-ನಾ ದಿವಾಕರ
ಹೃದಯಗಳ ಬೆಸೆಯುವ ಮನುಜ ಪ್ರೀತಿಯ ಸುಂದರ ರಂಗಾಭಿವ್ಯಕ್ತಿ ‘ಅಮೃತಬಳ್ಳಿ ಕಷಾಯʼ
ಸಾಮಾಜಿಕವಾಗಿ ಅವ್ಯಕ್ತ ಎನಿಸುವ, ಸಾಂಸ್ಕೃತಿಕವಾಗಿ ಅದೃಶ್ಯವಾಗಿರುವ, ಸಾಹಿತ್ಯಿಕವಾಗಿ ಅಸ್ಪಷ್ಟ ಎನಿಸುವ ಯಾವುದೇ ಸಾಮಾಜಿಕ ವಿದ್ಯಮಾನಗಳನ್ನು ಹಾಗೂ ಸಾಮಾನ್ಯ ಜನಜೀವನದಲ್ಲಿ ಅಮರ‍್ತ ಎನಿಸುವಂತಹ ವಿಚಾರಗಳನ್ನು ಮೂರ್ತರೂಪದಲ್ಲಿ ಜನರ ಮುಂದಿರಿಸಿ, ಅಲ್ಲಿ ಅಂತರ್ಗತವಾಗಿರಬಹುದಾದ ಗೂಡಾರ್ಥಗಳನ್ನು ಹೊರಗೆಳೆದು ಮತ್ತೆ ಮತ್ತೆ ಮುರಿದು ಕಟ್ಟುವ ಒಂದು ಕಲೆ ಇದೆಯೆಂದಾದರೆ ಅದು ರಂಗಭೂಮಿ ಮಾತ್ರ. ದೃಶ್ಯ ಮಾಧ್ಯಮದ ನಾನಾ ರೂಪಗಳ ಪೈಕಿ ಅತ್ಯಂತ ಪರಿಣಾಮಕಾರಿಯಾಗಿ ಜನಮಾನಸದ ಎದೆಯ ಕದ ತಟ್ಟಿ ಒಳನುಗ್ಗುವ ಒಂದು ಸುಂದರ ಅಭಿವ್ಯಕ್ತಿಯ ಮಾದರಿಯನ್ನು ರಂಗಭೂಮಿ ಒದಗಿಸಿದೆ. ಖ್ಯಾತ ನಾಟಕಕಾರ ವಾಮನ್ ಕೇಂದ್ರೆ ರಂಗಭೂಮಿಯನ್ನು ವರ್ತಮಾನದ ಕನ್ನಡಿ, ಗತದ ಭೂತಗನ್ನಡಿ ಭವಿಷ್ಯದ ತೋರುಗನ್ನಡಿ ಎಂದು ವ್ಯಾಖ್ಯಾನಿಸುತ್ತಾರೆ.
ಇದು ಉತ್ಪ್ರೇಕ್ಷೆಯೇನೂ ಅಲ್ಲ. ಕೇರಳ , ಮುಂಬೈ ಇನ್ನು ಕೆಲವು ಪ್ರದೇಶಗಳಲ್ಲಿ ರಂಗ ಚಟುವಟಿಕೆ ಎನ್ನುವುದು ನಿತ್ಯ ಕಾಯಕವಾಗಿರುವುದನ್ನು ಗಮನಿಸಿದಾಗ ಈ ಮಾತುಗಳು ಸತ್ಯ ಎನಿಸುತ್ತದೆ. ಮುಂಜಾನೆ ಘಟಿಸುವ ಪ್ರಸಂಗಗಳನ್ನು ಆಧರಿಸಿ ಸಂಜೆಗೆ ರಂಗದ ಮೇಲೆ ಪ್ರದರ್ಶಿಸುವ ಒಂದು ಕಲೆಯನ್ನು ಈ ರಾಜ್ಯಗಳಲ್ಲಿ ಕಾಣಬಹುದು. ಹಾಗೆಯೇ ಸಾಹಿತ್ಯದಲ್ಲೂ ಜನಸಾಮಾನ್ಯರ ನಿತ್ಯ ಬದುಕಿನ ಸಂಕಟಗಳನ್ನು, ಸವಾಲುಗಳನ್ನು ಸಮಾಜದ ಮುಂದಿರಿಸುವ ಪ್ರಯತ್ನಗಳನ್ನು ಕತೆ, ಕಾವ್ಯಗಳಲ್ಲಿ ಗುರುತಿಸಬಹುದು. ೧೯೭೦ರ ದಶಕದಲ್ಲಿ ಬಾಲಿವುಡ್ ಚಿತ್ರಗಳು ಇಂತಹ ಯಶಸ್ವಿ ಪ್ರಯೋಗಗಳನ್ನು ಮಾಡಿದ್ದವು. ಮುಂಬೈ ಪರಿಸರದಲ್ಲಿ ಕಾಣಬಹುದಾದ ಸಾಮಾನ್ಯ ಜನರ ನಿತ್ಯ ಬದುಕಿನ ವೈವಿಧ್ಯಮಯ ಆಯಾಮಗಳನ್ನು ಬಹುಶಃ ಇತರ ನಗರಗಳಲ್ಲಿ ಕಾಣಲಾಗುವುದಿಲ್ಲ.
ಸಾಹಿತ್ಯವಾಗುವ ಜನಜೀವನ
ಇಂತಹ ವೈವಿಧ್ಯಗಳನ್ನು ಮತ್ತು ಅದರೊಳಗೆ ಅದೃಶ್ಯ ರೂಪದಲ್ಲಿರುವ ವೈರುಧ್ಯ-ವಿರೋಧಾಭಾಸಗಳನ್ನು ಸಾಹಿತ್ಯಿಕವಾಗಿ ಹಿಡಿದಿಡುವ ಪ್ರಯತ್ನಗಳು ನಡೆಯುತ್ತಲೇ ಬಂದಿವೆ. ಖ್ಯಾತ ಕತೆಗಾರ ಜಯಂತ್ ಕಾಯ್ಕಿಣಿ ಇಂತಹ ಅದ್ಭುತ ಕತೆಗಾರರಲ್ಲಿ ಒಬ್ಬರು, ಸಮಕಾಲೀನರಲ್ಲಿ ಪ್ರಮುಖರೂ ಹೌದು. ಮುಂಬೈ ನಗರದ ಜನಜಂಗುಳಿ, ಲೋಕಲ್ ರೈಲುಗಳ ಕಿಕ್ಕಿರಿದ ಕೋಚುಗಳು, ಸದಾ ಗಿಜಿಗಿಜಿ ಎನಿಸುವ ಮಾರುಕಟ್ಟೆಗಳು ಹಾಗೂ ಎಲ್ಲ ಸ್ತರಗಳ ಜನರಲ್ಲೂ ಮುಂಜಾವಿನಿಂದ ತಡರಾತ್ರಿಯವರೆಗೂ ಗುರುತಿಸಬಹುದಾದ ಗಡಿಬಿಡಿ-ಆತಂಕ ಮತ್ತು ಅವಸರ ಇವೆಲ್ಲವೂ ಸಹ ಅಪರೂಪದ ವಿದ್ಯಮಾನಗಳು. ಇದರ ನಡುವೆಯೇ ತಳಸ್ತರ ಜನರ ನಡುವೆ ಹೊಸೆಯುವ ಮನುಜ ಸಂಬಂಧಗಳು, ಪ್ರೀತಿ ವಾತ್ಸಲ್ಯ ಸಾಮರಸ್ಯಗಳು ಮುಂಬೈ ನಗರವನ್ನು ವಿಶಿಷ್ಟವಾಗಿಸುತ್ತವೆ. ಈ ಸುಂದರ ಲೋಕದಲ್ಲಿ ಅಪಭ್ರಂಶದಂತೆ ಆಗಾಗ್ಗೆ ನುಸುಳುವುದು ಕೋಮು ಗಲಭೆ, ಮತ್ತು ಸಾರ್ವಜನಿಕ ಪಕ್ಷುಬ್ಧತೆ. ಕಾಯ್ಕಿಣಿ ಅವರ ಕಥಾ ಜಗತ್ತಿನಲ್ಲಿ ಇವೆಲ್ಲವನ್ನೂ ಕಾಣಬಹುದು.

ಭಾರತದ ಆರ್ಥಿಕ-ಹಣಕಾಸು ರಾಜಧಾನಿ (Economic and Finance capital ) ಎಂದೇ ಕರೆಯಲ್ಪಡುವ ಮುಂಬೈ ನಗರದ ತಳಸ್ತರದ ಸಮಾಜದಲ್ಲಿ ಶ್ರಮಿಕ ಜಗತ್ತನ್ನು ಒಳಹೊಕ್ಕು ನೋಡಿದಾಗ, ಜೀವನ ಎಷ್ಟು ದುಸ್ತರ ಎನಿಸುವಂತೆಯೇ , ಈ ಬದುಕು ಎಷ್ಟು ಸುಂದರ ಎಂದು ಭಾಸವಾಗುವಂತಹ ದೃಶ್ಯಗಳಿಗೂ ಮುಖಾಮುಖಿಯಾಗುತ್ತೇವೆ. ನೂರಾರು ಗೊಂದಲ-ಸಂಕಟಗಳ ನಡುವೆ ಒಂದು ಸುಂದರ ಬದುಕಿನ ಚಿತ್ರಣವನ್ನು ಕಟ್ಟಿಕೊಡುವ ಕತೆಗಳ ಪೈಕಿ ಜಯಂತ್ ಕಾಯ್ಕಿಣಿ ಅವರ ʼ ಅಮೃತಬಳ್ಳಿ ಕಷಾಯ ʼ ಸಹ ಒಂದು. ಇದನ್ನು ರಂಗರೂಪಕ್ಕೆ ಅಳವಡಿಸಿ ಸಾಹಿತ್ಯಿಕ ಅಭಿವ್ಯಕ್ತಿಯನ್ನು ರಂಗಾಭಿವ್ಯಕ್ತಿಯನ್ನಾಗಿ ಪರಿರ‍್ತಿಸುವ ಪ್ರಯತ್ನ ʼ ಅಮೃತಬಳ್ಳಿ ಕ಼ಷಾಯ ʼ ನಾಟಕ.
ಸಾಮಾನ್ಯವಾಗಿ ಕಾಯ್ಕಿಣಿ ಅವರ ಕತೆಗಳಲ್ಲಿ ಸಾಮಾನ್ಯ ಜನರ ನಿತ್ಯಬದುಕಿನ ಸಂಕರ‍್ಣತೆಗಳು ಹಾಸುಹೊಕ್ಕಾಗಿರುತ್ತವೆ. ʼ ಅಮೃತಬಳ್ಳಿ ಕಷಾಯ ʼ ಸಹ ಅಪವಾದವೇನಲ್ಲ. ಇದನ್ನು ರಂಗರೂಪಕ್ಕೆ ಅಳವಡಿಸುವುದು ಸುಲಭವಲ್ಲ. ಮೈಸೂರಿನ ʼ ಶಿವ ʼ ರಂಗ ತಂಡ ಇದನ್ನು ಸಾಕ್ಷಾತ್ಕರಿಸಿ ಕನ್ನಡ ರಂಗಭೂಮಿಗೆ ಮತ್ತೊಂದು ಅಪರ‍್ವ ಕೊಡುಗೆಯನ್ನು ನೀಡಿದೆ. ಮೂರು ದಶಕಗಳಿಗೂ ಹೆಚ್ಚು ಕಾಲ ಮೈಸೂರು ರಂಗಾಯಣದ ಕಲಾವಿದರಾಗಿ ತಮ್ಮದೇ ಆದ ಛಾಪು ಮೂಡಿಸಿರುವ ಆತ್ಮೀಯ ಗೆಳೆಯ ಪ್ರಶಾಂತ್ ಹಿರೇಮಠ್ ಅವರ ಸರ‍್ಥ ನರ‍್ದೇಶನದಲ್ಲಿ ಕಾಯ್ಕಿಣಿ ಅವರ ‘ಅಮೃತಬಳ್ಳಿ ಕಷಾಯ ‘ ರಂಗದ ಮೇಲೆ ಪ್ರವಹಿಸಿದೆ. ಮೈಸೂರಿನ ರಂಗ ಪ್ರೇಕ್ಷಕರ ಮನ-ಹೃದಯಗಳನ್ನು ಮುಂಬೈ ನಗರದ ವಾತಾವರಣದಲ್ಲಿ ನಿಲ್ಲಿಸುವ ಯತ್ನದಲ್ಲಿ ಪ್ರಶಾಂತ್ ಹಿರೇಮಠ್ ಮತ್ತು ಇಡೀ ತಂಡ ಯಶಸ್ವಿಯಾಗುತ್ತದೆ.
ಸ್ಥೂಲ ಕಥಾ ಹಂದರ
ರೂಪಕಗಳ ಮುಖಾಂತರವೇ ಪ್ರೇಕ್ಷಕರೊಡನೆ ಸಂಭಾಷಿಸುವ ಈ ನಾಟಕದಲ್ಲಿ ಮೂಲ ಕಥಾ ವಸ್ತು ಅಥವಾ ಸ್ಥಾಯಿ ಭಾವವನ್ನು ಹುಡುಕುತ್ತಾ ಹೋದರೆ ನಮಗೆ ಕಾಣುವುದು “ ಮನುಷ್ಯ ಸಂಬಂಧಗಳ ಸಂಕೀರ್ಣತೆ- ಬಾಂಧವ್ಯಗಳ ಸಂವೇದನೆ – ಪ್ರೀತಿ ವಾತ್ಸಲ್ಯಗಳ ಅಮೂರ್ತತೆ ಮತ್ತು ಸಾಮಾಜಿಕ ಸಾಮರಸ್ಯದ ಅದ್ಭುತ ಕಲ್ಪನೆ ”. ಇಡೀ ನಾಟಕವೇ ರೂಪಕಗಳ ಸುಂದರ ಹೂರಣ ಜೊತೆಗೆ ಕತೆಯನ್ನು ಹಿಡಿದಿಡುವ ಪ್ರತಿಮೆಗಳ ಜೋಡಣೆ. ಫೋಟೋ ಫ್ರೇಮ್ ಅಂಗಡಿಯನ್ನೇ ತನ್ನ ಬದುಕು ಎಂದು ಭಾವಿಸುತ್ತಾ ಜೀವನ ನಡೆಸುವ ಗಂಗಾಧರ ಹಾಗೂ ತನ್ನ ತಂದೆ ಬಿಟ್ಟುಹೋದ ಹೆಜ್ಜೆ ಗುರುತುಗಳಲ್ಲೇ ಕ್ರಮಿಸುವ ಆತನ ಆಶಯ ಮತ್ತು ಮಹತ್ವಾಕಾಂಕ್ಷೆ.
ಹೆತ್ತ ತಂದೆಯೂ ನೆನಪಿನ ಚೌಕಟ್ಟಿನಲ್ಲಿ ಗೋಡೆಯ ಮೇಲೆ ವಿರಮಿಸುತ್ತಿರುವಾಗ ಗಂಗಾಧರ ತಾನು ಫ್ರೇಮುಗಳಲ್ಲಿ ಹಿಡಿದಿಡುವ ಮುಖಗಳಲ್ಲಿ ಜೀವನದ ಎಲ್ಲ ಸುಖ ದುಃಖಗಳನ್ನೂ ಕಾಣುತ್ತಾನೆ. ಈ ಚೌಕಟ್ಟುಗಳ ವಿನ್ಯಾಸ ವೈವಿಧ್ಯತೆ, ಬಣ್ಣಗಳ ವೈಶಿಷ್ಟ್ಯ ಹಾಗೂ ಅದರೊಳಗೆ ಹುದುಗಿ ಶಾಶ್ವತವಾಗಿ ಉಳಿಯುವ ಅಪರಿಚಿತ ಮುಖಗಳು, ದೃಶ್ಯಗಳು, ನಿರ‍್ಗ ಸೌಂರ‍್ಯದ ಭಾವನೆಗಳು ಇವೆಲ್ಲವೂ ಗಂಗಾಧರನಿಗೆ ಮತ್ತೊಂದು ಜಗತ್ತಿನ ಪರಿಚಯ ಮಾಡಿಸುತ್ತಾ ಹೋಗುತ್ತದೆ. ಚೌಕಟ್ಟುಗಳಲ್ಲಿ (Frames) ಅವಿತಿರುವ ಭಾವಚಿತ್ರಗಳಿಗೆ ಜೀವ ತುಂಬುವುದು ಚಿತ್ರಕಲಾವಿದನೇ ಆದರೂ, ಅವುಗಳನ್ನು ನಾಲ್ಕು ಸ್ತಂಭಗಳ ನಡುವೆ ಹಿಡಿದಿಟ್ಟು, ವಾಸ್ತವದ ಬದುಕಿಗೆ ಸದಾ ಮುಖಾಮುಖಿಯಾಗುವಂತೆ ಮಾಡುವ ಕಾಯಕವನ್ನು ಗಂಗಾಧರ ತನ್ನ ಗೋಲ್ಡನ್ ಫ್ರೇಮ್ ವರ್ಕ್ಸ್‌ನಲ್ಲಿ ಮಾಡುತ್ತಿರುತ್ತಾನೆ. ಈ ಭಾವಚಿತ್ರಗಳು ಕೇವಲ ಹಾಳೆಯ ಮೇಲೆ ಬಿಡಿಸಲಾದ ವರ್ಣಚಿತ್ರಗಳಲ್ಲ , ಅವುಗಳ ಆಂತರ್ಯದಲ್ಲಿ ಒಂದು ಜೀವಂತ ಅಭಿವ್ಯಕ್ತಿ ಸದಾ ಇರುತ್ತದೆ ಎನ್ನುವ ಅದ್ಭುತ ಕಲ್ಪನೆಯನ್ನು ಕಾಯ್ಕಿಣಿ ಈ ಕತೆಯಲ್ಲಿ ಬಿತ್ತರಿಸುತ್ತಾ ಹೋಗುತ್ತಾರೆ.
ಈ ಚಿತ್ರಗಳಿಗೆ ಚೌಕಟ್ಟು ಒದಗಿಸುವ ಮೂಲಕ ಗಂಗಾಧರ ಮತ್ತು ಆತನ ಸಹಾಯಕ ವಿಕಿ ತಮ್ಮ ಬದುಕನ್ನೇ ಈ ಕಾಯಕಕ್ಕೆ ಅರ್ಪಿಸಿಕೊಂಡಿರುತ್ತಾರೆ. ವಾರಸುದಾರರೇ ಇಲ್ಲದ ಫೋಟೋಗಳಿಗೂ ಜೀವ ತುಂಬುವ ಸಾಧ್ಯತೆಯನ್ನು, ರಂಗನರ‍್ದೇಶಕರೊಬ್ಬರು ತಮ್ಮ ನಾಟಕದ ಪಾತ್ರಗಳಾಗಿ ಅವುಗಳನ್ನು ಕೊಂಡೊಯ್ಯುವ ದೃಶ್ಯದಲ್ಲಿ ಬಿತ್ತರಿಸಲಾಗುತ್ತದೆ. ಈ ಜೀವಂತ ರೂಪಕ ಮತ್ತರ‍್ವ ಯುವ ಪ್ರೇಮಿಗೆ ಭವಿಷ್ಯದ ಬೆಳಕು ನೀಡುವ ದೀವಿಗೆಯಾಗುವ ಕ್ಷಣವನ್ನೂ ಈ ನಾಟಕ ತೆರೆದಿಡುತ್ತದೆ. ಗೋಡೆಯಲ್ಲಿ ನೇತುಹಾಕಿರುವ ತನ್ನ ತಂದೆಯ ಭಾವಚಿತ್ರವನ್ನೇ ಯುವ ಪ್ರೇಮಿಗಳ ಭವಿಷ್ಯದ ಅಡಿಪಾಯವಾಗಿ ಸಂಕೇತಿಸುವ ಕಲ್ಪನೆ ಅಪೂರ್ವವಾದದ್ದು.
ಫೋಟೋಗಳಲ್ಲಿ ಜೀವಭಾವದ ಎಳೆ
ಇತ್ತ ಗಂಗಾಧರ ಮತ್ತು ವಿಕಿ ಪರಿಚಿತ-ಅಪರಿಚಿತ-ಅನಾಥ ಮುಖಗಳಿಗೆ ಚೌಕಟ್ಟು ಅಳವಡಿಸುವ ಮೂಲಕ ಜೀವ ತುಂಬುತ್ತಿದ್ದರೆ ಅತ್ತ ಗಂಗಾಧರನ ತಾಯಿ ʼಮಾಯಿʼ ವಿವಿಧ ಖಾಯಿಲೆ, ನೋವು, ಯಾತನೆಗಳಿಂದ ನರಳುತ್ತಿರುವ ಜೀವಗಳಿಗೆ ಸಂಜೀವಿನಿಯಂತೆ ಅಮೃತಬಳ್ಳಿ ಕಷಾಯವನ್ನು, ಗಂಜಿಯನ್ನೂ ಉಣಬಡಿಸುವ ಜೀವದಾತೆಯಾಗಿ ಕಾಣುತ್ತಾಳೆ. ಗಂಗಾಧರನ ಫ್ರೇಮುಗಳು ಸ್ಥಿರ ಸಂಜೀವಿನಿಗಳಾದರೆ ಮಾಯಿ ಜೀವಪ್ರೀತಿಯ ಆಸ್ಥೆಯಿಂದ ಮನೆಯಲ್ಲೇ ತಯಾರಿಸುವ ಕಷಾಯ ಚಲನಶೀಲ ಸಂಜೀವಿನಿಯಾಗಿ ಆಸ್ಪತ್ರೆಗಳಿಗೆ, ಮನೆಗಳಿಗೆ ತಲುಪುತ್ತಿರುತ್ತದೆ. ಆಸ್ಪತ್ರೆಗೆ ದಾಖಲಾಗಿ ಹೆಸರು ಕಳೆದುಕೊಂಡು ಹಾಸಿಗೆಗಳ ಸಂಖ್ಯೆಗಳಿಂದ ಗುರುತಿಸಲ್ಪಡುವ ಪೀಡಿತರಿಗೆ ಮಾಯಿ ಜೀವ ಉಣಿಸುತ್ತಾಳೆ. ನಾಗರಿಕ ಎಂದು ಕರೆದುಕೊಳ್ಳುವ ಸಮಾಜ ತಾನೇ ಸೃಷ್ಟಿಸಿಕೊಂಡ ವಿಡಂಬನೆಗಳನ್ನು ಕಾಯ್ಕಿಣಿ ಸಾಂಕೇತಿಕವಾಗಿ ತೆರೆದಿಡುತ್ತಾರೆ.
ಜೀವ ಪ್ರೀತಿಗೆ ರಕ್ತ ಸಂಬಂಧಗಳ ಅಗತ್ಯವಿಲ್ಲ, ಹೊಸ ಸಂಬಂಧ ಬೆಸೆಯಲು ಯಾವುದೇ ಅಡ್ಡಗೋಡೆಗಳು ಬೇಕಿಲ್ಲ ಎಂಬ ಸಂದೇಶ ನೀಡುವ ಭಾಸ್ಕರನ ಪ್ರೇಮ ಕತೆಗೆ ಅತ್ಯವಶ್ಯವಾಗುವ ಅವನ ತಂದೆ, ಗಂಗಾಧರನ ತಂದೆಯ ಫೋಟೋದಲ್ಲಿ ಅಸ್ತಿತ್ವ ಪಡೆದುಕೊಳ್ಳುತ್ತಾರೆ. ವ್ಯಕ್ತಿಗಳು ಅಂತ್ಯ ಕಂಡರೂ ಅವರ ನೆನಪುಗಳನ್ನು ಕಾಪಿಟ್ಟುಕೊಳ್ಳುವ ಮನಸ್ಸು ಹೃದಯಗಳಿಗೆ ಫ್ರೇಮ್ ಹಾಕಿದ/ಆಲ್ಬಮ್ ಗಳಲ್ಲಿರುವ ಫೋಟೋಗಳು ಮತ್ತೆ ಮತ್ತೆ ಜೀವ ತುಂಬುತ್ತಲೇ ಇರುತ್ತವೆ. ಅನಾಥ ಎಂಬ ಭಾವನೆಯನ್ನೇ ಇಲ್ಲವಾಗಿಸುವ ಜೀವಪ್ರೀತಿಯ ಸೆಲೆಗಳು ಎಲ್ಲೆಡೆಯು ಇರುತ್ತದೆ. ಈ ಸಾಂಕೇತಿಕ ಭಾಷೆಯನ್ನು ʼಅಮೃತಬಳ್ಳಿ ಕಷಾಯʼ ಕತೆಯು, ಪ್ರೇಮಿಗಳಿಗೆ ಹೂ ನೀಡುವ ಉದ್ಯಾನದ ಬೆಂಚಿನ ಮೇಲೆ ರಾತ್ರಿ ಕಳೆಯುವ ವೃದ್ಧನಲ್ಲಿ, ಔಷಧಿಯೊಡನೆ ಪ್ರೀತಿಯನ್ನೂ ಹಂಚುವ ಮಾಯಿಯಲ್ಲಿ, ತನ್ನ ಒಡೆಯನ ಸಂಕಟಗಳನ್ನು ತನ್ನದೇ ಎನ್ನುವಂತೆ ಪರಿತಪಿಸುವ ವಿಕಿಯಲ್ಲಿ, ನಾಮ-ವಿಳಾಸ ಅರಿಯದ ವ್ಯಕ್ತಿಗಳ ಭಾವಚಿತ್ರಗಳನ್ನೇ ನಾಟಕದ ಪಾತ್ರಧಾರಿಗಳನ್ನಾಗಿಸಿ ಜೀವ ತುಂಬುವ ರಂಗ ನಿರ್ದೇಶಕನಲ್ಲಿ ಕಾಯ್ಕಿಣಿ ಕಾಣಿಸುತ್ತಾರೆ.
ಸಾಮರಸ್ಯದ ಬಳ್ಳಿ-ಚಿಕಿತ್ಸಕ ಕಷಾಯ
ಜಾತಿ ಮತ ದ್ವೇಷಗಳಿಂದ ಮುರಿದು ಅವಶೇಷವಾಗುತ್ತಿರುವ ನಾಗರಿಕ ಸಮಾಜದಲ್ಲಿ ಆಪ್ತತೆ, ಪ್ರೀತಿ, ಬಾಂಧವ್ಯಗಳ ಸೇತುವೆಗಳನ್ನು ಉಳಿಸಿಕೊಳ್ಳುವ ಒಂದು ಮಾನವ ಸಂವೇದನೆಯನ್ನು ಕತೆಗಾರ ಜಯಂತ್ ಕಾಯ್ಕಿಣಿ ಮಾಯಿ ಪೂರೈಸುವ ಅಮೃತ ಬಳ್ಳಿ ಕಷಾಯದಲ್ಲಿ ಸಾಂಕೇತಿಕವಾಗಿ ಗುರುತಿಸುತ್ತಾರೆ. ಮತ್ತಾರದೋ ರ‍್ಭದಲ್ಲಿ ಜನಿಸಿದ ಕಂದಮ್ಮಗಳಿಗೆ ಎದೆಹಾಲುಣಿಸುವ ಮಾಯಿ ಆಸ್ಪತ್ರೆಯ ರೋಗಿಗಳಿಗೆ ನೆರೆಹೊರೆಯ ಅನಾರೋಗ್ಯಪೀಡಿತರಿಗೆ ಕಷಾಯ ಉಣಿಸುವ ಮೂಲಕ ಜೀವ ತುಂಬುವುದು, ಮನುಜ ಸಂಬಂಧಗಳ ಸೂಕ್ಷ್ಮ ಸಂವೇದನೆಗಳನ್ನು ವಿಶಾಲ ಬಯಲಿನಲ್ಲಿಟ್ಟು ನೋಡುವ ಸಂವೇದನಾಶೀಲ ವಿಧಾನ. ದಂಗೆಯಲ್ಲಿ ಸಂಭವಿಸಿದ ಸಾವುನೋವುಗಳು, ಅನಾಥ ಗುರುತಿಲ್ಲದ ಜೀವಗಳು ಇವುಗಳ ನಡುವೆಯೇ ಒಂದು ಜೀವ ಮಾಯಿಯ ಕಣ್ಣಿಗೆ ಬೀಳುತ್ತದೆ.
ತನ್ನ ನೆನಪಿನ ಶಕ್ತಿಯನ್ನೂ ಕಳೆದುಕೊಂಡು, ಅಕ್ಷರಶಃ ಮಗುವಿನಂತಾಗಿರುವ ಅಪರಿಚಿತ ವ್ಯಕ್ತಿಯನ್ನು ಮಾಯಿ ತನ್ನ ತಾಯ್ಮಮತೆಯ ಸ್ಪರ್ಶದಿಂದ ಚಲನಶೀಲಗೊಳಿಸುತ್ತಾಳೆ. ಆತನ ತುಟಿಯ ಮೇಲೆ ಮೂಡುವ ಮಂದ ನಗೆ ಜೀವಭಾವಗಳ ಸಂಗಮವನ್ನು ಅಮೂರ್ತತೆಯಿಂದ ಮೂರ್ತರೂಪಕ್ಕೆ ಇಳಿಸಿಬಿಡುತ್ತದೆ. ಇಲ್ಲಿ ಕಷಾಯ ಮತ್ತು ಮಾಯಿ ಸಾಂಕೇತಿಕ ರೂಪಕಗಳಾಗಿ, ಬದುಕಬೇಕೆಂಬ ಜೀವ ತುಡಿತ ಮತ್ತು ಬದುಕಿಸಲೇ ಬೇಕೆಂಬ ತಾಯಿವಾತ್ಸಲ್ಯ ಎರಡೂ ವಾಸ್ತವವಾಗಿ ಕಾಣುತ್ತವೆ. ಕತೆಗಾರ ಕಾಯ್ಕಿಣಿ ಇದೇ ಸಂವೇದನೆಯ ತಂತುಗಳನ್ನು ಗೋಲ್ಡನ್ ಫ್ರೇಮ್ ವರ್ಕ್ಸ್ ಎಂಬ ವ್ಯಾಪಾರಿ ಮಳಿಗೆಗೂ ವಿಸ್ತರಿಸುತ್ತಾರೆ. ಗಂಗಾಧರ ಫ್ರೇಮ್ ಹಾಕುವ ಫೋಟೋಗಳಲ್ಲಿ, ಸಾಂಕೇತಿಕವಾಗಿ ಧ್ವನಿಸುತ್ತಾರೆ. ಎಲ್ಲವನ್ನೂ ಕಳೆದುಕೊಂಡರೂ ಕಳೆದುಹೋಗಿರುವ ಅಪ್ಪನ ನೆನಪುಗಳಲ್ಲೇ ತನ್ನ ಜೀವ ಬಾಂಧವ್ಯದ ತಂತುಗಳನ್ನು ಕಂಡುಕೊಳ್ಳುವ ಗಂಗಾಧರ ತಾನು ಫ್ರೇಮ್ ಹಾಕಿ ಮಾರಾಟಕ್ಕಿಡುವ ಫೋಟೋಗಳನ್ನೇ ಪ್ರೀತಿಸುತ್ತಾ, ಅವುಗಳನ್ನೇ ಬದುಕುತ್ತಾನೆ. ಮೃತ ತಂದೆಯನ್ನೂ ಅದರಲ್ಲೇ ಕಾಣುತ್ತಾನೆ.
ಸಮಾಜದಲ್ಲಿ ಜೀವ ಪ್ರೀತಿಯನ್ನು ಎರೆಯಲು ಅವಶ್ಯವಾಗಿರುವ ʼ ಅಮೃತಬಳ್ಳಿ ಕಷಾಯ ʼ ಸಾಂಕೇತಿಕವಾಗಿ ಜೀವ ಸಂಜೀವಿನಿಯಾಗಿ ಪ್ರೇಕ್ಷಕರ ಎದೆಯೊಳಗೆ ನಾಟಿಬಿಡುತ್ತದೆ. ಇಲ್ಲದ ತಂದೆಯೊಡನೆ ಸಂಭಾಷಿಸುವ ಗಂಗಾಧರನ ಕಲ್ಪನೆ ಮರದ ಚೌಕಟ್ಟುಗಳಲ್ಲಿ ಜೀವ ತಳೆದರೆ, ಸಂಬಂಧವೇ ಇಲ್ಲದ ಜೀವಗಳಿಗೆ ಮರುಜೀವ ತುಂಬುವ ಮಾಯಿಯ ತಾಯ್ಮಮತೆ ಅಮೃತ ಬಳ್ಳಿ ಕಷಾಯದಲ್ಲಿ ಜೀವ ತಳೆಯುತ್ತದೆ. ಈ ಸಂಕೀರ್ಣತೆಯನ್ನು ಕಾಯ್ಕಿಣಿ ತಮ್ಮ ಸಣ್ಣ ಕತೆಯಲ್ಲಿ ತೆರೆದಿಡುತ್ತಾರೆ. ಸಾಮಾನ್ಯ ಜೀವನದಲ್ಲೂ ಸಹ ಹಿಂದಿನ ಗಳಿಗೆಯವರೆಗೂ ವ್ಯಕ್ತಿಯಾಗಿರುವ ಜೀವ ಸತ್ತ ಮರುಕ್ಷಣವೇ ಸಂಬಂಧಿಕರಿಗೂ-ಕುಟುಂಬ ಸದಸ್ಯರಿಗೂ ಕೇವಲ ದೇಹ ಆಗಿ ಕಾಣುವ (ಬಾಡಿ ಮನೆಗೆ ಎಷ್ಟೊತ್ತಿಗೆ ಬರುತ್ತೆ ಎಂಬ ಲೋಕಾರೂಢಿಯ ಮಾತುಗಳನ್ನು ನೆನಪಿಸಿಕೊಳ್ಳಬಹುದು) ಸುಡುವಾಸ್ತವವನ್ನು ಕಾಯ್ಕಿಣಿ ಅವರು ಆಸ್ಪತ್ರೆಯ ಬೆಡ್ ಸಂಖ್ಯೆಯ ಮುಖಾಂತರ ಗುರುತಿಸುತ್ತಾರೆ.
ಸೂಕ್ಷ್ಮ ಸಂವೇದನೆಗೆ ರಂಗಸ್ಪರ್ಶ
ಜಯಂತ್ ಕಾಯ್ಕಿಣಿ ಅವರ ಈ ಸಂವೇದನಾಶೀಲ ಕತೆಗೆ ಎನ್. ಮಹೇಶ್ ಕುಮಾರ್ ನೀಡಿರುವ ರಂಗರೂಪ ಇಡೀ ಕಥಾವಸ್ತುವನ್ನು ವಾಸ್ತವ ಬದುಕಿಗೆ ಹತ್ತಿರವಾಗಿಸುತ್ತದೆ. ಮೂಲ ಕತೆಯಲ್ಲಿ ಕಾಯ್ಕಿಣಿ ಸೃಷ್ಟಿಸಿರುವ ಎಲ್ಲ ಪಾತ್ರಗಳೂ ನಮ್ಮ ನಿತ್ಯಜೀವನದಲ್ಲಿ ಕ್ಷಣಕ್ಷಣಕ್ಕೂ ಮುಖಾಮುಖಿಯಾಗುವ ಜೀವಗಳೇ ಎಂಬ ಸೂಕ್ಷ್ಮಕ್ಕೆ ಭಂಗ ಉಂಟುಮಾಡದೆ, ಮಹೇಶ್ ಕುಮಾರ್ ರಂಗರೂಪಕ್ಕೆ ಅಳವಡಿಸಿದ್ದಾರೆ. ಹೆಚ್.ಕೆ. ದ್ವಾರಕಾನಾಥ್ ಅವರ ರಂಗವಿನ್ಯಾಸ, ಕೆ.ಆರ್. ನಂದಿನಿ ಅವರ ವಸ್ತ್ರ ವಿನ್ಯಾಸ ಮತ್ತು ಕೃಷ್ಣಕುಮಾರ್ ನಾರ್ಣ‍್ಣಕಜೆ ಅವರ ಬೆಳಕಿನಾಟ , ಜೀವ ತುಂಬಿದ ಪಾತ್ರಗಳನ್ನು ಮತ್ತಷ್ಟು ಕ್ರಿಯಾಶೀಲಗೊಳಿಸಲು ನೆರವಾಗಿದೆ. ಮುಂಬೈ ಪರಿಸರದ (Ambience) ಒಂದು ಕತೆಯನ್ನು ಕನ್ನಡದಲ್ಲಿ ರಂಗರೂಪಕ್ಕೆ ಅಳವಡಿಸುವಾಗ ಅಗತ್ಯವಾದ ಎಲ್ಲ ರಂಗಸೂಕ್ಷ್ಮತೆಗಳನ್ನೂ ಸಮರ್ಪಕವಾಗಿ ನಿರ್ವಹಿಸಲಾಗಿದೆ.
ʼ ಅಮೃತ ಬಳ್ಳಿ ಕಷಾಯ ʼವನ್ನು ರಂಗದ ಮೇಲೆ ಚಿಕಿತ್ಸಕ ಗುಣದೊಂದಿಗೇ ಪ್ರಸ್ತುತಪಡಿಸುವಲ್ಲಿ ನಿರ್ದೇಶಕ ಪ್ರಶಾಂತ್ ಹಿರೇಮಠ್ ತಮ್ಮ ಸುದೀರ್ಘ ರಂಗಾನುಭವ ಮತ್ತು ಕಲಾಭಿವ್ಯಕ್ತಿಯನ್ನು ಧಾರೆ ಎರೆದಿರುವುದು ನಾಟಕದ ಉದ್ದಕ್ಕೂ ಕಾಣುತ್ತದೆ. ಸಂಗೀತದ ಜವಾಬ್ದಾರಿಯನ್ನೂ ಸುಂದರವಾಗಿ ನಿರ್ವಹಿಸಿದ್ದಾರೆ. ನಿರ್ದೇಶನದ ಬಿಗಿ ಹಿಡಿತ ನಾಟಕದ ಉದ್ದಕ್ಕೂ ಸಮಾನ ಎಳೆಯಾಗಿ ಸಾಗುತ್ತದೆ. ಆರಂಭದಲ್ಲಿ ಮಾಯಿ ಮತ್ತು ವಿಕಿ ನಡುವೆ ನಡೆಯುವ ಸುದರ‍್ಘ ಸಂಭಾಷಣೆ ಸ್ವಾರಸ್ಯಕರವಾಗಿ ಕಾಣುತ್ತದೆ. ವಿಕಿಯ ಕುತೂಹಲ ಮತ್ತು ಮಾಯಿಯ ಜೀವನಾನುಭವದ ಮಿಶ್ರಣವನ್ನು ರಂಗದ ಮೇಲೆ ಪ್ರಸ್ತುತಪಡಿಸುವಲ್ಲಿ ಪ್ರಶಾಂತ್ ಹಿರೇಮಠ್ ಸಫಲರಾಗುತ್ತಾರೆ.
ಅಪೂರ್ವ ರಂಗ ಪ್ರಸ್ತುತಿಯ ದೃಶ್ಯಗಳು
ನಾಟಕದ ಕೆಲವು ದೃಶ್ಯಗಳು ಪ್ರೇಕ್ಷಕರ ಮನಸ್ಸಿನಲ್ಲಿ ಶಾಶ್ವತವಾಗಿ ನಾಟುವಂತಿವೆ. ಗಂಗಾಧರ ಖಿನ್ನ ಮನಸ್ಕನಾಗಿದ್ದಾಗ ಫ್ರೇಮಿನಲ್ಲಿರುವ ತಂದೆ ಸಂಭಾಷಿಸುವ ಕಲ್ಪನೆಯನ್ನು ಪ್ರಶಾಂತ್ ಹಿರೇಮಠ್ ವಿಭಿನ್ನ ರೂಪದಲ್ಲಿ ದೃಶ್ಯಾತ್ಮಕವಾಗಿ ಪ್ರಸ್ತುತಪಡಿಸುತ್ತಾರೆ. ಗಂಗಾಧರನ ತಂದೆ ಪ್ರೆಕ್ಷಕರಿಗೆ ಕೇವಲ ಧ್ವನಿಯಾಗದೆ ಪ್ರತ್ಯಕ್ಷವಾಗಿ ಮುಖಾಮುಖಿಯಾಗಿ ಮಗನಿಗೆ ಆತ್ಮಸ್ಥೈರ್ಯ‍್ಯ ತುಂಬುವ ಮಾತುಗಳನ್ನಾಡಿ ಮರಳಿ ಅಮೂರ್ತ ಸ್ವಸ್ಥಾನಕ್ಕೆ ಮರಳುವ ದೃಶ್ಯರೂಪಕ, ಅದ್ಭುತ ರಂಗಪ್ರಸ್ತುತಿಯಾಗಿ ಆಪ್ತವಾಗುತ್ತದೆ. ತನ್ನ ಕನಸಿನಿಂದ ವಾಸ್ತವಕ್ಕೆ ಮರಳುವ ಗಂಗಾಧರ ಅಪ್ಪನ ಭಾವಚಿತ್ರದ ಮುಂದೆ ಕುಳಿತು ಭಾವನಾತ್ಮಕ ಸ್ರ‍್ಶಾನುಭವ ಪಡೆಯುವ ದೃಶ್ಯ ನಿರ್ದೇಶಕರ ಸೃಜನಶೀಲತೆಯನ್ನು ಬಿಂಬಿಸುತ್ತದೆ. ಕತೆಯ ಒಳಹೂರಣವನ್ನು ಗ್ರಹಿಸಿ ಅಕ್ಷರಗಳಿಂದ ದೃಶ್ಯರೂಪಕ್ಕಿಳಿಸುವ ಕಲಾಭಿವ್ಯಕ್ತಿಯಲ್ಲೇ ರಂಗಪ್ರಯೋಗದ ಸೌಂದರ‍್ಯವನ್ನು ಗುರುತಿಸಬಹುದು. ನಿರ್ದೇಶಕ ಪ್ರಶಾಂತ್ ಹಿರೇಮಠ್ ಇಲ್ಲಿ ಗೆಲ್ಲುತ್ತಾರೆ. ಈ ದೃಶ್ಯ ಮನಸ್ಸಿಗೆ ನಾಟುವಂತಿದೆ.
ಮತ್ತೊಂದು ದೃಶ್ಯದಲ್ಲಿ ಆಸ್ಪತ್ರೆಯಲ್ಲಿ ಮಲಗಿರುವ, ನೆನಪಿನ ಶಕ್ತಿ ಕಳೆದುಕೊಂಡ ವ್ಯಕ್ತಿಗೆ, ಎಳೆಯ ಕೂಸಿಗೆ ಉಣಿಸುವಂತೆ ಗಂಜಿ ಕುಡಿಸುವ ಮಾಯಿ, ತಾಯಿ ವಾತ್ಸಲ್ಯದ ಪ್ರತೀಕವಾಗಿ ಕಾಣುತ್ತಾಳೆ. ಈ ಹೃದಯಸ್ಪರ್ಶಿ ದೃಶ್ಯದಲ್ಲಿ ಮಾಯಿ ಪಾತ್ರಧಾರಿಯ ಅಭಿನಯ ಉತ್ಕೃಷ್ಟ ಎನ್ನಬಹುದು. ಮೊಗದಲ್ಲಿ ತಾಯಿ ಹೃದಯದ ಕಳಕಳಿ ಮತ್ತು ಕಾಳಜಿಯನ್ನು ವ್ಯಕ್ತಪಡಿಸುತ್ತಲೇ ಕಣ್ಣುಗಳಲ್ಲಿ ಪ್ರೀತಿ ವಾತ್ಸಲ್ಯದ ಸೂಕ್ಷ್ಮ ತಂತುಗಳನ್ನು ಪ್ರದರ್ಶಿಸುವ ಮೂಲಕ ಮಾಯಿ ಭಾವಾಭಿನಯಕ್ಕೆ ಸಾಕ್ಷಿಯಂತೆ ಕಾಣುತ್ತಾರೆ. ನಾಳೆಯನ್ನು ನಿರೀಕ್ಷಿಸುವ ಶಕ್ತಿಯನ್ನೂ ಕಳೆದುಕೊಂಡ ಅಸಹಾಯಕ ವ್ಯಕ್ತಿಗೆ ಜೀವ ದಿಗಂತದ ಸೌಂರ‍್ಯವನ್ನು ಕಾಣಿಸುವ ಈ ದೃಶ್ಯರೂಪಕ ಚಿರಕಾಲ ಪ್ರೇಕ್ಷಕರ ಮನಸ್ಸಿನಲ್ಲುಳಿಯುತ್ತದೆ.
ಘನ ಗಂಭೀರ ಜೀವ ಪ್ರೀತಿಯ ಮಾಯಿ, ಸದಾ ಲವಲವಿಕೆಯ ವಿಕಿ, ಬದುಕಿನ ನಿತ್ಯ ಸೌಂರ‍್ಯವನ್ನು ಆಸ್ವಾದಿಸುವ ಬಬ್ಲೂ, ಜೀವನದ ಎಲ್ಲ ಉಳಿಪೆಟ್ಟುಗಳಿಗೂ ಜಗ್ಗದೆ ನಡೆಯುವ ನಡುಬಾಗಿದ ದುರ್ಗಾಜಿ, ಅಕ್ಷರಶಃ ಅನಾಥ ಎನ್ನಬಹುದಾದ ಭಾವಚಿತ್ರಗಳಿಗೆ ರಂಗದ ಮೇಲೆ ಜೀವ ತುಂಬುವ ನಿರ್ದೇಶಕ, ತನ್ನ ಅನಾಥ ಪ್ರಜ್ಞೆಯನ್ನು ಕಳೆದುಕೊಂಡು ಪ್ರೀತಿಸಿದವಳನ್ನು ಸಂತೈಸಿ ಕೈಹಿಡಿಯುವ ಭಾಸ್ಕರ ಹೀಗೆ ನಾಟಕದ ಎಲ್ಲ ಪಾತ್ರಗಳೂ ಜೀವತುಂಬಿದ ಹಾಗೆ ರಂಗದ ಮೇಲೆ ಕಾಣಿಸಿಕೊಳ್ಳುತ್ತವೆ.
ಸಾಹಿತ್ಯ-ರಂಗಭೂಮಿಯ ಬಾಂಧವ್ಯ
ಜಯಂತ್ ಕಾಯ್ಕಿಣಿ ಅವರ ಕತೆಗಳಲ್ಲಿ ಸಾಮಾನ್ಯವಾಗಿ ಕಾಣಬಹುದಾದ ಮನುಜ ಸಂಬಂಧಗಳ ತೀಕ್ಷ್ಣ ಸಂಕೀರ್ಣತೆಗಳನ್ನೇ ʼ ಅಮೃತಬಳ್ಳಿ ಕಷಾಯ ʼದಲ್ಲೂ ಕಾಣಬಹುದು. ದೇವಾನಂದ್ ಅಭಿನಯದ ೧೯೫೬ರ ʼ ಸಿ ಐ ಡಿ ʼ ಚಲನಚಿತ್ರದಲ್ಲಿ ಮಜರೂಹ್ ಸುಲ್ತಾನ್ ಪುರಿ ರಚಿಸಿರುವ “ ಏ ದಿಲ್ ಹೈ ಮುಷ್ಕಿಲ್ ಜೀನಾ ಯಹಾಂ ” ಹಾಡಿನಲ್ಲಿ ಕವಿ ಮಜರೂಹ್ “ ಮಿಲ್ತಾ ಹೈ ಯಹ್ಞ ಸಬ್ ಕುಚ್ ಇಕ್ ಮಿಲ್ತಾ ನಹೀಂ ದಿಲ್ ” ಎಂದು ಹೇಳುತ್ತಾರೆ. ಮನುಷ್ಯ ಸಮಾಜದ ಪರಸ್ಪರ ಸಂಬಂಧಗಳೆಲ್ಲವೂ ವ್ಯಾವಹಾರಿಕವಾಗುವ ಆರಂಭಿಕ ಹಂತದಲ್ಲಿ ರಚಿಸಿದ ಈ ಸಾಲುಗಳು, ಮುಂಬೈ ಬದುಕಿನ ವರ್ತಮಾನದ ವಾಸ್ತವವೂ ಹೌದು. ಇಂತಹ ದಟ್ಟ ವಾತಾವರಣವನ್ನು ಜಯಂತ್ ಕಾಯ್ಕಿಣಿ ತಮ್ಮ ಕತೆಗಳಲ್ಲಿ ಸೂಕ್ಷ್ಮ ಸಂಬಂಧಗಳ ಎಳೆಗಳನ್ನು ಹೊಸೆದು, ಪೋಣಿಸಿ ಸುಂದರ ತೋರಣವನ್ನಾಗಿ ತೋರಿಸುತ್ತಾರೆ.
ಈ ಸೂಕ್ಷ್ಮ ಸಂವೇದನೆಗೆ ಧಕ್ಕೆ ಬಾರದಂತೆ ಆತ್ಮೀಯ ಗೆಳೆಯ ಪ್ರಶಾಂತ್ ಹಿರೇಮಠ್ ಅವರ ನಿರ್ದೇಶನದ ʼ ಶಿವ ʼರಂಗತಂಡ ʼ ಅಮೃತ ಬಳ್ಳಿ ಕಷಾಯʼ ವನ್ನು ದೃಶ್ಯರೂಪಕ್ಕಿಳಿಸಿ ಪ್ರೇಕ್ಷಕರಿಗೆ ಭಾವ ಸಂಜೀವಿನಿಯನ್ನು ಉಣಬಡಿಸಿದೆ. ಹವಾನಿಯಂತ್ರಿತ ಕಚೇರಿಯಿಂದ ಹೊರಬಂದು ರಂಗಮಂಚದಲ್ಲಿ ತಮ್ಮ ಕಲೆಯನ್ನು ಪ್ರರ‍್ಶಿಸಿರುವ ಆತ್ಮೀಯ ಮಲ್ಲಿಕರ‍್ಜುನ ಸ್ವಾಮಿ ಅವರ ನಿರ್ಮಾಣ-ನಿರ್ವಹಣೆಯಲ್ಲಿ ಮೂಡಿಬಂದಿರುವ ʼ ಅಮೃತ ಬಳ್ಳಿ ಕಷಾಯ ʼ ಒಂದು ಅಪೂರ್ವ ಸಂವೇದನಾಶೀಲ ಕತೆಯ ಅಮೂಲ್ಯ ಸೃಜನಶೀಲ ರಂಗಪ್ರಯೋಗ.
ವರ್ತಮಾನವನ್ನು ಬಿಂಬಿಸುವ ಮೂಲಕ ಮಾನವ ಸಮಾಜ ನಿರಂತರವಾಗಿ ಕಳೆದುಕೊಳ್ಳುತ್ತಿರುವ ಜೀವನಾದರ್ಶಗಳನ್ನು, ಮೌಲ್ಯಗಳನ್ನು ಮತ್ತೆ ಮತ್ತೆ ವಿಶಾಲ ಸಮಾಜದ ಮುಂದಿಡುವ ಸಾಂಸ್ಕೃತಿಕ ಜವಾಬ್ದಾರಿ ರಂಗಭೂಮಿಯ ಮೇಲಿದೆ. ಜಯಂತ್ ಕಾಯ್ಕಿಣಿ ಅವರ ಸೃಜನಶೀಲ ಸಾಹಿತ್ಯಕ್ಕೆ ರಂಗಸ್ಪರ್ಶ ನೀಡುವ ಮೂಲಕ, ಪ್ರಶಾಂತ್ ಹಿರೇಮಠ್ ಮತ್ತು ಶಿವ ತಂಡ ಈ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಿರುವುದು ಪ್ರಶಂಸಾರ್ಹ.






0 Comments