-ಬಾಗೂರು ಮಾರ್ಕಾಂಡೇಯ
ಮಾತಿಗೊಂದು ಅರ್ಥ
ನಲ್ಲೆಯ ಮಾತಿಗೊಂದು ಅರ್ಥವಾದರೆ
ಮೌನಕೆ ನೂರಾರು ಅಮೂರ್ತ ಕಲ್ಪನೆ
ಮಲ್ಲೆಯಂತೆಯೆ ಘಮವು ಹಿತವಾದರೆ
ಧ್ಯಾನದಲಿ ನಗುವ ಚೆಲುವಿನ ಬಣ್ಣನೆ
ನವುರ ಸ್ಪರ್ಷವು ಚೈತನ್ಯ ರೆಕ್ಕೆ ಸಿಕ್ಕಿಸಿರೆ
ಬಾನೂ ಸಹ ಚಿಕ್ಕದಾಗಿ ಹಾರುವೆನೆ
ಕವಲಿನಲಿ ಕನಸೆ ಸಾವಿರ ಜೀವಬಂದಿರೆ
ನಾನೂ ಸಿರಿವಂತನು ಇಳೆ ಸಗ್ಗವೇನೆ
ಬಂದರೆದುರು ಸುತ್ತ ತಳಿರು ಸಿಂಗರಿಸಿರೆ
ಸ್ವಾಗತಿಸುವ ಕುಹುಗಾನದಿ ಚೈತ್ರನೆ
ನಂದನವೆದೆ ಭಾವಗೊಳಲು ನುಡಿಸಿರೆ
ಮೊಗ ಅರಳದೆ ನಾನೆ ಕವಿಯಾದೆನೆ
ಒಲಿದರಿಂಥ ಚೆಲುವೆ ನಿಜ ಅಮೃತಧಾರೆ
ಮೊಗೆವೆ ನಗೆ ಬಂಗಾರ ತೊಡುವೆನೆ
ನಲಿವಿನೊಂದು ಸಂಪುಟ ತೆರೆವ ನೀರೆ
ಹೊಗೆದೆಲ್ಲ ನೋವ ರಸಿಕನಾದೆನೆ
ಸಡಗರವು ಒಳಗೆ
ನಿನ್ನ ಇನಿದನಿಯ ಕರೆಕೇಳಿ ಸಡಗರವು ಒಳಗೆ
ನನ್ನ ಮರೆಸುವೀ ನುಡಿಗಡಲಿದೆ ಸ್ವರ ಹಾಡಿಗೆ
ಕನ್ನೆಲ ಚೆಲುವಿಗ್ಗಿ ಕುಹು ಎನುವ ಕೋಗಿಲೆಗೆ!
ಬಿಗಿವ ಭಾವ ಚೆಲುವರಳೊ ಸೋಜಿಗ ಕಣ್ಣಿಗೆ
ನಗಿಮರೆಸುವ ನಾಚಿಕೆ ಕೆಂಪೆಚ್ಚಿಸಿ ಹೂಗೆನ್ನೆಗೆ
ದಿಗಿಲ ಹೆಚ್ಚಿಸಿದೆ ಮುಗಿಲಮಂಚಿಕೆ ಮಿಂಚಿಗೆ
ನೀಲಗಡಲ ನಾವೆಯಲಿ ನಾ ನೀನು ಜೊತೆಗೆ
ತೇಲಬೇಕಿದೆ ಹುಟ್ಟುಹಾಕುತಲಿ ದಡದ ಕಡೆಗೆ
ಕಾಲವೆ ಚಲಿಸುತಿದೆ ಬಾ ಇನ್ನಾದರು ಎದುರಿಗೆ
ಸರಿದವಲ್ಲ ಚೈತ್ರವೆಷ್ಟೊ ಸಿಂಗರಿಸಿ ಒಲುಮೆಗೆ
ಗರಿಗೆದರಿಸೋ ಸ್ಪೂರ್ತಿ ಕರೆ ಸಂಭ್ರಮವೆನಗೆ
ಗಿರಿಯನೇರಿಸುವ ಕೊಳಲಂತೆ ಆಹ್ವಾನವೆನಗೆ
ಪ್ರಶ್ನೆ ಉಳಿದಿದೆ
ನಡೆದವಲ್ಲ ಎಷ್ಟೊಂದು ದೂರ ಪ್ರಶ್ನೆ ಉಳಿದಿದೆ
ತಡೆಗಳನೆಲ್ಲ ದಾಟಿಯು ಇನಿತು ನಗೆ ಮತ್ತೇನಿದೆ
ಕಡೆಯ ಗೆರೆ ದಾಟಿಹೊರಟರೇ ಪ್ರೀತಿ ಮಾಸದೆ
ಕೆಡಿಸಿತಾವ ಕೆಟ್ಟದೃಷ್ಟಿ ಒಡೆದು ಮನವ ಸರಿಸಿದೆ
ಬಿಡಿಸಬಹುದೆ ಬಂಧ ಗಂಧವ ಬದಲಿಸಲೇನಿದೆ
ಗಡಿ ಕಟ್ಟಿ ಮೆಟ್ಟಿಲಿಟ್ಟು ಏರಿಹೊರಟಿಹ ಗುರುತಿದೆ
ತಡೆಯದೆ ಹೋಯಿತೆ ನಾನೆಂಬ ನುಡಿ ಹಿರಿದಿದೆ
ಎಡೆಯಿಟ್ಟ ಮೀಸಲೊಲವೆ ಎಂಜಲೆ ಪ್ರಶ್ನೆ ಎದ್ದಿದೆ
ಕಡೆಗಣಿಸಲುಂಟೇ ಒಡಲುಸಿರನೆ ಜೀವ ನರಳದೆ
ಕೊಟ್ಟ ಮಾತು ಕಟ್ಟಿಕೆಡವಿ ಮೌನಕೆ ಶರಣಾಗಿದೆ
ತೊಟ್ಟುದೆಲ್ಲ ತಳಿರತೋರಣವಾಗಿದೆ ಚೈತ್ರನಿಲ್ಲದೆ
ಬಿಟ್ಟುಕೊಟ್ಟು ಗೆಲ್ಲಬೇಕೆ ನೀನಿಲ್ಲದೆ ಅರ್ಥವೇನಿದೆ






0 Comments