ಸ್ವ್ಯಾನ್ ಕೃಷ್ಣಮೂರ್ತಿ ಅಂಕಣ: ನಾನು ಅವರ ಮಗನಂತಾಗಿದ್ದೆ..

ಸರಿಯಾಗಿ ಮಾತನಾಡಲೂ ಬಾರದ ನನ್ನನ್ನು

ಯಜಮಾನರು ಅವರ ಮಾತುಗಳಿಂದಲೇ ದೊಡ್ಡ ಪೆಟ್ಟು, ಸಣ್ಣ ಪೆಟ್ಟು ಹಾಕಿ

ಕ್ರಿಯಾಶೀಲನನ್ನಾಗಿ ಮಾಡಿ, ಅವರ ಮಗ ಕೂರಬೇಕಾದ

ಕುರ್ಚಿಯ ಮೇಲೆ ನನ್ನನ್ನು ಕೂರಿಸಿದರು.

। ಕಳೆದ ವಾರದಿಂದ.. ।

ನಾನು ಲಕ್ಷ್ಮೀ ಮುದ್ರಣಾಲಯ ಸೇರಿ ಮೂರು ವರ್ಷವಾದ ಮೇಲೆ ಯಜಮಾನರು ಮುದ್ರಣಾಲಯದ ವ್ಯವಸ್ಥಾಪಕರಾಗಿದ್ದ ಟಿ.ಎಲ್. ವೆಂಕಟೇಶ್ ಅವರೊಂದಿಗೆ ಎಲ್ಲಾ ಹಿರಿಯ ಕಾರ್ಮಿಕರನ್ನು ಕರೆದುಕೊಂಡು, ಒಂದು ವಾರ ವಿದೇಶ ಪ್ರವಾಸ ಹೊರಟರು. ಆಗ ಕಚೇರಿಯ ಕೆಲಸಗಳ ಬಗ್ಗೆ ಅಲ್ಪಸ್ವಲ್ಪ ಅನುಭವವಿದ್ದ ನನಗೆ ಕಚೇರಿಯ ಜವಾಬ್ದಾರಿಯನ್ನು ಕೊಟ್ಟು. ಒಂದು ವಾರಕ್ಕೆ ಆಗುವಷ್ಟು ಕೆಲಸ ಕೊಟ್ಟು ಹೋಗಿದ್ದರು. ಮುದ್ರಣದ ಕೆಲಸಗಳ ಬಗ್ಗೆ ಏನೂ ಸರಿಯಾಗಿ ಗೊತ್ತಿಲ್ಲದ ನನಗೆ ಅಲ್ಲಿನ ಕಾರ್ಮಿಕ ಸ್ನೇಹಿತರು ಆಗ ತೋರಿದ ಪ್ರೀತಿ ಅನನ್ಯ….

ಯಜಮಾನರ ಹಾಗೂ ಹಿರಿಯ ಕಾರ್ಮಿಕರ ಅನುಪಸ್ಥಿತಿಯಲ್ಲಿ ಎಲ್ಲಾ ಸ್ನೇಹಿತರು ಒಟ್ಟುಗೂಡಿ ಮುದ್ರಣ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದೆವು. ವಿದೇಶದಿಂದ ಹಿಂತಿರುಗಿದ ಮೇಲೆ ವೆಂಕಟೇಶ್ ಅವರು ನನ್ನನ್ನು ಅವರ ಜೊತೆಯಲ್ಲಿಯೇ ಇರಿಸಿಕೊಂಡು ಮುದ್ರಣಾಲಯದ ಅಷ್ಟೂ ಮಜಲುಗಳನ್ನು ತೋರಿಸಿಕೊಟ್ಟರು. ಮುಂದೆ ವೆಂಕಟೇಶ್ ಅವರು ಮುದ್ರಣಾಲಯದಿಂದ ಹೊರಗೆ ಹೋಗಿ ಅವರದೇ ಸ್ವಂತ ‘ವಿಶ್ವಾಸ್ ಮುದ್ರಣಾಲಯ’ ಸ್ಥಾಪಿಸಿದರು. ನಂತರ ಲಕ್ಷ್ಮೀ ಮುದ್ರಣಾಲಯದ ಜವಾಬ್ದಾರಿಯನ್ನು ಒಡೆಯರಾದ ಅಶೋಕ್‌ಕುಮಾರ್ ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಂದೊಂದೇ ಹೊಣೆಯನ್ನು ವಹಿಸುತ್ತಾ ಬಂದು ವ್ಯವಸ್ಥಾಪಕನನ್ನಾಗಿ ಮಾಡಿದರು.

ಅಶೋಕ್‌ಕುಮಾರ್ ಅವರಿಗೆ ಕಾರ್ಮಿಕರ ಮೇಲೆ ಬಹಳ ಪ್ರೀತಿ. ಅವರು ಎಲ್ಲರನ್ನೂ ತಮ್ಮ ಕುಟುಂಬದವರಂತೆ ಕಾಣುತ್ತಿದ್ದರು. ಎಲ್ಲಾದರೂ ಹೊರಗೆ ಹೋದರೆ ಅಲ್ಲಿಂದ ಎಲ್ಲರಿಗೂ ಅಲ್ಲಿನ ವಿಶೇಷ ತಿಂಡಿ ತಂದು ಹಂಚುತ್ತಿದ್ದರು. ಅಶೋಕ್‌ಕುಮಾರ್ ಅವರ ಶ್ರೀಮತಿ ವರಲಕ್ಷ್ಮಿಯವರೂ ಅಷ್ಟೇ, ಕಾರ್ಮಿಕರ ಮೇಲೆ ಬಹಳ ಪ್ರೀತಿ ತೋರಿಸುತ್ತಿದ್ದರು. ಅವರ ಮನೆಯಲ್ಲಿ ಒಂದು ಕೋಣೆಯನ್ನು ಗೋದಾಮು ಮಾಡಿದ್ದೆವು.

ನಾನು ಏನಾದರೂ ತಿಂಡಿ ಕೊಡುತ್ತಾರೆ ಎಂದು ಪದೇಪದೇ ಗೋದಾಮಿನಲ್ಲಿ ಇರುವ ಪುಸ್ತಕಗಳ ಲೆಕ್ಕ ತೆಗೆದುಕೊಳ್ಳುವ ನೆಪದಲ್ಲಿ ಇಬ್ಬರು ಹುಡುಗರೊಂದಿಗೆ ಯಜಮಾನರ ಮನೆಗೆ ಹೋಗುತ್ತಿದ್ದೆ. ಹೋದ ತಕ್ಷಣ ಟೇಬಲ್ ಮೇಲೆ ಇರುವ ಹಣ್ಣುಗಳ ಜೊತೆಗೆ ಒಳಗೆ ಡಬ್ಬಗಳಲ್ಲಿ ಇರುವ ಕುರುಕಲು ತಿಂಡಿಗಳನ್ನು ತಂದು ಟೇಬಲ್ ಮೇಲೆ ಇಟ್ಟುಬಿಡುತ್ತಿದ್ದರು. ನಾವು ಖುಷಿಯಿಂದ ಇಷ್ಟಪಟ್ಟು ತಿನ್ನುವುದನ್ನು ನೋಡಿ ಸಂತಸಪಡುತ್ತಿದ್ದರು. ಅಲ್ಲಿ ಎಷ್ಟು ಆಗುತ್ತೋ ಅಷ್ಟು ತಿಂದು ಉಳಿದಿದ್ದನ್ನು ಜೇಬುಗಳಲ್ಲಿ, ಕವರ್‌ಗಳಲ್ಲಿ ತುಂಬಿಕೊಂಡು ಮುದ್ರಣಾಲಯಕ್ಕೆ ಹಿಂತಿರುಗುತ್ತಿದ್ದೆವು.

ಒಂದು ದಿನ ಮುದ್ರಕರ ಸಂಘದ ಸಭೆ ಮುಗಿಸಿ ಗಾಂಧಿನಗರದ ಮಠಕ್ಕೆ ಬಂದ ಯಜಮಾನರು ಆಡಳಿತಾಧಿಕಾರಿಗಳ ರೂಮಿನಲ್ಲಿ ಬಟ್ಟೆ ಬದಲಿಸಿಕೊಂಡು, ಅವರ ಸೂಟನ್ನು ಅಲ್ಲೇ ಬಿಟ್ಟು ಯಾವುದೋ ಕಾರ್ಯಕ್ರಮಕ್ಕಾಗಿ ಮೆಜೆಸ್ಟಿಕ್‌ನಿಂದ ರೈಲಿನಲ್ಲಿ ಬೇರೆ ಊರಿಗೆ ಹೋದರು.

ಆ ಸೂಟ್ ಬಹಳ ದಿನ ಅಲ್ಲೇ ಇದ್ದುದನ್ನು ಗಮನಿಸಿದ ನಾನು, ಅದನ್ನು ತೆಗೆದುಕೊಂಡು ಯಜಮಾನರ ಮನೆಗೆ ಹೋಗಿ ವರಲಕ್ಷ್ಮಿ ಆಂಟಿ ಕೈಗೆ ಕೊಟ್ಟು “ಬಹಳ ದಿನದಿಂದ ಮಠದಲ್ಲೇ ಇತ್ತು ತಂದಿದ್ದೇನೆ. ಯಜಮಾನರ ಹತ್ತಿರ ಬೇಕಾದಷ್ಟು ಸೂಟ್‌ಗಳು ಇವೆ, ನಾನು ಈ ಸೂಟ್ ಇಟ್ಕೋತೀನಿ.. ಈ ಬಾರಿ ದಸರಾ ಪೂಜೆ ದಿನ ಹಾಕ್ಕೋಬೇಕು ಅಂತ ಆಸೆ” ಎಂದು ನನ್ನ ಮನದಾಳದ ಬಯಕೆಯನ್ನು ವ್ಯಕ್ತಪಡಿಸಿದೆ, ತಕ್ಷಣ ಅವರು ಸಿಟ್ಟಾಗಿ ಬಿಟ್ಟರು. “ನೀನು ನೋಡಿದರೆ ತೆಳ್ಳಗೆ ಇದಿಯಾ, ಈ ಸೂಟ್ ನಿನಗೆ ಸೆಟ್ ಆಗಲ್ಲ, ಹಾಕ್ಕೊಂಡ್ರೆ ದೊಗಲ ಬಗಲ ಆಗಿ ಚೆನ್ನಾಗಿ ಕಾಣಲ್ಲ” ಎಂದುಬಿಟ್ಟರು..!

ನಾನು ನಿರಾಶೆಯಿಂದ ಹ್ಯಾಪುಮೋರೆ ಹಾಕಿಕೊಂಡು ಹಿಂದಿರುಗಿದೆ. ಆದರೆ ಅವತ್ತು ಸಂಜೆ ಯಜಮಾನರ ಜೊತೆ ಕಚೇರಿಗೆ ಬಂದ ಆಂಟಿ ನನ್ನನ್ನು ಕರೆದು ಯಜಮಾನರಿಗೆ ಹೇಳಿ, ರೂ. ೫೦೦೦ ಕೊಡಿಸಿ “ಈ ಸರಿ ದಸರಾ ಪೂಜೆಗೆ ನಿನ್ನ ಅಳತೆಗೆ ಹೊಂದುವಂತಹ ಹೊಸ ಸೂಟು ತಗೋ” ಎಂದು ಹೇಳಿದರು. ಅದು ನನ್ನ ಜೀವಮಾನದ ಮೊದಲ ಸೂಟ್…!! ಅಂದಿನಿಂದ ಪ್ರತಿವರ್ಷ ದಸರಾ ಪೂಜೆಗೆ ಒಂದು ಸರ್ತಿ ಕುರ್ತ, ಮುಂದೆ ವಿಶೇಷವಾದ ಜುಬ್ಬಾ… ಹೀಗೆ ಬೇರೆ ಬೇರೆ ತರಹದ ಆಕರ್ಷಕ ಡ್ರೆಸ್‌ಗಳನ್ನು ಕೊಡಿಸುತ್ತಿದ್ದರು.

ನಮ್ಮ ಲಕ್ಷ್ಮೀ ಮುದ್ರಣಾಲಯದಲ್ಲಿ ದಸರಾ ಹಬ್ಬದ ಆಯುಧಪೂಜೆ ಎಂದರೆ ಬಲು ಜೋರು. ಹಬ್ಬದ ಹಿಂದಿನ ದಿನ ಒಂದು ಕಡೆ ಯಂತ್ರಗಳನ್ನು ಚೆನ್ನಾಗಿ ಸೀಮೆಎಣ್ಣೆ ಹಾಕಿ ತೊಳೆದು, ಇಡೀ ಮುದ್ರಣಾಲಯವನ್ನು ಶುಚಿಗೊಳಿಸಿ, ಮದುವೆ ಮನೆಯಂತೆ ತಳಿರು ತೋರಣಗಳಿಂದ ಸಿಂಗರಿಸುತ್ತಿದ್ದೆವು. ಇನ್ನೊಂದು ಕಡೆ ವರ ಆಂಟಿ ಅಂದು ಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ, ಶ್ರದ್ಧಾಭಕ್ತಿಯಿಂದ ಶೃಂಗಾರ ಮಾಡುವುದನ್ನು ನೋಡಲು ಎರಡು ಕಣ್ಣು ಸಾಲದು! ಹಬ್ಬದ ದಿನ ಬೆಳಗ್ಗೆ ಪೂಜೆಗೆ ಮುದ್ರಣಾಲಯದ ಆಪ್ತೇಷ್ಟರನ್ನೆಲ್ಲ ಕರೆದು ಸತ್ಕರಿಸಿ ಭೂರಿಭೋಜನ ಹಾಕಿಸುತ್ತಿದ್ದರು. ನಂತರ ಕಾರ್ಮಿಕರಾದ ನಮ್ಮೆಲ್ಲರಿಂದ ಹಾಡು ಕುಣಿತ ಬಲು ಜೋರಾಗಿರುತ್ತಿತ್ತು. ಕೊನೆಗೆ ಒಬ್ಬೊಬ್ಬರನ್ನೇ ಯಜಮಾನರು ಅವರ ಕೋಣೆಗೆ ಕರೆದು, ಕುರ್ಚಿಯ ಮೇಲೆ ಕುಳ್ಳಿರಿಸಿ ಬೋನಸ್ ತುಂಬಿದ ಕವರ್, ಸಿಹಿ ಪೊಟ್ಟಣ ಮತ್ತು ತಾಂಬೂಲವನ್ನು ವರ ಆಂಟಿಯೊಂದಿಗೆ ಸೇರಿ ಅವರ ಕೈಯಾರೆ ಅತ್ಯಂತ ಗೌರವಾದರಗಳಿಂದ ಕೊಟ್ಟು ಸನ್ಮಾನಿಸುತ್ತಿದ್ದರು.

ಮುಂದೆ ನನಗೆ ಓಡಾಡಲು ಯಜಮಾನರು ಒಂದು ಆಕ್ಟಿವ ಗಾಡಿ ಕೊಡಿಸಿದರು. ಆದರೆ ವರ ಆಂಟಿಗೆ ಆ ಗಾಡಿ ಇಷ್ಟ ಇರಲಿಲ್ಲ. “ಹುಡುಗಿಯರು ಓಡಿಸೋ ಗಾಡಿ ನಿನಗೆ ಸೂಟ್ ಆಗಲ್ಲ” ಅಂತ ಪದೇಪದೇ ಹೇಳುತ್ತಲೇ ಇದ್ದರು. ಆಗ ಬಜಾಜ್ ಕಂಪನಿಯವರು ಪಲ್ಸರ್ ಬೈಕ್ ಹೊಸದಾಗಿ ಬಿಟ್ಟಿದ್ದರು. ಅದು ಬಹುಬೇಡಿಕೆಯ ಬೈಕ್. ಆ ಬೈಕ್ನಲ್ಲಿ ನಾನು ಓಡಾಡಬೇಕು ಎಂಬ ಬಯಕೆ ಅವರದು. ಕೊನೆಗೆ ನಾನು ಬೈಕ್ ತೆಗೆದುಕೊಂಡು ಅವರ ಮುಂದೆ ಓಡಿಸಿಕೊಂಡು ಬಂದಾಗ “ಸೂಪರ್ ..! ಇದು ನಿನಗೆ ಸರಿಯಾಗಿ ಒಪ್ಪುತ್ತದೆ, ಆದರೆ ಈ ಗಾಡಿ ಸವಾರಿಗೆ ಹೊಂದುವಂತೆ ಒಂದು- ಕೂಲಿಂಗ್ ಗ್ಲಾಸ್ ತಗೋ” ಎಂದು ಒತ್ತಾಯಿಸಿ ಅದನ್ನು ತೆಗೆದುಕೊಳ್ಳೋವರೆಗೂ ಬಿಟ್ಟಿರಲಿಲ್ಲ..! ವರ ಆಂಟಿ ಅವರು ಇಷ್ಟಪಟ್ಟು ಆಯ್ಕೆ ಮಾಡಿಕೊಟ್ಟ ಪಲ್ಸರ್ ಬೈಕನ್ನು ಇಂದಿಗೂ ನನ್ನ ಜೊತೆ ಇರಿಸಿಕೊಂಡಿದ್ದೇನೆ.

ಮುದ್ರಣಾಲಯದಲ್ಲಿ ಕಾರ್ಮಿಕರೆಲ್ಲಾ ಒಂದೇ ಕುಟುಂಬದವರಂತೆ ಕೆಲಸ ಮಾಡುತ್ತಿದ್ದೆವು. ನನಗೆ ಮುದ್ರಣಾಲಯದಲ್ಲಿ ಕೂಡು ಕುಟುಂಬದಲ್ಲಿ ಇದ್ದಂತೆ ಚಿಕ್ಕಪ್ಪ ಚಿಕ್ಕಮ್ಮ ಅತ್ತೆ ಮಾವ ಅಣ್ಣ ತಮ್ಮ ಹೀಗೆ ಎಲ್ಲರೂ ಇದ್ದರು. ಯಾರನ್ನೂ ಹೆಸರು ಹಿಡಿದು ಅಥವಾ ಸರ್, ಮೇಡಂ ಎಂಬ ಪದಗಳನ್ನು ಬಳಸಿ ಮಾತನಾಡಿಸುತ್ತಲೇ ಇರಲಿಲ್ಲ. ಎಲ್ಲಾ ಸಂಬಂಧ ಸೂಚಿಸಿ ಮಾಮಾ, ಅಣ್ಣ, ಚಿಕ್ಕಪ್ಪ ಹೀಗೆ ಕರೆಯುತ್ತಿದ್ದೆ. ಕಾರ್ಮಿಕರ ಮೇಲೆ ಯಜಮಾನರಿಗೆ ತುಂಬಾ ನಂಬಿಕೆ ಇದ್ದುದರಿಂದಲೇ ತಿಂಗಳುಗಟ್ಟಲೆ ವಿದೇಶ ಪ್ರವಾಸ ಹೋಗುತ್ತಿದ್ದರು. ಅವರ ಅನುಪಸ್ಥಿತಿಯಲ್ಲಿ ಎಲ್ಲರೂ ಕೆಲಸಗಳನ್ನು ಬಹಳ ಅಚ್ಚುಕಟ್ಟಾಗಿ, ಸಮಯಕ್ಕೆ ಸರಿಯಾಗಿ ಮಾಡುತ್ತಿದ್ದರು .

ಯಜಮಾನರು ಅವರ ಹಳೇ ಕೊಠಡಿಯಿಂದ ನವೀಕೃತ ಹೊಸ ಕೊಠಡಿಗೆ ಬದಲಾವಣೆಯಾದಾಗ ನನ್ನನ್ನು ಕರೆದು “ಇನ್ನು ಮುಂದೆ ನೀನು ನನ್ನ ಹಳೆ ಕೊಠಡಿಯ ಕುರ್ಚಿಯಲ್ಲಿ ಕೂತ್ಕೋ” ಎಂದರು. ಅವರ ಹಳೆ ಕೊಠಡಿಯು ಲಕ್ಷ್ಮೀ ಮುದ್ರಣಾಲಯದ ಸಾಕ್ಷಾತ್ ದೇವರ ಕೊಠಡಿ ಇದ್ದಂತೆ. ಅಷ್ಟೊಂದು ಪವಿತ್ರವಾಗಿ ಕಾಣುತ್ತಿದ್ದ ಆಸನದ ಮೇಲೆ ಯಜಮಾನರು ಅಥವಾ ಅವರ ಮಗ ಕುಳಿತುಕೊಳ್ಳಬೇಕು, ಅಂಥ ಆಸನದ ಮೇಲೆ ಕುಳಿತುಕೊಳ್ಳಲು ನನಗೆ ಮನಸ್ಸಾಗಲಿಲ್ಲ.

ಯಜಮಾನರು ಹೇಳಿದರೂ ಆ ಕೊಠಡಿಗೆ ಹೋಗುತ್ತಲೇ ಇರಲಿಲ್ಲ. ಕಚೇರಿಗೆ ಬಂದ ಗ್ರಾಹಕರ ಜೊತೆ ರಿಸೆಪ್ಶನ್‌ನಲ್ಲಿ ಕೂತೇ ಮುದ್ರಣ ಸಂಬಂಧದ ವಿಷಯಗಳನ್ನು ಚರ್ಚಿಸುತ್ತಿರುವುದನ್ನು ಗಮನಿಸಿದ ಯಜಮಾನರು, ಗ್ರಾಹಕರ ಎದುರೇ ನನ್ನನ್ನು ಹಳೆ ಕೊಠಡಿಗೆ ಕರೆದುಕೊಂಡು ಹೋಗಿ, ಅವರ ಆ ಕುರ್ಚಿಯ ಮೇಲೆ ಕೂರಿಸಿ, “ಇಲ್ಲೇ ಚರ್ಚೆ ಮುಂದುವರಿಸಿ” ಎನ್ನುತ್ತಿದ್ದರು.

ಮೊದಲ ದಿನ ನಾನು ಮುದ್ರಣಾಲಯಕ್ಕೆ ಪ್ರವೇಶಿಸಿದಾಗ ಯಜಮಾನರು ಇದೇ ಕುರ್ಚಿ ಮೇಲೆ ಕೂತು “ಇವನನ್ನು ವಾಪಸ್ ಬಸ್ ಹತ್ತಿಸಿ” ಎಂದ ಮಾತು ಆಗ ನೆನಪಾಗುತ್ತಿತ್ತು. ಸರಿಯಾಗಿ ಮಾತನಾಡಲೂ ಬಾರದ ನನ್ನನ್ನು ಯಜಮಾನರು ಅವರ ಮಾತುಗಳಿಂದಲೇ ದೊಡ್ಡ ಪೆಟ್ಟು, ಸಣ್ಣ ಪೆಟ್ಟು ಹಾಕಿ ಕ್ರಿಯಾಶೀಲನನ್ನಾಗಿ ಮಾಡಿ, ಅವರ ಮಗ ಕೂರಬೇಕಾದ ಕುರ್ಚಿಯ ಮೇಲೆ ನನ್ನನ್ನು ಕೂರಿಸುತ್ತಿರುವಾಗ ಅವರ ದೊಡ್ಡತನವನ್ನು ನೆನೆದು ಕಣ್ಣು ತೇವಗೊಂಡವು.

ನಾನು ಅವರ ಕೊಠಡಿಯಲ್ಲಿ ಕೂತು ಕಾರ್ಯನಿರ್ವಹಿಸುತ್ತಿದ್ದನ್ನು ನೋಡಿ, ನಾನು ಅಶೋಕ್‌ಕುಮಾರ್ ಅವರ ಮಗನೆಂದೇ ಬಹಳ ಜನ ತಿಳಿದಿದ್ದರು. ಎಷ್ಟೋ ಬಾರಿ ಗ್ರಾಹಕರು, “ನಿನ್ನೆ ಬಂದಿದ್ವಿ, ನೀವು ಇರಲಿಲ್ಲ, ನಿಮ್ಮ ತಂದೆಯವರ ಬಳಿ ಮುಂಗಡ ಕೊಟ್ಟು ಹೋಗಿದ್ವಿ, ನಮ್ಮ ಮುದ್ರಣ ಕೆಲಸ ಆಗಿದೆಯೇ?” ಎಂದು ಕೇಳುತ್ತಿದ್ದರು. ಒಮ್ಮೆ, ಯಜಮಾನರು ಕೆಳಗೆ ನಿಂತಿದ್ದಾಗ ಯಾರೋ ಒಬ್ಬರು ಬಂದು “ಯಜಮಾನರನ್ನು ನೋಡಬೇಕು” ಅಂತ ಅವರನ್ನೇ ಕೇಳಿದಾಗ, ‘ಮೇಲೆ ಇದ್ದಾರೆ ಹೋಗಿ’ ಎಂದು ನನ್ನ ಬಳಿಗೆ ಕಳುಹಿಸುವಷ್ಟು ನಿಷ್ಕಲ್ಮಶ ಮನಸ್ಸು, ಉದಾರ ಹೃದಯ ಅವರದು.

ಅವರು ಪ್ರತಿ ತಿಂಗಳಲ್ಲಿ ಒಂದು ದಿನ, ಆ ತಿಂಗಳಲ್ಲಿ ಯಾರ್ಯಾರ ಜನ್ಮದಿನ ಬರುತ್ತದೋ ಅವರೆಲ್ಲರ ಹುಟ್ಟುಹಬ್ಬವನ್ನು ಕೇಕ್ ಕಟ್ ಮಾಡಿಸಿ, ಎಲ್ಲರಿಗೂ ಭೂರಿಭೋಜನ ಏರ್ಪಡಿಸಿ ವಿಶೇಷವಾಗಿ ಆಚರಿಸುತ್ತಿದ್ದರು. ವರ್ಷಕ್ಕೆ ಒಂದು ಎರಡು ಬಾರಿ ಹೊರಗಡೆ ಪ್ರವಾಸ ಕರೆದುಕೊಂಡು ಹೋಗುತ್ತಿದ್ದರು. ಆಗಾಗ ಮುದ್ರಣಾಲಯದಲ್ಲಿ ನಡೆಯುತ್ತಿದ್ದ ಸಭೆ-ಸಮಾರಂಭಗಳಲ್ಲಿ ಅವರು ಕಾರ್ಮಿಕ ಸ್ಥಾನದಿಂದ ಮಾಲೀಕರ ಪಟ್ಟಕ್ಕೇರಿದ ತಮ್ಮದೇ ಅನುಭವಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದರು. ಅದೇ ರೀತಿ ಎಲ್ಲರೂ ಮೇಲೆ ಬರಬೇಕು ಎಂದು ಬಯಸುತ್ತಿದ್ದರು.

ಈ ಮಾತುಗಳೇ ನನ್ನಲ್ಲಿ ಸ್ವಂತ ಉದ್ದಿಮೆ ಶುರು ಮಾಡಬೇಕೆಂಬ ಕನಸು ಹುಟ್ಟಲು ಪ್ರೇರಣೆ.ಆ ಮಾತುಗಳಿಂದ ನನ್ನಲ್ಲಿ ಉದ್ಯಮವೊಂದನ್ನು ನಡೆಸುವ ಆಸೆ ನಿಧಾನವಾಗಿ ಮೊಳೆಯುತ್ತಿತ್ತು.ಈ ಅಪೇಕ್ಷೆ ಕ್ರಮೇಣ ನನ್ನಲ್ಲಿ ಗಾಢವಾಗಿ ಬೆಳೆಯಿತು. ಆ ಅಪೇಕ್ಷೆಯನ್ನು ಆಪ್ತರು, ಹಿರಿಯರ ಮುಂದೆ ಹೇಳಿಕೊಂಡೆ ; ಉದ್ಯಮದ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿದೆ. ಅವರೆಲ್ಲರೂ ಸವಾಲುಗಳನ್ನು ಎದುರಿಸಲು ಬೇಕಾದ ನೈತಿಕ ಸ್ಥೈರ್ಯ ತುಂಬಿದರು, ಹಣಕಾಸಿನ ನೆರವು ನೀಡಿದರು. ಅದರ ಫಲವಾಗಿ ನನ್ನ ಕನಸಿನ ಕೂಸು ಮುಂದೆ SVAN PRINTERS ಆಗಿ ರೂಪುಗೊಂಡಿತು.

ಅಶೋಕ್‌ಕುಮಾರ್ ಅವರು ಪ್ರಾರಂಭದಲ್ಲಿ ಒಂದು ಮೊಳೆ ಜೋಡಣೆಯಿಂದ ಮುದ್ರಿಸುವ ಯಂತ್ರದ ಅಚ್ಚುಕೂಟವನ್ನು ಸ್ಥಾಪಿಸಿದರು. ಮುಂದೆ ಅದನ್ನು ವಿಸ್ತರಿಸಿ, ಕಾಲಕಾಲಕ್ಕೆ ನವೀಕರಣ ಮಾಡಿ ಕನ್ನಡ ಸಾಹಿತ್ಯಲೋಕಕ್ಕೆ ಕಲಾತ್ಮಕ ಮುದ್ರಣವನ್ನು ಪರಿಚಯಿಸಿದರು. ಮುದ್ರಣಾಲಯವನ್ನು ಉತ್ತುಂಗಕ್ಕೆ ಒಯ್ಯುತ್ತಲೇ ಕೆಲಸಗಳ ಜೊತೆಜೊತೆಗೆ ‘ಕರ್ನಾಟಕ ಮುದ್ರಣಕಾರರ ಸಂಘ’ದಲ್ಲಿ ಸಕ್ರಿಯವಾಗಿ ಅಲ್ಲಿಯೂ ಜನಮನ್ನಣೆ ಗಳಿಸಿದರು.

ಇದಲ್ಲದೆ KASSIA, FKCCI ಅಂತಹ ಮಹಾಸಂಸ್ಥೆಗಳ ಉನ್ನತ ಹುದ್ದೆಗಳಲ್ಲಿ ಜವಾಬ್ದಾರಿಯನ್ನು ನಿರ್ವಹಿಸುತ್ತಾ ಅಶಕ್ತ ಪೋಷಕ ಸಭಾ, ಲಯನ್ಸ್ ಸಂಸ್ಥೆಗಳ ಮುಖಾಂತರ ಸಾಮಾಜಿಕ ಕಾರ್ಯಗಳನ್ನೂ ಮಾಡುತ್ತಿದ್ದಾರೆ. ದೆಹಲಿಯ ‘ಮಾಸ್ಟರ್ ಪ್ರಿಂಟರ್ಸ್ ಅಸೋಸಿಯೇಷನ್’ ಮುಖಾಂತರ ಕನ್ನಡದ ಮುದ್ರಣ ಕೌಶಲವನ್ನು ಹೊರರಾಜ್ಯ ಮತ್ತು ಹೊರದೇಶಗಳಲ್ಲೂ ಹರಡಿರುವ ಅಶೋಕ್‌ಕುಮಾರ್ ನನಗೆ ಮುದ್ರಣಲೋಕದ ಅಚ್ಚರಿಯಾಗಿ, ಮಿನುಗುವ ನಕ್ಷತ್ರವಾಗಿ ಕಂಡಿದ್ದಾರೆ.

‍ಲೇಖಕರು avadhi

August 3, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

೧ ಪ್ರತಿಕ್ರಿಯೆ

  1. Y.K.Sandhya Sharma

    ಸ್ವ್ಯಾನ್ ಕೃಷ್ಣಮೂರ್ತಿಯವರ ಸರಳಶೈಲಿಯ ಮನಮುಟ್ಟುವ ನಿರೂಪಣೆ ಹೃದಯಸ್ಪರ್ಶಿಯಾಗಿತ್ತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: