-ಸಾಮಂತ್ರಿ ಜ್ಯೋತಿ
ಹೆಣ್ಣಾಗುವುದೆಂದರೆ..
ವಿಕಾಸಕ್ಕೆಂದು ಕೂಡಿಟ್ಟ
ಪೋಷಕವ ಧಿಕ್ಕರಿಸುವ ಭರದಲಿ
ಮೈಮುರಿಯುವ ಮಾಂಸಗಳು
ಇಡೀ ದೇಹವ ತಯಾರಿಡುವ
ಸುಡುಗಾಡು ಹುಮ್ಮಸಿನಲಿ
ಏರುಪೇರಾಗುವ ಹಾರ್ಮೋನುಗಳು
ಋತುಗಳಂತೆ ಬದಲಾಗೋ
ಮಗುವಂತೆ ಮಮಕಾರ ಸಾಂತ್ವನ ಬಯಸುವ
ಅಸಹಾಯಕ ಮನಸು
ಎಲ್ಲವನು ಬದಿಗಿರಿಸಿ..
ಲೋಕವ್ಯವಹಾರದ ನಂತರ
ಉಸ್ಸೆಂದು ಹಾಸಿಗೆಗೆ ಒರಗುವ
ಗಟ್ಟಿಬೆನ್ನುಗಳಿಗೆ
ಬದುಕಿಡೀ ಬಿಸಿಕಾಫಿ ಕೊಡುವ
ಉಮ್ಮೀದು ಕಳಕೊಳ್ಳದೇ
ಬದುಕುವಂಥ
ಹೆಣ್ಣಾಗುವ ಬಗೆ ತೀರ ಸುಲಭ
ಅಡುಗೆ ಬಟ್ಟೆ ಪಾತ್ರೆ ನೆಲ ಹಬ್ಬ..
ಸೂರ್ಯನಿಂದ ಚಂದ್ರನವರೆಗೆ ವಿರಮಿಸುವುದು
ಅಥವಾ
ಸಮಯ ಬೇಡುವಂತೆ ರೂಪಾಂತರಿಯಾಗುವುದು..
ಅವಳು
ತನ್ನ ಒಳಗೆ ಹಾಗೂ ಹೊರಗೆ ಹೊಡೆದಾಡಲು
ತಯಾರಿರಬೇಕಷ್ಟೆ ತಯಾರಿರದಿದ್ದರೂ!!






0 Comments