ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಿಂದಿರುಗಿ ನಾ ಕೇಳುವುದಿಲ್ಲ

-ರುಕ್ಮಿಣಿ ನಾಗಣ್ಣವರ

ಅನಾಮಿಕ ಹೂವು

ನಿನ್ನ ದಾರಿಯಲ್ಲಿ
ಚೆಲ್ಲಿದ ಹೂವುಗಳನ್ನು
ಹಿಂದಿರುಗಿ ನಾ ಕೇಳುವುದಿಲ್ಲ
ಅವುಗಳಲ್ಲಿ
ನನ್ನ ಸೋಲುಗಳ ನಿಶ್ಶಬ್ದ
ಗೆದ್ದೆನೆಂದು ಬೀಗಿದ ಕ್ಷಣಗಳು
ನನ್ನನ್ನು ನಾನೇ ಕಂಡುಕೊಂಡ
ಇರುಳುಗಳ ಬೆಳಕಿನ ಸತ್ಯವಿದೆ

​ಒಮ್ಮೆ
ನಿನ್ನ ತಲುಪುವುದೇ
ನನ್ನ ಪಯಣವೆಂದುಕೊಂಡಿದ್ದೆ
ನಂತರ ತಿಳಿಯಿತು
ಕೆಲವು ದಾರಿಗಳು
ಯಾರನ್ನೂ ತಲುಪಿಸುವುದಿಲ್ಲ
ನಮ್ಮೊಳಗಿನ
ಮುಚ್ಚಿದ ಕದಗಳನ್ನಷ್ಟೇ ತೆರೆಯುತ್ತವೆ

​ನಿನ್ನ ಹೆಸರಿನ ಹೆಜ್ಜೆಗುರುತ ಬಳಿ
ನಾನು ಬಿಟ್ಟು ಬಂದದ್ದು
ಕೇವಲ ಪ್ರೀತಿಯಲ್ಲ
ಬಿಗಿದು ಹಿಡಿಯುವ ಹಠ
ಬಿಡಲಾರದ ಭಯ
ಕಳೆದುಹೋಗಬಾರದೆಂಬ
ಮೋಹದ ತೆಳು ಎಳೆ

​ಈಗ
ಮುಳ್ಳು ನಾಟಿದ ಜಾಗದಲ್ಲೇ
ಹೂವು ಅರಳಿದರೂ
ಅದಕ್ಕೆ ನಿನ್ನ ಹೆಸರಿಡುವುದಿಲ್ಲ
​ಗಾಯ ನನ್ನದು
ಅದರಿಂದ ಚಿಮ್ಮಿದ
ಪರಿಮಳವೂ ನನ್ನದೇ

​ನೀನು
ನನ್ನ ಪಂಜರದ ಕೀಲಿಯಲ್ಲ
ನನ್ನ ಆಕಾಶದ ಗಡಿಯಲ್ಲ

​ನಿನ್ನ ಪ್ರೀತಿಸಿದಂತೆಯೇ
ನನ್ನನ್ನೂ ಪ್ರೀತಿಸಲು
ಈಗ ಕಲಿತಿದ್ದೇನೆ

​ಆದ್ದರಿಂದ
ನಿನ್ನ ಹಾದಿಯಲ್ಲಿ
ಮತ್ತೊಂದು ಹೂವನ್ನಿಟ್ಟು ಸಾಗುವೆ
ಏನನ್ನೂ ಬೇಡದ
ನನ್ನನ್ನೇ ಕಂಡುಕೊಂಡ
ನಿರಾಳ ಪ್ರೀತಿಯ ಕುರುಹಾಗಿ.

‍ಲೇಖಕರು Admin

21 September, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading