ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೋತ ಹೆಜ್ಜೆಗಳ‌ಲಿ

-ದಾಕ್ಷಾಯಣಿ ಮಸೂತಿ

ಅಪ್ಪ ರೈತ

ಬಾನಿನೆಡೆಗೆ ನೆಟ್ಟ
ಕಣ್ಣುಗಳಲಿ‌ ದುಗುಡದ
ಛಾಯೆಯ ಹೊರತು
ಮತ್ತೇನಿರಲಿಲ್ಲ!
ಬೆಂಬಲ ಬೆಲೆಗೆ ಕಾದು
ಸೋತ ಹೆಜ್ಜೆಗಳ‌ಲಿ

ಮಳೆ-ಬೆಳೆ-ಬದುಕುಗಳು
ಹೆಚ್ಚು- ಕಡಿಮೆಯ
ಅತಂತ್ರತೆಯ
ತೂಗು ಉಯ್ಯಾಲೆಯಲಿ
ಸದಾ ತೂಗುತ್ತಿರುತ್ತವೆ
ಅನ್ನದಾತನನ್ನು !

ಆ ದಿನಗಳು
ಹಸಿ ಹಸಿಯಾಗಿಯೇ
ಇವೆ
ರೈತ ಅಪ್ಪನ
ಹಾಡು-ಪಾಡುಗಳು

ಆ ಕಾಳರಾತ್ರಿ ಪೂರ
ಧೋ ಧೋ ಸುರಿದ
ಮಳೆ
ಅಪ್ಪನನ್ನು ಇಡೀ ರಾತ್ರಿ
ಕಣ್ಣು ಮುಚ್ಚದಂತೆ
ಮಾಡಿ ಹಠ ಸಾಧಿಸಿ
ಗೆದ್ದಿತ್ತು

ವಾರದ ಹಿಂದೆ
ಆಕಾಶ‌ ನೋಡುತ್ತಿದ್ದ
ತೆನೆಗಳು
ನೆಲಕ್ಕೆ ಮಕಾಡೆ ಮಲಗಿ
ಅಲ್ಲೇ ಮೊಳಕ ಒಡೆದಿದ್ದವು
ನಿಷ್ಕರುಣೆಯಿಂದ!

ಭರಪೂರ ಬೆಳೆಯ
ಮತ್ತೆ ಬೆಲೆಯ‌ ಕನಸು
ಅಕಾಲಿಕ ಅತಿಥಿಮಳೆಗೆ
ಚೂರಾಗಿ
ತಣ್ಣಗೆ
ಮುನ್ನುಡಿಯಾಗಿತ್ತು
ಮತ್ತೊಂದು ಸಾಲಕ್ಕೆ

ಎದೆಗುಂದಲಿಲ್ಲ ನನ್ನಪ್ಪ
ಮತ್ತೊಂದು ಮಳೆಗೆ
ಕಾಯುತ್ತಿದ್ದ
ಉತ್ತಲು- ಬಿತ್ತಲೂ
ಲಾಭ- ನಷ್ಟಗಳ ಲೆಕ್ಕಾಚಾರದಲ್ಲಿ
ಅನ್ನ ದೇವರನ್ನು ಬೆಳೆಯುವ
ಕಾಯಕ ಬಿಡಲಾದೀತೇ?
ಎಂದ ಮಾತಿಗೆ
ದೇವರೂ ಕೂಡ ತಲೆಬಾಗಿದ್ದ!

‍ಲೇಖಕರು Admin

13 August, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading