–ಶಿವರಾಜ ಅರಳಿ
ಮಾಂಗನೂರು ಗಡಿಯಂಚಿಗೆ ಹೊಂದಿಕೊಂಡ ಒಂದು ಪುಟ್ಟ ಗ್ರಾಮ. ಅಲ್ಲಿ ಶತಮಾನಗಳಿಂದ ಸಾಕಮ್ಮಳ ಕುಟುಂಬ ವಾಸವಾಗಿತ್ತು. ರಾಜಿ ಮತ್ತು ಬೀರಾ ಸಾಕಮ್ಮಳ ಮುದ್ದು ಮೊಮ್ಮಕ್ಕಳು. ತಾಯಿಯ ಪ್ರೀತಿ ಕಾಣದ ನತದೃಷ್ಟ ಕಂದಮ್ಮಗಳು. ಹಣ್ಣಾದ ಅಜ್ಜಿಯೇ ಇವರಿಬ್ಬರ ಪಾಲಿಗೆ ತಂದೆ-ತಾಯಿ. ಹೊತ್ತಾರೆ ಎದ್ದು ಕುರಿಗಳಿಗೆ ಶೇಂಗಾ ಹಿಟ್ಟು, ಹಸಿ ಹುಲ್ಲು ಮತ್ತು ನೀರನ್ನು ಕುಡಿಸಿ ದಿನದ ಬದುಕಿಗೆ ತನ್ನನ್ನು ತೆರೆದುಕೊಳ್ಳುತ್ತಿದ್ದಳು ಸಾಕಮ್ಮ. ಇವಳಿಗೆ ಆಸುಪಾಸು ಎಪ್ಪತ್ತರ ಸನಿಹ. ಇಬ್ಬರು ಮೊಮ್ಮಕ್ಕಳನ್ನು ಸಾಕಿ-ಸಲುಹಿ, ಬೆಳೆಸಿ-ಪೋಷಿಸಿ ದಡ ಮುಟ್ಟಿಸಿದ್ದು ಇದೇ ಸಾಕಮ್ಮ. ಮಗ ತುಕಾರಾಮ ಇದ್ದರೂ ಇಲ್ಲದಂತೆ. ಅಷ್ಟೇನು ಪ್ರವೀಣನಲ್ಲ. ಅವನಿಗೂ ದಿನನಿತ್ಯ ಎಲ್ಲವನ್ನು ಹೇಳಿಯೇ ಮಾಡಿಸುತ್ತಿದ್ದಳು ಹಿರಿಜೀವ ಸಾಕಮ್ಮ. ಇದು ಸಾಕಮ್ಮಳ ದಿನಚರಿ. ಇಷ್ಟರಲ್ಲೇ ಮತ್ತೆ, ಆ ಮೊಮ್ಮಕ್ಕಳನ್ನು ರೆಡಿ ಮಾಡಿಸಿ ಶಾಲೆಗೆ ತಂದು ಬಿಡುವುದು ಇದ್ದಿದ್ದೇ ಇದ್ದಿದ್ದು.
ರಾಜಿ ಸಾಧಾರಣ ವಿದ್ಯಾರ್ಥಿ. ಬೀರಾ ಬಹಳ ಬುದ್ಧಿವಂತ. ಶಾಲೆಯಲ್ಲಿ ಎಲ್ಲರಿಗಿಂತ ಮುಂದು. ಅಂದಿನ ಕೆಲಸವನ್ನು ಅಂದೇ ಮುಗಿಸಿ ಅಜ್ಜಿಯ ಕೆಲಸಕ್ಕೆ ಕೈ ಜೋಡಿಸುತ್ತಿದ್ದ. ಅವನಿಗೆ ಬದುಕನ್ನು ಹತ್ತಿರದಿಂದ ನೋಡಿದ ಅಜ್ಜಿಯ ಪ್ರಭಾವ ಬೀರಿತ್ತು ಎಂದರೆ ತಪ್ಪಾಗಲಾರದು. ಒಂದು ದಿನ ಸಾಕಮ್ಮ ತಡವಾಗಿ ರಾಜಿ ಮತ್ತು ಬೀರಾ ಇಬ್ಬರನ್ನು ಕರೆದುಕೊಂಡು ಶಾಲೆಯತ್ತ ಬಂದಳು. ಆಗಲೇ ಗುರುಗಳು ಶಾಲೆಗೆ ಬಂದಿದ್ದರು. ತಲೆಯ ಮೇಲೆ ಸೆರಗ ಹೊತ್ತ ಸಾಕಮ್ಮ ಗುರುಗಳನ್ನು ನೋಡಿದ ತಕ್ಷಣ ಹಾಕಿದ್ದ ಚಪ್ಪಲಿಗಳನ್ನು ಬಿಟ್ಟು ಎರಡು ಕೈ ಮೇಲೆತ್ತಿ ನಮಸ್ಕರಿಸಿದಳು. ಗುರುಗಳಿಗೆ ಭಾವ ತುಂಬಿ ಬಂದಿತು. ‘ಬಾ ಸಾಕಮ್ಮ, ಹೇಗಿದ್ದಿಯಾ? ಎಂದರು ಗುರುಗಳು. ‘ಏನ್ ಹೇಳೋದ ಸರ, ನಮ್ಮ ಸತ್ಯವ್ವ ಈ ಎರಡು ಮಕ್ಕ್ಳನ್ನ ನನ್ನ ಉಡ್ಯಾಗ ಹಾಕಿ ಹೋಗ್ಯಾಳ, ದಿನಾ ಚಿಂತಿ ಕಟಿಗಿ ಹುಳಾ ಕಡದಂಗ ಆಕ್ಕತಿ. ಒಮ್ಮೊಮ್ಮೆ ತಲಿ ನಡೆಂಗಿಲ್ಲ ರೀ, ಈಗ ಇವುಕ್ಕ ನೀವ ತಂದಿ-ತಾಯಿ’ ಎಂದು ಅಳುವುದಕ್ಕೆ ಶುರು ಮಾಡಿದಳು. ಆಗ ಗುರುಗಳ ಕಣ್ಣಾಲಿಗಳು ತುಂಬಿ ಕಂಠ ಬೀಗಿದು ಬಂದಿತು. ಅಜ್ಜಿಗೆ ಗೊತ್ತಾಗದ ಹಾಗೆ ಪ್ಯಾಂಟಿನಲ್ಲಿದ್ದ ಕಚಿ೯ಫು ತೆಗೆದು ಮೆಲ್ಲನೆ ಒದ್ದೆಗಣ್ಣನ್ನು ಒರೆಸುತ್ತಾ, ‘ಸಮಾಧಾನ ಸಾಕಮ್ಮ, ಎಲ್ಲದಕ್ಕೂ ದೇವ್ರು ಅದಾನ. ನೀನು ಇಷ್ಟ ವಷ೯ ಹೊತ್ತು ತಂದಿ. ಇನ್ನೊಂದು ಸ್ವಲ್ಪ ವಷ೯ ಆದ್ರ ಹುಡ್ರು ಕೈಗೆ ಬತಾ೯ವು. ಅತ್ತಾಗ ಏನು ಚಿಂತಿ ಇಲ್ಲ ಬಿಡು’ ಎಂದರು ಗುರುಗಳು. ಅಷ್ಟರಲ್ಲಿ ಸಾಕಮ್ಮ ಗುರುಗಳಿಗೆ ‘ಸೂಯಾ೯ ನೆತ್ತಿ ಮ್ಯಾಗ ಬಂದಾನ ಸರ, ನಾನು ಕುರಿ ಮೇಸಾಕ ಹೋಗಬೇಕು, ಮತ್ತ ಬತಿ೯ನಿ ಸಾಲಿ ಕಡೆ’ ಎಂದು ಅವಸರದಲ್ಲಿ ಕಾಲ್ಕಿತ್ತಳು.
ಭಾರವಾದ ಹೆಜ್ಜೆ ಹಾಕುತ್ತಾ ತರಗತಿಗೆ ಬಂದ ಗುರುಗಳಿಗೆ ಆ ದಿನ ವಿದ್ಯಾರ್ಥಿಗಳಿಗೆ ಏನೂ ಹೇಳಲು ಮನಸ್ಸು ತೋಚಲಿಲ್ಲ. ರಾಜಿ ಮತ್ತು ಬೀರಾ ಇಬ್ಬರನ್ನು ಹತ್ತಿರದಲ್ಲಿ ಕರೆದು ಪ್ರೀತಿಯಿಂದ ಮಾತನಾಡಿಸಿ ಹೇಳಿದರು. ‘ನೀವು ನಿಮ್ಮ ಅಜ್ಜಿ ಕಷ್ಟ ಪಡೋದು ಕಣ್ಣಾರೆ ನೋಡ್ತಿರಿ, ಈ ಕಷ್ಟ ದೂರಾಗಿ ಹಣ್ಣಾದ ಜೀವ ನಿಟ್ಟುಸಿರ ಬಿಡಬೇಕ ಅಂದ್ರ, ಓದಿ, ನಿಮ್ಮ ಕಾಲಮೇಲೆ ನೀವು ನಿಂತ್ಕೊಬೇಕು’ ಎಂದು ಸಮಾಧಾನದಿಂದ ತಿಳಿಸಿ ಹೇಳಿದರು. ಗುರುಗಳ ಮಾತುಗಳನ್ನು ಗಂಭೀರವಾಗಿ ತೆಗೆದುಕೊಂಡ ರಾಜಿ ಮತ್ತು ಬೀರಾ ಪ್ರತಿದಿನ ಮನೆಯ ಕೆಲಸಗಳೊಟ್ಟಿಗೆ, ಶಾಲೆಯ ಅಭ್ಯಾಸಗಳನ್ನು ನಿಷ್ಠೆಯಿಂದ ಮಾಡುತ್ತಾ ಸಾಗಿದರು. ದಿನ ಕಳೆದು ಹೋದವು. ಬೀರಾ ಪಿ. ಯು. ಸಿ. ತೇಗ೯ಡೆ ಹೊಂದಿ ಮೊದಲ ಯತ್ನದಲ್ಲಿ ಪರೀಕ್ಷೆ ಪಾಸು ಮಾಡಿ ಸೈನಿಕನಾಗಿ ಆಯ್ಕೆಯಾದ. ಇತ್ತ ಪದವಿ ಮುಗಿಸಿದ್ದ ರಾಜಿ ಖಾಸಗಿ ಬ್ಯಾಂಕೊಂದರಲ್ಲಿ ಉದ್ಯೋಗಿಯಾದಳು.
****
ತೀರಾ ಹಣ್ಣಾಗಿದ್ದ ಸಾಕಮ್ಮಳ ಕಣ್ಣು ಈಗ ಮಂಜಾಗಿವೆ. ಕಿವಿಗಳು, ಕೇಳುವ ಸಾಮರ್ಥ್ಯ ಕಳೆದುಕೊಂಡಿವೆ. ಬೆನ್ನು ಬಾಗಿ ಕೈಗೆ ಕೋಲು ಬಂದಿದೆ. ಹಾಸಿಗೆಯಲ್ಲಿ ದಿನ ದೂಡುವ ಸಾಕಮ್ಮ ಉಸಿರುತ್ತಿದ್ದದ್ದು ಎರಡೇ ಹೆಸರು. ಒಂದು ರಾಜಿ, ಮತ್ತೊಂದು ಬೀರಾ. ಮೊಮ್ಮಕ್ಕಳು ತಮ್ಮ ಕಾಲಮೇಲೆ ನಿಂತಿದ್ದನ್ನು ಕೇಳಿ ಸಾಕಮ್ಮಳ ಸಂತಸಕ್ಕೆ ಪಾರವೇ ಇಲ್ಲ. ಈಗ ಅವಳಿಗೆ ‘ಆಕಾಶ ಮೂರೇ ಗೇಣು’. ‘ಶಿವ ಶಿವಾ, ಈ ದ್ಯಾವ್ರು ಅನಾಥ ಮಕ್ಕ್ಳನ ಕೈ ಬಿಡ್ಲಿಲ್ಲ. ನೀನು ದೊಡ್ಡವಾ ಪಾ. ಮುಂದಿನ ಜನ್ಮ ಅಂತ ಇದ್ರ ನಿನ್ನ ಕಾಲಡಿ ಸೇವಾ ಮಾಡಿ ಋಣಾ ತಿರಸ್ತಿನಿ. ನಾನು ಹೊಟ್ಟಿ ಬಟ್ಟಿ ಕಟ್ಟಿ ದುಡಿದಿದ್ದು ಸಾಥ೯ಕ ಆತು’ ಎಂದು ನಿಟ್ಟುಸಿರು ಚೆಲ್ಲಿ ಸಾಕಮ್ಮ ಕಣ್ಣು ಮುಚ್ಚಿದಳು.
ಕಥೆಯ ನೀತಿ – “ಪೋಷಕರ ತ್ಯಾಗಕ್ಕೆ ಮಕ್ಕಳ ಸಾಧನೆಯೇ ತಕ್ಕ ಸಾಥ೯ಕತೆ”






0 Comments