ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಣೆಯಲೇ ಇಲ್ಲದ ಗೆರೆಗಳ

-ನೀ.ಶ್ರೀಶೈಲ ಹುಲ್ಲೂರು

ಸ್ವಲ್ಪ ಬನ್ನಿ
ಇಲ್ಲಿ ಎಲ್ಲ!

ಹಣೆಯಲೇ ಇಲ್ಲದ ಗೆರೆಗಳ
ಅಂಗೈಲಿ ಹುಡುಕುವ
ಜ್ಯೋತಿಷಿಗಳಿಗೆ ಜೋತು
ಬಿದ್ದಿರುವ ಮೂಢ
ಹುನ್ನಾರಕೆ
ಅದೆಷ್ಟು ಬಲಿಗಳು!
ಜಗದ ಜನರನುದ್ಧರಿಸುವ
ಪಂಡಿತನ ಮೂರ್ಖ
ಮುಖ ಮಂಟಪದ ಮುಂದೆ
ಅದೆಷ್ಟು
ಬಿರುದು ಬಾವಲಿಗಳು!

ಏರಿಳಿತ,ಹಗಲು ರಾತ್ರಿ
ನೋವು ನಲಿವಿನಲಿ
ನಿಲ್ಲದ ಬದುಕಿನಲೇ
ಎಲ್ಲ ಸಾಗಿರುವಾಗ
ಬಂದುದನು ಎದೆಗೊತ್ತಿ
ಸಾಗುವ
ಧೈರ್ಯಗೈಯದೆ ಪುಂಡ
ಪೋಕರಿಗಳ ಕಾಲಡಿಯಲ್ಲಿ
ಘಟವ ಚೆಲ್ಲಿ
ಗೋಗರೆಯುವ ತಂಡ
ವಿತಂಡ ಮನಸುಗಳು!

ಉಸಿರಿಗಿರುವನು ಪವನ
ಹಸಿರಿಗಿಲ್ಲಿದೆ ಸಿರಿವನ
ಬಿಸಿಲು ಬೆಳಕಿಗುಂಟು ದಿನಕರ
ಇರುಳ ರಸ ಕುಡಿಯಲಲ್ಲಿದೆ
ಮೇಲೆ ತಿಳಿ ಮುಗಿಲು
ಚಂದ್ರ ತಾರೆ,
ಬೆಸಗೈಯ್ವ ಭಾವ ಭಾಷೆ
ಗಿಲ್ಲಿಲ್ಲ ಇನಿತು ತೊಂದರೆ
ನನಸುಗಳ ಧಿಕ್ಕರಿಸಿ
ಕನಸುಗಳಡಿಯಲಿ
ನರಳುತಿರುವ
ಕುಂಟು ನೆಪಗಳು!

ಅವಸರಕೆ ಸರಮಾಲೆ ಹಾಕಿ
ಉಸಿರುಗರೆಯುತ್ತ ಏಗುವ
ಬದುಕನೆ ತಮ್ಮದಾಗಿಸಿಕೊಂಡು
ಹಪಹಪಿಸುವ ತುಡಿತಕೆ
ತೋರಣ ಕಟ್ಟಿ
ಸುಖದ ಭಟ್ಟಿ ಇಳಿಸುವ
ಕಾಯಕವ ಬಿಸುಟದಿರೆ
ಇನ್ನೆಲ್ಲಿ ಕಾಣುವಿರಿ
ಸುಖ ಸಂತಸ?
ಬೇಡ ಬನ್ನಿ
ಇಲ್ಲೇ ಹುಡುಕುವ
ನಂಮಾಳದಲೇ ಢಾಳಾಗಿವೆ
ಎಲ್ಲ ದಿನಸುಗಳು!

‍ಲೇಖಕರು Admin

2 September, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading