ಸುಮಾ ಕಂಚೀಪಾಲ್ ನೆನಪಿಸಿಕೊಂಡ ಮಿಯಾಂವ್..!

-ಸುಮಾ ಕಂಚೀಪಾಲ್

ಮ್ಯಾಂವ್! ಮ್ಯಾಂವ್! ಎಂಬ ಕೂಗು ನಮ್ಮ ಮನೆಯಲ್ಲಿ ಕೇಳದೆ ಎರಡು ವರ್ಷವೇ ಆಗಿಹೋಗಿತ್ತು. ಇತ್ತೀಚಿಗೆ ಒಂದು ಗಂಡು ಬೆಕ್ಕು ಬರುತ್ತಿತ್ತು ಆದರೆ ಅದರದು ಕೂಗಿಲ್ಲಾ ಕದ್ದು ಹಾಲು ಕುಡಿಯುವುದು ಓಡುವುದು ಎರಡೇ ಕೆಲಸ. ಆದರೆ ಈಗ ಹುಟ್ಟಿ ಒಂದು ತಿಂಗಳಾದ ಪುಟ್ಟ ಬೆಕ್ಕಿನ ಮರಿಯೊಂದನ್ನು ನಮ್ಮ ಕೇರಿಯ ಮನೆಯಿಂದ ನಮ್ಮ ಮನೆಗೆ ತಂದೆವು. ನಾನು ಆ ಪುಟ್ಟ ಮರಿಗೆ ಲಿಲ್ಲಿ ಎಂದು ಹೆಸರನ್ನೂ ಇಟ್ಟೆ. ಒಳಗೆ ತರುತ್ತಿದ್ದಂತೆಯೇ ನನ್ನ ತಮ್ಮ ಅದನ್ನು ಚೀಲದಿಂದ ಹೊರತೆಗೆದು ದೇವರ ಕೋಣೆಯೊಳಗೆ ಬಿಟ್ಟ. ಅಜ್ಜ ಬಂದು ಎರಡು ಸುತ್ತು ಒಳಕಲ್ಲು ಸುತ್ತಿಸಿ ಮನೆಗೆ ತರಬೇಕು ಎಂದ. ಅದರಂತೆಯೇ ಒಳಕಲ್ಲು ಎಂದರೆ ರುಬ್ಬುವ ಕಲ್ಲಿನ ಸುತ್ತಲೂ ಅದನ್ನು ಸುತ್ತಿಸಿ ಒಳತರಲಾಯಿತು. ಹಾಗೆ ಮಾಡಿದರೆ ಅದು ಮನೆ ಬಿಟ್ಟು ಹೋಗುವುದಿಲ್ಲ ಎಂಬ ನಂಬಿಕೆಯೊಂದು ನಡೆದು ಬಂದಿದೆ. ‌ನಿಮ್ಮಲ್ಲಿಯೂ ಈ ಪದ್ಧತಿ ಇದೆಯಾ?

ಪಾಪ ಅದಂತೂ ಕಂಗಾಲಾಗಿ ಬಾಲದ ರೋಮವೆಲ್ಲಾ ಹಿಗ್ಗಿ ನಿಂತಿತ್ತು. ನನಗೆ ಅದರ ಕೂಗು ಕೇಳಿಸಿದರೆ ಸಾಕು ಕರುಳೆಲ್ಲಾ ಹಿಂಡುವಂತಹ ಭಾವ ಅದರ ಅಮ್ಮನನ್ನು ಅದು ಕರೆಯುತ್ತಿದೆ. ಹೊಸ ಮನೆಯ ಜಾಗದಲ್ಲಿ ತನಗೆ ಅಡಗಿ ಕೂರಲು ಮೂಲೆ ಮೂಲೆಯನ್ನೆಲ್ಲಾ ಸುತ್ತುತ್ತಿದೆ. ಬಂದು ಅರ್ಧ ತಾಸಾದರೂ ಅದು ಕೂಗುವುದನ್ನೆ ನಿಲ್ಲಿಸಲಿಲ್ಲ. ನನಗನಿಸುತ್ತಿತ್ತು ಅದು ಅಳುತ್ತಿರಬಹುದೆಂದು. ಅದರ ಸಂಕಟ ಸುಳಿಮಿಳಿಗಳನ್ನು ನೋಡಿ ನನಗೂ ಸಣ್ಣಗೆ ಅಳುಬಂದಂತಾಯಿತು. ಹಿಂದೆ ನನ್ನ ಕಣ್ಣೆದುರೇ ಸತ್ತು ಹೋದ ಒಂದು ಮರಿಬೆಕ್ಕು ನೆನಪಿಗೆ ಬಂತು.

ಅದು ನನ್ನ ದೊಡ್ಡಮ್ಮ ತಂದ ಮರಿಯಾಗಿತ್ತು. ನಮ್ಮ‌ ಮನೆಗೆ ತಂದ ಬೆಕ್ಕುಗಳು ಸರಾವಳಿ ಇಲ್ಲ. ತಾವಾಗಿಯೇ ಬಂದ ಬೆಕ್ಕುಗಳು ಮಾತ್ರ ಉಳಿಯುತ್ತವೆ.‌ ಆದರೂ ಅವತ್ತು ಒಂದು ಮರಿಯನ್ನು ತಂದಿದ್ದಾಗಿತ್ತು. ಆ ಮರಿಯನ್ನು ತಂದ ದಿನ ರಾತ್ರಿಯೇ ಒಂದು ಗಂಡು ಬೆಕ್ಕು ಬಂದು ಅದಕ್ಕೆ ಬಲವಾಗಿ ಕಚ್ಚಿ ಅದರ ಸೊಂಟದ ಭಾಗದಿಂದ ಕೆಳಗೆ ಅಂದರೆ ಅದರ ಹಿಂದಿನ ಎರಡೂ ಕಾಲುಗಳು ಶಕ್ತಿ ಕಳೆದುಕೊಂಡಿದ್ದವು. ಅದು ತೆವಳುವುದು ನನ್ನ ಕಣ್ಣಿಗೆ ಕಟ್ಟಿದಂತಿದೆ. ಆ ಗಂಡು ಬೆಕ್ಕಿನ ಕಾಟಕ್ಕೆ ಹೆದರಿ ನಾನು ಅದಕ್ಕೆ ಕಾವಲಾಗಿ ಕಾಯುತ್ತಿದ್ದೆ. ಆದರೆ, ಮರುದಿನ ರಾತ್ರಿ ಅದನ್ನು ನನ್ ಹಾಸಿಗೆಯಲ್ಲೇ ಮಲಗಿಸಿ ಕೊಂಡರೂ ಗಂಡುಬೆಕ್ಕು ಬಂದು ಕತ್ತು ಮುರಿದು ಬಿಸಾಡಿ ಬಿಟ್ಟಿತು.

ಸಾಯುವಾಗಿನ ಅದರ ಕೂಗು ತಪ್ಪಿಸಲು ನಾನು ಪಟ್ಟಪಾಡು. ಕೊನೆ ಉಸಿರು ಹೋಗುವಾಗ ಅದು ನನ್ನನ್ನು ನೋಡುತ್ತಿದ್ದ ಪರಿ ಇಂದಿಗೂ ನೆನಪಲ್ಲಿದೆ. ಮತ್ತೊಮ್ಮೆ ಒಂದು ಬೆಕ್ಕಿಗೆ ಹಾವು ಕಚ್ಚಿ ನಮ್ಮೆದುರಲ್ಲೆ ಬಂದು ಬಾಯಲ್ಲಿ ನೊರೆಬಂದು ಸತ್ತಿತ್ತು ಅದರ ಹೊಟ್ಟೆಯಲ್ಲಿ ಆಗುವ ವೇದನೆಯ ಸದ್ದು ಕಿವಿಗೆ ಕೇಳುತ್ತಿತ್ತು ಆ ಶಬ್ದವನ್ನೂ ನಾನು ಮರೆತಿಲ್ಲ. ಮತ್ತೊಂದು ಬೆಕ್ಕು ತಾನಾಗಿಯೇ ಬಂದು ತುಂಬಾದಿನ ಉಳಿದಿತ್ತು. ಅದರಲ್ಲಿ ಒಂದು ವಿಶೇಷವಿತ್ತು ಅದಕ್ಕೆ ಬಾಲವಿರಲಿಲ್ಲ. ಅದು ಬಾವಿಯಲ್ಲಿ ಬಿದ್ದು ಸತ್ತಿತ್ತು. ಮತ್ತೊಂದು ಬಿಳಿ ಬೆಕ್ಕನ್ನು ನಾಯಿ ಹಿಡಿದು ಸಾಯಿಸಿತ್ತು. ಹೀಗೆ ಹಲವಾರು ಬೆಕ್ಕುಗಳು ಸಾಯುವ ಕಾಲಕ್ಕೆ ನಮ್ಮಮನೆಗೆ ಬಂದು ಕಟ್ಟಿಗೆ ಇಡುವ ಜಾಗದಲ್ಲಿ ಸಾಯುತ್ತಿದ್ದವೂ.

ಇದನ್ನೆಲ್ಲಾ ನೋಡಿ ನಮ್ಮ ತಾಯಿ ಇದು ಬೆಕ್ಕುಗಳ ಪುಣ್ಯಕಾಶಿ ಇರಬೇಕು ನಮ್ಮ ಕಣ್ಣಲ್ಲಿ ನೀರುಹಾಕಿಸಲು ಇಲ್ಲೇ ಬಂದು ಸಾಯುತ್ತಾವೆ ಎನ್ನುತ್ತಿದ್ದರು. ನೋಡಿ ನಮ್ಮ ಮನೆಗೆ ಹೊಸದಾಗಿ ಬಂದ ಲಿಲ್ಲಿಯ ಕತೆ ಹೇಳ ಹೊರಟವಳು ನಾನು..! ಇಷ್ಟೆಲ್ಲ ಕತೆಯಾದ ಮೇಲೆ ಬೆಕ್ಕುಗಳೇ ಇರದಿದ್ದರೂ ಪರವಾಗಿಲ್ಲ ಅವುಗಳನ್ನು ತಂದು ನಾವೇ ಕೊಂದಂತಾಗುವುದು ಬೇಡ ಎಂದು ಎರಡು ವರ್ಷ ಯಾವ ಬೆಕ್ಕನ್ನೂ ತರಲಿಲ್ಲ ಈಗ ಮತ್ತೆ ಲಿಲ್ಲಿಯನ್ನು ತಂದಿದ್ದೇವೆ. ಈಗಲೂ ಒಂದು ಗಂಡು ಬೆಕ್ಕಿನ ಕಾಟ ಇದೆ ಈ ಮರಿಗೆ. ಅದೇಕೇ ಬೆಕ್ಕುಗಳು ಬೆಕ್ಕನ್ನೇ ಕೊಲ್ಲುತ್ತವೆ ಎಂಬ ಪ್ರಶ್ನೆಗೆ ಉತ್ತರ ಗೊತ್ತಿಲ್ಲ ನಿಮಗೇನಾದರೂ ಗೊತ್ತಾ?

ಈ ನನ್ನ ಲಿಲ್ಲಿಗೆ ಹಾಲು ಕುಡಿಯಲೂ ಬರುವುದಿಲ್ಲ. ಪಾಪ ಅವಳ ಅಮ್ಮನನ್ನು ಬಿಟ್ಟು ಒಂದು ದಿನವೂ ಉಳಿದವಳಲ್ಲ. ನಾವೇ ಒಂದು ಬಟ್ಟೆಯನ್ನು ಹಾಲಿನಲ್ಲಿ ಅದ್ದಿ ಬಾಯಿಗಿಟ್ಟರೆ ಚೀಪುತ್ತಾಳೆ. ಅಲ್ಲಿ ಇವಳ ಅಮ್ಮನಿಗೆ ಎಷ್ಟು ಸಂಕಟ ಆಗಿರಬಹುದು? ಆ ಬೆಕ್ಕೂ ಸಹ ತನ್ನ ಮರಿ ಕಾಣದಾಗಿ “ಮ್ಯಾಂವ್” ಗುಟ್ಟಿ ಹುಡುಕುತ್ತಿರಬೇಕು. ತಾಯಿ ಬೆಕ್ಕಿಗೆ ಕೆಚ್ಚಲು ಬೇನೆ ಬರುತ್ತದೆ ಇದೊಂದೆ ಮರಿ ಇರುವುದು ಎಂದು ಅಮ್ಮ ಹೇಳುತ್ತಿದ್ದಳು. ಲಿಲ್ಲಿಯೊಟ್ಟಿಗೆ ನನಗೆ ಲಿಲ್ಲಿಯ ಅಮ್ಮನದೂ ಚಿಂತೆಯಾಗುತ್ತಿದೆ.

ಗಂಡು ಬೆಕ್ಕು ಬರಬಹುದು ಎಂಬ ಹೆದರಿಕೆಗೆ‌. ಕನ್ನುಗಳಿರುವ ಬೆತ್ತದ ಬುಟ್ಟಿಯಡಿ ಮೆತ್ತನೆಯ ಹಾಸಿಗೆ ಹಾಸಿ ಮುಚ್ಚಿಟ್ಟಿದೇನೆ. ಆದರೂ, ಅವಳನ್ನು ಕೂಡಿಹಾಕಿದ್ದೇನೆ ಎಂಬ ಬೇಸರ ನನಗಾಗುತ್ತಿದೆ. ನನ್ನೊಬ್ಬಳನ್ನು ಕಂಡರೆ ಸ್ವಲ್ಪ ಆಡಲು ಬರುತ್ತಾಳೆ. ಪೊರಕೆ ಕಡ್ಡಿ, ದಾರ, ಗೋಲಿ ಇವಗಳನ್ನು ಉರುಳಿಸಿ ದೂರದಿಂದಲೇ ಅವಳನ್ನು ಒಲಿಸಿಕೊಂಡಿದ್ದೇನೆ ಹತ್ತಿರ ಹೋದರೆ ಹೆದರುತ್ತಾಳೆ. ಆದರೂ ಆಗಾಗ ಅಮ್ಮನನ್ನು ಕರೆಯುತ್ತಾಳೆ ಪಾಪ ಅಳುತ್ತಾಳೆ. ಮಗು ಹುಟ್ಟಿದ ತಕ್ಷಣ ತಾಯಿ ತೀರಿಕೊಂಡವರೆಲ್ಲ ಹೇಗಿರುತ್ತಾರೋ ಏನೋ? ಮನೆ ಬಿಟ್ಟು ಹೋದವರು ಹೇಗೆ ಬದುಕುತ್ತಾರೆ? ತವರು ಮನೆಬಿಟ್ಟು ಗಂಡನ ಮನೆಗೆ ಹೋದಾಗಿನ ಕಳವಳ ಹೇಗಿರುತ್ತದೆ? ಆಕಳು-ಕರು, ನಾಯಿ-ಮರಿ, ಹೀಗೆ ಅಗಲುವಿಕೆ ಎಲ್ಲದರಲ್ಲೂ ಇದ್ದೇ ಇರುತ್ತದೆಯಾ? ಎಷ್ಟೊಂದು ಯೋಚನೆಯನ್ನು ಹುಟ್ಟಿಸಿಬಿಟ್ಟಳು ಲಿಲ್ಲಿ. ನಿಮಗೆ ಗೊತ್ತಾ ಈಗ ಲಿಲ್ಲಿ ಕಣ್ಣು ಮುಚ್ಚಿ ಬೆಚ್ಚಗೆ ಬುಟ್ಟಿಯ ಅಡಿಯಲ್ಲಿ ಮಲಗಿದ್ದಾಳೆ. ಅವಳಿಗೆ ನೆಮ್ಮದಿ ನಿದ್ರೆಯಲ್ಲಾದರೂ ದೊರಕಿತಲ್ಲ.

‍ಲೇಖಕರು nalike

August 4, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: