-ಪ್ರೊ.ಎಂ.ಎಸ್. ವಿದ್ಯಾ
“Under every stone, lurks a Politician”
-Aristophanes
ಜಯಭೇರಿ ಬಾರಿಸುತ್ತಿರುವ ಕನ್ನಡ ಹವ್ಯಾಸಿ ರಂಗಭೂಮಿಯ ಜನಪ್ರಿಯ ರಾಜಕೀಯ ನಾಟಕ “ಮುಖ್ಯಮಂತ್ರಿ” ಈಗ 900ನೆಯ ಪ್ರದರ್ಶನ ಕಾಣುತ್ತಿರುವುದು ಸಂತಸದ ವಿಷಯ.
ಹವ್ಯಾಸಿ ರಂಗಭೂಮಿಯಲ್ಲಿ, ಅದೂ ಕನ್ನಡದಲ್ಲಿ ೧೦೦ ಪ್ರದರ್ಶನಗಳನ್ನು ಕಾಣುವುದೇ ದುಸ್ತರ ಎನ್ನುವ ಪರಿಸ್ಥಿತಿ ಇರುವಾಗ ಹಾಡು ನೃತ್ಯಗಳಿಲ್ಲದೆ ಕೇವಲ ತನ್ನ ಶಕ್ತ ಸಂಭಾಷಣೆಯ ಮತ್ತು ಅಭಿನಯದಿಂದ ೯೦೦ ಪ್ರದರ್ಶನಗಳನ್ನು ಮುಗಿಸಿ ಸಾವಿರ ಪ್ರದರ್ಶನಗಳತ್ತ ದಾಪುಗಾಲು ಹಾಕುತ್ತಿರುವುದು ಪ್ರಶಂಸನೀಯ ವಿಚಾರ.
೧೯೭೧ನೆಯ ಇಸವಿಯಲ್ಲಿ ಎ.ಪಿ.ಎಸ್ ಕಾಲೇಜಿನ ರಂಗಾಸಕ್ತ ಯುವಕರಿಂದ ‘ಕಲಾಗಂಗೋತ್ರಿ’ ತಂಡ ಪ್ರಾರಂಭವಾಯಿತು. ಬಹುಷಃ ಆ ತಂಡ ಪ್ರಾರಂಭಿಸಿದಾಗ ಐದು ದಶಕಗಳನ್ನು ಮೀರಿ ಅದು ಬೆಳೆಯುತ್ತದೆ ಎಂಬ ಯೋಚನೆ ಅವರಿಗಿತ್ತೋ ಇಲ್ಲವೋ! ಒಟ್ಟಿನಲ್ಲಿ ಕೇವಲ ಪಠ್ಯಕ್ಕೆ ಸೀಮಿತವಾಗದ ಅವರುಗಳ ಚಟುವಟಿಕೆಗಳು, ಬಿ.ವಿ.ರಾಜಾರಾಂ ಅವರ ನೇತೃತ್ವದಲ್ಲಿ ರಂಗಭೂಮಿಯ ಕಡೆಗೆ ಹೊರಳಿದ್ದು, ಕನ್ನಡ ರಂಗಭೂಮಿಗೆ ಸಂದ ಕೊಡುಗೆ ಎಂದೇ ಹೇಳಬಹುದು. ಹೀಗೆ ಹೇಳಿದಾಗ, ಕೆಲವರಿಗೆ ಬೆಂಗಳೂರಿನ ಒಂದು ತಂಡ ಬೆಳೆದರೆ ಇಡೀ ಕನ್ನಡ ರಂಗಭೂಮಿಗೆ ಅದು ಸಲ್ಲುತ್ತದೆಯೇ ಎಂಬ ಪ್ರಶ್ನೆ ಬರುವುದು ಸಹಜ. ಆದರೆ, ಬೆಂಗಳೂರಿನ೦ತಹ ನಗರ ಪ್ರದೇಶದಲ್ಲಿ, ರಂಗಭೂಮಿಯಿ೦ದ ಯಾವುದೇ ಆರ್ಥಿಕ ಸೌಲಭ್ಯ ಇರದೆ ಇರುವಂತಹ ಪರಿಸ್ಥಿತಿಯಲ್ಲಿ ಹಲವಾರು ಉತ್ತಮ ನಾಟಕಗಳನ್ನು ಉತ್ತಮ ನಾಟಕಕಾರರ, ನಿರ್ದೇಶಕರುಗಳ ಸಹಯೋಗದಲ್ಲಿ ಪ್ರದರ್ಶಸಿದ್ದು ಶ್ಲಾಘನೀಯ.
ಇಂತಹ ಸಮಯದಲ್ಲಿ ೧೯೮೦ ರಲ್ಲಿ, ರಂಜಿತ್ ಕಪೂರ್ ಅವರ ಹಿಂದಿಯ ‘ಮುಖ್ಯಮಂತ್ರಿ’ ನಾಟಕವನ್ನು ಕನ್ನಡಕ್ಕೆ ಅಳವಡಿಸುವ ಆಲೋಚನೆ ಅಂದಿನ ಯುವ ನಿರ್ದೇಶಕರುಗಳಾದ ಶ್ರೀ. ರಾಜಾರಾಂ ಮತ್ತು ಶ್ರೀ. ಚಂದ್ರು ಅವರಿಗೆ ಬಂದಿತು. ಅದು ಭಾಷಾತೀತ ಮತ್ತು ಕಾಲಾತೀತ ಆದ ರಾಜಕೀಯ ವಸ್ತು ಉಳ್ಳದ್ದು. ಬಹಳ ತೀಕ್ಷ್ಣ ವಸ್ತುವನ್ನು ಒಳಗೊಂಡಿದ್ದರಿ೦ದ, ಕಲಾಗಂಗೋತ್ರಿಯಿ೦ದ ಈ ಪ್ರಯೋಗ ಮಾಡಲೇಬೇಕೆಂಬ ತುಡಿತ ಇವರಲ್ಲಿ ಉಂಟಾಯಿತು. ಪ್ರಾಧ್ಯಾಪಕರಾಗಿದ್ದ ಶ್ರೀ. ಟಿ. ಎಸ್. ಲೋಹಿತಾಶ್ವ ಅವರು ಕನ್ನಡಕ್ಕೆ ಅನುವಾದಿಸಿದರು. ಅನೇಕ ಅಡ್ಡಿ ಆತಂಕಗಳನ್ನು ಎದುರಿಸಿ, ಹಲವಾರು ಬದಲಾವಣೆಗಳ ನಂತರ ಈ ನಾಟಕ ರಂಗವೇರಿತು.

‘ಮುಖ್ಯಮಂತ್ರಿ’ ನಾಟಕ ಕೃತಿಯನ್ನು ಓದಿದರೆ ಈಗ ಪ್ರದರ್ಶನವಾಗುತ್ತಿರುವ ನಾಟಕಕ್ಕೂ ಅದಕ್ಕೂ ಸಾಮ್ಯವೇ ಇಲ್ಲ. ಕ್ರಿಯೆಗಿಂತ ವಾಚ್ಯ ಪ್ರಾಮುಖ್ಯತೆ ಪಡೆದಿರುವ ಈ ನಾಟಕವನ್ನು ಅದರ ಮೂಲದ ಪ್ರಕಾರವೇ ರಂಗದ ಮೇಲೆ ತಂದಿದ್ದರೆ, ಪ್ರಾಯಶಃ ಇಷ್ಟು ಪ್ರದರ್ಶನ ಕಾಣುವುದಕ್ಕೆ ಸಾಧ್ಯವಾಗುತ್ತಿತ್ತೋ ಇಲ್ಲವೋ! ವಸ್ತು, ವಿಷಯ ಬದಲಾಗಿಲ್ಲ. ಆದರೆ ರಂಗ ಪ್ರಯೋಗ ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಬಂದಿದೆ. ಅದು ಸಹಜ ಕೂಡ. ಹೇಗೆ ರಾಜಕೀಯದಲ್ಲಿ ದಾಳಗಳು ಉರುಳಿ, ಸಚಿವರ ಸ್ಥಾನಗಳು ಪಲ್ಲಟಗೊಳ್ಳುತ್ತವೋ, ಅದೇ ರೀತಿ ‘ಮುಖ್ಯಮಂತ್ರಿ’ ನಾಟಕದಲ್ಲಿ ಬರುವ ಪಾತ್ರಗಳು ಸಹ. ಸಮಕಾಲೀನ ರಾಜಕೀಯದ ಪ್ರತಿಬಿಂಬವನ್ನು ನಾವು ಈ ನಾಟಕದಲ್ಲಿ ನೋಡಬಹುದು. ಈ ಸಂದರ್ಭದಲ್ಲಿ ಮಾಸ್ಟರ್ ಹಿರಣ್ಣಯ್ಯನವರ ನಾಟಕಗಳು ನೆನಪಿಗೆ ಬರುವುದು ಸಹಜ. ಅವರು ತಮ್ಮ ನಾಟಕಗಳಲ್ಲಿ ನೇರವಾಗಿ ವಿಧಾನಸೌಧದಲ್ಲಿ ನಡೆಯುವ ಸಂಗತಿಗಳನ್ನೇ ಅಂದ೦ದಿನ ವಾರ್ತಾ ಪತ್ರಿಕೆಗಳ ಸುದ್ದಿಯಂತೆ ಆ ದಿನವೇ ಪ್ರದರ್ಶನಗಳಲ್ಲಿ ಬಿತ್ತರಿಸುತ್ತಿದ್ದರು. ಹಾಗಾಗಿ ಅವು ಜನಪ್ರಿಯವಾದವು. ‘ಮುಖ್ಯಮಂತ್ರಿ’ ನಾಟಕದಲ್ಲಿ ಅಷ್ಟು ನೇರವಾದ ಟೀಕೆ, ಖಂಡನೆ ಇಲ್ಲದಿದ್ದರೂ, ರಾಜಕೀಯದಲ್ಲಿ ಆಗುವ ಬದಲಾವಣೆಗಳನ್ನು ನಾಟಕ ಬಿಂಬಿಸುತ್ತದೆ. ಅದು ಪ್ರೇಕ್ಷಕರನ್ನು ಸ್ಪಂದಿಸುವುದರಿ೦ದ ಈ ನಾಟಕವು ನಲವತ್ತಾರು ವರುಷಗಳಾದರೂ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡು, ನೋಡುಗರುಗಳನ್ನು ತನ್ನತ್ತ ಸೆಳೆಯುತ್ತಿದೆ.
ಕನ್ನಡ ಹವ್ಯಾಸಿ ರಂಗಭೂಮಿಯಲ್ಲಿ ಸಮಕಾಲೀನ ರಾಜಕೀಯಕ್ಕೆ ಸಂಬ೦ಧಿಸಿದ ನಾಟಕಗಳು ಬೆರಳೆಣಿಕೆಯಷ್ಟು ಮಾತ್ರ ಬಂದಿದ್ದು, ಅದರಲ್ಲಿ ‘ಮುಖ್ಯಮಂತ್ರಿ’ ಪ್ರಮುಖವಾದದ್ದು. ಈ ನಾಟಕವನ್ನು ಪ್ರಯೋಗಕ್ಕೆ ತೆಗೆದುಕೊಂಡಾಗ ಅನೇಕ ಅಡೆತಡೆಗಳು ಎದುರಾದವು. ಶ್ರೀ ಲೋಹಿತಾಶ್ವ ಅವರು ಮುಖ್ಯಮಂತ್ರಿ ಪಾತ್ರ ಮಾಡಬೇಕಾಗಿದ್ದು, ಅನಾರೋಗ್ಯಕ್ಕೆ ತುತ್ತಾಗಿದ್ದರಿಂದ ಪ್ರದರ್ಶನಕ್ಕೆ ಕೆಲವೇ ದಿನಗಳಿರುವಾಗ ಬಿ.ವಿ. ರಾಜಾರಾಂ ರವರ ಜೊತೆ ನಿರ್ದೇಶನ ಮಾಡಬೇಕಾದ ಚಂದ್ರು ಅವರು ಆ ಪಾತ್ರವನ್ನು ಮಾಡಬೇಕಾದ ಸಂದರ್ಭ ಬಂದಿತ್ತು. ಒಂದು ರೀತಿಯ ಹಿಂಜರಿಕೆಯಲ್ಲೇ ಆ ಪಾತ್ರದಲ್ಲಿ ತೊಡಗಿಕೊಂಡ ಚಂದ್ರು ಅವರು ನಂತರ ‘ಮುಖ್ಯಮಂತ್ರಿ ಚಂದ್ರು’ ಆಗಿ ಮನೆಮಾತಾಗಿದ್ದು ಜನಜನಿತ.
ಇಡೀ ನಾಟಕ ‘ಮುಖ್ಯಮಂತ್ರಿ’ ಪಾತ್ರದ ಮೇಲೆಯೆ ನಿಂತಿದೆ. ಅದಕ್ಕೆ ಪೂರಕವಾಗಿ ಇತರ ಪಾತ್ರಗಳು ಬಂದು ಹೋಗುತ್ತವೆ. ನಾಟಕ ಕೃತಿಯನ್ನು ಓದಿದರೆ ಹಲವಾರು ಪಾತ್ರಗಳು ಇವೆ. ಆದರೆ ಎಲ್ಲಾ ಪಾತ್ರಗಳನ್ನು ನಿರ್ದೇಶಕರು ರಂಗದ ಮೇಲೆ ತಂದಿಲ್ಲ, ಮುಖ್ಯವಾಹಿನಿಗೆ ಸೂಕ್ತವಾದುದನ್ನು ಮಾತ್ರ ಬಳಸಿಕೊಂಡಿದ್ದಾರೆ. ಇಡೀ ನಾಟಕ ಮಾತಿನ ಆಧಾರದ ಮೇಲೆಯೇ ನಿಂತಿದೆ. ‘ಮುಖ್ಯಮಂತ್ರಿ’ ಒಂದು ರೀತಿಯಲ್ಲಿ ಇಡೀ ನಾಟಕವನ್ನು ವ್ಯಾಪಿಸಿದ್ದಾನೆ. ಮೊದಲ ಪ್ರದರ್ಶನಕ್ಕೆ ಮುಂಚೆ, ಕೆಲವೇ ದಿನಗಳ ತಯಾರಿಯಲ್ಲಿ ಶ್ರೀ.ಹೆಚ್.ಎನ್. ಚಂದ್ರಶೇಖರ್ ಅವರು ಇಡೀ ನಾಟಕದ ಜವಾಬ್ದಾರಿಯನ್ನು ಹೊತ್ತು ಅದಕ್ಕೆ ಯಶಸ್ಸು ತಂದುಕೊಟ್ಟಿದ್ದು, ಅವರ ಪ್ರತಿಭೆಗೆ ಸಾಕ್ಷಿ. ಅದು ಕೇವಲ ನಾಟಕದ ಯಶಸ್ಸು ಮಾತ್ರವಲ್ಲ, ತಂಡದ ಯಶಸ್ಸೂ ಹೌದು. ಅಲ್ಲದೆ, ರಂಗ ಚರಿತ್ರೆಯಲ್ಲಿ ಒಬ್ಬ ಕಲಾವಿದನ ಹೆಸರು ಬದಲಾಗಿದ್ದಲ್ಲದೆ ಅದರ ಜೊತೆಗೆ ‘ಶಾಶ್ವತ ಪದವಿ’ ನೀಡಿದ ಪಾತ್ರ ಅದು. ಇಡೀ ರಂಗಕ್ಷೇತ್ರಕ್ಕೆ ಸಲ್ಲುವ ಗೌರವ. ನಾಟಕದಲ್ಲಿ ಮಾತ್ರ ಹೆಸರಿನ ಬದಲಾವಣೆ ಅಲ್ಲದೆ, ಸಿನಿಮಾ ರಾಜಕೀಯ ಕ್ಷೇತ್ರಗಳಲ್ಲಿ ಕಡೆಗೆ ಮತದಾರರ ಪಟ್ಟಿಯಲ್ಲಿ ಸಹ ‘ಮುಖ್ಯಮಂತ್ರಿ ಚಂದ್ರು’ ಎಂದೇ ಮರು ನಾಮಕರಣವಾಯ್ತು. ‘ಮಾಜಿ’ ಆಗಲು ಸಾಧ್ಯವೇ ಆಗದಂತಹ ಗೌರವ ಹಾಗೂ ಪದವಿ ಸಂದಿದ್ದು ಕಲಾವಿದನಿಗೆ ಅಷ್ಟೇ ಅಲ್ಲ, ಇಡೀ ತಂಡಕ್ಕೆ ಹೆಮ್ಮೆ ತರುವಂತಹ ಪ್ರಸಂಗ.
ಮತ್ತೊ೦ದು ದಾಖಲೆಯ ಸುದ್ದಿಯೆಂದರೆ, ಈ ೪೬ ವರುಷಗಳಲ್ಲಿ ‘ಮುಖ್ಯಮಂತ್ರಿ’ ಪಾತ್ರವನ್ನು ಈ ಒಬ್ಬರೇ ಕಲಾವಿದರು ಅಭಿನಯಿಸಿರುವುದು. ಮಧ್ಯೆ ಶಾಸಕರಾಗಿ, ಸಿನಿಮಾ ಕಲಾವಿದರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ, ಇತರ ಕೆಲಸಗಳ ಮಧ್ಯೆ ಮುಳುಗಿ ಹೋದಾಗಲೋ ಈ ನಾಟಕ ಎಂದರೆ ಬಿಡುವು ಮಾಡಿಕೊಂಡು ಪ್ರದರ್ಶನಕ್ಕೆ ಹಾಜರಾಗುತ್ತಿದ್ದ ಕಲಾವಿದರು ಇವರು. ಇವರಿಲ್ಲ ಎಂದರೆ ‘ಮುಖ್ಯಮಂತ್ರಿ’ ನಾಟಕ ಪ್ರದರ್ಶಿಸಲು ಅಸಾಧ್ಯ. ಇಡೀ ನಾಟಕವನ್ನು ತೂಗಿಸುವಂತಹ ಸಾಮರ್ಥ್ಯ ಇರುವುದು ಇವರೊಬ್ಬರಿಗೆ ಮಾತ್ರ.
ಅನುಭವದ ಪಾಲೊಳು ವಿಚಾರ ಮಂಥನವಾಗೆ|
ಜನಿಯಿಕು ಜ್ಞಾನನವನೀತನದೆ ಸುಖದಂ
ಗಿಣಿಯೋದು ಪುಸ್ತಕ ಜ್ಞಾನ – ನಿನ್ನನುಭವವವೇ|
ನಿನಗೆ ಧರುಮದ ದೀಪ – ಮಂಕುತಿಮ್ಮ||
ಎ೦ದು ಡಿ.ವಿ.ಜಿಯವರು ಕಗ್ಗದಲ್ಲಿ ಉಲ್ಲೇಖಿಸಿರುವಂತೆ, ಚಂದ್ರು ಅವರು ರಾಜಕೀಯ ಕ್ಷೇತ್ರದಲ್ಲಿ ಪಳಗಿದ ಮೇಲೆಂತೂ ಅವರ ಅನುಭವಗಳು “ಮುಖ್ಯಮಂತ್ರಿ” ನಾಟಕಕ್ಕೆ ದಾರಿದೀಪವಾಗಿ, ಪ್ರದರ್ಶನದ ಸಾರವನ್ನು ಹಿಗ್ಗಿಸಿತು.
‘ಮುಖ್ಯಮಂತ್ರಿ’ ಪಾತ್ರಕ್ಕೆ ಪೋಷಣೆ ನೀಡುವಂತಹ ಸುದರ್ಶನ ದುಬೆ, ದುರ್ಗಾಬಾಯಿ ದೇಸಾಯಿ, ಹರಿಶಂಕರ್ ತ್ರಿಪಾಠಿ ಹಾಗೂ ಇನ್ನಿತರ ಪಾತ್ರಗಳ ಕಲಾವಿದರು ಅನಿವಾರ್ಯವಾಗಿ ಬದಲಾದರೂ ಇವರು ಮಾತ್ರ ‘ಖಾಯಂ’. ಅದಕ್ಕಾಗಿಯೇ, ರಾಜ್ಯದಲ್ಲಿ ಎಷ್ಟೇ ‘ಮುಖ್ಯಮಂತ್ರಿ’ಗಳು ಬದಲಾದರೂ ಖಾಯಂ ‘ಮುಖ್ಯಮಂತ್ರಿ’ ನಮ್ಮ ಚಂದ್ರು ಮಾತ್ರ ಎಂದು ಪ್ರಚಲಿತವಾಗಿರುವುದು!!

ರಾಜ್ಯಾಡಳಿತದಲ್ಲಿ ಒಬ್ಬ ನಾಯಕರಾಗಿ ಉಳಿಯಲು ಏನೇನು ತಂತ್ರಗಳನ್ನು ಹೂಡಬಹುದೋ ಅವೆಲ್ಲವೂ ಈ ನಾಟಕದಲ್ಲಿ ಹಾಸುಹೊಕ್ಕಾಗಿವೆ. ಮೊದಮೊದಲು ಪ್ರೇಕ್ಷಕರು ಬಹಳ ಗಂಭೀರವಾಗಿ ಈ ನಾಟಕವನ್ನು ನೋಡುತ್ತಿದ್ದರು. ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಿದ್ದಾಗ ಟೌನ್‌ಹಾಲ್ ತನಕವೂ ‘ಕ್ಯೂ’ ಇರುತ್ತಿತ್ತು. ಅಂತಹ ದೊಡ್ಡ ರಂಗಮ೦ದಿರ ಭರ್ತಿ ಆಗುತ್ತಿತ್ತು. ಪ್ರತಿಯೊಂದು ಪ್ರದರ್ಶನವನ್ನೂ ಸಮಕಾಲೀನ ರಾಜಕೀಯ ಸ್ಥಿತಿಗತಿಗಳಿಗೆ ನಾಟಕವನ್ನು ಹೋಲಿಸಿಕೊಳ್ಳುತ್ತಾ ಪ್ರೇಕ್ಷಕರು ಆಸ್ವಾದಿಸುತ್ತಿರುದರಿಂದಲೇ ಕನ್ನಡ ರಂಗಭೂಮಿಯಲ್ಲಿ ಮುಖ್ಯಸ್ಥಾನವನ್ನು ಪಡೆದುಕೊಳ್ಳಲು ‘ಮುಖ್ಯಮಂತ್ರಿಗೆ’ ಸಾಧ್ಯವಾಗಿರುವುದು ಕಲಾಗಂಗೋತ್ರಿಯು ‘ದೇಶವಿದೇಶಗಳಲ್ಲಿ’ ತನ್ನ ಕೀರ್ತಿ ಪತಾಕೆಯನ್ನು ಹಾರಿಸಲು ಆಗಿರುವುದು.
ಈಗ ಈ ಸಾಮಾಜಿಕ ಜಾಲತಾಣಗಳು ಬಂದ ಮೇಲೆ ನಾಟಕಗಳಿಗೆ ದೊರೆತಿರುವಂತಹ ಪ್ರಚಾರಗಳೇ ವಿಭಿನ್ನವಾಗಿದೆ. ಈಗ ಪ್ರೇಕ್ಷಕರು ಎಲ್ಲೆಲ್ಲಿಂದಲೋ ಬರುತ್ತಾರೆ. ಎಷ್ಟೋ ಜನ ಚಲನಚಿತ್ರ ಕಲಾವಿದ ‘ಮುಖ್ಯಮಂತ್ರಿ ಚಂದ್ರು’ ಅವರನ್ನು ನೋಡಲಿಕ್ಕೇ ಬರಬಹುದು. ನಾವು ಗಮನಿಸಿರುವಂತೆ, ಮೊದಲು ನಾಟಕ ನೋಡುತ್ತಿದ್ದ ಪ್ರೇಕ್ಷಕರ ರೀತಿಗೂ, ಇಂದಿಗೂ ಬಹಳ ಬದಲಾಗಿದೆ. ಮೊದಮೊದಲು ನಾಟಕದಲ್ಲಿನ ವಿಡಂಬನೆಗೆ ಮಾತ್ರ ಪ್ರೇಕ್ಷಕರು ನಗುತ್ತಿದ್ದರು. ಈಗ ಪ್ರತಿಯೊಂದು ಸಂಭಾಷಣೆಗೂ ‘ನಗು’! ಅದು ಸಾಂಕ್ರಾಮಿಕ. ಒಬ್ಬರು ನಗಲು ಶುರುಮಾಡಿದರೆ ಇಡೀ ಪ್ರೇಕ್ಷಾಗೃಹವೇ ನಗೆಗಡಲಿನಲ್ಲಿ ಮುಳುಗುತ್ತದೆ. ಏನೇ ಆಗಲಿ, ಹೆಚ್ಚು ಪ್ರೇಕ್ಷಕರು ನಾಟಕವನ್ನು ನೋಡುವುದು ನಮ್ಮ ಗುರಿಯಾಗಿರುವುದರಿಂದ ಈ ರೀತಿಯ ಪ್ರತಿಕ್ರೆಯೆಯನ್ನು ನಾವು ಇತ್ಯಾತ್ಮಕವಾಗಿಯೇ ನೋಡಬೇಕು.
‘ಮುಖ್ಯಮಂತ್ರಿ’ ನಾಟಕದ ‘ಸ್ತ್ರೀ ಪಾತ್ರಗಳು’
ಸಾಮಾಜಿಕ, ಪೌರಾಣಿಕ ನಾಟಕಗಳಿಗೆ ಹೋಲಿಸಿದರೆ ಸಾಮಾನ್ಯವಾಗಿ ರಾಜಕೀಯ ನಾಟಕಗಳಲ್ಲಿ ಸ್ತ್ರೀ ಪಾತ್ರಗಳು ಕಡಿಮೆಯೇ ಎನ್ನಬಹುದು. ಮೊದಲಿನಿಂದಲೂ ಆಡಳಿತ ನಡೆಸುತ್ತಿರುವವರು, ರಾಜಕೀಯದಲ್ಲಿ ಭಾಗಿ ಆಗುವವರು ಹೆಚ್ಚಾಗಿ ಪುರುಷರೇ ಆಗಿರುವುದರಿಂದ, ಸ್ತ್ರೀ ಪಾತ್ರಗಳು ಅಲ್ಲಲ್ಲಿ ಕಾಣಸಿಗುತ್ತದೆ. ಮುಖ್ಯಮಂತ್ರಿ ನಾಟಕವೂ ಇದಕ್ಕೆ ಹೊರತಲ್ಲ. ರಂಗದ ಮೇಲೆ ಕೇವಲ ಮೂರು ಸ್ತ್ರೀ ಪಾತ್ರಗಳ ಪ್ರವೇಶ ಆಗುತ್ತದೆ. ವಸುಮತಿ, ಪ್ರದ್ಯುಮ್ನ ದೇವಿ ಹಾಗೂ ಸರೋಜಿನಿ ಸಹಾಯ್. ಆದರೆ ಮೂರು ಪಾತ್ರಗಳೂ ತಾವಿರುವಷ್ಟು ಸಮಯದಲ್ಲೇ ಒಂದಲ್ಲ ಒಂದು ರೀತಿಯಲ್ಲಿ ರಾಜಕೀಯದ ಆಗುಹೋಗುಗಳಲ್ಲಿ ಭಾಗವಹಿಸುತ್ತಾರೆ. ವಸುಮತಿ, ಪ್ರದ್ಯುಮ್ನದೇವಿ ಪರೋಕ್ಷವಾಗಿ ರಾಜಕಾರಣದಲ್ಲಿ ಭಾಗಿಯಾದರೆ, ಸರೋಜಿನಿ ಸಹಾಯ್ ಮೊದಲಿನಿಂದಲೂ ಚಳುವಳಿಗಳಲ್ಲಿ ಭಾಗವಹಿಸುವ ಮುಖಾಂತರ ರಾಜಕೀಯಕ್ಕೆ ಧುಮುಕಿ ನಂತರ ‘ಮುಖ್ಯಮಂತ್ರಿಗಳ’ ವಶೀಲಿಯ ಮೂಲಕ ಸಚಿವೆಯಾಗಿ ನೇರವಾಗಿಯೇ ಆಡಳಿತ ಪಕ್ಷಕ್ಕೆ ಸೇರುತ್ತಾಳೆ.

ವಸುಮತಿ
‘ಕಲಾಗಂಗೋತ್ರಿ’ ಗೆ ಈ ಪಾತ್ರದ ಮೂಲಕವೇ ನಾನು ೧೯೮೫ ರಲ್ಲಿ ಪಾದಾರ್ಪಣೆ ಮಾಡಿದ್ದು. ವಸುಮತಿ ಹಿರಿಯ ರಾಜಕಾರಣಿ, ಗೃಹಮಂತ್ರಿ, ಮುಖ್ಯಮಂತ್ರಿ ಕೆ.ಡಿ. ಕೌಶಲರ ಪರಮಾಪ್ತ ದುರ್ಗಾಬಾಯಿ ದೇಸಾಯಿ ಅವರ ಪುತ್ರಿ. ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವವಳು. ಮುಖ್ಯಮಂತ್ರಿಗಳ ಕೊನೆಯ ಮಗ ‘ಚಂದ್ರಪ್ರಸಾದ್’ನಲ್ಲಿ ಅನುರಕ್ತೆ. ಆದುದರಿಂದ ‘ಮುಖ್ಯಮಂತ್ರಿ’ಯ ಸ್ಥಾನಕ್ಕೆ ತನ್ನ ಅಪ್ಪ ಸ್ಪರ್ಧಿಸಬಹುದು ಎಂದು ಪುಕಾರು ಎದ್ದಾಗ, ತನ್ನ ಭಾವಿ ಮಾವನ ವಿರುದ್ಧ ತಂದೆಯು ಚುನಾವಣೆಯಲ್ಲಿ ನಿಲ್ಲಬಾರದೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸುವವಳು. ರಾಜಕೀಯದ ವಾತವರಣದಲ್ಲೇ ಬೆಳೆದಿರುವುದರಿಂದ ತನ್ನದೇ ಆದ ರಾಜಕಾರಣದ ನಿಲುವನ್ನು ಹೊಂದಿರುವವಳು.
ಪ್ರದ್ಯುಮ್ನ ದೇವಿ
ಮುಖ್ಯಮಂತ್ರಿಗಳ ಪತ್ನಿ, ಐದು ಪುತ್ರರನ್ನು ಹೆತ್ತವಳು. ಒಬ್ಬ ಮಗ ಪತಿಯ ವಿರುದ್ಧವೇ ಬಂಡಾಯವೆದ್ದು ಮನೆಬಿಟ್ಟು ಹೋಗುತ್ತಾನೆ. ಮಿಕ್ಕ ಮಕ್ಕಳು ಅಪ್ಪನ ಹೆಸರಿನಲ್ಲಿ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುತ್ತಿರುತ್ತಾರೆ. ಎಷ್ಟೇ ಅಶಾಂತಿ ಇದ್ದರೂ, ಪತಿಯ ಜೊತೆಗೆ ಸಾಗುವ ಸಹಧರ್ಮಿಣಿ. ಆದರೆ ಈಕೆಗೂ ಎಲ್ಲೋ ಒಂದು ಕಡೆ ತನ್ನ ಗಂಡ ಇಳಿವಯಸ್ಸಿನಲ್ಲಾದರೂ ಅಧಿಕಾರದ ಗದ್ದುಗೆಯನ್ನು ಬಿಟ್ಟು ಶಾಂತಿಯಿ೦ದ ಇರಲಿ ಎಂಬ ಇಚ್ಛೆಯಿಂದ, ಆತನ ಪರಮಾಪ್ತ ದುರ್ಗಾಬಾಯಿಯ ಬಳಿಯಲ್ಲಿ ಕೌಶಲರ ನಿವೃತ್ತಿಯ ಬಗ್ಗೆ ಚರ್ಚಿಸುವಳು. ಗಂಡನ ಜೊತೆಗೂ ವಾದಮಾಡುವಳು. ಆದರೆ ತನ್ನ ಮಾತಿಗೆ ಬೆಲೆ ಇಲ್ಲವೆಂದು ಯಾವಾಗ ತಿಳಿಯಿತೋ, ಕಾಶಿಗೆ ಹೊರಡುವಳು. ಒಟ್ಟಿನಲ್ಲಿ ಮನೆಯಲ್ಲೇ ಇದ್ದರೂ ರಾಜಕೀಯದ ಆಗುಹೋಗುಗಳಲ್ಲಿ ಪರೋಕ್ಷವಾಗಿ ಭಾಗಿಯಾಗುವ ವ್ಯಕ್ತಿತ್ವ ಅವಳದು.
ಸರೋಜಿನಿ ಸಹಾಯ್
ಮೂರನೆಯ ಪಾತ್ರ ಸರೋಜಿನಿ ಸಹಾಯ್ ರಾಜಕಾರಣಿಗೆ ಇರುಬೇಕಾದ ಎಲ್ಲಾ ಗುಣಗಳನ್ನೂ ಇವಳಲ್ಲಿ ಕಾಣಬಹುದು. ಈಕೆ ಹರಿಶಂಕರ ತ್ರಿಪಾಠಿಯ ಸಹಾಯದಿಂದ ಉದಯಾಚಲದ ಟ್ರೇಡ್ ಯೂನಿಯನ್ ಮೂಲಕ ರಾಜಕೀಯವನ್ನು ಪ್ರವೇಶಿಸಿ ಅದರ ಕಾರ್ಯದರ್ಶಿ ಆಗಿ ಪಕ್ಷಾಧ್ಯಕ್ಷ ಸುದರ್ಶನ ದುಬೆ ಮೊದಲಾದ ಪ್ರಭಾವಶಾಲಿಗಳ ಆತ್ಮೀಯ ವಲಯಕ್ಕೆ ಸೇರಿಕೊಳ್ಳುವ ಜಾಣೆ. ತಮ್ಮ ರಾಜಕೀಯ ಗುರು ಹರಿಶಂಕರ ತ್ರಿಪಾಠಿ ಮುಖ್ಯಮಂತ್ರಿ ಆಗಬೇಕೆಂಬ ಅಪೇಕ್ಷೆಯಿಂದ ಗೃಹಮಂತ್ರಿ ದುರ್ಗಾಬಾಯಿ ದೇಸಾಯಿ ಅವರ ಮನ ಒಲಿಸಿಕೊಳ್ಳಲು ಪ್ರಯತ್ನಸಿದಾಕೆ. ಯಾವಾಗ ದೇಸಾಯಿ ಇವಳ ಆಸೆಗೆ ತಣ್ಣೀರು ಎರಚುತ್ತಾರೋ ತಕ್ಷಣವೇ ಬಣ್ಣ ಬದಲಾಯಿಸಿ ಪರಮ ಶತ್ರು ಎಂದು ಭಾವಿಸಿದ್ಧ ಬಂಡವಾಳಶಾಹಿ ಎಂದು ತಾನೇ ಆರೋಪಿಸಿದ್ದ ಮುಖ್ಯಮಂತ್ರಿ ಕೌಶಲರ ಸ್ನೇಹ ಸಂಪಾದಿಸಿ ಅವರ ಬಳಗ ಸೇರಿ, ರಾಜ್ಯಾಡಳಿತದಲ್ಲಿ ಸಚಿವ ಸ್ಥಾನ ಪಡೆದುಕೊಂಡ ಚಾಣಾಕ್ಷೆ.

ಒಟ್ಟಿನಲ್ಲಿ ಈ ಮೂರು ಸ್ತ್ರೀ ಪಾತ್ರಗಳು ವಿಭಿನ್ನ ರೀತಿಯಲ್ಲಿ ‘ಮುಖ್ಯಮಂತ್ರಿ’ಯ ರಾಜಕೀಯ ಜೀವನದಲ್ಲಿ ಭಾಗಿಯಾಗುವುದನ್ನು ಗಮನಿಸಬಹುದು.
ಈ ನಾಟಕವು ರಾಜಕೀಯದಲ್ಲಿ ಕಾಣುವ ಸಂಚುಗಳು, ಹುನ್ನಾರುಗಳು, ಪಕ್ಷಾಂತರಗಳು, ಬದಲಾವಣೆಗಳು ಈ ಎಲ್ಲವನ್ನೂ ಎತ್ತಿ ತೋರಿಸುತ್ತದೆ. ರಂಗಕೃತಿಗಿ೦ತ ರಂಗ ಪ್ರಯೋಗದಲ್ಲಿ, ನಿರ್ದೇಶಕರ ಜಾಣ್ಮೆಯಿಂದ, ನಾಟಕದ ಮೂಲಕ್ಕೆ ಧಕ್ಕೆ ಬಾರದಂತೆ ಸಾಕಷ್ಟು ಎಡಿಟಿಂಗ್ ನಡೆದಿರುವುದರಿಂದ ಅದರ ವಸ್ತು ನಿಖರವಾಗಿ ಜನರನ್ನು ತಲುಪುವಲ್ಲಿ ಯಶಸ್ವಿಯಾಗುತ್ತದೆ. ಹೀಗೆ ಹಾಡು ನೃತ್ಯ ಇಲ್ಲದಿದ್ದರು ರೂ ಕೇವಲ ಸಂಭಾಷಣೆ ಮತ್ತು ಅಭಿನಯದಿಂದಲೇ, ತುಂಬಿರುವ ಪ್ರೇಕ್ಷಾಗೃಹಕ್ಕೆ ಪ್ರದರ್ಶನವಾಗುತ್ತಿರುವ ಸಾರ್ವಕಾಲಿಕ ರಾಜಕೀಯ ನಾಟಕ ‘ಮುಖ್ಯಮಂತ್ರಿ’.
ಹಣ ತರದೆ ಇರುವಂತಹ ಹವ್ಯಾಸಿ ರಂಗಭೂಮಿಯಲ್ಲಿ ೫೬ ವರ್ಷಗಳ ಕಲಾಗಂಗೋತ್ರಿಯ ರಂಗ ಪಯಣ, ಅದರಲ್ಲಿ ೪೬ ವರ್ಷಗಳ ‘ಮುಖ್ಯಮಂತ್ರಿ’ಯ ರಾಜ್ಯಭಾರ ತಮಾಷೆಯ ಸಾಧನೆಯಲ್ಲ. ಇದರ ಹಿಂದೆ ಡಾ.ಬಿ.ವಿ. ರಾಜಾರಾಂ ರಂತಹ ತೀಕ್ಷ್ಣಮತಿ, ದಕ್ಷ, ಮನೋದ್ಧಾರ್ಢ್ಯ ಉಳ್ಳ ವ್ಯಕ್ತಿಗಳ ನಾಯಕತ್ವವು ಅಷ್ಟೇ ಮುಖ್ಯ. ಇದು ಕೇವಲ ಐದಾರು ಪಾತ್ರಗಳಿರುವಂತಹ ನಾಟಕ ಮಾಡುವ ತಂಡವಲ್ಲ. ಸುಮಾರು ೩೦-೪೦ ಕಲಾವಿದರುಗಳನ್ನು ಅಪೇಕ್ಷೆಪಡುವಂತಹ ನಾಟಕಗಳನ್ನು ಪ್ರಯೋಗಿಸುವ ರಾಜಾರಾಂ ಅವರು ಇಡೀ ತಂಡದ ಜವಾಬ್ದಾರಿಯನ್ನು ಹೊತ್ತಿರುವುದಲ್ಲದೆ, ಅದನ್ನು ಬಹಳ ಸಮರ್ಥವಾಗಿ ದಕ್ಷತೆಯಿಂದ ನಡೆಸಿಕೊಂಡು ಹೋಗುತ್ತಿದ್ದಾರೆ. ಹಲವಾರು ನದಿಗಳು ಸೇರಿ ಮಹಾಸಾಗರವಾಗುವಂತೆ, ಕಲಾಗಂಗೋತ್ರಿ ನೂರಾರು ಕಲಾವಿದರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. ಹಿರಿಯ ಕಲಾವಿದರಾದ ಭಾರ್ಗವಿ ನಾರಾಯಣ, ಕೃಷ್ಣೇಗೌಡರು, ಬಿ.ವಿ. ನಂಜು೦ಡಯ್ಯ, ಶ್ರೀನಿವಾಸ ಮೇಸ್ಟ್ರು, ಮಂಜುನಾಥ್ ಹೆಗಡೆ, ಕಲಾಗಂಗೋತ್ರಿ ಕಿಟ್ಟಿ, ಎಜಿಎಸ್ ಚಂದ್ರಶೇಖರ್, ಇನ್ನೂ ಮೊದಲಾದ ಕಲಾವಿದರ ಅಭಿನಯ ತಂಡದ ಸಾಪಲ್ಯಕ್ಕೆ ಕಾರಣವಾಗಿದೆ.
ಡಿ.ವಿ.ಜಿ ಯವರು ಹೇಳುವಂತೆ ‘ಹೃದಯಕ್ಕೊಪ್ಪುವ ಭಾಷೆ, ರಾಗಲಯ ವಿಸ್ತಾರ, ಪದ ಚರ್ಚೆ ಮತ ವಿಚಾರಕ್ಕೆ ತಕ್ಕ ಭಾಷೆ’ಯನ್ನು ಬಳಸಿ, ಹಲವಾರು ನಾಟಕಗಳನ್ನು ಪ್ರಯೋಗಿಸಿ, ಬಹಳ ವರ್ಷಗಳ ಕಾಲ ಹೀಗೆಯೇ ಸಾಗಲಿ ಕಲಾಗಂಗೋತ್ರಿ ಎಂಬುದು ನಮ್ಮೆಲ್ಲರ ಹಾರೈಕೆ.






0 Comments