-ಭವ್ಯ ಟಿ.ಎಸ್
ಜನಕರಾಯನ ಮಗಳು ವನಕೆ ತೊಟ್ಟಿಲ ಕಟ್ಟಿ
ಕುಶಲವರನಿಟ್ಟು ತೂಗ್ಯಾಳು, ಸೀತಾದೇವಿ
ನಗುತ ವನವಾಸ ಕಳೆದಾಳು
ಕಿವಿಗೂ ಮನಸ್ಸಿಗೂ ತಂಪೆನಿಸುವ ಈ ಜನಪದ ತ್ರಿಪದಿಯು ತಾಯ್ತನದ ಶಕ್ತಿಯು ಅದೆಷ್ಟು ಮಹತ್ತರವಾದದ್ದು ಎಂಬುದನ್ನು ತಿಳಿಸುತ್ತದೆ.ಪತಿಯಿಂದ ದೂರವಾಗಿ ಕಾನನದಲ್ಲಿ ಮಕ್ಕಳನ್ನು ಹೆತ್ತು,ಸಲಹಿ ಬೆಳೆಸುವಾಗ ಆಕೆಯ ಒಂಟಿತನ,ಹತಾಶೆ ಎಲ್ಲವನ್ನೂ ಮರೆಸಿದ್ದು ತೊಟ್ಟಿಲ ಕಂದಮ್ಮರ ನಗು,ತೊದಲು.ಅವರ ಬೆಳವಣಿಗೆಯನ್ನು ನೋಡುತ್ತ ತನ್ನೆಲ್ಲಾ ನೋವುಗಳನ್ನು ಮರೆತು ನಗುನಗುತ ವನವಾಸವನ್ನು ಕಳೆಯುತ್ತಾಳೆ ಸೀತಾಮಾತೆ.ಲೋಕದ ಎಲ್ಲಾ ಹೆಣ್ಣುಮಕ್ಕಳಿಗೆ ಮತ್ತೊಮ್ಮೆ ಬದುಕು ಆರಂಭವಾಗುವುದೇ ತಾಯ್ತನದಲ್ಲಿ.ತನ್ನೆಲ್ಲಾ ಬಾಲಿಶತನಗಳನ್ನು ಬಿಟ್ಟು ಗಂಭೀರತೆಯೆಡೆಗೆ,ಜವಾಬ್ದಾರಿಯೆಡೆಗೆ ಅವಳು ಸಹ ಬೆಳೆಯುತ್ತಾಳೆ.ಪ್ರಬುದ್ಧಳಾಗುತ್ತಾಳೆ.ಹೆಣ್ಣಿಗೂ ತೊಟ್ಟಿಲಿಗೂ ಅವಿನಾಭಾವ ಸಂಬಂಧ.ನವಮಾಸಗಳು ತನ್ನ ಗರ್ಭವೇ ಶಿಶುವಿಗೆ ತೊಟ್ಟಿಲು.ನಂತರ ಮಡಿಲು.ಆನಂತರ ಮಗುವಿಗೊಂದು ತೊಟ್ಟಿಲು.ಮಗು ಹುಟ್ಟಿದ ಹನ್ನೊಂದನೇ ದಿನ ತೊಟ್ಟಿಲಶಾಸ್ತ್ರ ಮಾಡಿ ಮಗುವನ್ನು ಅಂದಿನಿಂದ ತೊಟ್ಟಿಲಲ್ಲಿ ಮಲಗಿಸುತ್ತಾರೆ.ಹಿಂದೆಲ್ಲಾ ಬೆತ್ತದ ತೊಟ್ಟಿಲುಗಳಿರುತ್ತಿದ್ದವು.ಬಿದಿರಿನಿಂದ ಕಲಾತ್ಮಕವಾಗಿ ಮಾಡಿದ ಈ ತೊಟ್ಟಿಲುಗಳು ನೋಡಲು ಬಹಳ ಸುಂದರ.ವಿಶಾಲವಾಗಿದ್ದು,ಮಗುವಿಗೆ ಮಲಗಲು ಹಿತಕರ.ಇವುಗಳಿಗೆ ಹಗ್ಗ ಹಾಕಿ ಬಾಣಂತಿ ಕೊಠಡಿಯಲ್ಲಿ ಕಟ್ಟಲಾಗುತಿತ್ತು.ಈ ತೊಟ್ಟಿಲುಗಳನ್ನು ತೂಗಲು ಅಜ್ಜಿಯಂದಿರ ಪಳಗಿದ ಗಟ್ಟಿಯಾದ ಕೈಗಳೇ ಬೇಕು.ನಾನು ನನ್ನ ಮೊದಲ ಮಗನಿಗೆ ಬೆತ್ತದ ತೊಟ್ಟಿಲೇ ಬೇಕೆಂದು ಹಠಮಾಡಿ ತರಿಸಿಕೊಂಡೆ.ಆದರೆ ತೂಗಿ ತೂಗಿ ಕೈಗಳಲ್ಲಿ ಬೊಬ್ಬೆ ಎದ್ದಾಗಲೇ ಗೊತ್ತಾದದ್ದು ತೊಟ್ಟಿಲ ತೂಗುವ ಕಾಯಕ ಸುಲಭವಲ್ಲವೆಂದು.
ಬಾಣಂತನಕ್ಕೆಂದು ತವರಿಗೆ ಬಂದ ಹೆಣ್ಣುಮಗಳನ್ನು ಗಂಡನ ಮನೆಗೆ ಕಳಿಸುವಾಗ ಈ ತೊಟ್ಟಿಲು ಸಹ ಜೊತೆಯಲ್ಲೇ ಸಾಗುತ್ತದೆ.
ತೊಟ್ಟಿಲ ಹೊತ್ಕೊಂಡು ತವರ್ಬಣ್ಣ ಉಟ್ಕೊಂಡು
ಅಪ್ಪ ಕೊಟ್ಟೆಮ್ಮೆ ಹೊಡ್ಕೊಂಡು ತೌರೂರ
ತಿಟ್ಟಹತ್ತಿ ತಿರುಗಿ ನೋಡ್ಯಾಳೋ
ತವರಿನಲ್ಲಿ ತಾಯಿಯ ಬೆಚ್ಚನೆಯ ಪ್ರೀತಿಯಲ್ಲಿ ನಡೆಯುವ ಬಾಣಂತನದ ಸೊಗವನ್ನು ಸವಿದ ಹೆಣ್ಣುಮಗಳು ಅಲ್ಲಿಂದ ಬೀಳ್ಕೊಡುವ ಭಾವುಕ ಕ್ಷಣಗಳಿಗೆ ಈ ತ್ರಿಪದಿ ಸಾಕ್ಷಿಯಾಗುತ್ತದೆ.ತವರಿನ ಸೀರೆ ಉಟ್ಟು,ತಲೆ ಮೇಲೆ ತೊಟ್ಟಿಲು ಹೊತ್ತು,ಕಂಕುಳಲ್ಲಿ ಮಗುವನಿಟ್ಟುಕೊಂಡು,ಮಗುವಿಗೆ ಮುಂದೆ ಬೇಕಾದ ಹಾಲಿಗಾಗಿ ಅಪ್ಪ ಕೊಟ್ಟ ಎಮ್ಮೆ ಹೊಡ್ಕೊಂಡು ಹೊರಟ ಹಳ್ಳಿಯ ಹೆಣ್ಣುಮಗಳು ದಿಬ್ಬವನ್ನು ಹತ್ತಿ ತಿರುಗಿ ತಿರುಗಿ ತವರು ಮರೆಯಾಗುವವರೆಗೂ ನೋಡಿ ಸಾಗುತ್ತಾಳೆ.
ಇದು ಹಿಂದಿನ ತೊಟ್ಟಿಲು ಮತ್ತು ತಾಯ್ತನದ ಕತೆಯಾದರೆ ಇಂದು ಹೆಣ್ಣು ಕೇವಲ ಮನೆಯ ಗೃಹಿಣಿಯಾಗಿ,ತಾಯಿಯಾಗಿ ಅಷ್ಟೇ ಉಳಿದಿಲ್ಲ.ಆ ಜವಾಬ್ದಾರಿಯನ್ನು ನಿಭಾಯಿಸುತ್ತಲೇ ಔದ್ಯೋಗಿಕ ಜಗತ್ತಿನಲ್ಲಿ ಮುಂದಡಿಯಿಡುತ್ತಿದ್ದಾಳೆ.ಆಡಳಿತ,ಶಿಕ್ಷಣ,ದೇಶರಕ್ಷಣೆ
ಪ್ರತಿಯೊಂದು ಕ್ಷೇತ್ರದಲ್ಲೂ ತನ್ನದೇ ಆದ ವಿಶಿಷ್ಟ ಪಾತ್ರವನ್ನು ನಿರ್ವಹಿಸುತ್ತಿದ್ದಾಳೆ.ಇದನ್ನೇ ಅಮೆರಿಕನ್ ಕವಿಯಾದ ವಿಲಿಯಂ ರೋಸ್ ವಾಲ್ಲೇಸ್ ಅವರು ತಮ್ಮ ವಾಟ್ ರೂಲ್ಸ್ ದಿ ವರ್ಲ್ಡ್ ಕವಿತೆಯಲ್ಲಿ “ತೊಟ್ಟಿಲು ತೂಗುವ ಕೈ ಜಗತ್ತನ್ನು ಆಳಬಲ್ಲದು” ಎಂದಿದ್ದಾರೆ.ಹೆಣ್ಣಿನ ಅದಮ್ಯ ಜೀವನೋತ್ಸಾಹ ಮತ್ತು ಕೌಶಲ್ಯಗಳನ್ನು ಕುರಿತು ಈ ಸಾಲುಗಳು ತಿಳಿಸುತ್ತವೆ.
ಕನ್ನಡ ಕವಿಗಳ ಭಾವಗೀತೆಗಳಲ್ಲಿಯೂ ತೊಟ್ಟಿಲಿನ ವರ್ಣನೆ ಮನೋಜ್ಞವಾಗಿ ಮೂಡಿ ಬಂದಿದೆ.
ಎಸ್.ವಿ.ಪರಮೇಶ್ವರ ಭಟ್ಟ ಅವರ ತಿಳಿ ಮುಗಿಲ ತೊಟ್ಟಿಲಲಿ ಮಲಗಿದ್ದ ಚಂದಿರನ ಗಾಳಿ ಜೋಗುಳ ಹಾಡಿ ತೂಗುತ್ತಿತ್ತು….ಗೀತೆಯಲ್ಲಿ ಚಂದಿರನೆಂಬ ಮಗುವಿಗೆ ತಿಳಿ ಮುಗಿಲೇ ತೊಟ್ಟಿಲು,ಗಾಳಿಯೇ ತಾಯಾಗಿ ಜೋಗುಳ ಹಾಡಿ ತೂಗುವ ಕಲ್ಪನೆ ಆಹಾ ಅದೆಷ್ಟು ಆಪ್ಯಾಯಮಾನ.
ನಮ್ಮೆಲ್ಲರೊಳಗೂ ಒಂದು ಬಾಲ್ಯ,ಶಿಶುತನ ನಿದ್ರಿಸುತ್ತಿರುತ್ತದೆ.ಅದು ಮಗುವಿನ ಸಂಗ ದೊರೆತಾಗ ಮತ್ತೆ ಎಚ್ಚೆತ್ತುಕೊಳ್ಳುವುದು.ಒಂದು ಮಗುವನ್ನು ಬೆಳೆಸುವಾಗ ತಂದೆತಾಯಿ ಇಬ್ಬರೂ ಮತ್ತೆ ಶಿಶುವಾಗಲೇಬೇಕು.ಇದನ್ನೇ ರಾಷ್ಟ್ರಕವಿ ಕುವೆಂಪು ಅವರು ತಮ್ಮ ತೊಟ್ಟಿಲ ಲೋಕದಲಿ ಕವಿತೆಯಲ್ಲಿ ಹೇಳುತ್ತಾರೆ
ದೊಡ್ಡವರೆಲ್ಲರ ಹೃದಯದಿ ಕಟ್ಟಿದ ತೊಟ್ಟಿಲ ಲೋಕದಲಿ ನಿತ್ಯ ಕಿಶೋರತೆ ನಿದ್ರಿಸುತಿರುವುದು ವಿಸ್ಮೃತನಾಕದಲಿ
ಮಕ್ಕಳೊಡನೆ ಬೆರೆತಾಗ ನಾವೂ ಅವರಂತೆ ಹಾಡುತ್ತ,ಕುಣಿಯುತ್ತ,ಹಾರುತ್ತ ಈ ಲೋಕದ ಪರಮಾನಂದವನ್ನು ಅನುಭವಿಸಬೇಕೆಂದಿದ್ದಾರೆ.
ಇನ್ನು ವಚನಕಾರರ ವಚನಗಳಲ್ಲಿಯೂ ಈ ತೊಟ್ಟಿಲು ವಿಭಿನ್ನವಾಗಿ ಚಿತ್ರಿತವಾಗಿದೆ.
ಅಜ್ಞಾನವೆಂಬ ತೊಟ್ಟಿಲೊಳಗೆ
ಜ್ಞಾನವೆಂಬ ಶಿಶುವ ಮಲಗಿಸಿ
ಸಕಲ ವೇದಶಾಸ್ತ್ರವೆಂಬ ನೇಣ ಕಟ್ಟಿ
ಹಿಡಿದು ತೂಗಿ ಜೋಗುಳವಾಡುತ್ತಿದ್ದಾಳೆ ಭ್ರಾಂತಿಯೆಂಬ ತಾಯಿ.
ಅಲ್ಲಮ ಪ್ರಭುವಿನ ಈ ವಚನದಲ್ಲಿ ತೊಟ್ಟಿಲು ಅಜ್ಞಾನದ ಮಂಪರನ್ನು ತರುವ ತೊಟ್ಟಿಲಾದರೆ,ಭ್ರಮೆಯೇ ತಾಯಾಗಿ ಈ ತೊಟ್ಟಿಲ ತೂಗುತ್ತಿದ್ದಾಳೆ.ಅಜ್ಞಾನದ ತೊಟ್ಟಿಲು ಮುರಿದು,ಭ್ರಾಂತಿಯ ಜೋಗುಳ ನಿಂತಾಗ ಮಾತ್ರ ಜ್ಞಾನೋದಯ.ಆಗಲೇ ದೈವದ ಸಾಕ್ಷಾತ್ಕಾರವೆಂದಿದ್ದಾರೆ.
ತೊಟ್ಟಿಲ ಶಿಶುವಿಂಗೆ ಜೋಗುಳವಲ್ಲದೆ,ಹೊಟ್ಟೆಯ ಶಿಶುವಿಂಗೆ ಜೋಗುಳವುಂಟೇ ಎಂದು ಕೇಳುತ್ತಾನೆ ಶಿವಶರಣನಾದ ಘಟ್ಟಿವಾಳಯ್ಯ.
ಕೈಯಲ್ಲಿರುವ ಇಷ್ಟಲಿಂಗ ತೊಟ್ಟಿಲ ಶಿಶುವಿನಂತೆ.ಅದನ್ನು ಭಕ್ತಿಭಾವದಿಂದ ಪೂಜಿಸುವವರು ಪ್ರಾಣಲಿಂಗವನ್ನು ಹೊಟ್ಟೆಯ ಶಿಶುವಿನಂತೆ ಕಾಣದಂತೆ ಇದ್ದಾರೆ ಎಂದು ವಿಡಂಬಿಸುತ್ತಾನೆ.
ಹೀಗೆ ಜನಪದ ಸಾಹಿತ್ಯ,ಶಿವಶರಣರ ವಚನಗಳು,ಕವಿಗಳ ಭಾವಗೀತೆಯ ಪ್ರಮುಖ ಹೊಳಹಾಗಿ ಕಾಣಿಸಿಕೊಂಡಿದೆ ತೊಟ್ಟಿಲು.
ತೊಟ್ಟಿಲಶಾಸ್ತ್ರ ಎಂಬುದು ಮಗು ಹುಟ್ಟಿದ ಮನೆಯಲ್ಲಿ ನಡೆಯುವ ಸಂಭ್ರಮದ ಸಾಂಪ್ರದಾಯಿಕ ಆಚರಣೆ.ಪುರಾಣ,ಮಹಾಕಾವ್ಯಗಳಲ್ಲಿಯೂ ಈ ತೊಟ್ಟಿಲಶಾಸ್ತ್ರದ ವರ್ಣನೆ ಬರುತ್ತದೆ.ಶ್ರೀಕೃಷ್ಣ ಜನ್ಮಾಷ್ಟಮಿ,ರಾಮನವಮಿಗಳಲ್ಲಿ ದೇವಾಲಯಗಳಲ್ಲಿ ಬಾಲಕೃಷ್ಣ,ಬಾಲರಾಮರನ್ನು ಅಭಿಷೇಕ ಮಾಡಿಸಿ,ತೊಟ್ಟಿಲಲ್ಲಿಟ್ಟು ತೂಗುವ ಪದ್ಧತಿಯಿದೆ.
ಕೃಷ್ಣ,ರಾಮ,ಶಿವನ ಲೀಲೆಗಳನ್ನು ವರ್ಣಿಸುವ ಲಾಲಿ ಹಾಡುಗಳು ಭಕ್ತಿಭಾವಪೂರ್ಣತೆಯಿಂದ ಕೂಡಿ ಸುಂದರ ಸಾಹಿತ್ಯದಿಂದ ಸಹೃದಯರ ಮನದಲ್ಲಿ ನೆಲೆಯೂರಿವೆ.
ತೂಗಿರೆ ಕೃಷ್ಣನ ತೂಗಿರೆ ರಂಗನ
ತೂಗಿರೆ ಅಚ್ಯುತಾನಂತನ
ತೂಗಿರೆ ವರಗಿರಿಯಪ್ಪ ತಿಮ್ಮಪ್ಪನ
ಎಂಬ ಪುರಂದರದಾಸರ ಕೀರ್ತನೆ ಜನಜನಿತವಾಗಿದೆ.
ಬೆತ್ತದಿಂದ ಮಾಡಿದ ಹಳೆಯಕಾಲದ ತೊಟ್ಟಿಲುಗಳು ಒಂದು ಮನೆತನದ ತಲೆತಲಾಂತರದ ನೆನಪುಗಳನ್ನು ಹೊತ್ತು ಸಾಗುವ ಕಲಾತ್ಮಕ ಸಾಧನಗಳಾಗಿ ಮನೆಯ ಅಟ್ಟದಲ್ಲಿ ಜೋಪಾನವಾಗಿರುತ್ತವೆ.ಆಧುನಿಕತೆಯಲ್ಲಿ
ಎಲ್ಲವೂ ಕಾಲಕ್ಕೆ ತಕ್ಕಂತೆ ಬದಲಾಗುವಂತೆ ತೊಟ್ಟಿಲಿನ ಸ್ವರೂಪದಲ್ಲಿಯೂ ಬದಲಾವಣೆಗಳಾಗಿವೆ.ಈಗ ಕಬ್ಬಿಣ,ಪ್ಲಾಸ್ಟಿಕ್ ನ ವಿವಿಧ ವಿನ್ಯಾಸದ ತೊಟ್ಟಿಲುಗಳು ಬಂದಿವೆ.ಇವುಗಳನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸುಲಭವಾಗಿ ಸಾಗಿಸಬಹುದು.ಮೊದಲಿನಂತೆ ಎತ್ತರದ ಚಾವಡಿಗೆ ಗಟ್ಟಿಯಾದ ಹಗ್ಗ ಕಟ್ಟಿ ತೂಗಬೇಕಿಲ್ಲ.ಬಾಣಂತಿ ಕೊಠಡಿ,ನಡುಮನೆ ಹೀಗೆ ನಮಗೆ ಬೇಕೆಂದ ಕಡೆ ತೊಟ್ಟಿಲನ್ನು ಸುಲಭವಾಗಿ ಸಾಗಿಸುವಂತೆ ಕಡಿಮೆತೂಕದ,ಮಡಚಿ,ಬಿಚ್ಚಬಹುದಾದ ತೊಟ್ಟಿಲುಗಳಿವು.ಸೊಳ್ಳೆ ಪರದೆ,ಬಣ್ಣಬಣ್ಣದ ಮಣಿಗಳನ್ನು ಅಳವಡಿಸಿರುವ ಮಗುವಿನ ಸುರಕ್ಷತೆ ಮತ್ತು ಅದರ ಆಟಕ್ಕೂ ಅನುಕೂಲವಾಗುವಂತೆ ಈ ತೊಟ್ಟಿಲುಗಳನ್ನು ರಚಿಸಿರುತ್ತಾರೆ.ಪೂರ್ಣ ನಿದ್ದೆ ಮಾಡಿ ಸಂತುಷ್ಟ ಮನದಲ್ಲಿರುವ ಮಗು ಎದ್ದ ತಕ್ಷಣ ತನ್ನ ಕಣ್ಣಿಗೆ ಕಾಣುವ ತೊಟ್ಟಿಲಿಗೆ ಅಳವಡಿಸಿದ ಆಟಿಕೆ,ಮಣಿಗಳನ್ನು ನೋಡುತ್ತ ಅಲ್ಲೇ ಕೈ ಕಾಲು ಬಡಿಯುತ್ತ ಆಡುವುದನ್ನು ನೋಡಲು ಬಹು ಸೊಗಸು.ಮಗು ಮಗುಚಿ ಹಾಕಿಕೊಳ್ಳುವವರೆಗಷ್ಟೇ ಈ ತೊಟ್ಟಿಲು ಸುರಕ್ಷಿತ.ಮಗು ಬೆಳೆದಂತೆ ತೊಟ್ಟಿಲಿನಾಚೆಗಿನ ಪ್ರಪಂಚಕ್ಕೆ ಹಾತೊರೆಯುತ್ತದೆ.ಮನುಷ್ಯನೇ ಹಾಗೇ ಬೆಳೆಬೆಳೆದಂತೆ ತನ್ನ ಮುಗ್ಧತೆಯ ಪರಿಧಿ ಆಚೆಗೆ ಲೋಕದ ಸಕಲವನ್ನೂ ತಿಳಿಯುವ ಕುತೂಹಲದಲ್ಲಿ ಮುನ್ನಡೆಯುತ್ತಾನೆ.ವಿಕಾಸದ ಹಾದಿ ಇದನ್ನೇ ಅನುಸರಿಸಿದೆ.
ಮೆಸಪಟೋಮಿಯಾ,ಸಿಂಧೂ ಹೀಗೆ ನಾಗರೀಕತೆ ವಿಕಾಸಗೊಂಡ ಮೂಲಪ್ರದೇಶಗಳನ್ನು ನಾಗರೀಕತೆಯ ತೊಟ್ಟಿಲು ಎಂದು ಕರೆಯಲಾಗಿದೆ.ಮನುಷ್ಯ ತನ್ನ ಅಲೆಮಾರಿ ಜೀವನವನ್ನು ತ್ಯಜಿಸಿ,ಒಂದೆಡೆ ಬೀಡು ಬಿಟ್ಟು ಮನೆ,ವ್ಯವಸಾಯ ಅಂತ ಹೊಸ ಬದುಕನ್ನು ಕಟ್ಟಿಕೊಳ್ಳಲು ಪೋಷಣೆ ನೀಡಿದ ಸ್ಥಳಗಳಿವು ಎಂಬ ಅರ್ಥದಲ್ಲಿ ತೊಟ್ಟಿಲು ಪದ ಬಳಕೆಯಾಗಿದೆ.
ಸಿಸ್ಟರ್ ನಿವೇದಿತಾ ಅವರು ಸಂಗ್ರಹಿಸಿ ಪ್ರಕಟಿಸಿರುವ cradle tales of Hinduism ಪುಸ್ತಕದಲ್ಲಿ ರಾಮಾಯಣ ಮತ್ತು ಮಹಾಭಾರತದ ಮಕ್ಕಳ ಕತೆಗಳಿವೆ.ಇವು ತಾಯಂದಿರು ಮಗುವಿಗೆ ತೊಟ್ಟಿಲಲ್ಲಿ ಹೇಳುವ ಕತೆಗಳೆಂದು ಜನಪ್ರಿಯವಾಗಿವೆ.
ಪ್ರಾಚೀನ ಕಾಲದಿಂದಲೂ ತೊಟ್ಟಿಲುಗಳನ್ನು ಮರದಿಂದ ತಯಾರಿಸಲಾಗುತ್ತಿತ್ತು.ಅತ್ಯಂತ ಹಳೆಯ ಕೆಲವು ತೊಟ್ಟಿಲುಗಳನ್ನು ಮನೆಗಳಲ್ಲಿ ಪರಂಪರೆಯಿಂದ ಉಪಯೋಗಿಸಿರುವುದು ಕಂಡುಬರುತ್ತದೆ.ಪ್ರಾಚೀನ ಬ್ರಿಟಿಷರು ಮಗುವನ್ನು ಅಪಾಯದಿಂದ ರಕ್ಷಿಸಲು ಮರದ ಕೊಂಬೆಗಳ ಮೇಲೆ
ತೊಟ್ಟಿಲನ್ನು ಕಟ್ಟಿ ಗಾಳಿಯ ಸಹಾಯದಿಂದ ತೂಗಿಸುತ್ತಿದ್ದರೆನ್ನಲಾಗಿದೆ.ಅಮೆರಿಕಾದ ಮೂಲನಿವಾಸಿಗಳು ಮಗುವನ್ನು ಹೊತ್ತುಕೊಂಡು ಕೆಲಸ ಮಾಡಲು ಅನುಕೂಲವಾಗುವಂತೆ ಸುಂದರವಾಗಿ ಕೆತ್ತಿದ ಮರದ ಹಲಗೆಯ ಮೇಲಿನ ತೊಟ್ಟಿಲುಗಳನ್ನು ಬಳಸುತ್ತಿದ್ದರು.
ಈಗಲೂ ಎಷ್ಟೋ ತಾಯಂದಿರು ರಸ್ತೆ,ಕಟ್ಟಡ ಕಾಮಗಾರಿ,ತೋಟದ ಕೆಲಸ ಮಾಡುವಾಗ,ಮಗುವನ್ನು ಅಲ್ಲೇ ಪಕ್ಕದ ಮರಕ್ಕೆ ಸೀರೆಯ ಜೋಳಿಗೆ ಮಾಡಿ ಕಟ್ಟಿ ತೂಗುವುದನ್ನು ಕಾಣುತ್ತೇವೆ.ಬೆನ್ನಿಗೂ ಸೀರೆಯಿಂದ ಮಗುವನ್ನು ಕಟ್ಟಿ ಬಿಗಿದುಕೊಂಡು ಕಾಯಕದಲ್ಲಿ ತೊಡಗಿರುವ ತಾಯಂದಿರನ್ನು ಕಂಡಾಗ ಬದುಕಿನ ಬವಣೆಗಳ ನಡುವೆ ತಾಯ್ತನದ ಹೊಣೆ ಹೊತ್ತ ಹೆಣ್ತನದ ಮಹತ್ವವೇನೆಂಬುದನ್ನು ಅರಿಯುತ್ತೇವೆ.
ರಾಜ ಮಹಾರಾಜರು ತಮ್ಮ ಮಕ್ಕಳಿಗೆ ಮುತ್ತು,ರತ್ನ,ಚಿನ್ನ,ಬೆಳ್ಳಿಗಳಿಂದ ಮಾಡಿದ ತೊಟ್ಟಿಲನ್ನು
ಮಾಡಿಸಿದರೆ,ಬಡತನದ ನಡುವೆಯೂ ಮಕ್ಕಳಿದ್ದ ಮನೆ ಸ್ವರ್ಗ ಎಂದು ಭಾವಿಸುವ ಪೋಷಕರು ಸೀರೆಯ ಮೃದು ಜೋಳಿಗೆಯಲ್ಲೇ ಮಗುವನ್ನು ತೂಗುತ್ತ ಜೀವನವನ್ನು ಸಂಭ್ರಮಿಸುತ್ತಾರೆ.
ಮಗುವನ್ನು ತೊಟ್ಟಿಲಿಗೆ ಹಾಕುವ ತನಕ ಕೇರುವ ಮೊರದಲ್ಲಿ ಮಲಗಿಸುವ ಸಂಪ್ರದಾಯವೂ ಇದೆ.
ಸಂಪತ್ತು,ಧನಕನಕಗಳಿಗಿಂತಲೂ ಮಿಗಿಲಾದದ್ದು ಸಂತಾನಭಾಗ್ಯ ಎಂದು ಭಾವಿಸುವ ಕಾಲವೊಂದಿತ್ತು.
ಇಂದಿನ ದಂಪತಿಗಳು ಇಬ್ಬರು ಮಕ್ಕಳು ಬೇಕೆಂಬ ಪರಿಕಲ್ಪನೆಯಿಂದ ಒಂದೇ ಮಗು ಸಾಕು ಎನ್ನುವವರೆಗೆ ಬಂದಿದ್ದಾರೆ.ಆಧುನಿಕ ಮನೋಭಾವದ ಯುವಜನತೆ ಮಕ್ಕಳು,ಸಂಸಾರ ಇವೆಲ್ಲಾ ಬಂಧನವೆಂದು ಪರಗಣಿಸುತ್ತಿದ್ದಾರೆ.
ಹಿಂದೆ ಜನಪದರು
ಅತ್ತರೆ ಅಳಲವ್ವ ಈ ಕೂಸು ನನಗಿರಲಿ
ಕೆಟ್ಟರೆ ಕೆಡಲಿ ಮನೆಗೆಲಸ! ಕಂದನಂತ
ಮಕ್ಕಳಿರಲವ್ವ ಮನೆತುಂಬ ಎಂದಿದ್ದಾರೆ.
ಮನೆಗೆಲಸ ಕೆಡಲಿ,ಮಗು ಹಟ ಹಿಡಿದು ಅಳಲಿ ಚಿಂತೆಯಿಲ್ಲ.ಮನೆ ತುಂಬಾ ಮಕ್ಕಳಿದ್ದರೆ ಅದುವೇ ಜೀವಿತದ ಸಂಭ್ರಮ ಎಂಬ ಭಾವನೆಯಿತ್ತು.
ತೊಟ್ಟಿಲೊಳಗಿನ ಕಂದ ತೋಳ ಬೀಸುವ ಚಂದ
ಎಂದು ಮಗುವಿನ ಆಟದಲ್ಲಿ ತಾವು ಒಂದಾಗಿ ಅದನ್ನು ನೋಡಿದಷ್ಟೂ ನೋಡುತ್ತಲೇ ಇರಬೇಕೆಂಬ ತಾಯ ಮಮತೆ ಇಲ್ಲಿ ವ್ಯಕ್ತವಾಗಿದೆ.
ಮಕ್ಕಳ ಫಲ ಪಡೆಯಲು ದೇವಾನುದೇವತೆಗಳಿಗೆ ಹರಕೆ ಹೊರುತ್ತಿದ್ದರು.ಯಾವ ದೇವರು ಹರಸುತ್ತಾನೋ ಅವನದ್ದೇ ಹೆಸರನ್ನು ಮಗುವಿಗೆ ನಾಮಕರಣ ಮಾಡುತ್ತಿದ್ದರು.
ಕೂಸು ಕೊಡು ಎಂಕ್ಕೋಬ ದಾಸಯ್ಯ ಮಾಡುವೆ
ಸಾಸಿರ ನಾಮ ಇಡುವೆನು
ಗಿರಿಗೆ ತೊಟ್ಟಿಲ ಕಟ್ಟಿ
ಶೇಷಗಿರಿ ಎಂದು ಕರೆಯುವೆ ಲಾಲೀ
ಕೂಸನ್ನು ಬೇಡುವ ಜನಪದರ ಗೀತೆಯಿದು.
ಕೂಸು ಇದ್ದ ಮನಿಗೆ ಬೀಸಣಿಕೆ ಯಾತಕ ಎಂಬಂತೆ ಮಕ್ಕಳ ಆಟ ಪಾಠ,ನಗು,ಅಳು ಎಲ್ಲದರಲ್ಲೂ ಜೀವನೋತ್ಸಾಹದ ಅಲೆಗಳಿವೆ.ಮಕ್ಕಳ ಲೋಕದಲಿ ವಿಹರಿಸುವ ಅವಕಾಶ ಕೆಲವೇ ವರ್ಷ ನಮಗೆ ಪೋಷಕತ್ವದಲ್ಲಿ ಲಭಿಸುತ್ತದೆ.ನಿದ್ದೆಗೆಡಲಿ,ನಿತ್ರಾಣರಾಗಲಿ ಮತ್ತೆ ಆ ಅಳುವ ಕಂದನ ಹವಳದಂತಹ ತುಟಿಗಳನ್ನು ಕಂಡಾಗ,ಬೇವಿನ ಎಸಳಂತ ಕುಡಿಹುಬ್ಬು ನೋಡಿದಾಗ ಜಗತ್ತೇ ಮಗು,ಅದೆಷ್ಟು ಚಂದವೆನಿಸಿಬಿಡುತ್ತದೆ.ಇದನ್ನೇ ಜನಪದರು ತೊಟ್ಟಿಲಗಾಳಿ ಸುಳಿದಾಡುವ ಮನೆಯ ಸೊಗಸನ್ನು ತ್ರಿಪದಿಯಲ್ಲಿ ಹೀಗೆ ಚಿತ್ರಿಸುತ್ತಾರೆ
ಯಾತರ್ಯಾತರ ಗಾಳಿ ಎಳೆಯ ತೋಟದ ಗಾಳಿ
ಸುತ್ತಲೂ ಗಾಳಿ ಸುಳಿಗಾಳಿ! ನನಕಂದ
ನಿನ್ನ ತೊಟ್ಟಿಲಗಾಳಿ ಮನೆತುಂಬಾ
ಇತ್ತೀಚೆಗೆ ನವಜಾತ ಶಿಶುಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗುವ ಕ್ರೂರ ಮನಸ್ಥಿತಿ ಕಂಡಾಗ,ಹೆತ್ತ ಮಕ್ಕಳನ್ನೇ ಸಾವಿನ ದವಡೆಗೆ ದೂಡುವ ಪೋಷಕರನ್ನು ಕಂಡಾಗ ಎದೆ ಝಲ್ಲೆನ್ನುತ್ತದೆ.ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯವರು ಅನಾಥ ನವಜಾತ ಶಿಶುಗಳ ರಕ್ಷಣೆಗಾಗಿ ಮಮತೆಯ ತೊಟ್ಟಿಲು ಎಂಬ ಯೋಜನೆಯನ್ನು ಜಾರಿಗೆ ತಂದಿದೆ.
ನಾವೆಷ್ಟೇ ದೊಡ್ಡವರಾದರೂ ಸಹ ನಮ್ಮೊಳಗಿನ ಮಗುತನ ಮತ್ತು ಮುಗ್ಧತೆ ಹಾಗೆ ಉಳಿಯಬೇಕೆಂದರೆ
ದಿನದ ಸ್ವಲ್ಪ ಸಮಯವಾದರೂ ಮಕ್ಕಳೊಂದಿಗೆ ಬೆರೆತು ಕಳೆಯಬೇಕು.ತೊಟ್ಟಿಲ ತೂಗುವ ಕೈಗಳಿಗೆ ಒಂದಿಷ್ಟು ವಿಶ್ರಾಂತಿ ನೀಡಿ,ಮಗುವಿನ ಒಡನಾಟ ಬೆಳೆಸಲೆಂದು ತೊಟ್ಟಿಲ ಬಳಿ ಸಾಗೋಣ.ತೂಗುತ್ತ ತೂಗುತ್ತ ಮಗು ತನ್ನ ಕಣ್ಣೆವೆಗಳನ್ನು ನಿಧಾನವಾಗಿ ಮುಚ್ಚುತ್ತ,ನಿದ್ರಾಲೋಕಕ್ಕೆ ಸಾಗುವುದನ್ನು ಕಣ್ತುಂಬಿಕೊಳ್ಳೋಣ.ನಿದ್ರಿಸುವ ಮಗುವಿನ ತುಟಿಯಂಚಿನಲ್ಲಿ ಮಿನುಗಿ ಮರೆಯಾಗುವ ನಗುವನ್ನು ಎದೆಯೊಳಗೆ ಬಚ್ಚಿಟ್ಟುಕೊಳ್ಳೋಣ.






0 Comments