-ಮೌನೇಶ ನವಲಹಳ್ಳಿ
ಒಡೆದ ನೆರಳು
ಹಗಲ ಬಾಯೊಳಗೆ ಇರುಳು
ಇರುಳ ಬಾಯೊಳಗೆ ಹಗಲು
ನನ್ನೊಂದಿಗೆ ನೆರಳು
ನೆರಳೊಂದಿಗೆ ನಾನು
ಪಾಪ,
ಬೇವರ್ಸಿ ಬೆನ್ನು
ವಾರಕ್ಕೊಮ್ಮೆಯಾದರೂ ತೊಳೆಯಬೇಕೆಂದರೂ
ಸಿಗುವರೆ ? ಪ್ರೀತಿಸುವವರು
ಅದೆಷ್ಟು ಮಂದಿ ಮುಖಸ್ತುತಿಗೆ ವಾಂತಿ ಬರಬೇಕು
ಅವ್ವ,
ಮುದ್ದು ನಾಯಿಕುನ್ನಿ ಹೊಲಸು ಮಾಡಿದ್ದಕ್ಕೆ
ಹಿಗ್ಗಾ ಮುಗ್ಗಾ ಥಳಿಸುತ್ತಾಳೆ
ಹೆಂಡತಿ,
ಬೇಗ ರೆಡಿಯಾಗು ಅಂದಿದ್ದಕ್ಕೆ
“ನಾ ಬರುವುದಿಲ್ಲೆಂದು” ವಾದಿಸುತ್ತಾಳೆ
ಸಾಯಬಾರದಷ್ಟೆ ಉಪಟಳಕ್ಕೆ
ಮಾತಿನ ಭರಕ್ಕೆ ಒಂದು ಸಣ್ಣ
ಅಳುಕಿಲ್ಲ
ಕಡ್ಡಿಗಾಣದ ತಿರುಗುವ ಚಕ್ರದಂತೆ ಸಪೂರ
ನಿಧಾನಿಸಿದಂತೆ ಅಸಂಖ್ಯಾತ ರೆಕ್ಕೆ ಪುಕ್ಕಗಳು
ಸಮಾಧಾನವೆಲ್ಲಿದೆ..?
ಎಸೆಯಲಾರದ
ಹುಳು ಮುಟ್ಟಿದ ತುಟ್ಟಿ ಕಟ್ಟಿಗೆ ತುಂಡು
ಒಂದಿಷ್ಟು ತುಂಬಿ ಬಳಿದು ಒಪ್ಪಮಾಡಿ ಒಪ್ಪಿಸಲೇ ಬೇಕು
ನಿಲುವುಗನ್ನಡಿಯ ಮುಂದೆ ಕಿಂಚಿಂತೂ
ಒಡಕುಗಳು ಕಾಣದ್ಹಾಂಗೆ ಕಿಸಿದು
ರಾತ್ರಿಯಾಗುತ್ತಿದ್ದಂತೆ
ದೊಡ್ಡದಾಗಿ ಎದುರುಗೊಳ್ಳುವ ನೆದರಿಗೆ
ಹೆದರುವವರಾರು
ಇರುಳು ಇರುಳಿಗೆ ನಿಂತಿದೆ ಅಷ್ಟೆ
ಹಗಲಿಗೆ ಸಖೇದಾಶ್ಚರ್ಯ
ನೆರಳ ಕದಡಬೇಕೆಂದರೆ,
ಹೆಪ್ಪಿಟ್ಟ ಹಾಲಲ್ಲಾ
ಹೆತ್ತವರನ್ನೆ ಧಿಕ್ಕರಿಸುವ ನಮ್ಮ ರಾಮ-ಶಾಮಣ್ಣರ ಕುಲಪುತ್ರರಿಗೆ
ಮಣ್ಣು ಮಹಾತ್ಮರು ಯಾವ ಲೆಕ್ಖ
ಅಕ್ಕನ ಕಂಡು ಮುಗುಳ್ನಕ್ಕ
ಕೋರ್ಟು ಬೂಟು ಸೂಟು ತೊಟ್ಟ ಉಪನ್ಯಾಸಕ
ಪಾಪ,
ದೇವತೆಗಳು
ಒಡೆದ ದನಿಗಳ ಬಿಂಬ
ಹಿಂದಿನ ದಿನದ ಕಂಬನಿಯ ಭೋರ್ಗರೆತ
ಸತ್ತ ಇಂದುಗಳಿಗೆ ಅಶ್ರುತರ್ಪಣ
ಸದಾ ಅಮಲಿನಲ್ಲಿರುವ ನಾವು
ಯಕಶ್ಚಿತ ನೆರಳಿಗಂಜುತ್ತೇವೆಯೇ..?
ಸಹಿಸಿಕೊಳ್ಳಬೇಕು
ಪಾಪ,
ಭೂಮಿ.






0 Comments