ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಕೋಲು ಬಿಸಿಲು ಮೇಲೇರುವ ಹೊತ್ತಿಗೆ…

ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ.

ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ ಸಿಕ್ಕಿದೆ.

ಕರಾವಳಿ ಲೇಖಕಿ ವಾಚಕಿಯರ ಸ೦ಘದ ಪ್ರಥಮ ಲೇಖಕಿ ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ಪುತ್ತೂರು ಹನ್ನೊ೦ದನೇ ತಾಲೂಕು ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ೨೦೦೫ರಲ್ಲಿ. ದ.ಕ. ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಯಾಗಿದ್ದರು.

5

ಗಂಗೊಳ್ಳಿ ಹೊಳೆಯಮೇಲೆ ಹೊಳೆಯುತ್ತಿರುವ ಬಾಲ ಸೂರ್ಯನ ಕಿರಣಗಳು ತೀರದುದ್ದಕ್ಕೂ ಬಂದು ಸುತ್ತಲೂ ಆವೃತ್ತವಾದ ಗಿಡ ಮರ, ಬಳ್ಳಿಗಳ ಸಂದುಗಳಲ್ಲಿ ಹಾದು ಭತ್ತದ ಗದ್ದೆಯಾಚೆ ಗುಡ್ಡ ಕಲ್ಮರಗಳ ಕಾಡಿನಲ್ಲಿ ತೂರಿ ಬೆಳ್ಳಿರೇಖೆ ಎಳೆಯುವಾಗ ನಾಣಿಗೆ ಎಣೆಯಿಲ್ಲದ ಉತ್ಸಾಹ. ಆ ಹೊತ್ತಿಗೆ ದನ ಕರುಗಳ ಕೊರಳ ಹಗ್ಗದ ಕುಣಿಕೆ ಸಡಲಿಸಿ ಕಟ್ಟಿಗೆಯ ಉರುಗೋಲು ಬಾಗಿಲು ತೆಗೆದು ಹೊರಬಿಡಬೇಕು.

ಕೆಲಸದ ಲಿಂಗಣ್ಣ ಇದ್ದರೂ ಬೆಳಿಗ್ಗೆ ದನಕರುಗಳನ್ನು ಮೇಯಲು ಬಿಡುವ ಕೆಲಸ ಮಕ್ಕಳಿಗೇ ಮೀಸಲು. ಅವೂ ಈ ಮಕ್ಕಳಿಗೆ ಚೆನ್ನಾಗಿ ಹೊಂದಿಕೊಂಡಿವೆ. ಅವುಗಳಲ್ಲಿ ಉದ್ದಕೋಡಿನ ಹೆಣ್ಣು ಕರು ಬಹಳ ಜೋರು. ಆದರೆ ಇವರ ಬಳಿ ಬೆಕ್ಕಿನಂತೆ. ಮೈ ಮೂಸಿ ನೋಡುತ್ತ ಓಡುವುದೇ ಚೆಂದ. ಎಲ್ಲ ದನ ಕರುಗಳಿಗೂ ಜೊತೆಯಾಗಿ ಹೊರ ಬೀಳುವಾಗ ಏನವುಗಳ ಖಷಿ. ಬಾಲ ಎತ್ತಿ ಚಂಗನೆ ಹಾರಿ ಪುಟು ಪುಟು ಹೆಜ್ಜೆ ಇಟ್ಟು ಗದ್ದೆ ಹುಣಿಯಾಚೆ ಜಿಗಿದು ಹಸಿರು ಹುಲ್ಲು ಇದ್ದಲ್ಲಿ ಓಡುತ್ತವೆ ಒಂದರ ಹಿಂದೆ ಇನ್ನೊಂದು. ಆಗ ನಾಣಿಯೂ ಕೈಯ್ಯಲ್ಲಿ ಕೋಲು ಹಿಡಿದು ಓಡ್ತಾನೆ ಅವುಗಳ ಹಿಂದೆ. ಮೈಮೇಲೆ ಬಟ್ಟೆ ಇಲ್ಲ.

ಸೊಂಟದ ಕೆಳಗೆ ಚಡ್ಡಿ, ಅಥವಾ ಕೆಲವೊಮ್ಮೆ ಕಚ್ಚೆಯಂತೆ ತುಂಡು ಬಟ್ಟೆ ಸುತ್ತಿಕೊಂಡರೂ ಆಯ್ತು. ಇವತ್ತು ಕಟ್ಟಿಕೊಂಡದ್ದು ತುಂಡು ಬಟ್ಟೆ. ಹಾಗೆ ಕೆಲಸದವರು ಬಿಟ್ಟರೆ ಇನ್ನಾರು ಬರುತ್ತಾರೆ ಈ ಕುದ್ರುವಿಗೆ? ಅವನ ಹಿಂದೆ ನಿಧಾನ ಗತಿಯಲ್ಲಿ ಗೌರಿಯ ಹೆಜ್ಜೆಗಳು. ರಂಗೋಲಿ ಹಾಕಿದ್ಯಾ?, ದೇವರಿಗೆ ಹೂವು, ತುಳಸಿ ಕುಯ್ದು ಆಯ್ತಾ? ದೀಪಕ್ಕೆ ಆರತಿಗೆ ಬತ್ತಿ ಇಟ್ಟೆಯಾ? ಆಯಿ ಹೇಳುವ ಮೊದಲೇ ತನ್ನ ನಿರ್ಕಿನ ಕೆಲಸ ಮುಗಿಸಿ ಬಿಟ್ಟರೆ ಕಿವಿ ಹಿಂಡಿಸಿಕೊಳ್ಳಬೇಕಿಲ್ಲ.. ಹೊಟ್ಟೆಗಿಷ್ಟು ಬಿದ್ದರೆ ಮತ್ತೆ ನಾಣಿ ಅವಳು ಸ್ವಚ್ಚಂದವಾಗಿ ತಿರುಗುವ ಹಕ್ಕಿಗಳು.

ಬೆಳಗಿನ ಕುಳಿರ್ಗಾಳಿ ಚಾಮರ ಬೀಸುವಾಗ ಮೈ ಮನಗಳಲ್ಲಿ ಉಲ್ಲಸಿತ ಸುಳಿಗಾಳಿ. ಗೌರಿ ಹೇಳುತ್ತಾಳೆ, ‘ಆಯಿ ರವೆ ಹುರಿದು ಸಿಹಿ ತಿಂಡಿ ಮಾಡುವ ಹೊತ್ತಿಗೆ ನಾವು ಮನ್ಲಿರಬೇಕು. ಇವತ್ತು ಯಾರು ಬತ್ತೋ ಗೊತ್ತೇನೋ ನಿಂಗೆ?
‘ಯಾವ ಭೂತ ಬತ್ತು ಈ ಕೂಪಕ್ಕೆ?’
‘ಮಾತು ಕಲಿತಿದ್ದಿಯಾ ಜೋರಾಗಿ. ನಿನ್ನೆ ರಾತ್ರೆ ನಾ ಏನು ಹೇಳಿದ್ದೆ ಹೇಳು?’
ನಾಣಿ ತಲೆಕೆದರಿಕೊಂಡ. ನಿನ್ನೆ ರಾತ್ರೆ ಅಪ್ಪ ತಂದುಕೊಟ್ಟ ಕರ್ನಾಟಕದ ಭೂಪಟದಲ್ಲಿ ಗಂಗೊಳ್ಳಿ ಹೊಳೆ, ಹೊಳೆಬಾಗಿಲು ಮನೆ ಹುಡುಕುವ ಗುಂಗಿನಲ್ಲಿದ್ದ. ಅಕ್ಕ ಹೇಳಿದ್ದು ಏನು? ಸರಿ ಕೇಳಲಿಲ್ಲ. ಅಕ್ಕ ಹೊಸಜನ ಶಾರದತ್ತೆಯನ್ನು ನೋಡಲು ಬರುತ್ತಾರೆ ಎಂದಳಂತೆ. ನೋಡಲು ಬರುವುದು ಎಂದರೇನು? ಅವನಿಗೆ ಅರ್ಥವಾಗದ ಸಂಗತಿ. ಹೌದಲ್ಲ, ಹೊಸಜನ ಬರುವಾಗ ಅವರಿಗೆ ತಿಂಡಿ ಆಸರಿಂಗೆ ಆಗಬೇಕು. ಆಯಿ, ಅಜ್ಜಮ್ಮ, ಸುಶೀಲ ಚಿಕ್ಕಿ ಅಡಿಗೆಮನೆ ಹೊಕ್ಕಿದ್ದಾರೆ ಬೆಳಿಗ್ಗೆಯೇ ಸಿಹಿ ತಿಂಡಿ ತಯಾರಿಗೆ.

‘ದನ ಕರುಗಳನ್ನು ಮೇಯಲು ಅಟ್ಟಿ ಬೇಗ ಬನ್ನಿ’ಎಂದು ಅಜ್ಜಮ್ಮ. ‘ಬರ್ತಾ ಸಂಪಿಗೆ ಹೂ ಕುಯ್ದು ತಾ ಗೌರಿ’ಎಂದು ಸುಶೀಲ ಚಿಕ್ಕಿ ಹೇಳಿದ್ದಾರೆ. ಹೆಚ್ಚು ಎತ್ತರವಿಲ್ಲದ ಸಂಪಿಗೆ ಮರ. ಕೆಳಗಿನ ಟೊಂಗೆಯ ತುದಿಗೆ ದೋಂಟಿಯಲ್ಲಿ ಎಳೆದರೆ ಸಾಕು, ನಾಲ್ಕಾರು ಹೂವುಗಳು ಸಿಗುತ್ತವೆ. ಮನೆ ಬಿಡುವಾಗಲೇ ಕಂಕುಳಲ್ಲಿ ದೋಂಟಿ, ಕೈಯ್ಯಲ್ಲಿ ಬಿದಿರು ಬುಟ್ಟಿ ತಂದ ಗೌರಿ ನಾಲ್ಕಾರು ಹೂವುಗಳನ್ನು ಕುಯ್ದು ಬುಟ್ಟಿಗೆ ಹಾಕಿ,
‘ಪೇರಳೆ ಗಿಡದಲ್ಲಿ ಹಣ್ಣು ಉದುರಿ ಬೀಳ್ತಾ ಇದ್ದು. ತ್ಯಾಂಪನೂ, ಲಿಂಗಣ್ಣನೂ ಬರ್ಲಿಲ್ಲೆ. ನಾವೇ ಕೊಯ್ದುತರುವ. ಬರ್ತಿಯಾ?’ ಕೇಳಿದಳು ಮುಂದಡಿ ಇಟ್ಟು.

‘ನೀ ಎಲ್ಲಿ ಹೇಳಿದರೂ ನಾ ತಯಾರು!’ ನಾಣಿ ಓಟ ಕಿತ್ತ. ಆದರೆ ಅಷ್ಟರಲ್ಲಿ ಇಬ್ಬರ ಕಣ್ಣು ಹೊರಳಿತು. ಅದೋ, ಕಿಸ್ಕಾರ ಹೂವಿನ ಮೇಲೆ ಹಾರುತ್ತಿದ್ದ ಪಾತರಗಿತ್ತಿ! ಎಷ್ಟು ದೊಡ್ಡದು, ನಸುಗಂದು ಬಣ್ಣದ ರೆಕ್ಕೆ ಮೇಲೆ ಮುತ್ತಿನ ಮಣಿಗಳು ಇಟ್ಟಂತೆ ಚುಕ್ಕಿಗಳು. ಒಮ್ಮೆ ರೆಕ್ಕೆ ಮುದುಡಿಸಿ ಮತ್ತೊಮ್ಮೆ ಪೂರಾ ತೆರೆದು ಹೂವಿನಿಂದ ಹೂವಿಗೆ ಹಾರುತ್ತಿದೆ ವಯ್ಯಾರದಲ್ಲಿ. ನೋಡುತ್ತ ನಾಣಿ ಹುಚ್ಚನಾಗಿ ಹೋದ, ಅದೀಗ ತನಗೇ ಸಿಗಬೇಕು. ಅದರ ಮೃದು ರೆಕ್ಕೆಯನ್ನು ಸವರಬೇಕು ಅಂಗೈಯ್ಯಲ್ಲಿಟ್ಟು.

ಅಕ್ಕನನ್ನು ಕರೆದ. ಗೋಗರೆದ. ಹಾರುವ ಪಾತರಗಿತ್ತಿ, ಹಿಡಿಯುವುದು ಸುಲಭವೇ? ‘ಆವತ್ತೊಂದು ದಿನ, ಇಂತಹದೇ ಪಾತರಗಿತ್ತಿಯನ್ನು ಹಿಡಿಯಲು ನೀನು ಅದರ ಹಿಂದೆ ಓಡ್ತಾ ಗದ್ದೆ ಬದಿಯ ಹೊಂಡಕ್ಕೆ ದುಡುಂ! ನೆನಪಿದೆಯಾ ನಾಣಿ?’ ನೆನಪಿಲ್ಲದೆ ಏನು? ಆ ಪಾತರಗಿತ್ತಿ ಹಿಡಿಯಲು ಹೋಗಿ ಗದ್ದೆ ಕೆಸರಿಗೆ ಬಿದ್ದು ಮೈಯ್ಯೆಲ್ಲ ಕೆಸರಾಗಿ ಅಕ್ಕ ಹಿಡಿದೆಳೆದು. ‘ಅದೇ ಪಾತರಗಿತ್ತಿ ಅಕ್ಕಾ, ಇದು ನೋಡು, ಅದೇ ರೆಕ್ಕೆ, ಮೀಸೆ. ಆವತ್ತು ನನ್ನ ಕೈಯ್ಯಿಂದ ಉಳುಚಿ ಹೋಗಿತ್ತು. ಇಕಾ, ಇವತ್ತು ನಾ ಹಿಡಿದೇ ಶುದ್ಧ’ ತಮ್ಮನ ಅಜ್ಞಾನಕ್ಕೆ ನಕ್ಕಳು. ಗದ್ದೆ ಕೆಸರಿಗೆ ಬಿದ್ದು ತಿಂಗಳ ಮೇಲಾಯ್ತು. ಪಾತರಗಿತ್ತಿ ಆಯುಷ್ಯ ಎಷ್ಟು ಕಾಲದ್ದು? ಅಪ್ಪಯ್ಯನನ್ನು ಕೇಳೆಕ್ಕು. ಒಂದೊಂದು ಜೀವಿಗೂ ಇಂತಿಷ್ಟೇ ಆಯುಷ್ಯ ಇರುತ್ತದಂತೆ. ಪಾತರಗಿತ್ತಿಗೂ ಇಕ್ಕು. ಪಾಪ, ನಾಣಿ ಆಸೆಗಾದರೂ ಅದನ್ನು ಹಿಡಿಯಕ್ಕು.

‘ಅದರ ರೆಕ್ಕೆಗೆ ನೂಲು ಕಟ್ಟಿ ಕಿಟಕಿಗೆ ಕಟ್ಟಬೇಕು ಅಕ್ಕಾ, ಆವತ್ತು ದೇವರಕುದುರೆಯನ್ನು ಕಟ್ಟಿದ್ದೆವಲ್ಲ?ʼ ನಾಣಿ ಹೇಳುತ್ತ ಧಾವಿಸಿದ ಪಾತರಗಿತ್ತಿಯ ಹಿಂದೆ. ದೇವರಕುದುರೆ ಉದ್ದ ರೆಕ್ಕೆ, ಉದ್ದ ಮೂತಿ, ಹಸಿರು ಹಸಿರು ಚೆಂದ. ಕೈಗೆ ಸಿಗುವಂತೆ ಮೆಲ್ಲ ಹಾರಾಟ.ಆರಾಮದಲ್ಲಿ ಕೈಗೆ ಸಿಗುವ ನಿರುಪದ್ರ ಕೀಟ. ಅದನ್ನು ನೂಲಿನಲ್ಲಿ ಕಟ್ಟಿದಾಗ ಪರ ಪರ ರೆಕ್ಕೆ ಬಡಿದು ಹಾರಲು ನೋಡಿತ್ತು. ಪಾಪ, ಸ್ವಲ್ಪಹೊತ್ತಿನಲ್ಲೇ ರೆಕ್ಕೆ ಕಳಚಿದಂತೆ ನಿಶ್ಶಬ್ಧ.

‘ಆ ಪಾಪದ ಕೀಟಕ್ಕೆ ಸುಮ್ಮನೆ ಶಿಕ್ಷೆ ಕೊಟ್ಟಿರಲ್ಲ ಮಕ್ಕಳೇ. ತಪ್ಪು, ತಪ್ಪು. ಪ್ರಕೃತಿಯಲ್ಲಿ ಪ್ರತಿ ಜೀವಕ್ಕೂ ಬದುಕುವ ಹಕ್ಕಿದೆ. ನಮ್ಮ ಕೈಯ್ಯಾರೆ ಅವಕ್ಕೆ ಹಿಂಸೆ ಕೊಡಬಾರದಲ್ವೇ?’ ಬುದ್ಧಿ ಹೇಳಿದ್ದಳು ಆಯಿ. ಯಾವ ಜೀವಿಗೂ ಹಿಂಸೆ ಕೊಡಬಾರದು ಎನ್ನುವ ತತ್ವ ಅವಳದು. ಕೆಲವೊಮ್ಮೆ ಗುಂಪುಗೂಡಿ ಮನೆ ಅಂಗಳಕ್ಕೆ ಬರುತ್ತಿದ್ದವು ಬುಲ್ ಬುಲ್ ಹಕ್ಕಿಗಳು. ಉದ್ದ ಬಾಲದ ಅಪರೂಪದ ಹಕ್ಕಿಗಳು. ಆಯಿ ಅವಕ್ಕೆ ಮುಷ್ಟಿ ಅನ್ನ ಹಾಕಿದ್ದೇ ತಡ ಗುಂಪಿನಲ್ಲಿ ಹಾರಿಬಂದು ಕೊಕ್ಕಿನಲ್ಲಿ ಅನ್ನದ ಅಗುಳನ್ನು ಕುಟಕ್ ತೆಗೆದು, ಬರ‍್ರನೆ ಮರದತ್ತ ಹಾರಿ ತಿರುಗಿ ಕೆಳಕ್ಕಿಳಿದು ಎಷ್ಟು ಚೆಂದ ನೋಡಲು! ಹಿಡಿಯಲು ಹೋದರೆ ಒಂದೂ ಕೈಗೆ ಸಿಗದಂತೆ ಪರ‍್ರನೆ ಇನ್ನೆತ್ತ ಹಾರುತ್ತಾವೋ.

ಹಾಗೇ ಅಳಿಲುಗಳು ಕಣ್ತಪ್ಪಿಸಿ ಅತ್ತಿತ್ತ ಓಡುತ್ತಿದ್ದರೆ ಗೌರಿಯೂ ಓಡುತ್ತಿದ್ದಳು ಅವುಗಳ ಹಿಂದೆ. ಇನ್ನೇನು ಕೈಗೆ ಸಿಕ್ಕಿತು ಎನ್ನುವಾಗ ಅವು ಮರ ಏರಿ ಪರಾರಿ. ಕೈಗೆ ಸಿಕ್ಕರಲ್ಲವೇ. ಅದೇ ಆಟದ ಮೋಜು. ಇವತ್ತು ಪಾತರಗಿತ್ತಿ ಹಿಡಿಯುವ ಉಮೇದು ನಾಣಿಗೆ. ಗೌರಿ ತಾನೂ ಉಮೇದಿನಿಂದ ತಮ್ಮನ ಜೊತೆಗೇ ಧಾವಿಸಿದಳು. ಹಿಂದೆ ಮುಂದೆ, ಅಲ್ಲಿ ಇಲ್ಲಿ, ಆಕಡೆ ಈಕಡೆ ಒಬ್ಬರಿಗೊಬ್ಬರು ತಡೆಯುತ್ತ ಅದು ಹೋದಲ್ಲಿ ಹಿಂಬಾಲಿಸುತ್ತ ಹೊತ್ತು ಎಷ್ಟು ಕಳೆಯಿತೋ.

ಕೋಲು ಬಿಸಿಲು ಮೇಲೇರುವ ಹೊತ್ತಿಗೆ ಇಬ್ಬರೂ ಹೊಳೆ ದಡಕ್ಕೆ ಬರುವುದು, ದೋಣಿಯಿಂದ ಮೂವರು ಕೆಳಗಿಳಿದು ಬರುವುದೂ, ಅದೇ ವೇಳೆ ಅಪ್ಪಯ್ಯನೂ ಅಲ್ಲಿರುವುದು ಸರಿಹೋಯಿತು. ಹೊಸಬರು ಬಂದವರು ಯಾರು? ಒಬ್ಬರು ಕಮ್ತಿಯವರು. ತಮಗೆ ಗೊತ್ತಿದ್ದವರು. ಅವರ ಜೊತೆ ಇನ್ನಿಬ್ಬರು, ಹೋ, ಶಾರದತ್ತೆಯನ್ನು ನೋಡಲು ಬಂದವರು. ಅರೆ! ಸಂಪಿಗೆ ಹೂವು, ಪೇರಳೆ ಅಲ್ಲೆ ಉಳಿದು ಹೋಯ್ತಲ್ಲ. ಅಜ್ಜಮ್ಮ ನಮ್ಮನ್ನು ಕಾಯುತ್ತ ಬೈಯುತ್ತ. ಗೌರಿ ಗಡಬಡಿಸಿದಳು, ‘ನಡಿ ನಾಣಿ, ಅವನ್ನು ತಕ್ಕೊಂಡು ಹೋಗೋಣ’

ನಾಣಿ ತನ್ನ ಸೊಂಟದ ಕೆಳಗಿನ ಮಾರುದ್ದದ ತುಂಡು ಬಟ್ಟೆ ನೋಡಿದವನೇ ಜಿಂಕೆಯಂತೆ ಓಡಿದ ಮನೆಕಡೆ. ಗೌರಿಯೂ ಉದ್ದ ಅಂಗಿಯನ್ನು ಮೇಲಕ್ಕೆಳೆದು ಕಟ್ಟಿ ತಮ್ಮನ ಹಿಂದೆ ಕಾಲ್ಕಿತ್ತಳು. ಹಾಗೆಲ್ಲ ಹೊಸಬರಿಗೆ ಮುಖ ತೋರಿಸಲು ನಾಚಿಕೆ. ಹೆಣ್ಣುಮಕ್ಕಳಿಗೆ ನಾಚಿಕೆ ಎಂಬ ಶಬ್ಧ ಯಾವ ಕೋಶದಲ್ಲಿ ಇರುತ್ತದೆಯೋ? ಹೊಳೆಬಾಗಿಲು ಮನೆಯಲ್ಲಿ ಸಂಭ್ರಮ ಇಣುಕಿತ್ತು. ಶಾರದತ್ತೆ ಅಲಂಕಾರ ಮುಗಿಸಿ ಕಿಟಕಿ ಬಳಿ ಇಣುಕುವಾಗ ಗೌರಿ ಕಾಣಿಸಿದಳು, ‘ಅತ್ತೆ, ಸಂಪಿಗೆ ತಂದೆ. ಮುಡೀತಿಯಾ ಕಟ್ಟಿಕೊಡ್ತೆ.’

| ಇನ್ನು ನಾಳೆಗೆ |

‍ಲೇಖಕರು Admin

July 13, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಲಲಿತ ಎ.ಪಿ.

    ಹಳ್ಳಿಯ ಜೀವನ ಕಣ್ಣಿಗೆ ಕಟ್ಟುವಂತೆ ಮೂಡಿ ಬಂದಿದೆ.
    ದಿನದಿಂದ ದಿನಕ್ಕೆ ಧಾರಾವಾಹಿ ಕುತೂಹಲ ಮೂಡಿಸುತ್ತ ಸಾಗುತ್ತಿದೆ.

    ಪ್ರತಿಕ್ರಿಯೆ
  2. ಜಯಲಕ್ಷ್ಮಿ

    ಅಂದು ತನ್ನ ಕೈಗೆ ಸಿಗದೇ ಹೋದ ಪಾತರಗಿತ್ತಿಯನ್ನು ಇಂದು ಹಿಡಿದೇ ತೀರುವೆ ಎಂಬ ನಾಣಿಯ ಮುಗ್ಧತೆ ಮುದ ನೀಡುತ್ತದೆ,ಹಾಗೇ ಅವನ ಭೂಪಟದ ಕುತೂಹಲವೂ.ಆ ಪಾತರಗಿತ್ತಿ ಇಷ್ಟು ಸಮಯ ಬದುಕಿರುತ್ತದೆಯೇ ಎಂದು ಯೋಚಿಸುವ ಅವನಿಗಿಂತ ಸ್ವಲ್ಪ ದೊಡ್ಡವಳಾದ ಅಕ್ಕ ಗೌರಿಯ ಪಾತ್ರಚಿತ್ರಣವೂ ಚಂದವಾಗಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: