ಹದವಾಗಿ ಬೆಂದು, ಮುದ ನೀಡುವ ಪೆಲತ್ತಡ್ಕ ಕಾವ್ಯ

ಮೆಹಬೂಬ್ ಮಠದ

ಒಮ್ಮೊಮ್ಮೆ ಕವಿತೆ ಬರೆದ ಬಳಿಕ ನಡುರಾತ್ರಿ ನಿದ್ದೆಯೆಲ್ಲ ಬಿಟ್ಟು ಹೋದಂತಾಗಿ ಕಣ್ಣರಳಿಸಿ ಕುಳಿತದ್ದೂ ಇದೆ. ಕೆಲವೊಮ್ಮೆ ಕವಿತೆ ಕೈ ಜಾರಿ ಮುನಿಸಿಕೊಂಡಿದ್ದೂ ಇದೆ, ಇನ್ನಾವುದೋ ಕೆಲಸಕ್ಕೆ ಸಿಲುಕಿ ಒಲಿದ ಕವಿತೆಯನ್ನು ಕಳೆದುಕೊಂಡದ್ದೂ ಇದೆ ಎಂದು ಕಾವ್ಯವನ್ನು ಧ್ಯಾನಿಸುತ್ತ ಇರುವ, ಕವಿತೆ ಒಲಿಯುವ ಕ್ಷಣ ಅಮೂಲ್ಯವಾದದ್ದು. ಈ ಪ್ರಫುಲ್ಲ ಕ್ಷಣಕ್ಕಾಗಿಯಾದರೂ ಕಾವ್ಯ ಸೃಷ್ಟಿ ಮಾಡಬೇಕು ಎಂಬ ಆಶಯವನ್ನು ಹೊಂದಿರುವ ʻಗೌರಿ ದುಃಖʼ ಕವನಸಂಕಲನದ ಮೂಲಕ ತಮ್ಮ ವಿಶಿಷ್ಟ ಕವಿತಾ ಶೈಲಿಯಿಂದ ಕನ್ನಡಕ್ಕೆ ವಿಭಿನ್ನ ಕವಿತೆಗಳನ್ನು ನೀಡಿದ, ಸುದ್ದಿಮನೆಯ ಸಕಲೆಂಟು ಸಂಕಟ-ಒತ್ತಡಗಳ ನಡುವೆಯೂ ಕಾವ್ಯ ಮೋಹ ಉಳಿಸಿಕೊಂಡು ಬಂದಿರುವ ಕವಿ ವಿದ್ಯಾರಶ್ಮಿ ಪೆಲತ್ತಡ್ಕ ತಮ್ಮ ಎರಡನೇ ಕವನಸಂಕಲನ ʻಕೆರೆ – ದಡʼದ ಮೂಲಕ ಮತ್ತೊಮ್ಮೆ ಕಾವ್ಯಾನುಸಂಧಾನದಲ್ಲಿ ತೊಡಗಿಸಿಕೊಂಡಿದ್ದಾರೆ. ದಿನನಿತ್ಯ ಅಕ್ಷರಗಳೊಂದಿಗೆ ಆಡುತ್ತ, ಹಾಡುತ್ತ, ಮಾತಾಡುತ್ತ ಕೆಲವೊಮ್ಮೆ ಜಗಳ ಮಾಡುತ್ತಲೂ ಇರುವ ಇವರೊಳಗಿನ ಕವಿ ಸದಾ ಜಾಗೃನಾಗಿ ಇರುತ್ತಾನೆ.

“ವಿದ್ಯಾರಶ್ಮಿ ಎಂಬ ಸ್ನಿಗ್ಧ ನಗುವಿನ ಸುಂದರ ಹುಡುಗಿಯ ಒಳಲೋಕದ ವೈವಿಧ್ಯ, ವಿಸ್ತಾರ ಹಾಗೂ ಚಿಂತನಾಶೀಲ ಅಭಿವ್ಯಕ್ತಿಯ ಕ್ರಮ ಸಂಕಲನದ ಹೂರಣವನ್ನು ಹೆಚ್ಚು ಸತ್ವಶಾಲಿಯಾಗಿಸಿದೆ. ಬದುಕು ಅದನ್ನು ನೋಡುವ ದೃಷ್ಟಿಕೋನ, ದಿನವಹಿ ನೋಡಿದ್ದನ್ನೇ ನೋಡುವ ಯಾಂತ್ರಿಕ ಜಗತ್ತಿಗೆ ವಿದ್ಯಾರಶ್ಮಿ ಮುಡಿಸುವ ಹೊಸ ನುಡಿ ಕುಸುರಿಗಳು ವಾಹ್! ಎನ್ನುವಷ್ಟು ಸೊಗಸಾಗಿವೆ. ಯುವಕವಿಗಳ ಪದ್ಯಗಳಲ್ಲಿ ನಮಗೆ ಸಿಗಬಹುದಾದ ಆಧುನಿಕ ಜಗತ್ತಿನ ತಲ್ಲಣಗಳು, ಕವಿತೆಯ ವಸ್ತು ವಿಸ್ತಾರದ ಹೊಸ ಸಾಧ್ಯತೆಗಳು, ವಿಷಯ ನಿರೂಪಣೆಯಲ್ಲಿರುವ ತಾಜಾತನ, ಭಾಷಾ ಬಳಕೆಯಲ್ಲಿ ಕಾಣಬಹುದಾದ ನವೀನತೆಗಳಿಂದ ಭರಪೂರ ಮೈದುಂಬಿಕೊಂಡಿರುವ ಸಂಕಲನವಿದು” ಎಂದು ಹೆಸರಾಂತ ಕವಿಯಾದ ಆರತಿ ಎಚ್.ಎನ್.ರವರು ಈ ಕವನಸಂಕಲವನ್ನು ಮೆಚ್ಚಿಕೊಂಡು ಬರೆಯುತ್ತಾರೆ.

ನೀನೆಂದರೆ ಬಲು ಮುದ್ದು ನನಗೆ

ಅಂಗಡಿಯಿಂದ ತಂದ

ಪುಟ್ಟಮ್ಮನ ಹೊಸ ಗೊಂಬೆಯಂತೆ,

ಮತ್ತೆ ಮತ್ತೆ ನೋಡುತ್ತೇನೆ

ಸವರುತ್ತೇನೆ, ಘಮ ಆಸ್ವಾದಿಸುತ್ತೇನೆ.

ಪ್ರತಿಯೊಬ್ಬ ಕವಿಗೆ ತನ್ನ ಪ್ರತಿ ಕವಿತೆಯೂ ಒಂದು ನವಜಾತ ಕೂಸಿನಂತೆ. ಕಾವ್ಯ ಪ್ರಕ್ರಿಯೆ ಎಂಬುದು ಪ್ರಸವದಂತೆ ಎಂಬುದನ್ನು ಹೇಳುತ್ತ, ತಾನು ಬರೆದ ಕವಿತೆಯನ್ನು ಅದೆಷ್ಟು ಜೋಪಾನದಿಂದ ತಿದ್ದಿ ತೀಡಿ ಅದಕೊಂದು ಬಹುಸುಂದರ ರೂಪವನ್ನು ನೀಡುತ್ತಾರೆ ಎಂಬುದನ್ನು ಈ ಕವಿತೆ ಅಪ್ಯಾಯಮಾನವಾಗಿ ಅರ್ಥ ಮಾಡಿಸುತ್ತದೆ. ಅಷ್ಟೇ ಅಲ್ಲದೆ ಒಮ್ಮೆ ಬರೆದ ನಂತರ ಆ ಕವಿತೆ ಎಂಬ ಕೂಸನ್ನು ಓದುಗರ ಬೀದಿಯಲಿ ಆಡುವಂತೆ, ಅದು ಇನ್ನೂ ಸ್ವಲ್ಪ ಬೆಳೆದ ನಂತರ ಓದುಗ ದೊರೆಗಳ ಸುಪರ್ದಿಗೆ ಸೇರುತ್ತದೆ. ಆಗ ಅವರು ಕೂಡ ಅದನ್ನು ಮಮತೆಯಿಂದ ಎತ್ತಿಕೊಂಡು ಮುದ್ದಾಡುವಂತಾಗಲಿ ಎನ್ನುವ ಬಲವಾದ ಆಶಯ ಇಲ್ಲಿದೆ. ಕಾವ್ಯವೆಂಬುದು ನಮಗಷ್ಟೇ ಸಂತೃಪ್ತಿ ಕೊಟ್ಟರೆ ಸಾಲದು ಅದು ಓದುಗರಿಗೂ ಕೂಡ ಮಧುರಾನುಭೂತಿ ಕೊಡುವಂತಿರಬೇಕು. ಬರವಣಿಗೆ ಎಂಬುದು ಅವಸರದ ಕೆಲಸವಾಗದೆ ಅದೊಂದು ಧ್ಯಾನವಾಗಬೇಕು ಎಂದು ಕವಿ ಹೇಳುತ್ತಾರೆ.

ಒಂದೊಂದೇ ಚೌಕ ದಾಟಿ

ನಿಂತಿರುತ್ತೇನೆ ಗೆಲುವಿನ ಕೊನೆಯ ಮೆಟ್ಟಿಲಿನಲ್ಲಿ,

ಹಾವೊಂದು ಸಿಕ್ಕಿ ಜರ್ರನೆ

ಇಳಿದೇ ಬಿಡುವೆ ಕೆಳಕೆಳಗೆ

ಬದುಕೆಂಬುದು ಅನೂಹ್ಯ ತಿರುವುಗಳಿರುವ ಎಂದೂ ಮುಗಿಯದ ದಾರಿಯ ಪಯಣ ಎಂಬುದನ್ನ ಈ ಕವಿತೆಯ ಸಾಲುಗಳು ಒತ್ತಿ ಒತ್ತಿ ಹೇಳುತ್ತವೆ. ನಾವು ನಮ್ಮದೇ ಆದ ಶತಪ್ರಯತ್ನಗಳ ಮೂಲಕ ಹಗಲು ರಾತ್ರಿಗಳ ಪರಿವೆಯಿಲ್ಲದೆ ಅಂದುಕೊಂಡಿದ್ದನ್ನು ಸಾಧಿಸಲು ಹೆಣಗಾಡಿರುತ್ತೇವೆ. ಇನ್ನೇನು ನಮ್ಮ ಗಮ್ಯ ಸಾಧಿಸಿಯೇ ಬಿಟ್ಟೆವು, ನಾವು ಕನಸಿದ್ದು ನಮ್ಮ ಕೈ ಸೇರಿಯೇ ಬಿಟ್ಟಿತು ಎನ್ನುವಾಗ ವಿಧಿ ಅದನ್ನು ಹೇಗೆ ತಪ್ಪಿಸುತ್ತದೆ ಮತ್ತು ನಾವು ಯೋಧನಂತೆ ಮತ್ತೆ ಮತ್ತೆ ಹೋರಾಡಲೇಬೇಕು ಎನ್ನುವ ಸತ್ಯವನ್ನು ಕವಿತೆ ಮನವರಿಕೆ ಮಾಡಿಕೊಡುತ್ತದೆ.

ಮಟಮಟ ಮಧ್ಯಾಹ್ನವೂ

ಅಡರುವ ಬೆನ್ನಹಿಂದಿನ ಯಾರದೋ ವಾಸನೆ,

ತಿರುಗಿ ನೋಡಲಾರದ ಹಿಂಜರಿಕೆಗೆ

ಈ ಕನ್ನಡಿಯ ನೆರವು ಬೇಕೇ ಬೇಕು

ಸಮಕಾಲೀನ ಸಂದರ್ಭದಲ್ಲಿ ದುಡಿಯಲೆಂದು ಹೊರ ಹೋಗುವ ಮಹಿಳೆ ಮಾತ್ರವಲ್ಲ ಮನೆಯ ಅಗತ್ಯ ಸಾಮಾನುಗಳನ್ನು ತರಲೆಂದು ಮಾರುಕಟ್ಟೆಗೆ ಹೋಗುವ ಮಹಿಳೆಯೂ ಸುರಕ್ಷಿತವಾಗಿ ಮನೆಗೆ ಬರುವುದು ಎಷ್ಟೊಂದು ಯಾತನದಾಯಕವಾಗಿದೆ. ಕಣ್ಣುಗಳಲ್ಲೇ ಆಕೆಯನ್ನು ಅತ್ಯಾಚಾರ ಮಾಡುವ ದುರುಳರ ಪಡೆಯೇ ಬೆನ್ನಹಿಂದೆ ಬಿದ್ದಿರುತ್ತದೆ ಎನ್ನುವ ಅಪಾಯಕಾರಿ ಸನ್ನಿವೇಶದ ಕುರಿತು ಕವಿತೆ ತೀವ್ರವಾಗಿ ಪ್ರತಿಭಟಿಸುತ್ತದೆ. ಅಂತಹ ಹೀನ ಸುಳಿಯ ಕಾಮಾಂಧರಿಂದ ತಪ್ಪಿಸಿಕೊಳ್ಳಲು ಎಲ್ಲ ಹೆಣ್ಣುಮಕ್ಕಳಿಗೂ ರಿಯರ್ ವ್ಯೂ ಮಿರರ್ ಎದುರಿಗೆ ಇರಬೇಕು ಎಂದು ಕವಿ ಆಶಿಸುತ್ತಾರೆ. ಗಂಡಸರಿಗೂ ಅವರ ಬೆನ್ನಹಿಂದೆ ಚೂರಿ ಹಾಕುವ ನಂಬಿಕೆದ್ರೋಹಿಗಳನ್ನು ಕಂಡುಹಿಡಿಯಲು ಇದರ ಅಗತ್ಯ ಬೀಳಬಹುದು. ಆದರೆ ಕೆಲವೊಮ್ಮೆ ಆ ಕನ್ನಡಿಯೂ ಮೋಸ ಹೋಗಬಹುದು ಎಂದು ಎಚ್ಚರಿಸುತ್ತಾರೆ.

ದಿನ ದಿನವೂ ಅವಳೊಬ್ಬಳದೇ ಮೊಗ,

ಜತೆಗಾರೂ ಇಲ್ಲವೇ,

ಸಂದೇಹ ಹುಟ್ಟಿದೆ ಈಗೀಗ,

ಒಮ್ಮೆ ಕೇಳುವಾಸೆ,

ಚಿತ್ರ ತೆಗೆಯಲು ಜೊತೆಗಾರಾರೂ ಇಲ್ಲವೇ,

ನಮ್ಮನ್ನು ನಾವು ಅತಿಸುಂದರವಾಗಿ ತೋರಿಸಿಕೊಳ್ಳಲು ದುಬಾರಿ ಮೇಕಪ್ಪು ಹಾಕಿಕೊಂಡು, ಬಗೆ ಬಗೆಯ ಫಿಲ್ಟರ್‌ಗಳ ಬಳಸಿ ವಿವಿಧ ಬಗೆಯಲ್ಲಿ ತೆಗೆದುಕೊಳ್ಳುವ ಸೆಲ್ಫಿ ಹಿಂದೆ ಅಡಗಿರುವ ಹೇಳಲಾಗದ ಅತೀವ ದುಃಖ ಎಂಥದ್ದು ಎನ್ನುವುದನ್ನು ಅವಳೇ ತೆಗೆದ ಅವಳ ಚಿತ್ರ ಕವಿತೆ ಮಾರ್ಮಿಕವಾಗಿ ಹೇಳುತ್ತದೆ. ನಮ್ಮ ನಮ್ಮ ಸಂಭ್ರಮವನ್ನು ಹಂಚಿಕೊಳ್ಳಲು ಒಬ್ಬರಾದರೂ ಜೊತೆಗಾರರು ಇರಬೇಕು. ಆಗ ಅದಕ್ಕೊಂದು ವಿಶೇಷ ಅರ್ಥ ಬರುತ್ತದೆ. ಸೆಲ್ಫಿ ಎಂಬುದು ನಮ್ಮನ್ನು ನಾವು ಮೋಸಗೊಳಿಸಿಕೊಳ್ಳುವ ಕೆಲಸವೇನೋ ಎನ್ನುವ ಅನುಮಾನ ಬರುವಂತೆ ಮಾಡುತ್ತದೆ. ನೋವು ನಲಿವು ಹಂಚಿಕೊಳ್ಳಲು ಸಂಗಾತಿಗಳ ಹಾಜರಿ ಬಹುಮುಖ್ಯವೆಂದು ಮನಸು ಪಿಸುಗುಟ್ಟಿ ಹೇಳುತ್ತದೆ. ಜೀವ ಹಿಂಡುವ ಏಕಾಂಗಿತನವನ್ನು ನೆಮ್ಮದಿ ನೀಡುವ ಏಕಾಂತವಾಗಿ ಬದಲಾಯಿಸಿಕೊಳ್ಳಲು ಗೆಳಯ – ಗೆಳೆತಿಯರು ಬೇಕೇ ಬೇಕು ಎನ್ನುವ ಪಾಠ ಮಾಡುವ ಕವಿತೆ ಹೃದಯಕ್ಕೆ ಶಕ್ತಿ ನೀಡುತ್ತದೆ.

ಅವನಿಗವಳು ಹೊಂದಿ ಅವಳಿಗವನು ಹೊಂದಿ,

ಜನಿಸಿದ ಕೂಸಿಗೆ ಎಲ್ಲವನು ಹೊಂದಿಸಿ

ಹೊಂದಿಸುತಲೇ ಇರು ಅದಕು, ಇದಕು ಎದಕು

ಮನುಷ್ಯನೊಬ್ಬನ ಹುಟ್ಟು ಸಾವು ಹೋರಾಟವನ್ನು ಈ ಮೂರು ಸಾಲುಗಳಲ್ಲಿಯೇ ಎಷ್ಟೊಂದು ಸಶಕ್ತವಾಗಿ ವಿದ್ಯಾರಶ್ಮಿಯವರು ಕಟ್ಟಿಕೊಟ್ಟಿದ್ದಾರೆ ನೋಡಿ! ಬಡವರಾಗಿರಲಿ, ಮಧ್ಯಮ ವರ್ಗದವರಾಗಿರಲಿ ಇಲ್ಲವೇ ಸಿರಿವಂತರೇ ಆಗಿರಲಿ. ಪ್ರತಿಯೊಬ್ಬರೂ ಕೂಡ ಅವನ ಜೀವನಪರ್ಯಂತ ಏನಾದರೊಂದು ಹೊಂದಿಸುತ್ತಲೇ ಇರಬೇಕಾಗುತ್ತದೆ. ಅವರವರ ಶಕ್ತಿಗನುಸಾರವಾಗಿ ಅವರ ಬದುಕನ್ನು ದೊಡ್ಡದಾಗಿ ರೂಪಿಸಿಕೊಳ್ಳಬೇಕಾದರೆ ಕೊನೆವರೆಗೂ ಹೋರಾಡುತ್ತಲೇ ಇರಬೇಕು. ಹೀಗೆ ಹೋರಾಡುವುದರಲ್ಲಿಯೇ ಸುಖ ಕಾಣಬೇಕು ಎಂದು ಕವಿ ಬದುಕಿನ ಸರಳ ಫಿಲಾಸಫಿಯನ್ನು ಕಲಿಸಿಕೊಡುತ್ತಾರೆ.

ಮತ್ತೇನು ವಿಶೇಷ?

ಸಿಕ್ಕಿದ್ದು ಬಹುಕಾಲದ ಬಳಿಕ,

ರಾಶಿ ಮಾತಿದ್ದರೂ ಏನಿಲ್ಲವೆಂಬಂತೆ ಭಾಸ

ಹೊರಟು ನಿಂತಾಗಲೊಮ್ಮೆ ಕೇಳುವನವನು,

ಮತ್ತೆ ಇನ್ನೇನು?

ಮನುಷ್ಯ ಸಂಬಂಧಗಳ ನಿರ್ವಹಣೆ ಎಂಬುದು ಯಾರೋ ಒಬ್ಬರು ಗುತ್ತಿಗೆ ತೆಗೆದುಕೊಂಡಂತೆ ದುಡಿಯುವುದಲ್ಲ. ಒಬ್ಬರೇ ಎಲ್ಲ ವಿಷಾದವನ್ನು ಕುಡಿದು ಬದುಕುವುದಲ್ಲ. ಬದಲಾಗಿ ಇಬ್ಬರೂ ಕೂಡಿ ಹೊರುವ ಜವಾಬ್ದಾರಿ. ಇಂಥ ಜವಾಬ್ದಾರಿ ಮರೆತ ಸಂಬಂಧಗಳಲ್ಲಿ ಮಾತಾಡಲು ಏನೂ ಉಳಿದಿರುವುದಿಲ್ಲ, ಎಲ್ಲವೂ ಬರಿ ತೋರಿಕೆ ಮಾತ್ರ. ಅಂಥ ಜೊತೆಗಾರನೊಬ್ಬನ ಸಂವೇದನಾರಹಿತ ಮನಸನು ಹೇಗಿರುತ್ತದೆ ಎನ್ನುವುದನ್ನು ‘ಮತ್ತೆ ಕವಿತೆ ಮನಮುಟ್ಟುವಂತೆ ಹೇಳುತ್ತದೆ.

ಮತ್ತೆ ಸಿಕ್ಕಾಗ ಇದೇ ಚಿತ್ರ ಸಿಗುವುದು ಸುಲಭವಲ್ಲ,

ಸಿಕ್ಕರೂ ಈ ಇವರೆಲ್ಲ ಹೀಗೆಯೇ ಇರುವುದಿಲ್ಲ

ಇದ್ದರೂ ಹೀಗೆಯೇ ಜತೆಗೆ ನಿಲ್ಲುತ್ತಾರೆಂಬುದು

ಖಚಿತವಿಲ್ಲ

ಗೆಳೆಯರ ಬಳಗವೆಂಬುದು ಬದುಕಿನ ಆಕ್ಸಿಜನ್ ಇದ್ದಂತೆ. ಅವರಿಲ್ಲದೆ ನಾವು ಅಪೂರ್ಣ ಎಂದು ಹೇಳುತ್ತಲೇ ವರ್ತಮಾನದ ಅತಿವೇಗದ ಬದುಕಿನಲ್ಲಿ ನಾವು ಪ್ರೀತಿಸುವ, ಭೇಟಿಯಾಗಲೆಂದು ಹಂಬಲಿಸುವ ಗೆಳೆಯರನ್ನು ಒಂದೆಡೆ ಸೇರಿಸುವುದೆಂದರೆ ಅದು ಅತ್ಯಂತ ಸಾಹಸದ ಕೆಲಸ. ಸಮಯ – ಸಂದರ್ಭಗಳು ವ್ಯಕ್ತಿಗಳನ್ನು ಹೇಗೆಲ್ಲ ಬದಲಾಯಿಸಿಬಿಡುತ್ತವೆ ಮತ್ತು ಮನಸುಗಳ ನಡುವಿನ ಸೇತುವೆ ಹೇಗೆ ರೂಪಾಂತರವಾಗುತ್ತದೆ ಎಂಬುದನ್ನು ʻಗ್ರೂಪ್ ಫೋಟೋʼ ಕವಿತೆ ಹೃದಯ ತೇವವಾಗುವಂತೆ ಹೇಳುತ್ತದೆ. ಇಂದಿನ ನಾವು ಮುಂದೆಯೂ ನಾವಾಗಿಯೇ ಇರುವದರಲ್ಲಿನ ಬದ್ಧತೆ ನಿಜಕ್ಕೂ ಕಷ್ಟ ಸಾಧ್ಯವಾದದ್ದು.

ನಮ್ಮ ಕೊಳೆಗೆ ಹೇಸಿ ಕೂತರೆ ಸೃಷ್ಟಿಯುಂಟೇ

ನೀನು ನೀನೇ ಹೌದಾದರೆ ನಮ್ಮ ದೂರವಿಡಲಾರೆ

ಅಯ್ಯಪ್ಪನ ದೇಗುಲಕ್ಕೆ ಸ್ತ್ರೀಪ್ರವೇಶ ನಿರಾಕರಣೆಯ ಹಿನ್ನಲೆಯಲ್ಲಿ ಬಂದ ನಿಗಿನಿಗಿ ಕೆಂಡದಂತ ಕವಿತೆ ಇದು. ಮುಟ್ಟನ್ನು ಕೀಳಾಗಿ ನೋಡಿದರೆ ಇಡೀ ಸೃಷ್ಟಿಯನ್ನೇ ಅವಮಾನಿಸಿದಂತೆ ಎನ್ನುವುದನ್ನು ಕವಿ ತೀವ್ರವಾಗಿ ಹೇಳುತ್ತಾರೆ. ಅಯ್ಯಪ್ಪ ಸುಮ್ಮನೇ ಇದ್ದಾನೆ. ಆದರೆ ಆತನಿಗೆ ಬೇಲಿ ಹಾಕಿದ ದುರುಳರು ಮಾಡಿರುವ ಷಡ್ಯಂತ್ರವಿದು. ಹೆಣ್ಣು ಅದನ್ನು ಧೈರ್ಯವಾಗಿ ಪುಡಿಪುಡಿ ಮಾಡುತ್ತಾಳೆ. ಆಕೆ ಯಾವತ್ತಿಗೂ ದೇಗುಲದ ಒಳಗೇ ಇದ್ದಾಳೆ. ಆದರೆ ಬೇಲಿ ಹಾಕಿದವರೇ ಇನ್ನೂ ಹೊರಗಿದ್ದಾರೆಂದು ಕವಿ ಗುಡುಗುತ್ತಾರೆ.

ಹೊಸ ಹೊಸ ರೂಪಕಗಳು ಮತ್ತು ನುಡಿಗಟ್ಟುಗಳಿಂದ ಕೂಡಿರುವ ಈ ಸಂಕಲನದಲ್ಲಿನ ಎಲ್ಲ ಕವಿತೆಗಳೂ ಬದುಕಿನ ಸರಳ ಫಿಲಾಸಫಿಯನ್ನು ಬಹು ಸುಂದರವಾಗಿ ಹೇಳುತ್ತವೆ. ಪ್ರತಿ ಕವಿತೆಯ ಆತ್ಮದ ಜೊತೆಗೆ ಸುಧಾಕರ ದರ್ಬೆಯವರ ಸೊಗಸಾದ ಚಿತ್ರಗಳು ಸಂವಾದದಲ್ಲಿ ತೊಡಗಿದಂತೆ ಕಾಣುತ್ತವೆ. ಸ್ತ್ರೀ ಸಂವೇದನೆ, ಜೀವನ ಪ್ರೀತಿ, ಸಾಮಾಜಿಕ ದಂದುಗಗಳು, ಅತ್ಯಾಧುನಿಕ ಬದುಕಿನ ಒತ್ತಡಗಳು, ಮನುಷ್ಯ ಸಂಬಂಧಗಳು ಮತ್ತು ಸೌಹಾರ್ದತೆಯನ್ನು ಇಲ್ಲಿನ ಕವಿತೆಗಳು ಉಸಿರಾಡುತ್ತವೆ. ವಿಭಿನ್ನ ಮತ್ತು ಗಟ್ಟಿಯಾದ ಕವಿತೆಗಳನ್ನು ಕೊಟ್ಟ ವಿದ್ಯಾರಶ್ಮಿ ಪೆಲತ್ತಡ್ಕ ರವರಿಗೆ, ಕವಿತೆಗಿದು ಕಾಲವಲ್ಲ ಎನ್ನುವ ಕಠಿಣ ಸಂದರ್ಭದಲ್ಲಿ ಉತ್ಕೃಷ್ಟ ಗುಣಮಟ್ಟದ ಮುದ್ರಣದೊಂದಿಗೆ ಇದನ್ನು ಪ್ರಕಟಿಸಿದ ಬಹುರೂಪಿ ಪ್ರಕಾಶನದ ಜಿ.ಎನ್. ಮೋಹನ್ ಸರ್‌ರವರಿಗೆ ಧನ್ಯವಾದಗಳು.

‍ಲೇಖಕರು admin j

June 26, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: