ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಂಜುಂಡ ನೆಲದ ‘ಕಾಡು ಅಂಜೂರದ ಹುಡುಗಿ’

ಎಂ. ಆರ್ ಕಮಲ ಅವರ ಕವನ ಸಂಕಲನ ‘ಕಾಡು ಅಂಜೂರದ ಹುಡುಗಿ’

ಕಾವ್ಯ ಮನೆ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ.

ಈ ಕೃತಿಯ ಕುರಿತ ದೇವರಾಜ್ ಹುಣಸಿಕಟ್ಟಿ ಅವರ ಬರಹ ಓದಿ

-ದೇವರಾಜ್ ಹುಣಸಿಕಟ್ಟಿ

ತುಸು ಹಿರಿಯರನ್ನ ನಾವು ಓದಬೇಕು. ಅನ್ನುವುದಕ್ಕೆ ಎಂ ಆರ್ ಕಮಲಾ ರವರ ಈ ಕಾಡು ಅಂಜೂರದ ಹುಡುಗಿ ಸಂಕಲನ… ಓದಿದಾಗ ಖಂಡಿತ ಅರಿವಿಗೆ ಬರುತ್ತೆ. ಕವಯತ್ರಿ ತೀರಾ ಸಣ್ಣ ಸಂಗತಿಗಳನ್ನು ಅತ್ಯಂತ ಸೂಕ್ಷ್ಮವಾಗಿ ಅವಲೋಕಿಸಿ ಬರೆತ್ತಾ, ಅನುಭವವ ಒರೆ ಹಚ್ಚುತ್ತ, ಪದಗಳಿಗೆ ಜೋತು ಬೀಳದೆ, ಭಾವಕ್ಕೆ ಆತು ಕೂತು ತೂಗಡಿಸದೆ, ಕಾವ್ಯ ಆಗಲೇ ಬೇಕು ಎಂಬ ಜಿದ್ದಿಗೆ ಬೀಳದೆ… ಹನಿ ಹನಿಯಾಗಿ ಜಿನುಗುತ್ತ, ತೊರೆಯಾಗಿ, ಹಳ್ಳ,ಕೊಳ್ಳ ಬೇಲಿ ಸಾಲುಗಳ ದಾಟಿ ನದಿಯಾಗಿ ಒಮ್ಮೊಮ್ಮೆ ಅಲ್ಲಲ್ಲಿ ಧುಮ್ಮಿಕ್ಕಿ ಮತ್ತೆ ಒಮ್ಮೊಮ್ಮೆ ಸಲೀಲವಾಗಿ ಹರಿದು ಸಮುದ್ರ ಸೇರುವ ಪರಿಗೆ ಈ ಸಂಕಲನದ ಸಾರ್ಥಕತೆ ಇದೆ ಎನ್ನಿಸುತ್ತೆ.

ಮನುಷ್ಯ ಸಂಘ ಜೀವಿ, ಓಡುವ, ಕೂಡುವ, ಸ್ಪರ್ಶಿಸುವ ಕುತೂಹಲಿ ಹೀಗೆ ಕೂಡುವ ಅವ ತನ್ನದಲ್ಲದ ಅನೇಕ ಸಂಗತಿಗಳ ತನ್ನದಾಗಿಸಿ ಕೊಳ್ಳುತ್ತ ಹಿಗ್ಗುತ್ತ ಸಾಗುವ ಅವನಲ್ಲದ ಅವನ ಹಿಡಿದಿಡುವ ಕವಿತೆ  “ನನ್ನದೇ ನಿಘoಟು”…ಸಾಲುಗಳನ್ನು ಒಮ್ಮೆ ನೋಡಿ 

” ಯಾರ್ಯಾರೋ ಪದಗಳನ್ನು 

ಸೇರಿಸುತ್ತಲೇ ಹೋದರು 

ರೋಷ, ದ್ವೇಷ, ಅಸೂಯೆ…

ನನ್ನದಲ್ಲದ ಎಷ್ಟೊಂದು 

ಫೇಸ್ ಬುಕ್ಕಿನ ಪದಗಳು!”

 ಸ್ವ ವಿಮರ್ಶೆ ಮಾಡಿ ಕೊಳ್ಳುತ್ತ…ಕವಯತ್ರಿ ಬಯಸುವ ಇದೆ ಕವಿತೆಯ ಕೊನೆಯ ಸಾಲುಗಳು..

“ಚಿಗುರು ಪದಗಳು ಸೇರುವ ಮುನ್ನ 

ಕೊಳೆತದ್ದನ್ನೆಲ್ಲ ಕಿತ್ತೆಸೆಯಬೇಕಿದೆ…

ನನ್ನದೇ ನಿಘoಟಿಗೆ ಮರಳಬೇಕಿದೆ “

ಒಂದು ಸ್ವಸ್ತ ಸಮಾಜಕ್ಕೆ ಇನ್ನೇನು ಬೇಕು. ಅಲ್ವಾ….

ಪ್ರತಿ ಕವಿತೆ ಓದಿದಾಗಲೂ ಭಾವದ ಹೃದಯವನ್ನೇ ಅದ್ದಿ ತೆಗೆದಂತೆ ಬರೆದಿರುವ ಕಮಲಮ್ಮ… ಮನೆಯೆಂದರೆ ಎನ್ನುತ್ತಾ ಹಾಕುವ ಪ್ರತಿ ಅಚ್ಚು ಪಂಜರ, ವಸ್ತು ಸಂಗ್ರಹಾಲಯ, ಸ್ಮಾರಕ, ಜಗತ್ತು ಎನ್ನುವಾಗ ನಿಮಗೆ ಹೌದಲ್ವಾ ಅನ್ನಿಸದೆ ಇರದು.. ಆದ್ರೆ ಅಷ್ಟೇ ಆಗಿದ್ರೆ ಕವಿತೆಯ ಆರದ್ರತೆ ನಮ್ಮನ್ನು ತಾಗುತ್ತಿರಲಿಲ್ಲವೇನು ಆದ್ರೆ ಅವರು ಕೊನೆಗೆ ಎಸೆಯುವ ಪ್ರಶ್ನೆ ಇದೆಯಲ್ಲ ಅದು… ಉಳ್ಳವರ ಮತ್ತೂ ಇರದಿರುವವರ ಕಂದಕಕ್ಕೆ ಕೈ ಹಾಕಿ ನಿಮ್ಮ ಎದೆ ಕಲುಕುತ್ತೆ….

ಹೀಗೆ…

ಇದ್ದವರಿಗೆ ಹೂದೋಟ, ನೋಟ, ಕೂಟ, ಮಾಟ 

ಮನೆ ಇಲ್ಲದವರಿಗೆ? ಮನೆಯಿಂದ ಮನೆಗೆ ಅಲೆವವರಿಗೆ ಮನೆಯೊಂದು….

ನೀವೇ ಬರೆದು ಕೊಂಡು ಬಿಡಿ!

ಎನ್ನುವಾಗ ಕನಸು ಅನ್ನಿಸಿದರೂ… ನಿಮ್ಮ ವ್ಯಾಕುಲತೆ ಮಾತ್ರ ದಾಟಲಾಗುವುದಿಲ್ಲ.

ಕವಿಯ ಮೂಲ ಗುಣವೇ ಸ್ಥಾಪಿತ ಕಲ್ಪನೆಗಳ ಮುರಿವ,ಮತ್ತೂ ಸ್ಥಾಪಿತ ಮಿತ್ ಗಳ ಪ್ರವಾಹಕ್ಕೆ ಎದುರಾಗಿ ಈಜಿ ಹೊಸ ಕಣ್ಣು, ಹೃದಯ ತೆರೆಸುವ ಕೆಲಸ.ಕನ್ನಡ ಕಾವ್ಯ ಮತ್ತೂ ಆ ನೆಲೆಯಲ್ಲಿ ಸ್ತ್ರೀ ಸಾಹಿತ್ಯ, ಪ್ರಶಸ್ತಿ ಇವುಗಳ ನೋಡುವ ಬಗೆಯ ಕುರಿತು ಕವಿತೆ  ಉದಾಹರಣೆಗೆ…

“ಬರೆಯುವ ಹೆಣ್ಣುಮಕ್ಕಳೇ “

ಕವಿತೆಯ ಸಾಲುಗಳೇ ಸಾಕ್ಷಿ..

ಬರೆಯುವ ಹೆಣ್ಣುಮಕ್ಕಳೆಲ್ಲ ರಾತ್ರೋ ರಾತ್ರಿ ಸೂಳೆ ಗಳಾಗುತ್ತಾರೆ..

ಹಾದರಕ್ಕಿಳಿದೇ ಪ್ರಶಸ್ತಿ ಪಡೆಯುತ್ತಾರೆ “

ಹೀಗೆ ವ್ಯಂಗದಲಿ ಬಾಯಿ ಚಪಲದವರಿಗೆ ಉತ್ತರಿಸುತ್ತ..

ಕೊನೆಯಲ್ಲಿ ಆಕ್ರೋಶದ ಕಟ್ಟೆ ಹೊಡೆದು ಹೀಗೆ ಹೇಳುತ್ತಾರೆ…

ಹೆಗ್ಗಣಗಳಿಗೆ ಬಿಲ ತೋಡಿ ತೋಡಿ ಕೊಡಬೇಡಿ 

ಒಮ್ಮೆ ಕಟ್ಟಿಗೆಗಳ ಹೆಟ್ಟಿ ಬೆಂಕಿ ಹಚ್ಚಿ ಬಿಡಿ! ಎನ್ನುವಾಗ ಇಡೀ ಸ್ತ್ರೀ ಸಾಹಿತ್ಯದ ನೋಡುವ ನೋಟ ಪುರುಷ ಜಗತ್ತು ಬದಲಿಸಿ ಕೊಳ್ಳುವ ತುರ್ತನ್ನೂ ಹೇಳುತ್ತೆ.

ಕೋಮು ದ್ವೇಷ ಉತ್ತುಂಗಕ್ಕೆ ಏರಿರುವ ಈ ಕಾಲದಲ್ಲಿ 

ಕವಿ ಸಮಾಜದ ಕೂಸು. ಆರೋಗ್ಯಕರ ಸಮಾಜ ಬಯಸುವ, ಅದು ಹಾದಿ ತಪ್ಪುವಾಗ ಎಚ್ಚರದ ಗಂಟೆಯಾಗುವ ಕೆಲಸ ಕವಿಯದ್ದು ಇಂತಹ ಎಚ್ಚರ ಹೇಗೆ ಮೆದು ಮತ್ತೂ ಹದ ಶಬ್ದಗಳಲ್ಲಿ ಅರಳಿ ಹೃದಯಕ್ಕೆ ನಾಟುವಂತೆ ಮಾಡಬಹುದು, ಅಷ್ಟೇ ವಿಷಾದ ಪೂರ್ಣವಾಗಿ ಹೇಳಬಹುದು ಎನ್ನಲು ಅವರ “ಇಲ್ಲೊಂದು ” ಕವಿತೆ ಕನ್ನಡಿಯ ಹಾಗೆ ಇದೆ.

ಇಲ್ಲೊಂದು ಚಂದ್ರ ಹುಟ್ಟಿದರೆ 

ಎಲ್ಲರಿದೆಯೂ ಬೆಳದಿಂಗಳಾಗಬೇಕಿತ್ತು…

ಇಲ್ಲೊಂದು ಮೊಳೆಕೆಯೊಡದರೆ 

ಎಲ್ಲರಿದೆಯೂ ಹಸಿರಾಗಬೇಕಿತ್ತು.

ಆದರಿಲ್ಲಿ..

ನೋವು ಮತ್ತಾರದೋ ಎದೆಯ ನಲಿವಾಗುತ್ತಿದೆ…

ಕವಯತ್ರಿ ಒಮ್ಮೊಮ್ಮೆ ಸ್ವಯಂ ಪ್ರಶ್ನೆಹಾಕಿ ಕೊಳ್ಳುತ್ತ ಶೋಧಕ್ಕೆ ಇಳಿಯುತ್ತ… ಹೊಸ ಕಣ್ಣೋಟಗಳ ಕಂಡು ಕೊಳ್ಳುವ ಬಗೆ ಕೂಡ ನಿಮಗೆ ಇಷ್ಟ ಆಗಬಹುದು.

ಹೊಸ ಹೊಳವುಗಳ ನೀಡಿ ಬೆರಗು ಗೊಳಿಸುವ ಕವಯತ್ರಿ ತಾವು ಕಂಡ ಸಣ್ಣ ಸಣ್ಣ ಸಂಗತಿಗಳ ಮೇಲೂ ಕವಿತೆ ಬರೆದು ಹಗುರಗಿದ್ದಾರೆ ಯಾವುದೇ ದಾವಂತವಿಲ್ಲದೆ.

ಇಡೀ ಸಂಕಲನದಲ್ಲಿ ಅದೆಷ್ಟು ಆಶಾವಾದ, ಜೀವನ ಪ್ರೀತಿ ತುಂಬಿ ತುಳಿಕಿದೆ. ಅದು ಸಹಜವಾಗಿ ಯಾವುದೇ ವಿದ್ವತ್ತಿನ ಪ್ರದರ್ಶನ ವಿಲ್ಲದೆ. ಅದೇ ಈ ಸಂಕಲನದ ಹೆಚ್ಚು ಗಾರಿಕೆ.

“ಮಾತ ನಾಡುತ್ತಲೇ ಇರು “

“ಯಾರಿಗೇಕೆ ಒಪ್ಪಿಸಬೇಕು”

” ಕಾಯುತ್ತಿರಬೇಕು ” ಮುಂತಾದ ಕವಿತೆಗಳು ಉದಾಹರಣೆಯಾಗಿ ನೀಡಬಹುದು.

ಅದೆಷ್ಟು ಹೇಳಿದರೂ ಹೇಳದೆ ಉಳಿಯುವ ಸಂಗತಿಗಳೇ ಹೆಚ್ಚು ಎಂಬ ಪ್ರಜ್ಞೆಯನ್ನು ಜೀವಂತ ಇಡುತ್ತ ನನ್ನ ಮಾತುಗಳಿಗೆ ವಿರಾಮ ಇಡುತ್ತೇನೆ. ಈ ಸಂಕಲನದಲ್ಲಿ ಒಟ್ಟು 53 ಕವಿತೆಗಳಿವೆ.ಕಾವ್ಯ ಮನೆ ಪ್ರಕಾಶನ ಇದನ್ನ ಪ್ರಕಟಿಸಿದೆ. ಮುನ್ನುಡಿ, ಬೆನ್ನುಡಿಗಳ ಭಾರವಿಲ್ಲದೆ ಸಂಕಲನ ಪ್ರಕಟಿವಾಗಿದೆ.

ಹಿರಿಯ ಕವಯತ್ರಿಯವರಿಗೆ ಶುಭ ಕೋರುತ್ತಾ…

‍ಲೇಖಕರು Admin

20 September, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading