ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪೃಥ್ವಿ ಸೂರಿ ಅಂಕಣ – ನಾಟ್ ಬಿಫೋರ್ ಮಿ (NOT BEFORE ME)

ಕಾನೂನು ಲೋಕದ ಗಂಭೀರ ವಾತಾವರಣವನ್ನು ಹಾಸ್ಯ ಮತ್ತು ವ್ಯಂಗ್ಯ ಶೈಲಿಯಲ್ಲಿ ಸಾಮಾನ್ಯರಿಗೂ ತಲುಪಿಸುವಲ್ಲಿ ಮುಂಬೈನ ಖ್ಯಾತ ವಕೀಲ ರಾಜು ಜೆ಼ಡ್. ಮೊರೆ. ‘ದಿ ಲೀಫ್‌ಲೆಟ್’ ವೆಬ್‌ಸೈಟ್‌ನ ಜನಪ್ರಿಯ ಅಂಕಣಗಳು ಹಾಗೂ ‘ದಿ ಲಾಕ್‌ಡೌನ್ ಲಾಯರ್’, ‘ಫನ್ ಇನ್ ಲಾ’ ಪುಸ್ತಕಗಳ ಮೂಲಕ ಇವರು ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ನ್ಯಾಯಾಂಗ ನಿಂದನೆಗೆ ಒಳಗಾಗದಂತೆ, ವ್ಯವಸ್ಥೆಯ ಲೋಪದೋಷಗಳನ್ನು ಲಘು ಹಾಸ್ಯದಲ್ಲಿ ವಿಮರ್ಶಿಸುವ ಇವರ ಚುರುಕಾದ ಬರವಣಿಗೆ ಕಾನೂನು ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಗಮನ ಸೆಳೆದಿದೆ.

ಕೋರ್ಟಿನ ಗಂಭೀರ ವಾದ-ಪ್ರತಿವಾದಗಳ ನಡುವೆಯೂ ಅಕ್ಷರಗಳನ್ನೇ ಆತ್ಮಬಲವಾಗಿಸಿಕೊಂಡಿರುವ ಅಪರೂಪದ ಪ್ರತಿಭೆ ಪೃಥ್ವಿ ಸೂರಿ. ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಬೆಳೆದು, ಹಾಸನದಲ್ಲಿ ಕಾನೂನು ಪದವಿ ಪಡೆದ ಇವರು, ‘ಜನಮಿತ್ರ’ ಪತ್ರಿಕೆಯ ಮೂಲಕ ಅಕ್ಷರ ಫ಼್ಲೋಕಕ್ಕೆ ಕಾಲಿಟ್ಟರು. ಪ್ರಸ್ತುತ ಬೆಂಗಳೂರಿನ ಉಚ್ಚ ನ್ಯಾಯಾಲಯದ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಬಾಂಬೆ ಉಚ್ಚ ನ್ಯಾಯಾಲಯದ ವಕೀಲರು, ರಾಜು ಜೆ಼ಡ್. ಮೋರೆ ಅವರ ಇಂಗ್ಲಿಷ್ ನ Fun In Law ಘನ ನ್ಯಾಯಾಲಯದ ಲಘು ಹಾಸ್ಯ ಬರಹಗಳು

ಇನ್ನು ಮುಂದೆ ಕನ್ನಡಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯದ ವಕೀಲರಾದ ಪೃಥ್ವಿ ಸೂರಿ ಅವರಿಂದ ಅಂಕಣವಾಗಿ ಬರಲಿದೆ.

ಮೂಲ – ರಾಜು ಜೆ಼ಡ್. ಮೊರೆ

ಕನ್ನಡಕ್ಕೆ – ಪೃಥ್ವಿ ಸೂರಿ

ಅಂಕಣ – ೧

ಇದು ನಾಲ್ಕು ಆತ್ಮೀಯ ಸ್ನೇಹಿತರ ಕತೆ. ಅವರೆಲ್ಲರೂ ಅತ್ಯಂತ ಗೌರವಾನ್ವಿತ ಹಿರಿಯ ವಕೀಲರಾಗಿದ್ದರು. ಬಾಂಬೆ ಹೈಕೋರ್ಟಿನಲ್ಲಿ ಭಾರಿ ಬೇಡಿಕೆಯ ವೃತ್ತಿಜೀವನ‌ವನ್ನು ಹೊಂದಿದ್ದರು.

ಅವರಲ್ಲಿ ಒಬ್ಬರು ‘ರೆಂಟ್ ಆ್ಯಕ್ಟ್’ (ಬಾಡಿಗೆ ಕಾಯ್ದೆ)ನ ತಜ್ಞರಾಗಿದ್ದರು. ಇನ್ನೊಬ್ಬರು ಅಡ್ವೊಕೇಟ್ ಜನರಲ್ ಆದರು. ಮತ್ತೊಬ್ಬರು ಸಾಮಾಜಿಕ ಕಳಕಳಿಯುಳ್ಳ ಹೋರಾಟಗಾರ ವಕೀಲರಾಗಿದ್ದರು ಮತ್ತು ನಾಲ್ಕನೆಯವರು ಗಂಭೀರ ಧ್ವನಿಯ ‘ಪದಾಂಕಿತ (ಡೆಸಿಗ್ನೇಟೆಡ್) ಹಿರಿಯ ವಕೀಲರಾಗಿದ್ದರು.

ಈ ನಾಲ್ಕನೆಯ ಹಿರಿಯ ವಕೀಲರು ದೈಹಿಕ ಆರೋಗ್ಯ, ಯೋಗ ಮತ್ತು ಅಧ್ಯಾತ್ಮದಲ್ಲಿ ಆಸಕ್ತಿ ಹೊಂದಿದ್ದರು. ಇವರು ನ್ಯಾಯಾಮೂರ್ತಿಗಳಾಗಿ ಪದೋನ್ನತಿ ಪಡೆಯುವ ಪ್ರಸ್ತಾಪವನ್ನು ಒಪ್ಪಿಕೊಂಡಾಗ, ಇವರ ಮೂವರು ಗೆಳೆಯರಿಗೆ ತುಂಬ ಆಶ್ಚರ್ಯವಾಯಿತು. ಏಕೆಂದರೆ ಆ ಹುದ್ದೆಯಲ್ಲಿ ಅವರಿಗೆ ಹೆಚ್ಚು ಕಾಲ ಸೇವೆಯ ಅವಕಾಶ ಸಿಗುವುದಿಲ್ಲ ಎಂಬುದೂ ಮತ್ತು ಬಾರ್ ನಲ್ಲಿ ತಮಗಿಂತ ಕಿರಿಯ ವಕೀಲರಾಗಿದ್ದ ಅನೇಕರು ಪದೋನ್ನತಿ ಪಡೆದು ನ್ಯಾಯಮೂರ್ತಿಗಳಾಗಿದ್ದರೆ. ಈಗ ಸೇವೆಯಲ್ಲಿ ಅವರಿಗಿಂತ ಕಿರಿಯರಾಗಬೇಕಾಗುತ್ತದೆ ಎಂಬುದು ಅವರ ಆಶ್ಚರ್ಯ ಮತ್ತು ಕಳವಳವಾಗಿತ್ತು.

ಆದರೆ, ಅವರ ಈ ನಿರ್ಧಾರ ಯಾರಿಗೂ ಅರ್ಥವಾಗಲಿಲ್ಲ.

ಶೀಘ್ರದಲ್ಲೇ ಅವರ ಹೆಸರು ಅನುಮೋದನೆಗೊಂಡು, ಪ್ರಮಾಣವಚನವನ್ನೂ ಸ್ವೀಕರಿಸಿದರು. ವಕೀಲ ವೃತ್ತಿಯಲ್ಲಿ ಅವರಿಗಿದ್ದ ಹಿರಿತನವನ್ನು ಗಮನಿಸಿ ಹೆಚ್ಚಾಗಿ ಅವರಿಗೆ ಏಕ ಸದಸ್ಯ ಪೀಠದ ಜವಾಬ್ದಾರಿಗಳನ್ನು ನೀಡಲಾಗುತ್ತಿತ್ತು.

ಅವರು ವಕೀಲರ ಅಚ್ಚುಮೆಚ್ಚಿನ ನ್ಯಾಯಮೂರ್ತಿಗಳಾದರು. ಏಕೆಂದರೆ ಅವರು ಯಾವತ್ತೂ ವಕೀಲರ ಗೈರು ಹಾಜರಾತಿಯಲ್ಲಿ ಅವರ ವಿರುದ್ಧವಾಗಿ ಯಾವುದೇ ಆದೇಶವನ್ನು ಬರೆಯುತ್ತಿರಲ್ಲಿಲ್ಲ ಮತ್ತು ಪ್ರಕರಣಗಳನ್ನು ವಜಾಗೊಳಿಸುತ್ತಿರಲಿಲ್ಲ. ಪ್ರಕರಣಕ್ಕೆ ಒಳ್ಳೆಯ ಸಿದ್ಧತೆ ನಡೆಸಿ ವಾದ ಮಾಡಬೇಕೆಂದು ಹಂಬಲಿಸುವ ಜೂನಿಯರ್ ವಕೀಲರಿಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುತ್ತಿದ್ದರು.

ಹೀಗಿರುವಾಗ, ನ್ಯಾಯಮೂರ್ತಿಗಳು ವಕೀಲರಾಗಿದ್ದ ಸಂದರ್ಭದಲ್ಲಿ ತಮ್ಮ ಆಫೀಸ್ ನ ಜೂನಿಯರ್ ಗಳು, ತಮ್ಮ ಸೀನಿಯರ್‌ ಪೀಠದಲ್ಲಿದ್ದಾಗ ನೀಡುತ್ತಿದ್ದ ಉದಾರತೆಯ ಲಾಭವನ್ನು ಪಡೆಯಲು ಪ್ರಾರಂಭಿಸಿದರು.

ಈಗಲೂ ಇರುವ ಸಾಮಾನ್ಯ ಪದ್ದತಿಯೆಂದರೆ, ಒಬ್ಬ ಹಿರಿಯ ವಕೀಲರು ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದ ಕೂಡಲೇ, ನ್ಯಾಯಮೂರ್ತಿಯಾಗುವ ಮೊದಲು ತಮ್ಮ ಬಳಿ ಇದ್ದ ಜೂನಿಯರ್ ವಕೀಲರ ಪ್ರಕರಣಗಳನ್ನು ತಮ್ಮ ಪೀಠದ ಮುಂದೆ ಪಟ್ಟಿ ಮಾಡದಂತೆ ರಿಜಿಸ್ಟ್ರಿಗೆ ಸೂಚನೆ ಕೊಡುವುದಾಗಿದೆ.

ಆದರೆ, ಈ ನ್ಯಾಯಮೂರ್ತಿಗಳು ಅಂತಹ ಯಾವುದೇ ಸೂಚನೆಯನ್ನು ನೀಡಿರಲಿಲ್ಲ. ಅವರ ಇಬ್ಬರು ಭರವಸೆಯ ಜೂನಿಯರ್‌ಗಳಿಗೆ ಅವರ ಪೀಠದ ಮುಂದೆ ಬಹುತೇಕ ನೂರಕ್ಕೆ ನೂರರಷ್ಟು ಯಶಸ್ಸು ಸಿಗತೊಡಗಿತು

ಇದನ್ನೆಲ್ಲ ಕಂಡ ಪ್ರಸಿದ್ಧ ಹಿರಿಯ ವಕೀಲರೂ ಸಹ ಈ ನ್ಯಾಯಮೂರ್ತಿಗಳ ಎದುರು ತಮ್ಮ ಪ್ರಕರಣಗಳನ್ನು ವಾದಿಸಲು ಆ ಇಬ್ಬರು ಜೂನಿಯರ್ ವಕೀಲರನ್ನೇ ನೇಮಿಸಿಕೊಳ್ಳಲು ಶುರುಮಾಡಿದರು. ಅದರ ಫಲಿತಾಂಶವೂ ಅದ್ಭುತವಾಗಿತ್ತು.

ಶೀಘ್ರದಲ್ಲೇ, ಈ ಇಬ್ಬರು ಜೂನಿಯರ್ ಗಳು ತಮ್ಮ ಹಿಂದಿನ ಸೀನಿಯರ್ ಅವರ ಪೀಠದ ಖಾಯಂ ಸದಸ್ಯರೆನ್ನುವಷ್ಟರ ಮಟ್ಟಿಗೆ ವಕಾಲತ್ತನ್ನು ನಿರ್ವಹಿಸುತ್ತಿದ್ದರು. ಬಹುತೇಕ ಎಲ್ಲಾ ಪ್ರಕರಣಗಳಲ್ಲಿ ಒಂದಲ್ಲ‌ ಒಂದು ಕಡೆಯಲ್ಲಿ ಇವರಿಬ್ಬರೇ ಕಾಣಿಸುತ್ತಿದ್ದರು.

ಸಹಜವಾಗಿಯೇ ಈ ಎಲ್ಲ ಪ್ರಸಂಗಗಳು ವಕೀಲರ ಅಸಮಾಧಾನಕ್ಕೂ ಕಾರಣವಾಯಿತು. ಅಲ್ಲಲ್ಲಿ ವಕೀಲರ ಸಮೂಹದ ಗುಸುಗುಸು ಚರ್ಚೆ ಶುರುವಾಯಿತು. ಅಂತಿಮವಾಗಿ ಒಂದು ವಕೀಲರ ತಂಡವು ಈ ನ್ಯಾಯಮೂರ್ತಿಗಳ ಆಪ್ತ ಸ್ನೇಹಿತರಾಗಿದ್ದ ಆ ಮೂವರು ಹಿರಿಯ ವಕೀಲರನ್ನು ಭೇಟಿ ಮಾಡಿ ತಮ್ಮ ಅಹವಾಲನ್ನು ಸಲ್ಲಿಸಲು ನಿರ್ಧರಿಸಿದರು.

ಈ ಮೂವರು ಹಿರಿಯ ವಕೀಲರನ್ನು ಬಾರ್‌ನ ‘ಆತ್ಮಸಾಕ್ಷಿಯ ರಕ್ಷಕರು’ ಎಂದೇ ಪರಿಗಣಿಸಲಾಗಿತ್ತು ಹಾಗು ಎಲ್ಲ ನ್ಯಾಯಮೂರ್ತಿಗಳು ಇವರನ್ನು ಬಹಳ ಗೌರವದಿಂದ ಕಾಣುತ್ತಿದ್ದರು.

ತಮ್ಮ ನ್ಯಾಯಮೂರ್ತಿ ಸ್ನೇಹಿತ ಮಾಡುತ್ತಿದ್ದ ಬಹಿರಂಗ ಪಕ್ಷಪಾತದ ಆರೋಪಗಳನ್ನು ತಾಳ್ಮೆಯಿಂದ ಕೇಳಿದ ನಂತರ, ಅವರು ವಿಚಾರಣೆ ನಡೆಸಿದರು. ಈ ನ್ಯಾಯಮೂರ್ತಿಗಳ ಎದುರಿರುವ ಶೇಕಡಾ 90 ರಷ್ಟು ಪ್ರಕರಣಗಳಲ್ಲಿ ಅವರ ಸ್ವಂತ ಜೂನಿಯರ್‌ಗಳೇ ಹಾಜರಾಗುತ್ತಿದ್ದರೆ ಎನ್ನುವುದೂ ಮತ್ತು ಬಹುತೇಕ ಎಲ್ಲಾ ಪ್ರಕರಣಗಳಲ್ಲಿ ಅವರಿಗೆ ಅನುಕೂಲಕರ ಆದೇಶಗಳು ಸಿಗುತ್ತಿದೆ ಎಂಬುದು ಸತ್ಯ ಎಂದು ಅವರಿಗೆ ತಿಳಿಯಿತು.

ಆತಂಕಕ್ಕೊಳಗಾಗಿದ್ದ ವಕೀಲರಿಗೆ ಭರವಸೆ ನೀಡಿ, ತಾವು ವೈಯಕ್ತಿಕವಾಗಿ ನ್ಯಾಯಮೂರ್ತಿ ಸ್ನೇಹಿತನನ್ನು ಭೇಟಿಮಾಡಿ ಈ ಕಳವಳದ ಬಗ್ಗೆ ಪ್ರಸ್ತಾಪಿಸುವುದಾಗಿ ಹೇಳಿದಾರು. ನಮ್ಮ ಭೇಟಿಯ ನಂತರ ನ್ಯಾಯಮೂರ್ತಿಗಳು ‘ನಾಟ್ ಬಿಫೋರ್ ಮೀ’ ಸಂಪ್ರದಾಯವನ್ನು ಅನುಸರಿಸುತ್ತಾರೆ ಎಂಬ ವಿಶ್ವಾಸ ತಮಗಿದೆಯೆಂದೂ ಮತ್ತು ಸಮಸ್ಯೆ ಇತ್ಯರ್ಥವಾಗುತ್ತದೆ ಎಂದೂ ಹೇಳಿದರು.

ತಮ್ಮ ಅಹವಾಲನ್ನು ತಿಳಿಸಿದ ಬಾರ್ ನ ಸದಸ್ಯರು ನೆಮ್ಮದಿಯಿಂದ ಮನೆಗೆ ಹೋದರು. ಇನ್ನು ಉಳಿದದ್ದು ಆ ಇಬ್ಬರು ಜೂನಿಯರ್ ವಕೀಲರ ವಿಷಯದಲ್ಲಿ ನ್ಯಾಯಮೂರ್ತಿಗಳು ‘ನಾಟ್ ಬಿಫೋರ್ ಮೀ’ ಎಂಬ ಆದೇಶಕ್ಕಾಗಿ ಕಾಯುವುದಷ್ಟೇ ಆಗಿತ್ತು.

ಈಗ ದೃಶ್ಯ ನ್ಯಾಯಮೂರ್ತಿಗಳ ಕಚೇರಿಗೆ ಬದಲಾಯಿತು.

ನ್ಯಾಯಮೂರ್ತಿಗಳ ಆಪ್ತ ಸ್ನೇಹಿತರಾದ ಆ ಮೂವರು ಹಿರಿಯ ವಕೀಲರು, ಟೀ ಮತ್ತು ಬಿಸ್ಕತ್ ಸೇವಿಸುತ್ತಾ ನ್ಯಾಯಮೂರ್ತಿಗಳಿಗೆ ಈ ‘ಅಹವಾಲಿನ’ ಬಗ್ಗೆ ತಿಳಿಸಿದರು.

ನ್ಯಾಯಮೂರ್ತಿಗಳು: “ನಾನು ಒಬ್ಬ ಕೆಟ್ಟ ನ್ಯಾಯಾಧೀಶ ಎಂದು ನಿಮಗನಿಸುತ್ತಿದೆಯೇ?”
ಹಿರಿಯ ವಕೀಲರು: “ಖಂಡಿತವಾಗಿಯೂ ಇಲ್ಲ”
ನ್ಯಾಯಮೂರ್ತಿಗಳು: “ನಾನು ಜೂನಿಯರ್‌ಗಳ ನಡುವೆ ತಾರತಮ್ಯ ಮಾಡಬೇಕೆ ಅಥವಾ ಪ್ರಕರಣದ ಮೆರಿಟ್ ಆಧಾರದಲ್ಲಿ ತೀರ್ಪು ಕೊಡಬೇಕೆ?”
ಹಿರಿಯ ವಕೀಲರು: “ಖಂಡಿತ, ಮೆರಿಟ್ ಆಧಾರದಲ್ಲಿ”
ನ್ಯಾಯಮೂರ್ತಿಗಳು: “ನನ್ನ ಹಿಂದಿನ ಜೂನಿಯರ್‌ಗಳಿಗೆ ಸಾಮರ್ಥ್ಯ ಇಲ್ಲವೇ?”
ಹಿರಿಯ ವಕೀಲರು: “ಅವರು ಸಮರ್ಥರಿದ್ದಾರೆ.”
ನ್ಯಾಯಮೂರ್ತಿಗಳು: “ಹಾಗಾದರೆ ಒಬ್ಬ ಉತ್ತಮ ನ್ಯಾಯಾಧೀಶರ ಮುಂದೆ ತಮ್ಮ ಪ್ರಕರಣಗಳನ್ನು ಗುಣಮಟ್ಟದ ಆಧಾರದ ಮೇಲೆ ವಾದಿಸುವ ಅವಕಾಶವನ್ನು ಅವರೇಕೆ ಕಳೆದುಕೊಳ್ಳಬೇಕು?”

ಸ್ನೇಹಿತರಿಗೆ ಏನು ಹೇಳಬೇಕೆಂದು ತಿಳಿಯಲಿಲ್ಲ. ಅವರು ‘ಸಾರ್ವಜನಿಕ ಅಭಿಪ್ರಾಯ’ದ ಬಗ್ಗೆ ಏನನ್ನೋ ಗೊಣಗಿದರು.

ಸಾಮಾಜಿಕ‌ ಕಳಕಳಿಯ ಹಿರಿಯ ವಕೀಲರು ಗಂಭೀರವಾಗಿ “ನ್ಯಾಯವು ಕೇವಲ ದೊರಕುವುದಷ್ಟೆ ಅಲ್ಲ, ನ್ಯಾಯ ದೊರಕುತ್ತಿದೆ ಎಂಬುದು ಎಲ್ಲರಿಗೂ ಕಾಣಿಸಬೇಕು!” ಎಂದರು.

ಈ ಮೂವರ ಮಾತುಗಳನ್ನು ಕೇಳಿದ ನಂತರ ನ್ಯಾಯಮೂರ್ತಿಗಳು ಅಂತಿಮವಾಗಿ “ನಾನೀಗ ಏನು ಮಾಡಬೇಕೆಂದು ನೀವು ನಿರೀಕ್ಷಿಸುತ್ತೀರಿ?” ಎಂದರು.

ಹಿರಿಯರು: “ನೀವು ಆ ಉದಾತ್ತ ಸಂಪ್ರದಾಯವನ್ನು ಅನುಸರಿಸಿ ‘ನಾಟ್ ಬಿಫೋರ್ ಮೀ!’ ಎಂದು ಹೇಳಬೇಕು.”
ನ್ಯಾಯಮೂರ್ತಿಗಳು: “ನಿಮ್ಮಲ್ಲರಿಗೂ ಹಾಗೆ ಅನಿಸುವುದಾದರೆ ನಾನು ಹಾಗೆಯೆ ಮಾಡುತ್ತೇನೆ. ವೈಯಕ್ತಿಕವಾಗಿ ನನಗೆ ಇದರ ಅಗತ್ಯವಿದೆ ಎಂದು ಅನ್ನಿಸುತ್ತಿಲ್ಲ. ಆದರೆ, ನೀವು ನನ್ನ ಆತ್ಮೀಯ ಸ್ನೇಹಿತರು. ನಾನು ಪಕ್ಷಪಾತಿ ಎಂದು ನೀವು ಭಾವಿಸಿದ್ದಕ್ಕೆ ನನಗೆ ಬೇಸರವಿದೆ. ಏನೇ ಇರಲಿ, ನೀವು ಕೇಳಿದಂತೆ ನಾನು ಈಗಲೇ ಸೂಚನೆ ನೀಡುತ್ತೇನೆ.”

ಆ ಮೂವರು ಹಿರಿಯ ವಕೀಲರು ಚುನಾವಣೆಯಲ್ಲಿ ಗೆದ್ದ ರಾಜಕಾರಣಿಯಂತೆ ವಿಜೃಂಭಣೆಯಿಂದ ಬಾರ್ ಅಸೋಸಿಯೇಷನ್‌ಗೆ ಮರಳಿದರು.

“ನಾಳೆಯಿಂದ ‘ನಾಟ್ ಬಿಫೋರ್ ಮೀ’ ಜಾರಿಗೆ ಬರುತ್ತದೆ.” ಎಂದು ವಿಜಯೋತ್ಸಾಹದಿಂದ ಘೋಷಿಸಿದರು. ಎಲ್ಲರೂ ಸಂಭ್ರಮಿಸಿದರು. ಕೆಲವರು ಚಪ್ಪಾಳೆಯನ್ನೂ ತಟ್ಟಿ ಖುಷಿ ವ್ಯಕ್ತಪಡಿಸಿದರು.

ಸ್ನೇಹಿತರು ಹೊರಟು ಹೋದ ನಂತರ, ನ್ಯಾಯಮೂರ್ತಿಗಳು ತಮ್ಮ ಆಪ್ತ ಸಹಾಯಕರಿಗೆ, ರಿಜಿಸ್ಟ್ರಿಯನ್ನು ಸಂಪರ್ಕಿಸಿ – ತಮ್ಮನ್ನು ಭೇಟಿಯಾಗಲು ಬಂದಿದ್ದ ಆ ಮೂವರು ಸೀನಿಯರ್‌ಗಳ ಯಾವುದೇ ಪ್ರಕರಣವನ್ನು ಇನ್ನು ಮುಂದೆ ತಮ್ಮ ಪೀಠದ ಮುಂದೆ ಯಾವುದೇ ಹಂತದಲ್ಲಿದ್ದರೂ ಪಟ್ಟಿ ಮಾಡದಂತೆ ಸೂಚಿಸಿ ಎಂದು ಹೇಳಿದರು.

ಮರುದಿನ, ನ್ಯಾಯಮೂರ್ತಿಗಳ ನಿಷ್ಪಕ್ಷಪಾತದ ಬಗ್ಗೆ ಸಂಶಯಪಟ್ಟಿದ್ದಕ್ಕಾಗಿ ಈ ಮೂವರು ಗಣ್ಯ ಸೀನಿಯರ್ ಗಳನ್ನು ‘ನಾಟ್ ಬಿಫೋರ್ ಮೀ’ ಎಂದು ಘೋಷಿಸಿದ ನೋಟಿಸ್ ಹೊರಬಿತ್ತು.

ಆ ಹಿರಿಯ ವಕೀಲರು ಹಾಜರಾಗಲು ಸಾಧ್ಯವಾಗದಿದ್ದ ಪ್ರಕರಣಗಳ ಫೈಲ್‌ಗಳನ್ನು ಇತರ ವಕೀಲರಿಗೆ ವರ್ಗಾಯಿಸಬೇಕಾಯಿತು.

ನೀವು ಈಗಾಗಲೇ ಊಹಿಸಿರುವಂತೆಯೇ, ಆ ಹೆಚ್ಚಿನ ಫೈಲ್‌ಗಳು ಅದೇ ನ್ಯಾಯಮೂರ್ತಿಗಳ ಜೂನಿಯರ್‌ಗಳಿಗೆ ಹೋದವು!!
ಕಕ್ಷಿದಾರರು ತುಂಬ ಸಂತೋಷಪಟ್ಟರು.

ಈಗ ನ್ಯಾಯಮೂರ್ತಿಗಳು ನಮ್ಮೊಂದಿಗಿಲ್ಲ. ಅವರ ಗೆಳಯರಾಗಿದ್ದ ಆ ಮೂವರು ಹಿರಿಯ ವಕೀಲರೂ ಕಾಲಕ್ರಮೇಣ ಇಲ್ಲವಾದರು. ಆದರೆ, ಅವರ ಜೂನಿಯರ್‌ಗಳು ಸ್ವತಃ ಈಗ ‘ಸೀನಿಯರ್’ಗಳಾಗಿದ್ದಾರೆ.

ಅವರ ವೃತ್ತಿಜೀವನ ಈಗಲೂ ಭರ್ಜರಿಯಾಗಿ ಸಾಗುತ್ತಿದೆ.

‍ಲೇಖಕರು Admin

19 September, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading