ಕನ್ನಡಕ್ಕೆ ನಿಘ೦ಟನ್ನು ಕೊಟ್ಟ ಕಿಟಲ್ ಅವರ ಹುಟ್ಟು ಹಬ್ಬಕ್ಕೆ ಅವರ ಬಗ್ಗೆ ಗಣೇಶ ರಾವ್ ಹವಲ್ದಾರ್ ಅವರು ಬರೆದ ಒಂದು ಕವಿತೆ ಇಲ್ಲಿದೆ.
–ಗಣೇಶ ರಾವ್ ಹವಲ್ದಾರ್
ಕಿಟಲ್
ದೇಶಭಾಷೆಗಳ ಎಲ್ಲೆ ದಾಟಿ
ಮಾಡಿದೆ ಕ್ರೈಸ್ತನುಪದೇಶಗಳ ನಾಟಿ
ನಮ್ಮೊಳಗೊಂದಾದ ನೀ ಯಾರಿಗೆ ಸಾಟಿ
ಈ ನೆಲದ ಸ್ವಾದವುಂಡವ ನೀ ಬಲು ಘಾಟಿ ||
ಆದೆ ನೀ ಹಳ ಹೊಸಗನ್ನಡದ ಕೊಂಡಿ
ಗರಿ ಮುರಿಗರಿಗಳ ಮಹತ್ವ ತಿಳಕೊಂಡಿ
ಕನ್ನಡಿಗರ ಮನೆ-ಮನಗಳ ಬೆಸಗೊಂಡಿ
ಸಂತೆಗೊಂತೆಗಳ ತಿರುಗಿ ಭಾಷೆಗಳ ಸವಿಯುಂಡಿ||
ಪದ್ಯ-ಗದ್ಯ, ವೇದ-ಪುರಾಣ, ಗಾದೆ-ತಗಾದೆಗಳು ಉಳಿಯಲಿಲ್ಲ ನಿನ್ನಿಂದ ದೂರ
ಪರಿಶ್ರಮದಿಂದಾದೆ ಕನ್ನಡಿಗ ದಿಗ್ಗಜರ ಸರದಾರ
ಕಿಟಲ್ ಕನ್ನಡ ಶಬ್ದ ಕೋಶ
ನೀಡಿ ಕಳಕೊಂಡಿ ಋಣಭಾರ
ನಾವಿಂದು ಅರ್ಥ ತಿಳಿಯಲು
ತಿರುವಬೇಕಿದೆ ಪುಟಗಳ ಸರಸರ||
ಕನ್ನಡ ಕಲಿಯಲು ನಿನಗೆ
ಸಾಕಾಯಿತು ವರ್ಷ ಮೂರು
ಕಲಿಯಲೊಲ್ಲೆವು ನಾವು ಕಳೆದರೂ ರಾಜ್ಯೋತ್ಸವಗಳು ಹಲವಾರು
ಬಯಸಿದೆ ಕನ್ನಡದ ನುಡಿ ಕೇಳಲು ನಿಲ್ಲುವಾಗಲೂ ನಿನ್ನುಸಿರು
ಕನ್ನಡ ಬಳಸಿ-ಬೆಳಸುವವರೆಲ್ಲರೂ ಮರೆಯಲಾರರು ನಿನ್ನ ಹೆಸರು||






0 Comments