ಡಾ. ಸತ್ಯಮಂಗಲ ಮಹಾದೇವ ಅವರು ಕಾವ್ಯ, ವಿಮರ್ಶೆ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದು 12ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
ಇವರ ಪ್ರಸಿದ್ಧ ಕವನ ಸಂಕಲನಗಳಾದ ‘ಯಾರ ಹಂಗಿಲ್ಲ ಬೀಸುವ ಗಾಳಿಗೆ’ ಮತ್ತು ‘ಪಂಚವರ್ಣದ ಹಂಸ’ ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿವೆ.
ಕೇಂದ್ರ ಸಾಹಿತ್ಯ ಅಕಾಡೆಮಿಯ ರಾಷ್ಟ್ರೀಯ ಯುವ ಬರಹಗಾರರ ಸಮ್ಮೇಳನಗಳಲ್ಲಿ ಕನ್ನಡದ ಹಿರಿಮೆಯನ್ನು ಪಸರಿಸಿರುವ ಇವರ ಕವಿತೆಗಳು ವಿವಿಧ ವಿಶ್ವವಿದ್ಯಾಲಯಗಳ ಪದವಿ ತರಗತಿಗಳಿಗೆ ಪಠ್ಯವಾಗಿವೆ.
ಶಿಕ್ಷಕ ಪ್ರಶಸ್ತಿ ವಿಜೇತರಾದ ಇವರು ಬೆಂಗಳೂರು ನಗರ ವಿಶ್ವವಿದ್ಯಾಲಯದ ವಿವಿಧ ಶೈಕ್ಷಣಿಕ ಸಮಿತಿಗಳ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ತುಮಕೂರು ಜಿಲ್ಲೆಯವರಾಗಿದ್ದು, ಪ್ರಸ್ತುತ ಬೆಂಗಳೂರಿನ ಶೇಷಾದ್ರಿಪುರಂ ಸಂಜೆ ಪದವಿ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇನ್ನು ಮುಂದೆ ಅವಧಿಯಲ್ಲಿ ಕವಿತೆಗಳನ್ನು ಕುರಿತ ಹೊಸ ಹೊಳಗಿನ’ಬೆಳಕಿನ ಜಾಡು’ ಅಂಕಣದೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ.
ಅಂಕಣ – 4
ಕತ್ತಲೆಯೊಂದಿಗೆ ಹೋರಾಟ : ಬೆಳಕಿನೊಂದಿಗೆ ಸಂವಾದ ನಡೆಸುವ
ನಾಡೋಜ ಬರಗೂರು ರಾಮಚಂದ್ರಪ್ಪನವರ ಕವಿತೆ.
ನನಗೆ ಗೋರಿಯ ತೋಡಿ ನಗುತಿರುವ ಬದುಕೇ
ನಗುವ ನಿಲ್ಲಿಸು ನೀನು ಕೆಣಕಬೇಡ
ಬಾಳೆ, ತೆಂಗಿನಕಾಯಿ, ಹೂವೆಲ್ಲ ಸಿಂಗರಿಸಿ
ಗೋರಿ ಬದಿಯಲ್ಲಿ ನನಗೆ ಕಾಯಬೇಡ
ಗೋರಿ, ಬೆವರು ನನ್ನ ದೇವರು, ಬರಗೂರು.
ಈ ಪದ್ಯವನ್ನು ಓದುವಾಗ ‘ಬದುಕು’ ಎನ್ನುವ ನಿತ್ಯಜೀವನದ ಸಂದರ್ಭಗಳು ನಮ್ಮ ಪ್ರಯತ್ನಗಳ ಹೊರತಾಗಿಯೂ ಜೀವನ ನಿರ್ವಹಣೆಗೆ ಪ್ರತಿಕೂಲವಾಗಿ ಬಂದಾಗ ಅವುಗಳನ್ನು ಮುಖಾಮುಖಿಯಾಗುವ ಧೈರ್ಯವನ್ನು ಹಾಗೂ ಕತ್ತಲೆಯೊಂದಿಗೆ ಹೋರಾಟ : ಬೆಳಕಿನೊಂದಿಗೆ ಸಂವಾದ ನಡೆಸುವ ಎದೆಗಾರಿಕೆಯನ್ನು ತಂದುಕೊಡುತ್ತದೆ.
“ಬೆವರು ನನ್ನ ದೇವರು” ಬಡವರ ಸಂಗಾತಿ ನಾಡೋಜ ಬರಗೂರು ರಾಮಚಂದ್ರಪ್ಪ ಅವರ ಸಮಗ್ರಕಾವ್ಯ ಸಂಕಲನದಲ್ಲಿ ಈ ಪದ್ಯವಿದ್ದು. ಬೆವರಿನ ಸಂಸ್ಕೃತಿಯನ್ನು ಸದಾ ಧ್ಯಾನಿಸುವ, ನೊಂದವರ ಜೊತೆಗೆ ಇದ್ದು ತಾನು ಎತ್ತರಕ್ಕೆ ಬೆಳೆದರೂ ಬಡವರ ಬದುಕಿನಲ್ಲಿ ಸಂಗಾತಿಯಾಗಿ, ಸದಾ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪ್ರತಿಪಾದಿಸುತ್ತಾ, ಕನ್ನಡದ ಸಾಕ್ಷಿ ಪ್ರಜ್ಣೆಯಾಗಿರುವ ಬಡವರ ಸಂಗಾತಿ ನಾಡೋಜ ಬರಗೂರು ರಾಮಚಂದ್ರಪ್ಪ ಅವರ ಈ ಕವಿತೆ ಅವರೊಳಗೊಬ್ಬ ಹೋರಾಟಗಾರ, ಕವಿ, ಸಾಹಿತಿ, ಚಲನಚಿತ್ರ ನಿರ್ದೇಶಕ, ಜೊತೆಗೆ ತಮ್ಮ ನಿತ್ಯ ಜೀವನವನದ ಸವಾಲುಗಳುಗಳನ್ನು ನಿರ್ವಹಿಸುವ ಅಪ್ಪಟ ಮನುಷ್ಯನನ್ನು, ಜೀವನದಲ್ಲಿ ಎಂತದ್ದೇ ಸಂದರ್ಭ ಬಂದರೂ ಅದನ್ನು ಎದುರಿಸಿ ಮುನ್ನುಗ್ಗುವ ಮತ್ತು ಆ ಬದುಕಿಗೆ ತನ್ನ ಜೀವನೋತ್ಸಾಹದ ನೆಲೆಯಲ್ಲಿ ಆ ಸವಾಲುಗಳೊಡನೆ ಸಂವಾದ ನಡೆಸುವ ಶಕ್ತಿ ಒಬ್ಬ ದಾರ್ಶನಿಕ ಹಾಗೂ ಅನುಭಾವಿಯೊಬ್ಬನಿಗೆ ಮಾತ್ರ ಸಾಧ್ಯವಾಗುತ್ತದೆ. ಎನ್ನುವುದನ್ನು ಬರಗೂರರಲ್ಲಿ ಕಾಣಬಹುದು . ಭಾರತೀಯ ನೆಲದ ಮನುಷ್ಯರ ಜೀವನಾಡಿಯಾದ ಶ್ರಮಸಂಸ್ಕೃತಿಯನ್ನು ತನ್ನ ನಡೆ, ನುಡಿ, ಆದರ್ಶವಾಗಿ ವ್ರತದಂತೆ ಪಾಲಿಸುವ ಒಬ್ಬ ಅನುಭಾವಿ ನಾಡೋಜ ಬರಗೂರು ರಾಮಚಂದ್ರಪ್ಪ ಅವರು ಎಂಬುದು ನನ್ನ ಅನುಭವದ ಮಾತು.
೫ ಡಿಸೆಂಬರ್ ೨೦೧೬ ರಾಯಚೂರಿನಲ್ಲಿ ನಡೆದ ೮೨ನೇ ಕನ್ನಡ ಸಾಹಿತ್ಯ ಸಮ್ಮೇಳನ ಕೊನೆಯ ದಿನವಾದ ಭಾನುವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಬರಗೂರರ ಮಾತುಗಳನ್ನು ನೋಡಿ
“ಕನಸು ಕಾಣುವುದನ್ನು ಬಿಡಬೇಡಿ: ‘ಏಕಲವ್ಯನಂತೆ ಬೆಳೆದು ಬಂದ ನಾನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗುವ ಕನಸು ಎಂದೂ ಕಂಡಿರಲಿಲ್ಲ. ಬೆವರಿನ ಸಂಸ್ಕೃತಿಯ ಹಿನ್ನೆಲೆಯಿಂದ ನಾವೂ ಕೂಡ ಇಂತಹ ಸ್ಥಾನ ಏರಬಹುದು ಎಂಬುದಕ್ಕೆ ನಾನೇ ಉದಾಹರಣೆ. ಹೀಗಾಗಿ ಕನಸು ಕಾಣುವುದನ್ನು ಯಾರೂ ಬಿಡಬಾರದು. ಮೂರನೇ ತರಗತಿಯಷ್ಟೇ ಓದಿದ್ದ ಡಾ. ರಾಜ್‌ಕುಮಾರ್ ಅವರಿಗೆ ಜಾತಿ ಹಿನ್ನೆಲೆ ಇರಲಿಲ್ಲ, ಹಣವೂ ಇರಲಿಲ್ಲ. ಆದರೆ, ಅವರ ಶ್ರಮ, ಶ್ರದ್ಧೆ ಮತ್ತು ಸವಾಲುಗಳನ್ನು ಎದುರಿಸಿದ ರೀತಿಯೇ ಅವರು ಅತ್ಯಂತ ಉನ್ನತ ಸ್ಥಾನಕ್ಕೇರಲು ಸಾಧ್ಯವಾಯಿತು’ ಎಂದು ಬರಗೂರು ರಾಮಚಂದ್ರಪ್ಪ ಅವರು ಹೇಳಿದರು” ಎನ್ನುವ ಈ ಮಾತುಗಳನ್ನು ಓದುವಾಗ ಬದುಕನ್ನು ಅವರು ನೋಡಿದ ದೃಷ್ಠಿಕೋನ ಓದುಗರಿಗೆ ಅರ್ಥವಾಗದೆ ಇರದು.
ಗೋರಿ ಕವಿತೆಯ ಅಂತರಾಳದ ಮೆಟ್ತಿಲುಗಳನ್ನು ಇಳಿಯುತ್ತಾ ಹೋದಂತೆಲ್ಲಾ ಬರಗೂರರ ಛಲದ ಜಲ ನಮ್ಮನ್ನು ತೋಯಿಸದೆ ಬಿಡದು. ಈ ಕೆಳಗಿನ ಸಾಲುಗಳನ್ನು ಗಮನಿಸಿ.
ಎಷ್ಟು ಅಡಿ ಉದ್ದವಿದೆ ಎಷ್ಟು ಅಡಿ ಆಳವಿದೆ
ನೀನು ಅಗೆದಿರುವ ಗೋರಿ ಹೇಳು ಬದುಕೆ
ಎಷ್ಟೇ ಇದ್ದರೂ ಉದ್ದ, ಎಷ್ಟೇ ಇದ್ದರೂ ಆಳ
ಮೀರಿ ಬೆಳೆಯುವ ಬಯಕೆ, ತಾಳು ಬದುಕೆ.
ಬಡವರಿಗೆ ಬದುಕು ಎನ್ನುವ ಸವಾಲಿಗೆ ಸವಾಲು ಹಾಕುವುದು ಅವರ ಹುಟ್ಟುಗುಣ ಆದರೆ ಎಲ್ಲಾ ಬಡವರಿಗೂ ಅಲ್ಲ ಎನ್ನುವುದನ್ನು ಎಚ್ಚರಿಕೆಯಿಂದ ಗಮನಿಸುತ್ತಲೇ ಈ ಸಾಲುಗಳನ್ನು ಓದುವಾಗ ಜನಸಾಮಾನ್ಯರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಕಾಡುವ ಬದುಕಿನ ಆಳ ಅಗಲಗಳನ್ನು ಪ್ರಶ್ನಿಸುವ ಸಂವೇದನೆಯನ್ನು ನಾವು ಮರ್ಗದರ್ಶಿಯಾಗಿ ತೆಗೆದುಕೊಳ್ಳಬೇಕು ಆಗ ಸಮಸ್ಯೆಗಳು ಇದ್ದಾಗ್ಯೂ ಅವುಗಳನ್ನು ಅರ್ಥಮಾಡಿಕೊಂಡು ಅವುಗಳನ್ನು ಮೀರಿ ಬೆಳೆಯುವ ಬಯಕೆಯು ಒಡಮುಡಿಸುವ ಜೀವಜಲವಾಗಿ ಈ ಕವಿತೆ ನಮ್ಮನ್ನು ಎಚ್ಚರಿಸುತ್ತದೆ.
ಕವಿಗೆ ಹಾಗೂ ತಾನು ಬರೆಯುವ ಕವಿತೆಗೆ ಸಾಮಾಜಿಕ ಜವಾಬ್ದಾರಿ ಇರಬೇಕು ಎಂಬುದು ಇಂದಿನ ವರ್ತಮಾನದ ಬರಹಗಾರರ ಅರ್ಥಮಾಡಿಕೊಳ್ಳಬೇಕು. ಏಕೆಂದರೆ ನಿತ್ಯ ಜೀವನದ ಅಸಮಾನತೆಯಲ್ಲಿ ಬೆಂದು, ಸಮಸ್ಯೆಗಳ ಮಳೆಯಲ್ಲಿ ತೋಯ್ದು, ಬದುಕಿನ ಬಿರುಗಾಳಿಯಲ್ಲಿ ತೇಲುತ್ತಿರುವ ಆಧುನಿಕ ಜಗತ್ತಿನ ಪ್ರತಿಯೊಬ್ಬ ಅಸಹಾಯಕ ವ್ಯಕ್ತಿಗೂ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸುತ್ತಲೇ ಸಮಸ್ಯೆಗಳನ್ನು ತನ್ನ ಆತ್ಮಸ್ಥೆರ್ಯವೆಂಬ ಜೀವಜಲದಲ್ಲಿ ಮೀಯಿಸುವ ಎದೆಗಾರಿಕೆಯನ್ನು ಕವಿಗಳು ಧರಿಸಬೇಕು ಹಾಗೂ ಕವಿತೆಗೂ ಆ ಎದೆಗಾರಿಕೆಯನ್ನು ತೊಡಿಸಬೇಕು ಎಂದು ಬರಗೂರರ ಜೀವನ ನಮಗೆ ದರ್ಶನಮಾಡಿಸುತ್ತದೆ.
ಸಾಹಿತ್ಯದಿಂದ ಬೆಂಕಿಯಲ್ಲ ಬೆಳಕು ಬರಬೇಕು ಎನ್ನುವ ಮಾತೊಂದಿದೆ. ಬದುಕು ಸಾಹಿತ್ಯದ ಮೂಲದ್ರವ್ಯವಾಗಬೇಕಾದಾಗ ತನ್ನ ಬದುಕಿಗೇ ಸವಾಲನ್ನು ಎಸೆಯುವ ದೃಢಸಂಕಲ್ಪ ಮಾಡಿದ ವ್ಯಕ್ತಿ ತನ್ನ ಸಮಸ್ಯೆಗಳು ತನ್ನನ್ನು ಸುಡುವಾಗ ಸಮಸ್ಯೆಗಳಿಗೆ ತಾನೇ ಬೆಂಕಿಯಚೆoಡು ಆಗಬೇಕಾಗುತ್ತದೆ. ಪಂಚಭೂತಗಳಲ್ಲಿ ಶ್ರೇಷ್ಠತೆ ಪಡೆದ ಬೆಂಕಿಗೆ ಮೈಯೆಲ್ಲಾ ನಾಲಿಗೆ, ಜೀವ ಅಥವಾ ಜಡ ಬೇಧವಿಲ್ಲದೆ ಎಲ್ಲವನ್ನೂ ತನ್ನೋಳಗೆ ಸೇರಿಸಿಕೊಳ್ಳುವ ಗುಣ ಬೆಂಕಿಯದು. ಆದರೆ ಅದೇ ಬೆಂಕಿ ತಾನು ಉರಿದರೂ ಜಗತ್ತಿಗೆ ಬೆಳಕು ಕೊಡುತ್ತದೆ ಎನ್ನುವುದನ್ನು ಮರೆಯಬಾರದು. ಹೀಗೆ ಬರಗೂರು ರಾಮಚಂದ್ರಪ್ಪನವರ ಈ ಕವಿತೆಯು ‘ಗೋರಿ’ಯ ಜೊತೆ ಸಂವಾದ ನಡೆಸುತ್ತಾ ಸವಾಲಿಗೆ ಸವಾಲನ್ನು ಎಸೆಯುವ ಬೆಂಕಿಯ ಗಟ್ಟಿತನ ಮತ್ತು ಬೆಳಕು ಕೊಡುವ ತಾಯ್ತನ ಎರಡನ್ನು ಒಳಗೊಂಡಿದೆ.
ಈಗ ಹೇಳು ಬದುಕೆ, ಎಲ್ಲಿದೆ ನನ್ನ ಪ್ರೀತಿಯ ಗೋರಿ
ಅದರ ಜೊತೆ ಮಾತನಾಡುತ್ತೇನೆ; ಮಲಗುತ್ತೇನೆ
ಗೋರಿಯೊಳಗೊಂದು ಗೂಡುಕಟ್ಟಿ
ಚಿಲಿಪಿಲಿ ಹಾಡುತ್ತೇನೆ.
ಪದ್ಯದ ಕೊನೆಯಸಾಲುಗಳು ಸವಾಲುಗಳ ಜೊತೆ ಬದುಕುವ ಎದೆಗಾರಿಕೆಯ ಮನಸ್ಸಿನೊಳಗೆ ನೋವು ಮತ್ತು ಹತಾಶೆ ಮಾತ್ರ ಇರುತ್ತದೆ ಎಂದು ಮೇಲ್ನೋಟಕ್ಕೆ ಮತ್ತು ಸರ್ವೇಸಾಮಾನ್ಯವಾಗಿ ನಾವು ಒಂದು ಪಟ್ಟಿಮಾಡುವ ಜನರ ಗುಂಪನ್ನು ಕುರಿತು ಯೋಚಿಸುತ್ತೇವೆ ಆದರೆ, ಬರಗೂರರು ವಿಭಿನ್ನವಾಗಿ ಕಾಣುವುದು ಇಲ್ಲಿ ತಮ್ಮ ಚಿಂತನೆ ಮತ್ತು ಆಲೋಚನೆಯಲ್ಲಿ ಸ್ಪಷ್ಟತೆಯನ್ನು ಮತ್ತು ಗುರಿಯಲ್ಲಿ ನಿರ್ಧಿಷ್ಟತೆಯನ್ನು ಹೊಂದಿರುವ ಅವರ ಗುಣಗ್ರಾಹಿ ವ್ಯಕ್ತಿತ್ವ ಈ ಪದ್ಯದ ಕೊನೆಯಲ್ಲಿ ನಮಗೆ ಸಿಗುತ್ತದೆ.
ಗೋರಿಯೊಳಗೆ ಗೂಡು ಕಟ್ಟುವ ಮತ್ತು ಅಲ್ಲಿ ಮಾನವತೆಯ ಜೀವದ್ರವ್ಯವನ್ನು ಸೃಜಿಸಿ ಚಿಲಿಪಿಲಿ ಉಲಿಯುವ ಮನಸ್ಸು ಇದೆಯಲ್ಲಾ ಅದೇ ಬರಗೂರರ ಶಕ್ತಿ.
ಇನ್ನೊಂದು ಮಾತನ್ನು ನಾನು ಹೇಳಬೇಕು ವಿಶ್ವಮಾನವ ಪ್ರಜ್ಞೆಯು “ಮನುಷ್ಯಜಾತಿ ತಾನೊಂದೆ ವಲಂ” ಎಂದ ಆದಿಕವಿ ಪಂಪನ ನಂತರದಲ್ಲಿ “ಇಲ್ಲಿ ಯಾರೂ ಮುಖ್ಯರಲ್ಲ ಯಾರೂ ಅಮುಖ್ಯರಲ್ಲ” ಎನ್ನುವ ಕುವೆಂಪು ಅವರಲ್ಲಿ ಹೊಸ ಹುಟ್ಟು ಪಡೆದು ಕುವೆಂಪು ಅವರ ನಂತರದಲ್ಲಿ ಬರಗೂರು ರಾಮಚಂದ್ರಪ್ಪನವರಲ್ಲಿ “ಬ್ರಹ್ಮಪುತ್ರ, ಗಂಗಾನದಿಗಳಷ್ಟೆ ಶ್ರೇಷ್ಠವಲ್ಲ, ನಮ್ಮೂರಿನ ಹಳ್ಳ- ಕೊಳ್ಳಗಳೂ ಶ್ರೇಷ್ಠ. ಶ್ರೀಗಂಧ ಮಾತ್ರವಲ್ಲ, ನಮ್ಮೂರಿನ ಜಾಲಿ ಮರವೂ ಶ್ರೇಷ್ಠ. ಕೋಗಿಲೆ ಅಷ್ಟೇ ಅಲ್ಲ, ನಮ್ಮೂರಿನ ಕಾಗೆಯೂ ನನಗೆ ಶ್ರೇಷ್ಠವೇ ಆಗಿದೆ`. ಎನ್ನುವ ಮಾತಿನಲ್ಲಿ ವರ್ತಮಾನದ ವಿಶ್ವಮಾನವ ಸಂದೇಶವಾಗಿ ನನಗೆ ಕಾಣುತ್ತದೆ.
ಸಾಹಿತ್ಯದ ಬದುಕು ಸಮಾಜಕ್ಕೆ ಬೆಳಕು ಆಗುವ ಶತಮಾನಕ್ಕೆ ಒಬ್ಬರಂತೆ ಕನ್ನಡದ ನೆಲದಲ್ಲಿ ಸಂಭವಿಸುವ ವ್ಯಕ್ತಿವಿಸ್ಮಯ ಬರಗೂರರಂತಹ ಸ್ಥಿತಪ್ರಜ್ಞ ಸಾಹಿತಿಯಲ್ಲಿ ಮಾತ್ರ ಸಾಧ್ಯ ಎನ್ನುವುದು ಅವರ ಒಳಹೊರಗನ್ನು ಓದಿದವರಿಗೆ ಮನಗಾಣುವ ಮಾತಾಗಿದೆ.






0 Comments