-ಮಹಾದೇವ ಎಸ್ ಪಾಟೀಲ
ಅಪ್ಪನೆಂಬ ಆಲದಮರ
ನನ್ನಪ್ಪನ ಹರಿದ ಅಂಗಿ
ಕಾಸಿಲ್ಲದ ಖಾಲಿಕಿಸೆಯಲ್ಲಿ
ಸಾಲು ಸಾಲು ಬವಣೆಗಳು
ನನ್ನಪನ
ಉಂಗುಷ್ಟ ಕಿತ್ತಿದ ಚಪ್ಪಲಿ
ಸುಡು ಸುಡುವ ಪಾದಗಳು
ಉರಿಯುವ ಬಯಲಲಿ
ಎದೆಯ ಕಡಲಾಳದಿಂದ
ಉಕ್ಕಿದ ಬೆವರು ಹನಿಗಳು
ನನ್ನಪ್ಪ
ಹಸಿದ ಒಡಲು ತುಂಬಿಸಲು
ಭರವಸೆಯ ಹಾದಿಯಲಿ
ಹಗಲಿರುಳು ದುಡಿಯುತ
ಹೊತ್ತು ಹೊಯ್ಯಲಾರದ
ಸಂತೆಯ ಮಾಡಿ ಸೋತು ಹೋದ
ನನ್ನಪ್ಪ
ವಿಧಿಯಿಲ್ಲದೆ ತೆವಳುತ್ತ, ಬಳಲುತ್ತ
ಎದುಸಿರು ನಿಂತರು ಬಿಡದೆ
ಯುದ್ಧದಲ್ಲಿ ಗೆದ್ದು ಸೋತ;
ಬಾಹುಬಲಿಯಷ್ಟೆ ಶಕ್ತಿಶಾಲಿಯಂತೆ
ಗಮ್ಯದ ದಾರಿಯ ತೋರಿ ಹೋದ
ನನ್ನಪ್ಪನ
ಸವೆದು ಹೋದ ಅಂಗೈ ಗೆರೆಗಳು
ನದಿಯಾಗಿ ಹರಿದ ಒದ್ದೆಗಣ್ಣು
ಬಿರುಕು ಬಿಟ್ಟ ಪಾದಗಳಲಿ
ರಕ್ತ ಹನಿ ಹನಿಯಾಗಿ ಜಿನುಗಿ
ಬದುಕು ಇತಿಹಾಸದ ಪುಟ ಸೇರಿತು
ನನ್ನಪ್ಪ
ಇದ್ದಷ್ಟೆ ಹಾಸಿಗೆಗೆ ಕಾಲು ಚಾಚಿ
ಬಡತನವ ಹೊದ್ದು ಮಲಗಿ
ಮಕ್ಕಳ ಬದುಕಿಗೆ ಪುಡಿಗಾಸು ಕೂಡಿಸಿ
ಒಂದಷ್ಟು ಬುತ್ತಿ ಕಟ್ಟಿಟ್ಟು
ಹೇಳದೆ ಕೇಳದೆ ಪಯಣ ಮುಗಿಸಿದ
ಅಪ್ಪನೆಂಬ ಆಲದಮರ






0 Comments