ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹತ್ತಿರವಿದ್ದೂ ದೂರ ನಿಲ್ಲುವೆವು

-ಭವ್ಯ ಟಿ ಎಸ್

ನಮ್ಮ ಅಹಂಕಾರವು ಬದುಕಿನಲ್ಲಿ ನಮ್ಮನ್ನು ಒಂಟಿಯಾಗಿಸಿ, ಜಗತ್ತಿನಿಂದ ಬಹುದೂರ ಸರಿಸುತ್ತದೆ.ನಮ್ಮ ಬಗ್ಗೆ ನಮಗೆ ಅಭಿಮಾನ, ಮಮಕಾರವಿರುವುದರಲ್ಲಿ ತಪ್ಪಿಲ್ಲ. ನಮ್ಮ ಏಳ್ಗೆಗೆ ಅದು ಅತ್ಯಗತ್ಯ ಸಹ. ಆದರೆ ನಾನೇ ಶ್ರೇಷ್ಠ, ನಾನು ಅಂದುಕೊಂಡಂತೆ ಎಲ್ಲವೂ, ಎಲ್ಲರೂ
ಇರಬೇಕು ಎಂಬ ಮನೋಭಾವವೇ ಅಹಂಕಾರ.

ಮನುಷ್ಯನಿಗೆ ಅಹಂಕಾರ‌ ಬರಲು ಹಲವು ಕಾರಣಗಳಿವೆ. ವಿದ್ಯೆ, ಅಧಿಕಾರ, ಅಂತಸ್ತು, ರೂಪ ಹೀಗೆ ಇವುಗಳ ಆಧಿಕ್ಯದಿಂದ ತಾನು ಎಲ್ಲರಿಗಿಂತಲೂ ವಿಭಿನ್ನ, ನನಗಿಂತ ಮೇಲು ಯಾರೂ ಇಲ್ಲ ಎಂಬ ಭ್ರಮೆ ಮನವನ್ನು ಆವರಿಸುತ್ತದೆ. ಆಗ ಬೇರೆಯವರಿಂದ ಒಂದು ಅಂತರ ಕಾಪಾಡಿಕೊಳ್ಳಲು ಹಾತೊರೆಯುತ್ತೇವೆ. ಈ ಅಂತರ ಅಹಂಕಾರದ ಗೋಡೆಯಾಗಿ ನಿಂತು ಪರಸ್ಪರ ಬೆರೆಯದಂತೆ ಮಾಡುತ್ತದೆ.ಪುರಾಣ ಇತಿಹಾಸಗಳಲ್ಲಿ ಅಹಂಕಾರದಿಂದ ಮೆರೆದವರು ಮತ್ತು ಅವರ ಅಹಂಕಾರ ಅಂತ್ಯವಾಗುವ ಕತೆಗಳನ್ನು ಕೇಳಿರುತ್ತೇವೆ.

ದೈತ್ಯರಾಜ ಹಿರಣ್ಯಕಶಿಪು ತಾನೇ ಸರ್ವೋತ್ತಮನೆಂದು,ವಿಷ್ಣುವನ್ನೇ ಹೀಯಾಳಿಸುತ್ತಾನೆ.

ಆದರೆ‌ ತನ್ನ ಮಗ ಪ್ರಹ್ಲಾದನೇ ವಿಷ್ಣುವಿನ ಪರಮಭಕ್ತನಾದಾಗ ಅವನನ್ನು ಕೊಲ್ಲಲು ನಾನಾ ರೀತಿಯಲ್ಲಿ ಪ್ರಯತ್ನಿಸಿ ವಿಫಲನಾಗುತ್ತಾನೆ.ಕೊನೆಗೆ‌ ವಿಷ್ಣು ಉಗ್ರನರಸಿಂಹನ ಅವತಾರ ತಾಳಿ ಹಿರಣ್ಯಕಶಿಪುವನ್ನು ಸಂಹರಿಸಿ,ಅವನ ಅಹಂಕಾರವನ್ನು ಅಡಗಿಸುತ್ತಾನೆ.

ಲಂಕಾಧಿಪತಿ ರಾವಣನು ತನ್ನ ಅಹಂಕಾರದಿಂದ ಸೀತೆಯನ್ನು ಅಪಹರಿಸಿ ಆಕೆ ತನ್ನ ಅಧಿಕಾರ,ಅಂತಸ್ತಿಗೆ ಸೋಲುತ್ತಾಳೆ ಅಂದುಕೊಳ್ಳುತ್ತಾನೆ.ಆದರೆ ಸೀತೆಯ ಪಾಲಿಗೆ ರಾವಣನ ಅಧಿಕಾರ ತೃಣಕ್ಕೆ ಸಮಾನವಾಗಿರುತ್ತದೆ.ನಂತರ ಶ್ರೀರಾಮನು ರಾವಣನನ್ನು ವಧಿಸಿ ಅವನ ಅಹಂಕಾರವನ್ನು ವಿನಾಶ ಮಾಡುತ್ತಾನೆ.

ಕ್ರೌರ್ಯದ ಪ್ರತಿರೂಪವಾಗಿ ಅಹಂಕಾರದಿಂದ ಜನರ ಮೇಲೆ ದೌರ್ಜನ್ಯ ನಡೆಸುತ್ತಿದ್ದ ಅಂಗುಲೀಮಾಲನ ಅಹಂಕಾರವನ್ನು ತನ್ನ ಕರುಣೆಯ ನೋಟದಿಂದ ಕರಗಿಸುತ್ತಾನೆ ಗೌತಮಬುದ್ಧ.

ಯಶೋಧರ ಚರಿತೆಯ ಮಾರಿದತ್ತ ತಾನು ರಾಜನೆಂಬ ಅಹಂನಿಂದ ಮನುಷ್ಯರನ್ನೇ ಚಂಡಮಾರಿ ದೇವತೆಗೆ ಬಲಿ ನೀಡಲು ಬಯಸುತ್ತಾನೆ.ಸೇವಕನು ಹಿಡಿದು ತಂದ ಅಭಯರುಚಿ ಮತ್ತು ಅಭಯಮತಿಯರ ವೈರಾಗ್ಯ,ದೃಢಚಿತ್ತ,ಧೈರ್ಯವನ್ನು ಕಂಡು ಬೆರಗಾಗುತ್ತಾನೆ.ಅವರ ಜನ್ಮಾಂತರಗಳ ಕತೆ
ಮಾರಿದತ್ತನ ಅಹಂಕಾರವನ್ನು ಅಳಿಸಿ ಅವನಲ್ಲಿ ವೈರಾಗ್ಯ ಸ್ಫುರಿಸುವಂತೆ ಮಾಡುತ್ತದೆ.

ಮಹಾಭಾರತದಲ್ಲಿ ತನ್ನ ದುರಹಂಕಾರದಿಂದ ತನ್ನ ಸಹೋದರರನ್ನೇ ದ್ವೇಷಿಸುವ ದುರ್ಯೋಧನ ಕುರುಕ್ಷೇತ್ರ ಯುದ್ಧದಲ್ಲಿ ಸರ್ವರನ್ನೂ ಕಳೆದುಕೊಂಡರು ಸೋಲೊಪ್ಪುವುದಿಲ್ಲ.ಅವನ ಅಹಂಕಾರ ಅದಕ್ಕೆ ಅಡ್ಡಿ ಬಂದು ಕೊನೆಗೆ ಪಾಂಡವರಿಂದ ಹತನಾಗುತ್ತಾನೆ.

ಹೀಗೆ ಎಷ್ಟೋ ಉದಾಹರಣೆಗಳನ್ನು ನಾವು ಸ್ಮರಿಸಬಹುದು.ಆಧುನಿಕ ಬದುಕು ನಮಗೆ ಕೊಡುತ್ತಿರುವ ದೊಡ್ಡ ಶಿಕ್ಷೆ ಎಂದರೆ ಒಂಟಿತನ.ಈ ಒಂಟಿತನದ ಮೂಲ ಅಹಂಕಾರವೇ ಆಗಿದೆ.

ಇಂದುಯಾವುದೇ ಸಂಬಂಧಗಳ ನಡುವೆ ಸಾಮರಸ್ಯವಿಲ್ಲ.
ಅದರಲ್ಲೂ ದಾಂಪತ್ಯದ ಬಿಕ್ಕಟ್ಟುಗಳು ಬಹಳ.ಇಂದು ಪತಿ ಪತ್ನಿಯರಿಬ್ಬರೂ ತಮ್ಮ ತಮ್ಮ ಅಹಂನ ಕೋಟೆಯೊಳಗೆ ಬಂಧಿಗಳಾದರೆ ಸುಗಮ ದಾಂಪತ್ಯಸಾಧ್ಯವಿಲ್ಲ.

ಕ್ಷುಲ್ಲಕ ವಿಚಾರಗಳೇ ಬಹುದೊಡ್ಡ ರೂಪದಲ್ಲಿ ಬೆಳೆದು ನಿಲ್ಲುತ್ತಿವೆ.ವಿಚ್ಛೇದನಗಳು ಸರ್ವೇಸಾಮಾನ್ಯ ಎನ್ನುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ.

ದಾಸಶ್ರೇಷ್ಠರಾದ ಕನಕದಾಸರು ವ್ಯಾಸರಾಯರ ಶಿಷ್ಯರಾಗಿದ್ದಾಗ ಗುರುಗಳು ತಮ್ಮ ಶಿಷ್ಯರನ್ನು ಕುರಿತು ದೇವರ ಬಳಿ ಯಾರು ಹೋಗಬಲ್ಲರು ಎಂದು ಕೇಳಿದ ಪ್ರಶ್ನೆಗೆ ಕನಕರು ” ನಾನು ಹೋದರೆ ಹೋದೇನು” ಅಂದರಂತೆ.ಇದನ್ನು ಅಲ್ಲಿ ನೆರೆದ ಅವರ ಸಹಪಾಠಿಗಳೆಲ್ಲರೂ ಕನಕರ ಅಹಂ ಎಂದೇ
ಭಾವಿಸಿದ್ದರಂತೆ.ಆದರೆ ಈ ಮಾತಿನ ಒಳಾರ್ಥವೆಂದರೆ ನಾನು ಎಂಬ ಅಹಂಭಾವ ತೊರೆದ ಮನುಜ ದೇವರಿಗೆ ಹತ್ತಿರನಾಗುತ್ತಾನೆ.ಆತನಿಗೆ ಮುಕ್ತಿ ದೊರೆಯುತ್ತದೆ ಎಂದು.

ಕುಟುಂಬದ ನೆಮ್ಮದಿ ಒಂದಾಗಿ ಬಾಳುವುದು ಮತ್ತು ಅದಕ್ಕಾಗಿ ನಾವು ಮಾಡಿಕೊಳ್ಳಲೇಬೇಕಾದ ಸಣ್ಣಸಣ್ಣ ಹೊಂದಾಣಿಕೆಗಳಲ್ಲಡಗಿದೆ.ಆದರೆ ನಮ್ಮ ಮನದ ಅಹಂ ಕಡ್ಡಿಯನ್ನೇ ಗುಡ್ಡ ಮಾಡಲು ಕಾದು ಕುಳಿತಿರುತ್ತದೆ‌.ಅದು ನಮ್ಮ ಮನದ ಪ್ರೀತಿ,ಶಾಂತಿಯನ್ನು ಕದಡಿ ಕೋಪ,ದ್ವೇಷದ ಭಾವನೆಯನ್ನು ಹುಟ್ಟುಹಾಕುತ್ತದೆ.ಇನ್ನೂ ಉದ್ಯೋಗದ ಸ್ಥಳದಲ್ಲಿ ಸಹ ಸಹೋದ್ಯೋಗಿಗಳೊಂದಿಗೆ ನಗುನಗುತಾ ಬೆರೆತು ಕೆಲಸ ಮಾಡಿದರೆ ನೆಮ್ಮದಿಯಿಂದ ಕಾರ್ಯಕ್ಷಮತೆ ಹೆಚ್ಚುತ್ತದೆ. ಆದರೆ ಅಹಂನಿಂದ ಅಲ್ಲಿಯೂ ಪರಸ್ಪರ ಭಿನ್ನಾಭಿಪ್ರಾಯಗಳು ತಲೆದೋರುತ್ತವೆ. ಸ್ನೇಹದಲ್ಲಿ ಮುಕ್ತಮನಬಹಳ ಅಗತ್ಯ. 

ಅಹಂಕಾರವಿರುವ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸುವುದು ಕಷ್ಟ.ಹೀಗಾಗಿ ಒಳ್ಳೆಯ ಸ್ನೇಹಿತರು ಬೇಕೆನಿಸಿದರೂ ಇಂತಹವರಿಗೆ ಸಿಗುವುದಿಲ್ಲ.

ಪಂಪನ ವಿಕ್ರಮಾರ್ಜುನ ವಿಜಯದಲ್ಲಿ ದ್ರುಪದ ಮತ್ತು ದ್ರೋಣರು ಬಾಲ್ಯದಲ್ಲಿ ಪ್ರಾಣ ಸ್ನೇಹಿತರಾಗಿದ್ದವರು. ಮುಂದೆ
ಛತ್ರಾವತಿಯ ರಾಜನಾದ ದ್ರುಪದನನ್ನು ಕಾಣಲು ದ್ರೋಣನು ಬಂದಾಗ,ತನಗೆ ನೀನು ಪರಿಚಯವೇ ಇಲ್ಲವೆಂಬಂತೆ ಹೀಯಾಳಿಸಿ ಮಾತನಾಡುತ್ತಾನೆ.ಈ ಸಂದರ್ಭವನ್ನು ಕುರಿತು ಕವಿ ರಾಜ್ಯಮದಿರಾ ಮದೋನ್ಮತ್ತನಾಗಿರುವ ದೊರೆ ಎಂದು ದ್ರುಪದನ ವರ್ತನೆ ಕುರಿತು ಹೇಳುತ್ತಾನೆ .ಇಲ್ಲಿ ರಾಜ್ಯದ ಅಧಿಕಾರ ಎಂಬುದು ಅಮಲಿನಂತೆ ತಲೆಗೇರಿದಾಗ ಮನುಷ್ಯ ತನ್ನ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳುತ್ತಾನೆ.ಆಗ ಯಾವುದೇ ಬಾಂಧವ್ಯಗಳು ನೆನಪಿಗೆ ಬರಲಾರವು ಎಂಬುದು ಅವನ ಮಾತಿನ ತಾತ್ಪರ್ಯ.

“ಎಲ್ಲೋ ಹುಡುಕಿದೆ” ಎಂಬ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರ ಕವಿತೆಯ ಸಾಲುಗಳು ನೆನಪಾಗುತ್ತವೆ
“ಹತ್ತಿರವಿದ್ದೂ ದೂರ ನಿಲ್ಲುವೆವು ನಮ್ಮ ಅಹಮ್ಮಿನ ಕೋಟೆಯಲಿ…ಎಷ್ಟು ಕಷ್ಟವೋ ಹೊಂದಿಕೆಯೆಂಬುದು ನಾಲ್ಕು ದಿನದ ಈ ಬದುಕಿನಲಿ”

ಹೌದು ಅಹಂನ ಕೋಟೆಯಿಂದ ಹೊರಬಂದಾಗ ಮಾತ್ರ ಬದುಕು ಸುಂದರ ಮತ್ತು ಸಹ್ಯಗೊಳ್ಳಲು ಸಾಧ್ಯ.ತುಂಬಿದ ಕೊಡ ತುಳುಕುವುದಿಲ್ಲ ಎಂಬ ಗಾದೆಯಂತೆ ಜೀವನದ ಪರಿಪೂರ್ಣತೆಯಿರುವುದು ಸರಳ ಮತ್ತು ಸಹಜ ಬದುಕಿನಲ್ಲಿ.ಕೃತಕತೆ ಮತ್ತು ಭ್ರಮೆಯ ಪರಿಧಿಯಿಂದ ಆಚೆ ಬಂದು ವಿಶಾಲ ಜಗತ್ತಿನ ಸಕಲವನ್ನೂ ಪ್ರೀತಿಯಿಂದ ಅಪ್ಪಿಕೊಳ್ಳೋಣ.ನಾನು ಎಂಬುದರಿಂದ ನಾವು ಎಂಬ ವೈಶಾಲ್ಯತೆಯ ದೃಷ್ಟಿಕೋನವನ್ನು ಹೊಂದೋಣ.

‍ಲೇಖಕರು Admin

23 June, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading