ಶರತ್ ಭಟ್ ಸೇರಾಜೆ ಅವರ ‘ಬಾಗಿಲು ತೆರೆಯೇ ಸೇಸಮ್ಮ’
‘ಅಂಕಿತ ಪುಸ್ತಕ’ ಈ ಕೃತಿಯನ್ನು ಪ್ರಕಟಿಸಿದೆ.
ಈ ಕೃತಿಯ ಕುರಿತ ಜಯಶ್ರೀ ದೇಶಪಾಂಡೆ ಅವರ ಬರಹ ಇಲ್ಲಿದೆ.
-ಜಯಶ್ರೀ ದೇಶಪಾಂಡೆ
ಹಿಂದೆ ‘ಕನ್ನಡದ ಜಾಣ ಜಾಣೆಯರಿಗಾಗಿ’ ಎಂಬ ಮೆಚ್ಚುಗೆಯ ವಿಶೇಷಣದ ಟ್ಯಾಗ್ ಲೈನ್ ಹೊತ್ತ ಪತ್ರಿಕೆ ಬರ್ತಿತ್ತು.(ಅದು ಲಂಕೇಶ್ ಪತ್ರಿಕೆ) ಆ ಸಾಲು ಅಥವಾ ಹೆಸರೇ ತನ್ನಲ್ಲೊಂದು ಆಕರ್ಷಣೆಯನ್ನು ಹುಟ್ಟಿಸದಿದ್ದೀತೇ? ಹೌದು ಹುಟ್ಟಿಸಿತ್ತು. ಮನುಷ್ಯಸಹಜ ಮನೋವಾಂಛೆಗೆ ಹಿಡಿದ ಮಸೂರ!
ತಪ್ಪೇನಿಲ್ಲ, ಇಲ್ಲಿ ತಾತ್ಪರ್ಯವೇನೆಂದರೆ ಲೇಖಕರಾದ ಶರತ್ ಭಟ್ ದೇರಾಜೆಯವರ “ಬಾಗಿಲು ತೆರೆಯೇ ಸೇಸಮ್ಮ” ವೈಚಾರಿಕ ಲಲಿತ ಪ್ರಬಂಧಗಳು ಎಂಬ ಪುಸ್ತಕ ಕಣ್ಣಿಗೆ ಬಿದ್ದು ಅದನ್ನು ಬಿಡಿಸಿ ಓದತೊಡಗಿದಂತೆ ಅದು ಆ ಟ್ಯಾಗ್ ಲೈನಿಗೆ ಒಪ್ಪುವ ಸಮರ್ಥ, ಸಶಕ್ತ ಕೃತಿ ಎಂಬ ಅನಿಸಿಕೆ ನನ್ನಲ್ಲಿ ಮೂಡಿತ್ತು.
ಹೌದು, ಈ ಕೃತಿಯು ಅಂಕಿತ ಪ್ರತಿಭೆ ಎಂಬ ಮಾಲಿಕೆಯಲ್ಲಿ ಪ್ರಕಟವಾಗಿ ಬಂದಿರುವುದು ಅದಕ್ಕೆ ಇಂಬುಗೊಟ್ಟಿತ್ತು. ಲಲಿತ ಪ್ರಬಂಧಗಳ ಲಾಲಿತ್ಯ, ಲಘು ಹಾಸ್ಯ ಮತ್ತು ವೈಚಾರಿಕತೆ,ಅಪಾರ ಅನುಭವ, ನವಿರಾದ ತಿಳಿಹಾಸ್ಯಭರಿತ ನಿರೂಪಣೆ, ಪ್ಲಸ್ ಅನ್ವೇಷಣೆ ಇವುಗಳ ಸಂಗಮವೆಂಬಂತೆ ಮೂಡಿ ಬಂದಿರುವ ಲೇಖನಗಳ ಗುಚ್ಛ ‘ಬಾಗಿಲು ತೆರೆಯೇ ಸೇಸಮ್ಮ’.
ಇದರಲ್ಲಿನ ಮೊತ್ತ ಮೊದಲ ಲೇಖನವೇ- ‘ಅಲೆ ಅಲೆ ಅಲೆ ಗುರುತ್ವದ ಅಲೆಯೋ?’ ಅತ್ಯಂತ ವಿಶಿಷ್ಟವೆನಿಸಿ ನನಗೆ ತುಂಬ ಕುತೂಹಲ ಮೂಡಿಸಿದ್ದು ಹೌದು. ಸಾಮಾನ್ಯವಾಗಿ ಖಗೋಳ ವಿಜ್ಞಾನದ ಅಧ್ಯಯನಕ್ಕೆ ಸಂಬಂಧಿಸಿದ ಆಕಾಶಕಾಯ ಕಪ್ಪುಕುಳಿಯ ಅಗಾಧ ವೃತ್ತಾಂತ, ಅತಿವಿಸ್ಮಯ ಮತ್ತದರ ವೈಭವವನ್ನು ನಾವು ಅರ್ಥಮಾಡಿಕೊಳ್ಳಲಾಗದೆ ಅತ್ಲಾಗಿಟ್ಟುಬಿಡುವ ಪ್ರಮೇಯವಿರುವುದು ನಿಜ.ಅದನ್ನಲ್ಲಿ ತಾರದೆ ಹಾಸ್ಯವನ್ನೇ ಶಸ್ತ್ರವಾಗಿ ಬಳಸಿಯೂ ಕಪ್ಪುಕುಳಿಯ ರಹಸ್ಯಾತ್ಮಕ ಇರುವಿಕೆ, ಅದರೊಳಗೆ ಸೇರುವ ಬಾಗಿಲು ಇವೆಂಟ್ ಹೊರೈಜನ್, ಒಳಾಂಗಣ ಸಿಂಗ್ಯುಲಾರಿಟಿ…ಅನಂತರ ಲೈಗೋ ಎಂಬ ಬೃಹತ್ ಶೋಧಕ ಧ್ವನಿಮಾಪಕ, ತರಂಗ ಮಾಪಕ ಕಪ್ಪುಕುಳಿಯ ಹೊಟ್ಟೆಯಲ್ಲೇನು ನಡೆದಿರಬಹುದೆಂಬ ಪತ್ತೆ ಹಚ್ಚುವ ಸರ್ಕಸ್ ಮಾಡುತ್ತದೆಂದು ಹೇಳುತ್ತ ನಕ್ಷತ್ರವೊಂದನ್ನು ಒತ್ತಿ.. ಒತ್ತಿ.. ಒತ್ತಿ ಮುದ್ದೆ ಮಾಡಿ ತೂತು ಕೊಳವೆಯಂತಾಗಿಸಲು ಟೈಗರ್ ಪ್ರಭಾಕರ್ ಮತ್ತೆ ಸನ್ನಿ ಡಿಯೋಲ್
ನಂಥವರ ತೋಳ್ಬಲ, ಅದನ್ನು ಸಾಧ್ಯವಾಗಿಸುವ, ಮಾಡಿಸುವ ಸಿನಿ ನಿರ್ದೇಶಕರ ಪಾತ್ರವನ್ನು ಶರತ್ ಅವರು ಅಕ್ಷರಿಸಿದ್ದೇ ತುಂಬ ಲಾಲಿತ್ಯಪೂರ್ಣವಾಗಿ! ಜ್ಯೋತಿರ್ವರ್ಷಗಳು, ಗುರುತ್ವದ ಸೆಳೆತ, ಐನ್ ಸ್ಟೈನ್ ನ ಅಗಾಧ ಮಿದುಳಿನ ಲೆಕ್ಕಾಚಾರ ಎಲ್ಲವೂ ಲೇಖನ ಓದಿ ಮುಗಿಸುವವರೆಗೆ ಪುಸ್ತಕವನ್ನು ಕೈಯಿಂದಾಚೆಗೆ ಸರಿಸಲಿಲ್ಲ ಎಂಬುದು ನನ್ನ ಪ್ರಾಂಜಲ ಅನಿಸಿಕೆ.
(ಸೈನ್ಸ್ ನ ವಿದ್ಯಾರ್ಥಿನಿಯಲ್ಲದಿದ್ದರೂ ಕುತೂಹಲವೇ ಕಾರಣವಾಗಿ ಆಸಕ್ತಿ ಬೆಳೆಸಿಕೊಂಡು ಭೂಗೋಲ, ಖಗೋಳ, ಬಾಹ್ಯಾಕಾಶ, ಮಿಲ್ಕಿವೇ, ಸಪ್ತರ್ಷಿಮಂಡಲ, ಎನ್ನುವಷ್ಟರ ಮಟ್ಟಿಗೆ ಮಾತ್ರ ಜ್ಞಾನ ಸಂಪಾದಿಸಿಕೊಂಡಿದ್ದ ನನಗೆ ಶರತ್ ಅವರ ಕಪ್ಪುಕುಳಿಯ ಅಗಾಧ ವಿಶ್ಲೇಷಣೆ ಬಹುವಾಗಿ ಇಷ್ಟವಾಯಿತು. ನಾಸಾ ವಿಭಾಗದ ‘ಸ್ಟೂಡೆಂಟ್ ರೀಸರ್ಚ್’ ಪ್ರಾಜೆಕ್ಟ್
ಒಂದಕ್ಕೆ ಆಯ್ಕೆಯಾಗಿ ಬ್ಲಾಕ್ ಹೋಲ್ ಬಗ್ಗೆ ಒಂದಷ್ಟು ಅಧ್ಯಯನ ಮಾಡುತ್ತಿದ್ದ ಮೊಮ್ಮಗಳ ಕಂಪ್ಯೂಟರಿನೆದುರು ಕುಳಿತು ಅವಳಿಗೂ ನನ್ನ ಅಸಂಗತ ಪ್ರಶ್ನೆಗಳನ್ನು ಹಾಕಿ ಖುಶಿಪಟ್ಟಿದ್ದು ನಿಜ, ಇರಲಿ)
“ಮೋಹನ ಮುರಲಿ ನಾನು ಕಂಡಂತೆ” ಮುರಲಿ ಮತ್ತು ಮೋಹನ ಇಬ್ಬರೂ ಸಾಂಕೇತಿಕವಾಗಿ ಪ್ರವೇಶಿಸುವ ಕಾಲಾತೀತ ಕವನ ‘ಯಾವ ಮೋಹನ ಮುರಲಿ ಕರೆಯಿತು’ ಲೇಖಕರನ್ನು ಪರಿಭಾವಿಸಿದ ಪರಿಯನ್ನು ಅವರ ಒಳಮನಸ್ಸು ಮೂಡಿಸಿದಂತೆಯೆ ಹೇಳುತ್ತ ಹೋಗಿದ್ದಾರೆ!
ಪದ್ಯಗಳ ಭಾವ,ಚೆಲುವು, ಲಾಲಿತ್ಯಗಳನ್ನು ಹಾಡಿನಲ್ಲಿ ಅದರ ಧಾಟಿಯಲ್ಲಿ, ಗಾಯಕರ ಧ್ವನಿಯ ಸಂವೇದನೆಯಲ್ಲಿ, ಪ್ರಸ್ತುತಿಯಲ್ಲಿ ಮಾತ್ರ ಅನುಭವಿಸುವ ನಮ್ಮಂಥವರಿಗೆ ಇಲ್ಲಿ ಕಾಣಬರುವ ಹೊಳವುಗಳ ವಿಭಿನ್ನತೆ ಕೊಂಚ ಹೊಸ ಅವತರಣಿಕೆಯಾಗಿ ಬೇರೊಂದೇ ಮಜಲಿಗೆ ಕರೆದೊಯ್ಯುತ್ತದೆ. ನವೋದಯ, ನವ್ಯ ಮತ್ತದಕ್ಕೂ ಮೊದಲಿನ ಕಾಲದ ಕವಿತ್ವದ ಕುರಿತು ತಮ್ಮದೇ ವಿಶಿಷ್ಟ ಧ್ವನ್ಯಾರ್ಥಗಳ ಒಗ್ಗರಣೆ ಕೊಟ್ಟರಾದರೂ ಬಿ ಎಂ ಶ್ರೀಯವರು ರಾಬರ್ಟ್ ಬರ್ನ್ ಕವಿಯ,
‘O my Luv’s like a red red rose
That’s newly sprung in june:
O my Luv’s like the melodie,
That’s sweetly playid in tune’
ಮೂಲ ಸಾಲುಗಳ ಕವಿತೆಯನ್ನು
“ನನ್ನ ಪ್ರೇಮದ ಹುಡುಗಿ ತಾವರೆಯ ನಸುಕೆಂಪು
ತಾವರೆಯ ಹೊಸ ಅರಳ ಹೊಳೆವ ಕೆಂಪು
ನನ್ನ ಪ್ರೇಮದ ಹುಡುಗಿ ಕೊಳಲ ಮೆಲು ನುಡಿಯಿಂಪು
ಕೊಳಲು ಮೋಹಿಸಿ ನುಡಿದ ಗಾನದಿಂಪು”
ಎಂದು ಹಿತವಾಗಿ, ಮೂಲದಷ್ಟೇ ನವಿರಾಗಿ ಆ ಕವಿತೆಯನ್ನು ಕನ್ನಡಕ್ಕೆ ತಂದುದನ್ನು ಶ್ಲಾಘಿಸುತ್ತ ಅಂದಂದಿನ ಕಾಲದಲ್ಲಿ ಇಂಥವೇ ಮೃದು ಮಧುರ ರಮ್ಯಗವಿತೆಗಳನ್ನು ಬರೆದ ಅನೇಕ ಕವಿಗಳನ್ನು ಮೆಚ್ಚಿಕೊಂಡಿದ್ದಾರೆ.
ಆದರೂ ‘ಅತಿ ಸರ್ವತ್ರ ವರ್ಜ್ಯಯೇತ್’! ಎಂದೇ ಉಲ್ಲೇಖಿಸಿ
ರಮ್ಯಕ್ಕೂ, ರೊಮ್ಯಾಂಟಿಸಿಸಂಗೂ ಅಪ್ಲೈ ಆಗುತ್ತದೆಯೆನ್ನುತ್ತ ಅನಂತರ ಕವಿತೆಗಳ ಮಂಟಪವನ್ನು ಹೊಕ್ಕ ಕಾಠಿಣ್ಯಗಳ ಕುರಿತು ಮನೋಜ್ಞವಾಗಿ ಬಿಡಿಸಿಟ್ಟಿದ್ದಾರೆ. ಅದು ಅಂದೆಂದೋ ಆರಂಭವಾಗಿ ಇಂದಿಗೂ ಬಹುಶ: ಮುಂದಿಗೂ ಮುಂದುವರಿಯಬಹುದಾದ ನೋವು, ಗೋಳು, ಕಣ್ಣೀರು,ಅನಾಚಾರ, ಭ್ರಷ್ಟಾಚಾರ, ಕಾಮ, ಕೊಳಕು,ಚರಂಡಿ, ಕ್ರೌರ್ಯ ನಿರಾಸೆ, ಭೀಭತ್ಸ…. ಇತ್ಯಾದಿತ್ಯಾದಿ ಭಾವಗಳೂ ಬದುಕಿನ ಭಾಗವೇ. ಇವೂ ಕವಿತೆಯಾದುವು ಎಂದು ಬಿಚ್ಚಿಟ್ಟು ಅವಕ್ಕೆ ತಕ್ಕ ಉದಾಹರಣೆಗಳನ್ನೂ ಧಾರಾಳವಾಗಿಯೇ ಕೊಟ್ಟಿದ್ದಾರೆ.
ಯದ್ಯಪಿ…ಅಡಿಗರ ಕವನಗಳ ರಮ್ಯತೆಯ ಕುರಿತಾದ ಅಪಾರ ಮೆಚ್ಚುಗೆ, ಕೆಲವದರ ರಭಸದ ಕುರಿತು ದಿಗಿಲು ಎಲ್ಲವನ್ನೂ ತಮ್ಮದೇ ಚಾತುರ್ಯಭರಿತ ವಾಕ್ಯಗಳಲ್ಲಿ ನಿರೂಪಿಸಿರುವುದು ತುಂಬ ಸ್ವಾರಸ್ಯಕರ!
“ಮೋಹನ ಮುರಲಿ ನಾನು ಕಂಡಂತೆ” ಎನ್ನುತ್ತ ಅದರ ಪ್ರತಿಯೊಂದು ನುಡಿಯನ್ನೂ ಹಲವು ಆಯಾಮಗಳ ಪ್ರಚಲಿತಕ್ಕೆ ಹೋಲಿಸುತ್ತ ಮೋಹನ ಮುರಳಿಯ ಕರೆಯ ಅರ್ಥಗಳನ್ನು ಡೈಸೆಕ್ಟ್ ಮಾಡುತ್ತಾರೆ! ಆದರೂ ಈ ಪದ್ಯ ಫ್ರೀ ಸೈಜಿನ ಅಂಗಿಯಂತೆ ಎಲ್ಲ ಅರ್ಥಗಳಿಗೂ ಹೊಂದಿಕೊಳ್ಳುತ್ತದೆಂಬ ಅನಿಸಿಕೆಯ ಸಂತೋಷವನ್ನೂ ತೆರೆದಿಡುತ್ತಾರೆ. ಕೊನೆಯಲ್ಲಿ ಉದಹರಿಸಿದ ಚುರುಕಿನ ಚುಟುಕು, ಪ್ರಸಿದ್ಧ ಸಾಹಿತಿ ಅ ರಾ. ಮಿತ್ರರದ್ದು,
”ಯಾವ ಕಾಮನೆ
ಒರಲಿ ಕರೆಯಿತು
ರಾಜಕೀಯಕೆ ನಿನ್ನನು
ಯಾವ ಚಂದಾ ಹಣವು
ಸೆಳೆಯಿತು ನಿನ್ನ ಗೋಣಿಯ ಜೇಬನು”
ತುಂಬ ಕಚಗುಳಿಯಿಟ್ಟಿದೆ.
ಅಂತೆಯೇ “ಗಮಾ ಗಮಾ ಗಮಾಡಸ್ತಾವ ಮಲ್ಲಿಗೀ” ಎಂದು ಬೇಂದ್ರೆ ಸ್ಮರಣವನ್ನೂ ಸಂತಸದಿಂದಲೇ ಮಾಡುತ್ತಾರೆ.
ತೆರೆದ ಬಾಯಿ ಮುಚ್ಚದಂತೆ,ನೆಟ್ಟ ಕಣ್ಣು ಬೇರತ್ತ ಚಲಿಸದಂತೆ ತನ್ನಲ್ಲೇ ಇಟ್ಟುಕೊಂಡು ಓದಿಸಿದ ‘ಬಾಗಿಲು ತೆರೆಯೇ ಸೇಸಮ್ಮ’ಪ್ರಬಂಧ ಜನಸಾಮಾನ್ಯರಾದವರಿಗೆ ಕಬ್ಬಿಣದ ಕಡಲೆಯೇ ಅನಿಸಿದರೂ, ಅತಳ,ವಿತಳ,ಸುತಳ, ರಸಾತಳ, ಪಾತಾಳಲೋಕದ ಕೋಣೆಗಳಂತಿಪ್ಪ ಗೂಢ ಸಂಖ್ಯಾಕೀಲಿಕೈಗಳ, ರಹಸ್ಯ ಪದಕೀಲಿ ಯಾನೆ ಪಾಸ್ವರ್ಡುಗಳ ಲೋಕಕ್ಕೊಯ್ದು ಕಣ್ಕಟ್ಟಿ ಗರಗರನೇ ತಿರುಗಿಸಿ ಬಿಟ್ಟುಬಿಡುತ್ತದೆ! ಅರ್ಥಾತ್ ಜನಸಾಮಾನ್ಯರಿಗೆ ಮಾತ್ರ ಅಪ್ಲೈ ಆಗುವಂಥದ್ದು. ಟೆಕ್ ಲೋಕಿಗಳಿಗಿದು ಎಬಿಸಿಡಿ ಅಥವ ಅ ಆ ಇ ಈಯಷ್ಟೇ ಸುಪರಿಚಿತವಾಗಿರಲೂ ಸಾಕಲ್ಲ…
ಹಿಂದಿನ ಕಾಲದಲ್ಲಿ ಗುಪ್ತನಾಮಧೇಯ, ಗುಪ್ತಾತಿಗುಪ್ತ ಸಂಕೇತಗಳ ಬಳಕೆ ಗುಪ್ತಚರ ಪಡೆಯವರಿಗೆ ಮೀಸಲಾಗಿದ್ದುದು ಇದೀಗ ನಮ್ಮ ನಿಮ್ಮೆಲ್ಲರ ಹತ್ತಿರ ಇರಬಹುದಾದ ಬೆವರು ಸುರಿಸಿ ದುಡಿದ ಒಂದಷ್ಟು ಹಣ ನಮಗೇ ದಕ್ಕಬೇಕಾದರೆ ಕಂಪ್ಯೂಟರ್ ಮಹಾಶಯ ಕೇಳುವ ಪ್ರಶ್ನೆ. ಹಿಂದಿ,ಅಂಗ್ರೇಜಿ,ಮತ್ತಿತರ ಸಿನಿಮಾಗಳ ಸ್ಮಗ್ಲರುಗಳು ಇವನ್ನು ಆ ಕಾಲದಲ್ಲಿ ಧಂಡಿಯಾಗಿ ಬಳಸಿಲ್ಲವೆ?
ಬರೀ ಹಣ ಅಂತೇನಲ್ಲ, ಸೆಕ್ಯುರಿಟಿ, ಎಲ್ಲೋ ಈ ಮೇಲ್ ಒಳಪ್ರವೇಶ ಅಥವಾ ಫೈಲೇನಾದರೂ ಓಪನ್ ಆಗಲು ಇದೇ ಬೇಕು. ಅದ್ದರಿಂದ ಶೂನ್ಯದಿಂದಾರಂಭಿಸಿ ಲಕ್ಷಾಂತರಗಳ ನಡುವಿನ ಸಂಖ್ಯೆ, ಅಲ್ಫಬೆಟ್, ಮಾತೃಭಾಷೆ, ಕಲಿತ ಭಾಷೆಯ ಸಮಸ್ತ ಸ್ವರವ್ಯಂಜನಾಕ್ಷರಗಳೆಲ್ಲ ಬಳಸಿ ಜಜ್ಜಿ, ನುರಿದು, ಕುಟ್ಟಿ ಬಡಿದು, ಒತ್ತಿ ಹಣಿದು ನೂರಾರು ವಿಧದ ಕೊಂಬೋ ಮಾಡಿ ಉಣಿಸಿದರೂ ಹ್ಯಾಕರುಗಳು ಅದಾವುದೋ ತಿಪ್ಪರಲಾಗವನ್ನು ಅಭಿಮನ್ಯುವಿನಂತೆ ಗರ್ಭದಲ್ಲೇ ಕಲಿತು ಬಂದವರಷ್ಟು ನೈಪುಣ್ಯದಿಂದ ಹ್ಯಾಕ್ ಮಾಡಿ ಒಡಕೊಂಡೇಬಿಡ್ತಾರಂತೆ! ಹಾಗೆ ಒಡಕೊಂಡಿದ್ದ ಹೆಸರುಗಳಾದರೂ ಯಾವವು? ಸಾರಾ ಪೇಲಿನ್ ಮತ್ತು ಹಿಲರಿ ಕ್ಲಿಂಟನ್ ಅಂತೆ! ಅವರದ್ದೇ ಈ ಕತೆಯಾದಾಗ ಸಾಮಾನ್ಯರದೇನು?? ಹಾಗೆಂದು ಅದಾಗಲಿಕ್ಕೆ ಬಿಟ್ಟುಬಿಡುವುದೇ? ಅದಕ್ಕೂ ಉಂಡೆನಾಮ ತಿಕ್ಕುವ ವಿಧಾನಗಳನ್ನೂ ಇಲ್ಲಿ ಹೇಳಿಕೊಟ್ಟಿರುವಾಗ ಪಾಸ್ವರ್ಡ್ ಮರೆತರೆ ಅದೇ ಮಾಡಿ ‘ಬಾಗಿಲು ತೆರೆಯೇ ಸೇಸಮ್ಮ’ ಅನ್ನೋದೇ!
“ಮರ್ಯಾದೆ ತೆಗೆಯುವ ಕಲೆ” ಏನನ್ನು ಕಲಿಸಿಕೊಟ್ಟೀತೆಂಬ ಕುತೂಹಲ ಇನಿತೂ ಕಾಡದಂತೆ ಮೂಡಿರುವ ಸಮೃದ್ಧ ಉದಾಹರಣೆಗಳ ಕಥನಕಾವ್ಯ!
ಟಾಂಗ್ ಕೊಡುವುದೂ ಒಂದು ಕಲೆಯಾದಾಗ ಹುಟ್ಟಿಕೊಳ್ಳುವ ಕೆಲವನ್ನಿಲ್ಲಿ ಕೊಟ್ಟಿದ್ದಾರೆ “ನೀನೇನಾದರೂ ನನ್ನ ಗಂಡನಾಗಿದ್ರೆ ವಿಷ ಕೊಟ್ಟುಬಿಡ್ತಾ ಇದ್ದೆ ಎನ್ನುವ ಹೆಂಡತಿಗೆ ನೀನೇನಾದರೂ ನನ್ನ ಹೆಂಡತಿಯಾಗಿದ್ದರೆ ನಾನು ಆ ವಿಷವನ್ನು ಗಟಗಟ ಕುಡಿದುಬಿಡ್ತಿದ್ದೆ” ಇದೊಂದು ಸಂಭಾಷಣೆ. ಬರೀ ಸಂಭಾಷಣೆಯಲ್ಲ ಮರ್ಯಾದೆ ತೆಗೆಯುವ ಕಲೆಯ ಅಸ್ಸಲ್ ಛಾಪಿನ ಸಂಗತಿ. ಇಂಟಲೆಕ್ಚುವಲ್ ಸಟೈರ್!
ತಮ್ಮಿಂದ ಹೊರಬೀಳುವ ಒಂದೊಂದು ಶಬ್ದವೂ ಈಟಿ, ಮಾತು ಸ್ಫಟಿಕ ಶಲಾಕೆಯಾಗಿರುವ ಜನರಿದ್ದಾರಂತೆ. ಬರ್ನಾರ್ಡ್ ಶಾ, ಜಿಕೆ ಚೆಸ್ಟರ್ ಸನ್, ಶಾ ಮತ್ತು ಚರ್ಚಿಲ್ ಇವರ ವಾಗ್ಬಾಣಗಳು ಲೋಕಪ್ರಸಿದ್ಧ. ಶಾ ತನ್ನ ನಾಟಕದ ಎರಡು ಟಿಕೆಟ್ಸ್ ಚರ್ಚಿಲ್ ಗೆ ಕಳಿಸಿ “ನಿಮಗೆ ಗೆಳೆಯ ಯಾರಾದರೂ ಇದ್ದರೆ ನಾಟಕಕ್ಕೆ ಕರ್ಕೊಂಬನ್ನಿ” ಎಂಬ ಸಂದೇಶವಿಟ್ಟಿದ್ದ.
ಅದಕ್ಕೆ ಉತ್ತರ “ಇವತ್ತು ಬರಲು ಆಗಲ್ಲ, ನಾಳೆ ಬರುವೆ, ನಾಟಕದ ಇನ್ನೊಂದು ಪ್ರದರ್ಶನವೇನಾದರೂ ಆದರೆ!” ಅಂತಿದ್ದದ್ದೂ ಇದೇ ಮರ್ಯಾದೆ ತೆಗೆವ ಕಲೆ. ಅದನ್ನು ‘ಲೇವಡಿ’ ಎನ್ನಬಹುದಾದ ಕಿರುಪದದಲ್ಲಿಯೇ ಹಲವಾರು ರಂಗಗಳ ವ್ಯಕ್ತಿಗಳ ನಡುವಿನ ಹಾಸ್ಯ, ವ್ಯಂಗ್ಯ, ಕುಚೇಷ್ಟೆಭರಿತ ವಾಗ್ಬಾಣಗಳು, ಛೇಡಿಸಿ, ನಗೆಯರಳಿಸುವ ಉದಾಹರಣೆಗಳು ಧಾರಾಳವಾಗಿವೆ ಇಲ್ಲಿ. ವಿಶೇಷತ: ಸಾಹಿತಿಗಳು ಈ ಲೇವಡಿಯ ಅಸ್ತ್ರವನ್ನು ಬಳಸಿದ್ದು ಎಂದೋ ನಡೆದಿರಬಹುದಾದರೂ ಇಂದಿಗೂ ಅವರ ಕುಶಾಗ್ರಮತಿ, ವ್ಯಂಗ್ಯ, ಅವಮಾನಕ್ಕೆ ಥಟ್ ಥಟ್ ಎಂದು ಬೀಸಿದ ಪ್ರತಿಬಾಣಗಳೇ.
ಇಲ್ಲಿ ಅಡಿಗರನ್ನು ಮೊದಲು ಮಾಡಿಕೊಂಡು ಕಾರ್ನಾಡರು, ಚಂಪಾ, ಶಾಂತಿನಾಥ ದೇಸಾಯರು, ವೈ ಎನ್ಕೆ, ಅನಂತಮೂರ್ತಿ,ಲಂಕೇಶ್, ಸದಾಶಿವ,ಬೀಚಿ, ರವಿಬೆಳಗೆರೆ ಹೀಗೆ ಅನೇಕ ಪ್ರಸಿದ್ಧ ಸಾಹಿತಿಗಳ ಪರಸ್ಪರ ಕುಟುಕು, ಬರವಣಿಗೆಯಲ್ಲೂ ಮೂಡಿದ ಚಾಟೂಕ್ತಿಗಳ ಎರಚಾಡುವಿಕೆಯ ಅನಾವರಣ ಮಾಡಿದ್ದಾರೆ. ಪತ್ರಕರ್ತರು,ಸಿನೆರಂಗದವರೂ ಹೊರತಾಗಿಲ್ಲದ ಹಾಸ್ಯಪುಟಿಸುವ ಮೊಗೆದಷ್ಟೂ ಮುಗಿಯದ ಬಗೆಗಳಲ್ಲಿ ‘ರಾಕ್ಷಸಗಾತ್ರದ ಲಾರಿಯನ್ನು ನಿಲ್ಲಿಸುವುದಕ್ಕೆ ಪುಟ್ಟ ಬ್ರೇಕು ಸಾಕಾಗುತ್ತದೆ, ಹಾರಾಡುವ ಚುರುಕುಬುದ್ಧಿಯವರಿಗೆ ಮೊನಚು ಮಾತೇ ಬ್ರೇಕ್’ ಎಂದು ಮುಗಿಸುತ್ತಾರೆ.
*ಸಿನೆಮಾ ಮತ್ತು ಕಳ್ಳತನ
ಒಬ್ಬ ನಿರ್ದೇಶಕರು ಹೇಳಿದ್ದ ಕೆಲವು ವಾಕ್ಯಗಳು ಹೇಗೆ ಒಂದಿಡೀ ಸಿನೆಚೌರ್ಯ ವೃತ್ತಾಂತ ಕಥನಕ್ಕೆ ಸಾಕ್ಷಿಯಾದೀತೇ? ಹೌದು ಎನ್ನುತ್ತದೆ ಈ ಲಲಿತ ಲೇಖನ.
“Nothing is original. steal from anywhere that resonates with inspiration or fuels your imagination. Devour old films, books,new films, music,paintings, photographs, poems, dreams…random conversations…light and shadows. Select and steal anything that speak directly to your soul. If you do this your work will be authentic…”
ಎಂಥ ಮಾತು! ಇದು ನೂರಾರು ವರ್ಷಗಳಿಂದ ಹಾಲಿವುಡ್, ಬಾಲಿವುಡ್ ಮತ್ತಿತರ ಭಾರತೀಯ ‘ವುಡ್’ ಗಳ ಮರುಸೃಷ್ಟಿಚಾತುರ್ಯದ ಪುಟಗಳನ್ನು ತೆರೆದಂತೆ. ಅದಕ್ಕೂ ಮುನ್ನ ಆದಿಕವಿ ಪಂಪ, ಪೊನ್ನ, ರನ್ನ ಮತ್ತು ಸಂಸ್ಕೃತ ಕವಿಕಾವ್ಯಗಳ ಪರಸ್ಪರ ಅನುಸರಣೆಯೆಂಬತೆನಿಸುವ ಬಗ್ಗೆ ತೀ ನಂ ಶ್ರೀಯವರ ಮಾತುಗಳಲ್ಲೇ ಹೇಳಿದ್ದಾರೆ ಲೇಖಕರು.
“ಮಹಾಪ್ರಳಯ ಭೈರವ
ಕ್ಷುಭಿತ ಪುಷ್ಕಳಾವರ್ತಮಾ
ಮಹೋಗ್ರರಿಪು ಭೂಭುಜ
ಶ್ರವಣ ಭೈರವಾಡಂಬರಂ”
ಇದು ಪಂಪಕವಿಯ ಸಾಲಾಗಿದ್ದರೆ ಸಂಸ್ಕೃತವು ಇದರ ಮೂಲ ಆವೃತ್ತಿಯಂತೆ…
“ಮಹಾಪ್ರಲಯ ಮಾರುತ
ಕ್ಷುಭಿತ ಪುಷ್ಕಲಾವರ್ತಕ
ಪ್ರಚಂಡ ಘನಗರ್ಜಿತ ಪ್ರತಿರವಾನುಕಾರೀ ಮುಹು:”
“ಹಿಂದಿನವರಿಗೆ ಋಣಿಯಾಗಿರದ ಕವಿಗಳು ಎಲ್ಲುಂಟು?” ಎಂದಿದ್ದರು ತೀನಂಶ್ರೀ ಎನ್ನುವ ಸೂಚನೆ ಇಲ್ಲಿದೆ. ಘನವಕ್ಕು!
ಇದೇ ವಿಧದಲ್ಲಿ ಶೇಕ್ಸ್ಸಪಿಯರನ
“the barge she sat in , like a barnished throne/burned on the water”
ಇದು ಕವಿ ಜಾರ್ಜ್ ಎಲಿಯಟ್ ನ ಲೇಖನಿಯಲ್ಲಿ
“The chair she sat in, like a barnished throne/glowed on the marble”
ಆಗಿದ್ದು ಕವಿಗಳು ಕತೆಗಾರರು ಇನ್ನೋರ್ವರ ಸೃಜನಶೀಲತೆಯಿಂದ ಸ್ಫೂರ್ತರಾದ ಕಥನ. ‘ಹಾಗಾಗಿಯೇ ಎಷ್ಟು ದೊಡ್ಡ ಲೇಖಕರನ್ನು ತೆಗೆದುಕೊಂಡರೂ ಅವರಿಗೂ ಸ್ವಲ್ಪ ಋಣಭಾರ ಇರುವುದನ್ನು ತೋರಿಸಬಹುದು’ ಎನ್ನುತ್ತಾರೆ.
ಒಂದರ್ಥದಲ್ಲಿ ನೋಡಿದರೆ ಯಾವುದೇಬರಹವೂ ಸಮಗ್ರತೆಯಲ್ಲಿ ಒಂದೇ ಮೆದುಳಿನ ಸೃಷ್ಟಿಯಲ್ಲ. ಈಗ ಕಣ್ಣೆದುರಲ್ಲಿರುವ ಕತೆಯೋ, ಫಿಲ್ಮೋ, ಕವನವೋ ಒಂದೊಮ್ಮೆ, ಅಷ್ಟೇ ಯಾಕೆ ಎಷ್ಟೋ ಬಾರಿ ವಿಭಿನ್ನ ಅವತರಣಿಕೆಗಳಲ್ಲಿ ಬೇರೆ ಭಾಷೆ, ಸ್ವರೂಪ, ಪ್ರಾದೇಶಿಕತೆ, ಪಾತ್ರಗಳು,ಸಂಗೀತ, ಅಭಿನಯ, ತಾಂತ್ರಿಕತೆ, ನಿರೂಪಣೆಗಳಲ್ಲಿ ಬರುತ್ತ ಗೆದ್ದಿರಬಹುದು, ಸೋಲುಂಡಿರಲೂಬಹುದು…ಹಾಗೆಂದು ಪ್ರತಿಸೃಷ್ಟಿಯ ಕಲಾತ್ಮಕ ಜಾಣ್ಮೆಯನ್ನು ನಿರಾಕರಿಸಲಾಗದು.ಇದರಲ್ಲಿ ಎಪಿಕ್ ಗಳದ್ದು ಬಹಳ ಮುಖ್ಯ ಪಾತ್ರ. ನಮ್ಮಲ್ಲಿನವೇ ರಾಮಾಯಣ ಮಹಾಭಾರತಗಳು ನೂರಾರು ಬಗೆಯಲ್ಲಿ ಪುನರ್ ನಿರ್ಮಾಣ, ಮರುಕಥನ ಆಗುತ್ತಿಲ್ಲವೇ?
ಮರೆಯಲಾಗದಂಥ ಛಾಪು ಮೂಡಿಸಿದ ಫಿಲ್ಮುಗಳ ಸಾಲೇ ಲೇಖನದಲ್ಲಿ ಸಾಲುಗಟ್ಟಿದೆ. ಕ್ರಿಸ್ಟೋಫರ್ ನೋಲನ್ ಕೂಡ, ತಮಾಷೆಗೇ ಇರಬಹುದಾದರೂ- ತಾನು ‘ಇಂಟರ್ ಸ್ಟೆಲ್ಲರ್’ ಅನ್ನು ಬೇರೆಡೆಯಿಂದ ಎತ್ತಿದ್ದೇನೆ ಅಂದಮೇಲೆ ಇನ್ನೆಲ್ಲಿ ಮಾತು? ಶೋಲೆ ಕೂಡ ಐದಾರು ಚಿತ್ರಗಳಿಂದಾಯ್ದ ಕಿಚಡಿಯೆ? ಬಾಹುಬಲಿ ನೋಡಿದಾಗ ತರಾಸು, ಕೊರಟಿ ಶ್ರೀನಿವಾಸ ರಾವ್ ರಂಥ ಲೇಖಕರು ನೆನಪಾಗ್ತಾರೆನ್ನುತ್ತಾರೆ.
‘ಹೀರೋ ಬೆಂಗಳೂರಿಂದ ಮಂಗಳೂರಿಗೆ ಹೋಗುತ್ತಾನೆ’ ಇದೊಂದು ಸಾಲಿನಿಂದ ರೆಡಿಯಾಗಬಹುದಾದ ಚಿತ್ರಗಳ ವ್ಯಾಖ್ಯಾನ ತುಂಬ ಕಚಗುಳಿಯಿಡುತ್ತದೆ.(ಅಮಿತಾಬ್ ಮೆಹ್ಮೂದ್ ನಟಿಸಿದ್ದ ಬಾಂಬೆ ಟು ಗೋವಾ ನೆನಪಾಯ್ತು ನನಗೆ)
ಒಂದು ಸಾಲು ಹತ್ತಾರು ಚಿತ್ರಗಳ ಸೃಷ್ಟಿ?! ಅದನ್ನು ಲೇಖಕರು ಹೇಳಿದ್ದೂ ನಗೆ ತರಿಸುವಂತಿದೆ.ಓದಿದ್ದನ್ನು, ನೋಡಿದ್ದನ್ನು, ಕೇಳಿದ್ದನ್ನು, ಗುದ್ದಿ ಚಿವುಟಿ, ಕಲಸಿ, ಬೆರೆಸಿ,ಎಳೆದು, ಒತ್ತಿ ಹೊಸ ಹದಕ್ಕೆ ತಂದ ಹಾಗೆ…ಅಜ್ಜಿ ಕೊಟ್ಟ ಮಾವಿನ ಹಣ್ಣು,ಸಂತೆಯ ದಾಳಿಂಬೆ,ಸೂಪರ್ ಮಾರ್ಕೆಟ್ ಸೇಬು,ಮನೆ ಹಿತ್ತಲಿನ ಚಿಕ್ಕು ಎಲ್ಲ ಸೇರಿಸಿ ಮಾಡಿದ ನಮ್ಮದೇ ಸ್ವಂತದ(!) ಫ್ರೂಟ್ ಸಲಾಡಿನಂತದ್ದು ಸೃಜಿಸುವ ಕ್ರಿಯೆ!
ಫಲಿತಾಂಶವೆಂದರೆ ಅವರ ‘ಅನಕೊಂಡಾ’ ನಮ್ಮಲ್ಲಿ ‘ಇಚ್ಛಾಧಾರೀ ನಾಗ’ ಆದರೂ ಆದಾನು. ಅವರ ‘ರಾಶೋಮೋನ್’ ನಮ್ಮಲ್ಲಿ ‘ಉಳಿದವರು ಕಂಡಂತೆ’! ಅದೂ ಕ್ರಿಯೇಟಿವಿಟಿಯೇ…
ಮಲ್ಟಿ ಫ್ಯಾಸೆಟೆಡ್ ಅನ್ನೋಣವೆ?!
ಸರಿಗನ್ನಡಂ ಗೆಲ್ಗೆ
ಭಾಷಾವಿಕಾರ,ಭಾಷಾಸ್ಖಾಲಿತ್ಯ ಸರಿಗನ್ನಡದ ಅವಶ್ಯಕತೆಗಳ ಕುರಿತ ಪದಗಳ ವಿಸ್ತ್ರತ,ವಿವರಣಾತ್ಮಕ ನೋಟದ ಪ್ರಪಂಚವಿಲ್ಲಿದೆ.
ತಪ್ಪು ಭಾಷಾಪ್ರಯೋಗವನ್ನು ಗದರಿಸುತ್ತಲೇ ಅವುಗಳ ಸರಿಯಾದ ರೂಪವನ್ನು ಕೊಟ್ಟಿದ್ದಾರೆ. ಕಲಿಯುವಾಗಲೇ ಭಾಷೆಯನ್ನು ಸರಿಯಾಗಿ ಕಲಿಯಬೇಕು ಇಲ್ಲವಾದರೆ ಅರ್ಥ ಕಳಚಿ ಅನರ್ಥವಾಗುತ್ತದೆ ಎಂದು ಪ್ರತಿಯೊಂದು ಸರಿಪಡಿಸುವಿಕೆಯ ಹಿಂದೆಯೂ ಒಂದು ಸಂದೇಶ!
ಇವುಗಳಲ್ಲಿ “ಮೊತ್ತ ಮೊದಲಿಗೆ…(ಯಾರಲ್ಲಿ ‘ಮೊಟ್ಟ ಮೊದಲು’ ಎಂದು ತಪ್ಪಾಗಿ ಹೇಳುವವರನ್ನು ಎಳೆದು ತನ್ನಿ.ಅವರನ್ನು ಬೆಟ್ಟವೊಂದರ ತುತ್ತ ತುದಿಗೆ ಕೊಂಡೊಯ್ದು ಅಲ್ಲಿಂದ ನೂಕುತ್ತೇವೆ ಎಂದು ಹೆದರಿಸಿ ಕಟ್ಟ ಕಡೆಗೆ ಅವರನ್ನು ಬಿಟ್ಟುಬಿಡಿ!)
ಇದು ಲೇಖಕರ ತಿದ್ದುವಿಕೆ..! ಯಾವ ಪ್ರಯೋಗ ಸರಿ ಎಂದು ಹೇಳಿರುವ ಈ ಪರಿ ಅಬ್ಬಬ್ಬಾ!
ಜಾತ್ಯಾತೀತ, ನಾಗರೀಕತೆ, ಆಧ್ಯಾತ್ಮ,ಕೋಟ್ಯಾಧಿಪತಿ ಇವುಗಳಲ್ಲಿ ಜನ ಸುಖವಾಗಿ ನುಸುಳಿಸುವ ದೀರ್ಘದ ಬಾಲಕ್ಕೆ ಕತ್ತರಿ ಪ್ರಯೋಗ ಮಾಡಿದ್ದಾರೆ. ಅಂತೆಯೇ ‘ಉಪಹಾರ, ಮಾಂಸಹಾರ,ಸಸ್ಯಹಾರ’ಗಳಿಗೆ ದೀರ್ಘಪ್ರಯೋಗ ಕೈಬಿಟ್ಟರಾಗದು ಎಂದಿದ್ದಾರೆ. ಹ್ರಸ್ವ-ದೀರ್ಘಗಳ ಅಪಪ್ರಯೋಗ ಉಂಟುಮಾಡುವ ಕಿರಿಕಿರಿಗೆ ತಮಗಾದ ಕಿರಿಕಿರಿಯನ್ನು ಸ್ವಾರಸ್ಯಪೂರ್ಣವಾಗಿ ಹೇಳಿದ್ದಾರೆ. ಇದೊಂದು ಥರ ಅಚ್ಚಸ್ಚಚ್ಛಗನ್ನಡದ ಮಾಲಿಕೆಯಲ್ಲಿನ ಮುತ್ತಿನಂತೆ.
‘ಕಾರಂತಜ್ಜನ ಕಥೆಗಳು, ಥಟ್ ಅಂತ ಹೇಳಿ, ಇಂಗ್ಲಿಶ್ ಎನೆ ಕುಣಿದಾಡುವುದೆನ್ನೆದೆ,ಬಲಿ ಚಕ್ರವರ್ತಿಯ ತ್ರಿವಿಕ್ರಮ, ಪರಂಪರೆಯ ಬೇರುಗಳು ಮತ್ತು ಹೊರಗಿನ ಗಾಳಿ ಬೆಳಕು,ಹಂಸಗೀತೆ,
ಲೆಕ್ಕ ಹಾಕಿ ಸುಳ್ಳು ಹೇಳಿ… ನಮ್ಮ ತಲೆಯೂ ನಮ್ಮ ಹರಟೆಯೂ’ ಇವೆಲ್ಲ ಸೇರಿದಂತೆ ಹದಿನೈದು ಸುರಸ ವೈಚಾರಿಕ ಪ್ರಬಂಧಗಳ ಈ ಗುಚ್ಛ ಓದು ಬರಹದ ವೈವಿಧ್ಯತೆಗೊಂದು ಸಾಕ್ಷಿಯಂತಿದೆ. ಅಲ್ಲಿಗೆ ಇದು ಜಾಣ ಜಾಣೆಯರಿಗಾಗಿ ಬರೆದಂಥ ಸತ್ವಪೂರ್ಣ, ಪ್ರಯೋಜನಕಾರೀ ಲಲಿತ ಪ್ರಬಂಧಗಳೇ ಹೌದೆಂದು ನನ್ನ ಅನಿಸಿಕೆ. ಓದುಗರನ್ನು ಹಿಡಿದಿಟ್ಟುಕೊಳ್ಳುವ ಅಪೂರ್ವ ಕಲೆ ಇದೇ.






0 Comments