ಅಲ್ಲಿತ್ತು ‘ ಉಪ್ಪುಚ್ಚಿ ಮುಳ್ಳು ‘

ಬೆಸಗರಹಳ್ಳಿ ರಾಮಣ್ಣ ಮುಟ್ಟಿ ಸವರಿ ಕಳಿಸಿಕೊಟ್ಟ “ಉಪ್ಪುಚ್ಚಿಮುಳ್ಳು”

ಚಲಂ ಹಾಡ್ಲಹಳ್ಳಿ

ಈ ಬರಹವನ್ನು ‘ ಜೇನುಗಿರಿ ‘ ಪತ್ರಿಕೆಯಿಂದ ಆರಿಸಿಕೊಳ್ಳಲಾಗಿದೆ

ಯಾವ ಸಾಹಿತ್ಯದ ಕಾರ್ಯಕ್ರಮಕ್ಕೆ ರೈತ ಹೋರಾಟಗಾರರು, ದಲಿತಪರ ಹೋರಾಟಗಾರರು ಬರುತ್ತಾರೋ ಅಂತಹಾ ಕಾರ್ಯಕ್ರಮಗಳು ಅಂತಃಕರಣವುಳ್ಳವಾಗಿರುತ್ತವೆ ಅಂದರು ರವಿಕಾಂತೇಗೌಡರು.

ರವಿಕಾಂತೇಗೌಡರು ಡಾ. ಬೆಸಗರಹಳ್ಳಿ ರಾಮಣ್ಣ ಅವರ ಮಗ. ಹಿರಿಯ ಪೋಲಿಸ್ ಅಧಿಕಾರಿ ಮತ್ತು ಚೆಲುವ ಎನಿಸುವಂತಹಾ ನಿಲುವಿನವರು. ಅಪ್ಪನ ನೆರಳು ಅಂತಿರೋ, ಅಭಿರುಚಿ ರೂಡಿಸಿಕೊಂಡಿದ್ದು ಅಂತಿರೋ ಗೊತ್ತಿಲ್ಲ… ಒಳ್ಳೆಯ ಸಾಹಿತಿ ಕೂಡ.

ಮೊನ್ನೆ ಭಾನುವಾರ ಮಂಡ್ಯದಲ್ಲಿ ಏರ್ಪಡಿಸಿದ್ದ ಡಾ ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದ ಕಾರ್ಯಕ್ರಮದಲ್ಲಿ ಸಿಕ್ಕಿದ್ದರು. ಅಷ್ಟಾಗಿ ಮೇಲೆ ಬಿದ್ದು ಮಾತನಾಡಿಸಲು ಹಿಂಜರಿಯುವ ನಾನು ಅವರ ಸುತ್ತಮುತ್ತಲೇ ಸುತ್ತುತ್ತಿದ್ದೆ.
ತುಂಬಾ ಜನ ಅವರ ಹತ್ತಿರ ಬಂದು ಸೆಲ್ಫಿ ತೆಗಸಿಕೊಳ್ಳುತ್ತಿದ್ದರು. ಬೆಸಗರಹಳ್ಳಿ ರಾಮಣ್ಣನ ಮಗ ಅಂದರೆ ಸ್ಟಾರ್ ಅಲ್ಲವೇ ಅಂದುಕೊಂಡೆ‌. ಅವರ ಜೊತೆ ನಿಂತು ಅಭಿಮಾನದಿಂದ ಸೆಲ್ಫಿ, ಫೋಟೋ ತೆಗೆಸಿಕೊಳ್ಳುವವರನ್ನು ನೋಡಿದರೆ ಖಂಡಿತವಾಗಿ ರಾಮಣ್ಣನ ಸೆಳೆತ ಎಂತಹುದಿರಬಹುದೆಂಬ ಅಂದಾಜು ಮಾಡಬಹುದಿತ್ತು.

ಬೆಸಗರಹಳ್ಳಿ ರಾಮಣ್ಣ ನಾಡಿನ ಜನರಿಗಿಂತ ಮಂಡ್ಯದ ಜನರ ಒಳಗಿನ ಭಾವಕೋಶದೊಳಗೆ ಸೇರಿಹೋಗಿದ್ದಾರೆ ಎನಿಸಲಿಕ್ಕೆ ಮೊನ್ನೆ ನಡೆದ ಕಾರ್ಯಕ್ರಮ ಸಾಕ್ಷಿ.

ಬೆಸಗರಹಳ್ಳಿ ರಾಮಣ್ಣನವರ ಹೆಸರಿನಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ವರ್ಷಕ್ಕೊಬ್ಬರಿಗೆ ಎಂಬಂತೆ ಗುರುತಿಸಿ ಕಥೆಗಾರರಿಗೆ ಪ್ರಶಸ್ತಿ ಕೊಟ್ಟು ಸಂಭ್ರಮಿಸುತ್ತಾರೆ.
ಹೆಚ್ ಆರ್ ಸುಜಾತ ಎಂಬ ನೆಲಮೂಲ ದನಿಯ ಸಾಹಿತಿ ಈ ಪ್ರತಿಷ್ಠಾನದ ಅಧ್ಯಕ್ಷರು. ಸುಜಾತ ಅವರ ಕಾದಂಬರಿಗಳು ಗ್ರಾಮೀಣ ಸೊಗಡಿನ ಚೆಲುವುಳ್ಳ ಗಂಭೀರ ಕೃತಿಗಳು.

ಇವರಿಬ್ಬರೇ ಅಲ್ಲ… ಹಲವು ಜನ ಸಮಾನ ಮನಸ್ಕರು, ಬೆಸಗರಹಳ್ಳಿ ರಾಮಣ್ಣ ಅವರ ಅಭಿಮಾನಿಗಳು ಸೇರಿ ಪ್ರತಿಷ್ಠಾನದ ಕೆಲಸಗಳನ್ನು ಮಾಡಿಕೊಂಡು ರಾಮಣ್ಣನವರ ಆಶಯಗಳನ್ನು ತಲೆಮಾರುಗಳಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ.

ರಾಮಣ್ಣನವರ ಮಗಳು ಪೂರ್ಣಿಮಾ ಹಾಸನದ ಜಿಲ್ಲಾ ಪಂಚಾಯಿತಿಯಲ್ಲಿ ಸಿ ಎಸ್. ಶಕ್ತ ಹಾಗು ಕೌಶಲ್ಯವುಳ್ಳ ಅಧಿಕಾರಿ ಎಂದೇ ಹೆಸರಾದವರು.

ಇಬ್ಬರು ಮಕ್ಕಳು ಉನ್ನತ ಹುದ್ದೆಯಲ್ಲಿದ್ದರೂ ಜನರ ಜೊತೆ ಬೆರೆಯುವ ವಿಚಾರದಲ್ಲಿ ಬೆಸಗರಹಳ್ಳಿ ಗುಣ ವಿಶೇಷಣವಾಗಿ ಆನುವಂಶಿಕವಾಗಿದೆ.

ಹಿ ಶಿ ರಾಮಚಂದ್ರೇಗೌಡರು ಬೆಸಗರಹಳ್ಳಿ ರಾಮಣ್ಣ ವೃತ್ತಿಯಲ್ಲಿ ವೈದ್ಯರಷ್ಟೇ ಅಲ್ಲ, ಸಮಾಜದ ವೈದ್ಯ ಕೂಡ ಅಂದರು. ವೈದ್ಯವೃತ್ತಿ ಸಂಪೂರ್ಣವಾಗಿ ಹಣಕಾಸಿನ ಶೇರು ಬಜಾರಿನಂತಾಗಿ ಹೋಗಿರುವಾಗ ಅವರು ಬಡ ಗ್ರಾಮೀಣ ಭಾರತದ ಸಾಮಾನ್ಯ ಪ್ರಜೆಗಳ ನಡುವೆ ಹೇಗೆ ಔಷಧಿಗಳ ಜೊತೆಗೆ ಆ ಸಮಾಜವನ್ನು ಹೀಗೆ ನೋಡಿ ಎಂಬ ಸಂದೇಶವನ್ನು ವ್ಯವಸ್ಥೆಗೆ ನೀಡಿದ್ದರು. ಚೆನ್ನಾಗಿ ಬರೆದಿದ್ದೆ ಎಂಬ ಕಾರಣಕ್ಕೆ ಮನೆಗೆ ಕರೆದು ಗಡದ್ದು ಊಟ ಹಾಕಿ ಮುದ್ದು ಮಾಡಿದ್ದನ್ನು ಸ್ಮರಿಸಿಕೊಂಡರು. ಹಿ ಶಿ ರಾ ಅವರ ಮಾತುಗಳು ಒಂಥರಾ ತಾಯಿಯ ಸೊಲ್ಲಿನಂತವು. ಅಂತಹಾ ತಾಯಿಸೊಲ್ಲಿನ ಹಿ ಶಿ ರಾ “ಹೊಂಬಾಳೆ”ಯ ಮೂಲಕ ರೈತ ಚಳವಳಿಗೆ ದೊಡ್ಡ ಶಕ್ತಿ ತುಂಬಿದವರು.

ಅಂತಹಾ ಹಿ ಶಿ ರಾ ಅವರು ಬೆಸಗರಹಳ್ಳಿಯವರನ್ನು ” ಅಮ್ಮ” ಎಂದರು. ಅಮ್ಮನಿಗೆ ಮಾತ್ರ ಇರುವ ಕಕ್ಕುಲಾತಿ ರಾಮಣ್ಣನವರಿಗೆ ಇತ್ತು. ಅದನ್ನು ಅವರ ಸಾಮೀಪ್ಯಕ್ಕೆ ಬಂದ ಎಲ್ಲರೂ ಅನುಭವಿಸಿದ್ದಾರೆ ಎಂದರು.

ಈ ನಡುವೆ ಬೆಸಗರಹಳ್ಳಿ ಪ್ರತಿಷ್ಠಾನ ರಾಮಣ್ಣನವರ ಗೆಳೆಯ ಡಾ ಕಮಲಾಕ್ಷ ಅವರ ಮಾತುಗಳನ್ನು ಪುಸ್ತಕ ಮಾಡಿ ಬಿಡುಗಡೆ ಮಾಡಿತು. ಬಯಲುಸೀಮೆ ಕಟ್ಟೆಪುರಾಣದ ಬಿ ಚಂದ್ರೆಗೌಡರು ಕಮಲಾಕ್ಷ ಅವರ ಮಾತುಗಳನ್ನು ಅಕ್ಷರ ಮಾಡಿದ್ದಾರೆ. ಪುಸ್ತಕದ ಹೆಸರು “ಹಿಂಗಿದ್ದ ನಮ್ಮ ರಾಮಣ್ಣ”.
ಕಮಲಾಕ್ಷಯ್ಯನವರು ಮಾಜಿ ಮಂತ್ರಿ ಕೃಷ್ಣಪ್ಲನವರ ಸಹೋದರ.

ಬೆಸಗರಹಳ್ಳಿ ರಾಮಣ್ಣ ಮೊದಲ ವೈದ್ಯವೃತ್ತಿ ಆರಂಭಿಸಿದ್ದು ಇದೇ ಕಮಲಾಕ್ಷಯ್ಯನವರ ಊರಾದ ಹರದನಹಳ್ಳಿಯಲ್ಲಿ. ಏನೇನೂ ಸೌಲಭ್ಯವಿಲ್ಲದ ಕುಗ್ರಾಮ ಹರದನಹಳ್ಳಿಯಲ್ಲಿ ಮೈಸೂರಿನಲ್ಲಿ ಓದಿಕೊಂಡ ಈ ಡಾಕ್ಟರ್ ಕೆಲಸ ಮಾಡೋದು ಕಷ್ಟ ಅಂತ ಇವರು ಯೋಚಿಸುವಾಗ ರಾಮಣ್ಣ ತಮ್ಮ ಕುಟುಂಬವನ್ನು ಆ ಊರಿಗೆ ಸಮೀಪ ಇರುವ ನಾಗಮಂಗಲಕ್ಕೆ ಶಿಫ್ಟ್ ಮಾಡಿ ಗ್ರಾಮೀಣ ಭಾರತಕ್ಕೆ ಮುಖಾಮುಖಿಯಾಗಲು ಸಿದ್ದರಾಗುತ್ತಿದ್ದರು. ಅವುಗಳನ್ನೆಲ್ಲಾ ಚಂದ್ರೆಗೌಡರು ಸೊಗಸಾಗಿ ನಿರೂಪಿಸಿದ್ದಾರೆ.

ಇಡೀ ಕಾರ್ಯಕ್ರಮದ ಪ್ರಮುಖ ಉದ್ದೇಶ ಹೇಳಿಲ್ಲ ನೋಡಿ. ಆ ಪ್ರಮುಖ ಉದ್ದೇಶ ಈ ವರ್ಷದ ಅಂದರೆ ನಾವು ಈಗ ಲೆಕ್ಕ ಹಾಕಬೇಕಿರುವ 2022 ರ ಬೆಸಗರಹಳ್ಳಿ ಪ್ರತಿಷ್ಠಾನದ ಕಥಾಸಂಕಲನದ ಪ್ರಶಸ್ತಿ.

ಇಡೀ ನಾಡಿನಲ್ಲಿ ಕೊಡಮಾಡುವ ಪ್ರಮುಖ ಪ್ರಶಸ್ತಿಗಳಲ್ಲಿ ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ ಕೊಡಮಾಡುವ ಈ ಕಥಾಪ್ರಶಸ್ತಿ ಕೂಡ ಒಂದು.

ಈ ಬಾರಿ ಡಾ. ಸುಭಾಷ್ ರಾಜಮಾನೆ ಹಾಗು ಅನುಪಮಾ ಪ್ರಸಾದ್ ಎಂಬ ಮೌಲ್ಯವುಳ್ಳ ಆಯ್ಕೆದಾರರು ದಯಾ ಗಂಗನಘಟ್ಟ ಎಂಬ ಮತ್ತೊಂದು ಗ್ರಾಮೀಣ ಮೂಲದ ದನಿಯ ಪುಸ್ತಕವನ್ನು ಗುರುತಿಸಿದ್ದರು.

ಆ ಪುಸ್ತಕದ ಹೆಸರು ” ಉಪ್ಪುಚ್ಚಿಮುಳ್ಳು”.

ಕಥೆಗಾರರಿಗಿಂತ ಹೆಚ್ಚಾಗಿ ಕಥೆಗಳ ಬಗ್ಗೆ ಮಾತಾಗಬೇಕು ಅಂದವರು ಡಾ ಸುಭಾಷ್ ರಾಜಮಾನೆ. ವ್ಯಕ್ತಿ ವಿಜ್ರಂಬಣೆಯ ಪಲ್ಲಕ್ಕಿ ಸಾಗುವ ಈ ದಿನಗಳಲ್ಲಿ ರಾಜಮಾನೆಯವರ ಮಾತುಗಳು ಬಹು ಮುಖ್ಯವಾಗಿ ಕಂಡವು.

ಬೆಸಗರಹಳ್ಳಿ ರಾಮಣ್ಣನವರ ಮೂಲಸೆಲೆ ಉಪ್ಪುಚ್ಚಿಮುಳ್ಳು ಕಥೆಗಳಲ್ಲಿ ಕಂಡವು ಎಂದರಲ್ಲದೇ ಅವನ್ನು ಸಮೀಕರಿಸಿ ಮಾತನಾಡಿದರು‌. ಸಮೀಕರಣ ತಪ್ಪಾಗಿರಲಿಲ್ಲ, ಬದಲಿಗೆ ಬೆಸಗರಹಳ್ಳಿ ಪ್ರತಿಷ್ಠಾನ ತನ್ನ ಕಥಾ ಸೆಲೆ ಹಾಗು ಗ್ರಾಮೀಣ ಸೆಲೆಯನ್ನು ಹೇಗೆ ಉಳಿಸಿಕೊಂಡಿದೆ ಎಂಬುದನ್ನು ಸರಿಯಾದ ದಿಕ್ಕಿನಲ್ಲಿ ವಿವರಿಸಿದರು‌.

ದಯಾ ಗಂಗನಘಟ್ಟ ಎಂಬ ಹೆಸರಿನ ದಾಕ್ಷಾಯಿಣಿಯವರದ್ದು ಇದು ಮೊದಲ ಪುಸ್ತಕ ಮತ್ತು ಆ ಮೊದಲ ಪುಸ್ತಕಕ್ಕೆ ಸಂದ ಮೊದಲ ಪ್ರಶಸ್ತಿ ಏಕ್ ದಂ ಬೆಸಗರಹಳ್ಳಿ ರಾಮಣ್ಣ ಎಂಬ ಕಥಾಲೋಕದ ಸೋಜಿಗದ್ದು.

ದಯಾ ತಡವಾಗಿ ಬರೆದರು, ಎಡವಾಗಿ ಬರೆದರು ಅಂತೆಲ್ಲಾ ಚರ್ಚೆ ನಡೆಯುತ್ತಲೇ ಇತ್ತು. ತಡವಾಗಿ ಮತ್ತು ಎಡವಾಗಿ ಬರೆದದ್ದು ಹೌದಾದರೂ ಕಥೆಗಳನ್ನು ಕಟ್ಟುವ ಹೊಸ ಕ್ರಮವನ್ನು ಪರಿಚಯಿಸಿದರು. ರೂಪಕಗಳ ಅಬ್ಬರವಿಲ್ಲದ, ಡಾಳಾದ ವಿವರಣೆಗಳ ಭಾರವಿಲ್ಲದ ಗ್ರಾಮ ಲೋಕದ ನಿಜ ದರ್ಶನ ಮಾಡಿಸುತ್ತಾ ಬೆರಗು ಮೂಡಿಸಿದರು.

ಇಂತಹಾ ಒಂದು ಪುಸ್ತಕ ಪ್ರಕಟ ಮಾಡಿದ್ದಕ್ಕೆ ನಮ್ಮ ಹಾಡ್ಲಹಳ್ಳಿ ಪಬ್ಲಿಕೇಷನ್ ಹೆಮ್ಮೆ ಪಟ್ಟುಕೊಂಡಿದೆ. ತನ್ನ ಶ್ರಮಕ್ಕೆ ಗರಿಯೊಂದನ್ನು ಸಿಕ್ಕಿಸಿಕೊಂಡು ಸಂಭ್ರಮಿಸಿದೆ.

ಮೊದಲ ಬಾರಿಗೆ ಪ್ರಕಾಶಕ ಎಂಬ ಕಾರಣಕ್ಕೆ ಸ್ಟೇಜಿನ ಮೇಲೆ ಹೋಗಿ ಕುವೆಂಪು ಅವರ ಚಂದದ ಚಿತ್ರಗಳಿರುವ ಕೃಪಾಕರ ಸೇನಾನಿ ಅವರ ಪುಸ್ತಕ ತೆಗೆದುಕೊಳ್ಳುವಾಗ ಮತ್ತಷ್ಟು ಸಂಭ್ರಮಿಸಿದೆ.

ಈ ಜಗತ್ತಿನ ದೊಡ್ಡ ಸಾಮಾಜಿಕ ವೈದ್ಯ ಡಾ ಬಿ ಆರ್ ಅಂಬೇಡ್ಕರ್ ಹೆಸರಿನ ಆಡಿಟೋರಿಯಂನಲ್ಲಿ ಕಾರ್ಯಕ್ರಮ ನಡೆಯಿತು. ಹಾಸನದ ಕಲಾಭವನ ಎಂಬ ಸದಾ ರೋಗಿಷ್ಟ ಆಡಿಟೋರಿಯಂ ನೋಡಿ ಸಾಕಾಗಿದ್ದ ನನಗೆ ಇಂತಹಾ ಒಂದು ಸಭಾಂಗಣ ರೂಪಿಸುವಲ್ಲಿ ಹಾಸನ ಯಾಕೆ ಸೋತಿದೆ ಅಂತ ಯೋಚಿಸುತ್ತಲೇ ಬಾಲ್ಕನಿ ಮೇಲೆಲ್ಲಾ ಹತ್ತಿ ಸಂಭ್ರಮದಿಂದ ಫೋಟೋ ತೆಗೆದುಕೊಂಡೆ.

ಮಂಡ್ಯದ ಜನಕ್ಕೆ ತಮ್ಮೂರನ್ನು ಭಾವನಾತ್ಮಕವಾಗಿ ಮಾತ್ರವಲ್ಲ ವಾಸ್ತವವಾದಿ ನೆಲೆಯಲ್ಲಿಯೂ ಕಟ್ಟಿಕೊಳ್ಳುವುದು ಗೊತ್ತಿದೆ ಎಂಬುದು ಅರಿವಾಯಿತು.

ಬೆಳಗ್ಗೆ ಹತ್ತು ಗಂಟೆಗೆ ಆರಂಭವಾದ ಕುಮಾರಿ ಸಾದ್ವಿನಿ‌ ಕೊಪ್ಪ ಅವರ ತಂಡದ ಭಾವಗೀತೆಗಳು ಮನಸೂರೆಗೊಂಡವು. ಒಂದೂವರೆ ಗಂಟೆಗಳ ಈ ಗಾಯನ ಮುಗಿಯುವುದರ ಒಳಗೆ ಅಷ್ಟು ದೊಡ್ಡ ಸಭಾಂಗಣ ತುಂಬಿಹೋಗಿತ್ತು.
ಎಲ್ಲಕ್ಕಿಂತ ಸೋಜಿಗ ಅನ್ನಿ, ಸೊಗಸು ಅನ್ನಿ, ಸಂಭ್ರಮ ಅನ್ನಿ… ಏನೇ ಅಂದರೂ ಅದು ಕಡಿಮೆ ಅಲ್ಲದ್ದು ಅಲ್ಲಿ ನೆಲೆಗೊಂಡಿತ್ತು. ಅದು ನಮ್ಮ ನಾಡಿನ ದೊಡ್ಡ ದೊಡ್ಡ ಸೊಗಸಾದ ಸಾಹಿತಿಗಳು ಒಂದೆಡೆ ಕುಳಿತಿದ್ದರು. ಡಾ ಸಿ ವೀರಣ್ಣ, ಪ್ರೊ.‌ಎಸ್ ಜಿ ಸಿದ್ದರಾಮಯ್ಯ, ಹೆಚ್ ಎಸ್ ಶಿವಪ್ರಕಾಶ್, ಕುಂ ವೀರಭದ್ರಪ್ಪ, ಹಿ ಶಿ ರಾಮಚಂದ್ರೆಗೌಡ, ನಲ್ಲೂರ್ ಪ್ರಸಾದ್, ಜಗದೀಶ್ ಕೊಪ್ಪ, ಎಸ್ ಗಂಗಾದರಯ್ಯ, ಕೃಪಾಕರ ಸೇನಾನಿ, ಜಿ ಎನ್ ಮೋಹನ್, ಎಚ್ ಎನ್ ಆರತಿ, ಜಿ ಎನ್ ನಾಗರಾಜ್ ಇನ್ನೂ‌ ಮುಂತಾದವರು ಮುಂದಿನ ಸಾಲಿನಲ್ಲೇ ಕುವೆಂಪು, ದ ರಾ ಬೇಂದ್ರೆ ಮುಂತಾದವರ ಹಾಡುಗಳನ್ನು ಕೇಳುತ್ತಾ ಕುಳಿತಿದ್ದು ಕಿನ್ನರ ಲೋಕದಂತಿತ್ತು.

ಕಾರ್ಯಕ್ರಮ ಮುಗಿದ‌‌ ಮೇಲೆ ಆಚೆ ಬಂದು ನೋಡಿದರೆ ಅದ್ಬುತ ಗ್ರಹಿಕೆಯ ಬರಹಗಾರ ಗೆಳೆಯ ಹರೀಶ್ ಗಂಗಾಧರ್, ಚನ್ನಪಟ್ಟಣದ ದೇವರಾಜ್ ದಂಪತಿಗಳ ಜೊತೆ ನೇಸರ, ಚಿಕಿತ್ಸಕ ಅಲೋಚನೆಯ ಲವಕುಮಾರ್, ಟೈಟಾನಿಕ್ ವಿನಯ್, ಮಂಡ್ಯದ ಗಂಡು ರಾಜೇಂದ್ರ ಇನ್ನೂ ಬಹುತೇಕ ಈ ಕಾಲದ ತಲೆಮಾರು ಎದುರಾಯಿತು.

ಬೆಸಗರಹಳ್ಳಿ ರಾಮಣ್ಣ ಎಂಬ ಹೆಸರು ಮತ್ತು ಕಟ್ಟಿಕೊಟ್ಟ ಬದುಕಿನ ಸಂಬಂಧದ ನವಿರು ಅಲ್ಲೆಲ್ಲಾ ಸುಳಿದಾಡಿ ಎದೆಗೆ ತಂಪನೀಯಿತು.

ಪುಸ್ತಕ ಮಾರುತ್ತಿದ್ದ ಗೆಳೆಯ ಬಾಬು “ನಿಮ್ ಗ್ರಹಚಾರ ಸರಿಯಿಲ್ಲ…” ಅಂದ್ರು. ಯಾಕೆ ಅಂದಿದ್ದಕ್ಕೆ “ಈ ವರ್ಷ ನೀವು ಬೆಸಗರಹಳ್ಳಿ ಕಾರ್ಯಕ್ರಮಕ್ಕೆ ಬಂದು ಪುಳ್ಚಾರ್ ತಿಂದ್ಕೊಂಡು ಹೋಗ್ತಿದೀರಿ” ಎಂದು ಮರುಕದಿಂದ ನನ್ನನ್ನು ನೋಡಿದರು.

ಬಯಲುಸೀಮೆ ಕಟ್ಟೆ ಪುರಾಣ ಚಂದ್ರೆಗೌಡರು ಸಂಜೆ ಮೇಲಾಗಿದ್ದರೆ ಕಾರ್ಯಕ್ರಮ ಮುಗಿದ ನಂತರವೂ ಸಮೃದ್ಧ ಚರ್ಚೆ ನಡೆಸಬಹುದಿತ್ತು ಅಂದ ಮಾತು ನೆನಪಾದವು.

‍ಲೇಖಕರು avadhi

June 27, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: