-ಡಾ. ವಸಂತಕುಮಾರ್ ಎಸ್. ಕಡ್ಲಿಮಟ್ಟಿ
ಶತಮಾನದ ಸೂರ್ಯಾಸ್ತ (The Sunset of the Century)
ಮೂಲ: ರವೀಂದ್ರನಾಥ ಟ್ಯಾಗೋರ್
ಅನುವಾದ : ಡಾ. ವಸಂತಕುಮಾರ್ ಎಸ್. ಕಡ್ಲಿಮಟ್ಟಿ
ಪಡುವಣದ
ನೆತ್ತರ-ಕೆಂಬಣ್ಣಿನ ಮೋಡಗಳು ಮತ್ತು
ದ್ವೇಷದ ಸುಂಟರಗಾಳಿಯ ಮಧ್ಯೆ
ಶತಮಾನದ ಕಟ್ಟ ಕಡೆಯ ನೇಸರನು
ಅಸ್ತಂಗತನಾಗುತ್ತಾನೆ.
ಜನಾಂಗಗಳ ಸ್ವಮೋಹದ
ಬೆತ್ತಲೇ ಉತ್ಸಾಹ
ಕುಡಿದ ಅಮಲಿನ ಸಮೂಹ ಸನ್ನಿಯಲಿ
ಉಕ್ಕಿನ ಘರ್ಷಣೆ ಮತ್ತು
ಪ್ರತೀಕಾರದ ಕೂಗುಮಾರಿ
ಕವಿತೆಗಳಿಗೆ ನೃತ್ಯ ಮಾಡುತ್ತಿದೆ.
ದೇಶದ ಹಸಿದ ಆತ್ಮವು
ತಾನೇ ಪೋಷಿಸಿಕೊಂಡ ನಿರ್ಲಜ್ಜತೆಗೆ
ಬಹಳ ಹಿಂಸೆಯಿಂದಲೇ
ಸಿಟ್ಟಿನಿಂದ ಸ್ಫೋಟಗೊಳ್ಳುತ್ತದೆ.
ತನ್ನದೇ ತುತ್ತು ಅನ್ನಕ್ಕಾಗಿ
ಅದು ಜಗವನ್ನು ನಿರ್ಮಿಸಿದ್ದೂ ಹೀಗೆಯೇ,
ಈಗೋ…
ಅದನ್ನೇ ನೆಕ್ಕುತ್ತಿದೆ,
ಅದನ್ನೇ ಮೆಲಿಯುತ್ತಿದೆ,
ಮತ್ತದನ್ನೇ ದೊಡ್ಡದಾದ
ಚೂರುಗಳಲ್ಲಿ ನುಂಗುತ್ತಿದೆ,
ಹಿರಿ-ಹಿರಿ ಹಿಗ್ಗುತ ಊದಿಕೊಳ್ಳುತ್ತದೆ
ತನ್ನ ಪವಿತ್ರವಲ್ಲದ ಹಬ್ಬದ ನಡುವೆಯೇ
ಸ್ವರ್ಗದ ಅನಿರೀಕ್ಷಿತ ಬಾಣವು
ಎಗ್ಗಿಲ್ಲದೆ ಎರಗುತ್ತದೆ.
ಅನುಚಿತದ ಹೃದಯವನ್ನು
ಸೀಳುತ್ತಿದೆ.
ದಿಗಂತದಂಚಿನಲ್ಲಿ ಹೊಮ್ಮುತ್ತಿರುವ
ಆ ಕಡುಗೆಂಪು ಬೆಳಕಿನ ಹೊಳಪು
ನಿನ್ನ ಶಾಂತಿಯ ಪ್ರಭಾತದ ಬೆಳಕಲ್ಲ,
ಓ ನನ್ನ ತಾಯ್ನಾಡೇ…!
ಅದು
ತನ್ನದೇ ಅತಿರೇಕದ
ಭಾರಕ್ಕೆ ಸಿಲುಕಿ ಸತ್ತ
ರಾಷ್ಟ್ರದ ಸ್ವಪ್ರೇಮವೆಂಬ
ಆ ಬೃಹತ್ ದೇಹವನ್ನು
ಸುಟ್ಟು ಬೂದಿಯಾಗಿಸುತ್ತಿರುವ
ಚಿತೆಯ ಜ್ವಾಲೆಯ ಮಿನುಗು.
ನಿನ್ನ ಮುಂಜಾವು ಇನ್ನೂ ಕಾಯುತ್ತಿದೆ
ಪೂರ್ವದ ತಾಳ್ಮೆಯ ಕತ್ತಲೆಯಾಚೆ
ವಿನಮ್ರವಾಗಿ,
ಮೌನವಾಗಿ.
ಎಚ್ಚರದಿಂದ ಕಾದಿರು, ಭಾರತಾಂಬೆಯೇ
ಆ ಪವಿತ್ರ ಸೂರ್ಯೋದಯದ
ಆರಾಧನೆಗೆ
ನಿನ್ನ ಅರ್ಪಣೆಗಳನ್ನು ಸಿದ್ಧಗೊಳಿಸು.
ಅದನ್ನು ಸ್ವಾಗತಿಸುವ ಮೊದಲ ಸ್ತೋತ್ರ
ನಿನ್ನ ದನಿಯಲ್ಲೇ ಮೊಳಗಲಿ,
ಹೀಗೆ ಹಾಡು…
“ಬಾ, ಶಾಂತಿಯೇ..!
ದೇವರ ಮಹಾನ್ ಯಾತನೆಯಿಂದ
ಜನಿಸಿದ ಮಗಳೇ, ಬಾ..!
ಸಂತೃಪ್ತಿಯೆಂಬ
ನಿನ್ನ ಅಮೂಲ್ಯ ನಿಧಿಯೊಂದಿಗೆ ಬಾ…
ಸ್ಥೈರ್ಯವೆಂಬ
ಖಡ್ಗವನ್ನು ಹಿಡಿದು ಬಾ…
ವಿನಮ್ರತೆಯ ಕಿರೀಟವನ್ನು
ನಿನ್ನ ಹಣೆಯ ಮೇಲೆ ಧರಿಸಿ ಬಾ..!”
ನನ್ನ ಸಹೋದರರೇ,
ಗರ್ವಿಷ್ಠರ ಮತ್ತು ಬಲಾಢ್ಯರ ಮುಂದೆ
ನಿಮ್ಮ ಸರಳತೆಯ
ಶುಭ್ರ ವಸ್ತ್ರವನ್ನು ತೊಟ್ಟು ನಿಲ್ಲಲು
ಎಂದಿಗೂ ನಾಚಿಕೆ ಪಡಬೇಡಿ.
ವಿನಯವೇ ನಿಮ್ಮ ಕಿರೀಟವಾಗಲಿ;
ನಿಮ್ಮ ಸ್ವಾತಂತ್ರ್ಯವು
ಆತ್ಮದ ಸ್ವಾತಂತ್ರ್ಯವಾಗಲಿ.
ನಿಮ್ಮ ಬಡತನದ
ವಿಶಾಲ ನಿರಾಡಂಬರತೆಯ ಮೇಲೆ
ಪ್ರತಿದಿನವೂ
ದೇವರ ಸಿಂಹಾಸನವನ್ನು ನಿರ್ಮಿಸಿ.
ಮತ್ತು ಅರಿಯಿರಿ
ಗಾತ್ರದಲ್ಲಿ ಬೃಹತ್ತಾಗಿರುವುದೆಲ್ಲ
ಮಹತ್ತರವಾದುದಲ್ಲ;
ಅಹಂಕಾರವೂ ಶಾಶ್ವತವಲ್ಲ.
"The Sunset of the Century"
The last sun of the century sets amidst the blood-red clouds of the West and the whirlwind of hatred.
The naked passion of self-love of Nations, in its drunken delirium of greed, is dancing to the clash of steel and the howling verses of vengeance.
The hungry self of the Nation shall burst in a violence of fury from its own shameless feeding.
For it has made the world its food,
And licking it, crunching it and swallowing it in big morsels,
It swells and swells
Till in the midst of its unholy feast descends the sudden shaft of heaven piercing its heart of grossness.
The crimson glow of light on the horizon is not the light of thy dawn of peace, my Motherland.
It is the glimmer of the funeral pyre burning to ashes the vast flesh, – the self-love of the Nation – dead under its own excess.
Thy morning waits behind the patient dark of the East,
Meek and silent.
Keep watch, India.
Bring your offerings of worship for that sacred sunrise.
Let the first hymn of its welcome sound in your voice and sing
“Come, Peace, thou daughter of god’s own great suffering.
Come with thy treasure of contentment, the sword of fortitude,
And meekness crowning thy forehead.”
Be not ashamed, my brothers, to stand before the proud and the powerful
With your white robe of simpleness.
Let your crown be of humility, your freedom the freedom of the soul.
Build God’s throne daily upon the ample bareness of your poverty
And know that what is huge is not great and pride is not everlasting.
ಕವಿತೆಯ ವಿಶ್ಲೇಷಣೆ :
ರವೀಂದ್ರನಾಥ ಟ್ಯಾಗೋರರ The Sunset of the Century (ಶತಮಾನದ ಸೂರ್ಯಾಸ್ತ) ಒಂದು ಶತಮಾನದ (19 ನೆ ಶತಮಾನ) ಕೊನೆಯ ಸಂಜೆಯನ್ನು ವರ್ಣಿಸುವ ಕವಿತೆಯಷ್ಟೇ ಅಲ್ಲ. ಅದು ಆಧುನಿಕ ನಾಗರಿಕತೆಯ ನೈತಿಕ ಬಿಕ್ಕಟ್ಟಿನ ಕುರಿತು ಕವಿಯೊಬ್ಬ ನೀಡಿದ ಗಂಭೀರ ಎಚ್ಚರಿಕೆ. ‘ರಾಷ್ಟ್ರ’ ಎಂಬ ಪರಿಕಲ್ಪನೆ ತನ್ನ ಸಹಜ ಮಿತಿಯನ್ನು ಮೀರಿ ಸ್ವಮೋಹ, ಅಧಿಕಾರ ದಾಹ, ಬಂಡವಾಳಶಾಹಿ ಮತ್ತು ಕೋಮುಹಿಂಸೆಯ ರೂಪವನ್ನು ಪಡೆದಾಗ ಮನುಷ್ಯ ಮತ್ತು ಮಾನವೀಯತೆ ಎದುರಿಸುವ ಅಪಾಯವನ್ನು ಟ್ಯಾಗೋರ್ ಅವರು ಇಲ್ಲಿ ಅತ್ಯಂತ ತೀವ್ರವಾದ ಕಾವ್ಯರೂಪಕಗಳ ಮೂಲಕ ಅನಾವರಣಗೊಳಿಸುತ್ತಾರೆ.
ಈ ಕವಿತೆಯನ್ನು ಟ್ಯಾಗೋರ ಅವರ Nationalism ಕೃತಿಯ ತಾತ್ವಿಕ ಹಿನ್ನೆಲೆಯಲ್ಲಿ ಓದಿದಾಗ ಇದರ ಅರ್ಥ ಮತ್ತಷ್ಟು ವಿಸ್ತಾರಗೊಳ್ಳುತ್ತದೆ. ಟ್ಯಾಗೋರರಿಗೆ ತಾಯ್ನಾಡಿನ ಮೇಲಿನ ಪ್ರೀತಿಯೇ ಒಂದು ಸಮಸ್ಯೆ ಆಗಿಲ್ಲ, ಬದ್ಲಾಗಿ ಆ ಪ್ರೀತಿ ಮನುಷ್ಯನ ಮೇಲಿನ ಪ್ರೀತಿಗಿಂತ ದೊಡ್ಡದಾಗಿ ಬೆಳೆದು, ಕೊನೆಗೆ ಮನುಷ್ಯನನ್ನ-ಮನುಷ್ಯತ್ವವನ್ನೇ ನುಂಗುವ ರಾಜಕೀಯ ಸ್ವಮೋಹವಾಗಿ ಮಾರ್ಪಡುವುದು ಸಮಸ್ಯೆ. ಆದ್ದರಿಂದ ಅವರ ರಾಷ್ಟ್ರೀಯತೆಯ ವಿಮರ್ಶೆ ದೇಶಪ್ರೇಮದ ನಿರಾಕರಣೆಯಲ್ಲ; ದೇಶಪ್ರೇಮದ ಹೆಸರಿನಲ್ಲಿ ಹುಟ್ಟುವ ಸಾಮೂಹಿಕ ದರ್ಪ, ದಬ್ಬಾಳಿಕೆ, ನೈತಿಕ ಪೋಲೀಸ್ಗಿರಿ, ಅಹಂಕಾರಗಳ ನಿರಾಕರಣೆ.
ಕವಿತೆಯ ಆರಂಭದಲ್ಲಿಯೇ ಪಡುವಣದ ಆಕಾಶದಲ್ಲಿ ರಕ್ತಕೆಂಪಾದ ಮೋಡಗಳಿವೆ; ದ್ವೇಷದ ಸುಂಟರಗಾಳಿ ಬೀಸುತ್ತಿದೆ; ಶತಮಾನದ ಕೊನೆಯ ಸೂರ್ಯ ಅಸ್ತಂಗತನಾಗುತ್ತಿದ್ದಾನೆ. ಉಕ್ಕಿನ ಘರ್ಷಣೆ ಮತ್ತು ಪ್ರತೀಕಾರದ ಕೂಗುಗಳು ಕೇಳಿಸುತ್ತಿವೆ. ಇಲ್ಲಿ ‘ಪಡುವಣ’ ಕೇವಲ ಭೌಗೋಳಿಕ ದಿಕ್ಕಾಗಿ ಉಳಿಯುವುದಿಲ್ಲ; ಅದು ಸಾಮ್ರಾಜ್ಯಶಾಹಿ, ಶಸ್ತ್ರಬಲ, ಆರ್ಥಿಕ ಲಾಲಸೆ ಮತ್ತು ರಾಷ್ಟ್ರಗಳ ನಡುವಿನ ಪ್ರಾಬಲ್ಯದ ಪೈಪೋಟಿಯಿಂದ ರೂಪುಗೊಂಡ ನಾಗರಿಕತೆಯ ಸಂಕೇತವಾಗುತ್ತದೆ. ಹೀಗಾಗಿ ‘ಸೂರ್ಯಾಸ್ತ’ ಒಂದು ದಿನದ ಅಂತ್ಯವಲ್ಲ; ದಬ್ಬಾಳಿಕೆಯನ್ನ, ಹಿಂಸೆಯನನ್ನ ಪ್ರಗತಿಯೆಂದು ಭ್ರಮಿಸಿದ ನಾಗರಿಕತೆಯ ನೈತಿಕ ಸೂರ್ಯಾಸ್ತ.
ಟ್ಯಾಗೋರರ Nationalism ಕೃತಿಯಲ್ಲಿ ಈ ಆತಂಕ ಇನ್ನಷ್ಟು ಸ್ಪಷ್ಟವಾಗುತ್ತದೆ. ಅವರ ದೃಷ್ಟಿಯಲ್ಲಿ ‘ಜನರು’ ಮತ್ತು ‘ರಾಷ್ಟ್ರ’ ಒಂದೇ ಅಲ್ಲ; ‘ಸಮಾಜ’ ಮತ್ತು ರಾಜಕೀಯವಾಗಿ ಸಂಘಟಿತವಾದ ‘Nation’ ಕೂಡ ಒಂದೇ ಅಲ್ಲ. ಮನುಷ್ಯರ ನಡುವಿನ ಪ್ರೀತಿ, ಸಹಕಾರ, ಸಂಸ್ಕೃತಿ, ಪರಸ್ಪರ ಅವಲಂಬನೆ ಮತ್ತು ನೈತಿಕ ಹೊಣೆಗಾರಿಕೆಗಳು ಸಮಾಜವನ್ನು ನಿರ್ಮಿಸುತ್ತವೆ. ಆದರೆ ರಾಜಕೀಯ ಮತ್ತು ಆರ್ಥಿಕ ಉದ್ದೇಶಗಳಿಗಾಗಿ ಸಂಘಟಿತವಾದ ರಾಷ್ಟ್ರವು ತನ್ನ ಅಸ್ತಿತ್ವವನ್ನೇ ಪರಮ ಗುರಿಯನ್ನಾಗಿ ಮಾಡಿಕೊಂಡಾಗ ಅದು ಕ್ರಮೇಣ ಯಂತ್ರದ ಸ್ವರೂಪವನ್ನು ಪಡೆಯುತ್ತದೆ. ಆಗ ಮನುಷ್ಯ ರಾಷ್ಟ್ರಕ್ಕಾಗಿ ಇರುವ ಸಾಧನವಾಗುತ್ತಾನೆ ಹೊರತು ರಾಷ್ಟ್ರ ಮನುಷ್ಯನಿಗಾಗಿ ಇರುವ ವ್ಯವಸ್ಥೆಯಾಗಿ ಉಳಿಯುವುದಿಲ್ಲ.
ಈ ಕಾರಣದಿಂದ ಟ್ಯಾಗೋರರನ್ನು ‘ರಾಷ್ಟ್ರವಿರೋಧಿ’ ಎಂದು ಗುರುತಿಸುವುದು ಅವರ ಚಿಂತನೆಗೆ ಮಾಡುವ ಅನ್ಯಾಯ. ಅವರ ವಿರೋಧ ದೇಶಕ್ಕಲ್ಲ; ಮನುಷ್ಯನಿಗಿಂತ ರಾಷ್ಟ್ರವನ್ನು ದೊಡ್ಡದಾಗಿಸುವ ಸಿದ್ಧಾಂತಕ್ಕೆ. ಟ್ಯಾಗೋರರ ಎಚ್ಚರಿಕೆ ಮತ್ತು ಸಮಕಾಲೀನ ಭಾರತ
ಈ ಹಂತದಲ್ಲಿಯೇ ‘ಶತಮಾನದ ಸೂರ್ಯಾಸ್ತ’ ನಮ್ಮ ಕಾಲಕ್ಕೆ ಅಸಾಧಾರಣವಾಗಿ ಪ್ರಸ್ತುತವಾಗುತ್ತದೆ. ಟ್ಯಾಗೋರ್ ಶತಮಾನಕ್ಕೂ ಹಿಂದೆ ಯಾವ ರಾಷ್ಟ್ರೀಯ ಸ್ವಮೋಹದ ಕುರಿತು ಎಚ್ಚರಿಸಿದ್ದರೋ, ಅದರ ಕೆಲವು ಲಕ್ಷಣಗಳನ್ನು ಸಮಕಾಲೀನ ಭಾರತದ ಸಾರ್ವಜನಿಕ ಮತ್ತು ಬೌದ್ಧಿಕ ವಲಯಗಳಲ್ಲಿಯೂ ಕಾಣಬಹುದೇ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕಾಗಿದೆ.
ಇತ್ತೀಚಿನ ವರ್ಷಗಳಲ್ಲಿ ‘ದೇಶಭಕ್ತಿ’ ಎಂಬ ಪದದ ಅರ್ಥವೇ ಕೆಲವೊಮ್ಮೆ ವಿಚಿತ್ರವಾದ ರೂಪಾಂತರಕ್ಕೆ ಒಳಗಾಗುತ್ತಿರುವಂತೆ ಕಾಣುತ್ತದೆ. ದೇಶವನ್ನು ಪ್ರೀತಿಸುವುದು ಎಂದರೆ ಅದರ ಜನರನ್ನು, ಅವರ ವೈವಿಧ್ಯವನ್ನು, ಸಂವಿಧಾನವನ್ನು, ಭಾಷೆಗಳನ್ನು, ಸಂಸ್ಕೃತಿಗಳನ್ನು ಮತ್ತು ಭಿನ್ನಾಭಿಪ್ರಾಯದ ಹಕ್ಕನ್ನು ಪ್ರೀತಿಸುವುದೇ..? ಅಥವಾ ದೇಶವನ್ನು ಪ್ರೀತಿಸುವುದೆಂದರೆ ಒಂದು ನಿರ್ದಿಷ್ಟ ಧರ್ಮ, ಒಂದು ಭಾಷೆ, ಒಂದು ಸಂಸ್ಕೃತಿ ಮತ್ತು ಒಂದು ರಾಜಕೀಯ ಕಲ್ಪನೆಯನ್ನು ಮಾತ್ರ ‘ನಿಜವಾದ ರಾಷ್ಟ್ರ’ದ ಪ್ರತಿನಿಧಿಯೆಂದು ಒಪ್ಪಿಕೊಳ್ಳುವುದೇ..? ‘ಒಂದು ರಾಷ್ಟ್ರ, ಒಂದು ಭಾಷೆ, ಒಂದು ಧರ್ಮ, ಒಂದು ಸಂಸ್ಕೃತಿ’ ಎಂಬ ಏಕರೂಪತೆಯ ಆಕಾಂಕ್ಷೆ ಭಾರತದ ಐತಿಹಾಸಿಕ ಸ್ವಭಾವಕ್ಕೇ ವಿರುದ್ಧವಾದದ್ದು. ಭಾರತ ಒಂದೇ ಧ್ವನಿಯಿಂದ ನಿರ್ಮಾಣವಾದ ದೇಶವಲ್ಲ; ಅದು ಅನೇಕ ಧ್ವನಿಗಳ ನಡುವಿನ ಸಂವಾದದಿಂದ ರೂಪುಗೊಂಡ ನಾಗರಿಕತೆ. ಇಲ್ಲಿ ಭಾಷೆಗಳಿವೆ, ಉಪಭಾಷೆಗಳಿವೆ, ಧರ್ಮಗಳಿವೆ, ಜಾತಿ–ಜನಾಂಗಗಳಿವೆ, ವಿಭಿನ್ನ ಆಹಾರ ಪದ್ಧತಿಗಳಿವೆ, ಪರಸ್ಪರ ವಿರೋಧಿಸುವ ತಾತ್ವಿಕ ಪರಂಪರೆಗಳಿವೆ. ಈ ಬಹುತ್ವವನ್ನು ದೌರ್ಬಲ್ಯವೆಂದು ಭಾವಿಸುವ ಕ್ಷಣದಲ್ಲಿಯೇ ಭಾರತದ ಜೀವಂತಿಕೆಯನ್ನು ನಾವು ತಪ್ಪಾಗಿ ಅರ್ಥಮಾಡಿಕೊಳ್ಳುತ್ತೇವೆ. ಇದಕ್ಕಿಂತ ಕಳವಳಕಾರಿ ಸಂಗತಿಯೆಂದರೆ, ಕೆಲವು ಬರಹಗಾರರು ಮತ್ತು ಕೆಲ ವಿಶ್ವವಿದ್ಯಾಲಯಗಳ ಪ್ರಾಧ್ಯಪಕರ ಮಾತುಗಳಲ್ಲಿ ತೀವ್ರ ರಾಷ್ಟ್ರೀಯತೆಯ ಭಾಷೆ ಕೆಲವೊಮ್ಮೆ ಅಸಹಿಷ್ಣುತೆಯ ನೈತಿಕ ಸಮರ್ಥನೆಯಾಗಿ ಬಳಕೆಯಾಗುತ್ತಿರುವುದು.
ಭಿನ್ನವಾಗಿ ಯೋಚಿಸುವವನನ್ನು ‘ರಾಷ್ಟ್ರವಿರೋಧಿ’ ಎಂದು ಗುರುತಿಸುವುದು, ಪ್ರಶ್ನಿಸುವವನ ದೇಶಪ್ರೇಮವನ್ನೇ ಅನುಮಾನಿಸುವುದು, ಅಲ್ಪಸಂಖ್ಯಾತ ಸಮುದಾಯಗಳ ಅಸ್ತಿತ್ವವನ್ನು ಬಹುಸಂಖ್ಯಾತರ ಸಾಂಸ್ಕೃತಿಕ ಇಚ್ಛೆಗೆ ಅಧೀನಗೊಳಿಸುವುದು… ಹೀಗೆ ಇವೆಲ್ಲವೂ ಬೌದ್ಧಿಕತೆಯ ಲಕ್ಷಣಗಳಿಗಿಂತ ಬೌದ್ಧಿಕ ದಿವಾಳಿತನದ ಲಕ್ಷಣಗಳು. ಬುದ್ಧಿಜೀವಿಯ ಕೆಲಸ ಅಧಿಕಾರದ ಭಾಷೆಗೆ ಪ್ರತಿಧ್ವನಿಯಾಗುವುದಲ್ಲ; ಅಧಿಕಾರವನ್ನು ಪ್ರಶ್ನಿಸುವಷ್ಟು ಸ್ವತಂತ್ರವಾದ ಮನಸ್ಸನ್ನು ಉಳಿಸಿಕೊಳ್ಳುವುದು. ಈ ಪ್ರಶ್ನೆ ವಿಶ್ವವಿದ್ಯಾಲಯಗಳ ವಿಷಯದಲ್ಲಿ ಇನ್ನಷ್ಟು ಗಂಭೀರವಾಗುತ್ತದೆ. ವಿಶ್ವವಿದ್ಯಾಲಯವೆಂದರೆ ಒಪ್ಪಿಗೆಯನ್ನು ಉತ್ಪಾದಿಸುವ ಕಾರ್ಖಾನೆಯಲ್ಲ; ಅದು ಅನುಮಾನಿಸುವ, ಪ್ರಶ್ನಿಸುವ, ವಾದಿಸುವ, ನಿರಾಕರಿಸುವ ಮತ್ತು ಹೊಸದಾಗಿ ಆಲೋಚಿಸುವ ಸ್ಥಳ. ವಿದ್ಯಾರ್ಥಿಯೊಬ್ಬನು ಶಿಕ್ಷಕನ ಅಭಿಪ್ರಾಯವನ್ನು ಪ್ರಶ್ನಿಸಲು ಸಾಧ್ಯವಿಲ್ಲದಿದ್ದರೆ, ಸಂಶೋಧಕನೊಬ್ಬನು ಪ್ರಚಲಿತ ರಾಜಕೀಯ ನಂಬಿಕೆಗೆ ವಿರುದ್ಧವಾದ ನಿರ್ಣಯಕ್ಕೆ ಬರಲು ಹೆದರಬೇಕಾದರೆ, ಲೇಖಕನೊಬ್ಬನು ಬಹುಸಂಖ್ಯಾತರ ಅಸಮಾಧಾನದ ಭಯದಿಂದ ತನ್ನ ವಾಕ್ಯವನ್ನು ತಿದ್ದಿಕೊಳ್ಳಬೇಕಾದರೆ.. ಅಲ್ಲಿ ಜ್ಞಾನಕ್ಕಿಂತ ವಿಧೇಯತೆ ಬೆಳೆಯುತ್ತದೆ. ಹೀಗಿರುವಾಗ ಭಾರತೀಯ ವಿಶ್ವವಿದ್ಯಾಲಯಗಳೊಳಗೆ ಯಾವುದೇ ರಾಜಕೀಯ ಅಥವಾ ಸಾಂಸ್ಕೃತಿಕ ಸಂಘಟನೆಯ ವಿಚಾರಧಾರೆಯೇ ಪ್ರಶ್ನಾತೀತ ಸತ್ಯವಾಗಿ ಪ್ರವೇಶಿಸುವುದನ್ನು ವಿಮರ್ಶಾತ್ಮಕವಾಗಿ ನೋಡಲೇಬೇಕು. ಅದು RSS ಆಗಿರಲಿ ಅಥವಾ ಮತ್ತಾವುದೇ ಸಂಘಟನೆಯಾಗಿರಲಿ ವಿಶ್ವವಿದ್ಯಾಲಯದ ಬೌದ್ಧಿಕ ಸ್ವಾಯತ್ತತೆ ಯಾವುದೋ ಒಂದು ಸಂಘಟನೆಯ ಸಿದ್ಧಾಂತಕ್ಕೂ ಅಧೀನವಾಗಬಾರದು. RSS ಪ್ರೇರಿತ ಹಿಂದುತ್ವ ಆಧಾರಿತ ರಾಷ್ಟ್ರದ ಪರಿಕಲ್ಪನೆ ವಿಮರ್ಶಾತ್ಮಕ ವಿಚಾರಣೆಯನ್ನೇ ನಿರಾಕರಿಸುವ ಮಟ್ಟಕ್ಕೆ, ಧಾರ್ಮಿಕ ಬಹುತ್ವವನ್ನು ಅನುಮಾನಿಸುವ ಮಟ್ಟಕ್ಕೆ ಅಥವಾ ಭಿನ್ನಮತವನ್ನು ದೇಶದ್ರೋಹದೊಂದಿಗೆ ಸಮೀಕರಿಸುವ ಮಟ್ಟಕ್ಕೆ ಸಾಗಿದಾಗ ಅದನ್ನು ಪ್ರಶ್ನಿಸುವುದು ಅಗತ್ಯವಾದ ಪ್ರಜಾಸತ್ತಾತ್ಮಕ ಕರ್ತವ್ಯ.
ಇಲ್ಲಿ ಟ್ಯಾಗೋರ್ ನಮ್ಮೊಂದಿಗೆ ಮಾತನಾಡುತ್ತಿರುವಂತೆ ತೋರುತ್ತಾರೆ. ಅವರ ಆತಂಕ ಯಾವುದೊಂದು ಪಕ್ಷ ಅಥವಾ ಸಂಘಟನೆಗೆ ಮಾತ್ರ ಸೀಮಿತವಾಗಿರಲಿಲ್ಲ. ಯಾವುದೇ ರಾಷ್ಟ್ರ ತನ್ನನ್ನು ತಾನು ಪವಿತ್ರವೆಂದು ಘೋಷಿಸಿಕೊಂಡು, ತನ್ನ ಹೆಸರಿನಲ್ಲಿ ನಡೆಯುವ ಅನ್ಯಾಯವನ್ನೂ ನ್ಯಾಯವೆಂದು ಸಮರ್ಥಿಸಿಕೊಳ್ಳಲು ಆರಂಭಿಸಿದಾಗ ಅಲ್ಲಿ ಟ್ಯಾಗೋರರ ಎಚ್ಚರಿಕೆ ಪ್ರಸ್ತುತವಾಗುತ್ತ ಹೋಗುತ್ತದೆ. ಭಾರತದ ದಲಿತರು, ಆದಿವಾಸಿಗಳು ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಅನುಭವವನ್ನು ಈ ಚರ್ಚೆಯಿಂದ ಹೊರಗಿಡಲಾಗದು. ಜಾತಿಯ ಕಾರಣಕ್ಕಾಗಿ ಅವಮಾನ, ಹಲ್ಲೆ ಅಥವಾ ಬಹಿಷ್ಕಾರ ಅನುಭವಿಸುವ ದಲಿತನಿಗೆ ‘ರಾಷ್ಟ್ರ’ ಎಂದರೇನು? ಧಾರ್ಮಿಕ ಗುರುತಿನ ಕಾರಣಕ್ಕಾಗಿ ತನ್ನ ಭಾರತೀಯತೆಯನ್ನು ಮತ್ತೆ ಮತ್ತೆ ಸಾಬೀತುಪಡಿಸಬೇಕಾದ ನಾಗರಿಕನಿಗೆ ದೇಶಭಕ್ತಿ ಎಂದರೇನು? ಸಂವಿಧಾನ ಸಮಾನತೆಯನ್ನು ನೀಡುತ್ತದೆ ಎಂದು ನಾವು ಹೇಳುವಾಗ ಸಾಮಾಜಿಕ ಬದುಕು ಅದನ್ನು ಎಷ್ಟರ ಮಟ್ಟಿಗೆ ಸಾಕಾರಗೊಳಿಸಿದೆ ಎಂಬ ಪ್ರಶ್ನೆಯನ್ನು ಕೇಳದೆ ದೇಶಪ್ರೇಮದ ಕುರಿತು ಮಾತನಾಡುವುದು ಅಪೂರ್ಣ.
ಡಾ. ಬಿ. ಆರ್. ಅಂಬೇಡ್ಕರ್ ಅವರ ಪ್ರಜಾಪ್ರಭುತ್ವದ ಚಿಂತನೆ ಈ ಸಂದರ್ಭದಲ್ಲಿ ಟ್ಯಾಗೋರರ ಮಾನವತಾವಾದದೊಂದಿಗೆ ವಿಶಿಷ್ಟ ಸಂವಾದ ನಡೆಸುತ್ತದೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರರಿಗೆ ರಾಜಕೀಯ ಪ್ರಜಾಪ್ರಭುತ್ವ ಮಾತ್ರ ಸಾಕಾಗಿರಲಿಲ್ಲ; ಸಾಮಾಜಿಕ ಬದುಕಿನಲ್ಲಿ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ನೆಲೆಗೊಳ್ಳದಿದ್ದರೆ ಪ್ರಜಾಪ್ರಭುತ್ವದ ಕಟ್ಟಡ ದುರ್ಬಲವಾಗುತ್ತದೆ ಎಂದು ಹೇಳಿದ್ದರು. ಟ್ಯಾಗೋರರ ‘freedom of the soul’ ಮತ್ತು ಅಂಬೇಡ್ಕರರ ‘fraternity’ ವಿಭಿನ್ನ ತಾತ್ವಿಕ ನೆಲೆಗಳಿಂದ ಬಂದರೂ, ಎರಡೂ ಅಂತಿಮವಾಗಿ ಮನುಷ್ಯನ ಘನತೆಯನ್ನೇ ರಾಜಕೀಯದ ಕೇಂದ್ರದಲ್ಲಿಡುತ್ತವೆ. ದಲಿತನ ಘನತೆಯನ್ನು ತುಳಿದು ಉಳಿಸಿಕೊಳ್ಳಬೇಕಾದ ದೇಶಭಕ್ತಿ ದೇಶಭಕ್ತಿಯಲ್ಲ. ಅಲ್ಪಸಂಖ್ಯಾತನ ಭಯದ ಮೇಲೆ ಕಟ್ಟಬೇಕಾದ ರಾಷ್ಟ್ರೀಯ ಏಕತೆ ಏಕತೆಯಲ್ಲ. ಭಿನ್ನಾಭಿಪ್ರಾಯವನ್ನು ಮೌನಗೊಳಿಸಿ ಸಾಧಿಸುವ ಶಾಂತಿ ಶಾಂತಿಯೂ ಅಲ್ಲ. ಇಲ್ಲಿಯೇ ಟ್ಯಾಗೋರರ ಕವಿತೆ ಸಮಕಾಲೀನ ರಾಜಕೀಯ ಘೋಷಣೆಗಳಿಗಿಂತ ವಿಶಾಲವಾಗುತ್ತದೆ. ರಾಷ್ಟ್ರವನ್ನು ಪ್ರೀತಿಸುವುದೆಂದರೆ ಅದರ ಭೂಪಟವನ್ನು ಮಾತ್ರ ಪ್ರೀತಿಸುವುದಲ್ಲ; ಆ ಭೂಪಟದೊಳಗೆ ಬದುಕುತ್ತಿರುವ ಕೊನೆಯ ಮನುಷ್ಯನ ಘನತೆಯನ್ನೂ ಪ್ರೀತಿಸುವುದು, ಗೌರವಿಸುಬುದು. ರಾಷ್ಟ್ರದ ಹಸಿವು ಮತ್ತು ಅಧಿಕಾರದ ಅತೃಪ್ತಿ ‘ಶತಮಾನದ ಸೂರ್ಯಾಸ್ತ’ದಲ್ಲಿ ರಾಷ್ಟ್ರದ ಅತೃಪ್ತ ಸ್ವಭಾವವನ್ನು ಟ್ಯಾಗೋರ್ ಹಸಿದ ಜೀವಿಯ ರೂಪಕದ ಮೂಲಕ ಕಟ್ಟಿಕೊಡುತ್ತಾರೆ. ರಾಷ್ಟ್ರದ ಹಸಿದ ಆತ್ಮ ಜಗತ್ತನ್ನೇ ತನ್ನ ಆಹಾರವನ್ನಾಗಿ ಮಾಡಿಕೊಂಡಿದೆ. ಅದು ನೆಕ್ಕುತ್ತದೆ, ಅಗಿಯುತ್ತದೆ, ದೊಡ್ಡ ದೊಡ್ಡ ತುತ್ತುಗಳಾಗಿ ನುಂಗುತ್ತದೆ, ತಿನ್ನುತ್ತಾ ಹಿಗ್ಗುತ್ತದೆ, ಉಬ್ಬುತ್ತದೆ. ಈ grotesque ಚಿತ್ರಣ ಸಾಮ್ರಾಜ್ಯಶಾಹಿಯ ರೂಪಕವಾದರೂ ಅದರ ಅರ್ಥ ಸಾಮ್ರಾಜ್ಯಶಾಹಿಗಷ್ಟೇ ಸೀಮಿತವಾಗುವುದಿಲ್ಲ. ಅಧಿಕಾರಕ್ಕೆ ತನ್ನದೇ ಹಸಿವಿದೆ. ಮೊದಲು ಅದು ಹೊರಗಿನ ಶತ್ರುವನ್ನು ಹುಡುಕುತ್ತದೆ. ನಂತರ ಒಳಗಿನ ಶತ್ರುವನ್ನು ಸೃಷ್ಟಿಸಿಕೊಳ್ಳುತ್ತದೆ. ಒಂದು ಸಮುದಾಯವನ್ನು ಅನುಮಾನಿಸುತ್ತದೆ; ಇನ್ನೊಂದು ಭಾಷೆಯನ್ನು ಕೀಳಾಗಿ ಕಾಣುತ್ತದೆ; ಮತ್ತೊಂದು ಸಂಸ್ಕೃತಿಯನ್ನು ‘ಅಶುದ್ಧ’ ಎಂದು ಕರೆಯುತ್ತದೆ; ಕೊನೆಗೆ ತನ್ನೊಂದಿಗೆ ಒಪ್ಪದ ನಾಗರಿಕನನ್ನೇ ರಾಷ್ಟ್ರದ ವಿರೋಧಿಯಾಗಿ ಕಾಣುತ್ತದೆ.
ಇದಕ್ಕಾಗಿಯೇ ರಾಷ್ಟ್ರೀಯತೆಯ ಅತಿರೇಕವನ್ನು ಟ್ಯಾಗೋರ್ ‘self-love’ ಎಂದು ಗುರುತಿಸುತ್ತಾರೆ. ವ್ಯಕ್ತಿಯ narcissism ಹೇಗೆ ಮತ್ತೊಬ್ಬನ ಅಸ್ತಿತ್ವವನ್ನು ತನ್ನ ಅಹಂಕಾರದ ಕನ್ನಡಿಯಾಗಿ ಮಾತ್ರ ಕಾಣುತ್ತದೆಯೋ, ರಾಷ್ಟ್ರದ narcissism ಕೂಡ ತನ್ನ ಹೊರಗಿನ ಎಲ್ಲವನ್ನೂ ತನ್ನ ಶ್ರೇಷ್ಠತೆಯನ್ನು ಅಳೆಯುವ ಸಾಧನವಾಗಿ ಪರಿವರ್ತಿಸುತ್ತದೆ. ಈ ಸಂದರ್ಭದಲ್ಲಿ ಪಿ. ಬಿ. ಶೆಲ್ಲಿಯ Ozymandias ನೆನಪಾಗುತ್ತದೆ. ಶೆಲ್ಲಿಯ ಕವಿತೆಯಲ್ಲಿ ಅಪಾರ ಅಧಿಕಾರ ಹೊಂದಿದ್ದ ದೊರೆಯ ಪ್ರತಿಮೆ ಕೊನೆಗೆ ಮರುಭೂಮಿಯಲ್ಲಿ ಒಡೆದು ಬಿದ್ದಿದೆ. ಅಧಿಕಾರ ತನ್ನನ್ನು ಶಾಶ್ವತವೆಂದು ಭಾವಿಸುತ್ತದೆ; ಕಾಲ ಅದನ್ನು ಅವಶೇಷವನ್ನಾಗಿ ಮಾಡುತ್ತದೆ. ಟ್ಯಾಗೋರರ “pride is not everlasting” ಎಂಬ ಎಚ್ಚರಿಕೆ Ozymandias ನ ರಾಜಕೀಯ ವ್ಯಂಗ್ಯದೊಂದಿಗೆ ಆಪ್ತ ಸಂವಾದ ನಡೆಸುತ್ತದೆ. ಶೆಲ್ಲಿ ವ್ಯಕ್ತಿಯ ಅಧಿಕಾರದ ಅಹಂಕಾರವನ್ನು ಪ್ರಶ್ನಿಸಿದರೆ, ಟ್ಯಾಗೋರ್ ಅದೇ ಅಹಂಕಾರವನ್ನು ಸಾಮೂಹಿಕ ರಾಷ್ಟ್ರದ ಮಟ್ಟದಲ್ಲಿ ಕಾಣುತ್ತಾರೆ. W. B. Yeats ನ Easter 1916 ಕೂಡ ಇಲ್ಲಿ ನೆನಪಾಗುತ್ತದೆ. ರಾಷ್ಟ್ರೀಯ ಹೋರಾಟದ ತ್ಯಾಗವನ್ನು Yeats ಗೌರವದಿಂದ ಕಾಣುತ್ತಾರಾದರೂ, ಅದರೊಳಗಿನ ಹಿಂಸೆ ಮತ್ತು ಮನುಷ್ಯನ ರೂಪಾಂತರದ ಕುರಿತು ಆತಂಕವನ್ನು ಉಳಿಸಿಕೊಳ್ಳುತ್ತಾರೆ. ಅವರ “terrible beauty” ಎಂಬ ವಿರೋಧಾಭಾಸ ರಾಷ್ಟ್ರೀಯ ಹೋರಾಟದ ಸೌಂದರ್ಯ ಮತ್ತು ಭೀಕರತೆ ಎರಡನ್ನೂ ಒಟ್ಟಿಗೆ ಹಿಡಿದಿಡುತ್ತದೆ. ಟ್ಯಾಗೋರರಲ್ಲಿಯೂ ಈ ನೈತಿಕತೆ ಜಾಗ್ರತವಾಗಿದೆ. ಆದರೆ ಅವರ ಸ್ಪಂದನೆ ಮತ್ತಷ್ಟು ವಿಶ್ವಮಾನವೀಯ. ಸ್ವಾತಂತ್ರ್ಯ ಬೇಕು ಆದರೆ ಮತ್ತೊಬ್ಬನ ಮೇಲಿನ ದ್ವೇಷದಿಂದ ಹುಟ್ಟಿದ ಸ್ವಾತಂತ್ರ್ಯ ಬೇಡ. Walt Whitman ನ Leaves of Grass ನಲ್ಲಿ ವ್ಯಕ್ತಿಯ ‘ನಾನು’ ವಿಶಾಲ ಮಾನವ ಸಮುದಾಯದೊಂದಿಗೆ ಒಂದಾಗಲು ಪ್ರಯತ್ನಿಸುತ್ತದೆ. ಟ್ಯಾಗೋರರ ವಿಶ್ವಮಾನವತೆಯೂ ಇದೇ ಅರ್ಥದಲ್ಲಿ ವೈವಿಧ್ಯವನ್ನು ನಾಶಪಡಿಸುವ ವಿಶ್ವಪ್ರಜ್ಞೆಯಲ್ಲ. ತನ್ನ ನೆಲ, ಭಾಷೆ ಮತ್ತು ಸಂಸ್ಕೃತಿಯನ್ನು ಪ್ರೀತಿಸುತ್ತಲೇ ಮತ್ತೊಬ್ಬನ ನೆಲ, ಭಾಷೆ ಮತ್ತು ಸಂಸ್ಕೃತಿಯ ಅಸ್ತಿತ್ವವನ್ನೂ ಗೌರವಿಸುವುದು ಅದರ ಮೂಲಭೂತ ಲಕ್ಷಣ. ವಿಶ್ವಮಾನವತೆ ಎಂದರೆ ಬೇರುಗಳನ್ನು ಕಳೆದುಕೊಳ್ಳುವುದಲ್ಲ; ತನ್ನ ಬೇರುಗಳನ್ನು ಪ್ರೀತಿಸುತ್ತಲೇ ಮತ್ತೊಬ್ಬರ ಬೇರುಗಳಿಗೂ ಬದುಕುವ ಹಕ್ಕಿದೆ ಎಂದು ಒಪ್ಪಿಕೊಳ್ಳುವುದು.
ಚಿತೆಯ ಬೆಳಕೋ, ಪ್ರಭಾತದ ಬೆಳಕೋ?
‘ಶತಮಾನದ ಸೂರ್ಯಾಸ್ತ’ದ ಅತ್ಯಂತ ಪ್ರಭಾವಶಾಲಿ ರೂಪಕ ದಿಗಂತದ ಕೆಂಪು ಬೆಳಕು. ದೂರದಲ್ಲಿ ಕೆಂಪಾಗಿ ಹೊಳೆಯುತ್ತಿರುವ ಬೆಳಕನ್ನು ನೋಡಿದಾಗ ಅದು ಹೊಸ ಪ್ರಭಾತವೆಂದು ಭಾವಿಸಬಹುದು. ಆದರೆ ಟ್ಯಾಗೋರ್ ಆ ನಿರೀಕ್ಷೆಯನ್ನು ಒಡೆದುಹಾಕುತ್ತಾರೆ. ಅದು ಶಾಂತಿಯ ಪ್ರಭಾತವಲ್ಲ; ತನ್ನದೇ ಅತಿರೇಕದಿಂದ ಸತ್ತ ರಾಷ್ಟ್ರದ ಸ್ವಪ್ರೇಮವೆಂಬ ಬೃಹತ್ ದೇಹವನ್ನು ಸುಡುತ್ತಿರುವ ಚಿತೆಯ ಬೆಳಕು.
ಈ ರೂಪಕವನ್ನು ನಮ್ಮ ಕಾಲಕ್ಕೂ ಅನ್ವಯಿಸಿ ಒಂದು ಪ್ರಶ್ನೆ ಕೇಳಬಹುದು: ನಾವು ಪ್ರಭಾತವೆಂದು ಸಂಭ್ರಮಿಸುತ್ತಿರುವ ಬೆಳಕು ನಿಜಕ್ಕೂ ಪ್ರಭಾತದ್ದೇ? ಅಥವಾ ಯಾವುದೋ ಮಾನವೀಯ ಮೌಲ್ಯದ ಚಿತೆಯಿಂದ ಏಳುತ್ತಿರುವ ಕೆಂಪು ಹೊಳಪೇ? ಈ ಪ್ರಶ್ನೆ ಯಾವುದೋ ಒಂದು ಸರ್ಕಾರದ ಕುರಿತದ್ದಲ್ಲ. ಯಾವುದೋ ಒಂದು ರಾಜಕೀಯ ಪಕ್ಷಕ್ಕೆ ಮಾತ್ರ ಸಂಬಂಧಿಸಿದದ್ದೂ ಅಲ್ಲ. ಪ್ರತಿಯೊಂದು ಕಾಲದಲ್ಲೂ ಅಧಿಕಾರದ ಎದುರು ಬುದ್ಧಿಜೀವಿ ಕೇಳಬೇಕಾದ ಪ್ರಶ್ನೆ ಇದು. ಇದಕ್ಕಾಗಿಯೇ ವಿಶ್ವವಿದ್ಯಾಲಯಗಳು ಮುಖ್ಯ. ಅವು ರಾಷ್ಟ್ರದ ವಿರುದ್ಧ ಇರುವುದಕ್ಕಾಗಿ ಅಲ್ಲ, ರಾಷ್ಟ್ರ ತನ್ನನ್ನೇ ವಿಮರ್ಶಿಸಿಕೊಳ್ಳಲು ಸಾಧ್ಯವಾಗುವ ಸ್ಥಳಗಳಾಗಿರುವುದಕ್ಕಾಗಿ. ಪ್ರಶ್ನಿಸುವ ವಿದ್ಯಾರ್ಥಿ ರಾಷ್ಟ್ರದ ಶತ್ರುವಲ್ಲ. ಅಸಮ್ಮತಿಸುವ ಲೇಖಕ ರಾಷ್ಟ್ರದ ಶತ್ರುವಲ್ಲ. ಅನ್ಯಾಯವನ್ನು ದಾಖಲಿಸುವ ಇತಿಹಾಸಕಾರ ರಾಷ್ಟ್ರದ ಶತ್ರುವಲ್ಲ. ಬದಲಾಗಿ, ಇಂಥ ಧ್ವನಿಗಳ ಅಸ್ತಿತ್ವವೇ ಪ್ರಜಾಪ್ರಭುತ್ವ ಜೀವಂತವಾಗಿದೆ ಎಂಬುದರ ಗುರುತು.
ಟ್ಯಾಗೋರರ ಭಾರತ ಏಕರೂಪದ ಭಾರತವಲ್ಲ. ಅದು ಅನೇಕ ಭಾಷೆಗಳು ಮಾತನಾಡುವ, ಅನೇಕ ದೇವರುಗಳನ್ನು ಪೂಜಿಸುವ ಮತ್ತು ದೇವರನ್ನೇ ನಂಬದವನಿಗೂ ಜಾಗಕೊಡುವ, ಅನೇಕ ಸಂಸ್ಕೃತಿಗಳು ಪರಸ್ಪರ ಸಂವಾದಿಸುವ ಭಾರತ. ಆ ಭಾರತದಲ್ಲಿ ರಾಷ್ಟ್ರದ ಏಕತೆ ಎಂದರೆ ಎಲ್ಲರೂ ಒಂದೇ ರೀತಿ ಆಗುವುದು ಅಲ್ಲ; ಬೇರೆ ಬೇರೆ ಆಗಿದ್ದೂ ಒಟ್ಟಿಗೆ ಬದುಕುವ ನೈತಿಕ ಸಾಮರ್ಥ್ಯ.
ಅದಕ್ಕಾಗಿಯೇ ಟ್ಯಾಗೋರ್ ಭಾರತವನ್ನು ಉದ್ದೇಶಿಸಿ..
“Keep watch, India” ಎನ್ನುತ್ತಾರೆ. ಅಂದ್ರೆ,
ಎಚ್ಚರದಿಂದಿರು ಭಾರತವೇ
ನಿನ್ನ ಪ್ರೀತಿ ದ್ವೇಷವಾಗದಂತೆ;
ನಿನ್ನ ಆತ್ಮಗೌರವ ಅಹಂಕಾರ ಅಥವಾ ದಬ್ಬಾಳಿಕೆ ಆಗದಂತೆ;
ನಿನ್ನ ಧರ್ಮ ಮತ್ತೊಬ್ಬನ ಭಯವಾಗದಂತೆ;
ನಿನ್ನ ಭಾಷೆ ಮತ್ತೊಂದು ಭಾಷೆಯ ಮೌನವಾಗದಂತೆ;
ನಿನ್ನ ಸಂಸ್ಕೃತಿ ಮತ್ತೊಂದು ಸಂಸ್ಕೃತಿಯ ಸಮಾಧಿಯಾಗದಂತೆ;
ಮತ್ತು ನಿನ್ನ ದೇಶಭಕ್ತಿ ಮನುಷ್ಯನಿಗಿಂತ ದೊಡ್ಡದಾಗದಂತೆ..
ಇದೇ ಟ್ಯಾಗೋರರ ಎಚ್ಚರಿಕೆಯ ಅತ್ಯಂತ ಸಮಕಾಲೀನ ಅರ್ಥ.
ಕವಿತೆಯ ಕೊನೆಯಲ್ಲಿ ಅವರು ‘ಶಾಂತಿ’ಎಂಬ ಪದ ಬಳಸುತ್ತಾರೆ. ಅವಳ ಕೈಯಲ್ಲಿ “ಸ್ಥೈರ್ಯದ ಖಡ್ಗ”ವಿದೆ; ಹಣೆಯ ಮೇಲೆ “ವಿನಮ್ರತೆಯ ಕಿರೀಟ”ವಿದೆ. ಇಲ್ಲಿ ಟ್ಯಾಗೋರ್ ಶಕ್ತಿಯ ಅರ್ಥವನ್ನೇ ಬದಲಿಸುತ್ತಾರೆ. ಇನ್ನೊಬ್ಬನನ್ನು ಸೋಲಿಸುವುದು ಶಕ್ತಿಯಲ್ಲ; ತನ್ನೊಳಗಿನ ದ್ವೇಷವನ್ನು ಸೋಲಿಸುವುದು ಶಕ್ತಿ. ಇನ್ನೊಬ್ಬನ ಧ್ವನಿಯನ್ನು ಮೌನಗೊಳಿಸುವುದು ವಿಜಯವಲ್ಲ; ತನ್ನೊಂದಿಗೆ ಒಪ್ಪದವನಿಗೂ ಮಾತನಾಡಲು ಅವಕಾಶ ಕೊಡುವುದು ಪ್ರಜಾಪ್ರಭುತ್ವದ ವಿಜಯ. ಆದ್ದರಿಂದ ‘ಶತಮಾನದ ಸೂರ್ಯಾಸ್ತ’ ದೇಶಭಕ್ತಿಯ ವಿರೋಧಿ ಕವಿತೆಯಲ್ಲ. ಅದು ದೇಶಭಕ್ತಿಯ ಹೆಸರಿನಲ್ಲಿ ಮನುಷ್ಯನನ್ನು ಮರೆಯುವ ರಾಜಕಾರಣದ ವಿರುದ್ಧದ ಕವಿತೆ.






0 Comments