ಗೋವಿಂದ ಹೆಗಡೆ ಅವರ ಗಜ಼ಲ್ ಸಂಕಲನ ‘ಬದುಕು ಬಾರಾ ಕಮಾನು’
ಈ ಕೃತಿಯ ಕುರಿತ ಕೆ. ಜನಾರ್ದನ ತುಂಗ ಅವರ ಬರಹ ಇಲ್ಲಿದೆ.
-ಕೆ. ಜನಾರ್ದನ ತುಂಗ
ನಲವತ್ತು ವರ್ಷಗಳಿಂದ ಬರೆಯುತ್ತಿರುವ ಡಾ. ಗೋವಿಂದ ಹೆಗಡೆಯವರು ಕನ್ನಡ ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ಕೈಯಾಡಿಸಿದ್ದಾರೆ. ಅವರ “ಕನಸು ಕೋಳಿಯ ಕತ್ತು, “ಕವಿತೆಗೆ ಕಾಲುಗಳಿಲ್ಲ” ಮತ್ತು “ಪೇಟೆ ಬೀದಿಯ ತೇರು” ಅವರೇ ಹೇಳುವಂತೆ “ಇರವನ್ನು ಹೊಸಯಿಸುವಂಥ ಪದಗಳನ್ನು (40)” ತುಂಬಿಕೊಂಡಂಥ ಕವನ ಸಂಗ್ರಹಗಳು. ಹಿರಿಕವಿಗಳ ಬಗ್ಗೆ ಗೌರವವನ್ನು ಇರಿಸಿಕೊಂಡೇ ತಮ್ಮದೇ ಆದ ಶೈಲಿಯನ್ನು ರೂಪಿಸಿಕೊಂಡಿರುವ ಕವಿ, ಡಾ. ಹೆಗಡೆ. ಹಲವು ಆಯಾಮಗಳಲ್ಲಿ ವ್ಯಾಖ್ಯಾನಿಸಬಹುದಾದ ಅವರ ಅನೇಕ ಬಿಡಿಗವನಗಳಿಗೆ ನಾನು ದೀರ್ಘವಾದ ಪ್ರತಿಕ್ರಿಯೆಗಳನ್ನು ಬರೆದಿದ್ದೇನೆ.
ಇದೀಗ ಅವರ ಇನ್ನೊಂದು ಕೃತಿ, “ಬದುಕು ಬಾರಾ ಕಮಾನು” ಮೈಸೂರಿನ ಸಂಸ್ಕೃತಿ ಪಬ್ಲಿಷಿಂಗ್ ಹೌಸ್ ಮೂಲಕ ಪ್ರಕಟವಾಗುತ್ತಿದೆ. ಈ ಗಜ಼ಲ್ ಸಂಕಲನದಲ್ಲಿಯೂ ಕವಿಯ ಕಾವ್ಯಮನೋಧರ್ಮ ನಿಚ್ಚಳವಾಗಿ ಕಾಣಿಸುತ್ತದೆ. ಪುಸ್ತಕದ ಬೆನ್ನುಡಿಯಲ್ಲಿ “ಕನ್ನಡದಲ್ಲಿ ಅದೇಕೋ ತುಸು ಮುನಿಸಿಕೊಂಡ ನಲ್ಲೆಯಂತೆ ದೂರ ನಿಲ್ಲುವ ಕಾವ್ಯ ಪ್ರಕಾರ” ಎಂದು ಕಮಲಾಕರ ಕಡವೆ ಬರೆದಿದ್ದಾರೆ. ಆದರೆ ಮುನಿಸಿಕೊಂಡ ನಲ್ಲೆಯನ್ನು ಒಲಿಸಿಕೊಂಡ ನಂತರ ಬದುಕೇ ಶೃಂಗಾರಮಯವಾಗುತ್ತದೆ. ಅಂತೆಯೇ ಇಲ್ಲಿನ 60 ಗಜಲುಗಳನ್ನು ಓದಿ ಮುಗಿಸುವಾಗ ಹೆಗಡೆಯವರು ಗಜ಼ಲ್ ಪ್ರಕಾರವನ್ನು ಒಲಿಸಿಕೊಂಡಿದ್ದಾರೆ ಎಂದು ತಿಳಿಯುತ್ತದೆ. ಓದುಗರೂ ಪ್ರೀತಿಯಿಂದ ಒಲಿಸಿಕೊಂಡರೆ ಒಂದು ಸುಂದರ ಜಗತ್ತಿಗೆ ಪ್ರವೇಶ ಪಡೆಯುತ್ತಾರೆ ಎಂದರೆ ಅದು ಅತಿಶಯೋಕ್ತಿಯಲ್ಲ.
“ಬದುಕು ಬಾರಾ ಕಮಾನು” ತನ್ನ ಅವಳಿಯೊಂದಿಗೆ ಬರುತ್ತಿದೆ. “ಗಜ಼ಲ್ ತಿಳಿಯೋಣ, ಬನ್ನಿ” ಎಂಬ ಪುಸ್ತಕ ಅವರ ಗಜ಼ಲ್ ಸಂಗ್ರಹಕ್ಕೆ ಒಂದು ಮಾನ್ಯುಯಲ್ ರೀತಿಯಲ್ಲಿದೆ. ಗಜಲ್‌ಗಳ ಸ್ವರೂಪವನ್ನು ಪರಿಚಯಿಸುವ ಲೇಖನದ ಜೊತೆಗೆ ಕನ್ನಡ ಸಾಹಿತ್ಯ ಲೋಕದಲ್ಲಿ ಗಜಲ್ ಪ್ರಕಾರದ ಹೆಜ್ಜೆಗುರುತುಗಳನ್ನೂ ದಾಖಲಿಸಿದ್ದಾರೆ. ಈ ಪುಸ್ತಕವನ್ನು ಓದಿಕೊಂಡರೆ ಗಜಲ್‌ಗಳ ನಿಜವಾದ ಸ್ವಾದವನ್ನು ಗ್ರಹಿಸುವುದು ಸಾಧ್ಯವಾಗುತ್ತದೆ.
ಗಜಲ್‌ಗಳನ್ನು ಅರ್ಥಮಾಡಿಕೊಳ್ಳಲು ವಿಶೇಷ ಪಾಂಡಿತ್ಯ ಬೇಕಾಗುವುದಿಲ್ಲ ಆದರೆ ಭಾವ ಶ್ರೀಮಂತಿಕೆಯಂತೂ ಅತ್ಯಂತ ಅಗತ್ಯ. ಸ್ವರೂಪದಲ್ಲಿ ಸಾಮ್ಯತೆಯಿದ್ದರೂ ಭಾವಗಳಿಗೆ ಇರುವ ಹಲವು ಬಣ್ಣಗಳು ಗಜಲ್‌ಗಳಲ್ಲಿಯೂ ಪ್ರತಿಫಲಿಸುವುದರಿಂದ ಪ್ರತಿಯೊಂದೂ ವಿಭಿನ್ನವಾಗಿರುತ್ತದೆ. ಹೆಗಡೆಯವರ ಗಜಲ್ ಸಂಕಲನದಲ್ಲಿ ವಿಭಿನ್ನ ಭಾವಗಳ ಮೆರವಣಿಗೆ ಓದುಗರಿಗೆ ಮುದಕೊಡುತ್ತವೆ. ಮುದದ ಜೊತೆಗೆ “ಒಲವಿನಂತೆ ಇದೂ, ಗಜ಼ಲ್ ಗಳೆಲ್ಲ ಸುಖಾಂತವಲ್ಲ (35)” ಎಂಬ ಭಾವವೂ ಮೂಡುತ್ತದೆ.

ಈ ಸಂಕಲನದ ತುಂಬಾ ವಿವಿಧ ಭಾವಗಳ ಸಂಚಾರವನ್ನು ಗಮನಿಸಿದರೂ ವಿಷಾದ ಮತ್ತು ವಿರಹಗಳಿಗೆ ಗಜ಼ಲ್ ಪ್ರಕಾರ ಸುಲಭವಾಗಿ ಹೊಂದಿಕೊಳ್ಳುತ್ತದೆ ಎಂದು ನನ್ನ ಅನಿಸಿಕೆ. ಆದರೆ, ಹೆಗಡೆಯವರು ವರ್ತಮಾನದಲ್ಲಿಯೇ ನಿಂತು ಭೂತ ಭವಿಷ್ಯಗಳನ್ನು ಸಾಕ್ಷಾತ್ಕರಿಸಿ ಕೊಳ್ಳುವುದರಿಂದ ಎಂಥ ದಿನಗಳಲ್ಲೂ ಅವರು ಭರವಸೆಯನ್ನು ಕಳೆದುಕೊಳ್ಳುವುದಿಲ್ಲ. “ಕತ್ತಲ ಕೊನೆಯಲ್ಲಿ ಬೆಳಕಿದ್ದೇ ಇದೆ | ನಂಬಿಕೆ ಇರಲಿ, ಕೊನೆಗೂ ಒಲವಿಗೆ ಜಯವಿದ್ದೇ ಇದೆ ನಂಬಿಕೆ ಇರಲಿ” (11) ಎಂಬ ವಿಶ್ವಾಸ ಅವರದ್ದು. ಇದು ಕವಿಯ ಮನೋಧರ್ಮ. ಬದುಕಿನ ಬಗ್ಗೆ ಭರವಸೆ ಮೂಡಿಸುವ, ವೃತ್ತಿಯಿಂದ ವೈದ್ಯರಾಗಿರುವ ಕವಿ ತಮ್ಮ ಪ್ರವೃತ್ತಿಯಲ್ಲೂ ಅದನ್ನೇ ಪ್ರತಿಬಿಂಬಿಸಿದ್ದಾರೆ.
ಇಲ್ಲಿನ ಗಜಲ್ಲುಗಳಿಗೆ ಕೇವಲ ಸಂಖೆಗಳನ್ನು ನೀಡಲಾಗಿದೆ; ಶಿರೋನಾಮೆಗಳಿಲ್ಲ. ಆದರೆ, ಗಜಲ್ಲುಗಳ ರದೀಫ್ (ಮಕ್ತಾದ ಮೊದಲ ಸಾಲಿನ ಅಂತ್ಯಪದ/ಗಳು) ಗಳನ್ನೇ ಶಿರೋನಾಮೆಯ ಬದಲಿಗೆ ಬಳಸಿಕೊಳ್ಳಬಹುದು. ಸಂಗ್ರಹಕ್ಕೆ ಹೆಸರು ನೀಡಿರುವ 33ನೇ ಗಜಲ್‌ನ ರದೀಫ್, “ಬಾರಾ ಕಮಾನಿನಂತೆ” ಈ ಗಜಲ್ ಸಂಗ್ರಹದ ಪ್ರಾತಿನಿಧಿಕ ಗಜಲ್ ಎನ್ನಬಹುದು. ವಿಜಯಪುರದಲ್ಲಿ ಅಲಿ ಆದಿಲ್ ಶಾ ನ ಸಮಾಧಿಯಿರುವ, ಅಪೂರ್ಣವಾಗಿ ನಿಂತಿರುವ ಹನ್ನೆರಡು ಕಂಬಗಳ ನಿರ್ಮಾಣವೊಂದಿದೆ. “ಕಟ್ಟುವುದ ಅಣಕಿಸುವಂಥ ವಿಫಲತೆಗಳೆಲ್ಲ ಬಾರಾಕಮಾನಿನಂತೆ” ಎಂದು ಕವಿ ಹೇಳಿದರೂ “ಬಿಡದೆ ಹೋರುವುದು ಮರಳಿ ಸೃಜಿಸುವುದೇ ಬಾಳು” ಎಂಬ ತತ್ತ್ವವು ಸಂಗ್ರಹದ ಎಲ್ಲ ಗಜಲ್‌ಗಳಲ್ಲೂ ಪ್ರತಿಪಾದಿತವಾಗಿದೆ.
ಬದುಕಿನ ಪ್ರತಿಯೊಂದು ಕಹಿ ಅನುಭವವೂ ನಮ್ಮಲ್ಲಿ ಅದೇನೋ ಒಂದನ್ನು ಉಳಿಸಿಹೋಗುತ್ತದೆ. ಅದು ನಮ್ಮ ಭವಿಷ್ಯದ ಮೇಲೂ ಪ್ರಭಾವ ಬೀರುತ್ತದೆ. ಆದರೆ ಕವಿ ಅದರ ಇನ್ನೊಂದು ಮಗ್ಗುಲನ್ನು ನೋಡುವಂತೆ ಸೂಚಿಸುತ್ತಾರೆ. “ನೋವಿನ ಬಣ್ಣಗಳಲ್ಲಿ ಎಷ್ಟೆಂದು ಮುಳುಗುವೆ ಹೇಳು | ಪುಟ ತಿರುಗಿಸಿ ನೋಡು – ಮುಗಿಲೊಂದು ಅರಳಿದೆ | ಮಧುಶಾಲೆ ಮುಚ್ಚಿದೆ ಎಂದು ಕಳವಳಿಸುವೆ ಏಕೆ | ಒಳಬುತ್ತಿಯ ತಡಕು ಅವಳ ನೆನಪೊಂದು ಅರಳಿದೆ (2)” ಎಂದು ಹೆದ್ದಾರಿಯ ಕೊನೆ ತಲುಪಿದರೂ ಭರವಸೆಯ ಕಿರುದಾರಿಯೊಂದು ಎದುರಾಗುತ್ತದೆ, “ಹಗೂSರ ಹೆಜ್ಜೆಗಳಲ್ಲಿ ಸಾಗಿಬಿಡು ನೀ” ಎಂದು ಧೈರ್ಯ ತುಂಬುತ್ತಾರೆ.
ಕವಿ ಎಂದೂ ಗತದಲ್ಲಿ ನಿಂತುಬಿಡುವುದಿಲ್ಲ; ಗತವನ್ನು ವರ್ತಮಾನಕ್ಕೆ ಮುಖಾಮುಖಿಯಾಗಿಸುತ್ತಾರೆ. ಕ್ರಿಯೆಯಿರುವುದು ವರ್ತಮಾನದಲ್ಲಿ ಮಾತ್ರ. ಕ್ರಿಯೆಯಿದ್ದಲ್ಲಿ ಜೀವಂತಿಕೆಯೂ ಇರುತ್ತದೆ. “ಅವಳ ಮೈಯುದ್ದಕ್ಕೂ ಇರುವ ಚುಕ್ಕಿಗಳ ಎಣಿಸಬೇಕು | ಕಚಗುಳಿಯಿಟ್ಟು ಎದೆಯ ಚಂದ್ರನ ನಗಿಸಿ ದಣಿಯಬೇಕು | ಮೈ ಸೋಲುವ ವರೆಗೂ ಅವನನ್ನು ಕುಣಿಸಬೇಕು (3)” ಮುಂತಾದ ಸಾಲುಗಳ ಜೀವಂತಿಕೆಯನ್ನು ಗಮನಿಸಿ.
ಕವಿಯು ತನ್ನ ಕಾವ್ಯಕರ್ಮದ ಉದ್ದೇಶವನ್ನು ತಮ್ಮ ಹಿಂದಿನ ಕವನಗಳ ಸಂದರ್ಭದಲ್ಲಿ ತಿಳಿಸಿದ್ದಿದೆ. ಅದನ್ನು ಇಲ್ಲಿ 29ನೇ ಗಜಲ್‌ನಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ. “ಅಂತಃಕರಣವ ಅಲುಗಿಸದಿದ್ದರೆ, ಕಣ್ಣು ಚೂರೂ ಹನಿಯದಿದ್ದರೆ, ಲೋಕದ ಶೋಕಕೆ ದನಿಯಾಗದಿದ್ದರೆ, ನಿಜದ ಸೊಲ್ಲುಗಳ ನುಡಿಯದಿದ್ದರೆ ಪೊರೆಗಳ ಹರಿಯುತ ಪೊರೆಯದಿದ್ದರೆ, ಒಳಗಿನೊಳಗನು ಬೆಳಗದಿದ್ದರೆ” ಅದೇನು ಕವಿತೆಯೇ? ಎಂಬುದು ಕವಿಯ ಪ್ರಶ್ನೆ. ಈ ಎಲ್ಲ ಉದ್ದೇಶಗಳನ್ನು ಲಕ್ಷ್ಯದಲ್ಲಿರಿಸಿಕೊಂಡು ಬರೆದಿರುವ ಗಜಲ್‌ಗಳು ಅ ಮಟ್ಟಿಗೆ ಯಶಸ್ವಿಯಾಗಿವೆ.
ಈ ಸಂಕಲನದಲ್ಲಿ ಕೆಲವು ಚಮತ್ಕಾರದ ಗಜಲ್‌ಗಳೂ ಇವೆ. ಆದರೆ ಅವು ಎಲ್ಲಿಯೂ ಕೃತಕವಾಗದೆ, ಸಹಜವಾಗಿ ಮೂಡಿ ಬಂದಿವೆ. ಕಾರಂತರ ಕಾದಂಬರಿಗಳ ಹೆಸರನ್ನು ಪೋಣಿಸಿ ಬರೆದ ಗಜಲ್ ಅವರ ಕಾದಂಬರಿಲೋಕದ ವಿಷಯವೈವಿಧ್ಯದ ಪರಿಚಯ ಮಾಡಿಕೊಟ್ಟರೆ, ಚೊಕ್ಕಾಡಿಯವರ ಕವನಗಳ ಹೆಸರುಗಳನ್ನು ಪೋಣಿಸಿ ಬರೆದ ಗಜಲ್ ಚೊಕ್ಕಾಡಿಯವರ ಕವನಗಳ ಜೀವಸತ್ವವನ್ನು ತೆರೆದಿಡುತ್ತದೆ.
“ಮಣ್ಣ ಹೆಂಟೆ ಕಸವರವಾಗಲು ಅದೆಷ್ಟು ಕಾಯಬೇಕು | ಬದುಕೊಂದು ಮಾಗಲು ಅದೆಷ್ಟು ಕಾಯಬೇಕು (58)” – ಈ ಸಾಲುಗಳು ಅಡಿಗರು ಬರೆದ “ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೆ ಪುರುಷೋತ್ತಮನ ಆ ಅಂಥ ರೂಪರೇಖೆ” ಎಂಬ ಅಡಿಗರ ಮಾತುಗಳನ್ನು ಅತ್ಯಂತ ಸೊಗಸಾಗಿ, ಸರಳ ಮಾತುಗಳಲ್ಲಿ ಅಷ್ಟೇ ಪರಿಣಾಮಕಾರಿಯಾಗಿ ವಿವರಿಸುತ್ತವೆ. “ದುಗುಡಗಳನೇ ಬರೆದ ಬೆರಳು (59), ಬಯಕೆಗಳಿಗೆ ಹರಯ ಬಂದಂತೆ (57), ಮಗುರೆಪ್ಪೆ ತೆಗೆದು ಚಿಗುರಿ ಹೂವಾಡದೇ ನಲಿವು (56) ವಿಷಾದ ತೀರ ಸೇರಲು ನೀನು ನಲುಮೆನೌಕೆಗಳ ಆಯ್ದುಕೊಂಡೆ (34)” ಮುಂತಾದ ರೂಪಕಗಳು ಸಂಕಲನದಲ್ಲಿ ಧಾರಾಳವಾಗಿ ಬಂದಿವೆ.
ಸಂಕಲನಕ್ಕೆ ಡಾ. ಗಿರೀಶ ಜಕಾಪುರೆಯವರು ಬರೆದ ಮುನ್ನುಡಿ ಸಂಗ್ರಹಯೋಗ್ಯ. ಮುಖಪುಟವನ್ನು ಆಕರ್ಷಕವಾಗಿ ರಚಿಸಿದವರು ಸುರೇಶ್ ಎ ಪಿ, ಕೈಗಾ. ಪ್ರತಿಯೊಂದು ಗಜಲ್‌ನ ಕೊನೆಯಲ್ಲಿರುವ ರೇಖಾ ಚಿತ್ರಗಳನ್ನು ಸತೀಶ್ ಯಲ್ಲಾಪುರ ಅವರು ರಚಿಸಿದ್ದು ಅವು ಪುಸ್ತಕದ ಮೆರುಗನ್ನು ಹೆಚ್ಚಿಸಿವೆ. ಅಂದವಾದ ಪುಟವಿನ್ಯಾಸ, ಮುದ್ರಣ ಗಮನಸೆಳೆಯುತ್ತವೆ.
“ದಡದ ಮೇಲೆ ನೋಡುತ್ತ ನಿಲ್ಲುವುದು ಸುಳ್ಳು ಸಖೀ |
ನೋಡನೋಡುತ್ತ ಪ್ರವಾಹ ನಮ್ಮನ್ನು ಸೆಳೆದೇ ಬಿಡುತ್ತದೆ (26) ||”
ಸಂಕಲನದ ಗಜಲ್‌ಗಳ ಮೇಲೆ ಕಣ್ಣು ಹಾಯಿಸುತ್ತೇನೆ ಎನ್ನುವುದು ಸುಳ್ಳು, ನೋಡನೋಡುತ್ತ ನಮ್ಮನ್ನು ಸೆಳೆದೇ ಬಿಡುತ್ತದೆ.






0 Comments