ಪಿ ಚಂದ್ರಿಕಾ ಕಾದಂಬರಿ ‘ನಾನು ಚೈತನ್ಯ’-ಕರುಣೆಯ ಮಡಿಲಲ್ಲಿ

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.

‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.

ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.

ಪಿ ಚಂದ್ರಿಕಾ ಅವರ ‘ಮೂವರು ಮಹಮದರು’ ಕೃತಿ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿ ‘ಬಹುರೂಪಿ’ಯಿಂದ ಪ್ರಕಟವಾಗಿದೆ.

ಈ ಕೃತಿಯನ್ನು ಕೊಳ್ಳಲು –https://bit.ly/3JUdyum ಈ ಲಿಂಕ್ ಕ್ಲಿಕ್ ಮಾಡಿ

ಅಥವಾ 70191 82729ಗೆ ಸಂಪರ್ಕಿಸಿ

ಚಂದ್ರಿಕಾ ನಡೆಸುವ ಪ್ರಯೋಗ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.

21

ಚಿಕ್ಕೋಳಮ್ಮ ತನ್ನ ಬೆನ್ನ ಮೇಲೆ ನೀಲಿಗಟ್ಟಿದ ಬಾಸುಂಡೆಗೆ ಅತ್ತೆ, ʻಅಯ್ಯೋ ನಿನ್ನ ಕಥೆ ಮುಗಿಯೋದೇ ಇಲ್ಲವಲ್ಲʼ ಎಂದು ಎಣ್ಣೆ ಹಚ್ಚುತ್ತಿದ್ದರೆ, ಎಲಡಿಕೆ ತಿಂದ ಹಲ್ಲುಗಳನ್ನು ತೋರುತ್ತಾ ಚಿಕ್ಕೋಳಮ್ಮ ʻಹಾ… ಹಾ…ʼ ಎನ್ನುತ್ತಿದ್ದರೆ, ಆಶಾ ಬಗ್ಗಿ ನೋಡುತ್ತಿದ್ದಳು. ʻನಮ್ಮ ಹಣೇಬರಹ ನೋಡುʼ, ಎಂದು ಅವಳು ನೋವಿನಲ್ಲೂ ಆಶಾಗೆ ಒಪ್ಪಿಸುತ್ತಿದ್ದಳು. ʻಯಾಕೆ ಇದನ್ನೆಲ್ಲಾ ಸಹಿಸಿಕೊಳ್ಳುತ್ತೀರಾ? ನಿಮ್ಮ ಮಗನಿಗೆ ಹೇಳಬಾರದೇʼ, ಎನ್ನುತ್ತಿದ್ದಳು ಆಶಾ. ʻಏನ್ ಮಾಡ್ತಾಳೆ ಎಲ್ಲದಕ್ಕೂ ಆ ಕಾಟ್ರಿಯನ್ನೇ ಅವಲಂಬಿಸಬೇಕು. ಅವನೋ ಈಚೆಗೆ ಮಹಾನ್ ಕುಡುಕ ಆಗಿಬಿಟ್ಟಿದ್ದಾನೆ. ಅವರಪ್ಪ ಅಂತೂ ಇನ್ನೂ, ಮೊನ್ನೆ ಕುಡಿದು ಬಂದು ನಿಮ್ಮ ತಾತನಿಗೆ ನಾನೆ ನಿನ್ನ ಹೂಳಿ ಸಾಯುವುದು ಎಂದಿದ್ದ. ನಾನೇ ಕೋಲು ತೆಗೆದುಕೊಂಡು ಓಡಿಸಿದ್ದೆ. ಕುಡಿಯದೇ ಇದ್ದಾಗ ಇವರೆಲ್ಲಾ ದೇವರು, ಕುಡಿದರೆ ಮಾತ್ರ ದೆವ್ವಗಳು. ಆ ಬೆಟ್ಟಯ್ಯ ಎಷ್ಟು ಸಲ ದುಡ್ಡು ಕೊಡು ಎಂದು ಚಿಕ್ಕೋಳಿಯ ಮೈಮೇಲೆ ಬಾಸುಂಡೆ ಬರುವ ಹಾಗೆ ಹೊಡೆದಿದ್ದ. ಜೊತೆಗೆ ಆ ಕಾಟ್ರಿಯೂ ಸೇರಿಕೊಳ್ಳುತ್ತಾನೆ. ಕೆರೆಕೊಂಡ್ ತಿಂದ್ರೆ ಊಟ ಎನ್ನುವಂತಿರೋ ಇವರ ಬದುಕುಗಳು ಹೀಗೆ ಕಳೆದು ಹೋಗುತ್ತವೆ. ಪಾಪ ಈ ಹೆಂಗಸಾದ್ರೂ ದಿನಾ ಎಲ್ಲಿಂದ ತರ್ತಾಳೆ ಹೇಳು?ʼ ಎಂದರು. ಅತ್ತೆ ಆಶಾಗೆ ಹೇಳುತ್ತಿದ್ದನ್ನು ಗಮನ ಇಟ್ಟು ಕೇಳುತಿದ್ದರೂ ಮನಸ್ಸು ಮಾತ್ರ ಆ ಸ್ಥಿತಿಯಲ್ಲಿ ಊಹೆ ಮಾಡಿಕೊಳ್ಳುತ್ತಿತ್ತು. ತಮ್ಮ ಹೊಟ್ಟೆಯಲ್ಲಿ ಕುದಿವ ಲಾವಾರಸವನ್ನೇ ಇಟ್ಟುಕೊಂಡು ಬೆಂಕಿಯ ಮುಂದೆ ಕೂತಿದ್ದಾರೆ. ಅವರ ಚರ್ಮಕ್ಕೆ ಬೆಂಕಿ ತಗುಲಿ ಸುಡುತ್ತಿದೆ ಎಂದು ಅಳುವ ಜನರನ್ನು ನಾನಂತೂ ನೋಡಿಲ್ಲ. ಆ ಕಾಲದಿಂದಲೂ ಇವರು ಹೀಗೆ ಬದುಕಿಬಿಟ್ಟರಲ್ಲ ಎನ್ನಿಸಿತು.

ಸಹಾ ಇವತ್ತು ಹೋಗುವುದಿಲ್ಲ ಅರಾಮಾಗಿ ಇದ್ದು ಬಿಡು ಎಂದು ಡ್ರೈವರ್ ಬಳಿ ಹೇಳಿ ಕಳಿಸಿದ್ದರು. ಅವರ ಉದಾರತೆಗೆ ಕೃತಜ್ಞತೆ ಹೇಳಬೇಕು ಎಂದೆನ್ನಿಸಿ ತುಟಿಯಂಚಲ್ಲಿ ಕೊಂಕಿನ ನಗು ಮೂಡಿಬಿಟ್ಟಿತು. ಅತ್ತೆ, ಮಾವನಿಗೆ ಸಂಭ್ರಮ. ಆಶಾ ಕೂಡಾ, ʻನಿಜಾನಾಮ್ಮಾ…?ʼ ಎಂದು ಕೇಳಿದ್ದಳು. ಸಹಾ ನನ್ನ ಬಿಟ್ಟಿರುವುದಿಲ್ಲ ಎನ್ನುವುದು ಅವಳಿಗೂ ಗೊತ್ತಾಗಿತ್ತು. ಬೆಳೆಯುತ್ತಿರುವ ಹುಡುಗಿ ಅರ್ಥ ಮಾಡಿಕೊಳ್ಳುವ ವಯಸ್ಸೇ ಅಲ್ಲವೇ.                      

ಮೋಡಗಳು ಆಕಾಶದಲ್ಲಿ ಎಲ್ಲೆಲ್ಲಿಂದಲೋ ಬಂದು ಸೇರತೊಡಗಿದ್ದವು. ಗಾಳಿಯೂ ಅಷ್ಟೇ, ಹುಚ್ಚಾಪಟ್ಟೆ ಬೀಸ ತೊಡಗಿತ್ತು. ಪಟ್ಟೆಂದು ಕರೆಂಟ್ ಹೋಗಿಯೇ ಬಿಟ್ಟಿತು. ʻಎರಡು ಹನಿ ನೆಲಕ್ಕೆ ಇಳಿಯುತ್ತೆ ಎನ್ನುವಾಗ ಲೈನ್ ತೆಗೆದುಬಿಡುತ್ತಾರೆ. ಇಲ್ಲವಾದ್ರೆ ಎಲ್ಲೋ ಏನೋ ಆಗಿ ರಿಪೇರಿ ಮಾಡುವುದೇ ಈ ಕರೆಂಟಿನವರಿಗೆ ತೊಂದರೆ. ಇಲ್ಲದೆ ಇದ್ದರೂ ಈ ಊರಲ್ಲಿ ಕರೆಂಟು ಇರುವುದು ಕಡಿಮೆಯೇ. ಒಂದೊಂದು ಸಲ ಗಾಳಿಗೆ ಒಂದು ಲೈನ್ ಇನ್ನೊಂದಕ್ಕೆ ತಾಕದಿರುವಂತೆ ಭಾರ ಹಾಕಿದ್ದ ಕಲ್ಲು ಎಗರಿ ಹೋಗುತ್ತೆ. ಮತ್ತೆ ಹಾಕದಿದ್ದರೆ ಇಷ್ಟೇ ಕಥೆ. ಯಾರಿಗಾದರೂ ಹೇಳಿ ಹಾಕಿಸೋಣ ಅಂದ್ರೆ ಈ ಕರೆಂಟೇ ಅನಾಥ. ಭಯ ಆಗುತ್ತೆʼ, ಎಂದು ಗೊಣಗುತ್ತಿದ್ದರು ಅತ್ತೆ. ಇದೆಲ್ಲಾ ನಿತ್ಯದ ರಗಳೆ. ಅತ್ತೆ ಹೊರಗೆ ಹಾಕಿದ್ದ ಬಟ್ಟೆಯನ್ನು ತೆಗೆಯುವುದಾಗಿ ಎದ್ದರು. ʻನೀವಿರಿ ನಾನು ತರುತ್ತೇನೆʼ ಎಂದು ಎದ್ದೆ. ʻನಿನಗೆ ಇದೆಲ್ಲಾ ಅಭ್ಯಾಸ ತಪ್ಪಿದೆಯಮ್ಮಾ, ನೆಂದರೆ ನೆಗಡಿಯಾದೀತುʼ, ಎಂದರು. ʻಪರವಾಗಿಲ್ಲ ನಾನು ಯಾವುದನ್ನೂ ಮರೆತಿಲ್ಲ…ʼ,  ಎಂದು ಹೊರನಡೆದೆ.

ಆ ಮಾತಿನ ಹಿಂದೆ ಸತೀಶನನ್ನೂ ಕೂಡಾ ಎನ್ನುವ ಅರ್ಥವಿತ್ತೆ? ಹುಡುಕಾಡಿದೆ. ಯಾವ ಅರ್ಥ ಯಾವ ಮಾತುಗಳಲ್ಲಿ ಅಡಗಿ ನನ್ನ ಅಣಕಿಸುತ್ತೋ ಗೊತ್ತಾಗುವುದಾದರೂ ಹೇಗೆ? ನನ್ನ ಮಾತುಗಳಲ್ಲಿ ಅಡಗಿರುವುದನ್ನು ನಾನೇ ಹುಡುಕುವುದು ಎಂಥಾ ಆಟ! ಒಣ ಹಾಕಿದ ಬಟ್ಟೆಯನ್ನು ತೆಗೆದೆ. ಮಿಂಚಿನ ಬೆಳಕಲ್ಲಿ ಮನೆಯ ಪಕ್ಕದ ತಡಿಕೆಯಲ್ಲಿ ನಿಲ್ಲಿಸಿದ ಸೈಕಲ್ ಕಾಣಿಸಿತು. ಆಗೆಲ್ಲಾ ಹಾಗೆ ಮಳೆ ಬಿದ್ದರೆ ಮಣ್ಣಿನ ದಾರಿಗಳು ಕೆಸರಾಗಿ ಕರಗಿ ಹೋಗುತ್ತಿದ್ದವು. ಸತೀಶ ಸೈಕಲ್ ಇಳಿದು ತಳ್ಳಿಕೊಂಡು ಬರುತ್ತಿದ್ದ. ಅವ ಚಪ್ಪಲಿಗಳಿಗೆ ಮಣ್ಣು ಅಟ್ಟೆಯ ಹಾಗೇ ಹತ್ತಿಕೊಳ್ಳುತ್ತಿದ್ದವು. ಬಾಗಿಲಲ್ಲಿ ಕೂತು ಅದನ್ನು ಕಲ್ಲಿಗೆ ಉಜ್ಜಿ ತೆಗೆಯುತ್ತಾ, ಈ ಕಾಡಿಗೆ ಯಾವಾಗ ರಸ್ತೆ ಆಗುತ್ತದೋ ಆಗ ದೇಶ ಅಭಿವೃದ್ಧಿ ಆಗಿದೆ ಎಂದು ಎಂದು ನಗುತ್ತಿದ್ದ. ಮೆಲ್ಲನೆ ಆ ಸೈಕಲ್ ತಡವಿದೆ.

ಎಷ್ಟು ಸಲ ಈ ಸೈಕಲ್ ಮೇಲೆ ಕೂತು ಓಡಾಡಿದ್ದೀವಿ. ಬಾರ್ ಮೇಲೆ ಕುಳಿತು ತೊಡೆಯ ಹಿಂಭಾಗ ನೋವಾದಾಗ ಕುಳಿತುಕೊಳ್ಳುವಾಗ ಎಲ್ಲಿ ಭಾರ ಬಿಡಬೇಕು ಎಂದು ಹೇಳಿಕೊಡುತ್ತಾ, ನೋವಾದ ಜಾಗಕ್ಕೆ ಎಣ್ಣೆ ಹಚ್ಚುತ್ತಿದ್ದ. ತುಕ್ಕು ಹಿಡಿದ ಹ್ಯಾಂಡಲ್ ತಿರುಗಿಸಿದೆ, ಹತ್ತು ಹತ್ತು ಎಂದು ಸತೀಶ ಅಂದ ಹಾಗೆ ಆಯಿತು. ಈ ಸೈಕಲ್ ಅನ್ನು ನನ್ನ ಜೊತೆ ಒಯ್ಯಬೇಕು. ಅತ್ತೆಯನ್ನು ಕೇಳಿದರೆ ಇಲ್ಲಾನ್ನಲಾರರು ಎಂದುಕೊಳ್ಳುವಷ್ಟರಲ್ಲಿ ಮನಸ್ಸು ಮತ್ತೆ ಹೇಳಿತು, ಪುಸ್ತಕ ಆಯಿತು ಈಗ ಸೈಕಲ್ಲು! ಹಾಗೆ ತೆಗೆದುಕೊಂಡು ಹೋಗಬೇಕು ಅಂದರೆ ಇಲ್ಲಿರುವ ಎಲ್ಲವನ್ನೂ ತೆಗೆದುಕೊಂಡು ಹೋಗಬೇಕು. ಎಲ್ಲ ನೆನಪುಗಳಲ್ಲೂ ಒಂದೊಂದು ಆರ್ದ್ರತೆ ಇದೆ. ನನ್ನ ಏರು ಯವ್ವನದ ದಿನಗಳಲ್ಲಿ ಈ ಮನೆಗೆ ಬಂದೆ. ಎಲ್ಲಾ ವಾಸ್ತವದಲ್ಲಿ ಇರಬೇಕಿದ್ದ ಜೀವನ ಬರೀ ನೆನಪುಗಳಲ್ಲೇ ತುಂಬಿಬಿಟ್ಟಿದೆ. ಒಂದು ಕ್ಷಣ ನನ್ನ ಆತ್ಮವೇ ಗತಕಾಲಕ್ಕೆ ಹೋಗಿಬಿಟ್ಟಿದೆಯೇನೋ ಅನ್ನಿಸಿಬಿಟ್ಟಿತು.  

ಬಟ್ಟೆ ತೆಗೆದುಕೊಂಡು ಒಳಗೆ ಬರುವಾಗ ಅತ್ತೆ ಎಲ್ಲೆಲ್ಲಿ ಸೋರಬಹುದು ಎಂದು ಅಂದಾಜಿಸಿ ಪಾತ್ರೆಗಳನ್ನು ಇಡುತ್ತಿದ್ದರು. ಆಶಾಗೆ ಇದೆಲ್ಲಾ ಹೊಸದೇ ಆದ್ದರಿಂದ ಅವಳಿಗೆ ಅಚ್ಚರಿ, ಸಂಭ್ರಮದ ಜೊತೆಗೆ ಹೊಸ ಕೆಲಸ ಮಾಡುವ ಉತ್ಸಾಹವಿತ್ತು. ಅಜ್ಜಿ ಇಲ್ಲಿ ಇಲ್ಲಿ ಎನ್ನುತ್ತಾ ಹುಡುಕಿ ಹುಡುಕಿ ತೋರಿಸುತ್ತಿದ್ದಳು. ʻಇದೆಲ್ಲಾ ಯಾವ ಮಳೆ ಬಿಡು. ನಿಮ್ಮಪ್ಪ ಸಣ್ಣವನಿದ್ದಾಗ ಬಂದ ಮಳೆ ಈಗ ಇಲ್ಲʼ, ಅತ್ತೆ ಆಶಾಗೆ ಹೇಳುತ್ತಾ ಪಾತ್ರೆಗಳನ್ನು ಇಟ್ಟು ಬಂದರು. ಆಶಾನೂ ಬಂದು ನಮ್ಮ ಜೊತೆ ಕೂತಳು. ಅತ್ತೆಯ ತೊಡೆಯ ಮೇಲೆ ಮಲಗುತ್ತಾ ಅಜ್ಜಿ ಅಪ್ಪನ ಬಗ್ಗೆ ಏನಾದರೂ ಹೇಳು ಎಂದಳು. ನಾನು, ʻಆಶಾ ಪಾಪ ಅತ್ತೆಗೆ ಸುಸ್ತಾಗಿದೆ ಮಲಗಬಾರದಾ?ʼ ಎಂದೆ. ʻನಿದ್ದೆ ಬರ್ತಾ ಇಲ್ಲ. ನೀನು ಕೇಳಿದ್ರೆ ಹೇಳಲ್ಲ. ನನಗೆ ಅಪ್ಪನ ಬಗ್ಗೆ ಗೊತ್ತಾಗುವುದಾದರೂ ಹೇಗೆ?ʼ, ಎಂದಳು. ʻಬಿಡು ಚೇತು ಕೇಳಲಿʼ, ಎಂದರು ಅತ್ತೆ. ಆಶಾ ಕುತೂಹಲದಿಂದ ಕೇಳತೊಡಗಿದಳು. ಮಾವ ಆಗಲೆ ನಿದ್ದೆಗೆ ಜಾರಿದ್ದರು.  

ʻನಿಮ್ಮಪ್ಪ ಮಹಾನ್ ಬುದ್ದಿವಂತ, ಒಂದು ವಿಷಯ ಹೇಳಿದರೆ ಅದರ ಜೊತೆ ಇನ್ನಷ್ಟನ್ನು ಅವನೇ ಅಂದಾಜಿಸುತ್ತಿದ್ದ. ಅವನ ಅಂದಾಜು ೯೯ ಭಾಗ ಸರಿಯಾಗೆ ಇರುತ್ತಿತ್ತು. ನಮಗೆ ಅನುಕೂಲವಿದ್ದಿದ್ದರೆ ಒಳ್ಳೆಯ ಕಾಲೇಜಲ್ಲಿ ಓದಿಸಿದ್ದಿದ್ದರೆ ಅವನು ದೊಡ್ಡ ಆಫೀಸರ್ರೋ, ಪ್ರೊಫೆಸ್ರೋ ಆಗ್ತಾ ಇದ್ದ. ಏನ್ ಮಾಡೋದು ಈ ಹಳ್ಳಿಯಲ್ಲಿ ಹುಟ್ಟಿ ಬಿಟ್ಟ. ಎಷ್ಟು ಬುದ್ಧಿ ಅಂತೀಯಾ. ಯಾವಾಗಲೂ ಹೀಗೆ ಕೈಲೊಂದು ಪುಸ್ತಕ ಹಿಡಿದು ಕೂತರೆ ಪ್ರಪಂಚವೇ ಬೇಡವಾಗುತ್ತಿತ್ತು. ಈ ಊರಿಗೆ ಪೇಪರ್ ಬರುತ್ತಿರಲಿಲ್ಲ. ಅದಕ್ಕೆ ಯಾವ ಯಾವತ್ತಿನದ್ದೋ ಪೇಪರ್ಗಳನ್ನು ಮನೆ ತುಂಬಾ ತುಂಬಿಡುತ್ತಿದ್ದ. ಅದರಲ್ಲಿನ ಸಂಗತಿಗಳನ್ನ ನನಗೂ ಓದಿ ಹೇಳುತ್ತಿದ್ದ. ʻನನಗೇನು ಅರ್ಥ ಆಗುತ್ತೋ…?ʼ ಎಂದರೆ, ʻಅಮ್ಮ ಕೇಳು ಇಡೀ ದೇಶದಲ್ಲಿ ಹೀಗೆಲ್ಲಾ ಆಗ್ತಾ ಇದೆ. ನೀನು ಮಾತ್ರ ಈ ಕಾಡಿನ ಅಂಚಲ್ಲಿ ಕೂತು ನನಗೇನು ಗೊತ್ತು ಅಂತಾ ಇದೀಯ?ʼ ಎನ್ನುತ್ತಿದ್ದ. ಬಡವರನ್ನ ಕಂಡರೆ ತುಂಬಾ ಕರುಣೆ. ಹೀಗಾಗೇ ಹೋರಾಟಕ್ಕೂ ಇಳಿದ. ಚಿಕ್ಕ ವಯಸ್ಸಿನಿಂದಲೂ ಹೀಗೇ. ನನಗೆ ಇನ್ನೂ ನೆನಪಿದೆ.

ಒಂದು ದಿನ ನಮ್ಮ ಮನೆಯ ಜಗುಲಿಯ ಮೇಲೆ ಒಬ್ಬ ಮನುಷ್ಯ ಬಂದು ಕುಳಿತ. ವಯಸ್ಸು ಐವತ್ತಿರಬೇಕು. ಅವನು ಎಲ್ಲಿಂದ ಬಂದ, ಏನು ಅಂತ ಗೊತ್ತಿಲ್ಲ. ನಿಮ್ಮಪ್ಪ ಸಣ್ಣ ಹುಡುಗ, ನಮಗೆ ಭಯ. ಇರೋ ಚೂರುಪಾರನ್ನು ಕದ್ದುಕೊಂಡು ಹೋದರೆ ಏನು ಮಾಡುವುದು ಎಂದು. ನಿಮ್ಮ ತಾತ ಅವನನ್ನು ಇಲ್ಲಿಂದ ಹೊರಡು ಎಂದು ಹೇಳುತ್ತಿದ್ದರು. ನಿಮ್ಮಪ್ಪ ಮಾತ್ರ ವಾದ ಮಾಡಿ ಅವನಿಗೆ ರಾತ್ರಿ ಊಟ ಹಾಕಿದ. ಮಲಗಲಿಕ್ಕೆ ಜಾಗ ಮಾಡಿಕೊಟ್ಟ. ಬೆಳಗೆದ್ದು ಅವನು ನಮ್ಮ ಉಪಕಾರಕ್ಕೆ ಕೈಮುಗಿದು, ಇವತ್ತು ದೇವರು ನನಗೆ ಬೆಚ್ಚಗಿನ ಜಾಗ ಕರುಣಿಸಿದ ನಾಳೆ ಏನಾಗುತ್ತದೋ…? ಎಂದು ಹೇಳಿ ಹೊರಟ. ಇವನು ಇನ್ನೂ ಚಿಕ್ಕ ಹುಡುಗ. ಹೈಸ್ಕೂಲೂ ಇರಲಿಲ್ಲಾ ಅಂದುಕೊಳ್ಳುತ್ತೀನಿ. ಓಡಿ ಹೋಗಿ ತನ್ನ ಹೊದಿಕೆಯನ್ನು ತಂದುಕೊಟ್ಟಿದ್ದ. ಕೇಳಿದ್ದಕ್ಕೆ ಪಾಪ ಅಮ್ಮ ಅವನಿಗೆ ರಾತ್ರಿ ಚಳಿಯಾದರೆ ಮಲಗಲಿಕ್ಕೆ ಜಾಗ ಸಿಗಲಿಲ್ಲ ಅಂದರೆ ಕಷ್ಟ ಆಗುತ್ತೆ ಅಲ್ವಾ? ಅದಕ್ಕೆ ಕೊಟ್ಟೆ ಎಂದ. ಮತ್ತೆ ನಾನು ಮನೆಯಲ್ಲಿರುವ ನನ್ನ ಹಳೆಯ ಸೀರೆಗಳನ್ನು ಸೇರಿಸಿ ಅವನಿಗಾಗಿ ಚಾದರವನ್ನು ಹೊಲಿದುಕೊಟ್ಟಿದ್ದೆ. ಅದನ್ನು ಹೊಲೆಯುವ ಸೂಜಿ ಕೈಗೆ ಚುಚ್ಚಿ ರಕ್ತ ಬರೋದು. ಆಗೆಲ್ಲ ನನ್ನ ಕಷ್ಟಕ್ಕೂ ಅವನು ಎಷ್ಟು ಮರುಗಿದ್ದ ಅಂತೀಯ? ಅಮ್ಮಾ ನನ್ನಿಂದ ನಿನಗೆ ಕಷ್ಟ ಆಯ್ತಲ್ವಾ ಅಂತʼ.

ಹೀಗೆ ಅತ್ತೆ ಕಥೆಯ ಮೇಲೆ ಕಥೆ ಹೇಳುತ್ತಿದ್ದರೆ ಕರುಣೆಯ ಮಡಿಲಲ್ಲಿದ್ದಂತೆ ಆಶಾ ಮಲಗಿದ್ದಳು. ಅತ್ತೆ ಅಪ್ಪಿತಪ್ಪಿ ಕೂಡಾ ಮಗನ ಬಗ್ಗೆ ಒಂದೂ ಕಹಿ ಘಟನೆಯನ್ನು ಹೇಳಲಿಲ್ಲ, ತಾವು ನೋವು ಪಡುವಂಥಾ ಘಟನೆಯನ್ನೂ ಹೇಳಲಿಲ್ಲ. ಎದೆಯಲ್ಲಿ ಗೂಡು ಕಟ್ಟುವ ಬೆಳಕಿನಂಥಾ ಮಾತುಗಳನ್ನು ಅತ್ತೆ ಬರೀ ಆಡುತ್ತಿದ್ದಾರೆ ಅನ್ನಿಸಲಿಲ್ಲ. ಅಂಥಾದ್ದೊಂದು ಸ್ಥಿತಿಯನ್ನು ಕಲ್ಪಿಸಿಕೊಂಡಿದ್ದರಿಂದಲೇ ಹೀಗೆ ಬದುಕಲಿಕ್ಕೆ ಸಾಧ್ಯ ಆಗಿರುವುದು ಅನ್ನಿಸಿತ್ತು. ಹಾಗಾದರೆ ಸತೀಶನಿಗೆ ದೌರ್ಬಲ್ಯಗಳೇ ಇರಲಿಲ್ಲವೇ? ಅವನಿಲ್ಲ ಎನ್ನುವ ಕಾರಣಕ್ಕೆ ನಾವೆಲ್ಲಾ ಅವನನ್ನು ವೈಭವೀಕರಿಸ್ತಾ ಇದ್ದೀವಾ? ಒಂದು ಕ್ಷಣ ಯೋಚಿಸಿದೆ. ಜೊತೆಗೆ ಇದ್ದ ಕೇವಲ ಒಂದೂವರೆ ವರ್ಷಗಳಲ್ಲಿ ಹೋರಾಟ ಅದೂ ಇದೂ ಅಂತ ಅವನು ಓಡಾಡಿದ. ಅವನ ವಯಸ್ಸು ಹುಮ್ಮಸ್ಸು, ವ್ಯವಸ್ಥೆ, ಕಾಲ ಎಲ್ಲವೂ ಅವನನ್ನು ಇನ್ನೂ ಕರೆಪ್ಟ್ ಆಗಲಿಕ್ಕೆ ಬಿಟ್ಟಿರಲಿಲ್ಲ. ಮದುವೆಯಾಗಿ ಮೂರ್ನಾಲ್ಕು ತಿಂಗಳುಗಳಿಗೆ ಆಶಾ ನನ್ನ ಹೊಟ್ಟೆಗೆ ಬಂದಿದ್ದು. ಕಾಲ ಕಾವು ಕೂತು ಜಗತ್ತಿನ ಸಮತೋಲನವನ್ನು ಕಾಪಾಡುವ ಉಮೇದಿನಲ್ಲಿತ್ತು ಎನ್ನುವಂತೆ ದೇಶಾದ್ಯಂತ ಹೋರಾಟದ ಕಾವೇರಿತ್ತು. ಜಾಗಗಳನ್ನು ಗುರುತು ಮಾಡಿ, ಸರಕಾರದ ಕಡೆಯಿಂದ ಅದನ್ನು ಬಡವರಿಗೆ ಕೊಡಿಸುವ ಕೆಲಸ ವೇಗಗೊಂಡಿತ್ತು. ಸತೀಶ ತನ್ನ ಹಳೆಯ ಸೈಕಲ್‌ನ್ನು ತೆಗೆದುಕೊಂಡು ಹೋಗಿ ಮಾತಂಗಿಯ ಮನೆಯ ಅಂಗಳದಲ್ಲಿ ನಿಲ್ಲಿಸಿ, ಅಜ್ಜಿ ಅಮ್ಮನನ್ನು ಮಾತಾಡಿಸಿ, ನನ್ನ ಕುಶಲವಾರ್ತೆಯನ್ನು ಮುಟ್ಟಿಸಿ, ಅಲ್ಲಿಂದ ಬಸ್ಸು ಹತ್ತಿ ಹೊರಟ ಎಂದರೆ ಮತ್ತೆ ಅವನು ಬರುವುದು ವಾರವಾದರೂ ಆಗುತ್ತಿತ್ತು.

ಅವನು ಬರುವುದು ತಡವಾದರೂ ನನಗೆ ಭಯವೆಂಬುದೇ ಇರುತ್ತಿರಲಿಲ್ಲ. ಬಂದಾಗ ಸಿಗುವ ಸ್ವಲ್ಪ ಸಮಯದಲ್ಲಿ ಮನೆಯ ಕೆಲಸದ ಮಧ್ಯೆಯೇ ಹೋರಾಟದ ಸಂಗತಿಗಳನ್ನು ರಿಪೋರ್ಟ್ ಮಾಡಬೇಕಿದ್ದ ಜವಾಬ್ದಾರಿಯೂ ಅವನ ಮೇಲೆ ಇತ್ತು. ನಾನಾಗ ಹೆಚ್ಚು ಹೊರಗೆ ಓಡಾಡದ ಕಾರಣ ಅವನ ಕಷ್ಟವನ್ನು ನೋಡಲಾಗದೆ ನಾನೇ ಬರೆದುಕೊಡುತ್ತೇನೆ ಎಂದು ಹಟ ಮಾಡಿ ಅವನ ಕಡೆಯಿಂದ ತೆಗೆದುಕೊಂಡಿದ್ದೆ. ಮೊದಲ ಬಾರಿ ನನ್ನ ಸವಿವರವಾದ ಬರವಣಿಗೆಯನ್ನು ನೋಡಿ ಸತೀಶ, ʻನೀನು ಒಳ್ಳೆಯ ಕಥೆಗಾರ್ತಿ. ಹೀಗೆ ಬರೆಯುತ್ತಾ ಹೋದರೆ ಬಹುಶಃ ಈ ನಾಡಿನ ಬಹುಮುಖ್ಯ ಲೇಖಕಿ ಆದರೂ ಆಗಬಹುದುʼ, ಎಂದು ಬಿದ್ದುಬಿದ್ದು ನಕ್ಕಿದ್ದ. ನಂತರ ಅವನೇ ಎಲ್ಲವನ್ನೂ ತಿದ್ದಿದ.

ಯಾರು ಮಾತಾಡಿದರು? ಏನು ನಿರ್ಣಯಗಳಾದವು? ಯಾರು ಯಾರು ಹಾಜರಿದ್ದರು ಮತ್ತು ಈ ಸಭಾನಿರ್ಣಯಗಳನ್ನು ಯಾರು ಯಾರಿಗೆ ಕಳಿಸಲಾಯಿತು ಎನ್ನುವುದನ್ನು ಯಾವುದು ಆದ ಮೇಲೆ ಯಾವುದನ್ನು ಬರೆಯಬೇಕು ಎಂದೆಲ್ಲಾ ಹೇಳಿಕೊಟ್ಟ. ನಂತರ ದಿನಗಳಲ್ಲಿ ಎಲ್ಲೇ ಸಭೆ ನಡೆದರೂ ವಿವರಗಳನ್ನು ತಂದುಕೊಟ್ಟರೆ ಅದನ್ನು ಅಚ್ಚುಕಟ್ಟಾಗಿ ಬರೆದುಕೊಡುತ್ತಿದ್ದೆ. ಅವು ಪತ್ರಿಕೆಗಳಲ್ಲಿ ಬರುತ್ತಿದ್ದವು ಕೂಡಾ. ಆದರೆ ಒಮ್ಮೆಯೂ ನನ್ನ ಹೆಸರು ಬರಲಿಲ್ಲ. ಆಗೆಲ್ಲಾ ನನಗೆಸಂಕಟ ಆಗುತ್ತಿತ್ತು. ಅಲ್ಲ ಇಷ್ಟೆಲ್ಲಾ ಕಷ್ಟಪಟ್ಟು ಬರೆದರೆ ನನ್ನ ಹೆಸರನ್ನಾದರೂ ಹಾಕಬಾರದೇ? ಎಂದು. ಸತೀಶನನ್ನು ನಾನು ಎಂದೂ ಕೇಳಲಿಲ್ಲ. ಬಹುಶಃ ಅವನ ಮನಸ್ಸಿಗೆ ಎಂದೂ ಆ ವಿಷಯ ಹೊಳೆಯದೇ ಇದ್ದಿರಲೂ ಬಹುದು. ಆದರೆ ಬರವಣಿಗೆಯ ರುಚಿ ಮಾತ್ರ ಹತ್ತಿತು.

| ಮುಂದಿನ ವಾರಕ್ಕೆ |

‍ಲೇಖಕರು admin j

June 28, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: