– ಅಶ್ವಿನಿ ಟಿ ಎಸ್
ಅವನು : ” ಸ್ವಾಮಾರ ಶಾಸ್ತ್ರ ಕೇಳ್ಕ್ಯಂಡು ಬಂದೆ ಮಗ ಅವರೇಳ್ದಂಗೆ ಮಾಡಿದ್ರೆ ಲಗ್ನ ಹೂ ಸರ ಎತ್ತಿದಂಗೆ ಆಗೋಗತಂತೆ.ಇದೊಂದ್ ಸಾರಿ ಕೇಳ್ ಮಗ”.30 ದಾಟಿದರೂ ಮದುವೆ ಇಲ್ಲದಂತೆ ಬೆಂಗಳೂರಲ್ಲಿ ದುಡಿಯಕೆ ಅಂತ ಸೇರ್ಕಂಡು ಊರಲ್ಲಿದ್ದ ಅಮ್ಮನಿಗೆ ಚೂರುಪಾರು ದುಡ್ಡು ಕಳಿಸ್ಕೆಂತ ರಜಾ ದಿನಗಳಲ್ಲಿ ಊರಿಗ್ ಬಂದು ಇರೋ ಅರ್ಧ ಎಕರೆ ಹೊಲದಲ್ಲಿ ಚೂರುಪಾರು ಕೆಲಸ ಮಾಡ್ಕಂಡು ಇದ್ದ ಅವನು.ಇಷ್ಟು ದಿನ ಅಂತೂ ದಬ್ಬಿದಾಯ್ತು ಅಂದಂಗೆ ಆಗ್ಲಿ ಮಾದಪ್ಪನ ಜಾತ್ರೆ ಸ್ವಾಮೇರು ಹೇಳಿದ್ದು ಮಾಡೇ ಬಿಡನ.ಒಂಟಿ ಜೀವನ,ದುಡಿಮೆಗೆ ರೋಸಿದ್ದ ಅವನು “ಆಗ್ಲೇಳಮಾ”ಎಂದ.
ಅವಳು: ಹಿಡಿದ ಮಳೆ ಬಿಟ್ಟೂ ಬಿಡದೆ ಬಂದು ಬಂದು ಇರಚಲು ಹೊಡೆದು ತೇವ ಹಿಡಿದ ನೆಲಕ್ಕೆ ಹರಿದ ಗೋಣಿಚೀಲ ತಂದು ಹಾಕಿ ಮಳೆಯ ನೋಡುತ್ತಲೇ ಕುಳಿತಳು.ವಾರದ ಹಿಂದೆ ಸುರಿದ ಭಾರೀ ಮಳೆ ಗೆ ಗೋಡೆ ಕುಸಿದು ತನಗಿದ್ದ ಏಕೈಕ ಆಸರೆ ಅಜ್ಜಿ ತೀರಿಕೊಂಡಿದ್ದರು.ಹುಟ್ಟಿದಾಗಿಂದ ತಂದೆ ತಾಯಿಯ ಮುಖ ನೋಡದೆ ಅಜ್ಜಿಯ ಆರೈಕೆಯಲ್ಲೇ ಬದುಕಿ ಕೊಂಡಿದ್ದಳು.
ರಜೆ ಇದ್ದಾಗ ಕೂಲಿ ಹೋಗುತ್ತಾ ಅಜ್ಜಿಗೆ ನೆರವಾಗುತ್ತಾ ಕಷ್ಟದಲ್ಲೇ puc ಪಾಸಾಗಿದ್ದಳು.ಅಕ್ಕ ಪಕ್ಕದವರು ಕೊಡುತ್ತಿದ್ದ ಊಟದಲ್ಲೇ ದಿನ ದೂಡುತ್ತಾ ಖಾಲಿಯಾದ ಅಡುಗೆಮನೆ ಯನ್ನೇ ದಿಟ್ಟಿಸುತ್ತಾ ಮುಂದೇನು ಮಾಡಬೇಕು ಎಂಬ ಯೋಚನೆಯಲ್ಲಿ ದ್ದಳು.ಹೋದ ವರ್ಷ ಪಕ್ಕದ ಮನೆಯ ಗೌಡ್ರ ಮಗಳು ಬೆಂಗಳೂರಿನಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದು ಗೊತ್ತಾಗಿ ಮಾತಾಡಿಸಕ್ಯೆಂಡು ಬರೋಕೆ ಅವರ ಮನೆಗೆ ಹೋದಾಗ ,”ಹೂಂ ಕಣಮ್ಮಿ ನೀನು puc ಆದೇಟಿಗೆ ಕರ್ಕೊಂಡು ಹೋಗ್ತೀನಿ ಯಾವುದುಕ್ಕನ್ನ ಸೇರಿಸ್ತೀನಿ .ನಾನಿರ pg ಗೆ ನೀನು ಇರುವಂತಿ.startng ಕಮ್ಮಿ salary ಆಮೇಲೆ ಶಾನ ಮಾಡ್ತಾರೆ” ಎಂದು ಅವಳ ಪೋನ್ ನಂಬರ್ ಕೊಟ್ಟಿದ್ದಳು.ಮನಸ್ಸಿನಲ್ಲೇ ನಿರ್ಧಾರ ಮಾಡಿ,ಮೂಲೆಯಲ್ಲಿದ್ದ ಟ್ರಂಕ್ ಎಳೆದು ಇದ್ದುದ್ದರಲ್ಲೇ ಚೆನ್ನಾಗಿದ್ದ ಬಟ್ಟೆ ಚೀಲಕ್ಕೆ ತುಂಬಿಕೊಂಡಳು.ಮನೆ ಗೋಡೆ ಕುಸಿತ ಆಗಿದ್ದಿಕ್ಕೆ ಪಂಚಾಯಿತಿ ರು ಕೊಟ್ಟ ಹತ್ತು ಸಾವಿರ ರೂಪಾಯಿ ಭದ್ರವಾಗಿ purse ಗೆ ಹಾಕ್ಯಂಡು ನಾಳೆ ಬೆಳಿಗ್ಗಿನ ಬಸ್ಸಿಗೆ ಬೆಂಗಳೂರಿಗೆ ಹೋಗಿ ಬಿಡಲು ನಿರ್ಧರಿಸಿದಳು.
ಅಲ್ಲಿ: ಅಮ್ಮಯ್ಯ ಹೇಳಿದ ಸ್ವಾಮೇರ ತಕೆ ಹೋಗಿ ಅವರು ಹೇಳಿದಂಗೆ ಒತ್ತುಂಟ್ಲೆ ನೀರು ಹೊಯ್ಕಂಡು ಮುನೇಸ್ವರನ ಗುಡಿ ತಕೆ ಓಗಿ ಹಣ್ಣು ಕಾಯಿ ಹೂವು ಎಲ್ಲಾ ತಗಂದು ಪೂರ್ವ ದಿಕ್ಕಿಗೆ ನಿಂತು ಅವರು ಹೇಳಿಕೊಟ್ಟ ಮಂತ್ರ ಹೇಳಿದ್ ಮ್ಯಾಲೆ…ಅವರು ಏಳಿದ್ ಮಾಡಕೆ ಯಾಕೋ ಕೈಯ್ಯೇ ಬರವೊಲ್ದು.ಆದ್ರೂ ಭಗವಂತನ ಸ್ವರೂಪಿ ಸ್ವಾಮೇರು ಏಳಿದ್ ದಿಟವಾಗ್ಲೂ ಬಹುದು.ಅದೇನೆಂದ್ರೆ ಪೂರ್ವ ದಿಕ್ಕಿಗೆ ನಿಂತು ಮಂತ್ರ ಪಠಿಸಿ ಆದ್ ಮ್ಯಾಲೆ ನೀಲಿ ಬಣ್ಣದ ಬಟ್ಟೆ ತೊಟ್ಕಂಡು ಬಂದ ಕನ್ಯಾ ಮಣಿಗೆ ಕೈಯಲ್ಲಿರ ಅರಿಸಿನ ಕೊಂಬು ಕಟ್ಟಿಬಿಡದು.ಮುಂದೆ ಅನಾಹುತ ಆಗ್ದಂಗೆ ಇರೋಕೆ ಸಾಧ್ಯವೇ.ನಾನ್ಯಾರಿಗೋ ಕಟ್ಟಿ ಆ ಹುಡುಗಿ ಕಡೇರು ನನ್ನ ತದುಕಿ ಯಾಕ್ ಬೇಕು ವಾಪಾಸ್ ಹೋಗನೇ ಆದದ್ದಾಗಲಿ ನೋಡೇ ಬಿಡನಾ…..ಅದೇ ಹೊತ್ತಿಗೆ..
ಅದೇ ಹೊತ್ತಿಗೆ: ಬಸ್ಸು ಜಲ್ದಿನೇ ಬಂತು.ಮೊದಲ ಸಾರಿ ಬೆಂಗಳೂರಿಗೆ ಬಂದಿದೀನಿ ಎಲ್ಲಾ ಒಳ್ಳೆಯದು ಮಾಡಪಾ ಅಂದು ದೇವರಿಗೆ ಕೈ ಮುಗಿದು ನಿಂತಳು.ಮುನೇಶ್ವರನ ಗುಡಿ ತಗೆ ಇರು ನಾನು ಬಂದು ಕರ್ಕೊಂಡು ಹೋಗ್ತೀನಿ ಅಂದಿತ್ತು ಅವಕ್ಕ.ಟ್ರಂಕ್ ನಲ್ಲಿರೋ ಹಳೇ ಬಟ್ಟೆಯಲ್ಲಿ ಇದ್ದುದರಲ್ಲಿ ಸುಮಾರಾಗಿದ್ದ ನೀಲಿ ಚೂಡಿದಾರ್ ಹಾಕ್ಕಂಡು ಬಂದು ಕೈಮುಗಿದು ನಿಂತಿದ್ದ ಅವಳ ಮುಖ ಯಾಕೋ ಮುದ್ದಾಗಿ ಆಪ್ತವಾಗಿ ಅವನಿಗೆ ಕಂಡಿತು.ದೈನ್ಯ ಸಂಕಟಗಳೇ ಮಂತ್ರ ಪುಷ್ಪವಾಗಿ ಸಾಲಾಗಿ ನಿಂತ ಬೆವರ ಹನಿಗಳೇ ಬಾಸಿಂಗವಾಗಿ ಕೈಯಲ್ಲಿದ್ದ ಅರಿಸಿನ ಕೊಂಬನ್ನು ಕಟ್ಟೇಬಿಟ್ಟ.ಯಾವನೋ ತಲೆಕೆಟ್ಟವನಿರಬೇಕು ಎಂದು ಕಟ್ಟಿದ್ದನ್ನು ತೆಗೆಯಲು ಹೋದವಳಿಗೆ ಪೂಜಾರಿ “ಬೇಡಮ್ಮ ದೈವೆಚ್ಛೇ “ಎಂದರು.ಸುಮ್ಮನೆ ನಿಂತವಳಿಗೆ ಆದ ಆಘಾತದ ಭಾರ ತಡೆಯಲಾರದೆ ಕುಸಿದು ಕುಳಿತಳು.ಅವನ ಪೂರ್ವಾಪರ ಕೇಳಿ ಅವಳ ದಿಕ್ಕು ದೆಸೆ ಹೇಳಿ ಆದದ್ದು ಒಳ್ಳೆಯದೇನೋ ಎಂದು ಅವನೊಂದಿಗೆ ನಡೆದಳು.4 ನೇ ಅಂತಸ್ತಿನಲ್ಲಿದ್ದ ಪುಟ್ಟ ಶೀಟಿನ ಮನೆಯೇ ಸ್ವರ್ಗವೆನಿಸಿ ತನ್ನ ಬದುಕು ಇಂತಹ ತಿರುವು ಪಡೆದಿದ್ದಕ್ಕೆ ಸೋಜಿಗವೆನಿಸಿ ಬಡತನದ ಬದುಕು ಬಾಳುತಲಿದ್ದಳು.
ಈಗ: ಕೊರೊನಾ ಬಂದು ಕೆಲಸ ಹೋಗಿ ಕೊನೆಗೆ ಬಾಡಿಗೆ ಕಟ್ಟಲು ದುಡ್ಡಿಲ್ಲದಂತಾದಾಗ ಊರಿಗೆ ಹೋಗಿ ಬಿದ್ದರು.ಇರುವ ಅರ್ಧ ಎಕರೆ ಜಮೀನಿನಲ್ಲಿ, ಸೊಸೈಟಿ ಅಕ್ಕಿಯಲ್ಲೇ ಕಾಲ ಕಳೆಯಬಹುದು ಎಂದು ಬೆಂಗಳೂರು ಸಹವಾಸಕ್ಕೆ ಹೋಗಲಿಲ್ಲ.ಹಾಗೆ ಅಂದುಕೊಂಡ ಆರು ತಿಂಗಳಲ್ಲೇ ಕೊರೋನಾ ಮಾರಿಗೆ ಅವನು ಮತ್ತು ಅವನ ಅಮ್ಮ ಬಲಿಯಾದರು.ಹಳ್ಳಿಯ ಕ್ಷುದ್ರ ಜನರ ಕಾಟ ತಾಳಲಾರದೇ ಕೆಲಸ ಅರಸುತ್ತಾ ಮತ್ತೊಂದೇ ವರ್ಷದಲ್ಲಿ ಅವಳು, ಅವಳ ಮಗು ಬೆಂಗಳೂರಿಗೆ ಪಯಣಿಸಿದರು.ಈ ಬಾರಿ ಏಕೋ ಮುನೇಶ್ವರ ನ ಗುಡಿಗೆ ಹೋಗಬೇಕಿನಿಸಲಿಲ್ಲ…..
ಕೆಲವು ಕಥೆಗಳಿಗೆ ಅಂತ್ಯವೆಂಬುದೇ ಇರುವುದಿಲ್ಲ






0 Comments