ಹಂಸ ನಡಿಗೆಯ ದಿಲ್ಲಾಣ..!

ಅಕ್ಷಯ ಆರ್ ಶೆಟ್ಟಿ

ಜೋಡಿ 1:

ಒಂದೆರಡು ವಾರಗಳ ಹಿಂದೆ ಮಧ್ಯಾಹ್ನ ಜಾರುತ್ತಿದ್ದ ಹೊತ್ತು ಮಾಗಿದ ಜೋಡಿ ಹಕ್ಕಿಗಳು ತುಕ್ಕು ಹಿಡಿದ ಕಂಬಿಗಳಿಗೆ ಹಚ್ಚಿರುವ ಕೀಲೆಣ್ಣೆಗಳ ಭರವಸೆಯೊಡನೆ ತಮ್ಮ ತಮ್ಮ ರಥಗಳನ್ನು ಚಲಾಯಿಸುವ ಪಾಡು ಪಡುತ್ತಾ ಬಸ್ ಸ್ಟಾಪ್‍ಗೆ ಕಷ್ಟಪಟ್ಟು ಬಂದು, ಮತ್ತೆ ಬಸ್ ಏರಲು ಪಟ್ಟ ಪ್ರಯಾಸ ಸ್ವರ್ಗದ ಏಣಿಯನ್ನು ಹತ್ತಿದಂತೆಯೇ ಇತ್ತು.

ಆಸರೆಯಾದ ಒಂದೆರಡು ಹಸ್ತಗಳ ಬಲದೊಡನೆ ಹತ್ತಿ ಕುಳಿತ ಜೋಡಿ ತೀರಾ…ತೀರಾ…ಜೀರ್ಣಾವಸ್ಥೆಯ ಶರೀರದ ಗೂಡುಗಳಾಗಿದ್ದುವು. ಸಂಕುಚಿತಗೊಂಡ ದೃಷ್ಟಿ ಮತ್ತು ಸೋತ ಕೈಕಾಲುಗಳ ಒಳಗೂ ಬದುಕನ್ನು ಬದುಕುವ ಒಂದು ಧ್ಯಾನ ಸ್ಪಷ್ಟವಾಗಿ ಗೋಚರಿಸುತ್ತಿತ್ತು. 

ಸವೆಸಿರುವ ಪಥದಿ
ಸವೆದಿರುವ ರಥದಿ
ಒಂದಿನ್ನೊಂದರ-
ಆಸರೆಯ ಬಲದಿ
ಸಾಗಿವೆ, ಹಂಸಗಳೆರಡು…

ಯಾವುದೋ ಆಪ್ತೇಷ್ಟರ ಕಾರ್ಯಕ್ರಮದ ಸೂಚ್ಯವಾಗಿ ಕೈಯಲ್ಲಿ ನೇತಾಡುತ್ತಿದ್ದ ಸಿಹಿತಿಂಡಿಯ ತೈಲಿ, ಅದರಾಚೆಗೆ ಎಲ್ಲವನೂ ಗೌಪ್ಯವಾಗಿರಿಸಿತ್ತು. ಬಸ್ಸಿನಲ್ಲಿದ್ದ ಒಂದಷ್ಟು ಜೋಡಿ ಕಣ್ಗಳು ಈ ಜೋಡಿ ಹಂಸಗಳತ್ತಲೇ ತಮ್ಮ ದೃಷ್ಟಿ ಕೇಂದ್ರಿಕರಿಸಿದ್ದುವು…

ಸಂವಾದದ ಕಸುವು
ಸಾಗಿದೆ ಏರುತಗ್ಗುಗಳ ಒಡಲೊಳಗೆ
ಲೋಕ ಪರಿವೆಗೆ ಶೂನ್ಯದೃಷ್ಟಿಯ ಬೀರುತ
ಹುದುಗಿವೆ ಅವು, ಒಳಗೊಳಗೆ…

ಮತ್ತು ಒಂದಷ್ಟು ದೂರ ಸಾಗಿದ ಬಸ್, ಹಣ್ಣಾದ ಹಂಸಗಳ ತಾಣವನ್ನು ಸಮೀಪಿಸಿತು. ಮೊದಲಿಗೆ, ಗಂಡು ಹಂಸ ಎದ್ದು ನಿಂತು, ನಂತರ ತನ್ನ ಕಂಪಿಸುತ್ತಿದ್ದ ದೇಹವನ್ನೇ ಹೆಣ್ಣು ಹಂಸಕ್ಕೆ ಆಧಾರವಾಗಿಸಿ, ತಾನು ಒಂದೊಂದೇ ಮೆಟ್ಟಿಲಿಳಿದು ಮತ್ತೆ ಸಂಗಾತಿಯನ್ನಿಳಿಸಿ, ರಸ್ತೆಯಿಂದ ಸರಿದು ನಿಂತ ಚಿತ್ರ… ಮನಃಪಟಲದಲ್ಲಿ ಸ್ಥಿರವಾಗಿ ಅಚ್ಚೊತ್ತಿಬಿಟ್ಟಿತು. 

ಹಾದಿ ಸಾಗಿದರಾಯ್ತು ಬರುವುದೆಲ್ಲಾ ಬರಲಿ
ಬಾರಯ್ಯ ಮಮಬಂಧು, ಜೀವನ ಪಥದೊಳಾವು
ಒಂದಾಗಿ ಮುಂದುವರೆಯುವ, ಹಿಂದಿರಲಿ ಸಾವು!

ಜೋಡಿ 2:

…ನಾಲ್ಕು ದಿನದ ಹಿಂದೆಯಷ್ಟೇ ಭಾಗವಹಿಸಿ ಬಂದ ಅಜ್ಜನ ಮದುವೆಯ ಸುವರ್ಣ ಮಹೋತ್ಸವ, ಮತ್ತೆ ಮತ್ತೆ ನೆನಪಾದದ್ದು, ಅಜ್ಜ ತನ್ನ ಮನದ ಭಾವನೆಗಳಿಗೆ ನೀಡಿದ ಮಾತಿನ ಚೌಕಟ್ಟು… ಅಲ್ಲಿ ಆತ ಕಾಣಿಸಿದ ಅಜ್ಜಿಯ ಚಿತ್ರ; ಎರಡು ಪಥಗಳು ಒಂದಾದ ಬಗೆ; ಆ್ಯರೊನಾಟಿಕಲ್ ಎಂಜಿನಿಯರಿಂಗ್ ಉದ್ಯೋಗದಲ್ಲಿ ಬ್ಯುಸಿಯಾಗಿದ್ದ ತಾನು ಮತ್ತು ಕಲ್ಲು ಸಿಮೆಂಟಿನ ಗೋಡೆಗಳಿಂದಾವೃತವಾದ ‘ಹೌಸ್’ ಅನ್ನು, ಮನಸ್ಸು ಮನಸ್ಸುಗಳನ್ನು ಬೆಸೆಯುವ ‘ಹೋಮ್’ ಆಗಿ ಮಾರ್ಪಾಟು ಮಾಡಿದ ಅಜ್ಜ್ರಿ; ಈ ಸಾಧ್ಯತೆಗಳ ಹಿಂದಿದ್ದ ಕಾಣದ ದೇವರು…

ಹೀಗೆ ತನ್ನ ಕೆಲವೇ ಮಾತುಗಳಲ್ಲಿ ಅಜ್ಜ-ಅಜ್ಜಿಯ ನಡುವಿನ ಅನ್ಯೋನ್ಯತೆಯನ್ನೂ ಅನನ್ಯ ದೈವ ಭಕ್ತಿಯ ಚಿಂತನೆಯನ್ನೂ ಕಟ್ಟಿಕೊಟ್ಟ ಅಜ್ಜ, ಇಷ್ಟು ವರ್ಷಗಳಲ್ಲಿ ನಾವೆಲ್ಲ ಕಂಡಿರದ ತನ್ನ ಒಳಗನ್ನು ತೆರೆದು ತೋರಿದ್ದ. ಸದಾ ಅಜ್ಜನೊಂದಿಗೆ ವಿಮಾನದ ಬಗೆಗಿನ ಕೌತುಕಗಳ ವಿ-ಜ್ಞಾನಕ್ಕಷ್ಟೆ ಕಿವಿಯಾಗಿದ್ದ ನಮಗೆ ಮೊನ್ನೆ ಮೊದಲ ಬಾರಿ ಅಜ್ಜಿಯ ಸಹಚರ ಅಜ್ಜ ನಮ್ಮ ಕಣ್ಣ ಮುಂದಿದ್ದ.

ಮನೆಮನೆಯಲಿ ದೀಪ ಉರಿಸಿ ಹೊತ್ತುಹೊತ್ತಿಗೆ ಅನ್ನ ಉಣಿಸಿ
ತಂದೆ ಮಗುವ ತಬ್ಬಿದಾಕೆ… ನಿನಗೆ ಬೇರೆ ಹೆಸರು ಬೇಕೇ
ಸ್ತ್ರೀ ಅಂದರೆ ಅಷ್ಟೆ ಸಾಕೆ!

ಜೋಡಿ 3:

ಮೊನ್ನೆ ಮೊನ್ನೆ ಹಚ್ಚಿದ ಮೆಹಂದಿ ಇನ್ನೆನು ಮಾಸುವುದರಲ್ಲಿತ್ತೇನೋ; ಎರಡು ಕುಟುಂಬಗಳು ಈಗಷ್ಟೇ ಪರಿಚಿತರಾಗುತ್ತಿದ್ದರು. ಆಗಲೇ ಬೇರ್ಪಡುವ ನಿರ್ಧಾರ!

ಹೆಣ್ಣು ಮತ್ತು ಗಂಡು ತಾವೇ ಪರಿಚಿತರಾಗಿ, ಗೆಳೆಯರಾಗಿ, ಲಿವಿಂಗ್ ಟುಗೆದರ್ ಶೈಲಿಯಲ್ಲೂ ಸೈ ಅನ್ನಿಸಿಕೊಂಡು ಎಲ್ಲ ರೀತಿಯ ಪರೀಕ್ಷೆಗೆ ಒಡ್ಡಿಕೊಂಡು, ಎರಡೂ ಫ್ಯಾಮಿಲಿಗೆ ತಮ್ಮ ಆಯ್ಕೆಯನ್ನು ತಿಳಿಸಿ ಮದುವೆಂದು ನಿರ್ಧಾರಕ್ಕೆ ಬಂದಿದ್ದರು.

ರಂಗೇರಿರುವ ಬಣ್ಣ ಪ್ರೀತಿಯ ಗಾಢತೆಯ ಸೂಸುತ್ತ
ಹಚ್ಚಿರುವ ಗೋರಂಟಿ ತೆರೆದಿಹುದು ಮನದ ಕದಪು
ಅಂಗೈಯಲೇ ಲೋಕ ಕಂಡಿದೆ, ಮನದರಸನ ಒನಪು…
ಎಂದ, ಹಿರಿಯರ ಒಯ್ಯಾರಕೆ, ನಾಚಲು ತಿಳಿಯದು ಈ ವಧು-ವರಗೆ!
ಜೊತೆಜೊತೆಯಾಗಿ ಮುಗಿಸಿದ ಮೆಹಂದಿ ಶಾಸ್ತ್ರವ ಕಣ್ತುಂಬುತ್ತಲೆ ಹಿರಿಯರ ನಂಬಿಕೆಗೆ, ಜಿಜ್ಞಾಸೆಯ

ತಕ್ಕಡಿ ಹಿಡಿದ ನವ ವಧು-ವರರ ಒಳಗೊಂದು ಹಮ್ಮು! ಇಬ್ಬರನೂ ಅರಿತುಕೊಂಡಿರುವ ನಮಗೆ ಮೆಹಂದಿಯ ರಂಗಿನಲಿ ತಿಳಿದುಕೊಳ್ಳುವುದಕೇನಿದೆ? …ಒಳಗೊಳಗೇ ಪಿಸುನಕ್ಕಿದ್ದರು. 

…ಅರಿಯುವಿಕೆಯ ಕುಲುಮೆಯಲಿ ಬೆಂದೂ ಹೀಗಾಗಬೇಕೆ? ಎರಡು ವರ್ಷದ ಜೊತೆಜೊತೆಗಿನ ಪಯಣವ ನಿರಾಕರಿಸದ ಮನಸು, ಗಂಡ ಹೆಂಡಿರಾಗಿ ವರುಷವನೂ ಕಳೆಯಲು ಸಮ್ಮತಿಸಲಿಲ್ಲವೇ? 

ಹಾವು ಮುಂಗುಸಿಯಂತೆ ಕಚ್ಚಾಡಿ, ಕೊರ್ಟು ಮೆಟ್ಟಿಲು ಹತ್ತಿಳಿದು, ಡಿವೋರ್ಸ್ ಸಿಕ್ಕಾಗ ನಿರಾಳಾದರು, ಈ ಇಬ್ಬರು!

ನನ್ನದೇ ಓರಗೆಯ, ನನ್ನದೇ ವಯಸ್ಸಿನ ತಿಳಿ ತಿಳಿ ತಿಳಿದು, ಜೊತೆ ಸೇರುವ ಸಂಬಂಧಗಳು ಸೋಲುವುದೆಲ್ಲಿ…? ನನ್ನೊಳಗೆ ಬೃಹದ್ದಾಕಾರದಲ್ಲಿ ಬೆಳೆದಿದ್ದ ಪ್ರಶ್ನೆಗೆ, ಕಣ್ಣಿಗೆ ಕಟ್ಟಿದಂತೆ ಗೋಚರಕ್ಕೆ ಬಂದದ್ದು, ಹೀಗೆ ಬಂದು ಹಾಗೆ ಹೋದರೂ ಮನಸ್ಸಿನಲ್ಲೇ ಉಳಿದ ಆ ಹಿರಿ ಜೀವಗಳು ಮತ್ತು ನನ್ನೆದುರು ಓಡಾಡುತ್ತಿರುವ ಅಜ್ಜ-ಅಜ್ಜಿ. ಈ ಎಲ್ಲ ಹಿರಿಯ ಜೋಡಿಗಳು, ನನ್ನೊಳಗೆ ಉಳಿಸಿದ್ದ ಸ್ಪಷ್ಟತೆ ಒಂದೆ – ‘ನಾನು’ ಎನ್ನುವುದೇ ಇಲ್ಲದ ಹಂಸ ನಡಿಗೆಯ ದಿಲ್ಲಾಣ!

ಒಂದಲ್ಲ ಎರಡಲ್ಲ
ಎಂಬತ್ತರ ಹೊಸಿಲೊಳಗೂ
ಅದೇ ಆಪ್ತತೆ, ಅದೇ ಒಲವು
ಮತ್ತದೇ ರಕ್ಷೆ;
‘ನಾನು’ ಎನ್ನುವುದು ಕರಗಿ
‘ನಾವು’ ಆಗುವ ದೀಕ್ಷೆ!

‍ಲೇಖಕರು Admin

July 13, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: