಆಗಾಗ ಕೇಳುತ್ತಿರುತ್ತಾರೆ.

ಲಂಬೋದರರಾಯರ ಈ ಪ್ರಸಂಗ ಕೇಳಿ ಬಹಳ ವಿಸ್ಮಯವಾಯಿತು. ಅದರಲ್ಲೂ ಒಂದು ಅಂಶ ನನ್ನ ಮನಸ್ಸಿನಲ್ಲಿ ಉಳಿದೇ ಹೋಯಿತು. “ನಮ್ಮ ಮುತ್ತಜ್ಜ ಹಾರಿಹೋದರು ಎಂದು ಅರ್ಥವಿಲ್ಲದ ಸುದ್ದಿಗಳನ್ನು ಕೇಳಿದ್ದೆ” ಎಂದು ರಾಮನಾಥಯ್ಯ ಹೇಳಿದ್ದರು. ಆದರೆ ರಾಯರ ಕಥೆ ಕೇಳಿದ ನಂತರ ನನಗೆ ಇದು ಅರ್ಥವಿಲ್ಲದ ಸುದ್ದಿ ಎಂದು ಅನಿಸಲಿಲ್ಲ. ಆ ಸಂಶಯವನ್ನೇ ರಾಮನಾಥಯ್ಯನವರಿಗೆ ವ್ಯಕ್ತಪಡಿಸಿದೆ. ಅವರೂ ಯೋಚನೆ ಮಾಡಲು ಶುರುಮಾಡಿರಬೇಕು. ಇದಾದ ಒಂದೆರಡು ದಿನಗಳ ನಂತರ ಅವರು ನನ್ನ ಬಳಿ ಬಂದು, “ಅದು ನಿಜವೋ ಏನೋ! ನಮ್ಮ ಮುತ್ತಜ್ಜಿ ಅವರ ಗಂಡನ ಮೇಲೆ ಈ ಔಷಧಿ ಪ್ರಯೋಗಿಸಿದ್ದಿರಬಹುದು. ಈಗ ನೆನಪಾಗುತ್ತಿದೆ—ಅವರ ಹಜಾರದ ಛಾವಣಿಯಲ್ಲಿ ಒಂದು ಕಡೆ ಗಾರೆ ತುಂಬಾ ಹೊರಟುಹೋಗಿತ್ತು. ಮೊದಲ ಪ್ರಯೋಗಗಳು ಹಜಾರದಲ್ಲಿ ಮತ್ತು ಮುಂದಿನ ಪ್ರಯೋಗ ಮನೆಯ ಹೊರಗೆ ನಡೆದಿರಬೇಕು… ಹೌದು, ಮುತ್ತಜ್ಜಿ ಬಲವಂತಕ್ಕೋ ಅಥವಾ ಸ್ವಪ್ರೇರಣೆಯಿಂದಲೋ, ಅಂತೂ ಮುತ್ತಜ್ಜ ಅದನ್ನು ಕುಡಿದು ತೇಲುತ್ತಾ ಹಾರಿ ಹೋಗಿರಬೇಕು!” ಎಂದರು.ಇದಾದ ನಂತರ ಏನೋ ಕೆಲಸವಿದ್ದಿದ್ದರಿಂದ ಬಹಳ ದಿನ ಕ್ಲಬ್ಬಿಗೆ ಹೋಗಲಿಲ್ಲ. ಒಂದು ದಿನ ಕ್ಲಬ್ಬಿನ ಅಧ್ಯಕ್ಷರು ಫೋನ್ ಮಾಡಿ ರಾಮನಾಥಯ್ಯನವರು ಬಹಳ ದಿನಗಳಿಂದ ಬಂದಿಲ್ಲ ಎಂದು ಚಿಂತೆಯನ್ನು ವ್ಯಕ್ತಪಡಿಸಿದರು. ನಾನು ಹೊರಗೆ ಹೋಗಿ ಆಕಾಶದತ್ತ ನೋಡಿದೆ; ಕಣ್ಣಲ್ಲಿ ನೀರು ಬಂದಿತು.

(ಇದು ಎಚ್.ಜಿ. ವೆಲ್ಸ್ ಅವರ ‘ದಿ ಟ್ರೂತ್ ಅಬೌಟ್ ಪೈಕ್ರಾಫ್ಟ್’ ಫ್ಯಾಂಟಸಿ ಕಥೆಯ ರೂಪಾಂತರ)

ಕೃಪೆ: ಅಪರಂಜಿ

‍ಲೇಖಕರು Admin

5 October, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading