ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೊಂದವರುಳಿವರೇ..?

-ಸಿ ಬಿ ಐನಳ್ಳಿ

1.ದೊಡ್ಡವರ ಶಾಂತಿಯ ಭಾಷೆ

ದೊಡ್ಡವರ ಬಾಯಲಿ ಬರುವ
ಶಾಂತಿಯ ಮಾತಿಗೆ
ಎದೆ ಈಗ ಝೆಲ್ಲೆನ್ನುತ್ತದೆ
ಹೀಗೇ ಹಿಂದೊಮ್ಮೆ
ಶಾಂತಿ ನೆಲೆಗೊಳಿಸಿದ್ದರಂತೆ..
ಅಲ್ಲಿ
ಗುಬ್ಬಿಗಳು ಗೂಡು ಕಟ್ಟಲಿಲ್ಲ
ನವಿಲುಗಳು ಮತ್ತೆಂದೂ
ಕುಣಿಯಲಿಲ್ಲ
ಉಸಿರುಗಟ್ಟಿತು ಗಾಳಿ
ಬೀಜ ನೆಟ್ಟ ಮಣ್ಣು
ವಿಷ ಕಕ್ಕಿತು

ನಾಗರಿಕ ಜಗತ್ತಿಗೆ
ಶಾಂತಿ ನೆನಪಾದಾಗಲೆಲ್ಲ
ನಿಸರ್ಗದ ಪ್ರಶ್ನೆಗಳ ಹತ್ಯೆಯಾಗುತ್ತದೆ
ಪಾರಿವಾಳಗಳು ರಕ್ತ ಕಾರುತ್ತವೆ
ಭೂತಾಯಿಯ ಕರುಳು
ಕಂಪಿಸುತ್ತವೆ

ಇಲ್ಲಿ
ಇವರೇನು ಭಿನ್ನವೇ?
ಅನಾಗರಿಕ ಹಟ್ಟಿ ಕೇರಿಗಳ
ನಮ್ಮ ಜನಕ್ಕೆ
ಊರ ದೊಡ್ಡವರಾದ ಇವರು
ಎಷ್ಟು ಬಾರಿ ಶಾಂತಿಪಾಠ
ಹೇಳಿಲ್ಲ?
ದೊಡ್ಡವರ ಭಾಷೆ
ಆಗ
ಅಷ್ಟೊಂದು
ತಿಳಿಯುತ್ತಿರಲಿಲ್ಲ

ಈಗ ಮತ್ತೊಮ್ಮೆ ಅವರು
ಶಾಂತಿ ಸ್ಥಾಪಿಸ ಬಯಸಿದ್ದಾರೆ
ಕ್ಷಣಾರ್ಧದಿ ಕಂದಮ್ಮಗಳ ಶಾಲೆ
ರಾಶಿ ಹೆಣಗಳ ಸ್ಮಶಾನ
ರಕ್ತಮುತ್ತಿದ ನೊಣಗಳ ಹಿಂಡು
ನಾಗರಿಕತೆಯ ನರ್ತನಕೆ
ನಾಚುತಿದೆ

2.ಕೊಂದವರುಳಿವರೇ..?

ಕ್ಷಿಪಣಿ ಉಡಾಯಿಸಿದ ಕೈಗಳೇ
ಮನೆಗೆ ಹೋಗಿ ಮಕ್ಕಳ ನುಣುಪಾದ
ಗಲ್ಲ ಸ್ಪರ್ಶಿಸಲು ಕಾತರಿಸುತ್ತಿವೆ..
ಇರುತ್ತಾರಲ್ಲವೇ ತಿರುಗಿ
ಹೋಗುವ ತನಕ..?
ಅದೇ ಪ್ರಶ್ನೆ
ಕಾಡುತಿದೆ ಬೆನ್ನತ್ತಿ
ಹೆಜ್ಜೆ ಹೆಜ್ಜೆಗೂ..
ಕೈ ಮೈ ಮನದ ತುಂಬಾ
ರಕ್ತ ಹೆಣಗಳ ಗಬ್ಬು ನಾತ

ನಡುಗುತ್ತಿದ್ದಾನೆ ಯೋಧ
ಮಕ್ಕಳು ಮತ್ತೆ ಮುತ್ತಿಡುತ್ತವೆಯೇ?
ವಿಷಯ ಅದಲ್ಲ
ನೂರಾರು ಶಾಲಾಮಕ್ಕಳ ಉಸಿರು
ಸೀಳಿದಮೇಲೂ ತನ್ನೊಳಗೆ ತಂದೆ
ಉಳಿದಿರುತ್ತಾನೆಯೇ?
ಗಾಳಿ ಕೂಡ ಕಲ್ಲಾಗಿ
ಉಸಿರಾಟ ಕಷ್ಟವಾಗುತ್ತದೆ
ತಪ್ಪುತ್ತವೆ ಹೆಜ್ಜೆ..
ಕಲ್ಲೆದೆಯನೂ ಕೊಲ್ಲುತ್ತದೆ
ಸಂಬಂಧ
ಕೊಂದವರುಳಿವರೇ..?
ಬೇಲಿಯಾಚೆಗಿನ ಭಾನು ಬಯಲು
ಪಿಸು ನುಡಿಯುತ್ತಿವೆ

3. ಯುದ್ಧ

ನಸುಕಿಗೆದ್ದು
ದನಗಳ ಸಗಣಿ ಬಳಿದು
ಹಾಲುಹಿಂಡಿ ಮಾರಿ
ರೊಟ್ಟಿ ಬಡಿದಿಟ್ಟು
ಮಕ್ಕಳನೆಲ್ಲಾ ಹಣಿ ಮಾಡಿ ಶಾಲೆಗೆ ಕಳಿಸಿ
ದೊಡ್ಡವರ ಹುಡುಗಿಯ ಪ್ರೇಮವ ಒಪ್ಪಿ ಒದೆತಿಂದು
ಆಸ್ಪತ್ರೆ ಸೇರಿದ ತಮ್ಮನ ನೋಡಿಬಂದು
ಮನೆದೇವರ ಹರಕೆ ತೀರಿಸದ್ದಕ್ಕೆ
ಅತ್ತೆಯ ಬೈಗುಳ ತಿಂದು
ಮಾವನ ರೋಗಕೆ ಕಾಡೌಷಧಿಯ ಮಾಹಿತಿ ಪಡೆದು
ಸರಸರ ಒಂದು ಕೆಜಿ ಹೂ ಕಟ್ಟಿ
ಕೋರಿನ ಹೊಲದಲಿ ಮೆಕ್ಕೆಜೋಳದ ತೆನೆ ಮುರಿಯುತ್ತಿರುವ
ಗಂಡಗೆ ಬುತ್ತಿ ಹೊಯ್ದು ಉರಿಬಿಸಿಲಲಿ ತಾನೂ ಮುರಿದು
ಸಂಜೆ ದಡ ದಡ ಮನೆಗೆ ಬಂದು
ಆಡಿಬಂದ ಕೋಳಿಗಳನೆಲ್ಲಾ ಮಕ್ಕಳು ಬುಟ್ಟಿಯಲ್ಲಿ
ಮುಚ್ಚಿಟ್ಟದ್ದ ಪರೀಕ್ಷಿಸಿಕೊಂಡು
ಬರುವ ಮೆಕ್ಕೆಜೋಳದ ದುಡ್ಡಲ್ಲಿ
ಪೂರ್ತಿ ಸಾಲ ತೀರಿಸಲೇಬೇಕೆಂದು ಗಂಡನ
ಜೊತೆ ಜಗಳಕಟ್ಟಿ ಅರ್ಧ ಗೆದ್ದು ಅರ್ಧ ಸೋತು
ಹೊಲದ ಬದುಕುಗಳು ಖಾಲಿಯಾದರೆ
ಪಕ್ಕದ ಪಟ್ಟಣದಲಿ ತರಕಾರಿ ಮಾರಿಬರುವ
ಯೋಜನೆ ರೂಪಿಸಿಕೊಂಡು
ತೊಳೆಯಲಿಟ್ಟಿದ್ದ ಬಟ್ಟೆ ಹಾಗೇ ಉಳಿದದ್ದಕ್ಕೆ
ತನ್ನ ತಾನೇ ಶಪಿಸಿಕೊಂಡು
ಮನೆಮಂದಿಗೆಲ್ಲ ಪಟಪಟ ಮುದ್ದಿ ತಟ್ಟಿಟ್ಟು
ಬಡಿಸಿ ತಾನೊಂದು ತಿಂದು
ಮಲಗುವ ಮುನ್ನ ಎಂದಿನಂತೆ
ಸುಧಾರಿಸಿಕೊಳ್ಳಲು
ಅಂಗಳದ ಗಾಳಿಗೆ ಬಂದು ಕುಳಿತು
ನಕ್ಷತ್ರಗಳನ್ನು ನೋಡಬೇಕೆನ್ನುವಷ್ಟರಲ್ಲಿ
ಓಡಿಬಂದ ಪುಟ್ಟಮಗು ಕೇಳುತ್ತದೆ
‘ಯವಾ ಬೇ
ಯುದ್ಧ ಯವಾಗ ಸುರುವಕ್ಕಾತಿ ?’

‍ಲೇಖಕರು Admin

6 April, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading