ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಾಸ ಶ್ರಾವಣ ಮಾಸ

-ಸುಧಾ ಹಡಿನಬಾಳ

ಶ್ರಾವಣ ಮಾಸ

ದುಗುಡ ದುಮ್ಮಾನಗಳಿಂದ
ಕಪ್ಪಡರಿದ ಮೋಡ ಕಣ್ಣೀರ
ಮಳೆ ಸುರಿಸಿ ಹಗುರಾಗಿ
ತಿಳಿಯಾದ ಕಿರುಬಿಸಿಲ
ಮಾಸ ಶ್ರಾವಣ ಮಾಸ

ಇಳೆಯೆಲ್ಲ ತಂಪಾಗಿ
ನೆಲವೆಲ್ಲ ಹಸುರಾಗಿ
ಭೂಮಿ ತಾಯಿ ಹಸುರುಟ್ಟು
ಕಣ್ಮನಗಳಿಗೆ ಹಿತ ನೀಡುವ
ಮಾಸ ಶ್ರಾವಣ ಮಾಸ

ಬಡವರ ಬವಣೆ ಕಳೆಯಿತೊ
ಎಂಬಂತೆ ಹೊಲ ಗದ್ದೆಗಳೆಲ್ಲ
ಹಸನಾಗಿ ಒಣಗಿದ ಕೊರಡೂ
ಚಿಗುರೊಡೆವ ಭರವಸೆಯ
ಸುಗ್ಗಿ ಕಾಲ ಶ್ರಾವಣ ಮಾಸ

ವೈಶಾಖದಲಿ ಬರಗೆಟ್ಟು
ಕಂಗೆಟ್ಟ ನೆಲದೊಡಲ ಪಿಸು
ದನಿಗೆ ಕಿವಿಯಾಗಿ ಹನಿಯಾಗಿ
ಪ್ರೇಮದ ಮಳೆ ಸುರಿಸಿ ಇಳೆಯ
ಹರುಷ ಕಂಡು ಮುದಗೊಂಡು

ಬಾನಂಚ ಬದಿಗೆ ಸರಿದು
ಕಳ್ಳನೋಟ ಬೀರಿ ಕಿರು ನಗೆಯ
ಬೆಳಕು ಬೀರಿ ಇಣುಕು ನೋಡಿ
ಹರುಷದ ಹೂ ಮಳೆ ಸುರಿವ ಮೇಘ
ರಾಜನ ತುಂಟಾಟ ಶ್ರಾವಣ ಮಾಸ

ಆಷಾಢಕೆ ಅಂಟಿಕೊಂಡ ಶಾಪ
ಕಳೆಯಲೆಂದೇ ದಾಪುಗಾಲಿಡುತ್ತ
ಬರುವ ಹೊಸ ಹುಮ್ಮಸ್ಸಿನ ಮಾಸ
ಆಷಾಢಕೇಕೆ ಶಾಪ; ಆಷಾಢಕೂ
ಗೊತ್ತಿರದ ಮೌಢ್ಯ ಕಳೆವ ಶ್ರಾವಣ ಮಾಸ

ಆಷಾಢದ ವಿರಹ ಕಳೆದು
ಧುಮುಕುವ ಜಲರಾಶಿಗೆ
ಮೈಯೊಡ್ಡಿ ಸಖಿಯರ ಸಾಂಗತ್ಯದಿ
ನೀರಾಟವಾಡಿ ನಲಿವ ಕನಸು
ಕಂಗಳ ಸಖರ ಪ್ರಿಯ ಶ್ರಾವಣ ಮಾಸ

ಎನಿತು ಚೆಂದ ಸುತ್ತ ಮುತ್ತ
ಬಾಯ್ರುಚಿಗೆ ಹಬ್ಬದೂಟ
ಹರಿವ ಝರಿಯ ಸೊಬಗ ನೋಟ
ಮೈದುಂಬಿದ ಇಳೆಯ ಮೈಮಾಟ
ಎಲ್ಲಾ ಕೂಡಿ ಆಡಿ ಮಾಡ್ವ ಊಟ
ನಗುತ ಬರಲಿ ಶ್ರಾವಣ ಮಾಸ

‍ಲೇಖಕರು Admin

13 August, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading