ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪುಸ್ತಕ ಅಂಕಣ- ಸಂಗೀತ ರತ್ನ ಮನ್ಸೂರರ ಸ್ಮೃತಿ ಪಟಲದ ಸ್ಮೃತಿಗಳು

ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು.

ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ ನಡೆಸಿದ್ದಾರೆ.೧೬ ಕೃತಿಗಳು ಪ್ರಕಟವಾಗಿವೆ.

ಪ್ರಸ್ತುತ ಕಲಬುರಗಿಯ ಸರಕಾರಿ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇದೀಗ ಅವಧಿಯ ಪುಸ್ತಕ ಅಂಕಣದೊಂದಿಗೆ ಬರುತ್ತಿದ್ದಾರೆ.

ಅಂಕಣ – 7

ಕೃತಿ – ನನ್ನ ರಸಯಾತ್ರೆ
ಲೇಖಕರು – ಮಲ್ಲಿಕಾರ್ಜುನ ಮನ್ಸೂರ
ಪ್ರಕಾಶಕರು – ಅಭಿನವ ಪ್ರಕಾಶನ
ಬೆಲೆ – 75

‘ಮನ ಮೀರಿ ನಾ ನಿಂತೆ ಕಳಚಿ ಬಿದ್ದಿತು, ಗೆಳೆಯ ಜಗದ ಚಿಂತೆ’

ವರಕವಿ ದ.ರಾ. ಬೇಂದ್ರೆಯವರು ಮನ್ಸೂರರ ಗಾಯನಕ್ಕೆ ಮನಸೋತು ನುಡಿದ ಮನದಾಳದ ನುಡಿಗಳು. ಸ್ವರಸಾಮ್ರಾಜ್ಯದಲ್ಲಿ ಹೆಸರು ಮಾಡಿದ ಮಲ್ಲಿಕಾರ್ಜುನ ಮನ್ಸೂರ್ “ನನ್ನ ರಸೆಯಾತ್ರೆ”ಎಂಬ ತಮ್ಮ ಅನುಭವದ ತುಣುಕುಗಳನ್ನು ಇಲ್ಲಿ ಮೆಲುಕು ಹಾಕಿದ್ದಾರೆ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ, ಕಾಳಿದಾಸ ಸಮ್ಮಾನ್ ಪ್ರಶಸ್ತಿ ಮತ್ತು ಕ.ವಿ.ವಿ. ಧಾರವಾಡದ ಗೌರವ ಡಾಕ್ಟರೇಟ್ ಗೆ ಭಾಜನರಾದ ಮನ್ಸೂರ್ ಅವರು ಸಂಗೀತ ಲೋಕದಲ್ಲಿ ತಮ್ಮದೇ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ಆರಂಭದಲ್ಲಿ ಕರ್ನಾಟಕ ಸಂಗೀತ ನಂತರ ಅನೇಕ ದಿಗ್ಗಜರ ಬಳಿ ಹಿಂದುಸ್ತಾನಿ ಸಂಗೀತದ ಸತತ ಅಭ್ಯಾಸ ಮಾಡಿಕೊಂಡು ಸಂಗೀತ ರಸಿಕರ ಮನಸೂರೆಗೊಂಡರು. ಅವರ ಹೆಸರು ಸ್ಮರಿಸಿದಾಗಲೆಲ್ಲ ‘ಅಕ್ಕಾ ಕೇಳವ್ವ ನಾನೊಂದ ಕನಸ ಕಂಡೆ ‘ ಎಂಬ ವಚನದ ಸಾಲು ಎಲ್ಲರ ಕಿವಿಯಲ್ಲಿ ಅನುರಣಿಸುತ್ತದೆ.

ಮಲ್ಲಿಕಾರ್ಜುನ್ ಮನ್ಸೂರ್ ಅವರು ಮೂಲತಃ ಧಾರವಾಡ ಜಿಲ್ಲೆಯ ಮನ್ಸೂರ್ ಗ್ರಾಮದವರು. 1910 ರ ದಶಕದಲ್ಲಿ ಜನಿಸಿದ ಇವರು ತಂದೆ ತಾಯಿಂದ ಸಂಗೀತದ ಬಳುವಳಿಯನ್ನು ಪಡೆದುಕೊಂಡೆ ಹುಟ್ಟಿದವರು. ತಂದೆಗೆ ಹಾಡು ನಾಟಕದಲ್ಲಿ ಆಸಕ್ತಿ ಇದ್ದರೆ ತಾಯಿಗೆ ಜನಪದ ಹಾಡುಗಾರಿಕೆಯಲ್ಲಿ. ಹೀಗೆ ಇವರಿಬ್ಬರ ಪ್ರಭಾವ ಅಣ್ಣನ ರಂಗಭೂಮಿಯ ಒಡನಾಟ ಎಲ್ಲವೂ ಇವರಿಗೆ ಸಂಗೀತ ಕಲಿಯಲು ಪ್ರೇರಣೆ ನೀಡಿದವು. ಊರಿನಲ್ಲಿ ಗೌಂಟಿ ಶಾಲೆ ಮುಗಿಸಿ ಹೆಚ್ಚಿನ ಶಿಕ್ಷಣಕ್ಕಾಗಿ ಧಾರವಾಡಕ್ಕೆ ಬಂದಾಗ, ಈ ಮೊದಲೇ ಅಣ್ಣ ನಾಟಕದಲ್ಲಿ ಅಭಿನಯಿಸುತ್ತಿರುವುದರಿಂದ ಇವರು ಓದನ್ನು ತೊರೆದು ಆ ಕಡೆ ಆಕರ್ಷಿತರಾದರು. ಮೊದಲು ಮೀರಜ್ ನಲ್ಲಿ ನೀಲಕಂಠ ಭುವಾರ ಬಳಿ ಸಂಗೀತ ಅಭ್ಯಾಸಕ್ಕೆ ತೊಡಗಿದರು. ಚಿಕ್ಕ ವಯಸ್ಸಿನಲ್ಲಿಯೇ ಸಂಗೀತದ ನಾಡಿಮಿಡಿತ ಅರಿತರು. ನಂತರ ಎಚ್. ಎಮ್. ವಿ.ಯಲ್ಲಿ ಧ್ವನಿ ಸುರುಳಿಯನ್ನು ಬಿಡುಗಡೆ ಮಾಡಿದರು. ಆದರೆ ಅವರಿಗೆ ಸಂಗೀತದಲ್ಲಿ ಇನ್ನಷ್ಟು ಜ್ಞಾನವನ್ನು ಪಡೆಯಬೇಕೆಂಬ ಹಂಬಲ ಗುರುವನ್ನು ಅರಸಿ ಹೊರಟರು. ಜೈಪುರ್ ಘರಾಣಿಯ ಮಂಜೀ ಖಾಂ ಸಾಹೇಬರು ಮತ್ತು ಬುರ್ಜಿಖಾಂ ಸಾಹೇಬರ ಬಳಿ ಹಲವು ವರ್ಷಗಳ ಕಾಲ ಸಂಗೀತ ಅಭ್ಯಾಸ ಮಾಡಿದರು. ಎಲ್ಲೂ ಸಂಗೀತ ಕಚೇರಿಗಳನ್ನು ನೀಡದೆ ಏನೆಲ್ಲಾ ಆರ್ಥಿಕ ಸಂಕಷ್ಟಗಳ ಮಧ್ಯೆ ಗುರು ಮುಖೇನ ಅಭ್ಯಾಸ ರೂಡಿಸಿಕೊಂಡರು. ” ಸಂಗೀತ ರಸಿಕರು ಯಾವಾಗಲೂ ಸಿಗುತ್ತಾರೆ ಆದರೆ ಗುರುಗಳು ಸಿಗುವುದು ಅಪರೂಪ ಹಾಗಾಗಿ ಮೊದಲು ಅಧ್ಯಯನ ” ಎಂಬ ಬದ್ಧತೆ ಇಟ್ಟುಕೊಂಡು ಅಧ್ಯಯನ ಕೈಕೊಂಡರು.

ನಂತರ ಮನ್ಸೂರ್ ಅವರು ಧಾರವಾಡ ಆಕಾಶವಾಣಿಯಲ್ಲಿ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಸಂಗೀತ ವಿಭಾಗದಲ್ಲಿ ಗೌರವ ಅಧ್ಯಕ್ಷರಾಗಿ, ಸಂದರ್ಶಕ ಪದ್ಯಪಕರಾಗಿ ಕೂಡ ಕೆಲವು ಕಾಲ ಕಾರ್ಯನಿರ್ವಹಿಸಿದರು. ಅನೇಕ ಧಾರ್ಮಿಕ ಗುರುಗಳ ಪ್ರಭಾವ ಅವರ ಮೇಲಾದ ಕಾರಣ ವಚನ ಗಾಯದಲ್ಲಿ ಆಸಕ್ತಿ ಬಳಸಿಕೊಂಡು ವಚನ ಗಾಯನದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡರು. ಆಧ್ಯಾತ್ಮ ಜೀವಿಯಾದ ಮನ್ಸೂರ್ ರವರು ಶರಣರ ಬದುಕು ಅವರ ವಚನಗಳ ಹಿನ್ನೆಲೆಯನ್ನು ಅರಿತು ನಂತರ ವಚನ ಗಾಯನ ಮಾಡುತ್ತಿದ್ದರು ಇಲ್ಲವಾದಲ್ಲಿ ವಚನದ ಭಾವಕ್ಕೆ ನ್ಯಾಯ ನೀಡಲು ಸಾಧ್ಯವಿಲ್ಲ ಎಂಬ ನಿಲುವು ಅವರದಾಗಿತ್ತು. ಹೀಗೆ ತಮ್ಮದೇ ಆದ ತತ್ವ ಸಿದ್ಧಾಂತಗಳ ಮೂಲಕ, ಆತ್ಮತೃಪ್ತಿಗಾಗಿ ಮತ್ತು ಶಿವನನ್ನು ಓಲೈಸಲು ಸಂಗೀತವನ್ನು ಹಾಡುತ್ತೇನೆ ಎಂದು ಭಾವುಕರಾಗಿ ಹೇಳುವರು.

ಮನ್ಸೂರ್ ಅವರು ತಮ್ಮ “ರಸಯಾತ್ರೆ”ಯಲ್ಲಿ ಸಂಗೀತದ ಪಯಣಕ್ಕೆ ಹೆಚ್ಚಿನ ಒತ್ತನ್ನು ನೀಡಿದ್ದಾರೆ. ಅಷ್ಟಾಗಿ ವೈಯಕ್ತಿಕ ಬದುಕನ್ನು ಕುರಿತಾಗಿ ಹೆಚ್ಚು ಪ್ರಸ್ತಾಪಿಸಿಲ್ಲ. ಒಂದು ಅಧ್ಯಾಯದಲ್ಲಿ ವೈಯಕ್ತಿಕ ಬದುಕನ್ನು ಸಂಕ್ಷಿಪ್ತವಾಗಿ ಹೇಳಿಕೊಂಡಿದ್ದಾರೆ. ಸಹನಶೀಲೆ ಪತ್ನಿ , ಎಂಟು ಮಕ್ಕಳ ತುಂಬ ಸಂಸಾರ. ಅವರಲ್ಲಿ ಇಬ್ಬರು ಹೆಣ್ಣು ಮಕ್ಕಳಿಗೆ ಸಂಗೀತದಲ್ಲಿ ಅಭಿರುಚಿ. ಮಗ ರಾಜಶೇಖರನಿಗೂ ಕೂಡ ಸಂಗೀತದ ಒಲವು ಜೊತೆಗೆ ಇಂಗ್ಲೀಷ್ ಸಾಹಿತ್ಯದ ಪ್ರಭಾವ ಕೂಡ ಆತನ ಮೇಲಾಗಿ ಕವಿವಿಯ ಇಂಗ್ಲಿಷ್ ವಿಭಾಗದಲ್ಲಿ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸುವ ಮತ್ತು ಆತನ ಮನಸ್ಥಿತಿಯನ್ನು ಸೂಕ್ಷ್ಮವಾಗಿ ಅರುಹಿದ್ದಾರೆ. ಒಟ್ಟರೆ ಏನೆಲ್ಲಾ ಸಂಕಟ ಸಮಸ್ಯೆಗಳ ಮಧ್ಯೆ, ಸಂಸಾರಕ್ಕಿಂತ ಸಂಗೀತಕ್ಕೆ ಹೆಚ್ಚು ಒತ್ತನ್ನು ನೀಡಿದ್ದು ಕಂಡುಬರುವುದು.

ತಮ್ಮ ಬದುಕಿನ ಸ್ಮೃತಿ ಪಟಲದಲ್ಲಿ ಅಚ್ಚೊತ್ತಿದ್ದ ಸಂಗೀತ ಗುರುಗಳ ಬಗ್ಗೆ, ಆಧ್ಯಾತ್ಮ ಜೀವಿಗಳ ಬಗ್ಗೆ ಮತ್ತು ಸಹೃದಯ ಸ್ನೇಹಿತರ ಸಾಹಿತಿಗಳ ಕುರಿತಾಗಿ ಹೆಚ್ಚಾಗಿ ಸ್ಮರಿಸಿದ್ದಾರೆ. ಅವರು ಶ್ರೇಷ್ಠ ಸಂಗೀತಗಾರರು ಹೌದು ಜೊತೆಗೆ ಪಾಂಡಿತ್ಯ ಉಳ್ಳವರು ಹೌದು ಕಾರಣ ಆತ್ಮಕಥನದ ಬರವಣಿಗೆಯನ್ನು ಗಮನಿಸಿದಾಗ ಈ ಮಾತು ಮನವರಿಕೆಯಾಗುತ್ತದೆ. ಕನ್ನಡ ಅಷ್ಟೇ ಅಲ್ಲ ಹಿಂದಿ, ಉರ್ದು, ಸಂಸ್ಕೃತ, ಮರಾಠಿ ಹೀಗೆ ಅನೇಕ ಭಾಷೆಗಳ ಜ್ಞಾನ ಕೂಡ ಹೊಂದಿದ್ದರು. ತಮ್ಮ ಸಮಕಾಲೀನರ ಅನೇಕ ಸಂಗೀತ ದಿಗ್ಗಜರ ಮೆಹಪಿಲ್ ಮತ್ತು ಅವರ ಪ್ರಭಾವ ತಮಗಾದದ್ದನ್ನು ವಿನೀತ ವಿನೀತ ಭಾವದಿಂದ ಹೇಳುವರು.

ಒಟ್ಟಾರೆ 112 ಪುಟಗಳ ಅವರ ರಸಯಾತ್ರೆಯಲ್ಲಿ, ಸಂಗೀತ ಅಭ್ಯಾಸಿಗೆ ಇರಬೇಕಾದ ಸಹನೆ, ಸಂಯಮ, ಗುರು ಮುಖೇನ ಅಧ್ಯಯನದ ಮಹತ್ವ ಹೀಗೆ ಎಲ್ಲವನ್ನು ಹೇಳುತ್ತಾ ಕೊನೆಯಲ್ಲಿ ಸ್ವರಲಪಿ, ಅದರ ವಿವರಣೆ, ಆಲಾಪ ಎಲ್ಲವನ್ನು ನೀಡಿ ಸಂಗೀತಗಾರರಿಗೆ ಇದೊಂದು ಉತ್ತಮ ಆಕರ ಕೃತಿಯಾಗಿ ನೆರವು ನೀಡುವಂತಿದೆ. ಶುದ್ಧ ಸಾಹಿತ್ಯ ಮತ್ತು ಶುದ್ಧ ಸಂಗೀತ ಎರಡಕ್ಕೂ ಉತ್ತಮ ಉದಾಹರಣೆ. ಮಲ್ಲಿಕಾರ್ಜುನ ಮನ್ಸೂರ್ ರವರ “ನನ್ನ ರಸೆಯಾತ್ರೆ” ಆತ್ಮಕಥನ ಮೂಡಿಬಂದಿದೆ.

‍ಲೇಖಕರು Admin

24 June, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading