ನಾನೋ ಮಹಾಪ್ರಸಾದವನ್ನು ಕೈಯಲ್ಲಿ ಹಿಡಿದುಕೊಂಡು ಕಣ್ ಕಣ್ ಬಿಡುತ್ತ ನಿಂತಿದ್ದೆ..

ಬೇಟೆ, ಒಂಟಿ ನಕ್ಷತ್ರ ಮತ್ತು ಒಲೆಗೊಂದು ಪಾಲು

ಶೋಭಾ ಹಿರೇಕೈ ಕಂಡ್ರಾಜಿ.

ಅದೊಂದು ಎಂದಿನಂತದ್ದೇ ಮುಂಜಾನೆ. ಬೆಳಗಿನ ಶೌಚ ಕಾರ್ಯಗಳಿಗೆ ಜೊತೆಯಿದ್ದ ಸ್ನೇಹಿತೆ ಸುನೀತಾ ಆ ದಿನ ಊರವರೆಲ್ಲಾ ಸೇರಿಕೊಂಡು ಕಣಿವೆಗೆ ಬೇಟೆಯಾಡಲು ಹೋಗುವ ವಿಚಾರ ತಿಳಿಸಿದಳು. ಬೇಟೆಗೆ (ಶಿಕಾರಿ) ಹೋಗುವುದು, ಕಾಡ ಪ್ರಾಣಿಗಳನ್ನು ಬೇಟೆಯಾಡಿ ತಂದು ಮನೆಯಲ್ಲಿ ಬಿಸಿ ಬಿಸಿ ಮಾಂಸದಡುಗೆ ಮಾಡುವುದು ಇದೆಲ್ಲ ನನಗೇನೂ ಹೊಸದಲ್ಲ. ಆದರೆ ಇಲ್ಲಿ ಗಡಿಯೂರನ್ನು ಹಬ್ಬಿಕೊಂಡಿದ್ದ ಕಾಡು ಮತ್ತು ಕಣಿವೆಯಂಚನ್ನು ಇಳಿದು ಹೇಗೆ ಬೇಟೆಯ ಸಾಹಸ ಮಾಡುತ್ತಾರೆ ಎಂಬುದೇ ಕುತೂಹಲಕ್ಕೆ ಕಾರಣವಾಗಿತ್ತು ನನಗೆ.

ಗಡಿಯೂರು, ಮತ್ತೆ ನನ್ನ ಕಾಡೂರು ಹಲವು ವಿಷಯಗಳಲ್ಲಿ ಸಾಮ್ಯತೆಯನ್ನು ಹೊಂದಿತ್ತು. ಬಹುಷಃ ನನ್ನೂರ ಜನರು ಬೇಟೆಯಾಡುವ ಪರಿಯೇ ಇಲ್ಲೂ ಇರಬಹುದು ಎಂದುಕೊಂಡೆ.

ಆದರೆ ನಮ್ಮೂರಿನ ಹಾಗೆ ಇಲ್ಲಿ ಬಲೆ ಹಾಕಿ ಮೀನು ಹಿಡಿಯುವುದಾಗಲಿ, ಮೀನು ಕರ್ಸಲು ಬಳಸಿ ಏಡಿ ಕೂಣಿಯಲ್ಲಿ ಏಡಿ ಬೀಳಿಸುವ ಕಾರ್ಯವನ್ನಾಗಲೀ.. ಉರಿ ಬಿಸಿಲಲ್ಲೋ, ಸಂಜೆ ಕಪ್ಪಿಡುವ ಹೊತ್ತಲ್ಲೋ.. ನಡು ರಾತ್ರಿಯಲ್ಲೋ ಕೋವಿ ಹೆಗಲಿಗೇರಿಸಿ ಹೋಗುವ ನೋಟವಾಗಲಿ ಎಂದೂ ನನ್ನ ಕಣ್ಣಿಗೆ ಬಿದ್ದಿರಲಿಲ್ಲ.

ಕೋವಿ, ಕೂಣಿ, ಬಲೆ ಇವೇನೂ ಇಲ್ಲದ ನಮ್ಮನೇಲಿ ಮಳೆಗಾಲದಲ್ಲಿ ಅಪರೂಪಕ್ಕೆ ಅಪ್ಪ ಕೊಡ್ಲಂಚಿನ ದುಂಬಕ್ಕೆ ಕೈ ಹಾಕಿ ಸಿಕ್ಕ ಕಲ್ಲೇಡಿಯನ್ನು(ಕಾರೇಡಿ) ಹಿಡಿದು ತಂದದ್ದು, ಅದನ್ನು ಹೊಡೆಸಲ ಬೆಂಕಿಯಲ್ಲಿ ಹದಕ್ಕೆ ಸುಟ್ಟದ್ದು, ಮತ್ತದರ ಘಮವಿನ್ನೂ ನನ್ನ ನಾಸಿಕದೊಳಗೆ ಅವಿತುಕೊಂಡು “ಸುಟ್ಟೇಡಿ ಎಷ್ಟು ರುಚಿ! ಎಷ್ಟು ಪರಿಮಳ! ಎಂದು ಬಹಿರಂಗವಾಗಿ ಹೇಳದೆ ಅಲ್ಲೇ ನಾಚುತ್ತ ಕುಳಿತಿತ್ತೇ ಹೊರತು ಅದಾವುದನ್ನು ಈ ಊರಲ್ಲಿ ನೋಡಿರಲಿಲ್ಲ ನಾನು. ಹಾಗಾಗಿ ಊರವರೆಲ್ಲ ಶಿಕಾರಿಗೆ ಹೋಗುತ್ತಾರೆ ಎಂದಾಗ ಸಹಜ ಆಸಕ್ತಿ ಮತ್ತೆ ಆತಂಕವೂ ನನಗೆ. ಅದನ್ನೇ ನಾನೀಗ ಹೇಳ ಹೊರಟರೆ, ನಮ್ಮೂರ ಬೇಟೆಯ ಕಥೆಗಳೇ ಕಣ್ಮುಂದೆ ಬಂದು ಅದನ್ನ ಮೊದಲು ಬರಿ ಅನ್ನುತ್ತಿವೆ.

ಆ ಕಾಲದಲ್ಲಿ ನನ್ನೂರ ಕೆಲವರ ಮನೆಯಲ್ಲಿ ಕೋವಿಗಳಿದ್ದವು. ಆಗಾಗ ಹೆಗಲಿಗೆ ಏರಿಸಿಕೊಂಡು ನಮ್ಮನೆ ದಾಟಿಯೇ ಕಾಡಿನ ಕಡೆ ಹೋಗುತಿದ್ದರು. ಢಾಂ..ಢಾಂ… ಸದ್ದು ಕೇಳಿದಾಗ ಮಾತ್ರ.. ಓಯ್ ಎಂತ ಬಿತ್ತು ಎನ್ನುತ್ತಾ… ಚಾದರ ಹೊದ್ದು ಮಲಗಿ ಬಿಡುತಿದ್ದೆವು ನಾವೆಲ್ಲ. ಯಾಕೆಂದರೆ ಈ ಸದ್ದುಗಳೆಲ್ಲ ಹೆಚ್ಚಾಗಿ ನಾವು ಮಲಗಿದ ಮೇಲೇಯೇ ಕೇಳುತಿತ್ತು. ಬೇಟೆ, ಬಲೆಗಳೆಲ್ಲ ನಮ್ಮನೇಲಿ ನಿಷಿದ್ಧ ಅನ್ನೋ ರೀತಿಯಲ್ಲಿ ನಾವೆಲ್ಲಾ ಇದ್ದೆವು. ಹಾಗಾಗಿ ಮಾಂಸದೂಟವೂ ಅಪರೂಪ ನಮಗೆ!

ಒಂದು ದೀಪಾವಳಿಯ ಹಿಂದಿನ ದಿನದ ಗವ್ಗತ್ತಲಲ್ಲಿ ನಮ್ಮೂರ ಬೇಟೆಯ ಗುರಿಕಾರರೆಲ್ಲ ಸೇರಿ ಬೇಟೆಗೆ ಹೋಗಿದ್ದರು. ಇಟ್ಟ ಗುರಿ ತಪ್ಪಿ ಹೋಗಿ ಹೊಕ್ಕಿದ್ದು ಮಾತ್ರ ಮಾಳದಲ್ಲಿ ಮಲಗಿದ್ದ ೧೪-೧೫ ವಯಸ್ಸಿನ ಸಣ್ಣ ಹುಡುಗನ ಹೊಟ್ಟೆಯನ್ನು. ತಂದೆ ಮಾನಸಿಕ ಅಸ್ವಸ್ಥ…‌ ಹುಚ್ಚು ಹೆಚ್ಚಾಗಿ ತಾಯಿಯನ್ನು ಕೊಂದು ಜೈಲು ಸೇರಿ ಊರ್ಮೇಲೆ ಬಿದ್ದ ಅಪ್ಪ ಇದ್ದೂ ಇಲ್ಲ ಆತನ ಪಾಲಿಗೆ. ಇವನಿಗಿಂತಲೂ ಚಿಕ್ಕವಳಾದ ತಂಗಿಯ ಜವಾಬ್ದಾರಿ ಬೇರೆ! ಈ‌ ಪುಟ್ಟ ಅಣ್ಣನೇ ಅಪ್ಪನೂ ಆಕೆಗೆ.. ಅಪ್ಪ ಅವ್ವನ ಹಾಸಿಗೆಯಲ್ಲೇ ಬೆಚ್ಚಗೆ ಮಲಗಬೇಕಿದ್ದ ಹುಡುಗ ಗದ್ದೆಗೆ ಬರುವ ಕಾಡು ಕೋಣ, ಕಾಡು ಹಂದಿ ಕಾಯಲು ಮಾಳವೇರಿ ಮಲಗಿದ್ದ! ಗುಂಡು ಗುರಿ ತಪ್ಪಿ ಕಾಡಿಂದ ಬೆಟ್ಟವಿಳಿದು ಮಾಳವೇರಿ ಈತನ ಕಿಪ್ಪೊಟ್ಟೆ ಸೇರಿತ್ತು. ಕರುಣೆಯಿರಲಿಲ್ಲ ಗುಂಡಿಗೂ ಮತ್ತವನ ಬದುಕಿಗೂ… ಅವ್ವ ಅನ್ನಲು ಅವ್ವ ಇಲ್ಲ! ಅಪ್ಪ ಅಂತ ಕೂಗಿದ್ದು ಕೇಳಿಸಿಕೊಂಡರೂ… ರಕ್ತ ಚೆಲ್ಲಿದ್ದು ಕಣ್ಣಿಗೆ ಕಂಡಿದ್ದರೂ ಅಪ್ಪ ಎನ್ನುವ ಅಪ್ಪ ಮಾತ್ರ ಹುಚ್ಚು ನಗೆ ನಗುತ್ತಿದ್ದನೇನೋ! ಪುಣ್ಯಕ್ಕೆ ಆ ಅಪ್ಪ ಊರಲ್ಲೇ ಇರಲಿಲ್ಲ.

ಆದ ಪರಾಮಸಿಗೆ ಕಂಗೆಟ್ಟು ಹೋದ ಕೋವಿಧಾರಿಗಳೆಲ್ಲ ರಕ್ತದಲ್ಲಿ ಬಿದ್ದ ಹುಡುಗನನ್ನು ರಾತ್ರೋ ರಾತ್ರಿ ಆಸ್ಪತ್ರೆ ಸೇರಿಸಿ ಪ್ರಾಣ ಉಳಿಸುವಲ್ಲಿ ಗೆದ್ದಿದ್ದರು. ನಂತರ ಬಿಡಿ ಅವರೆಲ್ಲಾ ಪೋಲಿಸರ ತನಿಖೆ ಕಾನೂನು ಕ್ರಮಗಳನ್ನೆಲ್ಕ ಎದುರಿಸಿದರು. ಆ ದೀಪಾವಳಿಯ ಹಬ್ಬದಲ್ಲಿ ನಮ್ಮೂರ ದನಕರುಗಳು ದನಬೈಲ್ ಕಟ್ಟೆಯಲ್ಲಿ ಓಡಲಿಲ್ಲ. ಅಲ್ಲಿ ಸೇರಿದವರೆಲ್ಲರ ಮಾತಿಗೆ ನಾನು ಕಿವಿಗೊಟ್ಟಿದ್ದೆ.

” ಪೋಲಿಸರು ಬಿನ್ ಡ್ರೆಸ್ ನಲ್ಲೇ ಬಂದರೂ ಬಂದರಂತೆ…. ಆಸ್ಪತ್ರೇಲಿ ಹೆಚ್ಚು ಕಮ್ಮಿ ಆದ್ರೆ ಊರಿಗೆ ಊರೇ ತೊಳಿತಾರೇನೋ.. ಏನ್ ಕೇಡ್ಗಾಲ ಬಂತೆನ ಊರಿಗೆ” ಹೀಗೆ ನನ್ನೂರ ಮಂದಿಯ ಒಳಗಿನ ದು:ಖ ದುಗುಡವನ್ನೆಲ್ಲ ನಾನು ಹೊತ್ತುಕೊಂಡೇ.. ಹಬ್ಬದ ರಜೆ ಮುಗಿಸಿ ಹಾಸ್ಟೆಲ್ ಗೆ ಮರಳಿದ್ದೆ.

ಒಂದೆರಡು ದಿನ ಬಿಟ್ಟು ನನ್ನ ಸ್ನೇಹಿತೆ ಅಂದಿನ ದಿನ ಪತ್ರಿಕೆಗಳನ್ನು ಕಾಲೇಜಿಗೆ ತಂದು ನನ್ನ ಮುಂದೆ ಹಿಡಿದಿದ್ದಳು. “ಶೋಭಾ.. ನಿನ್ನೂರ ಸುದ್ದಿ ಬಂದಿದೆ ನೋಡು ” ಅಂದವಳು ಪುಟ ಬಿಡಿಸಿಯೇ ಕೈಗಿತ್ತಿದ್ದಳು. ನೋಡಿದರೆ ನನ್ನೂರಿನ ತಮ್ಮ ಸಾವು ಬದುಕಿನ ನಡುವೆ ಇನ್ನೂ ಹೋರಾಡುತ್ತಿದ್ದ ವಿಷಯ ತಿಳಿಯಿತು. ಯಾರ ಬಳಿ ಹೇಳುವುದು ಇಂತಹ ಎದೆಯ ಸಂಕಟಗಳ.

ಯಾರೋ ಹೇಳಿದ್ದರು ,ರಾತ್ರಿ ಒಂಟಿ ನಕ್ಷತ್ರ ಇರುವಾಗ ಅದರ ಬಳಿ ಬೇಡಿಕೊಂಡ ಬೇಡಿಕೆ ಈಡೇರುತ್ತದೆ ಎಂದು! ನಾನು ಆ ರಾತ್ರಿ ಒಂಟಿ ನಕ್ಷತ್ರಕ್ಕಾಗಿ ಕಾಯುತ್ತಲೇ ಕುಳಿತಿದ್ದೆ. ಕಣ್ಣಿಗೆ ಬಿದ್ದಿದ್ದೇ ತಡ… ಕಣ್ಣು ಮುಚ್ಚಿ ಪ್ರಾರ್ಥಿಸಿದ್ದೆ. ನನ್ನೂರಿಗೆ ಬಂದ ಕಷ್ಟಗಳ ಪರಿಹರಿಸು ಎಂದಿದ್ದೆ..ಅಂತೂ ಮುಂದೆ ತವರೂರ ತಮ್ಮ ಬದುಕಿದ್ದ. ಇಡೀ ಊರಿನ ಮಗನಂತೆ ಆತನಿಗೆ ಆರೈಕೆ ಮಾಡಿತ್ತು ನನ್ನೂರು. ಊರಿಗೆ ಬಂದ ಸಂಕಷ್ಟ ಕರಗುತ್ತಾ ಬಂದಿತ್ತು. ಹೀಗೆ ಇದೊಂದು ಬೇಟೆಯ ಕಥೆಯಾದರೆ , ಇನ್ನೊಂದು ನೆನಪನ್ನು ನೆನೆಯಲೇಬೇಕು.

ಅದು,
ನಾನು ನನ್ನ ಮಗನಿಗೆ ಜನ್ಮವೆತ್ತ ಎರಡನೇ ದಿನವಿರಬೇಕು, ನನ್ನ ಆರೈಕೆಗೆ ಚಿಕ್ಕಿಯನ್ನು ಬಿಟ್ಟು ಮನೆಗೆ ಹೋದ ಅವ್ವ ಅಂಗಳದ ಅಂಚಲ್ಲೇನೋ ನಿಂತಿದ್ದಳಂತೆ… ಗುಂಡಿನ ಸದ್ದು ಕಿವಿಗಪ್ಪಳಿಸುವಷ್ಟರಲ್ಲೇ… ಮದ್ದು ಗುಂಡು ಅವ್ವಳನ್ನು ಹಾದೇ ಹೋಯಿತಂತೆ… “ಗ್ರಹಚಾರ ಸರಿ ಇತ್ತು ನನ್ನ ಮೊಮ್ಮಗನ್ನ ನೋಡಲು ಬಂದೆ, ಇಲ್ಲದಿದ್ದರೆ ಕುಂಬ್ರಿ ಅಳಿಯ ನನ್ನ ಕೊಂದೇ ಬಿಟ್ಟಿದ್ನೇ ಮಗ, ಹಕ್ಕಿ ಕಂಡರೆ ಸಾಕು ಗುಂಡು ಹೊಡೆಯೋ ಚಟ ಅವನಿಗೆ “ಎಂದ ಅವ್ವ ಹೇಳಿದ ಆ ಕೋವಿಯ ಕಥೆ ಈಗ ನೆನಪಾದರೂ ಅಂಗಾಲನ್ನು ಬೆವರಿಸುತ್ತೆ.

“ಸರಿ ಇದ್ದಾಗ ಎಲ್ಲೋ ಬಿಟ್ಟು ಹೋದ, ಈಗ ತೊಳೆಯಲು ಬಳಿಯಲು ನಾನೇ ಬೇಕು. ಬಿದ್ದಲ್ಲೇ ಇರ್ತಾರೆ, ಮಲಗಿ ಮಲಗಿ ಆನೆಯಂತಾಗ್ಯಾರೆ… ಎತ್ತಿ ಇಳಿಸಿ ನನ್ನ ಹೆಣ ಬಿದ್ದೋತು”. ಬೇಟೆಯಾಡಕೆ ಹೋಗಿ ಗುಂಡು ತಾಗಿ, ಚಿಕಿತ್ಸೆ ಫಲಿಸದೆ ನೆಲ ಹಿಡಿದ ಗಂಡನ ಸೇವೆ ಮಾಡುತ್ತಿರುವ ನನ್ನ ಶಾಲೆಯೂರಿನ ಒಬ್ಬ ತಾಯಿಯ ಕಥೆಯೂ ಸಹ ಇಲ್ಲಿ ಗೊತ್ತಿಲ್ಲದೆ ನುಸುಳೇ ಬಿಟ್ಟಿತ್ತು. ವನ್ಯ ಪ್ರಾಣಿಗಳ ಬೇಟೆ ಶಿಕ್ಷಾರ್ಹ ಅಪರಾಧವೆಂದು ತಿಳುವಳಿಕೆ ಬಂದ ಮೇಲೆ ಈಗ ಬೇಟೆಯ ಸದ್ದು ಎಲ್ಲೆಡೆ ಕಡಿಮೆ ಆಗಿದೆ ಎನ್ನುವ ಸಮಾಧಾನದೊಂದಿಗೆ ಗಡಿಯೂರಿನ ಒಂದು
ಗಡಿಯೂರ ಬೇಟೆಯ ಕಥೆ ಹೇಳಿ ಮುಗಿಸುವೆ.

ಹಿಂದೆ ಕರಡ ಕಡಿಯಲು ಹೋದ ಬಗ್ಗೆ ಬರೆದಿದ್ದೆನಲ್ಲ. ಇದೂ ಹಾಗೇ…. ತಳವಾರರ ಸಾರಿಕೆಯಾಗಿ ಮೊದಲೇ ನಿರ್ಧಾರವಾದ ದಿನ ರಾಗಿ ರೊಟ್ಟಿ , ಮೇಲೆ ಕೆಂಪಾನೆ ಕೆಂಡದಂಥ ಖಾರದ ಚಟ್ನಿ! ಬುತ್ತಿ ಗಂಟು ಹೊತ್ತುಕೊಂಡ ಬೇಟೆಯ ತಂಡ ಕಣಿವೆಯಿಳಿದಿತ್ತು. ಮುಂಜಾನೆ ಕಣ್ ಬಿಡುವ ಮೊದಲೇ ಹೊರಟವರು ಸರಿಯಾಗಿ ಕತ್ತಲು ಹುಟ್ಟುವ ಹೊತ್ತಿಗೆ ಊರಿಗೆ ಹೆಜ್ಜೆಯೂರಿದ್ದರು.

ನನಗೋ ಒಳಗೊಳಗೆ ಒಂದು ದಿಗಿಲಿತ್ತು. ಈ ಬೇಟೆಯ ಉಸಾಪರಿಯೆಲ್ಲ ಯಾಕೆ ? ಆಸೆಯಾದರೆ ಕೆಜಿನೋ ಅರ್ಧ ಕೇಜಿನೋ ಮಟನ್ನೋ ಚಿಕನ್ನೋ ತಂದು ತಿನ್ನೋದಪ್ಪ ಅಂತಿದ್ದೆ. ಕಾಡಂದಿ ಬೇಟೆಯಾದಾಗ “ಎಷ್ಟು ಆಳಿಂದು”? ಅಂತ ಕೇಳುವ ಆಸೆಗಣ್ನೋರನ್ನು ನೋಡಿದ್ದೆ, ಊಟಕ್ಕೆ ಕುಂತಾಗ ಹಂದಿ ಹೆಸರು ಕೇಳಿದರೂ ಸಾಕು “ನಮ್ಮ ಮನೆ ದೇವರಿಗೆ ಆಗಲ್ಲ” ಅಂತ ಊಟ ಬಿಟ್ಟವರನ್ನು ನೋಡಿದ್ದೆ. ಹೀಗಾಗಿ “ಇಲ್ಲಿ ಯಾವ ಪ್ರಾಣಿ ಬಿದ್ದಿರಬಹುದು? ಎಷ್ಟ್ ಆಳಿಂದಿರಬಹುದು? ಸದಾ ಗಸ್ತು ತಿರುಗುವ ಗಾರ್ಡ್, ಫಾರೆಸ್ಟ್‌ ಯಾರೂ ಈ ಕಡೆ ಬರದಿದ್ದರೆ ಸಾಕಪ್ಪ” ಅಂದುಕೊಂಡಿದ್ದೆ. ಮತ್ತೂ ಏನೂ ಬಾನಗಡಿ ಮಾಡಿಕೊಳ್ಳದೆ ಬಂದರೆ ಸಾಕು ಎಂದು ಮಾವುಲಿಗೆ ಕೈ ಮುಗಿದಿದ್ದೆ.

ಅಂತೂ ಮರಳಿ ಬಂದಿತ್ತು ಬೇಟೆಯ ತಂಡ. ಸುದ್ದಿ ತಿಳಿದಿದ್ದೇ ಕಾಯುತ್ತ ಕುಳಿತಿದ್ದ ಪುಂಡ ಹೈಕಳೆಲ್ಲಾ ಮನೇಲಿದ್ದ ಜಾಗಟೆ , ಮತ್ತೆ ಜಾಗಣೆ ಬಾರಿಸುವ ಕೋಲು ಹಿಡಿದು ಓಡಿದ್ದೇ ಓಡಿದ್ದರು. ದೇವರ ಪೂಜೆಗೋ, ಮಂಗಳಾರತಿಗೋ ಜಾಗಟೆ ಬಾರಿಸುವ ಪದ್ಧತಿ ನಮ್ಮಲ್ಲಿ. ಈಗ ಈ ಊರಿನಲ್ಲಿ ಯಾವ ಪೂಜೆ ಅಂದುಕೊಂಡು ಜಾಗಟೆಯ ಸದ್ದು ಬರುವತ್ತ ಬಂದು ನೋಡಿದರೆ ಬೇಟೆಯಾಡಿ ತಂದ ಪ್ರಾಣಿಯ ಮೆರವಣಿಗೆ ಊರ ಬೀದಿಯಲ್ಲಿ! ಯಾವ ಪ್ರಾಣಿಯೆಂದು ಗೊತ್ತಾಗುತ್ತಿರಲಿಲ್ಲ. ಪಲ್ಲಕ್ಕಿ ಹೊತ್ತು ತಂದ ರೀತಿಯಲ್ಲಿ ಮೆರವಣಿಗೆ ಬರುತಿತ್ತು. ಅದೂ ಸೀದಾ ದೇವಾಲಯದ ಕಡೆ ಹೊರಟಿತ್ತು. ನಂತರ ಗೊತ್ತಾದ ವಿಷಯವೇನೆಂದರೆ ಆ ಊರಿನ ಪದ್ಧತಿಯಂತೆ ವರ್ಷಕ್ಕೊಮ್ಮೆ ಬೇಟೆಯಾಡಿದ ಪ್ರಾಣಿಯನ್ನು ಹೀಗೆ ದೇವರ ಹೆಸರಲ್ಲಿ ಪ್ರಸಾದವಾಗಿ ಹಂಚಬೇಕಂತೆ!

ಈ ನಡುವೆ ಎಲ್ಲರ ಮನೆಯ ಅಡುಗೆ ಕೋಣೆ ಬಾಡೂಟದ ಮಸಾಲೆಯ ಪರಿಮಳದಿಂದ ತುಂಬಿಕೊಂಡಿತ್ತು. ಎಲ್ಲರ ಮನೆಯ ತಾಯಂದಿರು ಸಂಜೆಯ ಗಮ್ಮತ್ತಿನ ಅಡುಗೆಗೆ ಸಿದ್ಧಮಾಡತೊಡಗಿದ್ದರು. ಗಂಡಸರೆಲ್ಲರೂ ಕೈಯ್ಯಲ್ಲೊಂದು ಸಣ್ಣ ಪ್ಲಾಸ್ಟಿಕ್ ಕೊಟ್ಟೆ ಹಿಡಿದು ಮನೆಯತ್ತ ಬರುತಿದ್ದರು. ಅಂತದ್ದೇ ಕೊಟ್ಟೆ ಹಿಡಿದುಕೊಂಡ ಹುಡುಗನೊಬ್ಬ ನನ್ನತ್ತ ಓಡಿಬಂದು ಕೈಚೀಲ ಮುಂದಿಡುತ್ತ, ” ಬಾಯಿ ಹೆ ಗ್ಯಾ, ಹೇ ತುಮ್ಚಾ ವಾಡ್ನಿಚ, ಹಮ್ಚಾ ಗಾಂವಾಮದೆ ಏಕ್ ಚೋಲಿಲಾ ಏಕ್ ವಾಟ್ ದೇಯಾಲ ಪಾಯಿಜೆ”
(ಬಾಯಿ ಇದನ್ನು ತೆಗೆದುಕೊಳ್ಳಿ, ನಮ್ಮೂರಲ್ಲಿ ಪ್ರತೀ ಮನೆಯ ಒಲೆಗೊಂದು ಪಾಲು ಹಂಚಲೇಬೇಕು. ಇದು ನಮ್ಮ ಪದ್ದತಿ ತೆಗೆದುಕೊಳ್ಳಿ” ಎಂದವನೇ ನನ್ನ ಪ್ರತಿಕ್ರಿಯೆಗೂ ಕಾಯದೆ ಹೊರಟು ಹೋಗಿದ್ದ. ನಾನೋ ಮಹಾಪ್ರಸಾದವನ್ನು ಕೈಯಲ್ಲಿ ಹಿಡಿದುಕೊಂಡು ಕಣ್ ಕಣ್ ಬಿಡುತ್ತ ನಿಂತಿದ್ದೆ.

‍ಲೇಖಕರು avadhi

May 2, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: