ಜಲಸಾಕ್ಷರತೆಗೆ ಮುನ್ನುಡಿ ಬರೆದ ‘ಭಗೀರಥ’

ಚಿನ್ನಸ್ವಾಮಿ ವಡ್ಡಗೆರೆ

**

‘ಭಾರತದ ನೀರಿನ ಡಾಕ್ಟರ್’ ಎಂದೇ ಖ್ಯಾತರಾಗಿದ್ದ ಜಲ ತಜ್ಞ ಅಯ್ಯಪ್ಪ ಮಸಗಿ ಅವರುಗುರುವಾರ ನಿಧನರಾದರು.

ಪತ್ರಕರ್ತ ಚಿನ್ನಸ್ವಾಮಿ ವಡ್ಡಗೆರೆ ಅವರು ಆಂದೋಲನ ದಿನಪತ್ರಿಕೆಯಲ್ಲಿ ಈ ಹಿಂದೆ ಬರೆದಿದ್ದ ಅಂಕಣದ ಮೂಲಕ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಆ ಬರಹ ಇಲ್ಲಿದೆ.

**

“ನದಿ ಜೋಡಣೆ, ಪಾತಾಳ ಗಂಗೆ, ಬೃಹತ್ ಅಣೆಕಟ್ಟು ನಿರ್ಮಾಣದ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಬಿದ್ದ ಮಳೆಯ ನೀರನ್ನು ಯಾರೂ ನೋಡುತ್ತಿಲ್ಲ. ದೊಡ್ಡ ದೊಡ್ಡ ಅಣೆಕಟ್ಟುಗಳು, ನದಿ ಜೋಡಣೆ, ಮೋಡ ಬಿತ್ತನೆ ಇವು ಆಡಳಿತಶಾಹಿ ಮತ್ತು ಗುತ್ತಿಗೆದಾರ ಸ್ನೇಹಿ ಯೋಜನೆಗಳು. ನಾವು ನದಿ ಜೋಡಣೆಗಿಂತ ಜನರನ್ನು ಆಕಾಶಕ್ಕೆ ಜೋಡಿಸಬೇಕಿದೆ. ನಮ್ಮಲ್ಲಿ ಶೇಕಡ 2-3 ರಷ್ಟು ಮಳೆಯ ನೀರನ್ನು ಹಿಡಿದಿಡಲಾಗುತ್ತಿದೆ. ಉಳಿದ ಎಲ್ಲಾ ನೀರು ಸಮುದ್ರ ಸೇರಿ ವ್ಯರ್ಥವಾಗುತ್ತಿದೆ. ಶೇ.30 ರಿಂದ 40 ರಷ್ಟು ನೀರನ್ನು ಮಣ್ಣಿಗೆ ಸೇರಿಸಿಬಿಟ್ಟರೆ ನೀರಿನ ಸಮಸ್ಯೆಯೇ ತೀರಿಹೋಗುತ್ತದೆ”ಎನ್ನುತ್ತಿದ್ದರು ನೀರಿನ ಡಾಕ್ಟರ್ ಎಂದೇ ಪ್ರಸಿದ್ಧರಾದ ಜಲತಜ್ಞ ಅಯ್ಯಪ್ಪ ಮಸಗಿ. ಸಾವಿರಾರು ಕೆರೆಗಳ ನಿರ್ಮಾಣಮಾಡಿ, ಒಂದು ಲಕ್ಷಕ್ಕೂ ಹೆಚ್ಚು ಬತ್ತಿದ ಬಾವಿಗಳಿಗೆ ಜಲ ಮರುಪೂರಣಮಾಡಿ `ಯುನಿಕ್ ವರ್ಲ್ಡ್’ ಪುಸ್ತಕದಲ್ಲಿ ದಾಖಲಾಗಿ ‘ನೀರಿನ ಗಾಂಧಿ’ ಎಂದು ಕರೆಸಿಕೊಂಡಿರುವ ಜಲತಜ್ಞ ಮಸಗಿ ಅವರ ಪದ್ಧತಿಗಳನ್ನು ಅಳವಡಿಸಿಕೊಂಡರೆ ನೀರಿನ ಬರ ನೀಗಲು ಯಾವ ಮೋಡ ಬಿತ್ತನೆಯೂ, ನದಿ ಜೋಡಣೆಯೂ ಬೇಕಾಗಿಲ್ಲ.

ಎಲ್ಲಾಕಡೆ ನೀರಿಗಾಗಿ ಬೊಬ್ಬೆ ಹಾಕುತ್ತಿದ್ದರೆ ಬರದಿಂದ ತತ್ತರಿಸಿ ಹೋಗಿದ್ದ ಕುಗ್ರಾಮದಿಂದ ಬೆಳೆದು ಬಂದ ಇಂಜಿನಿಯರ್ ಅಯ್ಯಪ್ಪ ಮಸಗಿ `ಮಳೆನೀರು ನಿಲ್ಲಿಸಿದರೆ ನಿತ್ಯೋತ್ಸವ, ಹರಿಯ ಬಿಟ್ಟರೆ ಬರಡೋತ್ಸವ’ ಎನ್ನುತ್ತಾ, ಬಿದ್ದ ಮಳೆಯ ನೀರನ್ನು ಭೂಮಿಗೆ ಹಿಂಗಿಸಿಬಿಟ್ಟರೆ 2050 ರ ವೇಳೆಗೆ ದೇಶದಲ್ಲಿ `ಜಲಕ್ರಾಂತಿ’ ಯೇ ನಡೆಯುತ್ತದೆ ಎಂದು ಅಪಾರ ಭರವಸೆಯಿಂದ ಹೇಳುತ್ತಿದ್ದರು. ಗದಗ ಜಿಲ್ಲೆ ರೋಣ ತಾಲ್ಲೂಕಿನ ನಾಗರಾಳ ಗ್ರಾಮದ ಮಸಗಿ ಜಲ ಸಂರಕ್ಷಣೆಗಾಗಿಯೇ ತಮ್ಮ ಬದುಕನ್ನು ಮುಡಿಪಾಗಿಟ್ಟಿದ್ದರು. ಜಲ ಜಾಗೃತಿಗಾಗಿ ಸ್ಥಾಪನೆಯಾಗಿರುವ ‘ವಾಟರ್ ಲಿಟರಸಿ ಫೌಡೇಷನ್’ ನ ವ್ಯವಸ್ಥಾಪಕ ಟ್ರಸ್ಟಿಯೂ ಆಗಿರುವ ಅಯ್ಯಪ್ಪ ಮಸಗಿ ಗ್ರಾಮೀಣಾಭಿವೃದ್ಧಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಅನಿಷ್ಠಾನಗೊಳಿಸಿದ ಸಾಧನೆಗಾಗಿ 2009 ನೇ ಸಾಲಿನಲ್ಲಿ ಪ್ರತಿಷ್ಠಿತ `ಜಮ್ನಾಲಾಲ್ ಬಜಾಜ್ ರಾಷ್ಟ್ರೀಯ ಪ್ರಶಸ್ತಿ’ ಹಾಗೂ ‘ರಾಜ್ಯೋತ್ಸವ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.

ಮಸಗಿಯವರು ಅಂತರ್ಜಲ ನಿರ್ವಹಣೆ ಮತ್ತು ಸಾವಯವ ಕೃಷಿಯ ಮಹತ್ವ ಕುರಿತು ‘ನೆಲ-ಜಲ-ಜನ’ ಹಾಗೂ ‘ಭಗೀರಥ-ನೀರಿನ ಸಮಸ್ಯೆಯ ವಿರುದ್ಧ ಸಮರ’ ಎಂಬ ಪುಸ್ತಕಗಳನ್ನು ಬರೆದಿದ್ದಾರೆ. ನೀರಿನ ಮಹತ್ವವವನ್ನು ಸಾರುವ ‘ಭಗೀರಥ’ ಎಂಬ ಕಿರುಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನೀರಿನ ವಿಷಯದಲ್ಲಿ ಪರಿಣತರಾಗಿರುವ ಮಸಗಿ ಅವರು ಹೇಳುವುದು ಯಾಕೆ ಮುಖ್ಯ ಎಂದರೆ ಇವರು ರಾಜೇಂದ್ರ ಸಿಂಗ್, ಅಣ್ಣಾ ಹಜಾರೆ,ಇಸ್ರೇಲ್ ವಿಜ್ಞಾನಿ ಎರಾ ಡೆನ್ಸನ್ ಅವರ ಜೀವನದಿಂದ ಪ್ರೇರಣೆ ಪಡೆದು ನೀರಿನ ಹುಚ್ಚು ಹಿಡಿಸಿಕೊಂಡವರು. ತಮ್ಮ ಬಿಡುವಿನ ವೇಳೆಯನ್ನು ಜಲಸಂರಕ್ಷಣೆ ಕುರಿತು ಅಧ್ಯಯನಕ್ಕೆ ಮೀಸಲಿಟ್ಟವರು. ಇದು ಇಷ್ಟೇ ಆಗಿದ್ದರೆ ಇವರೂ ಹತ್ತರಲ್ಲಿ ಒಬ್ಬರಾಗುತ್ತಿದ್ದರು ಮಾತಿನಲ್ಲೇ ಕಳೆದು ಹೋಗುತ್ತಿದ್ದರು. ತಾವು ಪ್ರೇರಣೆ ಪಡೆದು ಕಲಿತ ಜ್ಞಾನವನ್ನು ಸ್ವತಃ ತಾವೇ ಪ್ರಯೋಗಿಸಿ ಯಶಸ್ಸುಪಡೆದು, ಸ್ವಾನುಭವನ್ನು ಹೇಳುತ್ತಾ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾದರು. ಈ ಕಾರಣಕ್ಕಾಗಿ ಮಸಗಿ ಅವರು ನಮಗೆ ತುಂಬಾ ಮುಖ್ಯ ಅನಿಸುತ್ತಾರೆ.

1994ರಲ್ಲಿ ಗದಗ ಜಿಲ್ಲೆಯ ಗಜೇಂದ್ರಗಡದ ಬಳಿ ಆರು ಎಕರೆ ಭೂಮಿ ಖರೀದಿಸಿ ಮಳೆ ನೀರುಕೊಯ್ಲು ಪ್ರಯೋಗ ನಡೆಸಿದರು. ಬರದ ನಾಡಿನಲ್ಲಿ ಅಡಿಕೆ, ತೆಂಗು, ಕಾಫಿ, ಬಾಳೆಯಂತಹ ಮಲೆನಾಡ ಬೆಳೆಗಳನ್ನು ಬೆಳೆದು ತೋರಿಸಿದರು. ಪ್ರತಿಷ್ಠಿತ ಎಲ್ ಅಂಡ್ ಟಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಮಸಗಿ 2002 ರಲ್ಲಿ ನೌಕರಿಗೆ ವಿದಾಯ ಹೇಳಿ ಜಲಸಾಕ್ಷರತೆ ಮೂಡಿಸುವ ಕಾಯಕನಿರತರಾಗಲು ಸಂಕಲ್ಪ ಮಾಡಿದರು. ಊರೂರು ಅಲೆದರು. ಮಸಗಿಯವರ ಆಸಕ್ತಿಯನ್ನು ಗಮನಿಸಿದ ಅಶೋಕ ಫೌಂಡೇಷನ್ ಜಲಸಂರಕ್ಷಣೆ ಜಾಗೃತಿ ಮುಂದುವರಿಸಲು ‘ಅಶೋಕಾ ಫೆಲೋಶಿಪ್’ ನೀಡಿದರು. ನಂತರ ಮಸಗಿ 2005 ರಲ್ಲಿ `ವಾಟರ್ ಲಿಟರಸಿ ಫೌಂಡೇಶನ್’ ಸ್ಥಾಪಿಸಿ ಕರ್ನಾಟಕ, ತಮಿಳುನಾಡು, ಗೋವಾ ಸೇರಿದಂತೆ ಹತ್ತಾರು ರಾಜ್ಯಗಳಲ್ಲಿ ಸುತ್ತಾಡಿ ಜಲ ಸಾಕ್ಷರತೆಯ ಅರಿವು ಮೂಡಿಸಿದರು. ಇವರು ಹಲವಾರು ಪ್ರಾತ್ಯಕ್ಷಿಕೆಗಳನ್ನು ನಿರ್ಮಾಣ ಮಾಡಿದ್ದಾರೆ. ಇಂಗ್ಲೆಂಡ್ ನ ಗಾರ್ಡಿಯನ್ ಪತ್ರಿಕೆ ಮಸಗಿಯವರನ್ನು ನೀರಿನ ಡಾಕ್ಟರ್ ಎಂದು ಕರೆದರೆ, ಜಿಎಸ್ಐಎಮ್ ಸಂಸ್ಥೆಯ ದೀನ ದಯಾಳನ್ನರು ‘ನೀರಿನ ಗಾಂಧಿ’ ಎಂದು ಕರೆದಿದೆ.

ಇದುವರೆಗೆ ಮಸಗಿಯವರು ಸುಮಾರು 300 ಕ್ಕೂ ಹೆಚ್ಚು ಅಪಾರ್ಟ್ಮೆಂಟ್ ಗಳಿಗೆ, ಹತ್ತಾರುಸಾವಿರಕ್ಕೂ ಹೆಚ್ಚು ಮನೆಗಳಿಗೆ ಮಳೆನೀರು ಸಂಗ್ರಹದ ಮಾದರಿಗಳನ್ನು ಅನುಷ್ಠಾನಗೊಳಿಸಿದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ಕೊಳವೆ ಬಾವಿಗಳಿಗೆ ಜಲಮರುಪೂರಣ ಮಾಡಿದ್ದಾರೆ. ನೀರಾವರಿ ರಹಿತ ಕೃಷಿ ಭೂಮಿಯಲ್ಲಿ ಮಳೆನೀರು ಹಿಂಗಿಸುವ ಸ್ಯಾಂಡ್ಫಿಟ್, ಪಟ್ಟಾ ಬಡ್ಡಿಂಗ್ನಂತಹ ಮಾದರಿಗಳನ್ನು ಅನುಶೋಧಿಸಿ ಹತ್ತಾರು ಸಾವಿರ ಹೆಕ್ಟರ್ ಪ್ರದೇಶದಲ್ಲಿ ಅಳವಡಿಸಿದ್ದಾರೆ. ಉತ್ತರ ಕರ್ನಾಟಕದ ಒಂಭತ್ತು ಜಿಲ್ಲೆಗಳ ಮೂರು ಸಾವಿರ ಎಕರೆಗೂ ಹೆಚ್ಚು ಪ್ರದೇಶದಲ್ಲಿ ಇಂತಹ ಮಾದರಿಗಳನ್ನು ಅಳವಡಿಸಿರುವುದನ್ನು ಕಾಣಬಹುದು. ಎಲ್ಲಾ ಹಳ್ಳಿಗಳಲ್ಲಿ ‘ಹಳ್ಳದ ಜಲ ಮರುಪೂರಣ’ ಮಾಡಿದರೆ ಅಂತರ್ಜಲ ಹೆಚ್ಚುತ್ತದೆ. ಒಂದು ಎಕರೆ ಪ್ರದೇಶದಲ್ಲಿ ಒಂದು ಇಂಚು ಮಳೆ ಆದರೆ 10044 ಲೀಟರ್ ವ್ಯರ್ಥವಾಗಿ ಹರಿದು ಹೋಗುತ್ತದೆ. ವರ್ಷಕ್ಕೆ ಸುಮಾರು 18-20 ಲಕ್ಷ ಲೀಟರ್ ನೀರು ಹರಿದು ಹೋಗುತ್ತದೆ. ಮೊದಲ ಮಳೆಯ 150 ಮಿ.ಮೀ. ಮಳೆನೀರನ್ನು ಕೆಂಪು ಮಣ್ಣು ಹೀರಿಕೊಳ್ಳುತ್ತದೆ. ಕಪ್ಪು ಮಣ್ಣು ಮೊದಲ ಮಳೆಯ 300 ಮಿ.ಮೀ. ಮಳೆನೀರನ್ನು ಹೀರಿಕೊಳ್ಳುತ್ತದೆ. ನಂತರ ಬರುವ ಮಳೆಯ ನೀರು ಹರಿದು ಪೋಲಾಗುತ್ತದೆ. ಜೊತೆಗೆ ಒಂದು ಹೆಕ್ಟರ್ನಿಂದ 3-4 ಟನ್ ಫಲವತ್ತಾದ ಮಣ್ಣು ಸಮದ್ರ ಸೇರುತ್ತದೆ.

“ಇವತ್ತು ರಾಸಾಯನಿಕ ಬಳಸಿದ ಭೂಮಿಗೆ ನೀರು ಹಿಡಿದಿಡಲು ಆಗುತ್ತಿಲ್ಲ. ಅಕ್ಕಡಿ ಬೆಳೆಗಳು ಇಲ್ಲ. ಹಿಂದೆ ರೈತರಿಗೆ ಯಾವ ರೀತಿ ಕೃಷಿ ಮಾಡಬೇಕೆನ್ನುವುದುಗೊತ್ತಿತ್ತು. ಉರುಳಿ, ಅಲಸಂದೆ, ಉಚ್ಚೆಳ್ಳು, ಎಳ್ಳು, ತೊಗರಿ, ಉದ್ದು ಎಲ್ಲಾ ಅಕ್ಕಡಿ ಹಾಕುತ್ತಿದ್ದರು. ಅವುಗಳ ಎಲೆ ಬಿದ್ದು ಭೂಮಿಗೆ ಹಾಸಿಗೆಯಂತಾಗುತ್ತಿತ್ತು. ಬಿದ್ದ ನೀರನ್ನು ಮಣ್ಣು ಹೀರಿಕೊಳ್ಳುತ್ತಿತ್ತು. ಆದರೆ ಈಗ ಹಸಿರು ಕ್ರಾಂತಿಯ ದುಷ್ಪರಿಣಾಮ ದಶಕಗಟ್ಟಲೆ ರಾಸಾಯನಿಕ ಹಾಕಿದ ಮಣ್ಣಿನಲ್ಲಿ ಬಿದ್ದ ನೀರು ಹಿಂಗುವುದು ಕಷ್ಟವಾಗಿದೆ. ಭೂಮಿಯಲ್ಲಿ ನೀರು ಹಿಂಗಬೇಕಾದರೆ ಸಾವಯವ ಪದಾರ್ಥ ಇರಲೇಬೇಕು. ಆದ್ದರಿಂದ ಮಳೆನೀರಿನ ಕೊಯ್ಲು ಜೊತೆಗೆ ಸಾವಯವ ಸಮಗ್ರ ಬೇಸಾಯ ಪದ್ಧತಿಯ ಕಡೆಗೆ ರೈತರು ಮರಳಿ ಬರಬೇಕು” ಎಂದು ಅಯ್ಯಪ್ಪ ಅವರು ಬಯಸುತ್ತಿದ್ದರು. ಜಲಾನಯನ ಇಲಾಖೆಯವರು ಹೆಚ್ಚಾಗಿ ಟ್ರಂಚ್ಕಂಬಂಡ್ ಮಾಡುತ್ತಾರೆ. ಅದಕ್ಕಿಂತ ಕಂಪಾರ್ಟ್ಮೆಂಟ್ ಬಂಡಿಂಗ್ ಉತ್ತಮ ಎನ್ನುವ ಮಸಗಿ ‘ಒಂದು ಮೀಟರ್ ಆಳ, ಒಂದು ಮೀಟರ್ ಅಗಲ, ಹತ್ತು ಮೀಟರ್ ಉದ್ದದ ಟ್ರಂಚ್ಗಳನ್ನು ತೆಗೆದು ನಡುವೆ ಒಂದು ಚದರ ಮೀಟರ್ ಜಾಗ ಬಿಡಬೇಕು. ಹೀಗೆ ಮಾಡಿದರೆ ಒಂದು ಟ್ರಂಚ್ನಲ್ಲಿ 10 ಸಾವಿರ ಲೀಟರ್ ನೀರು ಹಿಂಗುತ್ತದೆ. ಅಕಾಲಿಕ ಮಳೆಗೆ ಹೊಲಗಳಲ್ಲಿ ಹಿಂಗು ಗುಂಡಿಗಳನ್ನು ಮಾಡಿಕೊಳ್ಳುವುದು ಒಳ್ಳೆಯ ಬರ ಪರಹಾರ ಎನ್ನುತ್ತಿದ್ದರು. “ಯಾರದೇ ಹೊಲಕ್ಕೆ ಹೋದರೂ ನಾನು ನೋಡುವುದು ಬದುವನ್ನು. ಎಲ್ಲಾ ಸಿರಿ ಸಂಪತ್ತು ಇರುವುದೆ ಬದುವಿನಲ್ಲಿ. ಶ್ರೀಗಂಧ, ಹೆಬ್ಬೇವು, ಸಿಲ್ವರ್ ಓಕ್, ನಿಂಬೆ, ತೆಂಗು ಎಲ್ಲವನ್ನು ಬದುವಿನಲ್ಲಿ ಹಾಕಿದರೆ ಕೃಷಿಗೆ ಪೂರಕವಾದ ವಾತಾವರಣ ನಿರ್ಮಾಣವಾಗುತ್ತದೆ” ಎಂದು ಇವರು ಒತ್ತಿ ಹೇಳುತ್ತಿದ್ದರು.

ರೈತರು 12 ತಿಂಗಳು ಕೆಲಸ ಇರುವಂತ ಕೃಷಿಮಾಡಬೇಕು. ಕಾಡು ಇರಬೇಕು, ಸಂಪತ್ತು ಕೊಡುವಂತಹ ಹಣ್ಣಿನ ಮರಗಿಡಗಳೂ ಇರಬೇಕು’ ಎನ್ನುವುದು ಮಸಗಿಯವರ ಅನುಭವದ ಮಾತು. ನಾವು ಯಾವುದನ್ನೇ ಮಾಡಿದರು ಅದರ ಫಲಿತಾಂಶ ಉತ್ತಮವಾಗಿರಬೇಕು ಎನ್ನುವ ಮಸಗಿ `ಜಲ ಮರುಪೂರಣ ಎನ್ನುವುದು ಜನರದ್ದೇ ಯೋಜನೆಯಾಗಬೇಕು. ಅದು ಪ್ರತಿ ಕ್ಷಣವೂ ಅವರ ಮನದಲ್ಲಿ ನಿಲ್ಲಬೇಕು. ತಮ್ಮ ಜಮೀನಿನಲ್ಲಿ ನೀರು ಹಿಂಗಿಸುವ ಕೆಲಸಮಾಡಲು ಸರಕಾರಿ ಯೋಜನೆಗಳಿಗಾಗಿ ಕಾಯುತ್ತಾ ಕುಳಿತಿರಬಾರದು. ಜೀವನೋಪಯೋಗಕ್ಕಾಗಿ ನೀರು ಬೇಕೆ ಬೇಕು ಎಂದು ಅರಿತುಕೊಂಡು ಹೊಟ್ಟೆ ಬಟ್ಟೆ ಕಟ್ಟಿ ಇದಕ್ಕೆ ದುಡ್ಡು ಹಾಕಬೇಕು’ ಎಂದು ಹೇಳುತ್ತಿದ್ದರು. ಭವಿಷ್ಯದಲ್ಲಿ ಭಾರತ ಮತ್ತೆ ಆಹಾರ ಮತ್ತು ನೀರಿನ ಕೊರತೆ ಎದುರಿಸುವ ಸಾಧ್ಯತೆ ಇದೆ. ಇದಕ್ಕೆ ಕಾರಣ ಭೂಮಿಯ ಮೇಲಿನ ನೀರು, ನೆಲದ ನೀರು, ಅಂತರ್ಜಲ ಈ ಮೂರನ್ನು ಬೇಕಾಬಿಟ್ಟಿ ಬಳಸುತ್ತಿರುವುದು. ಈಗ ಇದರಿಂದ ತಪ್ಪಿಸಿಕೊಳ್ಳುವ ಮಾರ್ಗ ಎಂದರೆ ಮಳೆ ನೀರಿನ ಸಂಗ್ರಹಣೆ. ಮಳೆ ನೀರಿನ ಉಳಿಕೆ, ಗಳಿಕೆ, ಬಳಕೆಯಲ್ಲಿ ಎಚ್ಚರವಹಿಸಬೇಕಿದೆ. ಪ್ರತಿ ಒಂದು ಹೆಕ್ಟರ್ ಪ್ರದೇಶದಲ್ಲಿ ಕನಿಷ್ಠ ಒಂದು ಗುಂಟೆಯಾದರೂ ಕೆರೆ ಇರಲೇಬೇಕು. ಭೂಮಿ ಹೆಚ್ಚು ಇಳಿಜಾರಗಿದ್ದರೆ 30 ಅಡಿಗೆ, ಸಾಧಾರಣ ಇಳಿಜಾರಗಿದ್ದರೆ 40 ಅಡಿಗೆ, ಸಮತಟ್ಟಾಗಿದ್ದರೆ 60 ಅಡಿಗೆ ಒಂದರಂತೆ ಪಟ್ಟ ಬಡ್ಡಿಂಗ್ ಮಾಡಿಕೊಳ್ಳಬೇಕು ಎಂದು ರೈತರಿಗೆ ಸಲಹೆ ನೀಡುತ್ತಿದ್ದರು.

ಮಳೆ ಬೀಳುವ ದಿನಗಳಲ್ಲಿ ಹೆಚ್ಚು ಕಡಿಮೆಯಾಗಿದೆ. ಅದು ನಾವೇ ಮಾಡಿಕೊಂಡಿರುವ ಪ್ರಮಾದ. ಆದರೆ ಮಳೆಯ ಪ್ರಮಾಣದಲ್ಲಿ ಅಂತಹ ವ್ಯತ್ಯಾಸವಾಗಿಲ್ಲ. ಅಕಾಲಿಕವಾಗಿ ಬೀಳುವ ಮಳೆಯ ನೀರನ್ನು ಹಿಡಿದಿಟ್ಟುಕೊಂಡು, ಹಸಿರು ಕಾಡು ಬೆಳೆಸಿ ಮತ್ತೆ ಕಾಲ ಕಾಲಕ್ಕೆ ಮಳೆ ಬೀಳುವಂತೆ ಮಾಡಬೇಕಿದೆ. ಅದಕ್ಕಾಗಿ ನಮ್ಮ ಯುವಕರು ಯಾರಿಗೂ ಯಾವುದಕ್ಕೂ ಕಾಯದೇ ಜಲಯೋಧರಂತೆ ಕೆಲಸಮಾಡಬೇಕಿದೆ. ಅದಕ್ಕಾಗಿ ಓಡುವ ನೀರನು ಹರಿಯುವಂತೆ ಮಾಡಬೇಕು. ಹರಿಯುವ ನೀರನ್ನು ನಿಲ್ಲುವಂತೆ ಮಾಡಬೇಕು. ನಿಲ್ಲುವ ನೀರನ್ನು ಹಿಂಗುವಂತೆ ಮಾಡಬೇಕು. ರೈತರು ಕೃಷಿ ಲೇಖನಗಳು, ಪುಸ್ತಕಗಳು, ಅಂಕಣ ಬರೆಹಗಳನ್ನು ಓದಿದರೆ ಅರ್ಧಲಾಭ, ತೋಟಗಳನ್ನು ಸುತ್ತಿದರೆ ಇನ್ನರ್ಧ ಲಾಭ. ಎರಡನ್ನೂ ಮಾಡಿದರೆ ಪೂರ್ತಿಲಾಭ ಎನ್ನುತ್ತಾರೆ ಬಲ್ಲವರು. ಮಳೆ ನೀರು ಕೊಯ್ಲು ಮಾಡುವುದರ ಜೊತೆಗೆ ಸಾವಯವ ಕೃಷಿಯತ್ತ ಯುವಕರು ಒಲವು ಬೆಳೆಸಿಕೊಳ್ಳಬೇಕು. ‘ಸಾವಯವ ಕೃಷಿ ಸಾಯುವ ಕೃಷಿಯಲ್ಲ. ಬದಲಾಗಿ ಸಾಹುಕಾರನಾಗುವ ಕೃಷಿ‘ಎನ್ನುತ್ತಿದ್ದರು ಅಯ್ಯಪ್ಪ ಮಸಗಿ.

‍ಲೇಖಕರು Admin MM

May 4, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: