ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದಲಿತ ಲೋಕ ಕಥನ ‘ಕಾಲಡಿಯ ಕಣ್ಣು’

ಸಿ ಎಂ ಮುನಿಯಪ್ಪ ಹಸಾಳ ಅವರ ‘ಕಾಲಡಿಯ ಕಣ್ಣು’

‘ಮುಂಗೋಳಿ ಪ್ರಕಾಶನ’ ಈ ಕೃತಿಯನ್ನು ಪ್ರಕಟಿಸಿದೆ.

ಈ ಕೃತಿಯ ಕುರಿತು ಹಿರಿಯ ಸಾಹಿತಿ ಅರವಿಂದ ಮಾಲಗತ್ತಿ ಅವರ ಬರಹ ಇಲ್ಲಿದೆ.

-ಅರವಿಂದ ಮಾಲಗತ್ತಿ

ಚಿಕ್ಕಹಳ್ಳದ ಹುಟ್ಟೂರಿನಿಂದ ಆರಂಭವಾದ ಇಲ್ಲಿಯ ಕಥನ ತಾಯಿಯ ಪರಲೋಕದ ಪಯಣದೊಂದಿಗೆ ಮುಕ್ತಾಯಗೊಳ್ಳುತ್ತದೆ. ಕೃತಿ ಅತ್ಯಂತ ಸಣ್ಣ ಸಣ್ಣ ಸಂಗತಿಗಳ ವಿವರಗಳೊಂದಿಗೆ ಬೆಳದಿದೆ. ಅದು ಕೃತಿಯ ಸೌಂದರ್ಯವೂ ಹೌದು ಓದಿಸಿಕೊಂಡು ಹೋಗಲು ಸಹಾಯಕವೂ ಹೌದು. ಇದು ಘೋಷಿತ ದಲಿತ ಚಳುವಳಿಯ ಕೃತಿಯಾಗಿ ಹೊರಬರದೆ, ಹೇಳಿದ ಕೇಳಿದ ನೋಡಿದ ಓದಿದ ಚಳುವಳಿಯ ಚಿತ್ರಗಳನ್ನು ಸ್ವ ಅನುಭವದ ಸಂಗತಿಗಳ ಹದವತ್ತಾದ ನೇಗೆಯಿಂದ ರೂಪಗೊಂಡಿದೆ. ಇವುಗಳುದ್ದಕ್ಕೂ ವೈಯಕ್ತಿಕ ಬದುಕಿನ ಮತ್ತು ಕೌಟುಂಬಿಕ ಅನುಭವಗಳ ಸಾಂದ್ರತೆ ಉದ್ದಕ್ಕೂ ಹಾಸಿಕೊಂಡಿದ್ದರಿಂದ ಇವೆಲ್ಲವುಗಳಿಂದ ಅಭೇದ್ಯ ಎನ್ನುವಂತೆ ಅನಾವರಣ ಗೊಳಿಸಿದೆ.

ಒಟ್ಟು ಏಳು ಭಾಗಗಳನ್ನು ಒಳಗೊಂಡ ಈ ಕೃತಿ, ಮೊದಲ ಮತ್ತು ಎರಡನೇ ಭಾಗದಲ್ಲಿ ವೈಯಕ್ತಿಕ ಬದುಕು ಹಾಗೂ ಕೌಟುಂಬಿಕ ಅನುಭವದ ಪ್ರಸಂಗಗಳಿವೆ. ದ ಸಂ ಸದ ಪ್ರಕರಣಗಳು ನಡು ನಡುವೆ ಇಣುಕುತ್ತವೆ. ಇನ್ನುಳಿದ ಐದು ಭಾಗಗಳು ಹೋರಾಟದ ಚಿತ್ರಣವನ್ನೇ ಅಧಿಕೃತವಾಗಿ ಕೊಡುತ್ತವೆ. ಮೂರನೇ ಭಾಗ ಒಂದನ್ನು ಹೊರತುಪಡಿಸಿ, ಇನ್ನುಳಿದ ಭಾಗದಲ್ಲಿ ದ ಸಂ ಸ ವೃಕ್ಷದ ಹೋರಾಟದ ಕೊಂಬೆರೆಂಬೆಗಳಾಗಿ ಚಾಚಿಕೊಂಡಿವೆ. ಮೂರನೇ ಭಾಗ ಈ ವೃಕ್ಷದ ದೊಡ್ಡ ಕೊಂಬೆಯಾಗಿ ಮೂಡಿಬಂದಿದೆ. ಈ ಹೋರಾಟಕ್ಕೆ ಬೇಕಾಗುವ ಸಿದ್ಧತೆಯ ಸ್ವರೂಪಗಳು, ಅಂದರೆ ಶಿಬಿರಗಳು, ವಿಚಾರ ಸಂಕಿರಣಗಳು, ಒಕ್ಕೂಟದ ಸಮ್ಮೇಳನಗಳು, ಸಮಾವೇಶಗಳು, ಜಾತಾಗಳು,ಕಲಾಮಂಡಳಿ ಇಂಥವು ಬೇರಂತೆ ಹರಡಿಕೊಂಡಿವೆ. ದ ಸಂ ದ ಒಳಪದರುಗಳು ಹಾಗೂ ಎಲೆಗಳಂತೆ ಕಂಗೊಳಿಸುವ ಹೋರಾಟಗಾರರು, ಜಡ ವ್ಯವಸ್ಥೆಯ ಪ್ರತಿರೂಪಕರು, ಸರ್ಕಾರದ ಪ್ರತಿನಿಧಿಗಳು ಹೀಗೆ ಭಾಗಗಳ ತುಂಬಾ ಚಾಚಿಕೊಂಡಿವೆ. ನಡು ನಡುವೆ ಬದುಕಿನ ಅನುಭವದ ತುಣುಕುಗಳೂ ಹಾದು ಹೋಗುತ್ತವೆ.

ಶ್ರೀಯುತ ಸಿಎಂ ಮುನಿಯಪ್ಪ ಅವರು ದಲಿತ ಸಂಘರ್ಷ ಸಮಿತಿಯ ಒಡನಾಡಿಯಾಗಿ ಹೋರಾಟಗಾರರಾಗಿ ಮೊದಲಿನಿಂದಲೂ ಹೆಜ್ಜೆ ಹಾಕಿದವರು. ಮತ್ತು ಜಿಲ್ಲಾ ಸಂಚಾಲಕರಾಗಿ, ರಾಜ್ಯ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದವರು. ಮೇಲಾಗಿ ಪತ್ರಕರ್ತರು ಹೀಗಾಗಿ ಬರಹದ ಹದವನ್ನು ಬಲ್ಲವರಾಗಿರುವುದರಿಂದ ಇವರ ಬರಹ ಮತ್ತು ಅಭಿಪ್ರಾಯಕ್ಕೆ ಒಂದು ತೂಕ ತಾನೇ ತಾನಾಗಿ ಪಡಿ ಮೂಡಿಸುತ್ತದೆ.

“ಕಾಲಡಿಯ ಕಣ್ಣು” ಕೃತಿಯನ್ನು ಸ್ನೇಹಿತರ ಮೂಲಕ ಸಿಎಂ ಮುನಿಯಪ್ಪನವರು ಕಳುಹಿಸಿಕೊಟ್ಟಿದ್ದರು. ಪುಸ್ತಕ ಕೊಡುವುದರೊಂದಿಗೆ ಪೋನಾಯಿಸಿ , ಮುನಿಯಪ್ಪನವರೊಂದಿಗೆ ಮಾತನಾಡಲು ಅನುವು ಮಾಡಿಕೊಟ್ಟರು. ಆ ಕೃತಿಯ ಗಾತ್ರವನ್ನು ಹೊರಾವರಣದಿಂದ ನೋಡಿ ದಲಿತ ಚಳುವಳಿಗೆ ಸಂಬಂಧಿಸಿದಂತೆ ಸಂಪಾದಿತ ಗ್ರಂಥ ಇದಾಗಿರಬಹುದು ಎಂದುಕೊಂಡಿದ್ದೆ! ಒಳ ಪ್ರವೇಶಿಸಿದ ನಂತರ ಇದು ಆತ್ಮಕತೆ ಎನ್ನುವುದು ಅರಿವಿಗೆ ಬಂತು. ನನ್ನ ಅನಾರೋಗ್ಯದ ಬಗ್ಗೆ, ಕುರಿತು ಓದಲಾಗದ ಸ್ಥಿತಿಯ ಬಗ್ಗೆ ಹೇಳಿ ಕೃತಿಯ ಬಗ್ಗೆ ಬರೆಯುವುದು ಕಷ್ಟ ಎಂದೆ. ನಿಧಾನವಾಗಿ ಒಂದೊಂದು ಭಾಗವನ್ನು ಓದಿ ನೋಡಿ ಎಂದು ಹೇಳುವುದರೊಂದಿಗೆ, ನನ್ನ ಆತ್ಮಕತೆ “ಗೌರ್ಮೆಂಟ್ ಬ್ರಾಹ್ಮಣ” ಕುರಿತು ದಾಖಲಿಸಿದ್ದ ಬಗ್ಗೆ ಹೇಳಿದರು.

ಕನ್ನಡದ ದಲಿತ ಚಳುವಳಿ ಹಾಗೂ ಬದುಕಿಗೆ ಸಂಬಂಧಿಸಿದಂತೆ ಇಷ್ಟೊಂದು ಬೃಹದಾಕಾರದ ಆತ್ಮಕಥನ ಪ್ರಕಟವಾದದ್ದು ಮೊದಲನೆಯದಾಗಿದೆ. ಕನ್ನಡದಲ್ಲಿ ಬೃಹದಾಕಾರದ ಆತ್ಮಕಥೆಗಳು ಪ್ರಕಟವಾಗಿವೆ. ಎಚ್ಎಲ್ ನಾಗೇಗೌಡರ ಆತ್ಮಕಥನ ಎರಡು ಸಂಪುಟದಲ್ಲಿ ಪ್ರಕಟವಾದರೆ, ಬಸವರಾಜ ಕಟ್ಟಿಮನಿ ಅವರ ಹೋರಾಟದ ಬದುಕು ಆತ್ಮಕತೆಯೂ ನೆನಪಾಗುತ್ತದೆ. ಈ ವರೆಗೆ ಪ್ರಕಟವಾದ ಹೆಚ್ಚಿನ ದಲಿತ ಆತ್ಮಕಥೆಗಳು ದಲಿತ ಚಳುವಳಿಯನ್ನು ಮೀರಿ ಬಂದದ್ದು ತುಂಬಾ ವಿರಳವೆಂದೆ ಹೇಳಬಹುದು. ಈ ವರೆಗೆ 25ಕ್ಕೂ ಮಿಕ್ಕು ದಲಿತ ಆತ್ಮಕಥೆಗಳು ಪ್ರಕಟವಾಗಿವೆ. ಈ ಆತ್ಮಕಥೆಗಳಲ್ಲಿ ದಲಿತ ಚಳುವಳಿಯ ಭಾಗಗಳು ಉದ್ಘೋಷಿತವಾಗಿ ದಾಖಲಾದುದೇ ಅಧಿಕವಾಗಿದೆ. “ಕಾಲಡಿಯ ಕಣ್ಣು” ಇಂಥ ಇರುವಿಕೆಯಿಂದ ಬಿಡಿಸಿಕೊಳ್ಳಲು ಹವಣಿಸಿದೆ. ಇದಕ್ಕೆ ಮುಖ್ಯ ಕಾರಣ ಬರಹದ ಆರಂಭದಲ್ಲಿ ಹೇಳಿದ ಸಂಗತಿಗಳೇ ಆಗಿವೆ ಎನಿಸಿದೆ. “ಗೌರ್ಮೆಂಟ್ ಬ್ರಾಹ್ಮಣ” ಆತ್ಮಕತೆಯ ಈ ಕೃತಿಯ ಆರಂಭದಲ್ಲಿ ಹೇಳಿಕೊಂಡಂತೆ, ಹೋರಾಟದ ಭಾಗಗಳನ್ನು ದಾಖಲಿಸದಿರುವುದಕ್ಕೆ ಕಾರಣ, ಈ ಸಂಗತಿ ಕಾರಣ ಎನ್ನುವುದನ್ನು ಹೇಳಿಕೊಂಡಿದ್ದೇನೆ.

ಈ ವರೆಗೆ ಪ್ರಕಟವಾದ ಎಲ್ಲಾ ದಲಿತ ಆತ್ಮಕಥೆಗಳನ್ನು ಓದುವುದು ಒಂದೇ, “ಕಾಲಡಿಯ ಕಣ್ಣು” ಓದುವುದು ಒಂದೇ ಎಂದು ಹೇಳಬೇಕೆನಿಸಿದರೂ, ವೈಯಕ್ತಿಕ ಅನುಭವ ಮತ್ತು ನೋಡುವ ದೃಷ್ಟಿಕೋನಗಳು ಬರಹದ ಶೈಲಿ ಭಿನ್ನವಾಗಿರುವುದರಿಂದ ತಮ್ಮ ಅಸ್ತಿತ್ವವನ್ನು ಪ್ರತ್ಯೇಕವಾಗಿ ಕಾಯ್ದುಕೊಳ್ಳುತ್ತವೆ ಆದರೆ “ಕಾಲಡಿಯ ಕಣ್ಣು” ದಲಿತ ಚಳುವಳಿಯ ಸಮಗ್ರತೆ ಎಡೆಗೆ ಸಾಗುವ ತುಡಿತವಿದೆ. ಸ್ವಕೀಯ ಹಾಗೂ ಸ್ಥಳೀಯ ಅನುಭವದ ನೆಲೆಯಲ್ಲಿ ನಿಂತು ನೋಡುತ್ತದೆ . ಇದಕ್ಕಿರುವ ವ್ಯಾಪ್ತಿ ಇನ್ನುಳಿದ ದಲಿತ ಆತ್ಮಕಥೆಗಳಿಗೆ ದಕ್ಕಿಲ್ಲ ಎಂದು ಧಾರಾಳವಾಗಿ ಹೇಳಬಹುದು.

ದಲಿತ ಚಳುವಳಿಯ ಕುರಿತು, ಅಧ್ಯಯನದ ಕೃತಿಗಳು ಮತ್ತು ಸಂಗ್ರಹದ ಕೃತಿಗಳು ಪ್ರಕಟವಾಗಿವೆ. ಕೆಲವರು ಕಾದಂಬರಿಗಳಲ್ಲಿಯೂ (ಕುಸುಮಬಾಲೆ, ಮರಣ ಮಂಡಲ ಮಧ್ಯದೊಳಗೆ) ಚಳವಳಿಯ ಸಂಗತಿಗಳನ್ನು ತಂದಿದ್ದಾರೆ. ಸ್ವಕೀಯತೆಯ ಬರಹಕ್ಕೂ ಅಧ್ಯಯನದ ಬರಹಕ್ಕೂ ವ್ಯತ್ಯಾಸಗಳಿವೆ ಮತ್ತು ಪರಿಣಾಮದಲ್ಲಿಯೂ ಅಷ್ಟೇ ಅಂತರಗಳಿವೆ. ಎನ್ ಮೂರ್ತಿ ಅವರ “ದಲಿತ ಹೋರಾಟದ ಮಹಾಪ್ರಬಂಧ” ಎರಡು ಸಂಪುಟಗಳಲ್ಲಿ ಬಂದಿವೆ. ಸೀಮಾತೀತ ಕನ್ನಡ ಸಾಹಿತ್ಯ ಚರಿತ್ರೆ :ದಲಿತ ಚಳುವಳಿ,ದಲಿತ ಆತ್ಮಕಥೆಗಳು, ಚಿನ್ನಸ್ವಾಮಿ ಸೋಸಲೆಯವರ… ಕನ್ನಡ ಹಾಗೂ ಇಂಗ್ಲೀಷ್ ಆವೃತ್ತಿ ಸಂಪುಟಗಳು

ಇಂಥವೆಲ್ಲ ಅಂಶಿಕವಾಗಿ ಅದರಲ್ಲೂ ದಲಿತ ಹೋರಾಟಕ್ಕೆ ಸಂಬಂಧಿಸಿ, ಪಂಚಮ ಪತ್ರಿಕೆಯ ನೆರಳಿನಲ್ಲಿ ಬಂದವು. ಮತ್ತು ಆಂಶಿಕವಾದವು. “ಕಾಲಡಿಯ ಕಣ್ಣು” ಪಂಚಮದ ಇರುವಿಕೆಯಿಂದ ಹೊರತಾಗಿಲ್ಲ ಎನಿಸಿದರೂ ಇದರ ಸಂಬಂಧ ಸಾಧ್ಯತೆಗಳು ಬೇರೆ ಇವೆ.

ಪ್ರಸ್ತುತ ‘ದಲಿತ ಲೋಕ ಕಥನ’ ವೈಯಕ್ತಿಕ ಹಾಗೂ ಕೌಟುಂಬಿಕ ಕಥನದ ಪ್ರಸಂಗಗಳ ಸರಮಾಲೆಯಿಂದ ಆರಂಭವಾಗಿ ಮತ್ತೆ ಕೌಟುಂಬಿಕ ಸನ್ನಿವೇಶಗಳೊಂದಿಗೆ ಮುಕ್ತಾಯವಾಗುತ್ತದೆ. ಕೆಲವು ಪ್ರಸಂಗಗಳು ಸಾಂಕೇತಿಕವಾಗಿ ಚಳುವಳಿಯೊಂದಿಗೆ ತಾಧ್ಯಾತ್ಮಿಕ ಸಂಬಂಧವನ್ನು ಸಾಧಿಸಿಕೊಳ್ಳುತ್ತವೆ. ಕೆಲ ಬಾರಿ ಆತ್ಮಕಥೆಯೊಳಗೆ ಹೋರಾಟವಾಗಿ, ಇನ್ನು ಕೆಲ ಬಾರಿ ಹೋರಾಟದೊಳಗೆ ಆತ್ಮಕತೆಯಾಗಿ ಚಿತ್ರತವಾಗಿದೆ.

ಈ ಕೃತಿಯಲ್ಲಿ ಅನಸೂಯಮ್ಮ ಮತ್ತು ಶೇಷಗಿರಿಯಪ್ಪನ ಕೊಲೆಯ ಪ್ರಸಂಗ ಸ್ಥಾಯಿಭಾವದ ಭಾಗವಾಗಿ 90 ಪುಟಗಳಷ್ಟು ವ್ಯಾಪಿಸಿಕೊಂಡಿದೆ ಮತ್ತು ಅದು ಅನಿವಾರ್ಯ ಎನಿಸುತ್ತದೆ. ಮುನಿಯಪ್ಪನ ಕೊಲೆಯ ಪ್ರಸಂಗ ಮತ್ತು ಕೃಷ್ಣಪ್ಪನ ಹೊಟ್ಟೆ ಕರುಳಿನ ದಾರುಣ ಸಾವಿನ ಪ್ರಸಂಗ, ಹೊಸಹಳ್ಳಿಯ ಮದುಮಗ ಕಾಳಪ್ಪನ ಧಾರುಣ ಘಟನೆ, … ಇಂತವು ಹೃದಯ ವಿದ್ರಾವಕ ಘಟನೆಗಳಾಗಿಯೇ ಓದುಗರ ಮನಸ್ಸನ್ನು ಕಾಡುತ್ತಾ ಹೋಗುತ್ತವೆ. ಭೂ ಮಸೂದೆ ಕಾಯ್ದೆ ಹಾಗೂ ಅದಕ್ಕೆ ಸಂಬಂಧಿಸಿದ ಭೂ ಹೋರಾಟದ ಪೂರಕ ಪ್ರಸಂಗಗಳು, ಸಾಮಾಜಿಕ ಸಮಸ್ಯೆಯ ಹೋರಾಟಗಳು ಯಾವುದೇ ಎಗ್ಗಿಲ್ಲದೆ ದಾಖಲಾಗಿವೆ. ಇದರೊಂದಿಗೆ ದಲಿತ ನಾಯಕರೊಂದಿಗೆ ಸಂಘರ್ಷ, ಹೋರಾಟದ ಒಂದು ಭಾಗವಾಗಿದ್ದು, ಹೋರಾಟದ ವಸ್ತು ನಿಷ್ಠತೆಯನ್ನೂ ಮುಂದಿಡುತ್ತವೆ. ಇಂಥ ಪ್ರಸಂಗಗಳಲ್ಲದೆ ಇನ್ನು ಕೆಲ ಪ್ರಸಂಗಗಳು ಪ್ರಾದೇಶಿಕತೆಯನ್ನು ಮೀರಿ ಬೆಳೆದ ಬಗೆಯನ್ನೂ ಕಟ್ಟಿಕೊಡುತ್ತವೆ.

ಅನಸೂಯಮ್ಮ ಪ್ರಕರಣದ ಹೋರಾಟದ ಸಂದರ್ಭದಲ್ಲಿ ನಾನು ಧಾರವಾಡದಲ್ಲಿದ್ದೆ. ಇಲ್ಲಿ ನಡೆಯುವ ಚಟುವಟಿಕೆಯಲ್ಲಿ ಭಾಗವಹಿಸುತ್ತಿದೆ. ಈ ಸಂದರ್ಭದಲ್ಲಿ ಪರಿಚಯವಾದವರು ವಿಜಯ ಪಾಟೀಲ.ಇವರು ಅನಸೂಯಮ್ಮ ಮತ್ತು ಶೇಷಗಿರಿಯಪ್ಪನ ಕುರಿತು ಬರೆದಿದ್ದರು. ಅನಸೂಯಮ್ಮನ ರೇಖಾ ಚಿತ್ರದೊಂದಿಗೆ ಕೃತಿಯನ್ನು ಅವರಿಗೆ ಅರ್ಪಣೆ ಮಾಡಿದ್ದರು. ನನಗೆ ಅವರ ಬಗ್ಗೆ ತುಂಬಾ ಗೌರವ. ಒಂದು ಸಂದರ್ಭದಲ್ಲಿ ಧಾರವಾಡದ ವಿಶ್ವವಿದ್ಯಾನಿಲಯದಿಂದ ಸಿಟಿಗೆ ಹೋಗುವ ಬಸ್ಸಲ್ಲಿ ಪ್ರಯಾಣಿಸುತ್ತಿದ್ದೆವು. ಕೆಳಗಿಳಿದ ನಂತರವೂ ಮಾತು ನಡೆದೆಯಿದ್ದವು. ಏನಾಯಿತೊ ಏನೋ, “ನೀವು ನನಗೆ ಬಹಳ ಕಾಲದಿಂದ ಪರಿಚಿತರೇನಲ್ಲ. ನಿಮ್ಮನ್ನು ನಾನು ಸಂಪೂರ್ಣ ಅರ್ಥ ಮಾಡಿಕೊಂಡಿಲ್ಲ. ನೀವು ನನ್ನೊಂದಿಗೆ ಏಕ ವಚನದಲ್ಲಿ ಮಾತನಾಡುವುದು ಸರಿ ಅಲ್ಲ. ಪರಸ್ಪರ ಅರ್ಥ ಮಾಡಿಕೊಂಡ ಮೇಲೆ ಹಾಗೆ ಮತನಾಡೋಣ” ಎಂದರು. ಈ ಮಾತು ನನ್ನೆದೆಗೆ ನಾಟಿತು. ಮತ್ತೆ ಮಾತನಾಡುವ ಸಂದರ್ಭವೇ ಎದುರಾಗಲಿಲ್ಲ.

ಕೋಲಾರ ಜಿಲ್ಲೆಯ ಕೇಂದ್ರಿತ ಇಲ್ಲಿನ ಹೋರಾಟದ ಪ್ರಸಂಗಗಳು ನಾಡಿನ ಹಾಗೂ ರಾಷ್ಟ್ರದ ವ್ಯಾಪ್ತಿಯನ್ನು ಪಡೆದುಕೊಂಡ ಬಗೆಯನ್ನು ಪ್ರತಿಬಿಂಬಿಸಲಾಗಿದೆ. ದಸಂಸ ದಲ್ಲಿ ನಡೆಯುವ ಶಿಬಿರಗಳು ವಿಚಾರ ಸಂಕಿರಣಗಳು ನಾಡಿನ ಚಿಂತಕರ ಒಳಗೊಂಡಿದ್ದರಿಂದ ಹಾಗೂ ಅನ್ಯರಾಜ್ಯಗಳ ಚಿಂತಕರನ್ನು ಒಳಗೊಂಡಿದ್ದರಿಂದ ಇಲ್ಲಿಯ ಹೋರಾಟ ಸಹಜವಾಗಿ ರಾಷ್ಟ್ರವ್ಯಾಪ್ತಿಯ ಸಂಬಂಧಗಳಿಗೆ ವಿಸ್ತರಿಸಿಕೊಂಡಂತಾಗಿದೆ. ಶೇಷಗಿರಿಯಪ್ಪನ ಪ್ರಕರಣ ದಲಿತ ಹೋರಾಟದ ಜೀವನಾಡಿಯಾಗಿದ್ದು ಅದರಲ್ಲಿ ಭಾಗಿಯಾಗಿದ್ದ ನಾಡಿನ ಪ್ರಖ್ಯಾತ ಲೇಖಕರೊಂದಿಗೆ ಮತ್ತು ಹೋರಾಟಗಾರರೊಂದಿಗೆ ಸಮರ್ಥವಾಗಿ ಕಟ್ಟಿಕೊಡಲೆತ್ನಿಸಿದೆ. ಆರ್ಮುಗಂ ಅವರ ಪ್ರಕರಣವೂ ವಿಸ್ತೃತವಾಗಿದೆ ಮೂಡಿದೆ. ಇವುಗಳ ವ್ಯಾಪ್ತಿ ಕೆಲವೊಮ್ಮೆ ಬೇಕಿತ್ತೆ ಎನಿಸಿದರೂ, ಚಳವಳಿಯ ಸಂಪರ್ಕ ಇಲ್ಲದವರಿಗೆ, ಹೊಸಬರಿಗೆ, ಮುಂದೆ ಚಳುವಳಿಯನ್ನು ಕಟ್ಟ ಬಯಸುವವರಿಗೆ ಪೂರ್ಣ ಬಗೆಯ ಆಹಾರವನ್ನು ಒದಗಿಸುತ್ತದೆ. ಹೋರಾಟದ ಪ್ರಕರಣಗಳು ರಾಜ್ಯದ ಮಂತ್ರಿಗಳು, ಮುಖ್ಯಮಂತ್ರಿಗಳು ಹಾಗೂ ಪ್ರಧಾನ ಮಂತ್ರಿಗಳ ಹೊರಗೆ ಹೋದ ನಡೆಯನ್ನು ಸಹಜವಾಗಿ ನಿರೂಪಿಸಲಾಗಿದೆ. ಹೋರಾಟದ ನೈಜ ಬಗೆಯನ್ನು ನಿರೂಪಿಸುವ ಉತ್ತರ ಕರ್ನಾಟಕದ ಹಾಗೂ ಉತ್ತರ ಕನ್ನಡದ ಇಂತ ಕಥಾನಕಗಳು ಹೊರಬರುವ ಅಗತ್ಯ ಇದೆ ಎನ್ನುವುದನ್ನು ಈ ಕೃತಿ ಪರೋಕ್ಷವಾಗಿ ಸಾರುತ್ತದೆ.

ಹೋರಾಟದ ಪ್ರಸಂಗಗಳನ್ನು ಹಲವೆಡೆ ನಿರೂಪಿಸುವಾಗ ಕಾವ್ಯತ್ಮಕ ಭಾಷೆಯನ್ನು ಬಳಸಲಾಗಿದೆ. ಕೆಲ ಸಂಧರ್ಭದಲ್ಲಿ ಕೃತಕತೆ ಇಣುಕಿದೆ. ಆದರೆ ಹೆಚ್ಚಿನ ಪ್ರಸಂಗಗಳು ಘಟನೆಯ ವಾಸ್ತವತೆಯನ್ನು ಕಳೆದುಕೊಳ್ಳದಂತೆಯೇ ನಿರೂಪಿಸಿದ್ದು, ಓದುಗರನ್ನು ಸಲೀಸಾಗಿ ಕರೆದುಕೊಂಡು ಹೋಗುತ್ತದೆ . ವೈಯಕ್ತಿಕ ಬದುಕಿನ ಸಂದರ್ಭದಲ್ಲಿ ಬಂದ ಕಾವ್ಯತ್ಮಕ ಭಾಷೆ ಮೆರಗು ಕೊಟ್ಟಿದೆ ಮತ್ತು ಬದುಕಿನ ವೈಯಕ್ತಿಕ ಪ್ರಸಂಗಗಳಲ್ಲಿ ಎದುರಾದ ಸನ್ನಿವೇಶಗಳನ್ನು ಹಾಸ್ಯ ಚಟಾಕಿಯ ಮೂಲಕ ಕರೆದೊಯ್ದದ್ದು ಚಳುವಳಿಯ ಗಾಂಭೀರ್ಯತೆಯ ಜೊತೆಗೆ ತಿಳಿಹಾಸ್ಯದ ಲೇಪ ಒದಗಿಸಿದಂತಾಗಿದೆ. ಕೂಟಗಾನಹಳ್ಳಿ ರಾಮಯ್ಯನವರು ಹೋರಾಟದ ಬದುಕಿನಲ್ಲಿ ಹಾಸಿಕೊಂಡಿದ್ದನ್ನು ಅರ್ಥಪೂರ್ಣವಾಗಿ ವಿವರಿಸಲಾಗಿದೆ. ಚಳುವಳಿಯ ಪ್ರಸಂಗಗಳ ಜೊತೆಗೆ ವೈಯಕ್ತಿಕ ಬದುಕಿನಲ್ಲಿ ಹಾದು ಹೋಗುವ ಸನ್ನಿವೇಶಗಳಲ್ಲಿ ವ್ಯಕ್ತವಾಗುವ ಸ್ಥಳೀಯ ಆಡು ಭಾಷೆಯ ಸ್ಪರ್ಶ ಅಲ್ಲಲ್ಲಿ ಬಂದದ್ದು ವಿಶೇಷವಾಗಿ ಗಮನ ಸೆಳೆಯುತ್ತದೆ.

ಇಲ್ಲಿಯ ಪ್ರಕರಣ ಸನ್ನಿವೇಶಗಳನ್ನು ವಿವರಿಸುವಾಗ ಅತ್ಯಂತ ಸೂಕ್ಷ್ಮ ಸಂಗತಿಗಳನ್ನು ಬಿಟ್ಟುಬಿಡದೆ ದಾಖಲಿಸಲಾಗಿದೆ. ಹೀಗಾಗಿಯೇ ಪ್ರಕರಣಗಳು ಸಹಜವಾಗಿ ಕಣ್ಣು ಕಟ್ಟುವಂತೆ ಮೂಡಿ ಬಂದಿದ್ದು. ಒಂದು ಕಾದಂಬರಿಯ ಗುಣ ಲಕ್ಷಣಗಳಿಗೆ ಆತುಕೊಂಡಿರುವುದು ಅರಿವಿಗೆ ಬರುತ್ತದೆ.ಕೆಲವೊಮ್ಮೆ ಈ ವಿಷಯದ ಬಗ್ಗೆ ಬರೆಯಲೇಬೇಕು ಎನ್ನುವ ಧೋರಣೆ ಶುಷ್ಕತೆಗೆ ತಿರುಗಿದಂತಿದೆ. ಕಾದಂಬರಿಯಲ್ಲಿ ಸಂವಿಧಾನವನ್ನು ಬೆಳೆಸಿದಂತೆ ಇಲ್ಲಿಯ ಸಣ್ಣ ಸಣ್ಣ ಸಂದರ್ಭಗಳು ಬೆಳೆದಿವೆ. ಕೆಲವೊಮ್ಮೆ ಅವು ಸಾಂಕೇತಿಕವಾದ ರೂಪವನ್ನು ಧಾರಣ ಮಾಡಿಕೊಂಡದ್ದು ಮತ್ತೊಮ್ಮೆ ಓದುವಂತೆ ಮಾಡುತ್ತವೆ. ದ ಸಂ ಸ ಒಡೆದ ಕನ್ನಡಿಯಾದುದ್ದನ್ನು ನಾಲೆ ನೀರಿನಲ್ಲಿ ನಿಂತ ನಾಯಕರ ಇರುವಿಕೆಗೆ ಹೋಲಿಸಿ ಮೊಟಕು ಗೊಳಿಸಲಾಗಿದೆ. ಹಾಗೆಯೇ ಗುಡಿಸಲ ಮೇಲೆ ಹಬ್ಬಿದ ಬಳ್ಳಿಯು ಬಿಟ್ಟ ಕಾಯಿ ಮತ್ತು ಹೂಗಳ ಕುರಿತು ಅರ್ಥೈಸುವ ಸಾಂಕೇತಿಕ ಬಗೆಗಳು……ಇಂಥವೆಲ್ಲ ಕೃತಿಯ ಮೌಲ್ಯವನ್ನು ಹೆಚ್ಚಿಸಿವೆ.

‍ಲೇಖಕರು Admin

16 September, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading