– ಪ್ರೀತಿ.ಟಿ.ಎಸ್
ಬಹುರೂಪಿ ಫೌಂಡೇಶನ್ ಬೆಂಗಳೂರಿನ ತನ್ನ ರಂಗ ಅಂಗಳದಲ್ಲಿ ಹಮ್ಮಿಕೊಂಡಿದ್ದ ಲೀಕ್ ಔಟ್ ಪ್ರಯೋಗ ಯಶಸ್ವಿಯಾಯಿತು.
ಕಥೆಗಾರ ಶಿವಕುಮಾರ ಮಾವಲಿ ಅವರ ಓಡಿಹೋದ ಹುಡುಗಿಯ ಡೈರಿಯಿಂದ.. ಕಥೆ ಆಧರಿಸಿದ ಈ ಪ್ರಯೋಗವನ್ನು ಅಕ್ಷತಾ ಪಾಂಡವಪುರ ಅಭಿನಯಿಸಿದರು.
ಅಕ್ಷತಾ ಪಾಂಡವಪುರರ ಲೀಕ್ ಔಟ್ ನೋಡಿ ಹೊರಹೋದಾಗ ತಂಪು ಗಾಳಿಯು ಬೇರೊಂದು ಅರ್ಥ ನೀಡುತ್ತಿತ್ತು. ಅದೇ ಸಮಯಕ್ಕೆ ಅಲ್ಲಿಯೇ ಇದ್ದ ನನ್ನ ತಮ್ಮ ಬಂದು – ಹೇಗಿತ್ತು ಅಕ್ಕ ನಾಟಕ? ಎಂದು ಕೇಳಿದ. ನಾನು ಸುಮ್ಮನಾದೆ. ಕೆಲವು ನಾಟಕಗಳಿಗೆ ವಿಮರ್ಶೆ ಬೇಕಾಗಿಲ್ಲ. ಚಪ್ಪಾಳೆಯ ಸದ್ದು ಬೇಕಿಲ್ಲ, ಆದರೆ ಅದರ ಕುರಿತು ಅವಲೋಕಿಸುವಾಗ ಸಾಕಷ್ಟು ವಿಷಯಗಳು ಹುದುಗಿ ಉಳಿದು ಹೋಗುತ್ತವೆ..
ವೇದಿಕೆಯ ಮೇಲೆ ರಂಗಭೂಮಿ ಕಲಾವಿದೆ ಅಕ್ಷತಾ ಪಾಂಡವಪುರ ಒಬ್ಬರೇ.. ಅವರ ಕೈಯಲ್ಲಿದ್ದದ್ದು ಒಂದೇ ದುಪ್ಪಟ್ಟ. ಅದನ್ನೇ ಹತ್ತು ರೀತಿಯಾಗಿ ತೋರಿಸಿ ಅಲ್ಲಿದ್ದ ವೀಕ್ಷಕರನ್ನು ಅಷ್ಟೇ ಬಾರಿ ಪ್ರಶ್ನಿಸತೊಡಗಿದರು. ತಲೆಗೆ ಎಳೆದರೆ ಸಂಪ್ರದಾಯ, ಬಿಗಿಯಾಗಿ ಸುತ್ತಿದರೆ ಮತ, ಕೊರಳಲ್ಲಿ ಬಿಟ್ಟರೆ ಆಧುನಿಕತೆ. ಬಟ್ಟೆ ಒಂದೇ, ನೋಡುವ ಕಣ್ಣುಗಳು ಮಾತ್ರ ಬೇರೆ, ಬೇರೆ. ಕೊನೆಗೆ ಅದನ್ನೇ ನೇಣಿನಂತೆ ಹಿಡಿದಾಗ ಎದೆ ಧಸಕ್ಕೆಂದಿತು. ಪ್ರತಿ ಬಾರಿ ಆ ದುಪ್ಪಟ್ಟವನ್ನು ಧರಿಸಿ ತೋರಿಸಿದಾಗಲು ವೀಕ್ಷಕರ ಬಾಯಲ್ಲಿ ಬರುತ್ತಿದ್ದದ್ದು ಸಂಪ್ರದಾಯ, ಸಂಸ್ಕೃತಿ, ಹೆಣ್ಣಿನ ಒಂದು ತುಂಡು ಬಟ್ಟೆಯಾಗಿಯೇ ವಿನಃ, ಬೇರೆ ರೀತಿಯಾದ ಉತ್ತರವೇ ಸಿಗಲಿಲ್ಲ. ಆಗ ಅನ್ನಿಸಿದ್ದು – ಈ ಮಾನದ ಭಾರ ಹೆಣ್ಣಿನ ಮೇಲೆ ಮಾತ್ರ ಯಾಕೆ?
ಇದೇ ಲೀಕ್‌ಔಟ್ ಅಲ್ಲಿ ಎದ್ದ/ಕಾಡಿದ ಎರಡನೇ ಪ್ರಶ್ನೆ/ಪದ – ಓಡಿಹೋದವಳು..
ಎಲ್ಲದಕ್ಕಿಂತ ಹೆಚ್ಚಾಗಿ ನನಗೆ ಚುಚ್ಚಿದ, ಆಲೋಚನೆಗೆ ನೂಕಿದ ಪದವೆಂದೇ ಹೇಳಬಹುದು. ಮೊದಮೊದಲು, ಅಕ್ಷತಾ ಅವರು ವೀಕ್ಷಕರನ್ನೆಲ್ಲ ಗಮನಿಸಿ – ಇಲ್ಲಿ ಯಾರೆಲ್ಲಾ ತಮ್ಮ ಜೀವನದಲ್ಲಿ ಓಡಿಹೋಗಿದ್ದಿರಾ ಕೈ ಎತ್ತಿ ಎಂದು ಪ್ರಶ್ನಿಸಿದರು. ಎಲ್ಲರ ಗಮನ ಹೋಗಿದ್ದು, ಇಲ್ಲ ನಾನು ಯಾರೊಂದಿಗೂ ಓಡಿಹೋಗಿಲ್ಲ. ಬಸ್ ಹತ್ತಲು ಮಾತ್ರ ಓಡಿಹೋಗಿದ್ದೆ ಎಂಬ ಉತ್ತರವನ್ನು ಹೊರತುಪಡಿಸಿ ಬೇರೆ ಅರ್ಥವೇ ಸಿಗಲಿಲ್ಲ, ಆದರೂ ನಾನು ಕೈ ಎತ್ತಿದೆ. ಅದಕ್ಕೆ ನಾನಲ್ಲಿ ಉತ್ತರಿಸಲು ಸಾಧ್ಯವಾಗಲಿಲ್ಲ.
ನಮ್ಮಲ್ಲಿ ಹುಡುಗಿ ಹುಡುಗನೊಂದಿಗೆ ಹೋದರೆ ಅವಳು ಓಡಿಹೋದಳು ಎನ್ನುತ್ತಾರೆಯೇ ವಿನಃ, ಓಡಿಸಿಕೊಂಡು ಹೋದವನಿಗೆ ಮಾತ್ರ ಈ ಪಟ್ಟ ಸಿಗೋದೆಯಿಲ್ಲ, ಈ ಜರ್ನಿಯಲ್ಲಿ ಆತ ಪ್ರಶ್ನಾತೀತವಾಗಿಯೇ ಉಳಿದುಬಿಡುತ್ತಾನೆ. ಯಾಕೆ ಹೀಗೆ? ಪ್ರೀತಿಸೋದ್ದಕ್ಕೆ ಗಂಡು-ಹೆಣ್ಣು ಬೇಕು. ಶಿಕ್ಷೆ, ಅಪರಾಧಕ್ಕೆ ಮಾತ್ರ ಹೆಣ್ಣೇ ಯಾಕೆ? ಎಂಬ ವಿಚಾರವು ಸಹ ಅಲ್ಲಿ ಎದ್ದಿತ್ತು.
ಇನ್ನು, ಅಪ್ಪ ತನ್ನ ಬೋನಸ್ ನಲ್ಲಿ ಮೂವರಿಗೆ ತಲಾ ಮೂರು ಸಾವಿರ ಕೊಟ್ಟ ಕಥೆ ಪ್ರಾರಂಭವಾಯಿತು. ಒಬ್ಬಳು ಡ್ರೆಸ್ ತಂದಳು, ಮಗ ಬೈಕಿಗೆ ಹಾಕಿದ. ಇನ್ನೊಬ್ಬಳು ಯಾರಿಗೂ ಹೇಳದೆ ಚಿಕ್ಕಮಗಳೂರಿಗೆ ಸೋಲೋ ಟ್ರಿಪ್ ಹೋದಳು. ಮಾರನೆ ದಿನ ಪೊಲೀಸ್ ಠಾಣೆಯಿಂದ ಕರೆ. ಪೋಷಕರ ಮೊದಲ ಪ್ರಶ್ನೆ – ಯಾರ ಜೊತೆ ಓಡಿಹೋದೆ?
ಅವಳು ಹೇಳಿದಳು – ನಾನು ಯಾರೊಂದಿಗೂ ಓಡಿ ಹೋಗಿಲ್ಲ, ನಾನು ಪಕ್ಷಿಯಂತೆ ಒಬ್ಬಳೇ ಹಾರಲು ಹೋಗಿದ್ದೆ. ಯಾರ ಕರೆಯೂ, ಪ್ರೊಟೆಕ್ಷನ್ನೂ ಇಲ್ಲದೆ. ನೋಡಿ, ಓಡಿಹೋಗುವುದು ಯಾವಾಗಲೂ ಹುಡುಗನ ಜೊತೆಗಲ್ಲ, ಕೆಲವೊಮ್ಮೆ ತನ್ನ ಕನಸಿನ ಜೊತೆಗೂ ಕೂಡ ಎಂಬುದನ್ನು ಅಲ್ಲಿ ಪ್ರಸ್ತಾಪಿಸಿದ ರೀತಿ ನನಗೆ ತುಂಬಾ ಇಷ್ಟವಾಯಿತು.

ಅಕ್ಷತಾ ವೇದಿಕೆಯ ಮೇಲೆ, ಅಲ್ಲಲ್ಲ, ಜನರ ನಡುವೆಯೇ ಕೇಳುತ್ತಾರೆ – ನಾವು ಭೂಮಿಯನ್ನು ಹೆಣ್ಣಿಗೆ, ಆಕಾಶವನ್ನು ಗಂಡಿಗೆ ಯಾಕೆ ಹೋಲಿಸಿದೆವು? ಭೂಮಿ ಅಂದರೆ ಸಹನೆ, ತಾಳ್ಮೆ, ಭಾರ, ಎಲ್ಲವನ್ನೂ ಸಹಿಸಿಕೊಳ್ಳುವುದು. ಈ ಹೋಲಿಕೆಯಲ್ಲೇ ಒಂದು ಸಂಚು ಅಡಗಿದೆ. ಆಕಾಶ ಅಂದರೆ ವಿಸ್ತಾರ, ಹಾರಾಟ, ಸ್ವಾತಂತ್ರ್ಯ. ಹೆಣ್ಣು ಯಾಕೆ ಯಾವಾಗಲೂ ಭೂಮಿಯಾಗಿರಬೇಕು? ಅವಳೇ ಯಾಕೆ ಭಾರವನ್ನು ಹೊರಬೇಕು? ಅವಳು ಗಿಡುಗವಾಗಬಾರದೇ? ಗಂಡು ಹೂವಾಗಬಾರದೇ? ಎಂದು.
ಹೂವಾಗುತ್ತೀರ ಎನ್ನುವ ಪ್ರಶ್ನೆಗೆ ಗಂಡು ಸ್ವರಗಳು ಮಡಿಕೆಯೊಳಗಿನ ಸದ್ದಿನಂತೆ ಗುಪ್ತವಾಗಿ ಕೇಳಿತ್ತಷ್ಟೇ.. ಯಾಕೆಂದು ಕೇಳಬೇಡಿ. ಆದರೆ, ಹೆಣ್ಣು ಕೈಗಳು ನಾವೂ ಆಕಾಶವಾಗುತ್ತೇವೆ ಎಂದು ಗಟ್ಟಿಯಾಗಿ ಹಾಡಿ ಒಕ್ಕೊರಲಾಗಿದ್ದು ಹೈಲೈಟ್ ಎಂದೆನ್ನಬಹುದು..
ಒಟ್ಟಾರೆಯಾಗಿ.. ಲೀಕ್ ಔಟ್ ಎಂದರೆ ಸೋರುವಿಕೆ.
ನಾವು ವರ್ಷಗಳಿಂದ ಮುಚ್ಚಿಟ್ಟಿದ್ದ ಸತ್ಯಗಳು, ದುಪ್ಪಟ್ಟದಡಿ ಮುಚ್ಚಿಟ್ಟ ಪ್ರಶ್ನೆಗಳು, ಭೂಮಿ-ಆಕಾಶದ ಸುಳ್ಳಿನ ಕಥೆಗಳು ಈಗ ಸೋರುತ್ತಿವೆ. ಅಕ್ಷತಾ ಪಾಂಡವಪುರ ಮಾಡುತ್ತಿರುವುದು ನಾಟಕವಲ್ಲ, ಅದು ನಮ್ಮ ಮನೆಯ ಕನ್ನಡಿಯನ್ನು ಒರೆಸುವ ಕೆಲಸ.

ನಾಟಕ ಮುಗಿಯಿತು. ನಾನು ಬೈಕ್ ಅಲ್ಲಿ ಮನೆಗೆ ಹೋಗುವಾಗ, ಒಬ್ಬ ಹುಡುಗಿ ಸ್ಕೂಟಿಯಲ್ಲಿ ವೇಗವಾಗಿ ಹೋಗುತ್ತಿದ್ದಳು, ಅವಳ ದುಪ್ಪಟ್ಟ ಗಾಳಿಯಲ್ಲಿ ಹಾರುತ್ತಿತ್ತು. ನನಗ್ಯಾಕೋ ಆಕೆ ಆಕಾಶದಲ್ಲಿ ಹಾರುವ ಗಿಡುಗನಂತೆ ಕಂಡುಬಿಟ್ಟಳು. ಕಾರಣ – ಲೀಕ್‌ಔಟ್ ಎನ್ನಲ್ಲೇ! ಸದ್ಯಕ್ಕಿಷ್ಟೇ…






0 Comments