ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಬಂಗಾಳದ ಅಂಗಳದಲ್ಲಿ ಭಾಗ : 4 ಲಾವಾದಲ್ಲಿ ಲೀಲಾ

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ ರೂಪಿಸಿಕೊಂಡಿದ್ದಿರಬಹುದು, ನಿವೃತ್ತಿಯ ನಂತರ ಪ್ರವೃತ್ತಿಯ ಬೆನ್ನುಹತ್ತಿ ಮನಸಿನ ನಂದನವನ್ನು ಹಕ್ಕಿಗಳ ತಾಣ ಮಾಡಿಕೊಂಡಿದ್ದಿರಬಹುದು ಇಡೀ ಪಯಣವೇ ಅಚ್ಚರಿಯೊಂದಿಗೆ ಅಬ್ಬಾ ಎನ್ನಿಸುವಂತಿದೆ.

ಏನಿರಲಿ, ಇಲ್ಲದಿರಲಿ ಮನದ ನಿಶ್ಚಯವೊಂದು ಅಚಲವಿರಲಿ ಎಂದು ಅಂದುಕೊಂಡ ಹಾದಿಯಲಿ ಛಲಬಿಡದೆ ನಡೆದವರು.

ನಿವೃತ್ತಿಯ ನಂತರ ಏನು ಮಾಡಬೇಕೆಂದು ಹುಡುಕಾಡುತ್ತಿದ್ದ ಮನಸ್ಸು ಒಂದು ದಿನ ಫೋಟೋಗ್ರಫಿ ಎಂದು ನಿರ್ಧರಿಸಿದ್ದೇ ಕ್ಷಣವೂ ತಡಮಾಡದೆ ಆ ಫೀಲ್ಡಿಗೆ ಇಳಿದು ಟ್ರಯಲ್‌ ಅಂಡ್‌ ಎರರ್‌ ಮಾಡುತ್ತಲೇ ಕಲಿತೇಬಿಟ್ಟರು. ಗಾಂಧಿ ಮತ್ತು ಕುವೆಂಪುವನ್ನು ತಮ್ಮ ಆದರ್ಶವೆಂದು ಹೇಳುವ ಲೀಲಾ ಮೇಡಂ ಬರವಣಿಗೆಯೂ ಅವರ ಮಾತಿನಷ್ಟೇ ಮುದನೀಡುವಂತಹದ್ದು.

ತಮ್ಮ ಹಕ್ಕಿಗಳೊಡನಾಟದ ನೆನಪುಗಳನ್ನು ಈ ಅಂಕಣದ ಮೂಲಕ ‘ಅವಧಿ’ಯ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.

18.4

ಮೂರನೆಯ ಸಲ ಬಾಗ್ಡೋಗ್ರಾಗೆ ಕಾಲಿಟ್ಟಿದ್ದೆ. ಅರುಣಾಚಲದ ಪ್ರವಾಸ ಮುಗಿಸಿ ಅಸ್ಸಾಮಿನ ಮಾಗುರಿಬೀಲ್‌ನಲ್ಲಿ ಒಂದು ದಿನದ ಷಾರ್ಟ್ ಹಕ್ಕಿ ಟ್ರಿಪ್ ಮುಗಿಸಿ ಕೂತಿದ್ದ ಸಂದೀಪ ಸಮಯ ಮರೆತಿದ್ದ. ನಾನು ಕೂಗಿ ಹೇಳಿದಾಗ `ಅಮ್ಮಾ ನಾನು ಟೈಂ ನೋಡಲೇ ಇಲ್ಲ’ ಎಂದು ಜೀಪನ್ನು ಗಾಳಿಯಲ್ಲಿ ಹಾರಿಸಿಸಿಕೊಂಡು ಏರ್‌ಪೋರ್ಟಿಗೆ ತಲುಪಿಸಿದಾಗ ವಿಮಾನ ಹೊರಡಲು ಹದಿನೈದು ನಿಮಿಷ ಮಾತ್ರ ಬಾಕಿ ಇತ್ತು. ನಮ್ಮ ಅವಸರ ಗಮನಿಸಿ ಸೆಕ್ಯುರಿಟಿಯಲ್ಲಿ ಕ್ಷಣಾರ್ಧದಲ್ಲಿ ರೈಟ್ ಎಂದರು. ನನ್ನ ಕಾಲಿನ ಒದ್ದಾಟ ಗಮನಿಸಿಯೇ ಕೌಂಟರಿನಲ್ಲಿ ನಮ್ಮ ಕೆಲಸ ಬೇಗ ಮುಗಿಯಿತು. ಸೆಕ್ಯುರಿಟಿ ಚೆಕ್ ಮುಗಿದು ಬೋರ್ಡಿಂಗ್‌ಗೆ ಬಂದರೆ ಕ್ಯೂ ಇತ್ತು. ಉಸ್ ಎಂದು ಉಸಿರುಗರೆದೆ.

ವಿಮಾನವೇರಿ ಬಾಗ್ಡೊಗ್ರಾ ತಲುಪಿ ನೂರಿಪ್ಪತ್ತು ಕಿ.ಮೀ ದೂರದ ಲಾವಾದ ದಾರಿ ಹಿಡಿಯುವ ಮುನ್ನ ಊಟಕ್ಕೆಂದು ಹೊಟೇಲಿಗೆ ಹೋದೆವು. ಅಲ್ಲಿ ಸಿಕ್ಕಾಪಟ್ಟೆ ಜನ. ಕುಳಿತುಕೊಳ್ಳಲೂ ಕಾಯುತ್ತಾ ನಿಂತಿದ್ದೆವು. ವಾಷ್‌ರೂಮಿಗೂ ಅರ್ಧ ಗಂಟೆ ಕಾಯ್ದ ಬಳಿಕ ಎಂಟ್ರಿ ಸಿಕ್ಕಿ ಹಗುರಾದೆ. ಸಂದೀಪ `ಅಮ್ಮಾ ನೀವು ಊಟ ಆರ್ಡರ್ ಮಾಡಿ ನಾನು ATMಗೆ ಹೋಗಿ ಬರ್ತೀನಿ’ ಎಂದು ಓಡಿಯೇಬಿಟ್ಟ. ಕೊಟ್ಟ ಮೆನುಕಾರ್ಡ್ ನೋಡಿ `ಇಲ್ಲಿಯ ಸ್ಪೆಷಲ್ ಊಟ ಕೊಡಿ’ ಎಂದು ಹೇಳಿ ಒಣಗುತ್ತಾ ಕುಳಿತೆ… ಕುಳಿತೇ ಇದ್ದೆ. ಅರ್ಧ ಮುಕ್ಕಾಲು ಗಂಟೆಯ ಬಳಿಕ ಬಂದ ಸಂದೀಪ  ತನಗೆ ದೋಸೆ ಆರ್ಡರ್ ಮಾಡಿಕೊಂಡ. ಅಷ್ಟು ಹೊತ್ತಿಗೆ ಊಟ ಬಂದು ಕುಳಿತಿತು. ಎಲ್ಲಾ ಇಷ್ಟಿಷ್ಟು ಎಂದರೂ ಸಾಕಷ್ಟಿತ್ತು. ಸಮಯವೂ ನಾಲ್ಕು ಗಂಟೆ ಆಗಿತ್ತು. ಅದನ್ನು ಮುಗಿಸುತ್ತಿದ್ದ ಹಾಗೆ ಹಾಟ್ ಜಾಮೂನೂ ತಂದಿಟ್ಟರು. ಸುಡುಜಾಮೂನಿನ ನಿಜಸ್ವರೂಪ ಗೊತ್ತಿಲ್ಲದೆ ಬಾಯಿಗೆ ಹಾಕಿ ಸುಟ್ಟುಕೊಂಡಿದ್ದಾಯ್ತು. ಸುಟ್ಟು ಬಾಯಿಗೆ ಸಿಹಿಯಾದ ಸುಡುಜಾಮೂನಿನ ಸವಿ ಸಿಕ್ಕಲೇ ಇಲ್ಲ.

ತಡ ಮಾಡಿದ್ದಕ್ಕೆ ಸಂದೀಪನೊಡನೆ ಒಂದು ರೌಂಡ್ ಕೋಳಿಜಗಳ ಆಯಿತು. ಹಕ್ಕಿಗೆ ಹೋದಾಗ. ಏನನ್ನೋ ತಿಂದರಾಯಿತು ಎನ್ನುವ ನನ್ನ ಧೋರಣೆ ಸಂದೀಪನಿಗೂ ಗೊತ್ತು. ತಿಂದು ಬೇಗ ಗುರಿ ತಲುಪಿ ಹಕ್ಕಿ ಹುಡುಕುವ ಎಂದು ನನ್ನ ಬೇಡಿಕೆ. ಊಟಕ್ಕಾಗಿ ಒಂದೂವರೆ ಗಂಟೆ ದಂಡವಾಗಿತ್ತು. ದಾರಿಯಲ್ಲೆಲ್ಲೂ ನಿಲ್ಲಿಸದೆ ರಾತ್ರಿಯ ವೇಳೆಗೆ ಲಾವಾ ತಲುಪಬೇಕಿತ್ತು. ಎರಡು ದಿನಗಳಿಂದ ಹಕ್ಕಿಗಳು ಸಿಗದೆ ಕ್ಯಾಮೆರಾ ಕೂಡಾ ತಹತಹಿಸುತ್ತಿತ್ತು. ನಾನು ಸಂಕಟವನ್ನೇ ಹೊದ್ದು ಕೂತು ಪ್ರಯಾಣಿಸುತ್ತಿದ್ದೆ. ಜೊತೆಗೆ ಸಾಂತ್ವನಗೊಳಿಸಲು ಚಂದ್ರನೂ ಬರುತಿದ್ದ.

`ಲೀಲಾ ನೀನು ಮಾತ್ರ ಹೋಗ್ತೀಯಾ, ನಾನು ಬರ್ತೇನೆ’ ಎನ್ನುತ್ತಾ ಶಿಖರದ ನೆತ್ತಿಯಿಂದ ನೋಡುತ್ತಿದ್ದ ತಿಂಗಳಮಾಮ ದಾರಿ ದಿಗ್ದರ್ಶಿಸುತ್ತಿದ್ದ. ಏರುಮುಖದ ಪಯಣ ಮಾಡಿ ಲಾವಾಗೆ ಲೇಟಾಗಿ ತಲುಪಿದೆವು. ನನ್ನ ಡಿಮ್ಯಾಂಡ್ ಮಹಡಿಯಲ್ಲಿ ವಸತಿ ಬೇಡ, ಕಾಲಿಗೆ ಕಷ್ಟ ಎಂದು. ಲಾವಾದಲ್ಲಿ ಆ ದಿನ ಸಿಕ್ಕಾಪಟ್ಟೆ ಪ್ರವಾಸಿಗರು. ಯಾವ ರಸ್ತೆ, ಯಾವ ಮೂಲೆ ನೋಡಿದರೂ ಜನ ಗಿಜಿಗುಟ್ಟುತ್ತಿದ್ದರು. ಮೊದಲಿದ್ದ ಪ್ಲ್ಯಾನ್ ರಿಷ್ಯಪ್ಗೆ ಹೋಗಿ, ಸಂದೀಪನ ಸ್ವಂತದ್ದೇ ಆದ ರಿಸಾರ್ಟಿನಲ್ಲಿರುವುದೆಂದು. ಅವನ ಕಸ್ಟಮರ್ ಜೊತೆ ಚರ್ಚೆ ನಡೆದರೂ ಬಂಗಾಳಿಯಲ್ಲಿದ್ದ ಕಾರಣ ಅರ್ಥ ಆಗುತ್ತಿರಲಿಲ್ಲ. ರಿಷ್ಯಪ್ ಲೋಕೇಷನ್ ಯಾಕೆ ಬದಲಾಯಿಸಿದೆ ಎಂದು ಕೇಳಿದಾಗ ರಿಷಬ್ ಎತ್ತರದ ಪ್ರದೇಶದಲ್ಲಿದೆ, ವಿಪರೀತ ಚಳಿ. ನಿಮಗೆ ಹೊಂದಿಕೊಳ್ಳಲು ಕಷ್ಟ ಆಗಬಹುದೆಂದು ಜಾಗ ಬದಲಾಯಿಸಿದೆ’ ಎಂದರೂ ನಂಬುವ ಸತ್ಯ ಆಗಿರಲಿಲ್ಲ. ಅದಕ್ಕಿಂತ ಚಳಿಯ ಮಿಷ್ಮಿ ಹಿಲ್ಲಿನಿಂದ ಬಂದಿದ್ದೆ. ಭೂತಾನ್, ಸಿಂಗಲೀಲಾಗಳಲ್ಲೂ ಉಳಿದಿದ್ದವಳು ನಾನು.

ಕೊನೆಗೆ ಲಾವಾದಲ್ಲಿಯೇ ವ್ಯವಸ್ಥೆ ಮಾಡಿದ, ಅದೂ ಎರಡನೇ ಮಹಡಿಯಲ್ಲಿ. ಅವನಿಗೆಷ್ಟು ಶಾಪ ಹಾಕಿದೆನೊ ಲೆಕ್ಕವಿರಿಸಿಲ್ಲ. ಇದೊಂದು ರಾತ್ರಿ ಅಡ್ಜಸ್ಟ್ ಮಾಡಿಕೊಳ್ಳಿ, ನಾಳೆ ರಿಷಬ್‌ಗೆಹೋಗೋಣವೆಂದು ದಮ್ಮಯ್ಯಗುಡ್ಡೆ ಹಾಕಿ ಮಹಡಿ ಹತ್ತಿಸಿದ. ಎಷ್ಟು ಸಿಟ್ಟು ಬಂದಿತ್ತೆಂದರೆ ಊಟ ಬೇಕಿಲ್ಲ ಎಂದೆ. ಅವನ ಮೇಲಿನ ಸಿಟ್ಟಿಗೆ ಊಟ ಏಕೆ ಬಿಟ್ಟೆನೆಂದು ನನಗೆ ಗೊತ್ತಿಲ್ಲ. ಒಂದು ಡೈರಿಮಿಲ್ಕ್ ಚಾಕಲೇಟ್ ಕೊಟ್ಟು`ಅಮ್ಮಾ ಇದನ್ನಾದರೂ ತಿನ್ನಿ’ ಎಂದ.ಅವನಿಗೆ ನನ್ನ ಚಾಕಲೇಟ್ ವೀಕ್‌ನೆಸ್ ಗೊತ್ತಿದ್ದರಿಂದ ಎನ್‌ಕ್ಯಾಶ್ ಮಾಡಿಕೊಳ್ಳುತ್ತಿದ್ದ. ನಾಳೆ ಬೆಳಿಗ್ಗೆ ಆರು ಗಂಟೆಗೆ ಸಿದ್ಧವಾಗಿರಿ ಎಂದು ರಿಷಬ್‌ಗೆ ಹೋದ. ಎಷ್ಟೆ ಕೋಪ ಇದ್ದರೂ ಚಾಕಲೇಟ್ ಮೇಲೆ ಕೋಪ ಹೇಗೆ ತೋರಿಸಲು ಸಾಧ್ಯ. ಬೈದುಕೊಳ್ಳುತ್ತಲೆ ತಿಂದೆ.

ಬೆಳಿಗ್ಗೆ ಐದೂವರೆಗೆ ಕ್ಯಾಮೆರಾ ಸಜ್ಜುಗೊಳಿಸಿ ಬಾಲ್ಕನಿಯಲ್ಲಿ ಕುಳಿತೆ. ಪಾರಿವಾಳ ಕಾಗೆಗಳು ಅತ್ತಿಂದಿತ್ತ ಅಡ್ಡಾಡುತ್ತಿದ್ದವು. ಪ್ರವಾಸಿಗರ ದಂಡು ವಾಹನದ ನಿರೀಕ್ಷೆಯಲ್ಲಿ ನಿಂತಿತ್ತು. ದೇವಾಲಯದ ಗಲಾಟೆಯೂ ಸೇರಿತು. ಅಲ್ಲಿ ಪುಟ್ಟಪರ್ತಿಯ ಸಾಯಿಬಾಬಾ ಬ್ಯಾನರಿತ್ತು. ನನಗೆ ದೇವಮಾನವರ ಬಗ್ಗೆ ಮೊದಲಿನಿಂದ ಸ್ವಲ್ಪ ದೂರ. ದಕ್ಷಿಣದ ಈ ದೇವಮಾನವನಿಗೆ ಹಿಮಾಲಯದ ಬಳಿಯೂ ಭಕ್ತರಿರುವ ಬಗ್ಗೆ ಆಶ್ಚರ್ಯ ಆಯಿತು. ಜನರೆಲ್ಲಾ ಒಂದೇ ಶಿವಾ ಎಂದುಕೊಂಡೆ.

ರಸ್ತೆಯಲ್ಲೇ ಸಂದೀಪ ಠಳಾಯಿಸುತ್ತಿದ್ದ, ನಿಮಿಷಕ್ಕೆರಡು ಸಲ ವಾಚು ನೋಡುತ್ತಾ ಸೀರಿಯಸ್ಸಾಗಿ ಕಾಯುತ್ತಿರುವ ಪೋಸ್ ಕೊಡುತ್ತಿದ್ದ. ಏಳುಗಂಟೆಗೆ ಗಾಡಿ ಬಂದಿತು. ಲಗೇಜನ್ನೆಲ್ಲಾ ಗಾಡಿಗೆ ಶಿಫ್ಟ್ ಮಾಡಿದ. ಎಲ್ಲಿಗೆ ಹೋಗುತ್ತಾನೆಂದು ನೋಡಿದರೆ ಒಂದು ಮೈಲಿ ದೂರಹೋಗಿ ರಸ್ತೆ ಬದಿಯಲ್ಲಿಳಿಸಿ ಹಕ್ಕಿಗಳಿವೆ ಇಲ್ಲಿ ಎಂದ. ಎಲ್ಲಿವೆ ಎಂದು ಕಣ್ಣಾಡಿಸಿದರೆ, ಎತ್ತರದ ಮರದ ತುದಿಯಲ್ಲಿ, ದೂರದಲ್ಲಿ ಕಂಡವು. ಅರ್ಧ ಮುಕ್ಕಾಲು ಗಂಟೆ ಅಲ್ಲಲ್ಲೇ ಅಡ್ಡಾಡಿಸಿದ. lifer ಆದ brown Finch ಒಂದು ಸಿಕ್ಕಿತಷ್ಟೆ.

ಎಂಟು ಗಂಟೆಗೆ ತಿಂಡಿಗೆ ಹೋಗುವ ಎಂದ. ಇಳಿದು ಬರುವುದಿಲ್ಲವೆಂದದ್ದಕ್ಕೆ ಇಲ್ಲಿಗೆ ತರುತ್ತೇನೆನ್ನುತ್ತಾ ಬಾಗಿಲೇ ಪೂರ್ತಾ ತೆಗೆಯದಿದ್ದ ಹೋಟೆಲಿಗೆ ಹೋದ. ಜೀಪಿನಲ್ಲೇ ಕೂರುವ ಬದಲು ಇಳಿದು ಸ್ಟೂಲಿನಲ್ಲಿ ಕುಳಿತೆ. ತಿಂಡಿಗೆ ಇಳಿಯದ ಕಾಲು ಹಕ್ಕಿಗಾಗಿ ಇಳಿಯಲು ಮುನ್ನುಗ್ಗಿತ್ತು. ಶಬ್ದಗಳ ಸಂತೆಯಾದ ಅಲ್ಲಿ ವಾಹನಗಳ ಓಡಾಟ, ಅಗಲೀಕರಣದ ಧೂಳರಾಶಿ. ಒಂದಷ್ಟು ಮನೆ, ಜನ. ಮನೆಗಳ ಮುಂದೆ ಹೂವಿನ ಗಿಡ. ಹಿಮಾಲಯದ ಸನಿಹದ ಊರುಗಳ ಮನೆ ಮುಂದೆ ಹೂವಿನ ಗಿಡ ಇದ್ದೇ ಇರುತ್ತವೆ. ಆ ಮನೆಗಳಿಗೆ ವಿಶೇಷ ಸೊಬಗು ಬಣ್ಣದ ಹೂಗಳಿಂದ.

ಅಲ್ಲಿದ್ದ ಹೂವಿಗಾಗಿ green tailed sunbird ಬರುತ್ತಲೇ ಇತ್ತು. ಅದರ ಚಿತ್ರ ತೆಗೆಯುತ್ತಾ, ಮೇಲೆ ಹಾರಾಡುತ್ತಿದ್ದ dark sided Flycatcher ಸೆರೆಹಿಡಿದೆ. ಅಷ್ಟರಲ್ಲಿ ಮನೆಗಳ ಸಂಧಿಯಿಂದ ನನಗಿಂತ ಸ್ವಲ್ಪ ಹೆಚ್ಚೇ ವಯಸ್ಸಾದ ವೃದ್ಧರೊಬ್ಬರು ನನ್ನಂತೆಯೆ ಕಾಲುನೋವಿನಿಂದ ಒದ್ದಾಡುತ್ತಾ ಬರುತ್ತಿದ್ದರು. ಮುಂದೆ ಕೆಲವು ಮೆಟ್ಟಿಲುಗಳಿದ್ದವು, ಹತ್ತುವಾಗ ನೋವಿನಿಂದ ನಲುಗುವ ಜೀವಗಳು. `ಸಮಾನಶೀಲ ವ್ಯಸನೇಷು ಸಖ್ಯಂ’ ಎಂಬಂತೆ ಕ್ಯಾಮೆರಾ ಕಣ್ಣು ತಿರುಗಿ ಚಿತ್ರಗಳಾದವು. ಮೆಟ್ಟಿಲು ಹತ್ತಿದ ಮೇಲೆ ಅವರ ಮುಖದಲ್ಲಿ ಸಂತೃಪ್ತಿ. ನಾನೂ ಮೇಲೆದ್ದೆ. ನನ್ನ ಒದ್ದಾಟ ನೋಡಿದವನೊಬ್ಬ ನಿಮಗೆ ಕಾಲುನೋವೆ, ನಾನೊಂದು ಔಷಧಿ ಹೇಳುವೆನೆಂದ. ಇವ ಬಲೆಯೊಡ್ಡಿ ನನ್ನನ್ನು ಬಲಿ ಕಾ ಬಕ್ರಾ ಮಾಡುವನೆಂದು ಮೌನವಾಗಿ ನಗುತ್ತಾ ನಿಂತೆ, ಉಭಶುಭ ಎನ್ನಲಿಲ್ಲ. ಅವನ ಪಕ್ಕದವ ನಕ್ಕು `ಈ ಮೇಡಂಗೆ ಔಷಧಿ ಹೇಳುವ ಮೊದಲು ನಿನ್ನಜ್ಜನಿಗೆ ಔಷಧ ಹೇಳು’ ಎಂದ. ಆ ವೇಳೆಗೆ ಅವನಜ್ಜ ಕುಂಟುತ್ತ ಮುಂದೆ ಹೋಗಿದ್ದ. ಕಾಲ ಮುಗಿವ ತನಕ ಕಾಲುನೋವಿನ ಒಡನೆ ತಾನೆ ಜೀವನ.

ಅಷ್ಟು ಹೊತ್ತಿಗೆ ತಿಂಡಿ ಬಂದಿತು, ತಿಂದು ಮುಗಿಸಿದೆ. ಇನ್ನೊಂದು ಇಳಿಜಾರಿನತ್ತ ಕರೆದುಕೊಂಡು ಹೋದ. ಗಾಡಿ ಒದ್ದಾಡುತ್ತಾ ಇಳಿಯಿತು. ಗಂಟೆಗಟ್ಟಲೆ ಕಳೆದರೂ ಹಕ್ಕಿ ಕಾಣಲಿಲ್ಲ. `ಇವತ್ತು ಜನರ ಓಡಾಟ ಜಾಸ್ತಿ, ಅದಕ್ಕೆ ಹಕ್ಕಿ ಸಿಗ್ತಾ ಇಲ್ಲ ಎಂದನವ. ತನ್ನ ಕ್ಯಾಮೆರಾ ಹಿಡಿದು, ಫಿಪಿಪಿ, ಫಿಪಿಪಿ ಎಂದು collared owlet ತರಹಕ್ಕೆ ವಿಷಲ್ ಹಾಕಿಕೊಂಡು ಓಡಾಡಿದ್ದೆ ಬಂದ ಭಾಗ್ಯ. ಕೊನೆಗೂ ಅಲ್ಲಿಂದ ಹೊರಟೆವು ಅಕ್ಷರಶಃ ಹಸಿದಿದ್ದ ಕ್ಯಾಮೆರಾದೊಡನೆ.

ಲಾವಾ ದಾಟಿ ರಿಷ್ಯಪ್ ದಾರಿ ಹಿಡಿದೆವು. ಹತ್ತು ಮೈಲಿ ಬಳಿಕ ಗುಡ್ಡದ ಕೊರಕಲು ದಾರಿಯ ನಾಲ್ಕು ಮೈಲಿಯನ್ನು ನಲವತ್ತು ನಿಮಿಷದಲ್ಲಿ ಕ್ರಮಿಸಿ ಹೊಟೇಲ್ ಬಳಿ ಇಳಿಸಿದ. `ಇದು ನಿನ್ನ ರಿಸಾರ್ಟಾ’ ಎಂದೆ. `ಅಲ್ಲ, ಅಲ್ಲಿಗೆ ನಾಳೆ ಹೋಗೋಣ, ಇವತ್ತು ಇಲ್ಲಿಯೇ ಇರಿ’ ಎಂದ. ಸಿಟ್ಟು ನೆತ್ತಿಗೇರಿತ್ತು. ತನ್ನ ರಿಸಾರ್ಟಲ್ಲಿ ಅತಿಥಿಗಳನ್ನಿರಿಸಿ ನನ್ನನ್ನು ಎಲ್ಲೆಂದರಲ್ಲಿ ಬಿಡಾರ ಬಿಡಿಸುತ್ತಿದ್ದ. ಹೊಟೇಲಿನ ಸ್ಟೋರ್‌ರೂಮಿನ ಕಿಟಕಿ ಬಳಿ ಹಕ್ಕಿ ಬರುತ್ತವೆಂದ. ಹುಲ್ಲು ಬೆಳೆದ ಗಲೀಜಿನಾಗರದ ಬಗ್ಗೆ ನಾಲ್ಕು ದಿನದಿಂದ ಈ ಅದ್ಭುತ ತಾಣದಲ್ಲಿ ಇಂತವೆಲ್ಲ ಹಕ್ಕಿಗಳು ಬರುತ್ತವೆಂದು ಕಿವಿ ತುಂಬಿದ್ದ. ಸ್ಥಳದರ್ಶನವಾದೊಡನೆ ಜುಗುಪ್ಸೆ ಹುಟ್ಟಿ `ಹಕ್ಕಿ ಬಂದರೂ ಈ ಎತ್ತರದ ಕಿಟಕಿಯಿಂದ ಹೇಗೆ ನೋಡಲಿ ಮಾರಾಯಾ’ ಎಂದೆ. ನಾಲ್ಕಾರು ಕುರ್ಚಿ ಒಟ್ಟಿಗೆ ಹಾಕಿ ಮಾಯವಾದ. ರಾವಣನ ಮುಂದೆ ಬಾಲದ ಪೀಠ ಹಾಕಿ ಕುಳಿತ ಹನುಮಂತನಂತೆ ಕೂತೆ.

ಕೋಲಿನಿಂದ ಹುಲ್ಲಿಗೆ ಬಡಿದು ಹಸನು ಮಾಡಿ ಅನ್ನ ಹರಡಿದ. red billed leothrix ಬಂದಿತು ಕೊಕ್ಕಿನಲ್ಲಿ ಅನ್ನದಗುಳು ಕಚ್ಚಿಕೊಂಡ ದೈನೇಸಿ ಸ್ವರೂಪದಲ್ಲಿ. ಹೈಡಿನಲ್ಲಿಯೂ ಹಕ್ಕಿ ಫೋಟೋ ತೆಗೆದಿದ್ದೆ, ಇಂತಹ ಅನಾಥ ರೀತಿಯಲ್ಲಲ್ಲ. leothrix ಚಿತ್ರ ತೆಗೆಯಲೂ ಮನಸ್ಸು ಬಾರದೆ ಸಾಕ್ಷಿಗೆ ಮೂರ್ನಾಲ್ಕು ಕ್ಲಿಕ್ಕಿಸಿದೆ. ಅರೆತಾಸಿನಲ್ಲಿ ಬಂದ ಸಂದೀಪ `ಅಮ್ಮಾ Black throated tit ಬರುತ್ತಿದೆ’ ಎಂದ. ಸತ್ತಾಲಿನಲ್ಲಿ ತೆಗೆದಿದ್ದರೂ ಒಳ್ಳೆಯ ಶಾಟ್ ಬೇಕೆಂದು ಕ್ಯಾಮೆರಾ ಸೆಟ್ ಮಾಡುತ್ತಿದ್ದವಳು ಥಟ್ಟನೆ ಸುಮ್ಮನಾದೆ. `ಅಮ್ಮಾ ತೆಗೆಯಿರಿ’ ಎಂದ. `ಏನು ತೆಗೆಯೋದು, ಈ ಕಿಟಕಿಯಲ್ಲಿ ನಿನ್ನ ಕ್ಯಾಮೆರಾ ಹಿಡಿದು ಅಡ್ಡ ನಿಂತರೆ ಸಂಧಿಯಲ್ಲಿ ಹೇಗೆ ತೆಗೆಯಲಿ’ ಎಂದೆ. `ಸಾರಿ ಸಾರಿ’ ಎಂದು ಕ್ಯಾಮೆರಾ ಹಿಂದೆ ತೆಗೆದ. ಸಂದೀಪ ಹಕ್ಕಿಗೈಡ್ ನಿಜ, ಆದರೆ ಗೆಸ್ಟ್ ಜೊತೆ ಬಂದಾಗ ಗೈಡ್ ಮಾಡುವುದಕ್ಕಿಂತ ಹೆಚ್ಚಾಗಿ ಅವನೊಳಗಣ ಛಾಯಾಗ್ರಾಹಕ ಜಾಗೃತ ಆಗಿ ಬೇಗ ಮುನ್ನುಗ್ಗುತ್ತಿದ್ದ. ಕೊನೆಗೆ ಆ ಕಿಟಕಿಯಲ್ಲಿ ನಾಲ್ಕಾರು ಫೋಟೋ ತೆಗೆಯುವಷ್ಟರಲ್ಲಿ tit ಮರೆಯಾದವು. ಮೂರು ಗಂಟೆಗೆ ಹೋಗೋಣ ಎಂದ ಸಂದೀಪ ಗಾಡಿ ಸಿಗದೆ `ಅಮ್ಮಾ ಟೂರಿಸ್ಟ್ ಜಾಸ್ತಿ, ವೆಹಿಕಲ್ ಸಿಗ್ತಿಲ್ಲ’ ಎಂದು ತನ್ನ ಹೊಣೆ ಯಾರದೋ ಮೇಲೆ ಹೊತ್ತು ಹಾಕಿದ.

ಕೊನೆಗೂ ಬಂದ ಗಾಡಿ ಹತ್ತಿ ಇಳಿಜಾರಿನಲ್ಲಿ ಗ್ರೇಟ್ ಬಾರ್ಬೆಟ್, ಗ್ರೇ ಟ್ರೀಪೈ ನೋಡಿ ಇಳಿಸಿದ. ಅವುಗಳ ಚಂದದ ಪಟ ಮೊದಲೇ ತೆಗೆದಿದ್ದೆ. yellow throated marten ಕಾಣಿಸಿತು. ನೆಲದ ಮೇಲೆ, ಕಣಿವೆಯ ಇಳಿಜಾರಿನಲ್ಲಿ, ಪರ್ಚ್ ಮೇಲೆ ಮಾರ್ಟಿನ್ ಸಿಕ್ಕಿತ್ತು. ಆದರೂ ರಿಷ್ಯಪ್ನಲ್ಲಿ ಮರದ ಮೇಲೆ ಮಾರ್ಟಿನ್ eye levelನಲ್ಲಿತ್ತು. ಹತ್ತಿರವಿದ್ದರೆ ಚೆನ್ನಾಗಿತ್ತೆನ್ನಿಸಿದರೂ ಹತ್ತಿರವಿದ್ದರೆ ಹಿನ್ನೆಲೆ ಚೆನ್ನಾಗಿ ಇರುತ್ತಿರಲಿಲ್ಲ.

ಇಲ್ಲೇ ಇರಿ ಈಗ ಬಂದೆ ಎಂದ ಸಂದೀಪ ಕಾಣೆಯಾದ. ಟೂರಿಸ್ಟ್ ಕಂಡ ಹಕ್ಕಿಗಳು ನಾವೂ ಯಾಕೆ ಟೂರ್ ಮಾಡಬಾರದೆಂದು ಹೋಗಿದ್ದವು. ಪ್ರವಾಸಿಗಳ ನಡುವೆ ಇಳಿವಯಸ್ಸಿನ ನಾನು ಇಷ್ಟುದ್ದದ ಲೆನ್ಸ್ ಹಾಕಿ ಕಾಯುತ್ತಿದ್ದುದು ಎಂಟನೆಯದ್ಭುತ ಎನ್ನುವಂತೆ ಕಣ್ಣಗಲಿಸಿ ನೋಡಿ, ಜೊತೆಯವರಿಗೆ ತೋರಿಸಿ ಹಲ್ಲು ಕಿರಿಯುತ್ತಿದ್ದರು. ಕೆಲವರು ಹತ್ತಿರಕ್ಕೆ ಬಂದು ಏನು ಮಾಡ್ತಿದ್ದೀರಿ ಎಂದು ತನಿಖೆ ನಡೆಸಿದರು. ಹಕ್ಕಿ ಪಟ ತೆಗೆಯುತ್ತಿದ್ದೇನೆಂದೆ. ಹೇವರಿಕೆಯ ನೋಟ ಬೀರಿ `ಉದ್ದದ ಲೆನ್ಸ್ ಹಾಕಿ ಹಕ್ಕಿ ಚಿತ್ರ ತೆಗೆಯಲು ಈ ವಯಸ್ಸಲ್ಲಿ ಎಲ್ಲಿಂದಲೋ ಬಂದಿದ್ದೀರಾ ನಾವೆಲ್ಲೋ ಸೀನರಿ ತೆಗೆಯುತ್ತಿದ್ದೀರಿ ಎಂದುಕೊಂಡೆವೆಂದು’ ಓಪನ್ನಾಗಿ ಹೇಳಿ,  ತಮ್ಮ ಮೊಬೈಲಿನಲ್ಲಿ ನನ್ನ ಪಟ ಕ್ಲಿಕ್ಕಿಸಿಕೊಂಡರು. ಕಂಡವರ ಕಣ್ಣಿಗೆ ಜೋಕರ್ ತರಹ ಕಾಣುವಂತೆ ಕೂರಿಸಿ ಹೋಗಿದ್ದ ಸಂದೀಪ ಮರಳಿದ ತಕ್ಷಣ ಗುರ‍್ರೆಂದೆ.

ಹೆಚ್ಚು ರೇಗುವ ಮೊದಲೇ ಗಾಡಿ ಹತ್ತಿಸಿಕೊಂಡು ಹೊರಟ. ಅಲ್ಲಲ್ಲಿ ಹಕ್ಕಿ ಹುಡುಕಲು ನಿಲ್ಲಿಸುತ್ತಿದ್ದ. ಹಕ್ಕಿಗಳ ಬದಲು ಮೊಬೈಲ್ ಮಾತಿನಲ್ಲಿ ಮಗ್ನರಾದ, ಸೆಲ್ಫಿಯಲ್ಲಿ ಮುಳುಗಿದವರೆ ಕಾಣುತ್ತಿದ್ದರು. ಒಂದು ಗಾಡಿ ಬಂದು ದಡದಡಾಂತ ಇಳಿದ ತಕ್ಷಣ ಆ ಕಡೆ ಈ ಕಡೆ ತಿರುಗಿ ಸೆಲ್ಫಿ ತೆಗೆದರು, ಮಾತಿನಲ್ಲಿ ಮುಳುಗಿದರು. ಬಂದಿರುವುದಕ್ಕೆ ಸಾಕ್ಷಿಯಾಗಿ ಫೋಟೊ, ಊರಲ್ಲಿದ್ದವರಿಗೆ ಉರಿಸಲು ಕಳಿಸಿ ವಿವರಿಸೋದು. ಇಷ್ಟೆ ಮಾಡೋದಾದರೆ ಅಷ್ಟು ದೂರದಿಂದ ಏನು ನೋಡಲು ಬಂದಿದ್ದಾರೆಂಬ ಪ್ರಶ್ನೆ. ಒಂದು ಕುಟುಂಬದ ಐವರು ನಡೆಯುತ್ತಾ ಮೊಬೈಲಿನಲ್ಲಿ ಮಗ್ನರಾಗಿದ್ದರು. ಬಂದಲ್ಲಿಯೂ ಒಬ್ಬೊಬ್ಬರೂ ಮೊಬೈಲಿನಲ್ಲಿ ಮುಳುಗಿದರೆ ಫ್ಯಾಮಿಲಿ ಟೂರ್ ಯಾಕೆ ಅಂತಾ ನನ್ನ ಮಂದಮತಿಗೆ ಅರ್ಥವೇ ಆಗಲಿಲ್ಲ.

ಮುಂದೆ ಒಂದು ನೋಟ ಕಣ್ಣಿಗೆ ಬಿದ್ದಿತು. ಬಿದ್ದಮೇಲೆ ಬಿಟ್ಟು ಹೋಗೋದೆ. ಭೂತಾನ್ ಪ್ರವಾಸದಲ್ಲೂ ಇಂತಹ ನೋಟ ಸಿಕ್ಕಿತ್ತು. ಆದರೆ ಈ ಸಲ ಗಾಡಿ ನಿಂತು ಕ್ಯಾಮೆರಾ ರೆಡಿಯಾಯಿತು. ಪಕ್ಕಕ್ಕೆ ತಿರುಗಿದ್ದ ಬಿಲ್ಗಾರ ಮುಂತಿರುಗಿ ಪೋಸ್ ನೀಡಿದರು. ಹಿಂದಿದ್ದ ಇನ್ನಿಬ್ಬರೂ ರೆಡಿಯಾದರು. ಕ್ಲಿಕ್ಕೂ ಆಯಿತು. ಅವರೂ ಬಾಣ ಬಿಟ್ಟರು. ಬಾಣವೂ ಹೋಯಿತು. ಎಲ್ಲಿಗೆಂದು ಗೊತ್ತಾಗಲಿಲ್ಲ. ನಮ್ಮ ಗಾಡಿ ಮುಂದೆ ಹೋಗುತ್ತಿತ್ತು. ಸುಯ್ ಸದ್ದು ಕೇಳಿತು. ಸಾರಥಿ ಹೇಳಿದ, ನೋಡಿ ಈ ಗುರಿಗೆ ಹೊಡೆಯುತ್ತಿದ್ದಾರೆ. ಅರೆ, ಇಷ್ಟೊಂದು ದೂರ. ಎಂತಹ ಗುರಿ! ಅರ್ಜುನ, ಏಕಲವ್ಯ ನೆನಪಾದರು. ಗೆಳತಿ ಬಾರತಿ ಕಾಸರಗೋಡರ ತಂದೆ ಸಮೇತನಹಳ್ಳಿ ರಾಮರಾಯರ ಕಾದಂಬರಿಯಲ್ಲಿ ಹೊಯ್ಸಳರ ಬಿಲ್ಗಾರನೊಬ್ಬ ಧ್ಯಾನಸ್ಥನಾಗಿ ಕೂದಲನ್ನೂ ಸೀಳಿದ ವರ್ಣನೆ ಓದಿದ್ದನ್ನು ಮರೆಯಲಾರೆ. ಅರೆ! ಹಕ್ಕಿ ಚಿತ್ರ ತೆಗೆಯೋದು ಒಂದು ರೀತಿಯ ಗುರಿ… ಧ್ಯಾನ… ಮೌನ… ಅಲ್ಲವೆ!

‍ಲೇಖಕರು admin j

June 26, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: