ಸದಾಶಿವ್ ಸೊರಟೂರು ಕಥಾ ಅಂಕಣ-ಪುಟ್ಟ ಹಕ್ಕಿಯ ಜಾಡು

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು.

ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ, ಲೈಫ್ ನಲ್ಲಿ ಏನಿದೆ ಸರ್? ದೇವರೇ ಅವಳು ಸಿಗದಿರಲಿ, ಷರತ್ತುಗಳು ಅನ್ವಯಿಸುತ್ತವೆ ಮುಂತಾದ ಪುಸ್ತಕಗಳು ಪ್ರಕಟವಾಗಿವೆ.

ಬರವಣಿಗೆಯಲ್ಲಿ ಅಪಾರ ಆಸಕ್ತಿಯುಳ್ಳ ಸದಾಶಿವ್ ಅವರು ಕನ್ನಡ ದಿನಪತ್ರಿಕೆಗಳಿಗೆ ಹಲವಾರು ಲೇಖನ ಹಾಗೂ ಅಂಕಣಗಳನ್ನು ಬರೆದಿದ್ದಾರೆ. 

ಹಲವು ಕಥೆಗಳು, ಕವನಗಳು ಬಹುಮಾನ ಗೆದ್ದಿವೆ. ನೂರಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ.

47

ಕಣ್ಣುಗಳಲ್ಲಿ ಬಣ್ಣ ಕಲೆಸಿ ಹೋದವು. ಕಲಾವಿದನ ಪಕ್ಕದಲ್ಲಿ ವಿನಮ್ರವಾಗಿ ಕೂತು ಬಣ್ಣ ತುಂಬಿಕೊಂಡ ತಟ್ಟೆ ಅವನ ಮಗಳ ಚೇಷ್ಟೆಗೆ ಮಗುಚಿದಾಗ ಮೂಡುವ ಚಿತ್ರದಂತೆ ಅವನ ಕಣ್ಣಿಗೀಗ ಜಾತ್ರೆ. ಅದು ಜಾತ್ರೆಯೋ, ಸಂತೆಯೋ ಅದರ ಬಗ್ಗೆ ಅವನಿಗೆ ದಾದು ಇಲ್ಲ. ಒಂದೇ ವಾರದಲ್ಲಿ ಮೂರು ಗುಡಿಗಳ ಬಾಗಿಲು ಕಾದು, ಎರಡನೇ ಜಾತ್ರೆಗೆ ಬಂದು ಮುಳುಗಿದ್ದಾನೆ. ಈ ಕ್ಷಣದ ತುರ್ತಿಗೆ ಅವನಿಗೆ ಅಳಬೇಕು ಅನಿಸಿದೆ. ಅತ್ತರೇನು ಸುರಿಯುವ ಕಣ್ಣೀರನ್ನು ನಾನಲ್ಲದೆ ಮತ್ಯಾರು ಒರೆಸಿಕೊಳ್ಳಬೇಕು! ತಾನೆ ಅತ್ತು, ತಾನೇ ಒರೆಸಿಕೊಳ್ಳುವ ಉಸಾಬರಿಗೆ ಯಾಕೆ ಅಳಬೇಕು? ಅನ್ನುವುದು ಅವನ ಒಂದು ಚಿಂತನೆ. ಒಳಗೆ ದುಃಖ ಮುಂಗಾರು ಮಳೆ. ಹೊರಗೆ ಒಮ್ಮೊಮ್ಮೆ ಚಳಿ ಮತ್ತು ಬಹುಪಾಲು ಬಿಸಿಲು. ಬಣ್ಣಗಳು ಕಲಕಿ ಕಲಕಿ ಈ ಕ್ಷಣಕ್ಕೆ ತನ್ನ ನೋಟ ಕಪ್ಪು ಬಿಳುಪಿಗೆ ಸರಿದರೆ ಸಾಕು ಅನಿಸಿದೆ. 

ಬಹುಶಃ ಮನೆಯಲ್ಲಿ ಅಪ್ಪನ ಮದುವೆಯ ಗದ್ದಲ ಮುಗಿದಿರಬೇಕು. ಎರಡನೇ ಮದುವೆಯಲ್ಲಿ ವಾರಗಟ್ಟಲೆ ಸಂಭ್ರಮವಾದರೂ ಎಲ್ಲಿರುತ್ತೆ? ತನಗೆ ಮತ್ತೊಬ್ಬ ಅಮ್ಮನಂತೆ! ಒಬ್ಬರಾದ ಮೇಲೆ ಒಬ್ಬರು ಅಮ್ಮನಾಗುತ್ತಾರಾ? ಚಿಕ್ಕಮ್ಮ ದೊಡ್ಡಮ್ಮನೇನೋ ಸರಿ. ಬರೀ ಅಮ್ಮನೇ ಎರಡೆರಡು  ಬಾರಿ, ಎರಡೆರಡು ಪಾತ್ರಗಳಲ್ಲಿ ಬರಬಹುದು ಎಂಬುದು ಅವತ್ತು ಕಮಲಕ್ಕ ಅಂದಾಗಲೇ ಗೊತ್ತಾಗಿದ್ದು. “ಮಗಾ ನಿಂಗೆ ಇನ್ನೂ ಗೊತ್ತಿಲ್ಲೇನು? ಇನ್ನೊಂದು ವಾರಕ್ಕೆ ನಿಂಗೆ ಹೊಸ ಅಮ್ಮ ಬರ್ತಾಳ. ನಿಮ್ಮಪ್ಪ ಮದುವೆಯಾಗ್ತಿದ್ದಾರೆ ತಿಳಿತಾ…” ಅಂದಾಗ ಆಶ್ಚರ್ಯವಾಗಿದ್ದು ನಿಜ. ಅಪ್ಪ ಮದುವೆಯಾದವರಲ್ಲ, ತನಗೆ ಅಮ್ಮ. ಅಪ್ಪ, ಅಮ್ಮಂದಿರನ್ನು ಉತ್ಪಾದಿಸುವ ಕಾರ್ಖಾನೆಯಂತೆ ಕಂಡರು. ಊರಲ್ಲಿ ಕಂಡ ಕಂಡವರೆಲ್ಲಾ, “ಏನ್ ತೇಜು ನಿಮ್ಮಪ್ಪನ ಮದುವೆಯಂತೆ?” ಅಂದಾಗ ಅವನಿಗೆ ಅಳುವೇ ಬರುತ್ತಿತ್ತು. ಅಮ್ಮ ಯಾಕೆ ಸಾಯಬೇಕಿತ್ತು? ತನಗಿಂತ ಅವರಿಗೆ ಅಲ್ಲಿ ಅರ್ಜೆಂಟಾದ್ರೂ ಏನಿತ್ತು? ತಾಯಂದಿರಿಗೆ ಮಕ್ಕಳಿಗಿಂತ ತುರ್ತು ಏನಿರುತ್ತೆ? ಅಮ್ಮ ಹೋಗಬಾರದಿತ್ತು… ಮನೆಗೆ ಹೊಸ ಅಮ್ಮ ಬರುವ ಗಡಿಬಿಡಿಯ ಮಧ್ಯೆ ಹುಡುಗ ಕಟ್ಟೆಯ ಮೇಲೆ ಕೂತು ಒಳಗೊಳಗೆ ಮಾತಾಡಿಕೊಂಡಿದ್ದ. 

ಮನೆ ಮುಂದೆ ಚಪ್ಪರ ಹಾಕವ ಜನ ಸೇರಿದ್ದರು. ಎಲ್ಲರಿಗಿಂತ ತೇಜುವಿನ ಅಪ್ಪನೇ ಹುರುಪಿನಲ್ಲಿದ್ದರು. ಚಪ್ಪರದ ಗೂಟ ನೆಡಲು ನೆಲ ತೋಡುತ್ತಿದ್ದ ಕರಿಯಪ್ಪ, “ಏ ತೇಜು ಬಾರಪ್ಪ ಮಣ್ಣು ತೆಗಿ…” ಅಂದಾಗ ತೇಜು ಗಲಿಬಿಲಿಗೊಂಡ. ಎದ್ದು ಸುಮ್ಮನೆ ನಡೆದು ಗುಣಿಯ ಬಳಿ ಕೂತು ಮಣ್ಣು ತೆಗೆಯ ತೊಡಗಿದ. “ನೋಡಿ ನೋಡಿ.. ಅಪ್ಪನ ಮದುವೆಗೆ ಮಗ ಯಂಗೆ ಚಪ್ಪರದಗುಂಡಿ ಮಣ್ಣು ತೆಗಿತಾನೆ…” ಅಂತ ಯಾರೋ ಮಾತಾಡಿಕೊಂಡಿದ್ದು ಕಿವಿಗೆ ಬಿದ್ದು ಅವನಿಗೆ ನಾಭಿ ಕೆಳಗೆ ಸಣ್ಣಗೆ ನೋವಾದಂತಾಯಿತು. “ಇದೆಲ್ಲ ಯಾರಿಗೆ, ನಂಗಾ? ತೇಜುವಿಗೆ ತಾನೇ? ತೇಜುಗೆ ಅಮ್ಮ ಇರ್ಲಿ ಅಂತ ಮದುವೆಯಾಗ್ತಿದ್ದೀನಿ ಕಣ್ರಪ್ಪ” ಅಂತ ತಂದೆ ಅಂದಾಗ, ತೇಜು ಅಲ್ಲಿಂದ ಎದ್ದು ಓಡಿದ.

ಹುಡುಗ ಎಲ್ಲೋ ಆಡಿಕೊಳ್ಳಲು ಓಡಿಹೋಯಿತು ಅಂದುಕೊಂಡು ಚಪ್ಪರದ ಕೆಲಸದಲ್ಲಿ ಮುಳುಗಿದರು. ಓಡಿ ಮನೆಯ ಹಿಂದೆ ಬಂದ ತೇಜು. ತೋಳುಗಳನ್ನು ಎತ್ತರಿಸಿ ಮುಖ ಒರೆಸಿಕೊಂಡ. ತೋಳೆಲ್ಲಾ ಒದ್ದೆಯಾಗಿತ್ತು. ಬೆವರೇ ಇಲ್ಲದೆ ತೋಳು ಒದ್ದೆಯಾಗಿದ್ದು ಹೇಗೆ? ಅಂತ ಯೋಚಿಸಿದ. ತನ್ನ ಕಣ್ಣೀರೇ ಅದೆಂದು ಅವನಿಗೆ ಗೊತ್ತಾಗಿರಲಿಲ್ಲ. ನಾಭಿಯ ಕೆಳಗಿನ ಸಂಕಟ ಮುಂದುವರೆದಿತ್ತು. ಹಿಂದಿನ ಮನೆ ನೀಲಕ್ಕನ ಕಟ್ಟೆಯ ಮೇಲೆ ಸುಮ್ಮನೆ ಕೂತ. ಬೆಳಗಿನ ಎಳೇ ಬಿಸಿಲು ಮೆಲ್ಲಗೆ ಯೌವನ ತುಂಬಿಕೊಳ್ಳತೊಡಗಿತ್ತು. ಆಕಾಶದಲ್ಲಿ ಕಟ್ಟಬೇಕಾದ ಮೋಡಗಳು ಹುಡುಗನ ಎದೆಯೊಳಗೆ ಕಟ್ಟಿದ್ದವು. ಆಕಾಶ ಶುಭ್ರವಾಗಿತ್ತು. ಮೋಡಗಳಿಲ್ಲದ್ದನ್ನು ಕಂಡ ಸೂರ್ಯ ಖುಷಿಗೆ ಮತ್ತಷ್ಟು ಬಿರುಸಾದ. ತೇಜುವಿನ ಮನಸ್ಸಿನಲ್ಲಿ ಬರೀ ಕಪ್ಪು ಮೋಡಗಳೇ ಇದ್ದುದ್ದರಿಂದ ಮುಖದಲ್ಲಿ ಯಾವ ಬೆಳಕು ಕಾಣದಷ್ಟು ಮಂಕಾಗಿತ್ತು. ಯಾವುದೇ ಕ್ಷಣದಲ್ಲಿ ಮಳೆ ಧೋ ಎಂದು ಸುರಿಯಬಹುದಾಗಿತ್ತು. 

ನೀಲಕ್ಕನ ಮನೆಯೊಳಗೆ ಆಗ ತಾನೆ ʻಅಕ್ಕಿಶಾಸ್ತ್ರʼ ಮುಗಿಸಿ ಬಂದ ಕೇರಿಯ ಹೆಂಗಸರೆಲ್ಲಾ ಕೂಡಿದ್ದರು.  ಹೆಂಗಸರು ಸೇರಿದ ಕಡೆ ಮಾತು ಕಡ್ಡಾಯ! ಮಾತೇ ಇಲ್ಲದಿದ್ದರೆ ಅವರ ಆರೋಗ್ಯದ ಕಡೆ ಅನುಮಾನ ಪಡಬೇಕಾದೀತೇನೊ! ಹೊಟ್ಟೆಯಲ್ಲಿ ಸಂಕಟ ತುಂಬಿಕೊಂಡು ಬಂದ ತೇಜು ಊರು, ಕೇರಿ, ಜಗುಲಿ, ಬಿಸಿಲು ಇವುಗಳ ಪರಿವೇ ಇಲ್ಲದೆ ನೋವನ್ನು ಉಣ್ಣುತ್ತಾ ಕೂತಿದ್ದ. ಒಳಗಡೆ ಮಾತು ಸಾಗಿದ್ದವು. ʻಲಲಿತಕ್ಕʼ ಅನ್ನುವ ಮಾತು ಮನೆ ಒಳಗಿನಿಂದ ಆಚೆ ಬಂದು ಅವನ ಕಿವಿ ಬಡಿದಿದ್ದೆ ತೇಜು ತುಸು ಗಂಭೀರನಾದ. ಕುತೂಹಲ ಹೆಚ್ಚಿ ಅತ್ತ ಕಡೆಯೆ ಗಮನವಿಟ್ಟ. ಹೊರಗೆ ಜಗುಲಿಯ ಮೇಲೆ ತೇಜು ಕೂತಿರುವುದು ಒಳಗಿನ ಹೆಂಗಸರಿಗೆ ಹೇಗೆ ತಿಳಿಯಬೇಕು? ಮಾತುಗಳು ಸುಮ್ಮನೆ ಸುರಿಯುತ್ತಿದ್ದವು. 

“ಈ ಮುಂಡೇಗಂಡ ಹೆಂಡತಿ, ಮಗೀನ ತಿರುಪತಿಗೆ ಕರ್ಕೊಂಡು ಹೋದೋನು ಹೆಂಡತಿ ಎಲ್ಲೋ ತಪ್ಪಿಸಿಕೊಂಡ್ಲು ಅಂತ ಬಂದ್ನಲ್ಲ, ಲಲಿತಕ್ಕ ತಪ್ಪಿಸಿಕೊಂಡ್ಲೋ ಇಲ್ಲ, ಇವನೇ ಏನಾದ್ರೂ ಮಾಡಿದ್ನಾ? ಐದಾರು ವರ್ಷ ಆಯ್ತು. ತಪ್ಪಿಸಿಕೊಂಡಿದ್ರೆ ಊರಿಗೆ ಬರ್ತಿರ್ಲೇನು? ತೇಜುಗಾಗಿಯಾದ್ರೂ ಊರಿನ ದಾರಿ ಕಾಣಿಸಿರೋದು”. ʻಲಲಿತಕ್ಕʼನ ಕುರಿತ ಮಾತುಗಳು ಒಳಗಿನಿಂದ ಬರತೊಡಗಿದವು. ತೇಜು ಗಲಿಬಿಲಿಗೊಂಡ. ದಿಗಿಲ ಮೇಲೆ ದಿಗಿಲು… ಅದರ ಮೇಲೆ ಮತ್ತಷ್ಟು ದಿಗಿಲುಗಳು ಬಂದು ಬಡಿಯತೊಡಗಿದವು.

“ಅದು ಹಂಗಲ್ಲ ಶಾಂತಕ್ಕ, ಇವನೇ ಬಿಟ್ಟು ಬಂದಿದ್ದಾನೆ ಅನ್ನೋ ಸುದ್ದಿ. ಓಬಳೇಶ್ವರ ಜಾತ್ರೆಯಲ್ಲಿ ಲಲಿತಕ್ಕನ್ನ ನೋಡಿದೆ ಅಂತ ತೋಟದ ಮನೆ ಕುಮಾರ ಹೇಳ್ತಿದ್ದ, ಗುಡಿ ಮುಂದೆ ಭಿಕ್ಷುಕರ ಜೊತೆ ಕೂತಿದ್ಲು ಅಂತ. ಎಷ್ಟು ನಿಜಾನೋ ಸುಳ್ಳೋ ಗೊತ್ತಿಲ್ಲ. ಈ ಮುಂಡೆ ಗಂಡನ್ನ ನಂಬಂಗಿಲ್ಲ. ಮತ್ತೊಂದು ಮದುವೆ ಆಸೆಗೆ ಅದೇನು ಮಾಡಿದ್ನೋ…” ಲಲಿತಕ್ಕ ಇದ್ದಿದ್ರೆ ತೇಜುಗಾದರೂ ಬರುತ್ತಿದ್ಲು ಅಲ್ವಾ? ಅಂತ ಕೇಳಿದಕ್ಕೆ, “ಇಲ್ಲವ್ವೊ ನಾನು ಲಲಿತಕ್ಕನ ಕಣ್ಣಾರೆ ನೋಡಿದೀನಿ ಬೇಕಾದರೆ ನಂಜೊತೆ ಇದ್ದ ಬಸಣ್ಣನ ಕೇಳಿ ನೋಡಿ” ಅನ್ನುವ ಕುಮಾರನ ಮಾತನ್ನು ಕೂಡ ತೆಗೆದು ಹಾಕುವಂತಿರಲಿಲ್ಲ ಅಂದುಕೊಂಡರು. ಬೇರೆಯವರ ಮನೆ ವಿಚಾರ ನಮಗ್ಯಾಕೆ ಅನ್ನುವ ಮಾಮೂಲಿ ಮಾತಿನೊಂದಿಗೆ ಮಾತು ಮುಗಿಸಿ ಎದ್ದರು.

ಕೊನೆಯಲ್ಲಿ ತೇಜುವಿನ ಬಗ್ಗೆ ಕನಿಕರಪಡುವುದನ್ನು ಮಾತ್ರ ಮರೆಯಲಿಲ್ಲ. ಒಳಗಿನಿಂದ ಹೆಂಗಸರು ಬರುವ ಸದ್ದು ತಿಳಿದಿದ್ದೇ ತೇಜು ಅಲ್ಲಿಂದ ಓಡಿದ. ಮನೆಯ ಕೊಟ್ಟಿಗೆಯ ಬಳಿ ಬಂದು ಕೂತ. ದನಗಳು ಇರಲಿಲ್ಲ. ಮೇಯಲು ಹೋಗಿರಬೇಕು. ಅಮ್ಮ ಕೊಟ್ಟಿಗೆಯಲ್ಲಿ ಹಾಲು ಹಿಂಡುತಿದ್ದದ್ದು ನೆನಪಾಯ್ತು. ʻಹಾಗಾದರೆ ಅಮ್ಮ ಇನ್ನೂ ಬದುಕಿದ್ದಾರೆ!ʼ ಈ ಸಾಲನ್ನೇ ಅದೆಷ್ಟು ಬಾರಿ ಹೇಳಿಕೊಂಡನೋ ಏನೋ!  “ಅಮ್ಮ ಯಾವಾಗ ಬರ್ತಾರೆ?” ಅಂತ ಕೇಳಿದ್ರೆ “ತೇಜು, ನಿಮ್ಮಮ್ಮ ಬರಲಪ್ಪ. ನನ್ನ, ನಿನ್ನ ಬಿಟ್ಟು ದೂರ ಹೋಗಿ ಬಿಟ್ಟಿದ್ದಾರೆ”, ಅಂತ ಅಪ್ಪ ಹೇಳಿದ ಮಾತುಗಳೆಲ್ಲವೂ ಈಗ ನೆನಪಾಗ ತೊಡಗಿದವು. 

ಹೆಂಗಸರು ಮಾತಾಡಿದ ವಿಚಾರಗಳು ತೇಜುವಿನ ಹೃದಯಬಡಿತವನ್ನು ಹೆಚ್ಚಿಸಿದ್ದವು. ತುಂಬಾ ಗಲಿಬಿಲಿಗೊಂಡ. ತಲೆ ತಿರುಗುತ್ತಿರುವ ಅನುಭವ, ಕಣ್ಣು ಮಂಜು ಮಂಜು. ಕೊಟ್ಟಿಗೆಯಲ್ಲಿ ಸುಮ್ಮನೆ ಸ್ವಲ್ಪ ಹೊತ್ತು ಕೂತ. ʻಅಮ್ಮ ಇನ್ನೂ ಬದುಕಿರಬೇಕುʼ ಮತ್ತದೇ ಸ್ವಗತಗಳು. ಅಪ್ಪನ ಮೇಲೆ ಜನ್ಮಾಂತರದ ಕಡುಕೋಪವೊಂದು ಹುಟ್ಟಿಕೊಳ್ಳತೊಡಗಿತು. ತೇಜುಗೆ ದುಃಖ ತಡೆಯಲಾಗಲಿಲ್ಲ. ಮನಸ್ಸಿನೊಳಗೆ ಕಟ್ಟಿದ್ದ ಕಪ್ಪು ಮೋಡಗಳು ನೀರು ಸುರಿಸತೊಡಗಿದವು. ಕೊಟ್ಟಿಗೆಯ ಒಂದು ಮೂಲೆಯಲ್ಲಿ ಕೂತು ಬಿಕ್ಕಳಿಸಿ ಬಿಕ್ಕಳಿಸಿ ಅಳತೊಡಗಿದ. 

ತೇಜುವಿಗೆ ಅಮ್ಮನ ಮುಖ ನೆನಪಿಲ್ಲ. ಒಂದೂವರೆ ವರ್ಷದ ಕೂಸು ಇದ್ದಾಗ ತಿರುಪತಿಗೆ ಹೋದದ್ದೇ ನೆವ. ಅಮ್ಮ ಏನಾದಳೆಂದು ತೀರ ಒಂದೂವರೆ ವರ್ಷದ ತೇಜುವಿಗೆ ಹೇಗೆ ಗೊತ್ತಾಗಬೇಕು! “ಮಗೀನ ಇಟ್ಕೊಳ್ಳಿ ಇಲ್ಲೇ ಟಾಯ್ಲೆಟ್ಟಿಗೆ ಹೋಗಿ ಬರ್ತೀನಿ…” ಅಂತ ಹೋದೋಳು ಬರಲೇ ಇಲ್ಲ ಅಂತ ತೇಜುವಿನ ತಂದೆ ಊರಲ್ಲಿ ಹೇಳಿಕೊಂಡು ಓಡಾಡಿದ್ದ. ನೋಡೋಣವೆಂದರೆ ಮನೆಯಲ್ಲಿ ಒಂದೇ ಒಂದು ಫೋಟೋ ಕೂಡ ಇರಲಿಲ್ಲ. ಇದ್ದರೂ ತಂದೆ ಇಲ್ಲ, ಇಲ್ಲ ಅಂತ ಹೇಳಿದನೋ ಯಾರಿಗೆ ಗೊತ್ತು? ಎಷ್ಟೋ ಬಾರಿ ತೇಜು, “ಅಮ್ಮ ಹೇಗಿದ್ರು ಹೇಳಪ್ಪ…?” ಅಂತ ಹಟ ಹಿಡಿದಾಗ ತೇಜುನನ್ನು ಕರೆದುಕೊಂಡು ಹೋಗಿ ಕನ್ನಡಿಯ ಮುಂದೆ ನಿಲ್ಲಿಸಿ, “ನೋಡು, ಹೀಗೆ ಇದ್ರು ನಿನ್ನಮ್ಮ…” ಅಂತ ಹೇಳಿ ಅಲ್ಲಿಗೆ ಅವನ ಅಮ್ಮನ ಆಸೆಯನ್ನು ಮರೆಸುತ್ತಿದ್ದರು ತಂದೆ. 

ಊರಲ್ಲೆಲ್ಲಾ ʻತೇಜು ಅವರಮ್ಮನ್ನೇ ಹೋಲ್ತಾನೆʼ ಅನ್ನುತ್ತಿದ್ದರು. ಎಲ್ಲಾ ಅವರ ಅಮ್ಮನ ಥರಾನೇ ಅಂತ ಮಾತಾಡಿಕೊಳ್ಳುವುದನ್ನು ಕೇಳಿಸಿಕೊಂಡಿದ್ದ. “ಅದೇ ಗುಂಗುರು ಕೂದಲು, ಅದೇ ಮುಖ, ಅದೇ ಬಣ್ಣ, ಅದೇ ಮೂಗು, ಆದರೆ ಬಲಗೆನ್ನೆ ಮೇಲಿನ ಮಚ್ಚೆ ಮಾತ್ರ ಇಲ್ಲಾ ನೋಡು…”, ಅನ್ನುವ ಮಾತುಗಳನ್ನು ಅದೆಷ್ಟು ಬಾರಿ ಕೇಳಿಸಿಕೊಂಡಿದ್ದನೋ…?

ಅವನ ಅಳು ಈಗ ನಿಂತಿತು. ಅಮ್ಮ ಬದುಕಿರಬಹುದು. ಬದುಕಿದ್ದರೆ ಮನೆಗೆ ಯಾಕೆ ಬಂದಿಲ್ಲ? ಅಮ್ಮನೇ ಬಿಟ್ಟು ಹೋದರೇ…? ಅಪ್ಪನೆ ಬಿಟ್ಟು ಬಂದನೇ…? ಕುಮಾರಣ್ಣ ಏನ್ ಸುಳ್ಳು ಹೇಳುತ್ತಾನೆಯೇ…? ಸುಳ್ಳು ಹೇಳಿ ಅವನಿಗೇನಾಗಬೇಕು? ಈ ಜಾತ್ರೆಗೆ ಎಲ್ಲಿದ್ರೂ ಅಮ್ಮ ಬಂದೇ ಬರ್ತಾಳೆ. ನಿಮ್ಮ ಅಮ್ಮನಿಗೆ ಓಬಳೇಶ್ವರನ ಮೇಲೆ ಬಾಳ ಭಕ್ತಿ ಕಣೋ ಮಗ ಅಂತ ಅಪ್ಪ ಹೇಳಿದ್ದು ನೆನಪಿತ್ತು. ಹಾಗಾದರೆ ಆ ಜಾತ್ರೆಯಲ್ಲಿ ಅಮ್ಮ ಭಿಕ್ಷುಕರ ಬಳಿ ತನಗೆ ಸಿಗಬಹುದೇನೋ… ಅನ್ನುವ ವಿಚಿತ್ರ ಯೋಚನೆಗಳು ಅವನನ್ನು ಮುತ್ತಿದವು. ಈ ಯೋಚನೆಗಳಿಂದಲೇ ತೇಜು ಒಂದಷ್ಟು ಗೆಲುವಾದಂತೆ ಕಂಡ. 

ಊರಿಂದ ಓಬಳಾಪುರಕ್ಕೆ  ಆರೇ ಕಿಲೋಮೀಟರ್. ಕೊಟ್ಟಿಗೆಯಿಂದ ಹೊರಬಂದ ತೇಜು ಓಬಳಾಪುರದ ದಾರಿ ಹಿಡಿದ. ಹೊರಗೆ ಬಿಸಿಲು; ತೇಜುವಿನ ಒಳಗೂ ಬಿಸಿಲೆ! ಒಳಗಿನ ಬಿಸಿಲಿನ ಮುಂದೆ ಅವನಿಗೆ ಹೊರಗಿನ ಬಿಸಿಲು ಬಾಧಿಸಲಿಲ್ಲ. ದಾರಿಯಲ್ಲಿ ಸಿಕ್ಕ ನಂದೀಶಣ್ಣ, “ತೇಜು ಎಲ್ಲಿಗಪ ಬಿಸಿಲಲ್ಲಿ?” ಅಂತ ಕೇಳಿದಾಗ, “ಇಲ್ಲೇ ಹೊಲದ ತಾವ ಹೋಗಿ ಬರ್ತೀನಣ್ಣೊ…” ಅಂದು ಹೆಜ್ಜೆ ಚುರುಕುಗೊಳಿಸಿದ. ಸಂಜೆ ಹೊತ್ತಿಗೆ ಓಬಳಾಪುರವನ್ನು ಮುಟ್ಟಿದ. ಜನವೋ ಜನ. ಅಷ್ಟು ಮೊತ್ತದ ಜನಾನ ಏಕಾಂಗಿಯಾಗಿ ಇದೇ ಮೊದಲ ಬಾರಿ ನೋಡುತ್ತಿದ್ದಾನೆ.

ಭಯವಾಗತೊಡಗಿತು. ಗುಡಿ ಎಲ್ಲಿದಿಯೋ? ಈ ಮೊದಲು ಅಪ್ಪನ ಜೊತೆ ಬಂದಿದ್ದರೂ ದಾರಿ ನೆನಪಿಲ್ಲ. ಕಣ್ಣಿನಲ್ಲಿ ಅಮ್ಮನ ಆಸೆ ಇಟ್ಟುಕೊಂಡು ನಡೆಯತೊಡಗಿದ. “ಅಣ್ಣ ಗುಡಿಯೆಲ್ಲಿ?”  ಅಂತ ಕೇಳುತ್ತಾ, ಕೇಳುತ್ತಾ ಓಬಳೇಶ್ವರ ಗುಡಿಯ ಮುಂದೆ ಬಂದು ನಿಂತ. ದೇವಸ್ಥಾನಕ್ಕೆ ೨೦೧ ಮೆಟ್ಟಿಲು. ಮೆಟ್ಟಿಲ ಇಕ್ಕೆಲುಗಳಲ್ಲಿ ಭಿಕ್ಷುಕರಿದ್ದರು. ನೆಗ್ಗಿದ ಬದುಕಿನಂತಹ ತಟ್ಟೆಗಳು ಅವರ ಮುಂದೆ.  ಕೊಳೆ ಬಟ್ಟೆ, ಕೆದರಿದ ಕೂದಲು, ಕೈಕಾಲು, ಕಣ್ಣುಗಳ ವೈಕಲ್ಯತೆಗಳು ಎಲ್ಲವೂ ಆ ಸಾಲಿನಲ್ಲಿ ಕೂತಿದ್ದವರ ಬಳಿ ಇದ್ದವು.  ತೇಜು ಪರದಾಡತೊಡಗಿದ. ಮೆಟ್ಟಿಲುಗಳನ್ನು ಹತ್ತುತ್ತ ಸಾಲಿನಲ್ಲಿ ಕೂತವರ ಬಳಿ ಅಮ್ಮನನ್ನು  ಹುಡುಕತೊಡಗಿದ.

ಅಮ್ಮನ ಮುಖವನ್ನು ನೋಡಿದರೆ ತಾನೇ ಗುರುತಿಸಲು ಸಾಧ್ಯ? ಸಾಲಿನಲ್ಲಿದ್ದ ಹೆಂಗಸರ ಮುಖವನ್ನು ನೋಡುತ್ತಾ… ಇಲ್ಲ ಇಲ್ಲ ಇವರಲ್ಲ… ಅವರಿರಬಹುದಾ? ನನ್ನಷ್ಟೇ ಬಣ್ಣ ಇದೆ ಆದರೆ ಕೂದಲು ಅಮ್ಮನ ತರಹ ಇಲ್ಲ… ಹೀಗೆ ಹುಡುಕುತ್ತಾ ೨೦೧ನೇ ಮೆಟ್ಟಿಲು ಮುಟ್ಟಿದ. ತೇಜುಗೆ ನಿರಾಸೆಯಾಯಿತು. ಅವಸರದಲ್ಲಿ ಸರಿಯಾಗಿ ಹುಡುಕದೆ ಬಂದಿರಬಹುದೆಂದು ಮತ್ತೆ  ಇಳಿಯುತ್ತಾ ಹುಡುಕಲು ಆರಂಭಿಸಿದ. ಎರಡು ಬಾರಿ ಅಮ್ಮ… ಅಮ್ಮ… ಅಂತ ಕೂಗಿದ. ಭಕ್ತಿಯ ಗುಂಗಿನಲ್ಲಿದ್ದ ಯಾರಿಗೂ ಅವನ ಕೂಗು ಕೇಳಲಿಲ್ಲ.  ಸಾಗುತ್ತಿರುವ ಭಕ್ತರ ಮುಖಗಳನ್ನು ನೋಡುತ್ತಾ ಭಿಕ್ಷೆಗೆ ಕಾಯುತ್ತಿರುವ ಭಿಕ್ಷುಕರ ಗಮನ ಕೂಡ ಹುಡುಗನ ಕಡೆ ಹರಿಯಲಿಲ್ಲ. ‘ಅಮ್ಮ… ಅಮ್ಮಾ… ಅನ್ನುತ್ತಾ ಮತ್ತೆ ಕೊನೆಯ ಮೆಟ್ಟಿಲ ಬಳಿ ಬಂದು ನಿಂತ. 

ʻಅಣ್ಣಾ ಇಲ್ಲಿ ಕೂತಿದ್ದರಲ್ಲ ಭಿಕ್ಷೆ ಬೇಡೊರು ಅಂತವರು ಮತ್ತೆಲ್ಲಿ ಇರ್ತಾರೆ?ʼ, ಅಲ್ಲೇ ಹೋಗುತ್ತಿದ್ದ ಒಬ್ಬನನ್ನು ಕಾಡಿ ಕೇಳಿದ ತೇಜು. ಹುಡುಗನನ್ನು ವಿಚಿತ್ರವಾಗಿ ನೋಡಿದ ಆತ ಸಂತೆಯಲ್ಲಿ, ಬೇರೆ ಬೇರೆ ಗುಡಿ ಮುಂದೆ, ಜಾತ್ರೆಯಲ್ಲಿ ಇರ್ತಾರಪ್ಪ… ಅನ್ನುತ್ತಾ ಹೊರಟು ಹೋದ. ಅಮ್ಮ ಇಲ್ಲಿಗೆ ಬಂದಿರಲಿಕ್ಕಿಲ್ಲ ಅನಿಸಿತು ಅವನಿಗೆ. ಇಂದು ಗುಡಿಯ ಮೂಲೆಯಲ್ಲೇ ಮಲಗಿ ಬೆಳಗು ಹರಿಸಿದ. ಅವನ ಪಾಲಿಗೆ ಮನೆಯ ಆಸೆ ತೀರಿತ್ತು. 

ಹುಡುಕಾಟದಲ್ಲಿ ಏಳು ದಿನಗಳು ಕಳೆದು ಹೋದವು. ಸಂತೆಗಳಲ್ಲಿ, ಜಾತ್ರೆಗಳಲ್ಲಿ, ಗುಡಿಗಳಲ್ಲಿನ ಭಿಕ್ಷುಕರ ಮುಖಗಳಲ್ಲಿ ಅಮ್ಮನನ್ನು ಹುಡುಕಿ, ಹುಡುಕಿ ಸೋತ. ಹುಡುಕುತ್ತಾ, ಹುಡುಕುತ್ತಾ ಎಲ್ಲಾ ಭಿಕ್ಷುಕಿಯರು ತಾಯಂದಿರೇ ಅನ್ನಿಸತೊಡಗಿದರು. “ಬಾರಪ್ಪ ಯಾರು ಬೇಕಿತ್ತು? ಅಮ್ಮ ಕಳೆದು ಹೋದ್ಲೇನು? ನೀನೆ ಕಳ್ದೋದ್ಯ ಈ ಜಾತ್ರೆಯಾಗೆ?”, ಅಂತ ಮಾತಾಡಿಸಲು ಬಂದರೆ ಭಯಗೊಂಡು ಅವರಿಂದ ದೂರ ಉಳಿಯುತ್ತಿದ್ದ.

ಬೆಳಗ್ಗೆಯಿಂದ ಮನಸ್ಸು ʻಇಂದು ಅಮ್ಮ ಸಿಕ್ತಾಳೆ ಬಿಡುʼ ಅನ್ನುತ್ತಲೇ ಇತ್ತು. ಆದರೆ ಜಾತ್ರೆ ಮಾತ್ರ ಅವನ ಕಣ್ಣಿನೊಳಗಿನ ಬಣ್ಣಗಳನ್ನು ಕಲಕುತ್ತಿತ್ತು. ಅಮ್ಮ ಸಿಕ್ಕಿದ್ರೆ ಸಾಕು ಈ ಜಾತ್ರೆಗಳಿಂದ ದೂರ ಹೊರಟು ಹೋಗಿ ಬಿಡಬೇಕು ಅನಿಸಿತಿತ್ತು. ಜಾತ್ರೆ ಎಂದರೆ ಅವನ ಪಾಲಿಗೆ ಅಮ್ಮ ಸಿಗದ ಬೇಸರಗಳೇ ಆಗಿದ್ದವು. ಜಾತ್ರೆಗಳು ಕೂಡ ಅಪ್ಪನಂತೆಯೆ ಬರೀ ಮೋಸ. ಜಾತ್ರೆಗಳಿಗೆ ಇಷ್ಟೊಂದು ಬಣ್ಣಗಳು ಇದ್ದರೇನು ಬಂತು? ಅಮ್ಮನನ್ನು ಕೊಡದ ಮೇಲೆ. ಇಷ್ಟೆಲ್ಲಾ ಯೋಚನೆಗಳ ಮಧ್ಯೆ ಹಾದಿ ಸವೆಸಿ ಕಲ್ಲಪ್ಪನ ಗುಡಿ ಮುಂದೆ ಬಂದು ನಿಂತ. ಇಂದು ಇಲ್ಲಿ ಕಲ್ಲಪ್ಪ ದೇವರ ಜಾತ್ರೆ. ಅಮ್ಮನನ್ನು ಹುಡುಕಿಕೊಂಡು ಭಿಕ್ಷುಕರ ಬಳಿ ನಡೆದ. 

ದೇವಸ್ಥಾನ ಹೊರಗೆ ಒಂದೇ ಸಾಲಿನಲ್ಲಿ ಕೂತಿದ್ದ ಭಿಕ್ಷುಕರನ್ನು ನೋಡಿದ. ಹತ್ತಿರ ಹೋಗಿ ಒಬ್ಬೊಬ್ಬರ ಮುಖಗಳನ್ನು ನೋಡುತ್ತಾ ಹೋದ. ಸಾಲಿನ ತುದಿಯ ದೇವಸ್ಥಾನ ಬಳಿಯಲ್ಲಿ ಒಬ್ಬ ಭಿಕ್ಷುಕ ಹೆಂಗಸಿದ್ದಳು.  ಕೆಂಪು ಬಣ್ಣ, ಗುಂಗುರುಗೂದಲು, ಪೂರ್ತಿ ಮಾಸಿ ಹೋದ ಬಟ್ಟೆ, ಎದುರಿಗೊಂದು ಅಲುಮಿನಿಯಂ ತಟ್ಟೆ. ಇವರೇ ಅಮ್ಮನಿರಬಹುದೆಂಬ ಯೋಚನೆಗಳು ಹುಟ್ಟಿಕೊಂಡವು. ಮೆಟ್ಟಿಲುಗಳನ್ನು ಏರುತ್ತಾ ʻಅಮ್ಮ… ಅಮ್ಮ…ʼ ಅನ್ನತೊಡಗಿದ. ಅವನ ಕೂಗು ಜಾತ್ರೆರೋಧನವಾಯಿತು. ತನ್ನನ್ನೇ ನೋಡುತ್ತಿದ್ದ ಹುಡುಗನನ್ನು ಆಕೆ ತದೇಕಚಿತ್ತದಿಂದ ನೋಡಿದಳು. ಅವಳು ಅದೇ ದೇವಸ್ಥಾನದಲ್ಲಿ ಬಹುವರ್ಷದಿಂದ್ದವಳು. ಜನರ ಬಾಯಲ್ಲಿ ಅವಳೀಗ ಹುಚ್ಚಿ. ಹಗಲು ರಾತ್ರಿಗಳಲ್ಲಿ ಅವಳ ಬಾಯಿಂದ ಮಗನೇ… ಅನ್ನುವ ಪದ ಬಿಟ್ಟು ಬೇರೆ ಕೇಳಿದವರಿಲ್ಲ. ʻಪಾಪ ಮಗನನ್ನು ಕಳೆದುಕೊಂಡಿರಬೇಕುʼ, ಎಂದು ಆಕೆಯನ್ನು  ನೋಡಿದವರು ಒಂದು ಷರಾ ಬರೆದು ಹೋಗುತ್ತಿದ್ದರು. 

ತೇಜುವನ್ನು ನೋಡಿದ್ದೇ ಆ ಹೆಂಗಸು ಮಗನೇ… ಅನ್ನುತ್ತಾ ಅರಚತೊಡಗಿದಳು. ಅವಳ ವಿಚಿತ್ರ ಕೂಗಿಗೆ ಜನ ಹುಚ್ಚಿ ಹುಚ್ಚಿ ಅನ್ನುತ್ತಾ ದೂರ ಓಡಿದರು. ತೇಜು ಕೂಡ ಹೆದರಿ ದೂರ ಸರಿದು ನಿಂತ. ಅವಳು ಎದ್ದು ತೇಜು ಕಡೆ ಓಡ ಬರತೊಡಗಿದಳು. ತೇಜು ಭಯಗೊಂಡು ಓಡತೊಡಗಿದ. ಓಡಿ ಓಡಿ ಜಾತ್ರೆಯ ಜಗದೊಳಗೆ ಮರೆಯಾದ… ಆ ಹೆಂಗಸನ್ನು ಹಿಡಿದು ತಂದು ಜನ ರೂಮಿನಲ್ಲಿ ಕೂಡಿ ಹಾಕಿದರು. ಜಾತ್ರೆ ಬಣ್ಣಗಳನ್ನು ಚೆಲ್ಲುತ್ತಲೇ ಇತ್ತು. ಹುಡುಗ ಈಗ ಜಾತ್ರೆಯಿಂದ ಜಾತ್ರೆಗೆ ಅಮ್ಮನನ್ನು ಹುಡುಕಿಕೊಂಡು ಓಡುತ್ತಲೇ ಇದ್ದಾನೆ. 

‍ಲೇಖಕರು admin j

June 26, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: