ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪುಸ್ತಕ ಅಂಕಣ – ‘ಹೆಸರು ಕಳೆದುಕೊಂಡ ಊರು’ ಕಥಾ ಸಂಕಲನದ ಅಂತರಂಗದ ಹುಡುಕಾಟ

ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು.

ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ ನಡೆಸಿದ್ದಾರೆ.೧೬ ಕೃತಿಗಳು ಪ್ರಕಟವಾಗಿವೆ.

ಪ್ರಸ್ತುತ ಕಲಬುರಗಿಯ ಸರಕಾರಿ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ದೀಗ ಅವಧಿಯ ಪುಸ್ತಕ ಅಂಕಣದೊಂದಿಗೆ ಬರುತ್ತಿದ್ದಾರೆ.

ಅಂಕಣ – 16

ಕೃತಿ – “ಹೆಸರು ಕಳೆದುಕೊಂಡ ಊರು”

ಲೇಖಕರು – ಸಂಧ್ಯಾ ಹೊನಗುಂಟಿಕರ್

ಪ್ರಕಾಶನ – ಬಹುರೂಪಿ

ಬೆಲೆ – 180

“ಹೆಸರು ಕಳೆದುಕೊಂಡ ಊರು” ಕಥಾ ಸಂಕಲನದ ಅಂತರಂಗದ ಹುಡುಕಾಟ

– ಸಂಧ್ಯಾ ಹೊನಗುಂಟಿಕರ್.

ಕನ್ನಡದ ಕಥಾ ಸಾಹಿತ್ಯಕ್ಕೆ ತನ್ನದೇ ಆದ ದೊಡ್ಡ ಪರಂಪರೆ ಇದೆ. ವಸಾಹತು ಶಾಹಿಯ ಪ್ರಭಾವದಿಂದ ಮೂಡಿಬಂದ ಈ ಪ್ರಕಾರ ಇಂದು ದೊಡ್ಡ ಹರವನ್ನು ಪಡೆದಿದೆ. ಚಿಕ್ಕ ಗಾತ್ರದ ಕ್ಯಾನ್ವಾಸ್ ನಲ್ಲಿ ದೊಡ್ಡ ಸಂದೇಶವನ್ನು ನೀಡುವ ಈ ಪ್ರಕಾರ ಅತಿ ಹೆಚ್ಚು ಜನರನ್ನು ಆಕರ್ಷಿಸಿದ್ದು ಸಹಜವಾಗಿದೆ. ಸಣ್ಣ ಕಥೆಗಳ ಜನಕ ಮಾಸ್ತಿ ಎಂಬ ಹೆಸರಿದ್ದರೂ ಕೂಡ ಪಂಜೆ ಮಂಗೇಶ ರಾಯ ಅವರಿಂದ ಆರಂಭಗೊಂಡ ಈ ಕಥಾಪ್ರಕಾರ ಜನಮಾನಸದಲ್ಲಿ ತನ್ನದೇ ಛಾಪನ್ನು ಮೂಡಿಸಿದೆ. ಕತೆ ಓದದ, ಕೇಳದ ಮನಸ್ಸುಗಳಿಲ್ಲ. ಅದರಲ್ಲೂ ಆಧುನಿಕ ಸಣ್ಣ ಕಥೆಗಳು ಓದುಗನ ಜೀವನಾನುಭವವನ್ನು ಹೆಚ್ಚಿಸಿವೆ. ಕಥೆಯ ವಸ್ತು ವಿನ್ಯಾಸ,ಶೈಲಿ, ಭಾಷೆ, ತಂತ್ರಗಾರಿಕೆಯ ವೈವಿಧ್ಯತೆಯಿಂದ ಕನ್ನಡದ ಓದುಗನಿಗೆ ಹೆಚ್ಚು ಆಪ್ತವಾಗಿ ಜನಪ್ರಿಯತೆ ಪಡೆದಿದೆ.

ಇನ್ನು ಕಲ್ಯಾಣ ಕರ್ನಾಟಕದ ಕಥಾ ಪರಂಪರೆ ಗಮನಿಸುವುದಾದರೆ ದೊಡ್ಡಪಟ್ಟಿಯನ್ನೇ ಕಾಣಬಹುದು. ಅತಿ ಹೆಚ್ಚು ಕಥೆಗಾರರನ್ನು ಈ ಭಾಗದಲ್ಲಿ ಕಾಣುತ್ತೇವೆ. ಮೌಲಿಕ ಮತ್ತು ಗಟ್ಟಿತನದ ವಸ್ತುಗಳನ್ನು ಇಲ್ಲಿನ ಕಥೆಗಳಲ್ಲಿ ಕಾಣುಬಹುದು. ಶಾಂತರಸ, ಗೀತಾ ನಾಗಭೂಷಣ, ಅಮರೇಶ್ ನುಗುಡೋಣಿ, ಮೊಗಳ್ಳಿ ಗಣೇಶ, ಕಲಿಗಣನಾಥ ಗುಡದೂರು, ಚಿತ್ರಶೇಖರ್ ಕಂಠಿ ಹಾಗೂ ಮಹಾಂತೇಶ್ ನವಲ್ಕಲ್ ಹೀಗೆ ಹೆಸರಿಸಿದರೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಈ ಪ್ರಮುಖ ಕತೆಗಾರರ ಸಾಲಿನಲ್ಲಿ ಸಂಧ್ಯಾ ಹೊನಗುಂಟಿಕರ್ ಅವರು ಕೂಡ ಒಬ್ಬರು. ಅವರು ತಮ್ಮದೇ ದಾಟಿಯಲ್ಲಿ ಕಥೆಯನ್ನು ಹೆಣಿಯುತ್ತಾ ತಮ್ಮದೇ ಛಾಪನ್ನು ಮೂಡಿಸಿದ್ದಾರೆ. ಸಂಧ್ಯಾ ರವರು ಕಥೆ, ಕವಿತೆ, ಪ್ರಬಂಧ ಬರೆದಿರುವ ಇವರ ಇತ್ತೀಚಿನ ನಾಲ್ಕನೇ ಕಥಾ ಸಂಕಲನ “ಹೆಸರು ಕಳೆದುಕೊಂಡ ಊರು “. ಅವಿಭಜಿತ ಕಲಬುರ್ಗಿ ನೆಲದ ಘಮಲನ್ನು ಈ ಕಥಾ ಸಂಕಲನದಲ್ಲಿ ಕಾಣಬಹುದು.

ಒಟ್ಟು ಈ ಕಥಾ ಸಂಕಲನದಲ್ಲಿ 11 ಕಥೆಗಳಿದ್ದು ಎಲ್ಲವೂ ವಸ್ತು ವಿನ್ಯಾಸದ ದೃಷ್ಟಿಯಿಂದ ವೈವಿಧ್ಯತೆಯಿಂದ ಕೂಡಿವೆ. ಕಥೆಗಳು ಕೌತುಕದಿಂದ ಓದಿಸಿಕೊಂಡು ಹೋಗುತ್ತವೆ, ಅವರ ಲೋಕಾನುಭವ,ಜೀವನಾ ನುಭವ ಜೊತೆಗೆ ಸೂಕ್ಷ್ಮ ಮಹಿಳಾ ಸಂವೇದನಾ ದೃಷ್ಟಿಕೋನ ಹೊಂದಿರುವ ಲೇಖಕಿ, ಸೂಕ್ಷ್ಮ ಸಂಗತಿಗಳನ್ನು ಕಥೆಯಲ್ಲಿ ಪೋಣಿಸುತ್ತಾ ನೆಲಮೂಲ ಸಂಸ್ಕೃತಿಯನ್ನು ಬಿಂಬಿಸಿದ್ದಾರೆ. ಅದರಲ್ಲೂ ಮಹಿಳಾ ಸಂವೇದನೆ ಅವಳ ತೊಳಲಾಟ, ಹಳವಂಡ ಎಲ್ಲವೂ ಅವರ ಕತೆಗಳಲ್ಲಿ ಎಳೆ ಎಳೆಯಾಗಿ ಬಿಚ್ಚುತ್ತಾ ಹೋಗುತ್ತವೆ.

ಕಾಡುವ ಕನ್ನಡಿ ಮಚ್ಚೆ – ಈ ಕತೆಯಲ್ಲಿ ಸುನಂದಬಾಯಿ ಎಂಬವಳು ಹಲವು ಮನೆಗಳಲ್ಲಿ ರೊಟ್ಟಿ ಮಾಡುವ ಕಾಯಕ ದವಳು. ಬಾಲ್ಯದಲ್ಲಿ ಕಷ್ಟವನ್ನು ಉಂಡುಟ್ಟು ಬೆಳೆದವಳು. ಜೊತೆಗೆ ಬೇಜವಾಬ್ದಾರಿ ಗಂಡ, ಆತ ಮನೆ ಬಿಟ್ಟು ಹೋದಾಗಲೂ ಚಿಂತಿಸದೇ ಒಂಟಿಯಾಗಿ ಜೀವನವನ್ನು ಜೀಕಿದವಳು. ಕುಟುಂಬದ ಪೋಷಣೆಗಾಗಿ ಮದುವೆ ಮುಂಜಿಗಳಲ್ಲಿ ಅನೇಕರ ಮನೆಯಲ್ಲಿ ಕೆಲಸ ಮಾಡುತ್ತಾ, ಸಹಾಯಕ್ಕೆ ರಮೇಶನೆಂಬವನ ಸಹಾಯ ಪಡೆದಾಗ ಇಲ್ಲಸಲ್ಲದ ಆರೋಪಕ್ಕೆ ಎಡೆಯಾಗುತ್ತಾಳೆ. ಯಾವ ಮಾತನ್ನು ಲಕ್ಷಿಸದೆ ಮುನ್ನಡೆದಾಗ ಒಮ್ಮೆ ಅಚಾನಕ್ಕಾಗಿ ಗಂಡನ ಸಾವಿನ ಸುದ್ದಿ ತಿಳಿದು ಬರುತ್ತದೆ. ಆತನ ಶವವನ್ನು ಗುರುತಿಸಲು ಹೋದಾಗ, ಕಾಣದ ಮಚ್ಚೆಯನ್ನು ಹುಡುಕುವ ಪ್ರಯತ್ನ ಮಾಡುತ್ತಾಳೆ. ಅದು ಇಲ್ಲದ ಕಾರಣ ಆತ ತನ್ನ ಪತಿಯಲ್ಲವೆಂದು ತಿರಸ್ಕರಿಸಿ ಮನೆಗೆ ಬಂದು ಮರುದಿನ ಮತ್ತೆ ಹಣೆಗೆ ಕುಂಕುಮವಿಡುತ್ತಾಳೆ. ಅವಳು ಹಚ್ಚುವ ಕುಂಕುಮ ಕಪ್ಪು ಮಚ್ಚೆಯಾಗಿ ಕಾಡತೊಡಗುತ್ತದೆ. ಒಂಟಿ ಹೆಣ್ಣು ಜೀವನದಲ್ಲಿ ಏನೆಲ್ಲಾ ಅನುಭವಿಸಬೇಕಾಗುತ್ತದ. ಅವಳು ಎದೆಗಾರಿಕೆಯಿಂದ ಸಮಾಜವನ್ನು ಎದುರಿಸಿದ ಕ್ರಮ ಕಂಡು ಬೆರಗು ಮೂಡಿಸುತ್ತದೆ. ಗಟ್ಟಿಗಿತ್ತಿ ಸುನಂದಾಳ ಬದುಕು ಅನೇಕ ದುಡಿಯುವ ಹೆಣ್ಣುಗಳ ಜೀವನದ ಚಿತ್ರಣವನ್ನು ನೀಡುತ್ತದೆ.

ಹೆಸರು ಕಳೆದುಕೊಂಡ ಊರು

ಕಥೆ ಶೀರ್ಷಿಕೆ ಎಷ್ಟು ಭಿನ್ನವಾಗಿದೆ ಅಷ್ಟೇ ಭಿನ್ನವಾಗಿ ಈ ಕಥೆಯ ಪಾತ್ರವಾದ ಮುತ್ಯಾಕೂಡ. ಹಿರಿಯ ಜೀವ ಮುಂದಾಗುವ ಸಂಗತಿಗಳನ್ನು ಸಹಜವಾಗಿ ಹೇಳಿ ಎಲ್ಲರ ಸೋಜಿಗಕ್ಕೆ ಕಾರಣವಾಗಿರುತ್ತಾನೆ. ಎಲ್ಲರಿಗೂ ಒಂದು ಹೆಸರಿಡುತ್ತ, ಆತ ಹೇಳಿದ ಹೆಸರಿನಂತೆ ಅವರು ಖ್ಯಾತಿ ಪಡೆಯುತ್ತಾ ಹೋಗುತ್ತಿರುತ್ತಾರೆ. ಒಮ್ಮೆ ಮೂಕಜ್ಜಿಯ ಪಾತ್ರವೂ ಈ ತಾತನೊಂದಿಗೆ ಹೋಲಿಕೆಯಾಗುತ್ತದೆ. ಆತನ ಅತಿಂದ್ರಿಯ ಶಕ್ತಿಯಿಂದ ಆತ ಹೇಳಿದ್ದು ಸತ್ಯವಾದರೂ ಮುಂದೆ ಅದುವೇ ವಿಡಂಬನೆಯಾಗಿ ಕಾಣುತ್ತದೆ. ಒಟ್ಟಾರೆ ಇಂದಿನ ಯುವಶಕ್ತಿ ಅವರು ಕ್ರಮಿಸುವ ಮಾರ್ಗ ಎಲ್ಲರ ಕುರಿತು ಟೀಕಾತ್ಮಕವಾಗಿ ಈ ಕಥೆ ಅಂತ್ಯವಾಗುತ್ತದೆ. ಭಿನ್ನ ತಂತ್ರಗಾರಿಕೆ ಹೊಂದಿದ್ದು,ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ.

ಬೂದಿಯೊಳಗಿನ ದನಿ

ಕರೋನಾ ಕಾಲಘಟ್ಟ ಏನೆಲ್ಲಾ ಸಂಕಟಗಳಿಗೆ ಸಾಕ್ಷಿಯಾಗಿತ್ತು. ಬದುಕು ನಿಂತ ನೀರಾಗಿತ್ತು. ಅಂಕೆ ಇಲ್ಲದೆ ಓಡುತ್ತಿರುವ ಜನಕ್ಕೆ ಮುಗುದಾರ ಹಾಕಿದಂತಾಗಿತ್ತು. ಇಂತಹ ಸಂಕಟ ಸಂದರ್ಭದಲ್ಲಿ ಕಾಮಾಟಿಪುರದ ಜಗತ್ತಿನ ಚಿತ್ರಣವನ್ನು ಈ ಕಥೆ ನೀಡುತ್ತದೆ. ಗುಲಾಬಿ ಎಂಬ ಹೆಣ್ಣು ಹಳ್ಳಿಯಿಂದ ನಗರಕ್ಕೆ ಬಂದು ಕುಟುಂಬದ ನಿರ್ವಹಣೆಗಾಗಿ ದೇಹದ ವ್ಯಾಪಾರ ಮಾಡಿ, ಸಂಸಾರವನ್ನು ಸಲಹುತ್ತಿರುತ್ತಾಳೆ. ಆದರೆ ಕರೋನಾ ಸಂದರ್ಭದಲ್ಲಿ ಗಿರಾಕಿಗಳು ಬಾರದೆ ಊರಿಗೆ ಹಣ ಕಳಿಸಲು ಆಗದೆ ಒದ್ದಾಡುತ್ತಿರುತ್ತಾಳೆ. ಸಂಪಾದನೆಗಾಗಿ ತನ್ನ ಅರಬೆತ್ತಲೆ ಚಿತ್ರಣವನ್ನು ಮಾಡಿ ಮೊಬೈಲ್ ನಲ್ಲಿ ಹರಿಬಿಟ್ಟಾಗ, ಅದು ಅವಳ ಊರಿಗೆ ತಲುಪಿ ಕುಟುಂಬಸ್ಥರು ತಲೆ ಎತ್ತದಂತಾಗುತ್ತದೆ. ಕರೋನಾ ಎಲ್ಲರ ಬದುಕನ್ನು ಕಸಿದುಕೊಂಡು ಏನೆಲ್ಲ ಸಂಕಟಗಳಿಗೆ ಎಡೆ ಮಾಡಿದ್ದನ್ನು ಹೇಳುತ್ತಾ, ಕಾಮಟಿಪುರದ ಕರಾಳ ಚಿತ್ರಣವನ್ನು ಕರುಳು ಮಿಡಿಯುವಂತೆ ಚಿತ್ರಿಸಿದ್ದಾರೆ.

ಹಾಳಾದವೆರಡು ಮೊಲೆ ಬಂದು

ಇಡೀ ಕಥಾ ಸಂಕಲನದಲ್ಲಿ ಕಾಡಿದ ಕಥೆ ಇದಾಗಿದೆ. ತಾಯಿ ಮಗಳು ಏಕಕಾಲಕ್ಕೆ ಹೆತ್ತು, ತಾಯಿ ತೀರಿ ಮಗಳು ತನ್ನ ತಂಗಿಯನ್ನು, ತನ್ನ ಮಗುವಿನಂತೆ ಲಾಲಿಸುವ ಸಂದರ್ಭ. ತಂಗಿಗೆ ತನ್ನ ಎದೆ ಹಾಲನ್ನು, ತಾನು ಹೆತ್ತ ಮಗನೊಂದಿಗೆ ಹಂಚಿಕೊಳ್ಳುವ ಸಂದರ್ಭ ಸೃಷ್ಟಿಯಾಗುತ್ತದೆ. ರಮಾ ತಾಯಿ, ಅಕ್ಕ ಎರಡು ಆಗಿ ತನ್ನ ಮಗನೊಂದಿಗೆ ಪೋಷಿಸಿದ ಅವಳಿಗೆ ಮುಂದೆ ಅದೇ ಮೊಲೆಗಳಿಗೆ ಕ್ಯಾನ್ಸರ್ ವಕ್ಕರಿಸುತ್ತದೆ. ಆಗ ಅವಳು ತನ್ನ ಹೆಣ್ತತನವೇ ಕಳೆದುಕೊಂಡ ಭಾವದಿಂದ ಒದ್ದಾಡುತ್ತಾಳೆ. ಹೆಣ್ಣು ಎಂದರೆ ಆ ಜೋಡು ಮೊಲೆಗಳು ಮಾತ್ರವೆಂದು ಭಾವಿಸಿದ್ದ ಅವಳಿಗೆ ತಂಗಿ ತಿಳಿ ಹೇಳುತ್ತಾಳೆ. ನಡುವೆ ಸುಳಿವ ಆತ್ಮಕ್ಕೆ ಯಾವ ಹಂಗು ಇಲ್ಲ ಎಂದು ಹೇಳುತ್ತಾ, ಹೆಣ್ಣಿಗಿರುವ ಅಮೃತ ಕಲಶ ಅದರಿಂದ ಅವಳಿಗೆ ದೊರೆಯುವ ತಾಯ್ತನದ ತೃಪ್ತಿ, ಅದರಿಂದ ಅವಳಿಗೆ ದೊರೆಯುವ ಲೌಕಿಕ ತೃಪ್ತಿ ಮತ್ತು ಸೌಂದರ್ಯ, ಇವುಗಳನ್ನು ಮೀರುವ ಅಲೌಕಿಕತೆಯನ್ನು ಈ ಕಥೆಯಲ್ಲಿ ಕಾಣಬಹುದು.

ದೇಹ ಭಾವದ ಹಂಗು ತೊರೆದು

ಪುರಾಣ ಪ್ರಸಿದ್ಧ ಮಾಧವಿ ಪಾತ್ರವನ್ನು ಕೇಂದ್ರವಾಗಿರಿಸಿಕೊಂಡು ಈ ಕಥೆ ಹೆಣೆಯಲಾಗಿದೆ. ಯಯಾತಿಯ ಮಗಳು ಮಾಧವಿ, ವಿಶ್ವಾಮಿತ್ರನ ಶಿಷ್ಯ ಗಾಲವನಿಗೆ ದಾನದ ರೂಪದಲ್ಲಿ ಲಭಿಸುತ್ತಾಳೆ. ನಂತರ ಗುರುದಕ್ಷಿಣೆಗಾಗಿ ಅವಳನ್ನು ಬೇರೆ ಬೇರೆ ರಾಜರುಗಳ ಬಳಿ ಅಡವಿಟ್ಟು ಬಿಳಿ ಕುದುರೆಗಳ ಸಂಗ್ರಹಕ್ಕೆ ತೊಡಗುತ್ತಾನೆ. ಕೊನೆಗೆ ಗುರುವಿಗೆ ಅವಳನ್ನೇ ಅನುಭವಿಸಲು ನೀಡುತ್ತಾನೆ. ಹೀಗೆ ಮಾಧವಿ ಮೂವರು ರಾಜರು ಬಳಿ ಒಂದೊಂದು ಮಗುವನ್ನು ಹೆತ್ತುಕೊಡುತ್ತಾ, ಹಸಿ ಬಾಣಂತಿ ಮತ್ತೆ ಮುಂದಿನ ರಾಜನ ಬಳಿ ಹೋಗುವ ಸಂದರ್ಭ, ಕ್ರೌರ್ಯದ ಪರಮಾವಧಿಯಾಗಿ ಕಾಣುತ್ತದೆ. ಕೊನೆಗೆ ತಂದೆ ಸ್ವಯಂವರ ಏರ್ಪಡಿಸಿದಾಗ, ಎಲ್ಲವನ್ನು ಧಿಕ್ಕರಿಸಿ ಕಾಡಿಗೆ ನಡೆಯುತ್ತಾಳೆ. ಅಲ್ಲಿಯೂ ಕೂಡ ಅವಳ ದಿವ್ಯ ಸೌಂದರ್ಯ ಕಂಡು ಮಗನೆ ತಾಯಿಯನ್ನು ಬಯಸಿದಾಗ, ಮಿಕ್ಕ ಮೂರು ಜನ ಮಕ್ಕಳನ್ನು ಕರೆದು ತನ್ನ ಆತ್ಮವೃತ್ತಾಂತವನ್ನು ಬಿಚ್ಚಿಡುತ್ತಾಳೆ. ಕೊನೆಯಲ್ಲಿ ಯಾರನ್ನು ಕ್ಷಮಿಸದೆ, ಹೆಣ್ಣು ಕೇವಲ ಭೋಗದ ವಸ್ತು ಅಲ್ಲ ಅದರ ಆಚೆಯೂ ಅವಳ ಅಸ್ತಿತ್ವ ಅಸ್ಮಿತೆ ಇದೆ ಎಂದು ಎಲ್ಲರನ್ನು ಧಿಕ್ಕರಿಸುತ್ತಾಳೆ. ಈ ಕಥೆ ಪೌರಾಣಿಕ ಸಂದರ್ಭದ್ದಾದರು, ಹೆಣ್ಣಿನ ಮನೋಗತವನ್ನು ಚಿತ್ರಿಸುವಲ್ಲಿ ಯಶ ಕಂಡಿದೆ.

ದೇವರ ದೆವ್ವ

ಸಂಗಪ್ಪ ಎಂಬ ಸಾಮಾನ್ಯ ವ್ಯಕ್ತಿ ಅಸಾಮಾನ್ಯನಾಗುವ ಪರಿ ಈ ಕಥೆಯಲ್ಲಿದೆ. ವೈದ್ಯರ ಬಳಿ ಕೆಲಸದಲ್ಲಿದ್ದ ಸಂಗಪ್ಪ ಕುಟುಂಬವನ್ನು ಸಾಕಲು ಆಗದೆ, ದೈಹಿಕ ಕಾಮನೆಯನ್ನು ಮೀರಲಾಗದೆ ಸನ್ಯಾಸಿಯ ವೇಷ ಧರಿಸುತ್ತಾನೆ. ಆತನ ಭಿನ್ನ ನಿಲುವು, ವೇಷಭೂಷಣಗಳಿಂದ ಜನ ಮರುಳೋ ಜಾತ್ರೆ ಮರುಳೋ ಎಂಬಂತೆ ಆತನ ಬಳಿ ಭಕ್ತರ ಸಂಖ್ಯೆ ಹೆಚ್ಚಾಗುತ್ತದೆ. ಆತನ ಭವಿಷ್ಯವಾಣಿ ನಿಜವಾಗದೆ ಇದ್ದರೂ ಕೂಡ ಜನ ನಂಬಿ ಬರ ತೊಡಗುತ್ತಾರೆ. ಆತ ತನ್ನ ಬದುಕಿನ ಜಂಜಾಟಗಳಿಂದ ವಿಮುಖನಾಗಿ ಈ ವೇಷ ಧರಿಸಿದರು ಕೂಡ ಹೆಸರು ಪಡೆಯುತ್ತಾನೆ. ಕೊನೆಗೆ ಅತ ಕೆಲಸ ಮಾಡುತ್ತಿದ್ದ ವೈದ್ಯರೇ ಇವನ ಬಳಿ ಬರಬೇಕೆಂಬ ಆಲೋಚನೆ ಮೂಡುವ ವ್ಯಂಗ್ಯದೊಂದಿಗೆ ಕಥೆ ಅಂತ್ಯವಾಗುತ್ತದೆ.

ಅಪ್ಪನ ಕರೆ ಕಿಟಕಿ ಸೀಟು

ಈ ಕಥೆ ಇಂದಿನ ಶಿಕ್ಷಣ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುತ್ತದೆ. ಜಾನಕಿ ಎಂಬ ಶಿಕ್ಷಕಿ ತನ್ನ ಶಾಲೆಯ ಕೆಲವು ಮಕ್ಕಳೊಂದಿಗೆ ಜಿಲ್ಲಾಮಟ್ಟದ ರಸಪ್ರಶ್ನೆಯಲ್ಲಿ ಭಾಗವಹಿಸಲು ಬಂದಾಗ ನಡೆದ ಆಕಸ್ಮಿಕ ಘಟನೆ ಏನೆಲ್ಲಾ ಸಂಗತಿಗಳನ್ನು ತೆರೆದಿಡುತ್ತಾ ಹೋಗುತ್ತದೆ. ಜಾನಕಿಯ ವೖಯಕ್ತಿಕ ಸಮಸ್ಯೆ ಶಾಲೆಯ ಆಡಳಿತ ವರ್ಗದ ಹಣದ ಕುರಿತಾದ ಹಪಾಹಪಿ, ಮುಖ್ಯಸ್ಥರ ಅಂಕಗಳ ಕುರಿತಾದ ಒಲವು, ಇವೆಲ್ಲವುಗಳ ಮಧ್ಯೆ ಮಕ್ಕಳ ಮನೋಗತವನ್ನು ಅರಿಯುವರು ಯಾರು ಇಲ್ಲ ಎಂಬಂತೆ ಈ ಕಥೆ ಮೂಡಿಬಂದಿದೆ. ಮಕ್ಕಳು ಅಂಕವಿರರಾಗಬೇಕೆ ವಿನಹ, ಅವರ ಬಯಕೆಯಂತೆ ಬದುಕು ರೂಪಿಸಿಕೊಳ್ಳಲು ಅವಕಾಶವಿಲ್ಲ. ಇಂತಹ ವಿಷ ವರ್ತಲದಲ್ಲಿ ತೊಳಲುವ ಶಿಕ್ಷಕಿಯ ಕಥೆ ಇದಾಗಿದೆ

