ಗದ್ಯವೆನ್ನುವುದು ಸುಂದರವಾದ ಕಾವ್ಯವಾಗಿ ಹರಿದಿದೆ

ಡಾ. ಪಾರ್ವತಿ ಜಿ. ಐತಾಳ್

**

ಕತೆಗಾರ್ತಿ ಮಾಧವಿ ಭಂಡಾರಿ ಕೆರೆಕೋಣ ಅವರ ಹೊಸ ಕೃತಿ ‘ಗುಲಾಬಿ ಕಂಪಿನ ರಸ್ತೆ’.

ಈ ಕೃತಿಯ ಕುರಿತು ಖ್ಯಾತ ಸಾಹಿತಿ ಡಾ. ಪಾರ್ವತಿ ಜಿ. ಐತಾಳ್ ಅವರು ಬರೆದ ಬರಹ ಇಲ್ಲಿದೆ.

**

ಮಾಧವಿ ಭಂಡಾರಿ ಕೆರೆಕೋಣ ಅವರ ‘ಗುಲಾಬಿ ಕಂಪಿನ ರಸ್ತೆ’ ಎಂಬ ೧೨ ಸಣ್ಣ ಕಥೆಗಳ ಸಂಕಲನದ ವೈಶಿಷ್ಟ್ಯ ಅವುಗಳಲ್ಲಿ ಅಭಿವ್ಯಕ್ತವಾಗಿರುವ ಮಹಿಳಾ ಸಂವೇದನೆ. ‘ಚಂದೂವಿನ ಕನಸು’ ಮತ್ತು ‘ಮೊಹಬ್ಬತ್ ಕೀ ಘರ್’ ಎಂಬ ಎರಡು ಕಥೆಗಳನ್ನು ಬಿಟ್ಟರೆ ಉಳಿದ ಎಲ್ಲಾ ಕಥೆಗಳು ಇನ್ನೂ ಪುರುಷ ಪ್ರಧಾನವಾಗಿ ಉಳಿದಿರುವ ನಮ್ಮ ಸಮಾಜದಲ್ಲಿ ಮಹಿಳೆಯು ಅನುಭವಿಸುವ ಬವಣೆಗಳನ್ನೇ ತಮ್ಮ ವಸ್ತುವಾಗಿಸಿಕೊಂಡಿವೆ.

ಕೋಮು ದ್ವೇಷ ಮತ್ತು ಕೋಮು ಸಂಘರ್ಷಗಳು ಉಂಟು ಮಾಡುವ ಅನಾಹುತಗಳು ಮತ್ತು ಮುಖ್ಯವಾಗಿ ಅವು ಹೆಣ್ಣು ಮಕ್ಕಳ ಬದುಕನ್ನು ಛಿದ್ರಗೊಳಿಸುವ ದುರಂತವು ಮೊದಲ ಕಥೆ ‘ಗುಲಾಬಿ ಕೆಂಪಿನ ರಸ್ತೆ’ಯಲ್ಲಿದೆ. ಇದೇ ವಸ್ತುವಿನ ಮೇಲೆ ತುಸು ಭಿನ್ನ ಸನ್ನಿವೇಶಗಳಿರುವ, ನಾನು ಕೆಲವು ವರ್ಷಗಳ ಹಿಂದೆ ತುಷಾರ ಮಾಸಪತ್ರಿಕೆಯಲ್ಲೂ, ‘ಸುಟ್ಟ ಗಾಯದ ಕಲೆಗಳು’ ಎಂಬ ನನ್ನ ಕಥಾ ಸಂಕಲನದಲ್ಲೂ ಪ್ರಕಟಿಸಿದ ‘ಬಲಿಪಶುಗಳು’ ಎಂಬ ಕಥೆಯನ್ನು ಇದು ನೆನಪಿಸುತ್ತದೆ.

ಹಾಲಕ್ಕಿ ಬುಡಕಟ್ಟು ಜನಾಂಗದ ಅಸಹಾಯಕ ಹೆಣ್ಣುಮಕ್ಕಳನ್ನು ತಮ್ಮ ಲೈಂಗಿಕ ತೆವಲಿಗಾಗಿ ಕುತಂತ್ರದಿಂದ ಬಳಸಿಕೊಳ್ಳುವ ಮೇಲ್ಜಾತಿಯ ಪುರುಷರು ಮತ್ತು ಅದರಿಂದಾಗಿ ಕಷ್ಟಕ್ಕೀಡಾಗುವ ಆ ಪುರುಷರ ಮನೆಯ ಹೆಂಗಸರ ಚಿತ್ರಣ (ನಾಗಿ), ಮೊದಲ ನೋಟಕ್ಕೇ ಮದನನ ಬಾಣಕ್ಕೆ ಗುರಿಯಾಗಿ ಆಕರ್ಷಣೆಯೂ ಉಂಟಾಗಿ ಗಂಡು-ಹೆಣ್ಣು ಪರಸ್ಪರ ಅನುರಕ್ತರಾದರೂ ಮಹಾಭಾರತದ ಪಾರ್ಥ-ಚಿತ್ರಾಂಗದರ ಕಥೆಯಲ್ಲಿ ಆದಂತೆ ಹೆಣ್ಣನ್ನು ತೊರೆದು ತನ್ನ ಗುರಿ ಸಾಧನೆಯೇ ಮುಖ್ಯವೆಂದು ಮುಂದೆ ಸಾಗುವ ಕಟು ಮನಸ್ಸಿನ ಗಂಡಿನ ಕಥೆ (ನೋಟವೊಂದೇ ಸಾಕು), ಗಂಡನ ಮನೆಯವರು ಕೊಡುವ ದೈಹಿಕ ಹಾಗೂ ಮಾನಸಿಕ ಹಿಂಸೆಯಿಂದಾಗಿ ಹೆಣ್ಣಿನ ಪಾಲಿಗೆ ವಿವಾಹವು ಒಂದು ವಿಷಚಕ್ರವಾಗಿ ಪರಿಣಮಿಸಿ ಅವಳ ಬದುಕನ್ನು ನರಕವಾಗಿಸುವ ದುರಂತ (ತೊಡೆದೇವು), ಚೆಲುವೆಯಾಗಿದ್ದು ಸಕಲ ಚಟುವಟಿಕೆಗಳ ಬುಗ್ಗೆಯಾಗಿದ್ದು, ಊರವರೆಲ್ಲರ ಕಣ್ಮಣಿಯಾಗಿರುವ ಸರೋಜತ್ತೆ ಸದಾ ನಿರ್ಲಕ್ಷ್ಯಕ್ಕೆ ಗುರಿಯಾಗಿದರೂ ಎದೆಗುಂದದೆ ನಗುನಗುತ್ತಾ ಬಾಳುವ ಮತ್ತು ಸಮಾಜದ ನಂಬಿಕೆಗಳಿಗೆ ವಿರುದ್ಧವಾದ ಪ್ರಗತಿಪರ ನಿಲುವುಗಳನ್ನೇ ಅಪ್ಪಿಕೊಂಡು ಬದುಕು ಸಾಗಿಸುವ ಕಥೆ (ಮನೆ ಅವ್ರ ಸಾಟಿ).

ತಮ್ಮ ಅಧಿಕಾರ ಮತ್ತು ಕೀರ್ತಿಯ ದಾಹಗಳಿಗೆ ಹೆತ್ತ ಮಗಳ (ಮಾಧವಿ) ಮಾನವನ್ನು ಮೂರು ಕಾಸಿಗೆ ಮಾರುವ ಅಪ್ಪ ಯಯಾತಿ ಮತ್ತು ತಮ್ಮ ಕಾಮ ತೃಷೆಯನ್ನು ಹಿಂಗಿಸಿಕೊಳ್ಳಲು ಅವಳ ಆಸೆ ಆಕಾಂಕ್ಷೆಗಳನ್ನು ಲೆಕ್ಕಿಸದೆ ಅವಳನ್ನು ಬಲಸಿಕೊಳ್ಳುವ ಅಮಾನವೀಯ ಪುರುಷವರ್ಗ ಮತ್ತು ಕೊನೆಯಲ್ಲಿ ಈ ಎಲ್ಲಾ ಕ್ರೌರ್ಯದ ವಿರುದ್ಧ ಬಂಡಾಯವೇಳುವ ಹೆಣ್ಣು (ತವರ ಕನ್ನಡಿಯ ಚೂರು– (ಮಹಾಭಾರತದಲ್ಲಿ ಬರುವ ಮಾಧವಿಯ ಕಥೆ), ಹೆಣ್ಣಿನ ಒಡಲಿಗೆ ಬೆಂಕಿ ಹಚ್ಚಿದ ಪುರುಷ ವರ್ಗವು ಅದರಿಂದಾಗಿ ಅವಳ ಒಳಗೆ ಭುಗಿಲೆದ್ದ ಸೇಡಿನ ಕಿಡಿಯನ್ನು ತಣಿಸುವ ಬಗ್ಗೆ ತೋರಿಸುವ ನಿರ್ಲಕ್ಷ್ಯದ ಕಥೆ (ಲೋಕಾಂತದಲ್ಲೊಂದು ಏಕಾಂತ- ದ್ರೌಪದಿಯ ಕಥೆ) ಈ ಎಲ್ಲ ಕಥೆಗಳೂ ಸಮಾಜವನ್ನು ಇನ್ನೂ ಕಾಡುತ್ತಿರುವ ಮಹಿಳೆಯ ದುಸ್ಥಿತಿಯ ಕಥೆಯನ್ನು ಸಮರ್ಥವಾಗಿ ಕಟ್ಟಿ ಕೊಡುತ್ತವೆ.

ಎಳೆಯ ಮಕ್ಕಳ ಭವಿಷ್ಯಕ್ಕೆ ಕಂಟಕವಾಗುವ ಮೊಬೈಲ್ ದುರ್ಬಳಕೆಯ ಕಥೆ  ‘ಚಂದೂವಿನ ಕನಸು’. ‘ಮೊಹಬ್ಬತ್ ಕೀ ಘರ್’ ಕೋಮು ಸಾಮರಸ್ಯವು ಸಾಮಾಜಿಕ ಬದುಕನ್ನು ಎಷ್ಟು ಸುಂದರವಾಗಿಸಬಹುದು ಎಂಬುದನ್ನು ಹೃದಯಂಗಮವಾಗಿ ಚಿತ್ರಿಸುತ್ತದೆ. ಇಲ್ಲಿ ನಿರೂಪಕಿಯನ್ನು(ಹಿಂದೂ ಹೆಣ್ಣುಮಗಳು) ಮಗಳಂತೆ ಕಾಣುವ ಮುಸಲ್ಮಾನ ದಂಪತಿಗಳ ಚಿತ್ರಣ ಅತ್ಯಂತ ಹೃದಯಸ್ಪರ್ಶಿಯಾಗಿದೆ.  ಸಮಾಜದಲ್ಲಿ ಎಲ್ಲರೂ ತಮ್ಮ ಪೂರ್ವಗ್ರಹಗಳನ್ನು ತೊರೆದು ತಮ್ಮ ತಮ್ಮ ಧರ್ಮಗಳಲ್ಲಿ ಹೇಳಿದ್ದನ್ನು ಚಾಚೂ ತಪ್ಪದೆ ಅನುಸರಿಸುತ್ತಾ ಇತರ ಧರ್ಮಗಳ ಬಗ್ಗೆಯೂ ಗೌರವವನ್ನು ಇಟ್ಟುಕೊಳ್ಳುವ ಉದಾರ ಮನೋಭಾವವನ್ನು ತಮ್ಮದಾಗಿಸಿಕೊಂಡರೆ ದೇಶದಲ್ಲಿ ಕೋಮು ಗಲಭೆಗಳು ಉಂಟಾಗುವ ಪರಿಸ್ಥಿತಿ ಎಂದೂ ಬಾರದು ಎಂದು ಚಿಂತಿಸುವಂತೆ ಮಾಡುತ್ತದೆ ಈ ಕಥೆ.

ಮಾಧವಿಯವರು ಪ್ರಸ್ತುತ ಸಾಮಾಜಿಕ ಸಂದರ್ಭಗಳಿಗೆ ಸೂಕ್ತವಾದ ಕಥಾವಸ್ತುಗಳನ್ನೇ ಆಯ್ದುಕೊಂಡು ಉತ್ತಮ ಕಥನ ತಂತ್ರಗಳ ಮೂಲಕ ಕಥೆಗಳನ್ನು ಹೆಣೆದಿದ್ದಾರೆ. ಬಳಸಿದ ಭಾಷೆ ಮತ್ತು ನಿರೂಪಣಾ ಶೈಲಿಗಳು ಬಹಳ ಚೆನ್ನಾಗಿವೆ. ಅನೇಕ ಆಡುಭಾಷೆಗಳನ್ನು ಹಾಲಕ್ಕಿ ಜನಾಂಗದ ಭಾಷೆ, ಹವ್ಯಕರ ಆಡುಭಾಷೆ, ಮುಸಲ್ಮಾನರು ಮಾತನಾಡುವ ಕನ್ನಡ ಭಾಷೆ ಬಳಸಿ ಪಾತ್ರಗಳ ನಡುವಣ ಸಂಭಾಷಣೆಯ ಸಹಜತೆಯನ್ನು ಹೆಚ್ಚಿಸಿದ್ದಾರೆ. ಈ ರೀತಿ ಹಲವು ಆಡು ಭಾಷೆಗಳಲ್ಲಿ ಒಬ್ಬರೇ ಪರಿಣತಿ ಸಾಧಿಸುವ ಪರಿಶ್ರಮದ ಕೆಲಸವನ್ನು ಅತ್ಯದ್ಭುತ ರೀತಿಯಲ್ಲಿ ಪರಿಣಾಮಕಾರಿಯಾಗಿ ಮಾಡಿದ್ದು ಮೆಚ್ಚತಕ್ಕ ಸಂಗತಿ. ‘ತವರ ಕನ್ನಡಿ ಚೂರು’ ಮತ್ತು ‘ಲೋಕಾಂತದಲ್ಲೊಂದು ಏಕಾಂತ ‘ ಕಥೆಗಳಲ್ಲಿ ನಿರೂಪಣೆಯ ಗದ್ಯವೆನ್ನುವುದು ಸುಂದರವಾದ ಕಾವ್ಯವಾಗಿ ಹರಿದಿದೆ ಎನ್ನುವುದು ಗಮನಾರ್ಹ.

‍ಲೇಖಕರು Admin MM

April 26, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: