-ಮತ್ತೂರು ಸುಬ್ಬಣ್ಣ
ಶಿಕ್ಷಕರು ಅಂದು ತಮ್ಮ ಹತ್ತು ವಿದ್ಯಾರ್ಥಿಗಳೊಂದಿಗೆ ಆ ಗ್ರಂಥಾಲಯಕ್ಕೆ ಬಂದಿದ್ದರು. ಗ್ರಂಥಾಲಯದೊಳಕ್ಕೆ ಮಕ್ಕಳನ್ನು ಬಿಡುವ ಮುನ್ನ ಶಿಕ್ಷಕರು ಕೆಲವು ಸೂಚನೆಗಳನ್ನು ಕೊಟ್ಟರು, ʻನೋಡಿ ಮಕ್ಕಳೇ, ಪುಸ್ತಕಗಳು ಅಮೂಲ್ಯ, ಅವುಗಳನ್ನು ಚೆನ್ನಾಗಿ ಹ್ಯಾಂಡಲ್ ಮಾಡಬೇಕು. ಓದುತ್ತಿದ್ದಾಗ ನಾಯಿಯ ಜೋಲು ಬಿದ್ದ ಕಿವಿಯಂತೆ ಪುಸ್ತಕದ ಅಂಚನ್ನು ಮಡಚಬಾರದು. ನೀವೆಲ್ಲ ಮಕ್ಕಳ ವಿಭಾಗದಲ್ಲೇ ಪುಸ್ತಕಗಳನ್ನು ನೋಡಿ. ಈ ಸರ್ಕಾರಿ ಗ್ರಂಥಾಲಯದಲ್ಲಿ ಕೆಲವು ಅಪರೂಪದ ಪುಸ್ತಕಗಳ ಸಂಗ್ರಹವಿದೆ. ನನಗೆ ನೆನಪಿರುವಂತೆ ಅಂತಹ ಕೆಲವು ಮಕ್ಕಳ ಪುಸ್ತಕಗಳನ್ನು ಓದುತ್ತ ನಾನು ಬೆಳೆದಿದ್ದೇನೆ. ಅಂತಹ ಅಪರೂಪದ ಪುಸ್ತಕಗಳಿಗಾಗಿ ಪ್ರಯತ್ನಿಸಿ. ಇನ್ನೆರೆಡು ಗಂಟೆ ಗ್ರಂಥಾಲಯದಲ್ಲಿರುತ್ತೇವೆ. ನೆನಪಿರಲಿ.ʼ
ಮಕ್ಕಳು ಉತ್ಸಾಹದಿಂದ ಚದುರಿದರು. ಮಕ್ಕಳ ಪುಸ್ತಕಗಳನ್ನು ಇಟ್ಟಿದ್ದ ವಿಭಾಗಕ್ಕೆ ರವಿ ಬಂದ. ಪುಸ್ತಕಗಳನ್ನು ಎಳೆದು, ತೆರೆದು ನೋಡುತ್ತಿದ್ದ. ಶಿಕ್ಷಕರು ಹೇಳಿದ ಹಾಗೆ ಹಳೆಯ ಮಕ್ಕಳ ಪುಸ್ತಕಗಳ ಮೇಲೆ ಅವನ ಗಮನವಿತ್ತು. ಅದೇ ವಿಭಾಗದಲ್ಲಿ ಪುಸ್ತಕಗಳನ್ನು ನೋಡುತ್ತಿದ್ದ ವಯಸ್ಸಾದ ವ್ಯಕ್ತಿಯೊಬ್ಬರು ಕಾಣಿಸಿಕೊಂಡರು. ಬಿಳಿಗಡ್ಡ, ದಪ್ಪನೆಯ ಕನ್ನಡಕ, ಗೂನು ಬೆನ್ನು. ಆ ವ್ಯಕ್ತಿ ಹಾಗೇ ರವಿಯತ್ತ ನೋಡಿದರು, ಕೈಯಲ್ಲಿ ಒಂದು ಪುಸ್ತಕವನ್ನು ಹಿಡಿಯುತ್ತ. ರವಿ ಆ ಪುಸ್ತಕದ ಮೇಲೆ ದೃಷ್ಟಿ ಹಾಯಿಸಿದ. ಶಿಕ್ಷಕರು ತಿಳಿಸಿದ್ದ ಹಳೇ ಪುಸ್ತಕ ಅದೇ ಇರಬಹುದೇ? ಎಂದು ರ‍್ಕಿಸಿದ. ರವಿ ಹತ್ತಿರ ಬಂದ. ತಾತನ ಕೈಯಲ್ಲಿದ್ದ ಪುಸ್ತಕವನ್ನು ಒಮ್ಮೆ ತೀಕ್ಷ್ಣವಾಗಿ ಅವಲೋಕಿಸಿದ. ತನ್ನ ಶಿಕ್ಷಕರು ಬಾಲ್ಯದಲ್ಲಿ ಓದಿದ್ದ ಪುಸ್ತಕ ಅದೇ ಎಂದು ಆತನಿಗೆ ಅನಿಸಿತು. ವಯಸ್ಸಾದವರು ರವಿಯನ್ನು ನೋಡಿದರು. ʻತಾತ, ನನಗೆ ಆ ಪುಸ್ತಕ ಬೇಕು ಅಂದ.ʼ ತಾತ ಉತ್ತರಿಸಲಿಲ್ಲ. ಪುಸ್ತಕವನ್ನು ಬಿಗಿಯಾಗಿ ಕೈಯಲ್ಲಿ ಹಿಡಿದರು. ʻತಾತ, ಆ ಪುಸ್ತಕ ಮಕ್ಕಳಿಗೆ ಬರೆದದ್ದು, ಕೊಡಿʼ ಎಂದು ತಾತನ ಕೈಯಿಂದ ಎಳೆಯಲು ನೋಡಿದ ರವಿ. ತಾತ ಪುಸ್ತಕವನ್ನು ಇನ್ನೂ ಮೇಲಕ್ಕೆ ಎತ್ತಿ ಹಿಡಿದರು. ರವಿಗೆ ತಾತನ ಮೇಲೆ ಸಿಟ್ಟು ಬಂದಿತು.
ಮಕ್ಕಳ ಪುಸ್ತಕ ಇವರಿಗ್ಯಾಕೆ ಎನ್ನುವಂತೆ ನೋಡಿದ. ಪುಸ್ತಕದ ಮತ್ತೊಂದು ಪ್ರತಿಗಾಗಿ ಪುಸ್ತಕದ ಶೆಲ್ಫನ್ನು ತಡಕಾಡಿದ. ತಾತ ಕೈಯಲ್ಲಿ ಹಿಡಿದ ಪುಸ್ತಕವೇ ಬೇಕೆನಿಸಿತು. ತಾತನ ಬಗ್ಗೆಯೇ ದೂರಲು ರವಿ ನಿರ್ಧರಿಸಿದ. ಪುಸ್ತಕಾಲಯದ ಕೌಂಟರಿಗೆ ಬಂದ. ಅಲ್ಲಿ ಗ್ರಂಥಪಾಲಕರಿಗೆ ಹೇಳಿದ, ʻಮಾಮ, ಅಲ್ಲೊಬ್ಬ ತಾತ ಮಕ್ಕಳ ಪುಸ್ತಕ ಹಿಡಿದಿದ್ದಾರೆ, ಕೊಡುತ್ತಿಲ್ಲ ನನಗೆ ಬೇಕೆಂದು ಕೇಳಿದರೂ ಕೊಡುತ್ತಿಲ್ಲ,. ಅದೊಂದೇ ಪುಸ್ತಕ ಇರೋದು, ತಾತ ಆ ಪುಸ್ತಕವನ್ನು ಮುಚ್ಚಿಟ್ಟುಕೊಳ್ಳುತ್ತಿದ್ದಾರೆ. ನಾನೇ ನೋಡಿದೆ. ತಾತನಿಂದ ಆ ಪುಸ್ತಕ ಕೊಡಿಸಿʼಅಂದ. ರವಿಯ ಮಾತನ್ನು ಕೇಳಿದ ಗ್ರಂಥಪಾಲಕರು ರವಿಯ ಜೊತೆ ತಾತನಿದ್ದೆಡೆ ಬಂದರು. ʻಅವರೇ ಮಾಮ, ಮಕ್ಕಳ ಪುಸ್ತಕವನ್ನು ಮುಚ್ಚಿಟ್ಟಿದ್ದಾರೆ.ʼ ʻಮಗು ಏನೋ ಹೇಳುತ್ತಿದೆಯಲ್ಲ, ಮಗುವಿಗೆ ಪುಸ್ತಕ ಕೊಡಿʼ ಅಂದರು ಗ್ರಂಥ ಪಾಲಕರು. ʻನನಗೇನೂ ಗೊತ್ತಿಲ್ಲʼಅನ್ನುವ ಹಾಗೆ ಮುಖ ಮಾಡಿದರು ವಯಸ್ಸಾದವರು. ʻಇಲ್ಲ ಮಾಮ, ಅವರು ಆ ಪುಸ್ತಕವನ್ನು ಮುಚ್ಚಿಟ್ಟಿದ್ದಾರೆ, ನಾನೇ ನೋಡಿದೆ.ʼ ಗ್ರಂಥಪಾಲಕರೂ ರವಿಯ ಮಾತನ್ನು ನಂಬುತ್ತ ತಾತ ಅಡಗಿಸಕೊಂಡಿದ್ದ ಪುಸ್ತಕಕ್ಕಾಗಿ ಹುಡುಕಿದರು. ಏನೂ ಸಿಗಲಿಲ್ಲ. ʻಮಕ್ಕಳ ಪುಸ್ತಕ ನಿಮಗೆ ಯಾಕೆ ತಾತ? ಎಲ್ಲಿಟ್ಟಿದ್ದೀರ..? ಮಗುವಿಗೆ ಕೊಡಿʼಅಂದರು ಗ್ರಂಥಪಾಲಕರು. ಗೂನು ಬೆನ್ನನ್ನು ನೆಟ್ಟಗೆ ಮಾಡುತ್ತ ಪುಸ್ತಕದ ಶೆಲ್ಫಿನಲ್ಲಿ ಹುಡುಕುತ್ತ ಒಂದು ಪುಸ್ತಕ ತೆಗೆದರು ವಯಸ್ಸಾದವರು. ರವಿಗೆ ಬೇಕಾದ ಪುಸ್ತಕ ಅದೇ ಆಗಿತ್ತು. ʻಈ ತಾತ ಪುಸ್ತಕಾನ ಬಚ್ಚಿಟ್ಟಿದ್ದರು, ನಾನೇ ನೋಡಿದ್ದೆʼಎಂದ ರವಿ, ಅದೇ ವೇಳೆಗೆ ಶಿಕ್ಷಕರು ತಮ್ಮ ವಿದ್ಯಾರ್ಥಿಗಳೊಂದಿಗೆ ಸ್ಥಳಕ್ಕೆ ಬಂದರು. ರವಿ ತಾತನ ವಿರುದ್ಧ ದೂರುತ್ತ ಕಥೆಯನ್ನು ಹೇಳಿದ, ಎಲ್ಲರೂ ತಾತನ ಬಗ್ಗೆ ಆಡಿಕೊಳ್ಳುವವರೇ. ʻವಯಸ್ಸಾಗಿದೆ ನಿಮಗೆ ಯಾಕೆ ಕೆಟ್ಟ ಬುದ್ಧಿ, ಮಕ್ಕಳ ಪುಸ್ತಕ ನಿಮಗ್ಯಾಕೆʼ ಎನ್ನುತ್ತ ಶಿಕ್ಷಕರು ವಯಸ್ಸಾದವರನ್ನೇ ದೂರಿದರು. ಅಸಹಾಯಕರಾಗಿ ವಯಸ್ಸಾದವರು ಎಲ್ಲರನ್ನೂ ನೋಡುತ್ತಿದ್ದರು.
ʻನೋಡಿ ಹೀಗೆಲ್ಲ ಮಾಡಬೇಡಿ, ಇನ್ನು ನೀವು ಹೊರಡಿʼ ಎಂದರು ಗ್ರಂಥಪಾಲಕರು, ವಯಸ್ಸಾದವರತ್ತ ಬೆರಳು ಮಾಡುತ್ತ. ರವಿಯ ಕೈಯಲ್ಲಿದ್ದ ಪುಸ್ತಕವನ್ನು ಶಿಕ್ಷಕರು ಗಮನಿಸಿದರು. ʻ ಇದೇ ಪುಸ್ತಕವನ್ನೇ ನಾನು ವಿದ್ಯಾರ್ಥಿಯಾಗಿದ್ದಾಗ ಇದೇ ಗ್ರಂಥಾಲಯದಲ್ಲಿ ಓದಿದ್ದೆ. ಬಹಳ ಚೆನ್ನಾಗಿದೆ. ಇದರ ಇನ್ನೊಂದು ಪ್ರತಿ ಇದೆಯೇ?ʼ ಎಂದು ಶಿಕ್ಷಕರು ಗ್ರಂಥಪಾಲಕರನ್ನು ಕೇಳಿದರು, ಪುಸ್ತಕವನ್ನು ಅವಲೋಕಿಸುತ್ತ. ಇಲ್ಲ ಎನ್ನುವಂತೆ ಗ್ರಂಥಪಾಲಕರು ತಲೆ ಆಡಿಸಿದರು.
ಅದೇ ವೇಳೆಗೆ ಒಬ್ಬ ಬಿಳಿ ಮೀಸೆಯ ತಾತಯ್ಯ ಬಂದರು. ʻಇದೇನು ಇಲ್ಲಿ ನಡೆಯುತ್ತಿದೆ? ಗಲಾಟೆ ಯಾಕೆ?ʼ ಎನ್ನುತ್ತ ಒಳ ಬಂದರು. ಗ್ರಂಥಪಾಲಕರೇ ಮುಂದಾಗಿ ನಡೆದ ಘಟನೆಯನ್ನು ವಿವರಿಸಲು ಮೊದಲಾದರು. ಈಗತಾನೆ ಬಂದ ತಾತಯ್ಯನವರ ದೃಷ್ಟಿ ವಯಸ್ಸಾದ, ಗಡ್ಡಬಿಟ್ಟಿದ್ದ, ಗೂನು ಬೆನ್ನಿನ ಆ ವ್ಯಕ್ತಿಯ ಮೇಲೆ ಹೋಯಿತು. ʻಏನೋ ಸುಬ್ಬ ಇಲ್ಲಿ!ʼ ಎಂದರು. ʻಹಾಗೇ ಮಗಳ ಮನೆಗೆ ಬಂದಿದ್ದೆ. ಗ್ರಂಥಾಲಯದ ಕಡೆಗೂ ಬಂದಿದ್ದೆ. ಮಕ್ಕಳ ಪುಸ್ತಕ ನೋಡಬೇಕೆನಿಸಿತು.ʼ ಆಗತಾನೆ ಬಂದಿದ್ದ ತಾತಯ್ಯ ಗ್ರಂಥಪಾಲಕರ ಹಾಗು ಶಿಕ್ಷಕರ ಕಡೆ ತಿರುಗುತ್ತ ನುಡಿದರು,ʻಇವರು ಯಾರು ಗೊತ್ತೆ? ಹಾಲಿನಹಳ್ಳಿ ಸುಬ್ಬಣ್ಣ ಮೇಷ್ಟ್ರು, ಮಕ್ಕಳ ಕಥೆಗಾರರು. ನೂರು ಪುಸ್ತಕಗಳಿಗಿಂತಲೂ ಮಿಗಿಲಾಗಿ ಬರೆದಿದ್ದಾರೆ. ಹತ್ತಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕಳೆದ ಐವತ್ತು ವರ್ಷಗಳಿಂದ ಮಕ್ಕಳಿಗಾಗಿ ಬರೆಯುತ್ತಿದ್ದಾರೆ.ʼಎನ್ನುತ್ತ ರÀವಿಯ ಕೈಯಲ್ಲಿನ ಪುಸ್ತಕವನ್ನು ಅವಲೋಕಿಸಿದರು. ʻಇದು ಇವರ ಪುಸ್ತಕವೇ. ನಲ್ವತ್ತು ವರ್ಷಗಳ ಹಿಂದೆ ಬರೆದದ್ದು. ಇದಕ್ಕೆ ಅಕ್ಯಾಡೆಮಿ ಪುರಸ್ಕಾರ ಬಂದಿದೆ!
ʻಕ್ಷಮಿಸಿ ಸಾರ್ʼ ಎನ್ನುತ್ತ ಶಿಕ್ಷಕರು ಹಿರಿಯ ಸಾಹಿತಿಗಳ ಕೈ ಹಿಡಿಯುತ್ತ , ʻಗೊತ್ತಾಗಲಿಲ್ಲ, ಮತ್ತೊಮ್ಮೆ ಕ್ಷಮಿಸಿʼ ಅಂದರು, ಆಶ್ಚರ್ಯ ಮತ್ತು ಗೌರವ ವ್ಯಕ್ತಪಡಿಸುತ್ತ. ರವಿ, ಭಯ ಭಕ್ತಿಯಿಂದ ಲೇಖಕರ ಕಾಲಿಗೆ ಬಿದ್ದ, ಇತರ ವಿದ್ಯಾಥಿಗಳೂ ಹಿರಿಯ ಲೇಖಕರ ಕಾಲಿಗೆ ಬಿದ್ದರು.ಅಕಸ್ಮತ್ತಾಗಿ ತಮ್ಮ ಗ್ರಂಥಾಲಯಕ್ಕೆ ಆಗಮಿಸಿದ್ದ ಹಿರಿಯ ಮಕ್ಕಳ ಲೇಖಕರನ್ನು ಸನ್ಮಾನಿಸಲು ಗ್ರಂಥಪಾಲಕರು ತಮ್ಮ ಟೇಬಲ್ಲಿನ ಡ್ರಾಯರಿನಲ್ಲಿದ್ದ ಪುಸ್ತಕವನ್ನು ಕೈಗೆ ತೆಗೆದುಕೊಂಡರು!






0 Comments