ಹುಚ್ಚರ ಲಗ್ನದಾಗ ನಾವು ನೀವು

ಈ ಕಥೆಯು ಅಪ್ಪಟ ಗ್ರಾಮೀಣ ಬದುಕು ಅಲ್ಲಿನ ಜನಜೀವನ, ಪರಿಸರದ ಕುರಿತಾದ ಕಾಳಜಿ, ಭೂಮಿಯ ನಂಟನ್ನು ತೊರೆದು ಹೋಗುವ ಯುವ ಸಮುದಾಯ ಹೀಗೆ ಇಂದಿನ ಗ್ರಾಮ ಪರಿಸರದ ವಾಸ್ತವ ಚಿತ್ರಣ ಇಲ್ಲಿ ನೀಡಿದ್ದಾರೆ.

ಕನಸೇ ಕಾಮನಬಿಲ್ಲು

ಚಂದ್ರು ಎಂಬ ಗ್ರಾಮೀಣ ಪ್ರತಿಭೆ ಸಂಗೀತದಲ್ಲಿ ಸಾಧನೆ ಮಾಡಬೇಕೆಂಬ ಹಂಬಲ ಅದಕ್ಕಾಗಿ ಊರಿನ ರಾಜ್ಯೋತ್ಸವ ಕಾರ್ಯಕ್ರಮ ಆತನಿಗೆ ಮೆಟ್ಟಿಲಾಗಿ ಪರಿಣಮಿಸುತ್ತದೆ. ಕಾರ್ಯಕ್ರಮದ ಸಿದ್ಧತೆ, ಜೊತೆಗೆ ತಾನು ಬಯಸಿದ ಹುಡುಗಿಯ ಮುಂದೆ ಪ್ರತಿಭಾ ಪ್ರದರ್ಶನ ಮಾಡಲು ಸಜ್ಜಾದಾಗ ಆತನ ನಡಾವಳಿ ವ್ಯಂಗ್ಯದಿಂದ ಕೂಡಿದೆ. ಮುಂದೆ ಆತನಿಗೆ ಯಾವುದೇ ವೇದಿಕೆ ಸಿಗದಾದಾಗ ಮನೆಯ ಜನರ ತಿರಸ್ಕಾರ ಹುಡುಗಿಯ ವಿಮುಖತೆ ಆತನನ್ನು ತಲ್ಲಣಿಸುವಂತೆ ಮಾಡುತ್ತದೆ.ಕೊನೆಯಲ್ಲಿ ಮತ್ತೆ ಅವಕಾಶ ಸಿಗುವುದರೊಂದಿಗೆ ಕನಸಿಗೆ ರೆಕ್ಕೆ ಮೂಡುತ್ತದೆ. ವ್ಯಂಗ್ಯ ಮತ್ತು ಹಾಸ್ಯ ಮಿಶ್ರಿತವಾಗಿ ಹೇಳುವ ಕಥೆಯ ಧಾಟಿ ಚೆನ್ನಾಗಿದೆ

ಜೇನು ತಟ್ಟಿ

ಇಂದಿನ ತಂತ್ರಜ್ಞಾನ ಯುಗದಲ್ಲಿ ಮೊಬೈಲ್ ಬಳಕೆ, ಅವುಗಳ ಮೂಲಕ ಬೆಳೆಯುವ ಸಂಬಂಧಗಳು ಕ್ಷಣಿಕ ಮಾತ್ರ. ನಿಸ್ತಂತುವಿನ ಮೂಲಕ ಉಂಟಾದ ಸ್ನೇಹ ಪ್ರೀತಿ ಪ್ರಣಯ, ತಾಳ ತಂತಿ ಇಲ್ಲದೆ ಕತ್ತರಿಸಿ ಹೋಗುತ್ತದೆ ಎಂದಾಗಿ ವಿಭಿನ್ನ ತಂತ್ರಗಾರಿಕೆ ಮೂಲಕ ಈ ಕಥೆ ಹೆಣದಿದ್ದಾರೆ.

ಗುಚ್ಚು ಪಿಸುಗುಟ್ಟಿದ ಕೌದಿ

ಕೊನೆಯ ಕಥೆಯಾದ ಇದು ಕೌದಿಯ ಕುರಿತಾಗಿದೆ. ಕೌದಿ ಎಂದರೆ ಕೇವಲ ತುಂಡು ಬಟ್ಟೆಗಳ ಜೋಡಣೆಯ ಹೊದಿಕೆಯಲ್ಲ. ಅಲ್ಲಿ ಅನೇಕ ಸಂಬಂಧಗಳ ಎಳೆಗಳನ್ನು ಜೋಡಿಸಿರಲಾಗಿರುತ್ತದೆ. ಅದು ಹಲವು ಸಂಗತಿಗಳ ಚಿತ್ತಾರ, ಪ್ರತಿಯೊಂದು ತುಂಡು ಬಟ್ಟೆ ಏನೆಲ್ಲಾ ಕಥೆಯನ್ನು ಹೇಳುತ್ತಾ ಹೋಗುತ್ತದೆ. ತಾಯಿಯ ನೆನಪಿನ ಕೌದಿಯಲ್ಲಿ ಇಡೀ ಅವಳ ಬದುಕಿನ ನೋವು ನಲಿವು ಜೊತೆಗೆ ಅವಳ ಭಾವ ಕೋಶವು ತೆರೆಯುತ್ತಾ ಹೋಗುತ್ತದೆ. ಕೌದಿಯ ಒಂದೊಂದು ತುಣುಕು ಒಂದೊಂದು ಕಥೆಯಾಗಿ ಇಲ್ಲಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.

ಹೀಗೆ 11 ಕಥೆಗಳು ವಸ್ತು ವೈವಿಧ್ಯತೆಯಿಂದ ಕೂಡಿವೆ. ಹೆಸರು ಕಳೆದುಕೊಂಡ ಊರು ಕಥಾ ಸಂಕಲನದ ಒಳಗೆ ಅರಸುತ್ತ ಹೊರಟರೆ ಏನೆಲ್ಲಾ ಅನುಹ್ಯ ಜಗತ್ತಿದೆ. ವ್ಯಂಗ್ಯ ವಿಡಂಬನೆಯೊಂದಿಗೆ ಸಾಮಾಜಿಕ ಕಳಕಳಿ, ಪರಂಪರೆಯ ಪಿಸುಮಾತು,ಗ್ರಾಮೀಣ ಬದುಕು, ಆಧುನಿಕ ತಂತ್ರಜ್ಞಾನ ಜೊತೆಗೆ ಪುರಾಣ ಬಂಜಕತೆ ಹೀಗೆ ಹತ್ತು ಹಲವು ವಿಷಯಗಳು ಮಾತನಾಡುತ್ತವೆ. ಕಥೆಗಳು ಓದುಗನನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ. ಭಾಷೆಯಂತು ಅಪ್ಪಟ ಕಲ್ಬುರ್ಗಿ ಸೀಮೆಯದಾಗಿದ್ದು, ತಂತ್ರಗಾರಿಕೆಯಲ್ಲೂ ಹೊಸತನವನ್ನು ಕಾಣುತ್ತೇವೆ. ಕಥಾ ಸಂಕಲನದ ಅಂತರಂಗ ಬಗೆದಷ್ಟು ಹೊಸ ವಿಚಾರಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಎಲ್ಲಾ ಕಥೆಗಳ ಶೀರ್ಷಿಕೆಯು ಆಕರ್ಷಕವಾಗಿದೆ. ನನಗೆ ಮೊದಲ ಓದಿಗೆ ದಕ್ಕಿದ ಕೆಲವು ವಿಷಯಗಳು ಇಷ್ಟು ಮಾತ್ರ. ಒಟ್ಟು ಕಥಾ ಸಂಕಲನದ ಹೂರಣ ಮತ್ತು ಹೊದಿಕೆ ಚೆನ್ನಾಗಿ ಮೂಡಿ ಬಂದಿದ್ದು ಬಹುರೂಪಿ ಪ್ರಕಾಶನದ ಶ್ರಮ ಸಾರ್ಥಕವಾಗಿದೆ. ಮತ್ತೊಮ್ಮೆ ಕತೆಗಾರ್ತಿ ಸಂಧ್ಯಾ ರವರಿಗೆ ಅಭಿನಂದನೆ.

‍ಲೇಖಕರು Admin

2 September, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading