ಶ್ರೀನಿವಾಸ ಪ್ರಭು ಅಂಕಣ: ವಯಸ್ಸಿಗೆ ಮೀರಿದ ಪ್ರಬುದ್ಧತೆ ಮೆರೆದಳು

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

ಅಂಕಣ 130

ಮಗಳು ರಾಧಿಕಾಳ ನೃತ್ಯಾಭ್ಯಾಸ ಗುರು ಶುಭಾ ಧನಂಜಯ ಅವರ ಮಾರ್ಗದರ್ಶನದಲ್ಲಿ ಕ್ರಮಬದ್ಧವಾಗಿ, ಶಿಸ್ತಿನಿಂದ ನಡೆದಿತ್ತು. ಶುಭಾ ಅವರು ಅನೇಕ ನೃತ್ಯ ಕಾರ್ಯಕ್ರಮಗಳಲ್ಲಿ ರಾಧಿಕಾಳಿಗೆ ಮುಖ್ಯಪಾತ್ರ ನಿರ್ವಹಿಸಲು ಅವಕಾಶ ಮಾಡಿಕೊಟ್ಟು ಅವಳ ಆತ್ಮವಿಶ್ವಾಸ—ಆಸಕ್ತಿಗಳು ಮತ್ತಷ್ಟು ವೃದ್ಧಿಸಲು ನೆರವಾಗಿದ್ದರು. ಅದರಲ್ಲೂ ಒಂದು ನೃತ್ಯ ರೂಪಕದಲ್ಲಿ ವಾಸವಿದೇವಿಯ ಪಾತ್ರವನ್ನು ರಾಧಿಕಾ ನಿರ್ವಹಿಸಿದ ರೀತಿ ಚೇತೋಹಾರಿಯಾಗಿತ್ತು. ಸಾಕ್ಷಾತ್ ದೇವಿಯೇ ರಂಗಕ್ಕೆ ಇಳಿದುಬಂದಂತೆ ಕಾಣುತ್ತಿತ್ತೆಂದು ಅನೇಕ ಸಹೃದಯರು ತುಂಬು ಮೆಚ್ಚುಗೆ ವ್ಯಕ್ತಪಡಿಸಿದರು. ರಂಗಪ್ರವೇಶಕ್ಕೆ ಮುನ್ನ ಪೂರ್ವಭಾವಿ ಸಿದ್ಧತೆಯ ಮಾದರಿಯಲ್ಲಿ ಕೆಲವು ನೃತ್ಯಪ್ರದರ್ಶನಗಳನ್ನು ಏರ್ಪಡಿಸುವುದು ಒಳ್ಳೆಯದೆಂದು ಗುರು ಶುಭಾ ಅವರು ಅಭಿಪ್ರಾಯ ವ್ಯಕ್ತ ಪಡಿಸಿದರು. ಹಾಗೆ ನಡೆದ ಹಲವು ಯಶಸ್ವಿ ಕಾರ್ಯಕ್ರಮಗಳಲ್ಲಿ ಇನ್ಸ್ ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ನಡೆದದ್ದು ತುಂಬಾ ಪ್ರಮುಖವಾದ್ದು.

ಆ ಕಾರ್ಯಕ್ರಮದ ಆಹ್ವಾನ ಪತ್ರಿಕೆಯ ಪ್ರಥಮ ಪ್ರತಿಯನ್ನು ವಾಡಿಕೆಯಂತೆ ಅಣ್ಣನಿಗೆ ಕೊಟ್ಟು ಅವರ ಆಶೀರ್ವಾದ ಪಡೆದು ಬರೋಣವೆಂದು ಹೋಗಿದ್ದೆವು. ಪರಮ ವಾತ್ಸಲ್ಯಮಯಿಯೇ ಆದ ಅಣ್ಣ ಪೂರ್ವಾಶ್ರಮದ ಮೊಮ್ಮಗಳ ಮುಂಗುರುಳು ನೇವರಿಸುತ್ತಾ, “ಏನೇ ನಾಟ್ಯ ಮಯೂರಿ, ನಿನ್ನ ಅಮೋಘ ನೃತ್ಯವನ್ನು ಈ ಕಿಟ್ಟಜ್ಜನಿಗೆ ತೋರಿಸೋದಿಲ್ವೇನೇ?” ಎಂದರು! ಮಕ್ಕಳೆಲ್ಲರೂ ಅವರನ್ನು ಕರೆಯುತ್ತಿದ್ದುದು ಹಾಗೆಯೇ—ಕಿಟ್ಟಜ್ಜ! “ಬನ್ನಿ ಅತ ನಿಮ್ಮನ್ನ ಕರೆಯೋಕೇ ಬಂದಿರೋದು ಕಿಟ್ಟಜ್ಜಾ.. ನಿಮಗೆ ಬರೋಕೆ ಕಷ್ಟ ಆದ್ರೆ ಬೇಕಾದ್ರೆ ಮನೇಲೇ ಡ್ಯಾನ್ಸ್ ಕಾಸ್ಟ್ಯೂಮ್ ಹಾಕ್ಕೊಂಡು ಮಾಡಿ ತೋರಿಸ್ತೀನಿ” ಎಂದು ಮುದ್ದಾಗಿ ನುಡಿದಳು ಮಗಳು. ಆ ಯಾತನೆಯ ಕ್ಷಣಗಳಲ್ಲೂ ಅಣ್ಣ ಮುಗುಳ್ನಗುತ್ತಾ, “ಇಲ್ಲ ಇಲ್ಲ…ಸ್ಟೇಜ್ ಮೇಲೆ ಡ್ಯಾನ್ಸ್ ಮಾಡೋವಾಗ ನೋಡಿದರೇ ಚಂದ! ನಾನೇ ಬಂದುಬಿಡ್ತೀನಿ ಬಿಡು” ಎಂದರು! ಅದು ಕೇವಲ ಮೊಮ್ಮಗಳ ಸಮಾಧಾನಕ್ಕಾಗಿ ಹೇಳಿದ ಮಾತಲ್ಲ, ಅವರು ಬರುವ ನಿರ್ಧಾರ ಮಾಡಿಕೊಂಡಾಗಿತ್ತು ಎಂಬುದು ನಂತರ ನಮಗೆ ಅರ್ಥವಾಯಿತು! ಮುಂದಿನ ಎರಡು ದಿನಗಳಲ್ಲೇ ಅಕ್ಕ—ಭಾವಂದಿರೊಂದಿಗೆ ಮಾತಾಡಿಕೊಂಡು ಅವರೊಟ್ಟಿಗೆ ನೃತ್ಯ ಕಾರ್ಯಕ್ರಮಕ್ಕೆ ಬರುವ ಏರ್ಪಾಟು ಮಾಡಿಕೊಂಡೇ ಬಿಟ್ಟರು ಅಣ್ಣ!

ಅಂದಿನ ನೃತ್ಯಕಾರ್ಯಕ್ರಮಕ್ಕೆ ಆಪ್ತ ಬಂಧು ಮಿತ್ರರನೇಕರನ್ನು ಆಹ್ವಾನಿಸಿದ್ದೆವು. ಬಾಬು ಹಿರಣ್ಣಯ್ಯ ಆ ವೇಳೆಗಾಗಲೇ ನನ್ನ ಆಪ್ತಮಿತ್ರ ವಲಯಕ್ಕೆ ಸೇರ್ಪಡೆಯಾಗಿದ್ದ. ಅವರ ಮನೆಗೇ ಹೋಗಿ ನನ್ನ ಮಾನಸ ಗುರುಗಳಾದ ಮಾಸ್ಟರ್ ಹಿರಣ್ಣಯ್ಯನವರನ್ನು ಸಕುಟುಂಬ ಸಮೇತ ಆಹ್ವಾನಿಸಿ ಬಂದಿದ್ದೆವು.

ಕಾರ್ಯಕ್ರಮದ ದಿನ ಹುರುಪಿನಿಂದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ… ನೋಡಿದರೆ ಭಾರೀ ಮೋಡ ಮುಸುಕಿದ ವಾತಾವರಣ! ಸಂಜೆಯ ಹೊತ್ತಿಗೆ ತಿಳಿಯಾಗಬಹುದೆಂಬ ನಿರೀಕ್ಷೆ ಸುಳ್ಳಾಗಿ ಹೋಯಿತು. ಸಂಜೆ ನಾಲ್ಕು ಗಂಟೆಗೇ ಕತ್ತಲು ಕವಿದಂತಾಗಿ ಹೋಗಿ ಗುಡುಗು ಸಿಡಿಲು ಸಹಿತ ಮಳೆ ಆರಂಭವಾಗಿಯೇ ಬಿಟ್ಟಿತು. ಅದು ಹೇಗೋ ಕಷ್ಟ ಪಟ್ಟುಕೊಂಡು ಅಕ್ಕ ಭಾವಂದಿರು ಅಣ್ಣನನ್ನು ಕರೆದುಕೊಂಡು ಸರಿಯಾದ ಸಮಯಕ್ಕೆ ಸಭಾಂಗಣಕ್ಕೆ ಬಂದೇಬಿಟ್ಟರು! ಇತ್ತ ಬಾಬಣ್ಣನೂ ಮಾಸ್ಟರ್ ಹಿರಣ್ಣಯ್ಯನವರನ್ನೂ ಮನೆಯವರನ್ನೂ ಕರೆದುಕೊಂಡು ಬಂದೇಬಿಟ್ಟ! ಆ ಮಳೆಯ ಆರ್ಭಟದಲ್ಲಿ ಹೆಚ್ಚು ಸಂಖ್ಯೆಯಲ್ಲಿ ರಸಿಕರನ್ನು ನಿರೀಕ್ಷಿಸುವಂತೆಯೇ ಇರಲಿಲ್ಲ. ಆ ಕಾರ್ಯಕ್ರಮವನ್ನು ಅಂದು ಪ್ರಾಯೋಜಿಸಿದ್ದವರು—ಆ ಕಲಾಪೋಷಕ ಮಹನೀಯರ ಹೆಸರು ನೆನಪಿನಿಂದ ಜಾರಿಹೋಗಿದೆ— ಅವರ ಕುಟುಂಬ, ನಮ್ಮ ಮನೆಯವರು, ಹಿರಣ್ಣಯ್ಯನವರ ಕುಟುಂಬ, ಪ್ರಿಯಮಿತ್ರ ಒಡೆಯರ್ ಹಾಗೂ ಬೆರಳೆಣಿಕೆಯಷ್ಟು ಸಹೃದಯರು… ಇಷ್ಟೇ ಮಂದಿ ಸಭಾಂಗಣದಲ್ಲಿದ್ದದ್ದು.

ಕಿಕ್ಕಿರಿದ ಸಭಾಂಗಣವನ್ನು ನಿರೀಕ್ಷಿಸಿದ್ದ ನನಗೂ ರಂಜಿನಿಗೂ ನಿರಾಸೆಯೇ ಆದರೂ ರಾಧಿಕಾ ಮಾತ್ರ,”ಪರವಾಗಿಲ್ಲ ಬಿಡು ಡ್ಯಾಡಿ..ಕಿಟ್ಟಜ್ಜ ಒಬ್ಬರಿದಾರಲ್ಲಾ ಅಷ್ಟು ಸಾಕು. ಇವತ್ತು ಬಿಟ್ರೆ ಅವರಿಗೆ ನನ್ನ ಡ್ಯಾನ್ಸ್ ನೋಡೋದಕ್ಕೆ ಆಗ್ತಾ ಇತ್ತೋ ಇಲ್ಲವೋ ಯಾರಿಗ್ಗೊತ್ತು! ಈ ಪ್ರೋಗ್ರಾಂ ಅವರಿಗೋಸ್ಕರ ಅಂದುಕೊಂಡುಬಿಡೋಣ” ಎಂದು ವಯಸ್ಸಿಗೆ ಮೀರಿದ ಪ್ರಬುದ್ಧತೆ ಮೆರೆದಳು. ಅಂದಿನ ಕಾರ್ಯಕ್ರಮದ ಆರಂಭದ ಸ್ವಾಗತದ ಮಾತಿನಲ್ಲಿಯೂ ನಾನು ಅವಳ ಮಾತನ್ನು ಪುನರುಚ್ಚರಿಸಿದೆ: “ಸಂಖ್ಯೆಯ ದೃಷ್ಟಿಯಿಂದ ಇಂದು ಸಭಾಂಗಣ ತುಂಬಿಲ್ಲ ನಿಜ. ಆದರೆ ಇಂದು ಈ ನೃತ್ಯ ಪ್ರಸ್ತುತಿಗೆ ಆಗಮಿಸಿರುವ ಶ್ರೀ ಶ್ರೀ ನಿತ್ಯಾನಂದ ಸರಸ್ವತಿಗಳು ಅವರ ಪೂರ್ವಾಶ್ರಮದಲ್ಲಿ ರಾಧಿಕಾಳ ಅಜ್ಜ… ಆಗಮಿಸಿರುವ ಮತ್ತೊಬ್ಬ ಮುಖ್ಯ ಅತಿಥಿ ಮಾಸ್ಟರ್ ಹಿರಣ್ಣಯ್ಯನವರು ಈ ನಾಡು ಕಂಡ ಓರ್ವ ಶ್ರೇಷ್ಠ ಕಲಾವಿದ; ನಟರತ್ನಾಕರ; ನನ್ನ ಮಾನಸಗುರು! ಇವರು ಒಬ್ಬೊಬ್ಬರ ಉಪಸ್ಥಿತಿಯೂ ಲಕ್ಷ ಸಹೃದಯರ ಉಪಸ್ಥಿತಿಗೆ ಸಮ! ಅವರ ಆಶೀರ್ವಾದಗಳನ್ನು ಗಳಿಸಿಕೊಳ್ಳುವ ಸದವಕಾಶ ನನ್ನ ಮಗಳಿಗೆ ಪ್ರಾಪ್ತವಾಗಿರುವುದು ಅವಳ ಸುದೈವ” ಎಂದು ನುಡಿದು ಸಹೃದಯರೆಲ್ಲರನ್ನೂ ಸ್ವಾಗತಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ.

ಮುಂದಿನ 80—85 ನಿಮಿಷಗಳು ರಾಧಿಕಾ ತನ್ನ ಮನೋಹರ ನೃತ್ಯದಿಂದ ಎಲ್ಲರ ಮನ ಸೂರೆಗೊಂಡುಬಿಟ್ಟಳು. ನರ್ತನದಲ್ಲಿದ್ದ ಖಚಿತತೆ, ಲಾಸ್ಯ, ಅನೂನ ಭಾವ ಪ್ರದರ್ಶನ, ಎಲ್ಲಕ್ಕಿಂತ ಮಿಗಿಲಾಗಿ ಅವಳ ದಿವ್ಯ ತನ್ಮಯತೆ ಸಹೃದಯರ ಹೃದಯಕ್ಕೆ ಲಗ್ಗೆ ಇಟ್ಟವೆಂದರೆ ಅತಿಶಯೋಕ್ತಿಯಲ್ಲ. ಕಾರ್ಯಕ್ರಮ ಮುಗಿದ ಮೇಲೆ ರಂಗದ ಮೇಲೆ ಬಂದು ಮಾತನಾಡಿದ ಅಣ್ಣ, “ನನ್ನ ಪೂರ್ವಾಶ್ರಮದ ಮೊಮ್ಮಗಳು ರಾಧಿಕಾ ಅತ್ಯಂತ ಸೊಗಸಾದ ಚೇತೋಹಾರಿಯಾದ ನೃತ್ಯ ಪ್ರದರ್ಶನವನ್ನು ನೀಡಿದ್ದಾಳೆ… ತೀವ್ರ ಅನಾರೋಗ್ಯದ ಈ ಸಮಯದಲ್ಲೂ ಇಂದು ನನ್ನನ್ನು ಇಲ್ಲಿಗೆ ಕರೆತಂದಿರುವುದು ರಾಧಿಕಾಳ ಮಮತೆ ಹಾಗೂ ದೈವ ಸಂಕಲ್ಪ.. ಮತ್ತೆ ಇಂಥದೊಂದು ಅವಕಾಶ ನನಗೆ ದೊರೆಯುವುದು ಅನುಮಾನ.. ಆದರೆ ರಾಧಿಕಾ ಇಂಥ ನೂರಾರು ಅವಕಾಶಗಳನ್ನು ಗಳಿಸಿಕೊಂಡು ವಿಶ್ವಮಾನ್ಯ ಕಲಾವಿದೆಯಾಗಿ ಬೆಳಗಲಿ” ಎಂದು ನುಡಿದು ಸಾವಿರ ರೂಪಾಯಿಗಳ ಉಡುಗೊರೆಯನ್ನು ಅವಳಿಗೆ ನೀಡಿ ಅಪ್ಪಿ ಆಶೀರ್ವದಿಸಿದಾಗ ನಮ್ಮೆಲ್ಲರ ಕಣ್ಣೂ ತೇವವಾಗಿದ್ದವು. ನಂತರ ಮಾಸ್ಟರ್ ಹಿರಣ್ಣಯ್ಯನವರೂ ಮಾತನಾಡಿ ರಾಧಿಕಾಳ ನೃತ್ಯಪ್ರತಿಭೆಯನ್ನು ಅಪಾರವಾಗಿ ಮೆಚ್ಚಿಕೊಂಡು ಸಾವಿರ ರೂಪಾಯಿಗಳ ಉಡುಗೊರೆ ನೀಡಿ ಆಶೀರ್ವದಿಸಿದಾಗ ಹೆಮ್ಮೆಯಿಂದ ಬೀಗುವ ಸರದಿ ನಮ್ಮದಾಗಿತ್ತು! ನಮ್ಮ ನೆನಪಿನ ಬುತ್ತಿಯಲ್ಲಿರುವ ಇಂಥ ಅನೇಕ ಅಮೂಲ್ಯ ಸಂದರ್ಭಗಳೇ ನಾವು ಬದುಕಿನಲ್ಲಿ ಗಳಿಸಿಕೊಂಡಿರುವ ದೊಡ್ಡ ಆಸ್ತಿ!

‘ನಾಕುತಂತಿ’ ಧಾರಾವಾಹಿ ನಡೆಯುತ್ತಿದ್ದ ಸಂದರ್ಭದಲ್ಲೇ ಧಿಡೀರನೆ ಪ್ರಾರಂಭವಾದ ಬಿ. ಸುರೇಶರ ಮತ್ತೊಂದು ಧಾರಾವಾಹಿ ‘ತಕಧಿಮಿತಾ’. ಸಮಯದ ಅಭಾವದ ಒತ್ತಡದಲ್ಲಿಯೇ ಪ್ರಾರಂಭಿಸಿದ್ದರಿಂದ ಕಥೆಯನ್ನು ಒಂದು ಚೌಕಟ್ಟಿನಲ್ಲಿ ಕಟ್ಟಿಕೊಳ್ಳುವುದು ಸುರೇಶರಿಗೆ ಸಾಧ್ಯವಾಗಿರಲಿಲ್ಲ. ಹಲವಾರು ಪಾತ್ರಗಳನ್ನು ಸೃಷ್ಟಿಸಿಕೊಂಡು ಬೆಳೆಸುತ್ತಾ ಪ್ರತಿ ಕಂತಿನಲ್ಲೂ ಕುತೂಹಲಕಾರೀ ತಿರುವುಗಳನ್ನು ಸೃಷ್ಟಿಸುತ್ತಾ ತಮ್ಮ ಎಂದಿನ ಮೊನಚು ಶೈಲಿಯಲ್ಲಿ ಸಂಭಾಷಣೆಗಳನ್ನು ಹೆಣೆಯುತ್ತಾ ಕತೆಯ ಕಟ್ಟಡವನ್ನು ನಿರ್ಮಿಸತೊಡಗಿದ್ದರು ಸುರೇಶ. ಪ್ರಾರಂಭದ ದಿನಗಳಲ್ಲಿ ಸುರೇಶರೇ ಈ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದರೂ ನಂತರದ ದಿನಗಳಲ್ಲಿ ನಿರ್ದೇಶನದ ಚುಕ್ಕಾಣಿ ಹಿಡಿದು ನಡೆಸಿದವರು ರುದ್ರೇಶ್ , ಪ್ರಶಾಂತ್ ಹಾಗೂ ಸೈಯದ್ ಅಶ್ರಫ್. ಈ ಮೂವರೂ ಪ್ರತಿಭಾವಂತರೂ ಚಿಕ್ಕ ವಯಸ್ಸಿನಲ್ಲೇ ಬದುಕಿನ ನೇಪಥ್ಯಕ್ಕೆ ಸರಿದುಹೋದದ್ದೊಂದು ಅತಿ ನೋವಿನ ಸಂಗತಿ.

‘ತಕಧಿಮಿತಾ’ ಸಹಾ ಆ ಸಂದರ್ಭದಲ್ಲಿ ‘ನಾಕುತಂತಿ’ಯಂತೆಯೆ ಅಪಾರ ಜನಪ್ರಿಯತೆಯನ್ನು ಗಳಿಸಿಕೊಂಡು ಸಾವಿರ ಕಂತುಗಳ ಮೈಲುಗಲ್ಲನ್ನು ಯಶಸ್ವಿಯಾಗಿ ದಾಟಿದ ಮಹಾ ಧಾರಾವಾಹಿ. ಇದರಲ್ಲಿ ಪುಷ್ಪಾ ಅನಿಲ್ ಅವರದು ಕಥಾನಾಯಕಿಯ ಪಾತ್ರ. ಈಕೆ ನಾಕುತಂತಿಯಲ್ಲಿಯೂ ಒಂದು ಪ್ರಮುಖ ‘ತಂತಿ’ಯಾಗಿ ಪಾತ್ರ ನಿರ್ವಹಿಸಿದ್ದರು. ಕಥಾನಾಯಕಿಯ ಶ್ರೀಮಂತ ಉದ್ಯಮಿ ತಂದೆಯ ಪಾತ್ರ ನನ್ನದು. ನನ್ನ ಮಡದಿಯ ಪಾತ್ರವನ್ನು ನಿರ್ವಹಿಸಿದ್ದವರು ಪರಿಮಳ ಕಲಾವಂತ್ ಎಂಬ ಉತ್ತರ ಕರ್ನಾಟಕದ ವೃತ್ತಿರಂಗಭೂಮಿಯ ಕಲಾವಿದೆ. ಈ ಧಾರಾವಾಹಿಯಲ್ಲಿ ಬಿ.ಸುರೇಶ ಅವರು ಉತ್ತರ ಕರ್ನಾಟಕ ಭಾಗದ ಅನೇಕ ವೃತ್ತಿ ರಂಗಭೂಮಿ ಕಲಾವಿದರಿಗೆ ಅವಕಾಶ ನೀಡಿ ತನ್ಮೂಲಕ ಆ ಭಾಗದ ಕಲಾವಿದರನ್ನು ಗುರುತಿಸಿ ಅವರಿಗೊಂದು ವೇದಿಕೆ ನಿರ್ಮಿಸಿಕೊಡುವ ಸಾರ್ಥಕ ಕೆಲಸ ಮಾಡಿದ್ದರು. ಇದು ಒಂದು ರೀತಿಯ ವಿಕೇಂದ್ರೀಕರಣದ ಪ್ರಕ್ರಿಯೆಯಾಗಿದ್ದು ಇದಕ್ಕಾಗಿ ಸುರೇಶರನ್ನು ಅಭಿನಂದಿಸಲೇ ಬೇಕು. ವಿಭಿನ್ನ ಭಾಷಾಪ್ರಭೇದ ಹಾಗೂ ಸಂಸ್ಕೃತಿಗಳ ಶ್ರೀಮಂತ ಪರಂಪರೆಯ ನಮ್ಮ ನಾಡಿನಲ್ಲಿ ಇಂಥ ಕೆಲಸ ಇನ್ನಷ್ಟು ವ್ಯಾಪಕವಾಗಿ ನಡೆಯಬೇಕಿರುವುದೂ ಸಹಾ ವರ್ತಮಾನದ ಜರೂರು, ಇರಲಿ.

ಮಗಳ ಬದುಕಿನಲ್ಲಿ ಆಗುವ ತಲ್ಲಣಗಳ ಜೊತೆಗೆ ಮಗನ ಬದುಕಿನಲ್ಲಿ ತಲೆದೋರುವ ಏರಿಳಿತಗಳು ಕಥಾನಕದ ಒಂದು ಪ್ರಮುಖ ಮಗ್ಗುಲಾದರೆ ನನ್ನ ಹಾಗೂ ನನ್ನ ಪತ್ನಿಯ ನಡುವಣ ತಿಕ್ಕಾಟಗಳು, ಪತ್ನಿ ಅನಕ್ಷರಸ್ಥಳಾಗಿರುವುದರ ಬಗ್ಗೆ ನನಗಿದ್ದ ಅಸಹನೆ—ತಾತ್ಸಾರ, ವಿವಾಹಾನಂತರವೂ ಕಾಡುವ ವಿವಾಹಪೂರ್ವ ಸಂಬಂಧಗಳು, ಪತ್ನಿಯ ಅನುಮಾನ—ಹತಾಶೆಗಳು ಕಥಾನಕದ ಮತ್ತೊಂದು ಪ್ರಮುಖ ಅಂಗವಾಗಿ ರೂಪಿತವಾಗುತ್ತಾ ಹೋದವು. ನನಗಿನ್ನೂ ನೆನಪಿದೆ: ಪತ್ನಿಯನ್ನು ಅವಿದ್ಯಾವಂತೆ—ಪೆದ್ದಿ ಎಂದು ಮೂದಲಿಸಲು ನಾನು ಆಗಾಗ್ಗೆ ‘monumental stupidity’ ಎಂಬ ಪದ ಸಮುಚ್ಚಯವನ್ನು ಬಳಸುತ್ತಿದ್ದೆ! ವಾಸ್ತವವಾಗಿ ಪ್ರಖ್ಯಾತ ಪ್ರೊಫೆಸರ್ ಸಿ.ಡಿ. ನರಸಿಂಹಯ್ಯನವರು ಸರಿ ಉತ್ತರ ನೀಡದೆ ಬೆಬೆಬೆ ಎನ್ನುತ್ತಾ ನಿಲ್ಲುತ್ತಿದ್ದ ವಿದ್ಯಾರ್ಥಿಗಳಿಗೆ ‘don’t stand like a monument of stupidity’ ಎಂದು ಮೂದಲಿಸುತ್ತಿದ್ದರಂತೆ. ಈ ಸಂಗತಿಯನ್ನು ಮಿತ್ರರಿಂದ ಕೇಳಿ ತಿಳಿದಿದ್ದೆ. ಅದರ ಪ್ರಭಾವವೇ ನನ್ನ ಈ ಪಾತ್ರದ ಈ ಬೈಗುಳ!

ಧಾರಾವಾಹಿ ಪ್ರಸಾರವಾಗುತ್ತಿದ್ದ ಸಮಯದಲ್ಲೇ ಕಥಾನಾಯಕಿ ಪುಷ್ಪಾ ಅವರಿಗೆ ವಿವಾಹವಾಗಿ ಆಕೆ ಗರ್ಭಿಣಿಯೂ ಆದ್ದರಿಂದ ಅನಿವಾರ್ಯವಾಗಿ ತುಸು ಸಮಯ ವಿಶ್ರಾಂತಿಗೆ ತೆರಳಬೇಕಾಗಿ ಬಂತು. ಮಹಾ ಧಾರಾವಾಹಿಗಳು ಕೆಲ ವರ್ಷಗಳ ಹರಹಿನಲ್ಲೇ ನಡೆಯುವುದರಿಂದ ಇಂಥ ಸನ್ನಿವೇಶಗಳು ಆಗಾಗ್ಗೆ ಎದುರಾಗುತ್ತಲೇ ಇರುತ್ತವೆ! ಅನೇಕ ಕಾರಣಗಳಿಗೆ ಅನೇಕ ಬಾರಿ ಕಲಾವಿದರ ಬದಲಾವಣೆ ಆಗುತ್ತಲೇ ಇರುತ್ತದೆ : ಮದುವೆ—ಬಸಿರು, ವಿದೇಶಕ್ಕೆ ಹಾರುವುದು, ಕೌಟುಂಬಿಕ ಕಾರಣಗಳು… ಹೀಗೆ ಸಹಜ—ಅನಿವಾರ್ಯ ಕಾರಣಗಳದೊಂದು ವರಸೆಯಾದರೆ ‘ಅಹಮ್ಮಿನ ಕೋಟೆಯಲ್ಲಿ’ ಕುಳಿತು ಖಡ್ಗ ಝಳಪಿಸುತ್ತಾ ಪರಸ್ಪರ ಕೆಸರೆರಚಿಕೊಳ್ಳುವ ನಟ—ನಿರ್ದೇಶಕ—ನಿರ್ಮಾಪಕರುಗಳ ಕಾದಾಟಗಳದು ಮತ್ತೊಂದು ವರಸೆ!….ಇರಲಿ. ಆಗ ಪುಷ್ಪಾ ಅವರ ಸ್ಥಾನ ತುಂಬಿದವರು ಶಿಲ್ಪಾ ಭಾಗವತರ್ ಎಂಬ ಕಲಾವಿದೆ. ಈಕೆ ಸೇಂಟ್ ಆನ್ಸ್ ಕಾಲೇಜ್ ನಲ್ಲಿ ರಂಜಿನಿಯ ಶಿಷ್ಯೆಯಾಗಿದ್ದರೆಂಬುದು ನಂತರ ತಿಳಿದುಬಂದ ಸುದ್ದಿ! ‘ತಕಧಿಮಿತಾ’ ಧಾರಾವಾಹಿಯಲ್ಲಿ ನನ್ನ ಮಗನ ಪಾತ್ರ ನಿರ್ವಹಿಸಿದವರು ಧರ್ಮೇಂದ್ರ ಅರಸ್ ಎಂಬ ನೀನಾಸಂ ಪದವೀಧರ. ಈ ಧರ್ಮೇಂದ್ರ ಕಿರುತೆರೆಗೆ ಕಾಲಿಟ್ಟ ಆರಂಭದ ದಿನಗಳಲ್ಲಿ ನನ್ನ ಒಂದೆರಡು ಧಾರಾವಾಹಿಗಳಲ್ಲಿ ಪಾತ್ರ ನಿರ್ವಹಿಸಲು ಆಹ್ವಾನಿಸಿದ್ದೆ. ಧರ್ಮೇಂದ್ರ ಹಾಗೂ ಇವರ ಪತ್ನಿ ಶೈಲಶ್ರೀ—ಇಬ್ಬರೂ ಪ್ರತಿಭಾವಂತ ರಂಗ ಕಲಾವಿದರು. ನಾಗತಿಹಳ್ಳಿ ಚಂದ್ರಶೇಖರ್ ಅವರ ‘ಟೆಂಟ್ ಸಿನೆಮಾ’ ಶಾಲೆಯಲ್ಲಿ ಅಧ್ಯಾಪಕರಾಗಿಯೂ ಕೆಲಸ ಮಾಡಿರುವ ಧರ್ಮೇಂದ್ರ ಅವರು ಅಲ್ಲಿಯ ವಿದ್ಯಾರ್ಥಿಗಳಿಗಾಗಿ ನನ್ನ ‘ಉದ್ಭವ’ ನಾಟಕವನ್ನು ನಿರ್ದೇಶಿಸಿದ್ದರು. ಹೊಸ ರೀತಿಯಲ್ಲಿ ನಿರೂಪಕರಾದ ರುದ್ರ—ನಂಜುಂಡರ ಪಾತ್ರಗಳನ್ನು ಅವರು ಕಟ್ಟಿಕೊಟ್ಟ ಪ್ರಸ್ತುತಿ ನನಗೆ ತುಂಬಾ ಇಷ್ಟವಾಗಿತ್ತು. ಧರ್ಮೇಂದ್ರ ಹಾಗೂ ಶೈಲಶ್ರೀ— ಇವರಿಬ್ಬರೂ ತಕಧಿಮಿತಾ ದಲ್ಲಿ ನನ್ನೊಟ್ಟಿಗೆ ಅಭಿನಯಿಸಿದ್ದರು. ಅಂತೆಯೇ ನನ್ನ ಅಳಿಯನ ಪಾತ್ರ ನಿರ್ವಹಿಸಿದ್ದವರು ಮತ್ತೋರ್ವ ಪ್ರತಿಭಾವಂತ ರಂಗಕಲಾವಿದ ಸುಂದರ್ (ವೀಣಾ). ಹೀಗೆ ಹಲವು ಹತ್ತು ಕಾರಣಗಳಿಗೆ ನಾನು ಪದೇ ಪದೇ ನೆನಪಿಸಿಕೊಳ್ಳುವ ಒಂದು ಪ್ರಮುಖ ಧಾರಾವಾಹಿ ‘ತಕಧಿಮಿತಾ’.

ಮೊನ್ನೆ ನಮ್ಮ ಮನೆಯ ಪುಟ್ಟ ಲೈಬ್ರರಿಯನ್ನು ಓರಣವಾಗಿ ಜೋಡಿಸುತ್ತಿದ್ದಾಗ ಕಣ್ಣಿಗೆ ಬಿದ್ದ ಪುಸ್ತಕ ಆರ್. ಎನ್. ಜಯಗೋಪಾಲ್ ಅವರ ‘ಬಾಳೊಂದು ಭಾವಗೀತೆ’. ಅದರೊಟ್ಟಿಗೇ ಗರಿಗೆದರಿದ್ದು ನಾನು ‘ಈಟಿವಿ’ಗಾಗಿ ಆರು ವಿಶೇಷ ಕಂತುಗಳಲ್ಲಿ ನಡೆಸಿಕೊಟ್ಟ ಅವರ ಅಪೂರ್ವ ಸಂದರ್ಶನ! ಅದು ಹೇಗೋ ಈ ಹಿಂದೆ ಈ ವಿವರವನ್ನು ದಾಖಲಿಸಲು ಮರೆತುಬಿಟ್ಟಿದ್ದೆ… ಈ ಪುಸ್ತಕ ಹಳೆಯ ನೆನಪನ್ನು ಮರುಕಳಿಸುವಂತೆ ಮಾಡಿದೆ!

ಗೆಳೆಯ ಚಿದು ಅಲಿಯಾಸ್ ಕೆ.ಎಸ್. ಶ್ರೀಧರ್ ಈಟಿವಿಗಾಗಿ ಆರ್.ಎನ್. ಜಯಗೋಪಾಲರ ಈ ಒಂದು ವಿಶೇಷ ಸಂದರ್ಶನವನ್ನು ಆಯೋಜಿಸಿದ್ದ. ಇದು ಒಂದು ರೀತಿಯಲ್ಲಿ ಅವರೊಂದಿಗಿನ ನನ್ನ ಮುಖಾಮುಖಿ ಕಾರ್ಯಕ್ರಮ. ಆರು ವಿಸ್ತೃತ ಕಂತುಗಳಲ್ಲಿ ಅವರ ಬದುಕಿನ ಪಯಣದ ಮೈಲುಗಲ್ಲುಗಳನ್ನು ಗುರುತಿಸುತ್ತಾ ಅವರ ಸಿನಿ ಜರ್ನಿಯ ಸಾಧನೆಗಳನ್ನು ದಾಖಲಿಸುತ್ತಾ ಆತ್ಮೀಯವಾಗಿ ಹರಟುತ್ತಾ ಹೋಗುವ ಧಾಟಿಯಲ್ಲಿ ಕಾರ್ಯಕ್ರಮವನ್ನು ರೂಪಿಸಿಕೊಂಡಿದ್ದೆ. ಅತ್ಯಂತ ಸರಳ —ನೇರ ಸ್ವಭಾವದ, ನಿಗರ್ವಿಯೂ ಸಜ್ಜನರೂ ಆದ ಜಯಗೋಪಾಲರೊಂದಿಗೆ ಮಾತಾಡುವುದು—ಸಮಯ ಕಳೆಯುವುದೇ ಒಂದು ಅಪೂರ್ವ ಅನುಭವ. ಅವರ ನಿರ್ದೇಶನದಲ್ಲಿ ಆ ವೇಳೆಗಾಗಲೇ ‘ಜನನಿ’ ಧಾರಾವಾಹಿಯಲ್ಲಿ ನಟಿಸಿದ್ದ ನಾನು ಅವರ ಅಭಿಮಾನಿಯೇ ಆಗಿಹೋಗಿದ್ದೆ! ಅಂಥ ಅಗಾಧ ಪ್ರತಿಭಾವಂತರನ್ನು ಸಂದರ್ಶಿಸುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟವೆಂದೇ ಹೇಳಬೇಕು.

ಮದ್ರಾಸಿನ ಅವರ ಆರಂಭದ ದೆಸೆಯ ದಿನಗಳು; ಅವರ ಇಡೀ ಕುಟುಂಬವೇ ಕಲಾಪ್ರಪಂಚದಲ್ಲಿ ಸಕ್ರಿಯವಾಗಿ ತೊಡಗಿಕೊಂಡದ್ದು; ಅವರ ಸಾಹಿತ್ಯದ ಒಲವು—ರಂಗಭೂಮಿಯಲ್ಲಿ ತೊಡಗಿಕೊಂಡಿದ್ದು—ಗೀತರಚನೆ ಆರಂಭಿಸಿದ್ದು—ನಿರ್ದೇಶನದತ್ತಲೂ ಗಮನ ಹರಿಸಿದ್ದು; ನಡೆಸಿದ ಹೋರಾಟಗಳು—ಅನುಭವಿಸಿದ ಸಂಕಷ್ಟಗಳು… ಈ ಎಲ್ಲ ಪ್ರಮುಖ ವಿಚಾರಗಳ ಬಗ್ಗೆ ನಾನು ಪ್ರಶ್ನೆಗಳನ್ನು ಕೇಳುತ್ತಾ ಹೋದೆ. ಬಲು ತಾಳ್ಮೆಯಿಂದ, ಅನೌಪಚಾರಿಕ ಧಾಟಿಯಲ್ಲಿ, ನಡುನಡುವೆ ಹಾಸ್ಯಚಟಾಕಿಗಳನ್ನು ಹಾರಿಸುತ್ತಾ ಅತ್ಯಂತ ಆತ್ಮೀಯವಾಗಿ ತಮ್ಮ ಬದುಕಿನ ಪುಟಗಳನ್ನು ತಿರುವುತ್ತಾ ಹೋದರು ಆರ್ ಎನ್ ಜಯಗೋಪಾಲ್. ನಡುನಡುವೆ ವಿನಯ್ ನಾಡಿಗ್ ಹಾಗೂ ತಂಡದವರು ಆರ್ ಎನ್ ಜೆ ವಿರಚಿತ ಅನೇಕ ಸುಮಧುರ ಗೀತೆಗಳನ್ನು ಸುಶ್ರಾವ್ಯವಾಗಿ ಪ್ರಸ್ತುತ ಪಡಿಸುತ್ತಿದ್ದರು. “ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ”, ‘ದೀನ ನಾ ಬಂದಿರುವೆ’ , ‘ಹೂವು ಚೆಲುವೆಲ್ಲಾ ನಂದೆಂದಿತು’, ‘ಅಮ್ಮಾ ನಿನ್ನ ತೋಳಿನಲ್ಲಿ ಕಂದ ನಾನು’ , ‘ನಾ ಮೆಚ್ಚಿದ ಹುಡುಗನಿಗೆ’, ‘ರವಿವರ್ಮನಾ ಕುಂಚದಾ ಕಲೆ ಬಲೆ’ , ‘ನೀ ಬಂದು ನಿಂತಾಗ ನಿಂತು ನೀ ನಕ್ಕಾಗ’ , ‘ನಗುವಾ ನಯನ’….ಮೊದಲಾದ ಅಪೂರ್ವ ಸಾಹಿತ್ಯದ ಕಾಲಾತೀತ ಸುಮಧುರ ಗೀತೆಗಳ ಝರಿಯ ಓಘ ಒಂದೆಡೆ; ಆ ಹಾಡುಗಳ ರಚನೆಯ ಹಾಗೂ ಚಿತ್ರೀಕರಣದ ಹಿಂದಿನ ಸ್ವಾರಸ್ಯಕರ ಸಂಗತಿಗಳ ಕಥನ ಮತ್ತೊಂದೆಡೆ! ನಿಜಕ್ಕೂ ಅದೊಂದು ಅಪೂರ್ವ ಜುಗಲ್ ಬಂದಿಯಾಗಿತ್ತು! ನನಗೆ ಅಪಾರ ಸಂತಸ—ತೃಪ್ತಿಗಳನ್ನ ನೀಡಿದ ಕಾರ್ಯಕ್ರಮ ಮಾಲಿಕೆ ಅದು. ನಿಗದಿಯಾಗಿದ್ದು ಆರು ವಿಶೇಷ ವಿಸ್ತೃತ ಕಂತುಗಳು; ಐದು ಕಂತುಗಳ ಚಿತ್ರೀಕರಣ ಪೂರೈಸಿಯಾಗಿತ್ತು. ಆರನೆಯ ಕೊನೆಯ ಕಂತಿನ ಚಿತ್ರೀಕರಣಕ್ಕೆ ಎಲ್ಲಾ ಸಿದ್ಧತೆಗಳನ್ನೂ ಮಾಡಿಕೊಂಡಿದ್ದೆವು. ಇನ್ನೆರಡು ದಿನವಿದೆ ಚಿತ್ರೀಕರಣಕ್ಕೆ ಅನ್ನುವಾಗಲೇ ಬರಸಿಡಿಲಿನಂತೆ ಬಂದೆರಗಿದ ಸುದ್ದಿ:
ಆರ್ ಎನ್ ಜಯಗೋಪಾಲ್ ಇನ್ನಿಲ್ಲ!

ಗೆಳೆಯ ಚಿದು ದೂರವಾಣಿಯ ಮುಖಾಂತರ ಈ ಸುದ್ದಿಯನ್ನು ನನಗೆ ಮುಟ್ಟಿಸಿದಾಗ ನಿಜಕ್ಕೂ ನಂಬುವುದು ಕಷ್ಟವಾಗಿಹೋಯಿತು. ಕೇವಲ ನಾಲ್ಕು ದಿನಗಳ ಹಿಂದೆ ಮಧುರ ಭಾವಗೀತೆಗಳನ್ನು ಮೆಲುದನಿಯಲ್ಲಿ ಗುನುಗುತ್ತಿದ್ದ ಗೀತ ಗಾರುಡಿಗನ ದನಿ ಇದ್ದಕ್ಕಿದ್ದಂತೆ ಸ್ತಬ್ಧವಾಗಿಹೋಯಿತೆಂದರೆ ನಂಬುವುದಾದರೂ ಹೇಗೆ? ‘ಬಾಳೊಂದು ಭಾವಗೀತೆ’ಯಾಗಿ ಮಂದಗತಿಯಲ್ಲಿ ಶಾಂತವಾಗಿ ಹರಿಯುತ್ತಿರುವಾಗಲೇ ಥಟ್ಟನೆ ಗಡ್ಡೆಗಟ್ಟಿಕೊಂಡು ನಿಶ್ಚಲವಾಗಿಬಿಟ್ಟಿತೆಂದರೆ ಅದನ್ನು ಅರಗಿಸಿಕೊಳ್ಳುವುದಾದರೂ ಹೇಗೆ?
ಆರ್ ಎನ್ ಜಯಗೋಪಾಲರ ಮುಂದಿನ ದಿನಗಳ ಕನಸು—ಆಶೋತ್ತರಗಳ ಬಗ್ಗೆ ಬೆಳಕು ಚೆಲ್ಲಬೇಕಿದ್ದ ಕೊನೆಯ ಕಂತು ನುಡಿ ನಮನದ ಶ್ರದ್ಧಾಂಜಲಿ ಕಾರ್ಯಕ್ರಮವಾಗಿ ಮಾರ್ಪಾಟಾದದ್ದೊಂದು ವಿಪರ್ಯಾಸ. ಅಂದು ಜಯಂತ ಕಾಯ್ಕಿಣಿ, ಕೆ. ಕಲ್ಯಾಣ್ ಮುಂತಾದ ಕವಿವರೇಣ್ಯರು ಬಂದು ಆರ್ ಎನ್ ಜಯಗೋಪಾಲರ ‘ತಾವು ಕಂಡ ಮುಖ’ದ ಪರಿಚಯ ಮಾಡಿಕೊಟ್ಟರು. ಆ ಕಾರ್ಯಕ್ರಮ ಚೆನ್ನಾಗಿ ಮೂಡಿಬಂತು ಎನ್ನುವುದೇನೋ ನಿಜವೇ ಆದರೂ ಹಾಗೆ ಹೇಳಲಾದರೂ ಬಾಯಿ ಬಂದೀತೇ? ನಿಜಕ್ಕೂ ಆ ಮಾಲಿಕೆಯ ಕೊನೆ ಅದಾಗಬೇಕಿರಲಿಲ್ಲ..ಅದೂ ಅಷ್ಟು ಬೇಗ…

ಹತ್ತಿರದ ಬಂಧುವೊಬ್ಬರನ್ನು,ಆತ್ಮೀಯ ಹಿರಿಯ ಮಿತ್ರರೊಬ್ಬರನ್ನು ಕಳೆದುಕೊಂಡ ನೋವು ಮಾತ್ರ ಬಹು ದಿನ ಬಾಧಿಸುತ್ತಲೇ ಇತ್ತು..ಈಗಲೂ ‘ಬಾಳೊಂದು ಭಾವಗೀತೆ’ ಎನ್ನುತ್ತಿದ್ದಂತೆ ಆರ್ ಎನ್ ಜೆ ನೆನಪಾಗುತ್ತಾರೆ.. ನೆನಪ ದೋಣಿ ಮೆಲ್ಲಗೆ ಸಾಗತೊಡಗುತ್ತದೆ.

‍ಲೇಖಕರು avadhi

May 4, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: